ಲೇಖಕರು: ಎಂ. ಅಶೀರುದ್ದೀನ್ ಆಲಿಯಾ, ಸಾರ್ತಬೈಲ್ (ಉಳ್ಳಾಲ)

ಒಂದು ಜಾತಿ ಒಂದು ಧರ್ಮ
ಒಂದು ದೈವ ಮನುಷ್ಯನಿಗೆ
ಒಂದು ಯೋನಿ ಒಂದಾಕಾರ
ಒಂದು ಇಲ್ಲದರೊಳು ಭೇದ.
(ಜಾತಿ ನಿರ್ಣಯ : ೨)

ಜಾತಿ ದ್ವೇಷದ ಗೋಡೆಯನ್ನು ಒಡೆದು ಎಲ್ಲರಲ್ಲಿ ಭಾತೃತ್ವ ಮತ್ತು ಸಮಾನತೆಯ ಪರಿಕಲ್ಪನೆಯನ್ನು ಬಿತ್ತಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಮತ್ತು ಹೋರಾಟ ಆದರ್ಶಪೂರ್ಣವಾದದ್ದು. ಎಲ್ಲರಲ್ಲೂ ಮಾನವೀಯತೆಯ ಸದಾಶಯವನ್ನು ಬೆಳೆಸುವಲ್ಲಿ ಗುರುವಿನ ಪಾತ್ರ ಮಹತ್ವದ್ದು.

1856 ರಲ್ಲಿ ತಿರುವನಂತಪುರದ ಚೆಂಬಲಾಂತಿ ಎಂಬ ಹಳ್ಳಿಯಲ್ಲಿ ಕೆಲವರ್ಗದ ಮಧ್ಯಮ ಕುಟುಂಬದ ಈಳವ ಜಾತಿಯಲ್ಲಿ, ವಯಲ್ ವರಂ ಮನೆಯ ಮಾದನ್ ಆಶಾನ್ ಮತ್ತು ಕುಟ್ಟಿಯಮ್ಮ ಎಂಬ ದಂಪತಿಗಳ ನಾಲ್ಕನೇ ಮಗನಾಗಿ ಜನಿಸಿದರು. ತಂದೆ ಜ್ಯೋತಿಷ್ಯವನ್ನು ಬಲ್ಲ ಆಯುರ್ವೇದ ಪಂಡಿತರಾಗಿದ್ದರು. ಕೆಲವು ಕಾಲ ಶಾಲೆಯಲ್ಲಿ ಉಪಾಧ್ಯಯರಾಗಿದ್ದರಿಂದ ಅವರನ್ನು ಆಶಾನ್ (ಗುರು) ಎಂದು ಕರೆಯುತಿದ್ದರು.

ಬಾಲ್ಯದಲ್ಲಿ ಅವರನ್ನು ‘ನಾಣು’ ಎಂದು ಕರೆಯುತ್ತಿದ್ದರು. ಕೃಷ್ಣ ವೈದ್ಯರ್ ಮತ್ತು ರಾಮನ್ ವೈದ್ಯರ್ ರವರ ಮಾರ್ಗದರ್ಶನದಲ್ಲಿ ರಾಮಾಯಣ, ಮಹಾಭಾರತ, ಭಾಗವತ ಗ್ರಂಥಗಳ ಅಧ್ಯಯನ ನಡೆಸಿದರು. ನಾಟಿ ಔಷಧಿ ತಯಾರು ಮಾಡುವುದನ್ನು ಕಲಿತು ವೈದ್ಯಕೀಯ ವೃತ್ತಿಯಲ್ಲಿಯೂ ಪ್ರಾವೀಣ್ಯತೆ ಪಡೆದಿದ್ದರು.

ಸಂಸ್ಕೃತ, ತಮಿಳು, ಮಲಯಾಳಂ ಭಾಷಾ ಜ್ಞಾನವನ್ನು ಗಳಿಸಿ ವಾರಣ ಪಳ್ಳಿಯಲ್ಲಿ ರಾಮನ್ ಪಿಳ್ಳೆ ಆಶಾನ್ ರವರ ಶಿಷ್ಯತ್ವ ಸ್ವೀಕರಿಸಿ ಹೆಚ್ಚಿನ ಪಾಂಡಿತ್ಯವನ್ನು ಗಳಿಸಿದರು. ಅಲ್ಲಿ ಅವರು ವಿದ್ಯಾರ್ಥಿಗಳೆಲ್ಲರ ‘ಚಟ್ಟಂಬಿ’ (ಮುಂದಾಳು)ಯಾಗಿ ಗುರುತಿಸಲ್ಪಟ್ಟರು. ನಂತರ ಅಧ್ಯಾಪಕ ವೃತ್ತಿ ಕೈಗೊಂಡ ನಾರಾಯಣ ಗುರುಗಳು, “ನಾಣು ಆಶಾನ್” ಎಂದು ಚಿರಪರಿಚಿತರಾದರು.
ಅವರ ತಂದೆ ಮತ್ತು ತಾಯಿ ತೀರಿ ಹೋದ ನಂತರ ಅವರು ಹೆಚ್ಚು ಆಧ್ಯಾತ್ಮಿಕ ಚಿಂತನೆ ಕಡೆಗೆ ಹೆಚ್ಚು ಒಲವು ತೋರಿಸಿದ್ದರು. ಅಧ್ಯಾಪಕ ವೃತ್ತಿಯ ಜೊತೆಗೆ ವೇದಾಂತ ಉಪನಿಷತ್ತುಗಳು ಹಾಗೂ ಇತರ ಧರ್ಮಗ್ರಂಥಗಳಾದ ಕುರಾನ್, ಬೈಬಲ್‍ಗಳ ದೀರ್ಘ ಅಧ್ಯಯನ ಮತ್ತು ಚಿಂತನೆ ನಡೆಸಿ ಆ ಮುಖಾಂತರ ಅಂತರ್ಮುಖಿ ಜ್ಞಾನವನ್ನು ಗಳಿಸಲಾರಂಭಿಸಿದರು.
ಆಧ್ಯಾತ್ಮಿಕ ದೀಕ್ಷೆಯನ್ನು ಪಡೆದ ನಂತರ ನಾರಾಯಣ ಗುರು ಜನರಿಗೆ ಹೆಚ್ಚು ನಿಕಟವಾಗತೊಡಗಿದರು. ಎಲ್ಲರೊಂದಿಗೂ ಸಮಾನವಾಗಿ ಬೆರೆಯತೊಡಗಿದರು. ತನ್ನ ಪ್ರದೇಶದ ಸುತ್ತು ಇರುವ ಪುಲಯ್ಯ, ಪರಯ್ಯ, ನಾಯಾಡಿ ಕೇರಿಗಳಿಗೆ ಹೋಗಿ ಜನರ ಕಷ್ಟಗಳನ್ನು ವಿಚಾರಿಸಲಾರಂಭಿಸಿದರು. ನೋವುಗಳಿಗೆ ಸ್ಪಂಧಿಸಲಾರಂಭಿಸಿದರು.

ಅಂಚೆ ತೆಂಗುವಿನ ಶಾಲೆಯಲ್ಲಿ ಉಪಧ್ಯಾಯನಾಗಿ ನೇಮಕಗೊಂಡ ಗುರು, ಬಿಡುವಿನ ವೇಳೆಯಲ್ಲಿ ಪುಲಯ್ಯರ ಕೇರಿಗಳಿಗೆ ಹೋಗಿ ಮಕ್ಕಳಿಗೆ ಪಾಠಮಾಡುತಿದ್ದರು. ನಾಣು ಹೊಲೆಯರ ಕೇರಿಗಳಿಗೆ ಹೋಗುವುದು ಕುಟುಂಬದವರಿಗೆ ಹಿಯ್ಯಾಳಿಕೆ ಉಂಟು ಮಾಡುವ ವಿಷಯವಾಗಿತ್ತು. ಅದು ಅವರ ಪ್ರತಿಷ್ಠೆಗೆ ಅಗೌರವ ತೋರುವಂತಿದ್ದವು. ಶ್ರೀ ನಾರಾಯಣ ಗುರು ಕೆಲ ಜಾತಿಯವರೊಂದಿಗೆ ಬೆರೆಯುವುದು ಅವರಿಗೆ ಅಕ್ಷರ ಕಲಿಸುವುದು ಇತ್ಯಾದಿ ವರ್ತನೆಗಳು ಕುಟುಂಬದವರಿಗೆ ಒಂದು ತಲೆನೋವಾಗಿ ಪರಿಣಮಿಸಿತು. ಇದಕ್ಕೆ ಮದುವೆಯೇ ಪರಿಹಾರವೆಂದು ಮನೆಯ ಹಿರಿಯರು ಅಭಿಪ್ರಾಯ ಪಟ್ಟರು. ಮನೆಯವರ ಒತ್ತಾಯದ ಮೇರೆಗೆ ಕಾಳಿಯಮ್ಮ ಎಂಬವಳೊಂದಿಗೆ ಸಾಂಪ್ರದಾಯಿಕ ವಿವಾಹ ನಡೆಸಲು ತೀರ್ಮಾನಿಸಿದರು.

ಸಾಂಪ್ರದಾಯಿಕವಾಗಿ ವಿವಾಹ ನಡೆದಿದ್ದರೂ, ಸಾಂಸಾರಿಕ ಜೀವನ ಸುಸೂತ್ರವಾಗಿ ಮುಂದುವರಿದಿರಲಿಲ್ಲ ನಂತರ ಅವರು ಸಂಸಾರ ತ್ಯಾಗ ಮಾಡಿ ಪರಿವ್ರಾಜಕರಾಗಿ ಹೊರಟರು.

ತಿರುವನಂತಪುರದ ಅಂದಿನ ಪ್ರಖ್ಯಾತ ಸ್ವಾಮಿ ಗರ್ವಂದ ಚಟ್ಟಂಬಿ ಸ್ವಾಮಿಗಳ ಅಂತ್ಯ ಕಾಲದಲ್ಲಿ ಅವರನ್ನು ಸಂದರ್ಶಸಿ ಆಶಿರ್ವಾದ ಪಡೆದರು. ತೈಕಾಡ್ ಅಯ್ಯ ಗುರುಗಳಿಂದ ನಾರಾಯಣ ಗುರು ಯೋಗಾಭ್ಯಾಸವನ್ನು ಕರಗತ ಮಾಡಿಕೊಂಡಿದ್ದರು. ತಿರುವಾಂಕೂರು, ನಾಗರಕೋಯಿಲ್, ಕನ್ಯಾಕುಮಾರಿ ತಮಿಳುನಾಡಿನ ಹಳ್ಳಿ ಪಟ್ಟಣಗಳಲ್ಲಿ ಸುತ್ತಿದರು. ಕೆಲವು ಕಾಲ ಮಾರುತ್ವ ಮಲೆಯಲ್ಲಿ ಏಕಾಂತ ಧ್ಯಾನದಲ್ಲಿ ಇರಲಾರಂಭಿಸಿದರು.

ದೇವಾಲಯದ ಪ್ರವೇಶಕ್ಕಾಗಿ ಹೋರಾಟ ನಡೆಸಿ ಪ್ರವೇಶ ನಿರಾಕರಿಸಲ್ಪಟ್ಟ ಕೆಲ ಜಾತಿಯವರಿಗಾಗಿ ದೇವಸ್ಥಾನ ನಿರ್ಮಿಸುವ ತೀರ್ಮಾನ ಕೈಗೊಂಡು ಅದಕ್ಕಾಗಿ ದೊಡ್ಡ ಹೋರಾಟವನ್ನೇ ಶುರು ಮಾಡಿದ್ದರು. ಈ ಕಾರಣಕ್ಕೆ ಸವರ್ಣರಿಂದ ಹಲವು ವಿಮರ್ಶೆನೆಗಳನ್ನು ಎದುರಿಸಿದ್ದರು.

“ನಮ್ಮ ದೇವಾಲಯಗಳನ್ನು ನಾವೇ ಕಟ್ಟೋಣ” “ನಮಗೆ ಬ್ರಾಹ್ಮಣರ ಶಿವ ಬೇಕಿಲ್ಲ ನಮಗೆ ಈಳವ ಶಿವ ಬೇಕು”. ಎಂಬ ರೀತಿಯಲ್ಲಿ ಮಾರ್ಮಿಕವಾಗಿ ಅವರಿಗೆ ಉತ್ತರ ಕೊಟ್ಟರು. ಕೇರಳದಿಂದ ದಕ್ಷಿಣದ ಕರಾವಳಿಯವರೆಗೂ ಅವರು ಸವರ್ಣರಿಗಾಗಿ ಹಲವಾರು ದೇವಸ್ಥಾನಗಳನ್ನು ನಿರ್ಮಿಸಿ ಸತ್ಯ – ಧರ್ಮ – ಶಾಂತಿ- ದಯೆ ಎಂದು ಕೆತ್ತಿಸಿದರು. ಶಿವರಾತ್ರಿ ದಿನದಂದು ಶಿವಗಿರಿಯಲ್ಲಿ ಶಿವಲಿಂಗ ಪ್ರತಿಷ್ಠಾಪನೆಯೊಂದಿಗೆ ಹೊಸ ಕ್ರಾಂತಿಗೆ ನಾಂದಿ ಹಾಡಿದರು. ಅರಿವಿಪ್ಪುರಂ ಘಟನೆಯೂ ಒಂದು ಐತಿಹಾಸಿಕ ಹೆಜ್ಜೆಯಾಗಿತ್ತು.

ಅವರು ಹಲವಾರು ಹೋರಾಟಗಳಿಗೆ ಹೆಜ್ಜೆ ಹಾಕಿದರು. ಕೆಳವರ್ಗದವರು ದಾರಿಯಲ್ಲಿ ಮುಕ್ತವಾಗಿ ನಡೆಯುವ ಹಕ್ಕಿಗಾಗಿ ” ವೈಕ್ಕಂ ಸತ್ಯಾಗ್ರಹ” ನಡೆಸಿದರು. ಅದೇ ರೀತಿ ದುಂದುವೆಚ್ಚ, ಕಂದಾಚಾರ, ಪ್ರಾಣಿಬಲಿ, ಮದ್ಯಪಾನ, ಮಹಿಳಾ ಶೋಷಣೆ, ಶಿಕ್ಷಣ, ಇತ್ಯಾದಿ ವಿಷಯಗಳ ಬಗ್ಗೆ ಜನಜಾಗೃತಿ ಮೂಡಿಸಿದ್ದರು.

ರವೀಂದ್ರ ನಾಥ ಠಾಗೋರ್, ಮಹಾತ್ಮ ಗಾಂಧಿ, ವಿನೋಭಾ ಭಾಲೆ, ಸ್ವಾಮಿ ಶ್ರಧ್ಧಾನಂದ, ವಕ್ಕಂ ಮೌಲವಿಯವರು ಇವರಿಂದ ಬಹಳಷ್ಟು ಪ್ರಭಾವಿತರಾಗಿದ್ದರು.

ಶೈಕ್ಷಣಿಕ ಅಭಿವೃದ್ಧಿಗಾಗಿ 1923 ರಲ್ಲಿ ನಾರಾಯಣ ಗುರು ಹೆಸರಿನಲ್ಲಿ ಗುರುಕುಲ ಸ್ಥಾಪನೆಯಾಯಿತು. ಗುರುವಿನ ಹಿತೈಷಿಗಳು ಶಿಶ್ಯಂದಿರು ಸೇರಿ 1927 ರಲ್ಲಿ ಶ್ರೀ ನಾರಾಯಣ ಗುರು ಧರ್ಮ ಸಂಘ ಸ್ಥಾಪನೆ ಮಾಡಿ ಹಲವಾರು ಸೇವಾ ಕಾರ್ಯಗಳನ್ನು ಮಾಡಲಾರಂಭಿಸಿದರು.
ಅವರ ದೈವದಶಕಂ, ಆತ್ಮೋಪದಶಕಂ, ಜಾತಿ ನಿರ್ಣಯ, ಚಿಜ್ಜಡಚಿಂದ, ಶಿವಶತಕಂ, ಇತ್ಯಾದಿ ಅವರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನೆಗಳನ್ನೊಳಗೊಂಡ ಕೃತಿಗಳು ‘ಗುರುವಾಣಿ’ the word of Guru ಎಂಬ ಹೆಸರಿನಲ್ಲಿ ಪ್ರಸಿದ್ಧಿಗೊಂಡಿದೆ.

ಸಾಮಾಜಿಕ ಪರಿವರ್ತನೆಯ ಹರಿಕಾರ ಶ್ರಿ ನಾರಾಯಣ ಗುರು 20.09.1928 ರಲ್ಲಿ ಸಮಾಧಿ ಹೊಂದಿದರು. ಅವರು ತಮಿಳು, ಸಂಸ್ಕೃತ, ಮತ್ತು ಮಲೆಯಾಳಂ ಭಾಷೆಯಲ್ಲಿ ಹಲವು ಕೃತಿಗಳನ್ನು ರಚಿಸಿದ್ದಾರೆ.

ಶ್ರೀ ನಾರಾಯಣ ಗುರು ಯಾವುದೇ ಪ್ರತ್ಯೇಕ ಧರ್ಮಕ್ಕೆ ಮಾತ್ರ ಸೀಮಿತವಾದ ಯುಗ ಪುರುಷರಾಗದೆ ಎಲ್ಲಾ ಜಾತಿ ಧರ್ಮದ ನಾಯಕರಾಗಿದ್ದರು. ಎಲ್ಲರ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದ್ದರು.

LEAVE A REPLY

Please enter your comment!
Please enter your name here