ಶಿಕ್ಷಣವು ವ್ಯಕ್ತಿಯ ಜೀವನವನ್ನು ಮಾತ್ರವಲ್ಲ, ಇಡೀ ಸಮಾಜದ ಭವಿಷ್ಯವನ್ನು ಬದಲಾಯಿಸುವ ಶಕ್ತಿಯಾಗಿದೆ. ಶಿಕ್ಷಣವಿಲ್ಲದ ಸಮಾಜದಲ್ಲಿ ಅಜ್ಞಾನ, ಮೂಢನಂಬಿಕೆ, ಅನ್ಯಾಯ, ಅಸಮಾನತೆ ಮತ್ತು ನೈತಿಕ ಅಧಃಪತನ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ಜ್ಞಾನ ಮತ್ತು ಉತ್ತಮ ಶಿಕ್ಷಣ ಹೊಂದಿದ ಸಮಾಜವು ಸತ್ಯ, ನ್ಯಾಯ, ಮಾನವೀಯತೆ ಮತ್ತು ಪ್ರಗತಿಯ ದಾರಿಯಲ್ಲಿ ಸಾಗುತ್ತದೆ. ಈ ಕಾರಣದಿಂದಲೇ ಪ್ರವಾದಿ ಮುಹಮ್ಮದರು ಜ್ಞಾನಾರ್ಜನೆಗೆ ಅತ್ಯಂತ ಮಹತ್ವ ನೀಡಿದ್ದಾರೆ. ಜ್ಞಾನವು ಮನುಷ್ಯನ ದೃಷ್ಟಿಕೋನವನ್ನು ವಿಸ್ತರಿಸುತ್ತದೆ, ಸತ್ಯವನ್ನು ಗುರುತಿಸುವ ಸಾಮರ್ಥ್ಯವನ್ನು ನೀಡುತ್ತದೆ ಮತ್ತು ಜೀವನವನ್ನು ಸರಿಯಾದ ರೀತಿಯಲ್ಲಿ ನಡೆಸಲು ನೆರವಾಗುತ್ತದೆ. ಕುರ್ ಆನ್ ಈ ರೀತಿ ಕೇಳುತ್ತದೆ “ತಿಳಿದವರು ಮತ್ತು ತಿಳಿಯದವರು ಸಮಾನರೇ?” (ಕುರ್‌ಆನ್ 39:9)
ಸುಮಾರು ಹದಿನಾಲ್ಕು ಶತಮಾನಗಳ ಹಿಂದೆ ಅರೇಬಿಯಾ ಸಮಾಜವು ಅಜ್ಞಾನ, ವೈಷಮ್ಯ, ಸಾಮಾಜಿಕ ಅನ್ಯಾಯ ಮತ್ತು ಅನೇಕ ಮೂಢನಂಬಿಕೆಗಳಿಂದ ಕೂಡಿತ್ತು. ಅಂತಹ ಸಂದರ್ಭದಲ್ಲಿ ಪ್ರವಾದಿ ಮುಹಮ್ಮದ್(ಸ)ರು ಸ್ವತಃ ಅನಕ್ಷರಸ್ಥರಾಗಿದ್ದರೂ ಕೂಡಾ ಜ್ಞಾನದ ಬೆಳಕನ್ನು ಹರಡುವ ಮೂಲಕ ಮಹತ್ತರವಾದ ಶೈಕ್ಷಣಿಕ ಮತ್ತು ಸಾಮಾಜಿಕ ಕ್ರಾಂತಿಗೆ ಚಾಲನೆ ನೀಡಿದರು.
ಪ್ರವಾದಿಯವರ ಪರಿಕಲ್ಪನೆಯಲ್ಲಿ ಶಿಕ್ಷಣದ ಉದ್ದೇಶ ಕೇವಲ ಓದು-ಬರಹ ಕಲಿಸುವುದು ಮಾತ್ರವಾಗಿರಲಿಲ್ಲ ಅದು ಕೇವಲ ಭೌತಿಕ ಸಾಧನೆಯ ಸಾಧನವಲ್ಲ ವ್ಯಕ್ತಿಯ ಆಧ್ಯಾತ್ಮಿಕ ಮತ್ತು ನೈತಿಕ ಉನ್ನತಿಗೂ ಕಾರಣವಾಗುತ್ತದೆ. ಜ್ಞಾನ, ಚಿಂತನೆ, ನೈತಿಕತೆ, ಸಚ್ಚಾರಿತ್ರ್ಯ, ಮಾನವೀಯತೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವುದು ಮುಖ್ಯ ಅದರ ಗುರಿಯಾಗಬೇಕೆಂದರು.
ಕುರ್‌ಆನಿನ ಮೊದಲ ಸಂದೇಶವೇ ‘ಓದು’ ಎಂದಾಗಿದೆ (ಸಂದೇಶವಾಹಕರೇ) ಓದಿರಿ, ನಿಮ್ಮನ್ನು ಸೃಷ್ಟಿಸಿದ ನಿಮ್ಮ ಪ್ರಭುವಿನ ನಾಮದೊಂದಿಗೆ. (ಅಧ್ಯಾಯ 96: ಅಲ್ ಅಲಕ್ ಸೂಕ್ತ : 1) ದೇವನ ಬಗೆಗಿನ ಅರಿವಿನ ಮೂಲಕ ಜಗತ್ತಿನ ಅರಿವು ಸಾಧ್ಯವಾಗುತ್ತದೆ “ದೇವರ ಭಯವೇ ಜ್ಞಾನದ ಆರಂಭ” ಎಂಬ ನುಡಿಯಂತೆ ದೇವರ ಭಯವಿಲ್ಲದ ಜ್ಞಾನದಿಂದ ನೈತಿಕ ಮೌಲ್ಯಗಳನ್ನು ಗಳಿಸಲು ಸಾಧ್ಯವಿಲ್ಲ ಎಂದರು. ಅದೇ ಅಧ್ಯಾಯದಲ್ಲಿ ಮನುಷ್ಯನಿಗೆ ಕಲಂ ಮೂಲಕ ಜ್ಞಾನವನ್ನು ಕಲಿಸಿದ ಪರಮಾತ್ಮನನ್ನು ಕುರ್‌ಆನ್ ಸ್ಮರಿಸುತ್ತದೆ: “ಅವನು ಲೇಖನಿಯ ಮೂಲಕ ವಿದ್ಯೆ ಕಲಿಸಿದನು- ಮಾನವನು ತಿಳಿದಿರದಂತಹ ಜ್ಞಾನವನ್ನು ಅವನಿಗೆ ದಯಪಾಲಿಸಿದನು”. ಅಧ್ಯಾಯ 96: ಅಲ್ ಅಲಕ್ ಸೂಕ್ತ : 4-5
ಕಲಿಕೆ ಮತ್ತು ಜ್ಞಾನವು ಮಾನವನಿಗೆ ದೊರೆತಿರುವ ಮಹತ್ತರ ಅನುಗ್ರಹಗಳಾಗಿವೆ. ಕುರ್‌ಆನ್ ಹೇಳುತ್ತದೆ: ಪ್ರವಾದಿ ಮುಹಮ್ಮದ್ (ಸ) ಹೇಳಿದರು “ಜ್ಞಾನವನ್ನು ಹುಡುಕುವುದು ಪ್ರತಿಯೊಬ್ಬ ವಿಶ್ವಾಸಿಯ ಮೇಲಿರುವ ಕರ್ತವ್ಯ.” (ಇಬ್ನ್ ಮಾಜಹ್) ಎಂದು ಪ್ರವಾದಿ ಹೇಳಿದರು. ಮತ್ತೊಂದು ಕಡೆ ಕುರ್‌ಆನ್ ಹೇಳುತ್ತದೆ:ನಿಮ್ಮ ಪೈಕಿ ಸತ್ಯವಿಶ್ವಾಸವುಳ್ಳವರಿಗೆ ಮತ್ತು ಜ್ಞಾನವು ನೀಡಲ್ಪಟ್ಟಿರುವವರಿಗೆ ಅಲ್ಲಾಹನು ಉನ್ನತ ಪದವಿಗಳನ್ನು ದಯಪಾಲಿಸುವನು ಮತ್ತು ನೀವು ಮಾಡುತ್ತಿರುವುದೆಲ್ಲವೂ ಅಲ್ಲಾಹನಿಗೆ ತಿಳಿದಿದೆ.(ಅಧ್ಯಾಯ 58: ಅಲ್ ಮುಜಾದಲಃ ಸೂಕ್ತ : 11)ಕುರ್ ಆನಿನಲ್ಲಿ ಅಲ್ಲಾಹನು ಪ್ರವಾದಿಗೆ ಕಲಿಸಿದ ಅತ್ಯುತ್ತಮ ಪ್ರಾರ್ಥನೆಯಲ್ಲಿ ಒಂದು “ಓ ನನ್ನ ಪ್ರಭೂ ನನಗೆ ಇನ್ನಷ್ಟು ಜ್ಞಾನ ದಯಪಾಲಿಸು” ಎಂದು ಪ್ರಾರ್ಥಿಸಿರಿ. (ಅಧ್ಯಾಯ 20: ತಾಹಾ ಸೂಕ್ತ : 114) ಎಂದಾಗಿದೆ. ಸಂಪತ್ತು ಅಧಿಕಾರ ಅಥವಾ ಸ್ಥಾನಮಾನಕಿಂತ ಮನುಷ್ಯನು ಕಲಿಕೆಯನ್ನು ವೃದ್ಧಿಸಬೇಕು. ಪ್ರವಾದಿ ಮುಹಮ್ಮದ್(ಸ) ಅವರು ಮಕ್ಕಳ ಶಿಕ್ಷಣ ಮತ್ತು ಉತ್ತಮ ತರಬೇತಿಗೆ ವಿಶೇಷ ಮಹತ್ವ ನೀಡಿದರು. ಪ್ರವಾದಿ ಮುಹಮ್ಮದರು ಹೇಳಿದರು “ಒಬ್ಬ ತಂದೆಯು ತನ್ನ ಮಗುವಿಗೆ ನೀಡುವ ಅತ್ಯುತ್ತಮ ಕೊಡುಗೆ ಉತ್ತಮ ಶಿಕ್ಷಣ ಮತ್ತು ಉತ್ತಮ ತರಬೇತಿಯಾಗಿದೆ.” (ಹದೀಸ್)
ಪ್ರವಾದಿ(ಸ) ಅವರು ಜನರ ವಯಸ್ಸು, ಜ್ಞಾನಮಟ್ಟ, ಮನಸ್ಥಿತಿ ಮತ್ತು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬೋಧಿಸುತ್ತಿದ್ದರು. ಮಕ್ಕಳಿಗೆ ಭೌತಿಕ ಸೌಲಭ್ಯಗಳನ್ನು ನೀಡುವುದಕ್ಕಿಂತ ಜ್ಞಾನ, ಉತ್ತಮ ಸಂಸ್ಕಾರ ಮತ್ತು ನೈತಿಕ ಶಿಕ್ಷಣ ನೀಡಬೇಕೆಂದು ಪ್ರವಾದಿ ಕಲಿಸಿದರು. ಪ್ರವಾದಿ ಜ್ಞಾನಾರ್ಜನೆಯ ವ್ಯಾಪ್ತಿಯನ್ನು ಬಹಳ ವಿಶಾಲಗೊಳಿಸಿದರು. “ಶಿಕ್ಷಣವು ತೊಟ್ಟಿಲಿನಿಂದ ಗೋರಿಯವರೆಗೆ” ಎಂಬ ನುಡಿಯಂತೆ ಶಿಕ್ಷಣವು ನಿರ್ದಿಷ್ಟ ವರ್ಗ ಅಥವಾ ವಯಸ್ಸಿಗೆ ಮಾತ್ರ ಸೀಮಿತವಲ್ಲ. ಸಮಾಜದ ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಜ್ಞಾನವನ್ನು ನಿರಂತರವಾಗಿ ಪಡೆಯಬೇಕು. ವ್ಯಕ್ತಿಯು ಕಲಿಯುವುದನ್ನು ನಿಲ್ಲಿಸಬಾರದು. ಬಾಲ್ಯದಲ್ಲಿ ಯುವಕನಾಗಿದ್ದಾಗಲೂ, ವೃದ್ಧಾಪ್ಯದಲ್ಲಿಯೂ ಜ್ಞಾನವನ್ನು ಹುಡುಕಬೇಕು. ಕಾಲ ಬದಲಾಗುತ್ತದೆ, ಸಮಾಜ ಬದಲಾಗುತ್ತದೆ, ಹೊಸ ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ ಮನುಷ್ಯನು ನಿರಂತರವಾಗಿ ಕಲಿಯುತ್ತಾ ತನ್ನ ಜ್ಞಾನವನ್ನು ವಿಸ್ತರಿಸಬೇಕು. ಹಾಗೆಯೇ ಜ್ಞಾನ ಎಂದರೆ ನಿರ್ದಿಷ್ಟವಾದ ಕಲಿಕೆ ಮಾತ್ರವಲ್ಲ ಎಲ್ಲಾ ರೀತಿಯ ಅರಿವು ಕೂಡ ಶಿಕ್ಷಣವಾಗಿದೆ. ಆದ್ದರಿಂದ ನಾವು ಜ್ಞಾನಾರ್ಜನೆಗೆ ಸದಾ ಸಣ್ಣದ್ದರಾಗಿರಬೇಕು. ಜ್ಞಾನಕ್ಕಾಗಿ ಹೊರಡುವ ವ್ಯಕ್ತಿಯ ಕುರಿತು ಮತ್ತೊಂದು ಪ್ರವಾದಿ ಹೀಗೆ ಹೇಳುತ್ತಾರೆ “ಯಾರು ಜ್ಞಾನವನ್ನು ಹುಡುಕುವ ದಾರಿಯಲ್ಲಿ ನಡೆಯುತ್ತಾನೋ, ಅಲ್ಲಾಹನು ಅವನಿಗೆ ಸ್ವರ್ಗದ ದಾರಿಯನ್ನು ಸುಲಭಗೊಳಿಸುತ್ತಾನೆ.” (ಸಹೀಹ್ ಮುಸ್ಲಿಮ್)
ಜ್ಞಾನವನ್ನು ಗಳಿಸುವುದಷ್ಟೇ ಸಾಕಾಗುವುದಿಲ್ಲ. ಕಲಿತ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜ್ಞಾನವು ಸತ್ಯವನ್ನು ತಿಳಿಯಲು, ಉತ್ತಮ ಕಾರ್ಯ ಮಾಡಲು ಮತ್ತು ಸಮಾಜಕ್ಕೆ ಉಪಯೋಗವಾಗಲು ಬಳಸಬೇಕು. ಪ್ರವಾದಿ(ಸ)ರು ಉಪಯೋಗವಿಲ್ಲದ ಜ್ಞಾನದಿಂದ ದೂರವಿರಲು ಪ್ರಾರ್ಥಿಸುತ್ತಿದ್ದರು: “ಓ ಅಲ್ಲಾಹ್! ಪ್ರಯೋಜನವಿಲ್ಲದ ಜ್ಞಾನದಿಂದ ನಿನ್ನಲ್ಲಿ ಆಶ್ರಯ ಕೋರುತ್ತೇನೆ.” (ಹದೀಸ್)
ಪ್ರಶ್ನೆ ಕೇಳುವುದು ಅಜ್ಞಾನದ ಲಕ್ಷಣವಲ್ಲ; ಪ್ರವಾದಿ(ಸ) ಅವರು ತಮ್ಮ ಸಹಾಬಾಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು ಮತ್ತು ಕೆಲವೊಮ್ಮೆ ಸ್ವತಃ ಪ್ರಶ್ನೆಗಳನ್ನು ಕೇಳಿ ಅವರ ಚಿಂತನಾ ಶಕ್ತಿಯನ್ನು ಬೆಳೆಸುತ್ತಿದ್ದರು. ಪ್ರವಾದಿ ಮುಹಮ್ಮದ್ (ಸ) ಹೇಳಿದರು “ಜ್ಞಾನವು ಒಂದು ಪೆಟ್ಟಿಗೆಯಾಗಿದ್ದು, ಪ್ರಶ್ನೆಯು ಅದರ ಕೀಲಿಕೈ” (ಹದೀಸ್)
ಪ್ರವಾದಿ(ಸ) ಅವರು ಈರ್ಷ್ಯೆ ಪಡಬಹುದಾದ ಎರಡು ವಿಷಯಗಳು ತಿಳಿಸಿದರು “ಒಬ್ಬನಿಗೆ ಅಲ್ಲಾಹನು ಸಂಪತ್ತು ನೀಡಿದ್ದು, ಅವನು ಅದನ್ನು ಸತ್ಯದ ಮಾರ್ಗದಲ್ಲಿ ಖರ್ಚು ಮಾಡುತ್ತಾನೆ; ಮತ್ತೊಬ್ಬನಿಗೆ ಅಲ್ಲಾಹನು ಜ್ಞಾನ ನೀಡಿದ್ದು, ಅವನು ಅದರ ಆಧಾರದ ಮೇಲೆ ನ್ಯಾಯಯುತವಾಗಿ ನಡೆದು ಇತರರಿಗೆ ಬೋಧಿಸುತ್ತಾನೆ.” (ಹದೀಸ್)
“ಸುಫ್ಫಾ” ಎಂಬ ಶಿಕ್ಷಣ ಕೇಂದ್ರವನ್ನು ಪ್ರವಾದಿ(ಸ) ಮದೀನಾದಲ್ಲಿ ಮೊದಲು ಸ್ಥಾಪಿಸಿದರು. ಪ್ರವಾದಿ(ಸ)ರ ಶೈಕ್ಷಣಿಕ ಕ್ರಾಂತಿಯ ಪ್ರಮುಖ ಸಂಸ್ಥೆಗಳಲ್ಲಿ ಅಹ್ಲುಸ್ಸುಫ್ಫಾ ಪ್ರಮುಖವಾದದ್ದಾಗಿದೆ. ಮದೀನಾದ ಮಸ್ಜಿದುನ್ನಬವಿಯಲ್ಲಿ ಸಹಾಬಾಗಳಿಗೆ, ಮಕ್ಕಳಿಗೆ, ಜನಸಾಮಾನ್ಯರಿಗೆ ಬೋಧನೆ ನೀಡಲಾಗುತ್ತಿತ್ತು. ಮಸೀದಿ ಕೇವಲ ನಮಾಜಿನ ಸ್ಥಳವಾಗಿರದೆ ಶಿಕ್ಷಣ, ತರಬೇತಿ, ಸಾಮಾಜಿಕ ಮಾರ್ಗದರ್ಶನ ಮತ್ತು ಜ್ಞಾನ ಪ್ರಸಾರದ ಕೇಂದ್ರವಾಗಿ ಪ್ರವಾದಿ(ಸ) ಬದಲಿಸಿದರು. ಶಿಕ್ಷಣವು ಜೀವನದಿಂದ ಬೇರ್ಪಟ್ಟ ವಿಷಯವಲ್ಲ; ಧಾರ್ಮಿಕ, ಸಾಮಾಜಿಕ ಮತ್ತು ನೈತಿಕ ಬದುಕಿನ ಅವಿಭಾಜ್ಯ ಅಂಗವಾಗಿದೆ ಎಂದರು.
ಪ್ರವಾದಿ(ಸ)ರು ಶಿಕ್ಷಣಕ್ಕೆ ಆದ್ಯತೆ ತೋರಿಸುವ ಒಂದು ಪ್ರಸಿದ್ಧ ಘಟನೆಯೆಂದರೆ ಬದ್ರ್ ಯುದ್ಧದ ಹಿನ್ನಲೆಯಲ್ಲಿ ಬಂಧಿಯಾದ ಕೆಲವು ಕೈದಿಗಳು ಓದಲು ಮತ್ತು ಬರೆಯಲು ತಿಳಿದವರಾಗಿದ್ದರು. ಪ್ರವಾದಿ (ಸ)ರು ಅವರ ಜ್ಞಾನವನ್ನು ಪ್ರಯೋಜನ ಪಡೆದುಕೊಂಡು ಮದೀನಾದ ನಿವಾಸಿಗಳಿಗೆ ಓದು-ಬರಹ ಕಲಿಸುವ ಮೂಲಕ ಬಿಡುಗಡೆ ಪಡೆಯುವ ಅವಕಾಶ ನೀಡಿದರು. ಜಗತ್ತಿನಲ್ಲಿ ಇಂದಿನ ವರೇಗಿನ ಚರಿತ್ರೆಯಲ್ಲಿ ಶಿಕ್ಷಣಕ್ಕೆ ಈ ರೀತಿಯ ಮಹತ್ವ ನೀಡಿದ ಮಹಾನ್ ವ್ಯಕ್ತಿ ಕಳೆದು ಹೋದ ಇತಿಹಾಸವಿಲ್ಲ.
ಪ್ರವಾದಿ(ಸ) ಅವರು ಮಹಿಳೆಯರ ಶಿಕ್ಷಣಕ್ಕೆ ವಿಶೇಷ ಗಮನ ಹರಿಸಿದರು. ಅಸ್ಸುಫ್ಫಾದ ಶಿಕ್ಷಣ ಸಂಸ್ಥೆಯಲ್ಲಿ ಮಹಿಳೆಯರು ತಮಗಾಗಿ ಪ್ರತ್ಯೇಕ ಸಮಯವನ್ನು ನಿಗದಿಪಡಿಸುವಂತೆ ಕೇಳಿದಾಗ, ಪ್ರವಾದಿ(ಸ)ರು ವಿಶೇಷ ಸಮಯ ನಿಗದಿಪಡಿಸಿದರು. ಜಗತ್ತಿನಲ್ಲಿ ಹಲವೆಡೆ ಮಹಿಳೆಯರು ನಾಲ್ಕು ಗೋಡೆಗಳ ನಡುವೆ ಕಾಲ ಕಳೆಯುದ್ದಿಂತಹ ಸಮಯದಲ್ಲಿ ಪ್ರವಾದಿ ಮುಹಮ್ಮದರು ಮಹಿಳೆಯರನ್ನು ಶಿಕ್ಷಣದ ಮೂಲಕ ಸ್ವಾವಲಂಬಿ ಬದುಕನ್ನು ಕಲಿಸಿಕೊಟ್ಟರು. ಅವರ ಪತ್ನಿ ಆಯಿಶಾ(ರ) ಅವರು ಇದರ ಅತ್ಯುತ್ತಮ ಉದಾಹರಣೆ. ಅವರು ಹದೀಸ್, ಫಿಖ್ ಮತ್ತು ಇತರ ಜ್ಞಾನಗಳಲ್ಲಿ ಪ್ರಸಿದ್ಧರಾಗಿದ್ದರು. ಅನೇಕ ಸಹಾಬಾಗಳು ಅವರಿಂದ ಜ್ಞಾನವನ್ನು ಪಡೆದರು.
ಪ್ರವಾದಿ(ಸ) ಅವರು ಜನರನ್ನು ವಿವಿಧ ಸಂದರ್ಭಗಳಲ್ಲಿ ಬೋಧಿಸುತ್ತಿದ್ದರು. ಶುಕ್ರವಾರದ ಖುತ್ಬಾ (ಪ್ರವಚನ) ಅಥವಾ ವಾರದ ಸಭೆ ಮಸೀದಿಯಲ್ಲಿ ತರಬೇತಿ ಇತ್ಯಾದಿ ಜನರಿಗೆ ಧಾರ್ಮಿಕ ಮತ್ತು ನೈತಿಕ ಶಿಕ್ಷಣ ನೀಡುವ ಪ್ರಮುಖ ಅವಕಾಶವಾಗಿತ್ತು. ಅವರು ಜನರ ಸಮಸ್ಯೆಗಳನ್ನು ಗಮನಿಸಿ, ಅವರ ಜೀವನಕ್ಕೆ ಸಂಬಂಧಿಸಿದ ವಿಷಯಗಳನ್ನು ವಿವರಿಸುತ್ತಿದ್ದರು. ಕುಟುಂಬ ಜೀವನ, ವ್ಯಾಪಾರದಲ್ಲಿ ಪ್ರಾಮಾಣಿಕತೆ, ನೆರೆಹೊರೆಯವರ ಹಕ್ಕು, ಬಡವರ ಸಹಾಯ, ಪೋಷಕರ ಗೌರವ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯ ಮುಂತಾದ ವಿಷಯಗಳನ್ನು ಬೋಧಿಸಿದರು. ಹೀಗಾಗಿ ಸಾರ್ವಜನಿಕ ಸಭೆಗಳನ್ನೂ ಅವರು ಶಿಕ್ಷಣದ ವೇದಿಕೆಯನ್ನಾಗಿ ಬಳಸಿದರು.
ಪ್ರವಾದಿ(ಸ)ರ ಶಿಕ್ಷಣದಲ್ಲಿ ನೈತಿಕತೆಗೆ ಅತ್ಯಂತ ಮಹತ್ವವಿತ್ತು. ಕುರ್‌ಆನ್ ಹೇಳುತ್ತದೆ: ನಿಶ್ಚಯವಾಗಿಯೂ ನೀವು ಚಾರಿತ್ರ್ಯದ ಅತ್ಯುನ್ನತ ಮಟ್ಟದಲ್ಲಿದ್ದೀರಿ. (ಅಧ್ಯಾಯ 68: ಅಲ್ ಕಲಮ್ ಸೂಕ್ತ : 4) ಸಚ್ಚಾರಿತ್ರ್ಯವಿಲ್ಲದಿದ್ದರೆ ಆ ಜ್ಞಾನವು ಸಮಾಜಕ್ಕೆ ಪ್ರಯೋಜನವಾಗುವುದಿಲ್ಲ. ಆದ್ದರಿಂದ ಪ್ರವಾದಿ(ಸ) ಅವರು ಜ್ಞಾನವನ್ನು ನೈತಿಕತೆಯೊಂದಿಗೆ ಜೋಡಿಸಿದರು. ಅವರು ಸತ್ಯವಂತಿಕೆ, ಪ್ರಾಮಾಣಿಕತೆ, ದಯೆ, ಕ್ಷಮೆ, ತಾಳ್ಮೆ ಮತ್ತು ನ್ಯಾಯವನ್ನು ತಮ್ಮ ಜೀವನದ ಮೂಲಕ ಕಲಿಸಿದರು. ಅವರ ಜೀವನವೇ ಒಂದು ಜೀವಂತ ಪಾಠಶಾಲೆಯಾಗಿತ್ತು.
ಪ್ರವಾದಿ ಮುಹಮ್ಮದ್(ಸ) ಅವರ ಶೈಕ್ಷಣಿಕ ಕ್ರಾಂತಿಯು ಮಾನವ ಇತಿಹಾಸದ ಮಹತ್ವದ ಪರಿವರ್ತನೆಗಳಲ್ಲಿ ಒಂದಾಗಿದೆ. ಅಜ್ಞಾನದಿಂದ ಬಳಲುತ್ತಿದ್ದ ಸಮಾಜವನ್ನು ಅವರು ಜ್ಞಾನದ ಬೆಳಕಿನತ್ತ ಕರೆದೊಯ್ದರು. “ಓದು” ಎಂಬ ಮೂದಲ ಸಂದೇಶವು ಶಿಕ್ಷಣಕ್ಕೆ ನೀಡಿದ ಮಹತ್ವವನ್ನು ಸ್ಪಷ್ಟಪಡಿಸುತ್ತದೆ.
ಪ್ರವಾದಿ(ಸ) ಅವರ ಶಿಕ್ಷಣದ ಪರಿಣಾಮವಾಗಿ ಅಜ್ಞಾನದಲ್ಲಿದ್ದ ಸಮಾಜವು ಜ್ಞಾನಾಧಾರಿತ ಸಮಾಜವಾಗಿ ಪರಿವರ್ತನೆಯಾಯಿತು. ಅವರ ಕಾಲದಲ್ಲಿ ರೂಪುಗೊಂಡ ಸಹಾಬಾಗಳು ನಂತರ ಕುರ್‌ಆನ್, ಹದೀಸ್, ಭಾಷೆ, ಕಾನೂನು ಮತ್ತು ಇತರ ಜ್ಞಾನ ಕ್ಷೇತ್ರಗಳಲ್ಲಿ ಮಹತ್ತರ ಕೊಡುಗೆ ನೀಡಿದರು. ಜ್ಞಾನವನ್ನು ವಿವಿಧ ಪ್ರದೇಶಗಳಿಗೆ ಕೊಂಡೊಯ್ದರು. ಅನೇಕ ವಿಜ್ಞಾನಿಗಳು ಬೆಳೆದು ಬಂದರು.
ಪ್ರವಾದಿ(ಸ) ಅವರು ನಿರ್ಮಿಸಿದ ಶಿಕ್ಷಣ ವ್ಯವಸ್ಥೆಯ ಪರಿಣಾಮವು ನಂತರದ ಇಸ್ಲಾಮಿಕ್ ನಾಗರಿಕತೆಯ ಮೇಲೂ ಕಂಡುಬಂತು. ಮದೀನಾ, ಮಕ್ಕಾ, ಬಗ್ದಾದ್, ದಮಸ್ಕಸ್, ಕೈರೋ ಮತ್ತು ಜಗತ್ತಿನ ಹಲವು ನಗರಗಳಲ್ಲಿ ಜ್ಞಾನಕೇಂದ್ರಗಳು ಬೆಳೆಯಲು ಈ ಶೈಕ್ಷಣಿಕ ಪರಂಪರೆ ಪ್ರೇರಣೆಯಾಯಿತು. ವೈದ್ಯಕೀಯ, ಗಣಿತ, ಖಗೋಳಶಾಸ್ತ್ರ, ತತ್ವಶಾಸ್ತ್ರ, ಭಾಷಾಶಾಸ್ತ್ರ ಮತ್ತು ಇತರ ಕ್ಷೇತ್ರಗಳಲ್ಲಿ ಮುಸ್ಲಿಂ ವಿದ್ವಾಂಸರು ನೀಡಿದ ಕೊಡುಗೆಗಳ ಹಿಂದೆ ಜ್ಞಾನಾರ್ಜನೆಗೆ ನೀಡಿದ ಈ ಮಹತ್ವವೂ ಒಂದು ಪ್ರಮುಖ ಕಾರಣವಾಗಿತ್ತು.
ಆದ್ದರಿಂದ ಪ್ರವಾದಿ ಮುಹಮ್ಮದ್(ಸ) ಅವರ ಶೈಕ್ಷಣಿಕ ಸಂದೇಶವು ಕೇವಲ ಒಂದು ಕಾಲಘಟ್ಟಕ್ಕೆ ಸೀಮಿತವಾದುದಲ್ಲ. ಜ್ಞಾನವನ್ನು ಪಡೆಯುವುದು, ಅದನ್ನು ಸದುಪಯೋಗಪಡಿಸಿಕೊಳ್ಳುವುದು, ಇತರರಿಗೆ ಹಂಚುವುದು ಮತ್ತು ಜ್ಞಾನವನ್ನು ನೈತಿಕತೆಯೊಂದಿಗೆ ಜೋಡಿಸುವುದು ಇಂದಿನ ಸಮಾಜಕ್ಕೂ ಅಗತ್ಯವಾಗಿದೆ. ಜ್ಞಾನ ಮತ್ತು ಸಚ್ಚಾರಿತ್ರ್ಯವನ್ನು ಆಧಾರವಾಗಿಟ್ಟ ಶಿಕ್ಷಣವೇ ಶಾಂತಿಯುತ, ನ್ಯಾಯಯುತ, ಮಾನವೀಯ ಮತ್ತು ಸ್ವಸ್ಥ ಸಮಾಜವನ್ನು ನಿರ್ಮಿಸಬಲ್ಲದು ಎಂಬುವುದು ಪ್ರವಾದಿಯವರ ಸಂದೇಶ ವಾಗಿದೆ.



















































