ಕೋಮು ಸಾಮರಸ್ಯ ಮತ್ತು ಇಸ್ಲಾಂ ಧರ್ಮ

ಭಾಗ – 2

ಲೇಖಕರು : ಶೌಕತ್ ಅಲಿ. ಕೆ, ಮಂಗಳೂರು

ಒಬ್ಬ ವ್ಯಕ್ತಿ ತನ್ನ ಸ್ವಂತಕ್ಕೆ ಬಯಸುವುದನ್ನು ತನ್ನ ಸಹೋದರನಿಗೆ ಬಯಸುವವರೆ ಅವನು ಸತ್ಯವಿಶ್ವಾಸಿ ಆಗಲಾರ ಎಂದು ಪ್ರವಾದಿ ಮುಹಮ್ಮದ್ ಸ ರವರು ಹೇಳಿದ್ದಾರೆ.

ಪ್ರಖ್ಯಾತ ಹದೀಸ್ ಪಂಡಿತರಾದ ಇಮಾಮ್ ನವವಿಯವರ ಪ್ರಕಾರ ಇದು ಕೇವಲ ಮುಸ್ಲಿಮರ ಬಗ್ಗೆ ಹೇಳಿದ್ದಲ್ಲ, ಬದಲಾಗಿ ತನ್ನ ಸುತ್ತಮುತ್ತ ಇರುವ ಸರ್ವ ಧರ್ಮೀಯರು ಇದರಲ್ಲಿ ಒಳಗೊಳ್ಳುತ್ತಾರೆ.
ಅಂದರೆ ಮಾನವೀಯ ಸಂಬಂಧ ಎಲ್ಲರೊಂದಿಗೆ ಸಮಾನವಾಗಿರಬೇಕು. ಅವರ ಕಷ್ಟ ಸುಖಗಳಲ್ಲಿ ಸಹಾಯ ಸಹಕಾರ ನೀಡಬೇಕು. ಮಕ್ಕಾದ ಮುಷ್ರಿಕರು ಬರಗಾಲ ಪೀಡಿತರಾಗಿರುವರೆಂದು ಪ್ರವಾದಿ (ಸ) ರವರು ಅವರಿಗೆ ಆಹಾರ ಧಾನ್ಯ ಗಳನ್ನು ಕಳುಹಿಸಿದರು. ಅವರು ಅಹಾರ ಕಳುಹಿಸಿ ಕೊಟ್ಟ ಆ ಜನರು ಪ್ರವಾದಿ ಮುಹಮ್ಮದ್ (ಸ) ರವರ ಮೇಲೆ ಅತಿಹೆಚ್ಚು ದೌರ್ಜನ್ಯ ಎಸಗಿದವರು, ಹಿಂಸೆ ನೀಡಿದವರು, ಸ್ವ ಊರಿನಿಂದ ಹೊರಕ್ಕಟ್ಟಿದವರು ಮತ್ತು ಹಿಜ್ರತ್ ಹೋಗಲು ನಿರ್ಬಂಧಿಸಿದವರಾಗಿದ್ದರು. ಆದರೂ ಅವರು ಕಷ್ಟದಲ್ಲಿ ಇದ್ದ ಕಾಲದಲ್ಲಿ ಪ್ರವಾದಿ (ಸ) ಅವರನ್ನು ಕಂಡು ಪ್ರವಾದಿಗೆ ಸಹಿಸಲಾಗಲಿಲ್ಲ ಮತ್ತು ಅವರಿಗೆ ಸಹಾಯ ಹಸ್ತವನ್ನು ಚಾಚಿದರು.

ಯೂಸುಫ್ (ಅ) ಕಾಲದಲ್ಲಿ ಬರಗಾಲ ಬಂದಾಗ ಅವರು ಸುತ್ತ ಮುತ್ತಲಿನ ಎಲ್ಲರಿಗೂ ಶೇಖರಿಸಿಟ್ಟ ಆಹಾರ ಧಾನ್ಯಗಳನ್ನು ಮುಕ್ತವಾಗಿ ಕೊಟ್ಟರು.
ಪ್ರವಾದಿ ಸ ಹೇಳಿದರು, “ನೆರಮನೆಯವನು ಹಸಿದಿರುವಾಗ ಹೊಟ್ಟೆ ತುಂಬ ಉಣ್ಣುವವನು ನಮ್ಮವನಲ್ಲ”.
ಇಲ್ಲೂ ಸ್ವ ಧರ್ಮ ಅನ್ಯ ಧರ್ಮ ಎಂಬ ಭಿನ್ನತೆ ಸಲ್ಲದು.

ಬಡವರು, ಕಾರ್ಮಿಕರ ಕುಟುಂಬ, ಅವರ ಮಕ್ಕಳು ಹಸಿವು ದುಖದುಮ್ಮಾನಗಳಲ್ಲಿ ಕಳೆಯುವುದನ್ನು ನೋಡಿ ಸುಮ್ಮನಿರಲು ಓರ್ವ ಸತ್ಯವಿಶ್ವಾಸಿಗೆ ಸಾಧ್ಯವೇ??? ಈ ಮೌಲ್ಯದ ಹೆಸರೇ ಇಸ್ಲಾಂ…

ಎಲ್ಲರನ್ನೂ ಸಮಾನೀಕರಿಸುವುದು ಸರಿಯೇ?

ಸಾಧಾರಣವಾಗಿ ಜನರು ಇತರ ಧರ್ಮದ ಎಲ್ಲರನ್ನೂ ಸಮಾನೀಕರಿಸುತ್ತಾರೆ. ಒಂದು ಸಮುದಾಯದ ಎಲ್ಲರೂ ಒಂದೇ ತೆರನಾಗಿರುತ್ತಾರೆ ಎಂದು ಭಾವಿಸುತ್ತೇವೆ. ಆದರೆ ಅಲ್ಲಾಹ್ ಸೃಷ್ಟಿಕರ್ತ ಹಾಗೆ ಭಾವಿಸಬಾರದು ಎಂದು ಕರೆ ಕೊಡುತ್ತಾನೆ ಮತ್ತು ಮುಸ್ಲಿಮೆತರರಲ್ಲಿರುವ ಎಂಟು ಗುಣ ವಿಶೇಷತೆ ಗಳನ್ನೂ ಹೇಳುತ್ತಾನೆ ಮತ್ತು ಅಲ್ಲಾಹನು ಅವರನ್ನು ಹೊಗಳುತ್ತಾನೆ

 1. ಗ್ರಂಥದವರೆಲ್ಲರೂ (ದೇವನ ವತಿಯಿಂದ ಪೂರ್ವ ವೇದ ಗ್ರಂಥಗಳು ಸಿಕ್ಕಿದ ಎಲ್ಲರೂ )ಒಂದೇ ತೆರನಾಗಿರುವುದಿಲ್ಲ.
 2. ಅವರಲ್ಲಿ ನೇರ ಮಾರ್ಗದಲ್ಲಿ ಸ್ಥಿರವಾಗಿರುವ ಕೆಲವರು ಇದ್ದಾರೆ. (ಅಂದರೆ ಸತ್ಯ ನ್ಯಾಯಕ್ಕಾಗಿ ಅವರು ಎದ್ದು ನಿಲ್ಲುತ್ತಾರೆ)
 3. ಅವರು ರಾತ್ರಿ ಕಾಲದಲ್ಲಿ ಅಲ್ಲಾಹನ ಸೂಕ್ತಗಳನ್ನು ಓದುತ್ತಾರೆ.
 4. ಮತ್ತು ಅವನ ಮುಂದೆ ಸಾಷ್ಟಾಂಗ ವೆರಗುತ್ತಾರೆ
 5. ಅಲ್ಲಾಹನ (ಸೃಷ್ಟಿಕರ್ತನ) ಮತ್ತು ಪರಲೋಕದ ಮೇಲೆ ವಿಶ್ವಾಸ ವಿಡುತ್ತಾರೆ
 6. ಒಳಿತಿನ ಆಜ್ಞೆ ನೀಡುತ್ತಾರೆ ಮತ್ತು
 7. ಪಾಪ ಕಾರ್ಯಗಳಿಂದ ತಡೆಯುತ್ತಾರೆ
 8. ಇವರು ಬಹಳ ಸಜ್ಜನ ರಾಗಿರುತ್ತಾರೆ (ಅಲ್ಲಾಹನ ದೃಷ್ಟಿಯಯಲ್ಲಿ ಇವರು ತುಂಬಾ ಉತ್ತಮ ಜನರಾಗಿದ್ದರು)
  ಈ ಮೇಲಿನ ಎಂಟು ಗುಣಗಳು ಸೂರ ಅಲಿ ಇಮ್ರಾನ್ ಸೂಕ್ತ 113-114 ರ ರಲ್ಲಿ ಅಲ್ಲಾಹನು ಹೇಳಿದ ಬಳಿಕ ಅಲ್ಲಾಹನು ಹೇಳುತ್ತಾನೆ
  ಇವರು ಮಾಡುವ ಯಾವ ಸತ್ಕರಮಗಳನ್ನೂ ಕಡೆಗಣಿಸಲಾಗದು (3:115)

ಆರಾಧನಾ ಸ್ವಾತಂತ್ರ್ಯ ಮತ್ತು ಭದ್ರತೆ

ಪ್ರವಾದಿ(ಸ) ಮತ್ತು ಅವರ ಸಂಗಾತಿಗಳು ಅನ್ಯ ಧರ್ಮೀಯರಿಗೆ ರಕ್ಷಣೆ ನೀಡಿದಾಗ ಅವರ ವಿಶ್ವಾಸ ಮತ್ತು ಆರಾಧಾನಾ ಸ್ವಾತಂತ್ರ್ಯಕ್ಕೂ ಭದ್ರತೆ ನೀಡಿದ್ದರು. ನಜ್ರಾನ್‍ನ ಕ್ರೈಸ್ತರ ನಿಯೋಗ ಪ್ರವಾದಿ ಸ ರವರನ್ನು ಮಸ್ಜಿದುನ್ನಬವಿಯಲ್ಲಿ ಬಂದು ಭೇಟಿ ಆಯಿತು. ಬಹಳ ಸಮಯಗಳನ್ನು ಅವರು ಜೀಸಸ್ ಬಗ್ಗೆ ಪ್ರವಾದಿ ಸ ರವರಲ್ಲಿ ಕೇಳಿ ತಿಳಿದುಕೊಂಡರು. ಆಗ ಅವರ ಪ್ರಾರ್ಥನೆಯ ಸಮಯವಾಯಿತು. ಪ್ರವಾದಿ ಸ ರವರು ಅವರಿಗೆ ಅವರ ಪ್ರಾರ್ಥನೆ ಸಲ್ಲಿಸಲು ಮಸೀದಿಯಲ್ಲಿ ಅನುವು ಮಾಡಿ ಕೊಟ್ಟರು. ಅವರು ತಮ್ಮ ಪ್ರಾರ್ಥನೆಯನ್ನು ಮುಗಿಸಿದರು. ಆ ಬಳಿಕ ಕ್ರೈಸ್ತರೊಡನೆ ಪ್ರವಾದಿವರ್ಯರು(ಸ) ಮಾಡಿಕೊಂಡ ಒಪ್ಪಂದದ ಶರ್ತದಲ್ಲಿ ಹೀಗಿದೆ:

“ನಜ್ರಾನ್‍ನ ಕ್ರೈಸ್ತರಿಗೂ ಅವರ ಸಂಗಡಿಗರಿಗೂ ಅಲ್ಲಾಹನ ಅಭಯ ಮತ್ತು ದೇವ ಪ್ರವಾದಿಯಾದ ಮುಹಮ್ಮದ್‍ರ ಕರ್ತವ್ಯ ಬದ್ಧ ಸಂರಕ್ಷಣೆಯಿದೆ. ಇದು ಅವರ ಪ್ರಾಣ, ಧರ್ಮ, ಆಸ್ತಿ, ಸಂಪತ್ತು ಇತ್ಯಾದಿಗಳಿಗೂ ಇಲ್ಲಿ ಉಪಸ್ಥಿತರಿರುವವರಿಗೂ ಇಲ್ಲದವರಿಗೂ ಅವರ ಒಂಟೆ ಮತ್ತು ಪ್ರತಿನಿಧಿ ತಂಡಗಳಿಗೂ ಶಿಲುಬೆ ಮತ್ತು ಚರ್ಚ್‍ಗಳಂಥ ಧಾರ್ಮಿಕ ಸಂಕೇತಗಳಿಗೂ ಅನ್ವಯವಾಗುತ್ತದೆ. ಪ್ರಚಲಿತ ಸ್ಥಿತಿಯನ್ನು ಕಿಂಚಿತ್ತೂ ಬದಲಾಯಿಸುವುದಿಲ್ಲ. ಅವರ ಯಾವ ಹಕ್ಕುಗಳನ್ನೂ ಧಾರ್ಮಿಕ ಚಿಹ್ನೆಗಳನ್ನೂ ಬದಲಾಯಿಸುವುದಿಲ್ಲ. ಅವರ ಪಾದ್ರಿ, ಪುರೋಹಿತ ಅಥವಾ ಚರ್ಚ್ ಸೇವಕನನ್ನು ಸ್ಥಾನ ಭ್ರಷ್ಟಗೊಳಿಸುವುದಿಲ್ಲ.”

ಅಬೂಬಕರ್ ರ ಸಿರಿಯಾಕ್ಕೆ ಸೇನೆ ಕಳುಹಿಸಿದಾಗ ನೀಡಿದ ಆದೇಶಗಳು ಈ ಕೆಳಗಿನಂತಿದೆ

೧. ನಿಮ್ಮ ವಿಜಯವು ಸ್ತ್ರೀಯರ ಮತ್ತು ಮಕ್ಕಳ ರಕ್ತದಿಂದ ಕಳಂಕಿತವಾಗದಿರಲಿ.
೨. ಮರಗಳನ್ನು ನಾಶ ಮಾಡದಿರಿ.
೩. ಹೊಲಗಳನ್ನು ಸುಡದಿರಿ.
೪. ಫಲಭರಿತ ಮರಗಳನ್ನು ಕಡಿಯದಿರಿ.
೫. ಸಾಕು ಪ್ರಾಣಿಗಳಿಗೆ ಕಿರುಕುಳ ಕೊಡದಿರಿ.
೬. ಕೊಟ್ಟ ಮಾತಿಗೆ ಮತ್ತು ಆಶ್ವಾಸನೆಗಳಿಗೆ ಭಂಗ ತರಬೇಡಿರಿ.
೭. ಧಾರ್ಮಿಕ ವ್ಯಕ್ತಿಗಳು(ಮಠ ಮಂದಿರ ಚರ್ಚುಗಳ ಪುರೋಹಿತರು) ಅವರು ಅವರದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರಬಹುದು ಅವರನ್ನು ಅವರ ಪಾಡಿಗೆ ಬಿಟ್ಟು ಬಿಡಿರಿ.
೮. ಅವರನ್ನು ವಧಿಸದಿರಿ.
೯. ಅವರ ಮಠ ಮಂದಿರಗಳನ್ನು ಹಾಳುಗೆಡಹದಿರಿ. (The history of the decline and fall of roman empire(309)

ಸಾಧಾರಣವಾಗಿ ವಿಜಯ ಹೊಂದಿದರೆ ಜನರು ಅಕ್ರಮ ಅನಾಚಾರ ಅನ್ಯಾಯ ಮಾಡುತ್ತಾರೆ. ಆದರೆ ಇಸ್ಲಾಂ ಅವರ ಧಾರ್ಮಿಕ ಭಾವನೆಗಳನ್ನು ಆಗಲೂ ಗೌರವಿಸಲು ಕರೆ ಕೊಡುತ್ತದೆ

ವಿಶ್ವವಿಖ್ಯಾತ ಸೇನಾನಿ ಖಾಲಿದ್ ಬಿನ್ ವಲೀದ್ ಹೀಗೆ ಒಪ್ಪಂದ ಮಾಡಿದ್ದರು, ಅವರ ಮಠ ಮತ್ತು ಹಗಲಿನಲ್ಲಿ ಅವರು ಬಯಸಿದಾಗ ಗಂಟೆ ಭಾರಿಸಬಹುದು. ವಿಶೇಷ ದಿನಗಳಲ್ಲಿ ಶಿಲುಬೆ ಉತ್ಸವ ನಡೆಸ ಬಹುದು. “

ಡಾ| ಮುಸ್ತಫ ಸ್ಸಬಾಯಿ ಹೀಗೆ ಬರೆದಿದ್ದಾರೆ.

ಕ್ರೈಸ್ತರು ಅಮವಿ ಆಡಳಿತ ಕಾಲದಲ್ಲಿಯೇ ತಮ್ಮ ಧಾರ್ಮಿಕ ಆಚಾರ ಮತ್ತು ಉತ್ಸವಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನೆರವೇರಿಸುತ್ತಿದ್ದರು. ಶಿಲುಬೆ ಹೊತ್ತು ಮೆರವಣಿಗೆ ನಡೆಸುವುದು ಅವರ ರೂಢಿಯಾಗಿತ್ತು. ಧಾರ್ಮಿಕ ನಾಯಕರು ಸಾಂಪ್ರದಾಯಿಕ ಉಡುಪು ಧರಿಸಿ ಅದರಲ್ಲಿ ಭಾಗವಹಿಸುತ್ತಿದ್ದರು. ಒಮ್ಮೆ ಪೇಟ್ರಿಯಾರ್ಕಿಸ್ ಮೈಕೆಲ್ ಒಂದು ಬೃಹತ್ ಮೆರವಣಿಗೆಯೊಂದಿಗೆ ಅಲೆಕ್ಸಾಂಡ್ರಿಯಾ ನಗರಕ್ಕೆ ಆಗಮಿಸಿದರು. ಶಿಲುಭೆ, ಮೇಣದ ಬತ್ತಿ ಮತ್ತು ಬೈಬಲ್ ಹಿಡಿದವರು ಅದರ ಮುಂಚೂಣಿಯಲ್ಲಿದ್ದರು. ಭಕ್ತ ಜನರು ತಮ್ಮ ಪೇಟ್ರಿಯಾರ್ಕಿಸನ ಶ್ರೇಷ್ಠತೆಯನ್ನು ಗಟ್ಟಿಯಾಗಿ ಘೋಷಿಸುತ್ತಿದ್ದರು. ಈ ಘಟನೆ ಹಿಶಾಮ್ ಬಿನ್ ಅಬ್ದುಲ್ ಮಲಿಕ್‍ರ ಕಾಲದಲ್ಲಿ ನಡೆದಿತ್ತು.
“ಹಾರೂನ್ ರಶೀದ್‍ರ ಕಾಲದಲ್ಲಿ ಈಸ್ಟರ್ ಹಬ್ಬದ ಪ್ರಯುಕ್ತ ಕ್ರೈಸ್ತರು ದೊಡ್ಡ ಶಿಲುಬೆಗಳನ್ನು ಹೊತ್ತು ಭಾರೀ ಮೆರವಣಿಗೆ ನಡೆಸಿದ್ದರು.”

ಕುರಾನ್ ಹೇಳುತ್ತದೆ, ಅವರು ಅಲ್ಲಾಹನನ್ನು ಹೊರತು ಯಾರನ್ನು ಪ್ರಾರ್ಥಿಸುತ್ತಿರುವರೋ ಅವರನ್ನು ತೆಗಳಬೇಡಿರಿ. ಇದರಿಂದ ಮುಂದುವರಿದು ಅವರು ಶಿರ್ಕ್ ಗಿಂತಲೂ ಮುಂದುವರಿದು ಅಜ್ಞಾನದಿಂದ ಅಲ್ಲಾಹನನ್ನು ತೆಗಳ ತೊಡಗುವರು. ನಾವು ಇದೇ ರೀತಿಯಲ್ಲಿ ಪ್ರತಿಯೊಂದು ಸಮುದಾಯಕ್ಕೆ ಅದರ ಕರ್ಮಗಳನ್ನು ಚೆಲುವಾಗಿಸಿದ್ದೇವೆ. ನಂತರ ಎಲ್ಲರಿಗೂ ಅವರ ಪ್ರಭುವಿನ ಬಳಿಗೆ ಮರಳಲಿಕ್ಕಿದೆ ಆಗ ಅವರೇನು ಮಾಡುತ್ತಿದ್ದರೆಂದು ಅವರಿಗೆ ತಿಳಿಸುವನು. (ಕುರಾನ್ 6:108)

Source :
Quran,
The history of the decline and fall of roman empire(309)
Thappu kalpanegalu and islam paradharma sahishnutegalu books.

LEAVE A REPLY

Please enter your comment!
Please enter your name here