ಮುಲ ಲೇಖಕರು – ಸಯ್ಯದ್ ಅಝರುದ್ದೀನ್

ಸಾಹಿತ್ಯಗಳು ನಾಗರಿಕತೆಗಳನ್ನು ರೂಪಿಸಿವೆ, ಕ್ರಾಂತಿಗಳಿಗೆ ಪ್ರೇರಣೆ ನೀಡಿವೆ, ನಾಯಕರನ್ನು ಬೆಳೆಸಿವೆ ಮತ್ತು ಸಾಮಾನ್ಯ ವ್ಯಕ್ತಿಗಳನ್ನು ಅಸಾಧಾರಣ ಚಿಂತಕರನ್ನಾಗಿ ಪರಿವರ್ತಿಸಿವೆ. ಆದರೆ ಮಾಹಿತಿಯು ಬೆರಳ ತುದಿಯಲ್ಲಿ ಲಭ್ಯವಿರುವ ಇಂದಿನ ಯುಗದಲ್ಲಿ, ಪುಸ್ತಕ ಓದುವ ಹವ್ಯಾಸವು ನಿಧಾನವಾಗಿ ಕ್ಷೀಣಿಸುತ್ತಿದೆ.
ಇತ್ತೀಚೆಗೆ KITAAB & COFFEE ಎಂಬ ಓದುಗರ ವೇದಿಕೆಯು ವಿದ್ಯಾರ್ಥಿಗಳು, ಯುವಕರು, ವೃತ್ತಿಪರರು ಮತ್ತು ಸಮುದಾಯದ ಸದಸ್ಯರ ಓದುವ ಹವ್ಯಾಸಗಳನ್ನು ಅರ್ಥ ಮಾಡಿಕೊಳ್ಳಲು ತನ್ನ ಅನುಯಾಯಿಗಳ ನಡುವೆ ಹಲವಾರು ಸಮೀಕ್ಷೆಗಳನ್ನು ನಡೆಸಿತು. ಈ ಸಮೀಕ್ಷೆಯಲ್ಲಿ ಸಂಗ್ರಹಿಸಲಾದ ವಿವರಗಳು ಓದುವ ಸಂಸ್ಕೃತಿಯು ಕುಸಿಯುತ್ತಿರುವ ಇಂದಿನ ಯುಗದಲ್ಲಿ ನಮ್ಮ ಮುಂದಿರುವ ಸವಾಲುಗಳು ಹಾಗೂ ಅವಕಾಶಗಳ ಕುರಿತು ಅಮೂಲ್ಯವಾದ ಒಳನೋಟಗಳನ್ನು ಮುಂದಿಡುತ್ತದೆ.
ಜನರು ನಿಯಮಿತವಾಗಿ ಓದುತ್ತಾರೆಯೇ?
ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಮೊದಲು ಪುಸ್ತಕಗಳನ್ನು ನಿರಂತರವಾಗಿ ಅಥವಾ ನಿಯಮಿತವಾಗಿ ಓದುತ್ತಾರೆಯೇ ಎಂದು ಕೇಳಲಾಯಿತು. ಇದಕ್ಕುತ್ತರವಾಗಿ,
– 50.6% ಜನರು ಹೌದೆಂದರೆ,
– 49.4% ಜನರು ಇಲ್ಲವೆಂದರು.
ಮೊದಲ ನೋಟಕ್ಕೆ ಇದರಲ್ಲಿ ಅರ್ಧದಷ್ಟು ಜನರು ಓದುವ ಹವ್ಯಾಸವನ್ನು ಉಳಿಸಿಕೊಂಡಿದ್ದಾರೆಂದರೆ ಉಳಿದ ಅರ್ಧದಷ್ಟು ಜನರು ನಿರಂತರವಾಗಿ ಇರುವುದಿಲ್ಲವೆಂದು ತಿಳಿದು ಬರುತ್ತದೆ. ಇದು ಓದುವಿಕೆಯು ಅನೇಕ ಜನರ ದೈನಂದಿನ ಜೀವನದ ಭಾಗವಾಗಿಲ್ಲವೆಂಬುದನ್ನು ಸೂಚಿಸುತ್ತದೆ.ಈ ಸಮಾನ ಪ್ರಮಾಣದ ವಿಭಜನೆಯು ಓದುವ ಸಂಸ್ಕೃತಿಯು ಒಂದು ಪ್ರಮುಖ ತಿರುವಿನಲ್ಲಿದೆ ಎಂಬುದನ್ನು ತೋರಿಸುತ್ತದೆ. ಜನರಲ್ಲಿ ಓದಿನ ಮೇಲಿನ ಆಸಕ್ತಿ ಇನ್ನೂ ಉಳಿದಿದ್ದರೂ, ಅದನ್ನು ಹವ್ಯಾಸವಾಗಿ ಮುಂದುವರಿಸುವುದು ಕಷ್ಟಕರವಾಗಿದೆಯೆಂದು ತಿಳಿಯಬಹುದು.
ಜನರು ಓದುವುದನ್ನು ತಡೆಯುವ ಅಂಶಗಳೇನು?
ಸಮೀಕ್ಷೆಯಲ್ಲಿ ನಿಯಮಿತವಾಗಿ ಓದುವುದಕ್ಕೆ ಇರುವ ಅಡ್ಡಿಗಳನ್ನು ತಿಳಿಯಲು ಭಾಗವಹಿಸಿದವರಿಗೆ ಹಲವು ಪ್ರಶ್ನೆಗಳನ್ನು ಕೇಳಲಾಯಿತು. ಅದರಲ್ಲಿ,
– 47.5% ಜನರು ಗಮನ ಕೇಂದ್ರೀಕರಿಸಲು ಅಥವಾ ಅಭ್ಯಾಸವನ್ನು ಉಳಿಸಲು ಕಷ್ಟವಾಗುತ್ತದೆ ಎಂದು ಹೇಳಿದರು.
– 32.5% ಜನರು ಸಾಮಾಜಿಕ ಜಾಲತಾಣಗಳು ಮತ್ತು ಮನರಂಜನೆಯ ವ್ಯತ್ಯಯಗಳು ಕಾರಣವೆಂದರು.
– 12.5% ಜನರು ಅಧ್ಯಯನ ಅಥವಾ ಕೆಲಸದ ಒತ್ತಡದಿಂದ ಸಮಯದ ಕೊರತೆ ಎಂದು ಹೇಳಿದರು.
– 7.5% ಜನರು ತಮಗೆ ಇಷ್ಟವಾಗುವ ಪುಸ್ತಕಗಳನ್ನು ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ ಎಂದರು.
ಈ ಫಲಿತಾಂಶಗಳು ಒಂದು ಸಾಮಾನ್ಯ ಊಹೆಯನ್ನು ಪ್ರಶ್ನಿಸುತ್ತವೆ.
ಹೆಚ್ಚಿನವರು ಓದಲು ಸಮಯವಿಲ್ಲ ಎಂದು ಹೇಳುತ್ತಾರೆ. ಆದರೆ ಈ ಸಮೀಕ್ಷೆಯಲ್ಲಿ ಕೇವಲ ಎಂಟರಲ್ಲಿ ಒಬ್ಬರು ಮಾತ್ರ ಸಮಯದ ಕೊರತೆಯನ್ನು ಮುಖ್ಯ ಕಾರಣವೆಂದು ಗುರುತಿಸಿದ್ದಾರೆ. ಇದರಿಂದ ನಿಜವಾದ ಸಮಸ್ಯೆ ಏಕಾಗ್ರತೆ ಮತ್ತು ನಿರಂತರತೆಯ ಕೊರತೆಯೆಂಬುದನ್ನು ತಿಳಿಯಬಹುದು.
ಸುಮಾರು ಅರ್ಧದಷ್ಟು ಜನರು ತಮ್ಮ ಗಮನವನ್ನು ಕೇಂದ್ರೀಕರಿಸಲು ಕಷ್ಟಪಡುತ್ತಾರೆ ಹಾಗೂ ಮೂರನೇ ಒಂದರಷ್ಟು ಜನರು ಸಾಮಾಜಿಕ ಮಾಧ್ಯಮ ಮತ್ತು ಮನರಂಜನೆ ತಮ್ಮ ಗಮನವನ್ನು ಕಸಿದುಕೊಳ್ಳುತ್ತದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಒಟ್ಟಾರೆ ಸುಮಾರು ಶೇ.80 ರಷ್ಟು ಜನರು ಏಕಾಗ್ರತೆಯ ಕೊರತೆಯ ಕಾರಣದಿಂದ ಓದುವಿಕೆಯಿಂದ ದೂರವಿದ್ದಾರೆಂದು ತಿಳಿಸಿದ್ದಾರೆ. ಅದರಿಂದ ನಿಜವಾದ ಸಮಸ್ಯೆ ಸಮಯದ ಕೊರತೆಯಲ್ಲ ಬದಲಾಗಿ ಗಮನದ ಕೊರತೆಯಾಗಿದೆ.
ಜನರ ಬಿಡುವಿನ ಸಮಯವನ್ನು ಎಲ್ಲಿ ವ್ಯಯಿಸುತ್ತಾರೆ?
ಈ ವಿಚಾರವನ್ನು ಇನ್ನಷ್ಟು ತಿಳಿಯಲು, ಓದುವಿಕೆಯಲ್ಲಿ ತೊಡಗಿಸಿಕೊಳ್ಳಬಹುದಾದ ಬಿಡುವಿನ ಸಮಯವನ್ನು ಯಾವ ಚಟುವಟಿಕೆಯಲ್ಲಿ ವ್ಯಯಿಸುತ್ತಾರೆಂದು ಕೇಳಲಾದಾಗ ಶೇ.47.3 ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಕಳೆಯುತ್ತಾರೆಂದು ತಿಳಿಸಿದರು. ಇನ್ನು ಶೇ.24.3 ಜನರು ವೀಡಿಯೊಗಳು, ಓಟಿಟಿ ವೇದಿಕೆಗಳು ಮತ್ತು ಯೂಟ್ಯೂಬ್ ಎಂದು ಹೇಳಿದರೆ, ಶೇ.18.9 ಜನರು ಇತರೆ ಚಟುವಟಿಕೆಗಳು ಎಂದರು. ಕೇವಲ ಶೇ.9.5ರಷ್ಟು ಜನರು ಮಾತ್ರ ತಮ್ಮ ಬಿಡುವಿನ ಸಮಯದಲ್ಲಿ ಕೆಲಸ ಅಥವಾ ಅಧ್ಯಯನದಲ್ಲಿ ತೊಡಗಿಸಿಕೊಳ್ಳುವರೆಂದು ಹೇಳಿದರು. ಇದನ್ನು ಗಮನಿಸಿದರೆ ಶೇ70 ಕ್ಕಿಂತ ಹೆಚ್ಚಿನ ಜನರು ತಮ್ಮ ಬಿಡುವಿನ ಸಮಯವನ್ನು ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಮನರಂಜನೆಯಲ್ಲಿ ವ್ಯಯಿಸುತ್ತಾರೆಂದು ಹೇಳಿರುವುದು ಆಶ್ಚರ್ಯಕರವಾಗಿದೆ.
ಅಂದರೆ, ಓದುವಿಕೆ ಕೆಲಸ ಅಥವಾ ಅಧ್ಯಯನಕ್ಕೆ ಸೋಲುತ್ತಿಲ್ಲ; ಅದು ಸ್ಕ್ರೋಲಿಂಗ್‌ಗೆ ಸೋಲುತ್ತಿದೆ.
ಜನರು ಪ್ರತಿದಿನ ಗಂಟೆಗಳ ಕಾಲ ರೀಲ್ಸ್, ವೀಡಿಯೊಗಳು, ಮೀಮ್ಸ್ ಮತ್ತು ನೋಟಿಫಿಕೇಶನ್ ಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಇವುಗಳು ಕ್ಷಣಿಕ ಸಂತೃಪ್ತಿಯನ್ನು ನೀಡಬಹುದು, ಆದರೆ ಪುಸ್ತಕಗಳು ನೀಡುವ ಆಳವಾದ ಜ್ಞಾನ, ಚಿಂತನೆ, ಶಬ್ದಸಂಪತ್ತು, ವಿಶ್ಲೇಷಣಾತ್ಮಕ ಸಾಮರ್ಥ್ಯ ಮತ್ತು ಬೌದ್ಧಿಕ ಬೆಳವಣಿಗೆಯನ್ನು ನೀಡಲು ಸಾಧ್ಯವಿಲ್ಲ.
ಇಂದಿನ ಕಾಲದಲ್ಲಿ ಜನರು ಹಿಂದೆಂದಿಗಿಂತಲೂ ಹೆಚ್ಚು ಪದಗಳನ್ನು ಸ್ಕ್ರೀನ್ ಗಳ ಮೇಲೆ ಓದುತ್ತಿದ್ದಾರೆ; ಆದರೆ ಹಿಂದಿನ ತಲೆಮಾರುಗಳಿಗಿಂತಲೂ ಕಡಿಮೆ ಪುಸ್ತಕಗಳನ್ನು ಓದುತ್ತಿರುವುದು ವಿಪರ್ಯಾಸ.
ಜನರನ್ನು ಓದಲು ಏನು ಪ್ರೇರೇಪಿಸುತ್ತದೆ?
ಸಮೀಕ್ಷೆಯಲ್ಲಿ ಜನರು ಪುಸ್ತಕವನ್ನು ಕೈಗೆತ್ತಿಕೊಳ್ಳಲು ಏನು ಪ್ರೇರೇಪಿಸುತ್ತದೆ ಎಂಬುದನ್ನೂ ಪರಿಶೀಲಿಸಲಾಯಿತು.
– ಶೇ.56.6 ಜನರು ತಮ್ಮ ಆಸಕ್ತಿಗೆ ಹೊಂದುವ ಪುಸ್ತಕ ಸಿಕ್ಕಾಗ ಓದುತ್ತಾರೆ ಎಂದರು.
– ಶೇ.26.4 ಜನರು ವೃತ್ತಿ ಬೆಳವಣಿಗೆ, ಪರೀಕ್ಷೆ ಅಥವಾ ಸ್ವ-ಅಭಿವೃದ್ಧಿಯಂತಹ ನಿರ್ದಿಷ್ಟ ಗುರಿ ಇದ್ದಾಗ ಓದುತ್ತಾರೆಂದರು.
– ಶೇ.15.1 ಜನರು ಉದ್ದೇಶಪೂರ್ವಕವಾಗಿ ಪರದೆ ಸಮಯವನ್ನು ಕಡಿಮೆಗೊಳಿಸಿದಾಗ ಓದುತ್ತಾರೆ ಎಂದು ತಿಳಿಸಿದರು.
– ಶೇ.1.9 ಜನರು ಸ್ನೇಹಿತರು ಅಥವಾ ಮಾರ್ಗದರ್ಶಕರ ಶಿಫಾರಸುಗಳಿಂದ ಓದುತ್ತಾರೆ ಎಂದು ಹೇಳಿದರು.
ಇದರಿಂದ ಸಂದೇಶ ಸ್ಪಷ್ಟವಾಗಿದೆ: ಜನರು ತಮ್ಮ ಜೀವನಕ್ಕೆ ಸಂಬಂಧಿಸಿದ ಮತ್ತು ಅರ್ಥಪೂರ್ಣ ಪುಸ್ತಕಗಳನ್ನು ಓದಲು ಬಯಸುತ್ತಾರೆ.
ಜನರು ಯಾವ ರೀತಿಯ ಪುಸ್ತಕಗಳನ್ನು ಓದಲು ಬಯಸುತ್ತಾರೆ?
ಸಮೀಕ್ಷೆಯಲ್ಲಿ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ (Genres) ಜನರ ಆದ್ಯತೆಯ ಬಗ್ಗೆ ಕೂಡ ಪರಿಶೀಲಿಸಲಾಯಿತು. ಅದರಂತೆ,
– ಶೇ.41.5 ಜನರು ಧಾರ್ಮಿಕ ಮತ್ತು ಆಧ್ಯಾತ್ಮಿಕ ಪುಸ್ತಕಗಳನ್ನು ಇಷ್ಟಪಡುತ್ತಾರೆ.
– ಶೇ.22.6 ಜನರು ಸ್ವ-ಅಭಿವೃದ್ಧಿ ಮತ್ತು ಯಶಸ್ಸಿನ ಪುಸ್ತಕಗಳನ್ನು ಇಷ್ಟಪಡುತ್ತಾರೆ.
– ಶೇ.22.6 ಜನರು ಕಾದಂಬರಿ, ಇತಿಹಾಸ ಮತ್ತು ಇತರೆ ಪ್ರಕಾರಗಳನ್ನು ಇಷ್ಟಪಡುತ್ತಾರೆ.
– 13.2% ಜನರು ವ್ಯವಹಾರ ಮತ್ತು ಉದ್ಯಮಶೀಲತೆಯ ಪುಸ್ತಕಗಳನ್ನು ಇಷ್ಟಪಡುತ್ತಾರೆ.
ಈ ಫಲಿತಾಂಶಗಳು ಜನರು ಮನರಂಜನೆಯ ಬದಲು ಜೀವನದ ಅರ್ಥ, ಮಾರ್ಗದರ್ಶನ ಮತ್ತು ಬೆಳವಣಿಗೆಯನ್ನು ಹುಡುಕುತ್ತಿದ್ದಾರೆ ಎಂಬುದನ್ನು ತೋರಿಸುತ್ತವೆ.
ಹೆಚ್ಚಿನ ಓದಿಗೆ ಏನು ಉತ್ತೇಜನ ನೀಡಬಹುದು?
ಸಮೀಕ್ಷೆಯಲ್ಲಿ ಹೆಚ್ಚಿನ ಪುಸ್ತಕಗಳನ್ನು ಓದಲು ಯಾವ ಅಂಶಗಳು ಪ್ರೋತ್ಸಾಹಿಸುತ್ತದೆಂದು ಕೇಳಲಾಯಿತು
– ಶೇ.43.3 ಜನರು ಸಮರ್ಪಿತವಾಗಿ ಓದಬೇಕೆಂಬ ನಿಷ್ಠೆ ಎಂದು ಹೇಳಿದರು.
– 33.3% ಜನರು ಪುಸ್ತಕ ಕ್ಲಬ್‌ಗಳು ಮತ್ತು ಓದುಗರ ಸಮುದಾಯಗಳು ಎಂದು ಹೇಳಿದರು.
– 16.7% ಜನರು ಹೆಚ್ಚು ಬಿಡುವಿನ ಸಮಯ ಮತ್ತು ಕಡಿಮೆ ವ್ಯತ್ಯಯಗಳು ಎಂದು ಹೇಳಿದರು.
– 6.7% ಜನರು ಪುಸ್ತಕ ಸಾರಾಂಶಗಳು ಮತ್ತು ಶಿಫಾರಸುಗಳು ಎಂದು ಹೇಳಿದರು.
ಈ ಫಲಿತಾಂಶಗಳು ಓದುವಿಕೆ ಸಮುದಾಯದ ವಾತಾವರಣದಲ್ಲಿ ಹೆಚ್ಚುತ್ತಿವೆ ಎಂಬುದನ್ನು ಸೂಚಿಸುತ್ತವೆ.
ಓದದಿರುವುದರಿಂದ ತೆರಬೇಕಾದ ಬೆಲೆ
ಓದುವಿಕೆ ಕಡಿಮೆಯಾದಾಗ ಸಮಾಜವು ಕೇವಲ ಒಂದು ಹವ್ಯಾಸವನ್ನು ಕಳೆದುಕೊಳ್ಳುವುದಲ್ಲ. ಬದಲಾಗಿ ಅದರೊಂದಿಗೆ ಹಲವಾರು ಬೆಲೆಗಳನ್ನು ತೆರಬೇಕಾಗುತ್ತದೆ
– ಓದುವಿಕೆ ಏಕಾಗ್ರತೆಯನ್ನು ಅಭಿವೃದ್ಧಿಪಡಿಸುತ್ತದೆ.
– ಶಬ್ದಸಂಪತ್ತನ್ನು ವಿಸ್ತರಿಸುತ್ತದೆ.
– ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸುತ್ತದೆ.
– ವಿಭಿನ್ನ ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಸಹಾನುಭೂತಿಯನ್ನು ಹೆಚ್ಚಿಸುತ್ತದೆ.
– ಕಲ್ಪನಾಶಕ್ತಿಯನ್ನು ಬಲಪಡಿಸುತ್ತದೆ.
ಕಡಿಮೆ ಓದುವ ಪೀಳಿಗೆಯು, ಕಡಿಮೆ ಆಳವಾಗಿ ಯೋಚಿಸುವ ಪೀಳಿಗೆಯಾಗುವ ಅಪಾಯವಿದೆ.
ಪೋಷಕರು ಮತ್ತು ಕುಟುಂಬಗಳು ಏನು ಮಾಡಬಹುದು?
ಓದುವ ಸಂಸ್ಕೃತಿಯ ಬುನಾದಿಯು ಮನೆಯಿಂದಲೇ ಆರಂಭವಾಗಬೇಕಿದೆ. ಆದ್ದರಿಂದ ತಮ್ಮ ಮಕ್ಕಳು ಓದಿನಲ್ಲಿ ತೊಡಗಿಸಿಕೊಳ್ಳಬೇಕೆಂದು ಬಯಸುವ ಪೋಷಕರು ಈ ಕೆಳಗಿನ ಅಂಶಗಳನ್ನು ಪರಿಗಣಿಸಬೇಕು.
1. ಮನೆಯಲ್ಲಿ ಗ್ರಂಥಾಲಯವನ್ನು ನಿರ್ಮಿಸಿ
ಪ್ರತಿ ಮನೆಯಲ್ಲಿ ಸಣ್ಣದಾದರೂ ಒಂದು ಪುಸ್ತಕಗಳನ್ನು ಶೇಖರಿಸುವ ಕಪಾಟು(ಶೆಲ್ಫ್)ಗಳಿರಲಿ.
2. ಮಕ್ಕಳು ನೀವು ಓದುತ್ತಿರುವುದನ್ನು ನೋಡಲಿ
ಮಕ್ಕಳು ನೋಡಿದುದನ್ನು ಅನುಕರಿಸುತ್ತಾರೆ. ಪೋಷಕರು ಪುಸ್ತಕಗಳು, ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳನ್ನು ಓದಿದರೆ ಮಕ್ಕಳು ಓದುವಿಕೆಯನ್ನು ಸಹಜವೆಂದು ತಿಳಿದು ಓದುವ ಅಭ್ಯಾಸ ಬೆಳೆಸಿಕೊಳ್ಳುತ್ತಾರೆ.
3. ಪರದೆ(ಸ್ಕ್ರೀನ್ ) ಅವಲಂಬನೆಯನ್ನು ಕಡಿಮೆ ಮಾಡಿ
ಪ್ರತಿ ಬಿಡುವಿನ ಕ್ಷಣವನ್ನೂ ಮೊಬೈಲ್‌ಗೆ ಮೀಸಲಿಡಬೇಡಿ. ಓದು, ಸಂಭಾಷಣೆ ಮತ್ತು ಚಿಂತನೆಗಾಗಿ ಪರದೆ-ಮುಕ್ತ ಸಮಯವನ್ನು ನಿಗದಿಪಡಿಸಿ.
4. ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿ
ಜನ್ಮದಿನಗಳು ಮತ್ತು ವಿಶೇಷ ಸಂದರ್ಭಗಳಲ್ಲಿ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವ ಅಭ್ಯಾಸ ಬೆಳೆಸಿರಿ.
5. ಒಟ್ಟಿಗೆ ಓದಿ
ಕುಟುಂಬದ ಓದುವಿಕೆ, ಕಥೆ ಹೇಳುವಿಕೆ ಮತ್ತು ಪುಸ್ತಕ ಚರ್ಚೆಗಳು ಓದನ್ನು ಆನಂದದಾಯಕವಾಗಿಸುತ್ತವೆ.
6. ಪತ್ರಿಕೆಗಳು ಮತ್ತು ನಿಯತಕಾಲಿಕೆಗಳನ್ನು ಉತ್ತೇಜಿಸಿ
ಪ್ರತಿ ದಿನವನ್ನು ಸಾಮಾಜಿಕ ಮಾಧ್ಯಮದಿಂದ ಅಲ್ಲ, ಉತ್ತಮ ಪತ್ರಿಕೆ ಮತ್ತು ನಿಯತಕಾಲಿಕೆಗಳಿಂದ ಪ್ರಾರಂಭಿಸಲು ಪ್ರೋತ್ಸಾಹಿಸಬೇಕಾಗಿದೆ.
7. ಗ್ರಂಥಾಲಯಗಳು ಮತ್ತು ಪುಸ್ತಕ ಮಳಿಗೆಗಳಿಗೆ ಭೇಟಿ ನೀಡಿ
ಪುಸ್ತಕಗಳ ಸುತ್ತಮುತ್ತಲಿನ ವಾತಾವರಣ ಮಕ್ಕಳಲ್ಲಿ ಕುತೂಹಲವನ್ನು ಹುಟ್ಟಿಸುತ್ತದೆ. ನಿರಂತರವಾಗಿ ಗ್ರಂಥಾಲಯ ಮತ್ತು ಪುಸ್ತಕ ಮಳಿಗೆಗಳಿಗೆ ಭೇಟಿ ನೀಡುವುದು ಮಕ್ಕಳ ಜೀವನಪರ್ಯಂತ ಓದುವಿಕೆಗೆ ಸಹಕಾರಿಯಾಗಬಹುದು.
ಮುಂದಿನ ದಾರಿ
ಸಮೀಕ್ಷೆಯ ಫಲಿತಾಂಶಗಳು ಸವಾಲು ಮತ್ತು ಅವಕಾಶಗಳೆರಡನ್ನೂ ತೋರಿಸುತ್ತವೆ. ಜನರು ಪುಸ್ತಕಗಳ ಮೇಲಿನ ಆಸಕ್ತಿಯನ್ನು ಕಳೆದುಕೊಂಡಿಲ್ಲ. ಅವರು ಏಕಾಗ್ರತೆಯ ಕೊರತೆ, ಚಂಚಲ ಮನಸ್ಸು ಮತ್ತು ಅಸ್ಥಿರ ಅಭ್ಯಾಸಗಳ ವಿರುದ್ಧ ಹೋರಾಡುತ್ತಿದ್ದಾರೆ.
ಇದಕ್ಕೆಪರಿಹಾರವೆಂದರೆ ಜನರಿಗೆ “ಹೆಚ್ಚು ಓದಿ” ಎಂದು ಹೇಳುವುದಕ್ಕಿಂತ ಓದನ್ನು ಸುಲಭ, ಆನಂದದಾಯಕ ಮತ್ತು ಅರ್ಥಪೂರ್ಣವಾಗಿಸುವ ವಾತಾವರಣವನ್ನು ನಿರ್ಮಿಸುವುದು ಅತ್ಯವಶ್ಯಕವಾಗಿದೆ.
ಓದುವ ಚಾಲೆಂಜ್ ಗಳು, ಪುಸ್ತಕ ಕ್ಲಬ್, ಕುಟುಂಬ ಗ್ರಂಥಾಲಯ, ಮಾರ್ಗದರ್ಶನ ಮತ್ತು ಅರ್ಥಪೂರ್ಣ ಪುಸ್ತಕ ಶಿಫಾರಸುಗಳು ಓದುವ ಸಂಸ್ಕೃತಿಯನ್ನು ಪುನಃ ಸ್ಥಾಪಿಸಬಹುದು.
ಮೊಟ್ಟ ಮೊದಲು ಅವತೀರ್ಣಗೊಂಡ ಪದವೇ “ಓದು” (Read) ಆಗಿದ್ದಂತೆ, ಜ್ಞಾನದ ಕರೆ ಇಂದಿಗೂ ಅಷ್ಟೇ ಪ್ರಸ್ತುತವಾಗಿದೆ.
ಮಾಹಿತಿಗಳಿಂದ ತುಂಬಿ ತುಳುಕುತ್ತಿರುವ ಜಗತ್ತಿನಲ್ಲಿ, ಪುಸ್ತಕಗಳು ಇನ್ನೂ ಅಪರೂಪವಾಗುತ್ತಿರುವ ಕೆಲವೊಂದು ಅಮೂಲ್ಯವಾದ ವಸ್ತುಗಳನ್ನು ನೀಡುತ್ತವೆ: ಅದುವೇ ಆಳ, ಜ್ಞಾನ ಮತ್ತು ನೋಟಿಫಿಕೇಶನ್ ಗಳಾಚೆಗೂ ಯೋಚಿಸುವ ಸಾಮರ್ಥ್ಯ.
ಭವಿಷ್ಯವು ಕೇವಲ ಮಾಹಿತಿಯನ್ನು ಪಡೆದುಕೊಳ್ಳುವವರದ್ದಲ್ಲ; ಅದನ್ನು ಅರ್ಥಮಾಡಿಕೊಳ್ಳುವವರದ್ದು. ಮತ್ತು ಆ ಅರ್ಥೈಸುವಿಕೆಯ ಪ್ರಯಾಣವು ಒಂದು ಪುಸ್ತಕದಿಂದಲೇ ಆರಂಭವಾಗುತ್ತದೆ.



















































