(ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ರವರ ಹುಟ್ಟು ಹಬ್ಬ)

ಮಕ್ಕಳೇ ಸ್ಪೂರ್ತಿ

ಕವನ ಉಪ್ಪಿನಂಗಡಿ
(Ist year B.A Journalism,
Philomena College Puttur)

ಮಕ್ಕಳೆಂದರೆ ಒಂದು ರೀತಿಯ ದೇವರ ಅವತಾರ ಎಂದು ಹೇಳಬಹುದು. ಒಂದು ಮಗುವು ತನ್ನ ಜನನದ ನಂತರ ತನ್ನ ಬೆಳವಣಿಗೆಯನ್ನು ಆರಂಭಿಸುತ್ತದೆ. ಅಂದರೆ ಶರೀರದಲ್ಲಿ ಹೇಗೆ ಬೆಳವಣಿಗೆ ಆಗುತ್ತದೆಯೋ ಅಂತೆಯೇ ತನ್ನ ಮನಸ್ಸು ಬುದ್ಧಿಯನ್ನು ಬೆಳೆಸಿಕೊಳ್ಳುತ್ತದೆ. ಒಂದು ಮನೆಯಲ್ಲಿ ಕಷ್ಟ, ನೋವು, ಬಡತನ ತುಂಬಿದ ಮನೆಯಲ್ಲಿ ಒಂದು ಸಣ್ಣ ಮಗುವಿದ್ದರೆ ಆ ಮಗುವನ್ನು ನೋಡಿ ತಮ್ಮ ಮನಸ್ಸಿನ ನೋವನ್ನು ಕಳೆಯುವ ಅದೆಷ್ಟೋ ಮಂದಿ
ಇದ್ದಾರೆ. ನಾವು ಆ ಮಗುವಿನ ಹಾವ-ಭಾವ ನಡವಳಿಕೆಯನ್ನು ನೋಡಿ ಖುಷಿಪಡುವುದರ ಜೊತೆಗೆ ಆ ಮಗುವಿನ ಧೈರ್ಯ, ನಂಬಿಕೆಯನ್ನು, ಛಲವನ್ನು ನೋಡಿ ಕಲಿಯುವುದು ತುಂಬಾ ಇದೆ. ಮಗುವು ಮೊದಲಿಗೆ
ಮಂಡಿಕಾಲಲ್ಲಿ ಹೋಗಲು ಪ್ರಯತ್ನಿಸುತ್ತದೆ. ನಂತರ ನಿಲ್ಲಲೂ ಪ್ರಯತ್ನಿಸುತ್ತದೆ. ನಂತರ ನಿಲ್ಲಲು ಆಗದಿದ್ದರೂ, ಬಿದ್ದರೂ ಕೂಡ ಅದು ಪ್ರಯತ್ನವನ್ನು ನಿಲ್ಲಿಸುವುದಿಲ್ಲ. ಸತತ ಪ್ರಯತ್ನದ ನಂತರ ಆ ಮಗುವು ನಿಲ್ಲುತ್ತದೆ. ಹಾಗೆಯೇ ನಾವು ಕೂಡ ಯವುದೇ ತರಹದ ನಮಗೆ ಸೋಲು ಬಂದಲ್ಲಿ ನಮ್ಮ ಪ್ರಯತ್ನವನ್ನು ಬಿಡದೆ ಮುಂದೆ ಸಾಗಿದಲ್ಲಿ ಅದರ ಪ್ರತಿಫಲ ನಮಗೆ ಸಿಕ್ಕೇ ಸಿಗುತ್ತದೆ
ಎಂಬುವುದನ್ನು ನಾವು ಆ ಪುಟ್ಟ ಮಗುವನ್ನು ನೋಡಿ ಕಲಿಯಬಹುದು. ಮಗುವನ್ನು ಸೂಕ್ಷ್ಮವಾಗಿ ನಾವು ನೋಡಿದರೆ ನಾವು ಇದನ್ನೆಲ್ಲಾ ಗಮನಿಸಬಹುದಾಗಿದೆ.

ಮಕ್ಕಳಿಂದ ತಿಳಿಯಬೇಕಾದ ಮತ್ತೊಂದು ಅಗತ್ಯದ
ವಿಷಯವೇನೆಂದರೆ ನೈಜತೆ. ಮಗುವು ಅಥವಾ ಯಾರೇ ತನ್ನೆದುರು ತಪ್ಪುಮಾಡಿದ್ದಲ್ಲಿ, ಏನಾದರೂ ಬೇಡದ ಕೆಲಸ ಮಾಡಿದಲ್ಲಿ ಯಾರಾದರೂ ಆ ಮಗುವಿನ ಬಳಿ ಏನಾಯಿತು ಎಂದು ಕೇಳಿದಾಗ ಮುಗ್ಧತೆಯಿಂದ ತನಗೆ ತಿಳಿದಿರುವ ವಿಷಯವನ್ನು ಚಾಚು ತಪ್ಪದೇ ಹೇಳಿಬಿಡುತ್ತದೆ. ಆದರೆ ನಾವು ಹೆಜ್ಜೆ ಹೆಜ್ಜೆಗೂ ಒಂದೊಂದು ಸುಳ್ಳು, ಮೋಸ ಇತ್ಯಾದಿ ಕೆಡುಕುಗಳಿಂದ ನಾವು ಮುಳುಗಿದ್ದೇವೆ. ನಾವು ಹೇಳಿದ ಸುಳ್ಳಿನಿಂದ ಬೇರೆಯವರಿಗೆ ತೊಂದರೆಯಾಗುತ್ತದೆಯೋ ಬೇಸರವಾಗುತ್ತದೆಯೋ ಅದು ನಮಗೆ ಬೇಕಾಗಿಲ್ಲ ನಾವು ಸಂತೋಷವಾಗಿ ನೆಮ್ಮದಿಯಿಂದ ಇದ್ದರೆ ಸಾಕು ಅಲ್ವಾ? ನಮ್ಮ ಜೀವನ
ಹೇಗಿರಬೇಕು ಎಂದು ಸಣ್ಣ ಮಗುವು ನಮಗೆ ತಿಳಿಸಿಕೊಡುತ್ತದೆ. ಆದರೆ ಮಗುವಿನಲ್ಲಿ ‘ಹೀಗೆ ಸುಳ್ಳು ಹೇಳು’ ‘ಹಾಗೆ ಹೇಳು’ ಎಂದು ಹೆಚ್ಚಿನ ಮನೆಯವರೇ ಹೇಳಿಕೊಡುತ್ತಾರೆ. ದೊಡ್ಡವನಾದ ಮೇಲೆ ನನ್ನ ಮಗನು ಅಥವಾ ಮಗಳು ಸುಳ್ಳು ಹೇಳುತ್ತಾರೆ. ನನ್ನ ಬಳಿ ಮೋಸ ಮಾಡುತ್ತಿದ್ದಾರೆ, ಕಳ್ಳತನ ಮಾಡುತ್ತಾರೆ ಎಂದು ಹೇಳಿ ದುಃಖವನ್ನು ತೋಡಿಕೊಂಡರೆ ಏನು ಪ್ರಯೋಜನ ನೀವೇ ಹೇಳಿ. ನಾವು ನಮ್ಮ ಮನೆಯಲ್ಲಿರುವ ಮಗುವಿಗೆ ಒಳ್ಳೆಯ ಕೆಲಸಮಾಡಲು ಸೌಜನ್ಯದಿಂದ ಬದುಕಲು ಹೇಳಿಕೊಟ್ಟರೆ ದೊಡ್ಡವನಾದ ಮೇಲೆ ಅದನ್ನೇ ಆ ಮಗುವು ಮಾಡುತ್ತದೆ.

“ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?” ಎಂಬ ಗಾದೆ ಮಾತಿನಂತೆ ನಮ್ಮ ಮಕ್ಕಳನ್ನು ಸಣ್ಣವರಿದ್ದಾಗಲೇ ಒಳ್ಳೆಯದನ್ನು ಕಲಿಸೋಣ. ಮಕ್ಕಳ ಬಗ್ಗೆ ಹೇಳಲು ಹೊರಟರೆ ದಿವಸಗಳು ಸಾಲುವುದಿಲ್ಲ.

ಇಂತಹ ಒಂದು ದೈವಸ್ವರೂಪಿಯಾದ ಮಕ್ಕಳ ದಿನವನ್ನು ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಇವರ ಹುಟ್ಟು ಹಬ್ಬದ ಪ್ರಯುಕ್ತ `ಮಕ್ಕಳ ದಿನಾಚರಣೆ’ ಎಂದು ನವೆಂಬರ್ 14ರಂದು ಆಚರಿಸುತ್ತೇವೆ. ಮಕ್ಕಳು ಇವರನ್ನು “ಚಾಚಾ ನೆಹರು” ಎಂದು ಪ್ರೀತಿಯಿಂದ ಕರೆಯುತ್ತಿದ್ದರು.

ಚಾಚಾ ನೆಹರೂ ಅವರಿಗೆ ಮಕ್ಕಳ ಮೇಲಿನ ಮಮತೆ ಎಷ್ಟಿತ್ತೆಂದರೆ ಅವರು ಮಕ್ಕಳಿಗಾಗಿ ಏನು ಮಾಡಲೂ ಸಿದ್ಧವಿದ್ದರು. ತಮ್ಮ ಕೋಟಿನಲ್ಲಿ ಯಾವಾಗಲೂ ಒಂದು ಗುಲಾಬಿ ಹೂವು ಇಡುತ್ತಿದ್ದರು ಮತ್ತು ಅದನ್ನು ಮಕ್ಕಳಿಗೆ ಕೊಡುತ್ತಿದ್ದರು. ಮಕ್ಕಳೊಂದಿಗೆ ಸಮಯ ಕಳೆಯುತ್ತಿದ್ದರು. ಮಕ್ಕಳನ್ನು ಕಂಡಾಗಲೆಲ್ಲಾ ಮಾತನಾಡಿಸುತ್ತಿದ್ದರು. ಮುಜುಗರ ಬದಿಗಿಟ್ಟು ಅತ್ಯಂತ ಸಂತೋಷದಿಂದ ತಮ್ಮ ಜನ್ಮದಿನವನ್ನು ‘ಮಕ್ಕಳ ದಿನಾಚರಣೆ’ಯೆಂದು ಆಚರಿಸಲು ಒಪ್ಪಿಕೊಂಡರು. ಈ ರೀತಿ 1951ರಲ್ಲಿ ನವೆಂಬರ್ 14ರಂದು ಭಾರತದಲ್ಲಿ ‘ಮಕ್ಕಳ ದಿನಾಚರಣೆ’ ಆರಂಭವಾಯಿತು.

ಈ ದಿನದಂದು ಮಾತ್ರ ಮಕ್ಕಳನ್ನು ಖುಷಿಯಿಂದ ಇಡುವುದಲ್ಲದೇ ಎಂದಿಗೂ ಎಂದೆಂದಿಗೂ ಮಕ್ಕಳನ್ನು ಭೇದಭಾವ ಮಾಡದೆ ಖುಷಿಯಿಂದ ನೋಡಿಕೊಳ್ಳೋಣ. “ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು” ಆ ಪ್ರಜೆಗಳನ್ನು ಉತ್ತಮ ಪ್ರಜೆಗಳಾಗಿ ರೂಪಿಸುವುದು ನಮ್ಮ ಕರ್ತವ್ಯವಾಗಿದೆ.

ಚಾಚಾ ನೆಹರು ಮಕ್ಕಳ ಬಗ್ಗೆ ಹೀಗೆಂದರು….

ಇಂದಿನ ಮಕ್ಕಳು ನಾಳಿನ ಭಾರತವನ್ನು ನಿರ್ಮಿಸುತ್ತಾರೆ. ನಾವು ಮಕ್ಕಳನ್ನು ಬೆಳೆಸುವ ವಿಧಾನ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ.

* ಮಕ್ಕಳು ಉದ್ಯಾನವನದಲ್ಲಿರುವ ಮೊಗ್ಗುಗಳಂತೆ. ಅವರನ್ನು ತುಂಬಾ ಎಚ್ಚರಿಕೆಯಿಂದ ಮತ್ತು ಪ್ರೀತಿಯಿಂದ ಪೋಷಿಸಬೇಕು. ಯಾಕೆಂದರೆ, ಅವರು ಭಾರತದ ಭವಿಷ್ಯ ಮತ್ತು ನಾಳಿನ ಪ್ರಜೆಗಳು.

* ನನ್ನ ಬಳಿ ದೊಡ್ಡವರಿಗೋಸ್ಕರ ಸಮಯವಿಲ್ಲದಿರಬಹುದು, ಆದರೆ ಮಕ್ಕಳಿಗಾಗಿ ನನ್ನಲ್ಲಿ ಸಾಕಷ್ಟು ಸಮಯವಿದೆ.

* ಮಕ್ಕಳ ಮನಸ್ಸನ್ನು ಪ್ರೀತಿಯಿಂದ ಗೆಲ್ಲಿ. ಆಗ ಮಾತ್ರ ಮಕ್ಕಳಲ್ಲಿ ಸುಧಾರಣೆ ತರಲು ಸಾಧ್ಯ.

* ಸರಿಯಾದ ಶಿಕ್ಷಣ ನೀಡುವುದರಿಂದ ಉತ್ತಮ ಸಮಾಜದ ನಿರ್ಮಿಸಲು ಸಾಧ್ಯ.

LEAVE A REPLY

Please enter your comment!
Please enter your name here