ರಚನಾತ್ಮಕ ಕಾವ್ಯ ಮತ್ತು ಸುಶ್ರಾವ್ಯ ಗಾಯನದ ಮೂಲಕ ಜನಮನ್ನಣೆ ಗಳಿಸಿದ್ದ ಖ್ಯಾತ ಕವಿ ಅಝೀಝುದ್ದೀನ್ ಅಝೀಝ್ ಬೆಳಗಾಮಿ ನಿಧನರಾದ ಸುದ್ದಿ ಎಲ್ಲರನ್ನು ದುಃಖಕ್ಕೀಡು ಮಾಡಿದೆ. ನವೆಂಬರ್ 28 ರ ಮುಂಜಾನೆ ಫಜ್ರ್ ನಮಾಝ್ ನಂತರ ಅವರ ಎದೆಯಲ್ಲಿ ನೋವು ಕಾಣಿಸಿಕೊಂಡಿದ್ದು ಅದೇ ದೇವನೆಡೆಗಿನ ಅಂತಿಮ ಪ್ರಯಾಣಕ್ಕೆ ಕಾರಣವಾಗಿದೆ. ಅದರ ಹಿಂದಿನ ರಾತ್ರಿ ಬೆಂಗಳೂರಿನಲ್ಲಿ ನಡೆದ ಕವಿಗೋಷ್ಠಿಯೊಂದರಲ್ಲಿ ನೆರೆಹೊರೆಯವರ ಹಕ್ಕುಗಳು ಎಂಬ ವಿಷಯದಲ್ಲಿ ಅವರು ತನ್ನ ಕವನವನ್ನು ಪ್ರಸ್ತುತ ಪಡಿಸಿದ್ದರು. ಸಂತೋಷ ಮತ್ತು ಉತ್ಸಾಹದೊಂದಿಗೆ ಎಲ್ಲರೊಂದಿಗೆ ಬೆರೆತಿದ್ದರು. ಅದು ಅಝೀಝ್ ರ ಜೀವನದ ಕೊನೆಯ ಕವಿಗೋಷ್ಠಿಯಾಗಿರಬಹುದೆಂದು ಯಾರೂ ಊಹಿಸಿರಲಾರರು.

ಮೇ 1, 1954 ರಲ್ಲಿ ಬೆಳಗಾವಿ ಜಿಲ್ಲೆಯ ಕುಡಚಿಯಲ್ಲಿ ಅಝೀಝುದ್ದೀನ್ ಅಝೀಝ್ ಜನಿಸಿದರು. ಉತ್ತಮ ಚಾರಿತ್ರ್ಯ, ಪ್ರಾಮಾಣಿಕ ವ್ಯಕ್ತಿತ್ವ ಮತ್ತು ಸಮಾಜಪರ ಚಿಂತನೆಯನ್ನು ಮೈಗೂಡಿಸಿಕೊಂಡಿದ್ದ ಅವರು ನೈತಿಕ ಮತ್ತು ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದರು. ಅವರ ಜೀವನದಂತೆ ಬರಹಗಳಲ್ಲೂ ಈ ಮೌಲ್ಯಗಳು ಹಾಸುಹೊಕ್ಕಾಗಿತ್ತು. ಅವರ ಬರಹಗಳು ಕೇವಲ ಮನರಂಜನೆಗಾಗಿರದೆ ಒಂದು ಉತ್ತಮ ಉದ್ದೇಶವನ್ನು ಹೊಂದಿತ್ತು. ಸಾಮಾಜಿಕ ಕಾಳಜಿ ಹೊಂದಿದ್ದ ಅವರು ತನ್ನ ಬರಹ ಸಾಮರ್ಥ್ಯವನ್ನು ಸರಿಯಾದ ದಾರಿಯಲ್ಲಿ ಬಳಸಿದರು. ಸಾಹಿತ್ಯದ ಮೂಲಕ ಸಮಾಜದಲ್ಲಿ ಬೆಳಕು ತುಂಬಲು ಪ್ರಯತ್ನಿಸಿದರು. ಕೆಡಹುವ ಬದಲು ಜೋಡಿಸುವ ಮತ್ತು ಕೆಡುಕಿನ ಬದಲು ಒಳಿತಿನ ಸಂದೇಶ ಹೊತ್ತ ಸಾಹಿತ್ಯ ಅವರದಾಗಿತ್ತು.

ಎಂ.ಎ‌., ಎಂ.ಫಿಲ್. ಪದವಿಯನ್ನು ಪಡೆದಿದ್ದ ಅವರು ಕಂಪ್ಯೂಟರ್ ಜ್ಞಾನವನ್ನು ಹೊಂದಿದ್ದರು. ಮೊದಲು ಸ್ಟೀಲ್ ಇಂಡಸ್ಟ್ರಿ ಯಲ್ಲಿ ಕೆಲಸ ಮಾಡಿದ ಅವರು ಬ್ಯಾಂಕ್ ಉದ್ಯೋಗ ಸಿಕ್ಕಿದಾಗ ಅದರಲ್ಲಿ ತೊಡಗಿದರು. ಆದರೆ ಆ ವೃತ್ತಿಯಲ್ಲಿ ಮನಸ್ಸಿಗೆ ತೃಪ್ತಿಯಾಗದ ಕಾರಣ ಧಾರ್ಮಿಕ ಒಲವಿನಿಂದಾಗಿ ಆ ಉದ್ಯೋಗಕ್ಕೆ ವಿದಾಯ ಹೇಳಿದರು. ಅನಂತರ ಶಿಕಾರಿಪುರದ ಝುಬೇದಾ ಪಿ.ಯು. ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ಮುಂದೆ ಪತ್ರಿಕೋದ್ಯಮ ರಂಗದಲ್ಲೂ ತೊಡಗಿದರು. ವಿವಿಧ ಪತ್ರಿಕೆಗಳಿಗೆ ಬರೆಯುವುದರೊಂದಿಗೆ ವಿವಿಧ ಪತ್ರಿಕೆಗಳಲ್ಲಿ ಕೆಲಸವನ್ನೂ ಮಾಡಿದರು. ಹೀಗೆ ಬೋಧನೆ, ಬರವಣಿಗೆ, ಪ್ರಕಟಣೆ ಸೇರಿದಂತೆ ವಿವಿಧ ರಂಗಗಳಲ್ಲಿ ಬಹುಮುಖ ವೃತ್ತಿ ಜೀವನ ನಡೆಸಿದರು.

ಪ್ರವಾದಿ ಸ್ವಸ್ತಿ ಗೀತೆ (ನಾತ್) ಗಳನ್ನು ರಚಿಸಿ ಹಾಡುವುದರಲ್ಲಿ ಅವರು ಎತ್ತಿದ ಕೈ. ಏಷ್ಯಾ ಖಂಡದ ಪ್ರಮುಖ ಉರ್ದು ಕವಿಗಳಲ್ಲಿ ಒಬ್ಬರಾಗಿದ್ದ ಅವರು ನಾತ್ ರಚನೆ ಮತ್ತು ಗಾಯನದ ಮೂಲಕ ಜನರಲ್ಲಿ ಹೆಚ್ಚಾಗಿ ಗುರುತಿಸಲ್ಪಡುತ್ತಿದ್ದರು. ಅಹ್ಲೆ ಸಿತಂ ಕೆ ಪತ್ಥರ್ ಖಾಕರ್ ಗುಲ್ ಬರ್ಸಾನೆವಾಲಾವೋ (ದುಷ್ಟರ ಕಲ್ಗಳ ಹೊಡೆತವ ತಿಂದು ಹೂಮಳೆಗರೆದವರೇ ಅವರು) ಎಂಬ ಅವರ ನಾತ್ ಅತೀ ಹೆಚ್ಚು ಪ್ರಸಿದ್ಧವಾಗಿದ್ದು, ಯಾವುದೇ ಸಭೆಗಳಲ್ಲಿ ಭಾಗವಹಿಸಿದರೂ ಅದನ್ನು ಹಾಡುವಂತೆ ಸಭಿಕರು ಮತ್ತೆ ಮತ್ತೆ ಒತ್ತಾಯಿಸುತ್ತಿದ್ದರು. “ಮೇರೆ ಮುಸ್ತಫಾ ಆಯೇ” ಎಂಬ ಅವರ ಇನ್ನೊಂದು ನಾತ್ ಕೂಡಾ ಎಷ್ಟು ಜನಜನಿತವಾಗಿಬಿಟ್ಟಿತ್ತೆಂದರೆ ಅವರ ಮರಣದ ಮುಂಚಿನ ರಾತ್ರಿ ನಡೆದ ಕವಿಗೋಷ್ಠಿಯಲ್ಲೂ ಸಭಿಕರು ಅದನ್ನು ಹಾಡುವಂತೆ ಅವರಲ್ಲಿ ಅಪೇಕ್ಷೆ ವ್ಯಕ್ತಪಡಿಸಿದ್ದು ಅದಕ್ಕೊಂದು ಸಾಕ್ಷಿ.

ಕೇರಳದ ಮಳಯಾಳಂ ಭಾಷೆಯಲ್ಲಿ ಬಿಡುಗಡೆಯಾಗಿದ್ದ ಅಲ್ಲಾಮ ಇಕ್ಬಾಲ್ ರವರ ಆಡಿಯೋ ಸೀಡಿಗೆ ಅಝೀಝ್ ಬೆಳಗಾಮಿ ಧ್ವನಿ ನೀಡಿದ್ದರು. ಆಲ್ ಇಂಡಿಯಾ ರೇಡಿಯೋ ಮತ್ತು ಬೆಂಗಳೂರು ದೂರದರ್ಶನ ಕೇಂದ್ರದೊಂದಿಗೆ ದೀರ್ಘ ಕಾಲದ ಸಂಬಂಧವನ್ನು ಹೊಂದಿದ್ದರು. ಪತ್ರಿಕೆಗಳಿಗೆ ಬರೆಯುತ್ತಿದ್ದ ಅವರ ಬರಹ ಮತ್ತು ಸ್ವತಃ ರಚಿಸಿ ವಾಚಿಸುತ್ತಿದ್ದ ಕವನಗಳು ಹಲವಾದರೂ ಅದರಲ್ಲಿ ಪ್ರಕಟವಾದ ಕೃತಿಗಳು ಆರು ಮಾತ್ರ. ಹರ್ಫೋ ಸೌತ್, ಸುಕೂನ್ ಕೆ ಲಮಹೋ ಕಿ ತಾಝಗೀ, ದಿಲ್ ಕೆ ದಾಮನ್ ಪರ್, ಝಂಜೀರೆ ದಸ್ತೇ ವ ಪಾ, ನಕ್ದೋ ಇಂತಿಕಾದ್, ಬಸಾತೇ ತಂಕೀದ್ ಎಂಬ ಸಂಕಲನಗಳನ್ನು ಅವರು ಈಗಾಗಲೇ ಪ್ರಕಟಿಸಿದ್ದಾರೆ. ಅತಾವುರ್ರಹ್ಮಾನ್ ಅತಾ ಅವರ ಸಾಹಿತ್ಯ ಮತ್ತು ವ್ಯಕ್ತಿತ್ವದ ಮೇಲೆ ಅಝೀಝ್ ಬೆಳಗಾಮಿ ಎಂ.ಫಿಲ್. ಮಾಡಿದ್ದು, ಅದೇ ವಿಷಯವು ಮುಂದೆ ಝಂಜೀರೆ ದಸ್ತೇ ವ ಪಾ ಎಂಬ ಹೆಸರಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. ಮಾನವ ಪ್ರಜ್ಞೆಯನ್ನು ಜಾಗೃತಗೊಳಿಸುವಂತಹ ಬರಹಗಳನ್ನು ಈ ಸಂಕಲನವು ಹೊಂದಿದ್ದು ಹಲವು ವರ್ಷಗಳ ಹಿಂದೆ ಈ ಪುಸ್ತಕವನ್ನು ಓದಿ ನಾನು ಮೂಕವಿಸ್ಮಿತನಾಗಿದ್ದೆ.

“ಅಝೀಝ್” ರ ಸೃಜನಶೀಲವಾದ ಉರ್ದು ಕವನಗಳು ಓದುಗರನ್ನು ಅತಿಯಾಗಿ ಸೆಳೆಯುವಂತಹುದು. ತನ್ನ ರಚನೆಗಳನ್ನು ತನ್ನದೇ ಆದ ವಿಶಿಷ್ಟ ಧ್ವನಿಯಲ್ಲಿ ಹಾಡುವ ಮೂಲಕ ಅವರು ಜನಮನ್ನಣೆ ಗಳಿಸಿದ್ದರು. ದೇಶ, ವಿದೇಶಗಳಲ್ಲಿ ನಡೆದ ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿರುವ ಅವರು ತಮ್ಮ ಚಿಂತನಶೀಲ ದೃಷ್ಟಿಕೋನದ ಮೂಲಕ ಪ್ರಸಿದ್ಧರಾಗಿದ್ದರು. ಅವರ ಕವನಗಳನ್ನು ಓದುವ ಮತ್ತು ಹಲವು ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಕೇಳುವ ಅವಕಾಶ ನನಗೆ ದೊರೆತಿತ್ತು. ಬಹುಭಾಷಾ ಕವಿಗೋಷ್ಠಿಯೊಂದರಲ್ಲಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವ ಮತ್ತು ಅವರ ಉಪಸ್ಥಿತಿಯಿದ್ದ ಒಂದೆರಡು ಕಾರ್ಯಕ್ರಮಗಳನ್ನು ನಿರೂಪಿಸುವ ಅವಕಾಶ ಕೂಡ ನನಗೆ ಲಭ್ಯವಾಗಿತ್ತು. ಇದಾರಯೆ ಅದಬೆ ಇಸ್ಲಾಮೀ ಹಿಂದ್ ಎಂಬ ಸಾಹಿತ್ಯ ಸಂಘಟನೆಯ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ, ಬಹುಮುಖ ಸಾಹಿತ್ಯ ಸೇವೆಗಳ ಮೂಲಕ ಗುರುತಿಸಲ್ಪಡುವ ಮತ್ತು ಉರ್ದು ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಅಝೀಝ್ ಬೆಳಗಾಮಿ ಇವರು ತಮ್ಮ 71 ನೇ ಪ್ರಾಯದಲ್ಲಿ ನಮ್ಮೆಲ್ಲರನ್ನು ಅಗಲಿರುವರು. ಇದು ಉರ್ದು ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ಸೃಷ್ಟಿಕರ್ತನು ಅವರಿಗೆ ಸ್ವರ್ಗದಲ್ಲಿ ಉನ್ನತ ಸ್ಥಾನವನ್ನು ನೀಡಿ ಅನುಗ್ರಹಿಸಲಿ ಎಂದು ಪ್ರಾರ್ಥನೆ.

LEAVE A REPLY

Please enter your comment!
Please enter your name here