ಕವನ
ವಿಶ್ವ ಮಾನವ ದಿನದ ಶುಭಾಶಯಗಳು
ಇಂದು ಕುವೆಂಪು ಜನ್ಮ ದಿನ
ನಡೆಮುಂದೆ ನಡೆಮುಂದೆ ನುಗ್ಗಿ ನಡೆ ಮುಂದೆ
ಜಗ್ಗದೆಯೇ ಕುಗ್ಗದೆಯೇ ಹಿಗ್ಗಿ ನಡೆಮುಂದೆ
ಎಂದು ಪಾಂಚಜನ್ಯ ಮೊಳಗಿಸಿದ ಕವಿ||
ನೇಗಿಲ ಕುಲದೊಳಗಿದೆ ಕರ್ಮ; ನೇಗಿಲ ಮೇಲೆಯೇ
ನಿಂತಿದೆ ಧರ್ಮ! ಎಂದು ಅನ್ನದಾತ, ನೇಗಿಲಯೋಗಿಯ
ನೆನದು ‘ಕಾಯಕವೇ ಕೈಲಾಸ’ವೆಂದ ಕವಿ||
‘ಬೆರಳ್ ಗೆ ಕೊರಳ್’, ‘ಶೂದ್ರ ತಪಸ್ವಿ’ಯ
ಮೂಲಕ ವರ್ಣಾಶ್ರಮ ವ್ಯವಸ್ಥೆಯ ದೌರ್ಜನ್ಯ,
ಜಾತಿಯತೆಯನ್ನು ಕಟುವಾಗಿ ಖಂಡಿಸಿದ ಕವಿ||
ನೂರು ದೇವರೆಲ್ಲ ನೂಕಾಚೆ ದೂರ, ಭಾರತಾಂಬೆಯ
ದೇವಿ ನಮಗಿಂದು ಪೂಜಿಸುವ ಬಾರ ಎಂದು ನೈಜ
ರಾಷ್ಟೀಯತೆ ಪ್ರತಿಪಾದಿಸಿದ ರಾಷ್ಟಕವಿ||
ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?
ಎಂದು ಹೇಳಿ ಮೂಡನಂಬಿಕೆ, ಕಂದಾಚಾರ,
ಅಂಧಾನುಚರಣೆಗಳನ್ನು ಧಿಕ್ಕರಿಸಿದ ಕವಿ||
‘ನನ್ನ ಜೀವನವೇ ನನ್ನ ಸಂದೇಶ’ ಎನ್ನುವ ಮಹಾತ್ಮ
ಗಾಂಧಿಯವರ ಮಾತಿನಂತೆ ತಾನು ಹೇಳಿದ ಎಲ್ಲಾ
ಮಾತುಗಳಿಗೆ ಬದ್ದವಾಗಿ ಜೀವನ ನಡೆಸಿ, ‘ನುಡಿದಂತೆ
ನಡೆವ’ ಮಾತಿಗೆ ಮೇಲ್ಪಂಕ್ತಿ ಹಾಕಿಕೊಟ್ಟ ಕವಿ||
ಸರ್ವರಿಗೂ ಸಮಪಾಲು; ಸರ್ವರಿಗೂ ಸಮಬಾಳು
ಎಂಬ ಸಮಾನತೆಯ ನವಯುಗವಾಣಿ ಘೋಷಿಸಿದ ಕವಿ||
ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ
ಎಂದು ಕರೆಕೊಟ್ಟ ನಿಷ್ಠುರವಾದಿ ಕವಿ||
ಇಂದು ರಕ್ತದ ಬಿಂದು ಮುಂದೆ ಸೌಖ್ಯದ ಸಿಂದು
ಎಂದು ವಿಚಾರಕ್ರಾಂತಿಗೆ ಆಹ್ವಾನಿಸಿದ ಕವಿ||
ಹಾರುವ ಬೆಳ್ಳಕ್ಕಿಗಳಲ್ಲಿ ದೇವರ ಸಹಿ ಕಂಡ
ಅಪ್ಪಟ ಮಲೆನಾಡ ಪ್ರಕೃತಿಯ ಕವಿ||
ಆಡುಮುಟ್ಟದ ಸೊಪ್ಪಿಲ್ಲ; ಕುವೆಂಪು ಮುಟ್ಟದ
ಸಾಹಿತ್ಯವಿಲ್ಲ ಎಂಬಂತೆ ಮಕ್ಕಳ ಸಾಹಿತ್ಯದಿಂದ
ಹಿಡಿದು ಮಹಾಕಾವ್ಯದವರೆಗೆ ಸಾಹಿತ್ಯದ ಎಲ್ಲಾ
ಪ್ರಕಾರದಲ್ಲೂ ಕೃಷಿ ಮಾಡಿದ ರಸ ಋಷಿ||
ಓ ನನ್ನ ಚೇತನ ಆಗು ನೀ ಅನಿಕೇತನ ಎಂದು
ವಿಶ್ವಮಾನವತೆ ಸಂದೇಶ ಸಾರಿದ ಜಗದ ಕವಿ||
ನಾಡಗೀತೆ, ನಾಡಿನ ರೈತ ಗೀತೆಯ ಕತೃವಾಗಿ ಸಾಹಿತ್ಯದ
ಜನರ ನೆನಪಿನಲ್ಲಿ ಸದಾ ಉಳಿಯುವ ಯುಗದ ಕವಿ||