ಲೇಖಕರು: ಮಹಮ್ಮದ್ ಪೀರ್ ಲಟಗೇರಿ.

ಉನ್ನತ ವ್ಯಾಸಂಗದತ್ತ ದಾಪುಗಾಲು ಇಡುತ್ತಿರುವ ರಾಜ್ಯದ ವಿದ್ಯಾರ್ಥಿ-ಯುವಜನತೆಗೆ ಸಾರ್ವಜನಿಕ ವಿವಿಗಳಲ್ಲಿ ಪೂರಕವಾದ ಕಲಿಕಾ ವಾತಾವರಣವನ್ನು ಖಚಿತಪಡಿಸುವಲ್ಲಿ ಸರ್ಕಾರಗಳು ವಿಫಲವಾಗುತ್ತಿವೆ, ಉನ್ನತ ಶಿಕ್ಷಣದ ಕಲಿಕೆಗಾಗಿ ಇರುವ ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳು ಸೂಕ್ತ ಅನುದಾನ ಸಿಗದೇ ಸೊರಗಿ ಹೋಗಿವೆ, ಇದರ ನಡುವೆ ಅಲ್ಲಿ ಅಧ್ಯಯನ ನಡೆಸುವ ಸಂಶೋಧನಾ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಫೆಲೋಶಿಪ್/ಸ್ಕಾಲರ್ಶಿಪ್ ನೀಡದೆ ತಡೆಹಿಡಿಯಲಾಗುತ್ತಿದೆ.

ವಿಶ್ವವಿದ್ಯಾಲಯಗಳಲ್ಲಿ ಅಭ್ಯಸಿಸುತ್ತಿರುವ ರಾಜ್ಯದ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಎಂ.ಫಿಲ್(MPhil) ಮತ್ತು ಪಿ.ಹೆಚ್.ಡಿ(PhD) ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಜೆ.ಆರ್.ಎಫ್(JRF) ಮಾದರಿಯಲ್ಲಿ ಎಂ.ಫಿಲ್ ಕೋರ್ಸಿಗೆ 2 ವರ್ಷದ ಅವಧಿಗೆ ಮಾತ್ರ ಮತ್ತು ಪಿ.ಹೆಚ್.ಡಿ ಕೋರ್ಸಿಗೆ 3 ವರ್ಷದ ಅವಧಿಗೆ ಮಾತ್ರ ಮಾಹೆಯಾನ ರೂ. 25,000/- ನೀಡಲಾಗುತ್ತಿದ್ದ ಫೆಲೋಶಿಪ್ ಮೊತ್ತವನ್ನು ಕಡಿತಗೊಳಿಸಿ ಹೊಸ ಸರ್ಕಾರಿ ಆದೇಶ ಹೊರಡಿಸಲಾಗಿದೆ, ಅದರ ಪ್ರಕಾರ 2022-23ರ ಸಾಲಿನ ಎಂ.ಫಿಲ್ ವಿದ್ಯಾರ್ಥಿಗೆ 2 ವರ್ಷದ ಅವಧಿಗೆ 8,000/- ಮತ್ತು ಪಿ.ಹೆಚ್.ಡಿ ವಿದ್ಯಾರ್ಥಿಗೆ 3 ವರ್ಷದ ಅವಧಿಗೆ 10,000/- ನೀಡುವುದಾಗಿ ತಿಳಿಸಿದ್ದಾರೆ, ಇದು ಈಗಾಗಲೇ ಸಕಾಲಕ್ಕೆ ಫೆಲೋಶಿಪ್ ದೊರೆಯದೆ ಕಂಗಾಲಾಗಿದ್ದ ವಿದ್ಯಾರ್ಥಿಗಳಿಗೆ ಮತ್ತೊಂದು ಹೊಡೆತ ನೀಡಿದೆ.

ಇದರೊಂದಿಗೆ ತಿದ್ದುಪಡಿಯಾದ ಹೊಸ ಸರ್ಕಾರಿ ಸೇರ್ಪಡೆ ಆದೇಶ ಸಂಖ್ಯೆ: MWD 198 MDS 2022, ಬೆಂಗಳೂರು. ದಿನಾಂಕ:28-06-2022ರ ಅನ್ವಯ 2020-21ರ ಸಾಲಿನಲ್ಲಿ ನೋಂದಣಿಯಾಗಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ 2021-22 ನೇ ಸಾಲಿನಿಂದ ಎಂ.ಫಿಲ್ ವಿದ್ಯಾರ್ಥಿಗಳಿಗೆ ಗರಿಷ್ಠ 1 ವರ್ಷ ಮತ್ತು ಪಿ.ಹೆಚ್.ಡಿ ವಿದ್ಯಾರ್ಥಿಗಳಿಗೆ ಗರಿಷ್ಠ 2 ವರ್ಷ ಮಾಹೆಯಾನ 25000/- ಫೆಲೋಶಿಪ್ ನೀಡುವ ನಿರ್ಧಾರದಿಂದ ಮೂರು ವರ್ಷದ ವರೆಗಿದ್ದ ಫೆಲೋಶಿಪ್ ಅವಧಿಯನ್ನು 2 ವರ್ಷಕ್ಕೆ ಇಳಿಸಲಾಗಿದೆ, ಇದು ವಿದ್ಯಾರ್ಥಿಗಳನ್ನು ಒಂದು ವರ್ಷದ ಫೆಲೋಶಿಪ್ ನಿಂದ ವಂಚಿತಗೊಳಿಸುವುದಾಗಿದೆ, ಇದರಿಂದ ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದಾರೆ.

ಪಿ.ಹೆಚ್.ಡಿ ಪದವಿಯನ್ನು ಅಧ್ಯಯನ ಮಾಡಿ ಗುಣಮಟ್ಟದ ಸಂಶೋಧನಾ ಪ್ರಬಂಧ ಮಂಡಿಸಲು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯದ ನಿಯಮಾವಳಿಗಳ ಪ್ರಕಾರ ಕೋರ್ಸ್ ಪೂರ್ಣಗೊಳಿಸಲು ಕನಿಷ್ಠ 3 ರಿಂದ 5 ವರ್ಷಗಳ ಕಾಲಮಿತಿ ಇರುತ್ತದೆ, ಇದು ಸ್ವತಃ ಯು.ಜಿ.ಸಿ ಯ ಪಿ.ಹೆಚ್.ಡಿ ಮತ್ತು ಎಂ.ಫಿಲ್ ನಿಯಮಾವಳಿಗಳಿಗೆ ವಿರುದ್ಧವಾಗಿದೆ.

ತಿದ್ದುಪಡಿಯಾದ ಈ ಹೊಸ ಸರ್ಕಾರಿ ಆದೇಶವು 2022-23ರ ಸಾಲಿನಲ್ಲಿ ನೋಂದಣಿಯಾಗಿ ಪ್ರವೇಶಾತಿ ಪಡೆದಿರುವ ಹೊಸ ವಿದ್ಯಾರ್ಥಿಗಳಿಗೆ ಅನ್ವಯಿಸಲಾಗಿದ್ದು, ಕೋರ್ಸಿಗೆ ತಗುಲುವ ವೆಚ್ಚಕ್ಕೆ ಸಂಪೂರ್ಣ ಫೆಲೋಶಿಪ್ ಅನ್ನು ಅವಲಂಬಿಸಿದ್ದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಇದು ಆಘಾತ ನೀಡಿದೆ.

ಈ ಹಿಂದಿನ ಕಾಂಗ್ರೆಸ್ ಸರ್ಕಾರದ 2016-17ರ ಅವಧಿಯಲ್ಲಿ ಜಾರಿಗೊಳಿಸಲಾಗಿದ್ದ ಯೋಜನೆಯನ್ನು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಆರ್ಥಿಕ ನೆಪ ಹೇಳಿ 25 ಸಾವಿರವಿದ್ದ ಫೆಲೋಶಿಪ್ ಅನ್ನು 8,333/- ಕ್ಕೆ ಇಳಿಸಿ, ಫೆಲೋಶಿಪ್ ಮೊತ್ತವನ್ನು ಕಡಿತಗೊಳಿಸಿತ್ತು. ಇದು ಯೋಜನೆಯನ್ನು ನಿಲ್ಲಿಸುವ ಪ್ರಯತ್ನವಾಗಿತ್ತು ಆದರೆ ವಿದ್ಯಾರ್ಥಿ ಮತ್ತು ವಿವಿಧ ಸಂಘಟನೆಗಳ ಆಗ್ರಹ ಮತ್ತು ಪ್ರತಿಭಟನೆಗೆ ಮಣಿದು ಯೋಜನೆಯನ್ನು ಮುಂದುವರೆಸಿತ್ತು, ಇದೀಗ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವು ಬಿಜೆಪಿಯವರ ಉದ್ದೇಶವನ್ನು ಪೂರ್ಣಗೊಳಿಸುವ ಹಾದಿಯಲ್ಲಿ ಸಾಗುತ್ತಿರುವುದು ಸಮುದಾಯಕ್ಕೆ ಮತ್ತು ಸಾಮಾಜಿಕ ನ್ಯಾಯಕ್ಕೆ ಮಾಡುತ್ತಿರುವ ದ್ರೋಹವಾಗಿದೆ.

ಅಲ್ಪಸಂಖ್ಯಾತರ ಸಮುದಾಯದಲ್ಲಿ ಉನ್ನತ ಶಿಕ್ಷಣದಲ್ಲಿ ದಾಖಲಾತಿ ಪಡೆಯುವುದೇ ವಿರಳ ಇರುವ ಸಂದರ್ಭದಲ್ಲಿ ಅದರಲ್ಲೂ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಸಂಶೋಧನಾ ಕ್ಷೇತ್ರದಲ್ಲಿದ್ದು, ಇದೀಗ ಅವರಿಗೆ ಆರ್ಥಿಕವಾಗಿ ನೆರವಾಗುವ ಮೂಲಕ ಅಧ್ಯಯನ ಪೂರ್ಣಗೊಳಿಸಲು ಪ್ರೋತ್ಸಾಹಿಸಬೇಕಾದ ಸರ್ಕಾರವೇ ಸಹಾಯಧನದ ಮೊತ್ತ ಮತ್ತು ಅವಧಿಯನ್ನು ಕಡಿತಗೊಳಿಸಿರುವುದು ದುರಂತ.

ವಿಜಯನಗರದ ಜಿಲ್ಲೆಯ ಅಧೀನದಲ್ಲಿ ಬರುವ ಬಹುತೇಕ ಸಂಶೋಧನಾ ವಿದ್ಯಾರ್ಥಿಗಳಿಗೆ 2021 ರಿಂದ ಇನ್ನೂ ವರೆಗೂ ಸಕಾಲಕ್ಕೆ ಫೆಲೋಶಿಪ್ ನೀಡದೆ ಸತಾಯಿಸಲಾಗುತ್ತಿದೆ‌, ಇದರಿಂದ ಬೇಸತ್ತ ಅಭ್ಯರ್ಥಿಗಳು ಸಾಲ ಪಡೆದು ಸಂಶೋಧನಾ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ‌, ಇದೇ ರೀತಿ ಇನ್ನೂ ಅನೇಕ ಜಿಲ್ಲೆಯ ವಿದ್ಯಾರ್ಥಿಗಳು ಫೆಲೋಶಿಪ್ ಗಾಗಿ ಅಲೆದಾಡುವ ದುಸ್ಥಿತಿ ಉಂಟಾಗಿದೆ.

ರಾಜ್ಯದ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಸರ್ಕಾರಿ ಆದೇಶ ಸಂಖ್ಯೆ: MWD 462 MDS 2016, ದಿನಾಂಕ: 24/01/2017 ರ ನಿಯಮಾವಳಿಗಳನ್ನು ಅನ್ವಯಿಸಿ 2016-17ರ ಯೋಜನೆಯ ಪ್ರಾರಂಭಿಕ ಅಧಿಸೂಚನೆಯಂತೆ ಫೆಲೋಶಿಪ್ ಅನ್ನು ಯಥಾವತ್ತಾಗಿ ಮರು ಜಾರಿಗೊಳಿಸಬೇಕು ಮತ್ತು ಪೂರ್ಣಕಾಲಿಕ ದಾಖಲಾತಿ ಪಡೆದು ಈಗಾಗಲೇ ಅರ್ಜಿ ಸಲ್ಲಿಸಿ ಸಂಶೋಧನೆ ನಡೆಸುತ್ತಿರುವ ಅಭ್ಯರ್ಥಿಗಳಿಗೂ ಅರ್ಜಿ ಸಲ್ಲಿಸಿದಾಗಿನಿಂದ ಪೂರ್ವ ಅನ್ವಯವಾಗುವಂತೆ ಫೆಲೋಶಿಪ್ ಅನ್ನು ನೀಡಬೇಕು ಎನ್ನುವುದು ವಿದ್ಯಾರ್ಥಿಗಳ ಬೇಡಿಕೆಯಾಗಿದೆ.

LEAVE A REPLY

Please enter your comment!
Please enter your name here