ಲೇಖಕರು: ಅಲೀ ಜಾಝ್

ರಜಾ ದಿನಗಳಲ್ಲಿ ಅತಿಯಾಗಿ ನಿದ್ರೆಯನ್ನೇ ಇಷ್ಟಪಡುವ ನಾನು ಕೆಲವೊಮ್ಮೆ ಮುಖಪುಟದ ಲೇಖನಗಳನ್ನು ಓದುವುದಿದೆ…(ಇಸ್ಮತ್ ಪಜೀರ್,ಇನ್ನಿತರ ಲೇಖಕರ)ಇಲ್ಲದಿದ್ದಲ್ಲಿ ಸುಮ್ಮನೆ ಇತಿಹಾಸವನ್ನು ಕೆದಕುವುದೂ ಇದೆ ಘತ ಕಾಲದ ಘಟನೆಗಳನ್ನು ನೆನಪಿಸುವ ಲೇಖನಗಳು ಇನ್ನಷ್ಟು ಇಷ್ಟವಾಗುತ್ತವೆ. ಮಹಮದ್ ಬಿನ್ ತುಘಲಕ್

(ಜುನಾಖಾನ್)ಇತಿಹಾಸಕಾರರು ಈತನನ್ನು, ‘ಹುಚ್ಚು ದೊರೆ’ ‘ಕೆಟ್ಟ ನಕ್ಷತ್ರದಲ್ಲಿ ಹುಟ್ಟಿದ ಬುದ್ದಿವಂತ ರಾಜ’, ‘ದ್ವಂದ್ವಗಳ ಮಿಶ್ರಣ’ ಎಂದೆಲ್ಲಾ ಬಣ್ಣಿಸಿರುವುದರಿಂದಲೇ ಇತಿಹಾಸವನ್ನು ಕೆದಕುವವರಿಗೆ ಮಹಮದ್ ಬಿನ್ ತುಘಲಕ್ ಒಬ್ಬ ವಿಶೇಷ ವ್ಯಕ್ತಿತ್ವದ ಒಬ್ಬ ವಿಶೇಷ ವ್ಯಕ್ತಿಯಾಗಿ ಗುರುತಿಸಿಕೊಳ್ಳುತ್ತಾನೆ. ಅಧಿಕಾರಕ್ಕಾಗಿ ತನ್ನ ತಂದೆ ‘ಘೀಯಾಸುದ್ದಿನ್ನನ್ನು’ ಕೊಂದು ಪಟ್ಟಕ್ಕೆ ಬರುವ ತುಘಲಕ್ನನ್ನು ಇತಿಹಾಸಕಾರರು ‘ಪಿತೃಘಾತೂಕ’ ಎಂದೂ ಕೂಡಾ ಪರಿಚಯಿಸಿದ್ದಾರೆ. ಈತನ ಆಡಳಿತ ಪ್ರಯೋಗಗಳು ಹಾಸ್ಯಕ್ಕೆ ಗುರಿಯಾಗಿರೋದು ಎಷ್ಟು ನಿಖರತೆಯನ್ನು ತೋರಿಸುತ್ತದೆ, ಅಷ್ಟೇ ಉತ್ತಮ ದೂರದೃಷ್ಟಿಯನ್ನು ಹೊಂದಿದೆ… ಅವತ್ತಿನ ಕಾಲಕ್ಕೆ ತನ್ನ ರಾಜಧಾನಿಯಾದ ದೆಹಲಿಯನ್ನು 1327ರಲ್ಲಿ , ದೇವಗಿರಿಗೆ ಬದಲಾಯಿಸಲು ಚಿಂತನೆ ಮಾಡುವ ತುಘಲಕ್ ಏಕಾ ಏಕೀ ತಾನೇ ನಿರ್ಧಾರವನ್ನು ಕೈಗೊಂಡು ದೆಹಲಿಯಿಂದ ದೇವಗಿರಿಗೆ ಈ ಕೂಡಲೇ ಸ್ಥಲಾಂತರವಾಗಬೇಕೆಂದು ಆದೇಶವನ್ನು ಹೊರಡಿಸುತ್ತಾನೆ. ತುಘಲಕ್ ಈ ನಿರ್ಧಾರವನ್ನು ಕೈಕೊಳ್ಳಲು ಪ್ರಮುಖ ಕಾರಣ,

• ದೇವಗಿರಿ ಭಾರತದ ಮಧ್ಯಾಭಾಗದಲ್ಲಿತ್ತು ಇದರಿಂದಾಗಿ ವ್ಯಾಪಾರ ವಹಿವಾಟುಗಳನ್ನು ಸಮರ್ಥವಾಗಿ ನಿಭಾಯಿಸಬಹುದು ಎಂಬ ದೂರದೃಷ್ಟಿಯನ್ನು ತುಘಲಕ್ ಹೊಂದಿದ್ದ.

• ತನ್ನ ಸಾಮ್ರಾಜ್ಯದ ದಂಗೆಗಳನ್ನು ಹತ್ತಿಕ್ಕಲು ತುಘಲಕ್ ಈ ರೀತಿಯ ನಿರ್ಧಾರವನ್ನು ಕೈಗೊಂಡಿದ್ದ.

• ಇನ್ನೊಂದು ಪ್ರಮುಖವಾಗಿ ದೆಹಲಿ ಮೇಲಿನ ರಾಜಪೂತರ ಹಾಗೂ ಮಂಗೋಲರ ದಾಳಿಗಳನ್ನು ತಡೆಗಟ್ಟಲು ತುಘಲಕ್ ದೆಹಲಿಯಿಂದ ದೇವಗಿರಿಗೆ ರಾಜಧಾನಿಯನ್ನು ಬದಲಾಯಿಸಲು ತೀರ್ಮಾನಿಸಿದ್ದ.

ಇಲ್ಲಿ ಈತನ ಉದ್ದೇಶ ಸ್ಪಷ್ಟವಾಗಿ ಒಳ್ಳೆಯ ನಿರ್ಧಾರವೇ ಆದರೂ, ಜನರು ಕಾಲ್ನನಡಿಗೆಯಲ್ಲೇ ಅಷ್ಟೊಂದು ದೂರ ಪ್ರಯಾಣಿಸುವುದು ಕಷ್ಟಸಾಧ್ಯವಾಗಿತ್ತು, ನಿಯಮ ಮೀರಿದ್ದೇ ಆದಲ್ಲಿ ಕಠಿಣ ಶಿಕ್ಷೆಗೆ ಗುರಿಯಗಬೇಕಾಗಿತ್ತು. ಇದರಿಂದಾಗಿ ದಾರಿಮಧ್ಯೆ ಬಹುದೊಡ್ಡ ಸಂಖ್ಯೆಯಲ್ಲಿ ಸಾವುನೋವು ಸಂಭವಿಸುತ್ತದೆ. ಇತಿಹಾಸಕರ ‘ಲೇನ್ ಪೂಲ್’ “ಬದಲಾವಣೆಯಾದ ಸಂಪತ್ಭರಿತ ದೆಹಲಿ ನೋಡಲು ಸ್ಮಶಾನದಂತೆ ಇತ್ತು” ಎಂದು ದಾಖಲಿಸಿದರೆ ಮುಂದಿನ ದಿನಗಳಲ್ಲಿ ತುಘಲಕ್ ಮತ್ತೆ ದೇವಗಿರಿಯಿಂದ ದೆಹಲಿಗೆ ರಾಜಧಾನಿಯನ್ನು ಬದಲಾಯಿಸಲು ಚಿಂತಿಸುತ್ತಾನೆ, ಈ ಹಿಂದೆ ಆದ ಸಾವು ನೋವುಗಳನ್ನು ಕಂಡ ಜನ ಸಾಮಾನ್ಯರು ದೆಹಲಿ ಕಡೆ ಮುಖ ಮಾಡದೇ ಅಲ್ಲಲ್ಲಿ ದಂಗೆಗಳು ಸಂಭವಿಸುತ್ತದೆ. ಮಹಮ್ಮದ್ ಬಿನ್ ತುಘಲಕ್ ನನ್ನು ಹಾಸ್ಯಕ್ಕೆ ಗುರಿಯಾಗಿಸುವ ಇನ್ನೊಂದು ನಿರ್ಧಾರವೇನೆಂದರೆ 1329ರಲ್ಲಿ ಈತ ಚಾಲ್ತಿಗೆ ತಂದ “ನಾಣ್ಯ ಬದಲಾವಣೆ ನೀತಿ” ತುಘಲಕ್ ದೆಹಲಿಯಲ್ಲಿ ಚಿನ್ನದ ನಾಣ್ಯಗಳ ಕೊರತೆ ಕಂಡಾಗ ಚಿನ್ನದ ನಾಣ್ಯವನ್ನು ಖಜಾನೆಯಲ್ಲಿಟ್ಟು ಚಿನ್ನದ ನಾಣ್ಯಕ್ಕಿರುವಷ್ಟೇ ಮೌಲ್ಯವನ್ನು ಬೆಳ್ಳಿ ನಾಣ್ಯಗಳಿಗೆ ಕೊಟ್ಟ. ಈ ನೀತಿಯಿಂದಾಗಿ ಜನ ಸಾಮಾನ್ಯರು ಚಿನ್ನದ ನಾಣ್ಯವನ್ನು ಆಡಳಿತ ವರ್ಗಕ್ಕೆ ಕೊಟ್ಟು ಬೆಳ್ಳಿ ನಾಣ್ಯವನ್ನು ಪಡೆಯಬಹುದಾಗಿತ್ತು…ಇದರಿಂದಲೂ ಸುಧಾರಣೆಯನ್ನು ಕಾಣದೇ ಇದ್ದಾಗ ತುಘಲಕ್ ತಾಮ್ರದ ನಾಣ್ಯವನ್ನು ಚಲಾವಣೆಗೆ ತಂದ, ಚಿನ್ನದ ನಾಣ್ಯಕ್ಕಿರುವಷ್ಟೇ ಬೆಲೆಯನ್ನು ತಾಮ್ರಾಕ್ಕೂ ನೀಡಿದ, ಆದರೆ ತಾಮ್ರದ ನಾಣ್ಯದಲ್ಲಿ ತನ್ನ ಆಡಳಿತದ ಮುದ್ರೆಯನ್ನು ಹಾಕಿಸಿಕೊಳ್ಳದೆ ಇದ್ದಿದ್ದರಿಂದ ಜನರು ತಾವೇ ತಾಮ್ರದ ನಾಣ್ಯಗಳನ್ನು ಮಾಡ ತೊಡಗಿದರು. ಇದರಿಂದಾಗಿ ತುಘಲಕ್ ಆಡಳಿತ ಹಣದುಬ್ಬರವನ್ನು ಎದುರಿಸಬೇಕಾಯಿತು, ವ್ಯಾಪಾರ ವಹಿವಾಟುಗಳು ಪಾತಾಳಕ್ಕೆ ಕುಸಿದು ಹೋಗಿತ್ತು. ಇದರಿಂದಾಗಿ ಮತ್ತೆ ತುಘಲಕ್ ಚಿನ್ನದ ನಾಣ್ಯವನ್ನೇ ಚಲಾವಣೆಗೆ ತರಬೇಕಾಯಿತು. ಈ ರೀತಿಯ ನಾಣ್ಯಗಳ ಬದಲಾವಣೆಗಳಿಂದಾಗಿ ಸಾಮ್ರಾಜ್ಯದಲ್ಲಿ ಆರ್ಥಿಕಬಿಕ್ಕಟ್ಟು ಆವರಿಸಿಬಿಟ್ಟಿತ್ತು. ಇಷ್ಟು ಮಾತ್ರವಲ್ಲದೆ ಇಡೀ ವಿಶ್ವವನ್ನೇ ಆಳಬೇಕೆಂದು ಹೊರಟ ತುಘಲಕ್ ದಂಡೆಯಾತ್ರೆಗಳು ಮತ್ತಷ್ಟು ಹಾಸ್ಯಕ್ಕೆ ಗುರಿಯಾಗಿದೆ. ಮಹಮದ್ ಬಿನ್ ತುಘಲಕ್ ಬುದ್ದಿವಂತನಂತೆ ಕಂಡರೂ, ಇಂತಹ ಹಲವಾರು ದ್ವಂದ್ವ ನಿಲುವುಗಳಿಂದಾಗಿ ಇತಿಹಾಸ ಕಂಡ ಅತ್ಯಂತ ಮೂರ್ಖ ರಾಜರ ಹೆಸರುಗಳಲ್ಲಿ ತನ್ನ ಹೆಸರನ್ನೂ ಸೇರಿಸಿಕೊಂಡಿದ್ದಾನೆ. ಈತನ ಏಕರೂಪ ನಿರ್ಧಾರವೇ ಈತನ ಅವನತಿಗೆ ಕಾರಣವಾಯಿತೋ ಏನೋ?ಈತನ ಆಳ್ವಿಕೆಯನ್ನು, ಮೊನ್ನೆ ತಾನೇ ನೈಟ್ ಕರ್ಫ್ಯೂ ಜಾರಿಗೆ ಬಂದಾಗ ನೆನಪಿಸಿಕೊಂಡು. ಮತ್ತೊಮ್ಮೆ ನವ ಭಾರತ ಇಂತಹ ಆಳ್ವಿಕೆಯನ್ನು ಕಾಣದೇ ಇರಲಿ ಎಂದು ಆಶಿಸುತ್ತೇನೆ. ಮಹಮದ್ ಬಿನ್ ತುಘಲಕ್ ಇತಿಹಾಸವನ್ನು ಓದಿಕೊಂಡಾಗ ಈತನ ಆಳ್ವಿಕೆಯ ದಿನಗಳಲ್ಲಿ ನಾನಿರಲಿಲ್ಲ ಎಂದು ನಿಟ್ಟುಸಿರು ಬಿಟ್ಟು ಅಲ್ಲೇ ಮತ್ತೆ ನಿದ್ರೆಗೆ ಜಾರಿಕೊಂಡೆ.

1 COMMENT

LEAVE A REPLY

Please enter your comment!
Please enter your name here