ನಾಗರಾಜ ಖಾರ್ವಿ
ಶಿಕ್ಷಕ
ಸ.ಹಿ.ಪ್ರಾ. ಶಾಲೆ ಕಲ್ಮಂಜ
ಬಂಟ್ವಾಳ ತಾಲೂಕು

ಜಗತ್ತಿನ ಬಲಾಢ್ಯ ದೇಶಗಳ ಜೊತೆ ಪ್ರಬಲ ಪೈಪೋಟಿ ನೀಡುತ್ತಿರುವ ಭಾರತವಿಂದು ಸ್ವಾತಂತ್ರ್ಯೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಹಲವಾರು ರಾಷ್ಟ್ರ ನಾಯಕರ ತ್ಯಾಗ, ಬಲಿದಾನಗಳ ಫಲವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಮಂದಗಾಮಿಗಳಿಂದ ಮೊದಲ್ಗೊಂಡು ತೀವ್ರಗಾಮಿಗಳು, ಹದಿಹರೆಯ ಕುದಿಮನಸಿನ ಯುವಕರಾದಿಯಾಗಿ, ಹಣ್ಣಾದ ತಲೆಗೂದಲಿನ ಮುದುಕನವರೆಗೂ ಈ ನೆಲದ ದಾಸ್ಯವನ್ನು ಹೊಡೆದೋಡಿಸಲು ಶ್ರಮಿಸಿದ್ದಾರೆ. ತಮ್ಮ ತನು-ಮನ-ಧನವನ್ನು ಅರ್ಪಿಸಿದ್ದಾರೆ. ಅವರ ತ್ಯಾಗ ಬಲಿದಾನಕ್ಕೆ ಒಂದು ಸುಂದರ ಹಂದರವನ್ನು ಕಟ್ಟಿಕೊಡಬೇಕಾದದ್ದು, ವಿಭಿನ್ನ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಬೇಕಾದ್ದು ನಮ್ಮಂತ ಯುವಕರ ಮುಂದಿರುವ ಸವಾಲು. ಸ್ವಾತಂತ್ರ್ಯದ ಅರಿವು ನಮಗೆ ಮೊದಲು ಆಗಬೇಕು. ಬರಿಯ ಫಲಾನುಭವಿಗಳಾಗಿ ದೇಶದ ಚಿಂತನೆಯನ್ನು ಮರೆತರೆ ನಮಗೂ ಮೃಗಗಳಿಗೂ ವ್ಯತ್ಯಾಸವಿರಲಾರದು. ಈ ನಿಟ್ಟಿನಲ್ಲಿ ಯೋಚಿಸಿದಾಗ ಸಾಗಿ ಬಂದ ಹಾದಿಯಲ್ಲಿ ನಾವೆಲ್ಲೋ ಎಡವಿದ್ದೇವೆ ಎಂದೆನಿಸದೇ ಇರದು.

ಭಾರತವು ಬಹು ಭಾಷೆಯ, ಬಹು ಧರ್ಮಗಳ, ಹಲವು ಆಚಾರ, ವಿಚಾರ ಸಂಸೃತಿ, ಆಹಾರ ಪದ್ಧತಿಗಳನ್ನೊಳಗೊಂಡ ಸಾಂಸ್ಕøತಿಕ ಶ್ರೀಮಂತ ದೇಶ. ಸಾಮರಸ್ಯವಿರದಿದ್ದರೆ ಈ ದೇಶವನ್ನು ಮುನ್ನಡೆಸಲು ಸಾಧ್ಯವೇ ಇಲ್ಲ. . ಹಲವು ಸಂಸ್ಕøತಿಯ ನಾಶವನ್ನು ಹೀರಿಕೊಂಡು ಬೆಳೆಯಬೇಕಾದ ಅನಿವಾರ್ಯತೆಯೂ, ಅಗತ್ಯತೆಯೂ ಇದೆ. ಇತಿಹಾಸವನ್ನು ಅರಿತವನು ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯ. ಭೂತ, ಭವಿಷ್ಯಗಳ ತೊಳಲಾಟದಲ್ಲಿ ಕರಗದೇ, ಕಳೆದ ಸಂವತ್ಸರಗಳ ಬಗ್ಗೆ ಮರುಗದೇ, ವರ್ತಮಾನದ ದೀವಿಗೆಯನ್ನು ಬೆಳಗಿಸಬೇಕಾಗಿದೆ. ಬ್ರಿಟೀಷರು, ಫ್ರೆಂಚರು, ಪೋರ್ಚುಗೀಸರು, ಡಚ್ಚರ ವಿರುದ್ದ ನಮ್ಮ ದೇಶದಲ್ಲಿ ನಡೆದ ನೂರಾರು ಯುದ್ಧಗಳಲ್ಲಿ ಒಂದೊಂದು ಹೋರಾಟಗಳು ಕೆಲವು ದೇಶಗಳಲ್ಲಿ ನಡೆದರಿಲಾರದು. ಅಂತಹ ಭವ್ಯ, ದಿವ್ಯ, ನವ್ಯ ಸಂಸ್ಕøತಿ ನಮ್ಮದು. ತಾನು ಬೆಳೆದು ಜಗದ ಜನರು ಸಮೃದ್ಧಿಯಾಗಿರಬೇಕೆಂದು ಬಯಸಿದ ಸಂಸ್ಕಾರಯುತ ಸಂಸ್ಕøತಿ ನಮ್ಮದು. ಇಂತಹ ಸಂಸ್ಕøತಿಯ ಭಾಗವಾದ ನಾವೆಲ್ಲರೂ ದೇಶದ ಒಂದೊಂದು ಮುಕುಟ ಮಣಿಗಳು. ದೇಶದ ಪ್ರಗತಿಗಾಗಿ ಇಂದು ನಾವು ಪ್ರಾಣ ಬಲಿದಾನ ಮಾಡಬೇಕಾದ ಅನಿವಾರ್ಯತೆಗಳಿಲ್ಲ. ಬದಲಿಗೆ ಪ್ರತಿಯೊಬ್ಬ ಉತ್ತಮ ಪ್ರಜೆಗಳಾಗಬೇಕು. ದೇಶದ ಉನ್ನತಿಗಾಗಿ ಯೋಚಿಸಬಹುದಾದ ಮನಸ್ಸು ನಮ್ಮದಾಗಿರಬೇಕು. ದೇಶವನ್ನು ಮುನ್ನಡೆಸುವವರ ಜೊತೆಯಲ್ಲಿ ದೀರ್ಘಕಾಲದ ಹೆಜ್ಜೆಯನ್ನಿರಿಸಲು ಸನ್ನದ್ದರಾಗಿರಬೇಕು. ಸರಿ ತಪ್ಪುಗಳನ್ನು ತಿಳಿದುಕೊಂಡು, ನ್ಯಾಯಯುತವಾಗಿ ದೇಶ ನಡೆಸಬಲ್ಲ ಚಾಕಚಕ್ಯತೆಯಿರುವ ವ್ಯಕ್ತಿಯನ್ನು ಚುನಾವಣೆಯಲ್ಲಿ ಗೆಲ್ಲಿಸಿ ತನ್ಮೂಲಕ ನೈಜ ಪ್ರಜಾಪ್ರಭುತ್ವದ ಕಾವಲುಗಾರರಾಗಿರಬೇಕೇ ವಿನಾಃ ಯಾರೋ ನೀಡುವ ಹಣ ಹೆಂಡಕ್ಕೆ ಬಾಯ್ಬಿಟ್ಟು ಕಣ್ಣಿದ್ದು ಕುರುಡರಾಗಿ ಐದೈದು ವರ್ಷಗಳ ವರೆಗೆ ಪರಿತಪಿಸುವ ಅವಿವೇಕಿಗಳಾಗಬಾರದು. ಜಾತಿ, ಧರ್ಮ, ಭಾಷೆಗಳ ಆಧಾರದ ಮೇಲೆ ತೋಡುವ ಗುಂಡಿಯೊಳಗೆ ನಮ್ಮನ್ನು ಬೀಳಿಸಿ ಆಳ ನೋಡುವ, ಗಾಲಿ ಹಿಡಿಯುವ ಸಮಯ ಸಾಧಕ ನಾಯಕರಿಗೆ ತಮ್ಮ ಮತ ಬೀಳದಿದ್ದರೆ ಅದಕ್ಕಿಂತ ದೊಡ್ಡ ದೇಶ ಸೇವೆ ಮತ್ತೊಂದಿಲ್ಲ.
ದೇಶವಿಂದು ಇಸ್ರೋ ಬಾಹ್ಯಾಕಾಶ ಸಂಸ್ಥೆಯ ಮೂಲಕ ಮಂಗಳನಂಗಳಕ್ಕೆ ಉಪಗ್ರಹ ಕಳುಹಿಸಿದೆ. ಇದುವರೆಗೆ ಚಂದ್ರನ ಇನ್ನೊಂದು ಪಾಶ್ರ್ವಕ್ಕೆ ಯಾರು ಕಳುಹಿಸದೇ ಇರುವ ಸಾಧನೆಯನ್ನು ಚಂದ್ರಯಾನ-2ರ ಮೂಲಕ ಮಾಡಿದೆ. ಪ್ರತಿಯೊಂದು ರಂಗಗಳಲ್ಲೂ ಭರವಸೆಯ ಭಾಷ್ಪ ಮೂಡಿಸಿದೆ. ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಭಾರತವೆಂದರೆ ಹಾವಾಡಿಗರ ದೇಶದಂತೆ ಬಿಂಬಿತವಾದ ದೇಶವೊಂದು ಸುದೀರ್ಘ ಕಾಲದ ಏರಿಳಿತಗಳನ್ನು ಕಂಡು ಇಂದು ಜಗತ್ತಿನ ದೈತ್ಯ ಶಕ್ತಿಯಾಗಿ ಬೆಳೆದಿದೆ. ವಿದೇಶಿಗರು ಸಹ ನಮ್ಮ ಸಂಸ್ಕøತಿಯನ್ನು ಅನುಸರಿಸುವ ಮಟ್ಟಿಗೆ ನಾವಿಂದು ಬೆಳೆದಿದ್ದೇವೆ. ಆದರೆ ಸಾಧಕ ವಿಶ್ರಾಂತ ಪಡೆದರೆ ಗೆದ್ದ ಮರುಕ್ಷಣವೇ ಸೋಲಿನ ಬಾಗಿಲಿಗೆ ಸಮೀಪವಾದಂತೆ. ಸಾಧಿಸಿದ್ದು ಕಡಿಮೆ ಸಾಧಿಸಬೇಕಾದದ್ದು ಬೆಟ್ಟದಷ್ಟಿದೆ ಎಂಬರಿವು ನಮ್ಮೆಲ್ಲರಿಗಿರಬೇಕು. ಆಗ ಮಾತ್ರ ನಮ್ಮ ದೇಶವನ್ನು ಎತ್ತರೆತ್ತರಕ್ಕೆ ಕೊಂಡೊಯ್ಯಲು ಸಾಧ್ಯ. ಸ್ವಾತಂತ್ರ್ಯವೆಂದರೆ ಬರಿಗೆ ಧ್ವಜದ ಆರೋಹಣ, ಅವರೋಹಣವಲ್ಲ. ಆರೋಹಣಗೊಂಡಿರುವ ಧ್ವಜವು ತಲೆಯೆತ್ತಿ ನಿಲ್ಲಬೇಕು. ಗಾಳಿ, ಬಿರುಗಾಳಿಗೆ ಸಿಲುಕದಂತೆ ಕಾಯಬೇಕು. ಅಂದರೆ ಸ್ವಾತಂತ್ರ್ಯ ದಿನಾಚರಣೆ ನಮ್ಮಲ್ಲಿ ದೇಶಪ್ರೇಮ, ದೇಶದರಿವು, ದೇಶ ಪ್ರಗತಿಯ ಕುರಿತು ಯೋಚಿಸುವ ಒಂದು ಬೆಳಕಿಂಡಿಯಾಗಬೇಕು. ತನ್ಮೂಲಕ ನಾವು ಆಂತರ್ಯದಿಂದ ಬದಲಾಗಬೇಕು. ದೇಶವಾಸಿಗಳು ಸರಿಯಾಗಿಲ್ಲದಿದ್ದರೆ ಸ್ವಾತಂತ್ರ್ಯಗೊಂಡರೂ, ಗೊಳ್ಳದಿದ್ದರೂ ವ್ಯರ್ಥ. ಸ್ವಚ್ಛ ಪರಿಸರ, ಸ್ವಚ್ಛ ಆಲೋಚನೆಮ ಸ್ವಚ್ಛ ಕಾರ್ಯ ಇವು ನಮ್ಮ ಮೂಲಮಂತ್ರವಾಗಬೇಕು. ಆಗ ಮಾತ್ರ ಸ್ವಾತಂತ್ರ್ಯೋತ್ಸವಕ್ಕೆ ನಿಜವಾದ ಅರ್ಥ ಬರಲು ಸಾಧ್ಯ. ಅಂತಹ ವಿಚಾರ ಸಂಪನ್ನತೆ ನಮ್ಮದಾಗಲಿ ಎಂಬಾಶಯದೊಂದಿಗೆ ಮಾತಿನಿಂದ ವಿರಮಿಸುತ್ತೇನೆ.

ಜೈ ಹಿಂದ್

LEAVE A REPLY

Please enter your comment!
Please enter your name here