• ಶಾರೂಕ್ ತೀರ್ಥಹಳ್ಳಿ

ಸಮಾಜ ವ್ಯವಸ್ಥೆಯ ಬಹುಮುಖ್ಯ ಅಂಗ ಕುಟುಂಬ. ಉತ್ತಮ ಕುಟುಂಬದಿಂದಲೇ ಅತ್ಯುತ್ತಮ ಸಮಾಜ ನಿರ್ಮಾಣ ಸಾಧ್ಯ. ಭಾರತೀಯ ಪರಂಪರೆಯಲ್ಲಿ ಕುಟುಂಬಕ್ಕೆ ಅದರದ್ದೇ ಆದ ಪ್ರಾಮುಖ್ಯವಿದೆ. ಅವಿಭಕ್ತ ಕುಟುಂಬಗಳನ್ನು ಹೊಂದಿದ್ದ ಭಾರತೀಯ ಸಂಸ್ಕೃತಿಯೂ ಕೂಡಿ ಬಾಳುವುದನ್ನು ಕಲಿಸಿಕೊಡುತ್ತದೆ. ಇಲ್ಲಿ ಪ್ರೀತಿ, ಒಗ್ಗಟ್ಟುಗಳೇ ಮೂಲಮಂತ್ರ. ಒಂದು ಮಗು ಸಮಾಜದ ಉತ್ತಮ ಪ್ರಜೆಯಾಗಿ ರೂಪುಗೊಂಡರೆ ಅದರಲ್ಲಿ ಆ ಮಗುವಿನ ಶಕ್ತಿಗಿಂತ ಆತನನ್ನು ಆ ರೀತಿ ರೂಪಿಸಿದ ಕುಟುಂಬದ ಸಂಸ್ಕೃತಿಯನ್ನು ಹೊಗಳುವ ಒಂದು ಕಾಲಘಟ್ಟವಿತ್ತು

ಆದರೆ ಇಂದು ಕಾಲ ಬದಲಾಗಿದೆ. ಜತೆಗೆ ಜಗತ್ತಿನಾದ್ಯಂತ ಕುಟುಂಬ ರೂಪೀಕರಣದ ಪದ್ಧತಿಯೂ ಬದಲಾಗಿದೆ. ಅವಿಭಕ್ತ ಕುಟುಂಬಗಳು ಅನುಕುಟುಂಬಗಳಾಗಿ ಬದಲಾಗಿವೆ. ಅಜ್ಜ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ, ಮಾವ, ಅತ್ತೆ ಅಪ್ಪ, ಅಮ್ಮ ಮಕ್ಕಳು ಮೊಮ್ಮಕ್ಕಳು ತುಂಬಿತುಳುಕುತ್ತಿದ್ದ ಮನೆಗಳಲ್ಲಿ ಈಗ ಕೇವಲ ಗಂಡ, ಹೆಂಡತಿ, ಮಕ್ಕಳು ಮಾತ್ರ ಕಾಣಸಿಗುತ್ತಾರೆ. ಕುಟುಂಬದಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಾ ಹೋದಂತೆ ಅಲ್ಲಿ ಭಾವನೆಗಳೂ ಬೆಲೆ ಕಳೆದು ಕೊಳ್ಳಲಾರಂಭಿಸುತ್ತವೆ. ಹೆತ್ತವರ, ಮಕ್ಕಳ ತರಾತುರಿಯ ಜೀವನದ ನಡುವೆ ಮುಖಕ್ಕೆ ಮುಖ ಕೊಟ್ಟು ಮಾತನಾಡುವಷ್ಟು ಸಮಯವಿಲ್ಲದೆ ಕೇವಲ ಯಂತ್ರಗಳಂತೆ ಇಂದಿನ ಸಮಾಜದಲ್ಲಿ ಬದುಕುತ್ತಿದ್ದೇವೆ.

ನಮ್ಮ ಜೀವನದ ಬಹುತೇಕ ಎಲ್ಲಾ ಕುಟುಂಬದ ಆಧಾರದ ಮೇಲೆ ನಿರ್ಮಿತವಾಗಿದೆ. ಹುಟ್ಟಿನಿಂದ ಹದಿಹರೆಯದವರೆಗೆ ನಾವು ನಮ್ಮ ಹೆತ್ತವರ ಮನೆಯಲ್ಲಿ ವಾಸಿಸುತ್ತೇವೆ. ಕೆಲವು ವರ್ಷಗಳಲ್ಲಿ, ನಾವು ಮದುವೆಯಾಗಿ ನಮ್ಮ ಸ್ವಂತ ಕುಟುಂಬವನ್ನು ಪ್ರಾರಂಭಿಸುತ್ತಿದ್ದೇವೆ. ಕುಟುಂಬವಾಗಿ, ನಮ್ಮ ಹೆತ್ತವರೊಂದಿಗೆ ಪ್ರೀತಿಯ ಮೊದಲ ಅನುಭವವನ್ನು ನಾವು ಅನುಭವಿಸುತ್ತೇವೆ. ಈ ಪ್ರೀತಿ ನಮ್ಮ ಪಾತ್ರವನ್ನು ಸೃಷ್ಟಿಸುತ್ತದೆ. ಸಮಾಜದಲ್ಲಿ ನಮ್ಮ ಸ್ಥಾನ, ಯಾವ ಮಟ್ಟದ ಶಿಕ್ಷಣ, ಸಂಪತ್ತು ಅಥವಾ ಖ್ಯಾತಿ ಎಂಬುದರ ವಿಷಯವಲ್ಲ – ಕುಟುಂಬವು ದೀರ್ಘಕಾಲೀನ ಸಂಬಂಧಗಳು, ಕಾಳಜಿ ಮತ್ತು ನಮ್ಮ ಅಭಿವೃದ್ಧಿಗೆ ಒಂದು ಮಾದರಿಯನ್ನು ಸೃಷ್ಟಿಸುವ ಸ್ಥಳವಾಗಿದೆ. ಕುಟುಂಬವು ಪ್ರೀತಿಯ ಶಾಲೆ ಮತ್ತು ನೈತಿಕತೆಯ ಶಾಲೆ, ಇದು ನಮ್ಮ ಆಂತರಿಕ ಮೌಲ್ಯಗಳ ಮೂಲವಾಗಿದೆ. ಕುಟುಂಬವು ಪ್ರತಿಯೊಬ್ಬ ವ್ಯಕ್ತಿಯ ಅಭಿವೃದ್ಧಿಗೆ ನಿರಂತರವಾದ ಮೌಲ್ಯವಾಗಿದೆ, ರಾಜ್ಯದ ಜೀವನದಲ್ಲಿ, ಹೊಸ ತಲೆಮಾರಿನ ಪಾಲನೆ, ಸಾಮಾಜಿಕ ಸ್ಥಿರತೆ ಮತ್ತು ಪ್ರಗತಿಯನ್ನು ಖಾತ್ರಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕುಟುಂಬದ ಪ್ರಮುಖ ಸಾಮಾಜಿಕ ಕಾರ್ಯವೆಂದರೆ ಮಕ್ಕಳ ಪಾಲನೆ ಮತ್ತು ಅಭಿವೃದ್ಧಿ, ಯುವ ಪೀಳಿಗೆಯ ಸಾಮಾಜಿಕೀಕರಣ. ಕುಟುಂಬದ ಪಾಲನೆ ಸಾಮರ್ಥ್ಯವು ಮಕ್ಕಳಲ್ಲಿ ಕೆಲವು ಗುಣಗಳನ್ನು ರೂಪಿಸುವ ಗುರಿಯನ್ನು ಹೊಂದಿರುವ ಪೋಷಕರ ಆಧ್ಯಾತ್ಮಿಕ ಮತ್ತು ಪ್ರಾಯೋಗಿಕ ಚಟುವಟಿಕೆಗಳ ಕ್ಷೇತ್ರದಲ್ಲಿ ಅದರ ಸಾಮರ್ಥ್ಯಗಳನ್ನು ಮಾತ್ರವಲ್ಲದೆ, ಕುಟುಂಬ ಸೂಕ್ಷ್ಮ ಪರಿಸರದಿಂದ, ಸಾಮಾನ್ಯವಾಗಿ ಜೀವನ ವಿಧಾನದಿಂದ ಕೂಡಿದೆ. .

ಆಧುನಿಕ ಜೀವನಕ್ಕೆ ಹೊಂದಿಕೊಂಡಂತೆ ಕುಟುಂಬಗಳು ಸಣ್ಣದಾಗತೊಡಗಿವೆ. ಬಾಲ್ಯದಲ್ಲಿ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುವ ತಂದೆ-ತಾಯಿಯನ್ನು ವೃದ್ಧಾಪ್ಯದಲ್ಲಿ ಆಶ್ರಮಕ್ಕೆ ದೂಡುವ ಮಕ್ಕಳಿಗೆ ಕುಟುಂಬದ ಮಹತ್ವವನ್ನು ತಿಳಿಸಿಕೊಡುವ ಕಾರ್ಯವಾಗಬೇಕು. ಸಮಾಜದಲ್ಲಿ ಕುಟುಂಬದ ಪಾತ್ರ ಏನು ಎಂಬುದನ್ನು ಪ್ರತಿಯೊಬ್ಬನು ಅರ್ಥಮಾಡಿಕೊಳ್ಳಬೇಕಾಗಿದೆ. ಅದಕ್ಕಾಗಿ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗವು ಸುದೃಡ ಕುಟುಂಬ ಸುಭದ್ರ ಸಮಾಜ ಎಂಬ ಶೀರ್ಷಿಕೆಯಡಿಯಲ್ಲಿ ಫೆಬ್ರವರಿ 19-28ರ ವರೆಗೆ ರಾಷ್ಟ್ರೀಯ ಅಭಿಯಾನವನ್ನು ನಡೆಸುತ್ತಿದೆ. ಈ ಅಭಿಯಾನದ ಮುಖ್ಯ ಉದ್ದೇಶಗಳೆಂದರೆ, ಸಮಾಜದ ಸಮೃದ್ಧಿ ಮತ್ತು ಸಫಲತೆಯು ಅದರಲ್ಲಿರುವ ಕುಟುಂಬಗಳ ಶಕ್ತಿ ಮತ್ತು ಸಮೃದ್ಧಿಯನ್ನು ಅವಲಂಬಿಸಿರುತ್ತದೆ ಎಂಬ ವಿಷಯದಲ್ಲಿ ಜನರನ್ನು ಜಾಗೃತಗೊಳಿಸುವುದು. ವೈವಾಹಿಕ ಜೀವನದ ಹೊರತಾಗಿ ಗಳಿಸಿ ಬಯಸುವ ಸಂತೋಷ ಮತ್ತು ಶಾಂತಿಯ ಅರಸುವಿಕೆಯ ಪರಿಣಾಮದಿಂದ ಉದ್ಭವಿಸುವ ಸಂಕಷ್ಟಗಳ ಬಗ್ಗೆ ಎಚ್ಚರಿಸುವುದು ಮತ್ತು ನೈತಿಕ ಮೌಲ್ಯಗಳು ಮಾನವ ಸಂಬಂಧಕ್ಕೆ ಎಷ್ಟು ಮಹತ್ವಪೂರ್ಣವಾಗಿದೆ ಎಂಬುದನ್ನು ಮನವರಿಕೆ ಮಾಡಿಸುವುದು. ಕುಟುಂಬದ ಪ್ರತಿಯೊಬ್ಬ ವ್ಯಕ್ತಿಯನ್ನು ಅವನ ಜವಾಬ್ದಾರಿಯ ಕುರಿತು ಅರಿವುಳ‍್ಳವನನ್ನಾಗಿಸುವುದು ಮತ್ತು ಅವರಿಗೆ ಕುಟುಂಬದಲ್ಲಿ ಶಾಂತಿ ಮತ್ತು ನ್ಯಾಯವನ್ನು ನೆಲೆ ನಿಲ್ಲಿಸಲು ಹಾಗೂ ಮುಂದೆ ಬರಲಿರುವ ಪೀಳಿಗೆಯನ್ನು ಪೋಷಿಸಲು ಅನುಕೂಲಕರವಾದ ವಾತಾವರಣವನ್ನು ಉಂಟುಮಾಡುವುದು. ಕುಟುಂಬದ ಹಿರಿಯರ ಮತ್ತು ಅಶಕ್ತರ ಹಕ್ಕುಗಳ ಸಂರಕ್ಷಣೆ ಮತ್ತು ಅವರಿಗೆ ಗೌರವ ನೀಡುವುದು ಕುಟುಂಬದ ಪ್ರತಿಯೊಬ್ಬ ಸದಸ್ಯರ ಹೊಣೆಗಾರಿಕೆಯಾಗಿದೆ. ಈ ಮೇಲಿನ ಉದ್ದೇಶಗಳನ್ನು ಪೂರ್ತಿಕರಿಸಿ ಸುದೃಡ ಕುಟುಂಬಿಂದ ಸುಭದ್ರ ಸಮಾಜವನ್ನು ಸೃಷ್ಟಿಸಿ ಜಾತಿ ಧರ್ಮಗಳ ಗೋಡೆಯನ್ನು ಒಡೆದು ನಾವೆಲ್ಲ ಪರಸ್ಪರ ಸಹೋದರು ಎಂಬ ಭಾವನೆಯಿಂದ ಜೀವನ ನಡೆಸಿದರೆ ಜೀವನವೇ ಅರ್ಥಪೂರ್ಣವಾಗಿರಲು ನಮ್ಮಿಂದ ಖಂಡಿತ ಸಾಧ್ಯವಾಗುತ್ತದೆ.

LEAVE A REPLY

Please enter your comment!
Please enter your name here