ಲೇಖಕರು: ಹಕೀಮ್ ತೀರ್ಥಹಳ್ಳಿ.

ಸರ್ಕಾರಿ ಶಾಲೆಗಳಲ್ಲಿ ಇಂದು ಸವಲತ್ತುಗಳನ್ನು ಕಲ್ಪಿಸುತ್ತಿದ್ದರು ಕಲಿಯಲು ವಿದ್ಯಾರ್ಥಿಗಳಿಲ್ಲ ಎಂಬುದು ವಾಸ್ತವ ಸತ್ಯ. ಏಕೆ ಹೀಗಾಯಿತು ಎಂದು ಪ್ರಶ್ನೆ ಹಾಕಿಕೊಳ್ಳುದಾದರೆ ಮೊದಲ ಕಾರಣ ಇಂಗ್ಲಿಷ್ ಭಾಷೆಯ ವ್ಯಾಮೋಹ ಮತ್ತೊಂದು ಪ್ರತಿಷ್ಠೆ. ಈ ಎರಡರ ಕಾರಣದಿಂದ ಇಂದು ಪೋಷಕರು ಅದೆಷ್ಟೇ ಹಣವಾಗಲಿ ಅದನ್ನು ಕಟ್ಟಿ ಖಾಸಗಿ ಅನುದಾನ ರಹಿತ ವಿದ್ಯಾ ಸಂಸ್ಥೆಗಳಲ್ಲಿ ತಮ್ಮ ಮಕ್ಕಳನ್ನ ಸೇರಿಸಿ ಆ ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿ ವಿನಾಕಾರಣ ಒತ್ತಡ ಹೆರುತ್ತಿದ್ದಾರೆ. ಸದ್ಯಕ್ಕೆ ಖಾಸಗಿ ಶಾಲೆಗಳಲ್ಲಿರುವ ಎಲ್ಲಾ ಸವಲತ್ತುಗಳು ಕ್ರಮೇಣ ಸರ್ಕಾರಿ ಶಾಲೆಯಲ್ಲಿ ಇಂದು ಲಭ್ಯವಾಗುತ್ತಿದೆ. ಅದನ್ನ ಬಳಸಿಕೊಳ್ಳುವಲ್ಲಿ ನಾವು ವಿಫಲಗೊಂಡಿದ್ದೇವೆ. ಖಾಸಗಿ ಅನುದಾನ ರಹಿತ ಶಾಲೆಗಳಿಗೆ ನಮ್ಮ ಮಕ್ಕಳನ್ನು ಸೇರಿಸಿದ ಮೇಲೆ ಸಂಸ್ಥೆಯ ಜೊತೆ ನಾವು ನಿರಂತರ ಸಂಪರ್ಕದಲ್ಲಿರುತ್ತೇವೆ. ಅದರಂತೆ ಸರ್ಕಾರಿ ಶಾಲೆಗೆ ನಮ್ಮ ಮಕ್ಕಳನ್ನು ಸೇರಿಸಿ ಶಾಲೆಯೊಂದಿಗೆ ನಿರಂತರ ಸಂಪರ್ಕ ಇಟ್ಟರೆ ಇಲ್ಲೂ ಕೂಡ ಉತ್ತಮವಾದ ಶೈಕ್ಷಣಿಕ ವಾತವರಣ ಮೂಡಿಸಲು ಸಾಧ್ಯವಿದೆ. ಆದರೆ ಇದನ್ನು ಚಿಂತಿಸದೆ ವಿನಾಕಾರಣ ಹಣವನ್ನ ಕಟ್ಟಿ ಮನೆ ಹತ್ತಿರವಿರುವ ಶಾಲೆಯನ್ನ ಬಿಟ್ಟು ಅದೆಷ್ಟೋ ದೂರವಿರುವ ವಿದ್ಯಾ ಸಂಸ್ಥೆಗಳಿಗೆ ಹೊತ್ತಿಗೂ ಮುಂಚೆ ವಾಹನಗಳಲ್ಲಿ ಮಕ್ಕಳನ್ನು ಹತ್ತಿಸಿ ಟಾಟಾ ಹೇಳುತ್ತಿದ್ದೇವೆ.

‘ಇಂಗ್ಲಿಷ್ ಭಾಷೆಯ ವ್ಯಾಮೋಹ ಕನ್ನಡ ಶಾಲೆಗಳನ್ನು ಅವನತಿಯ ಅಂಚಿಗೆ ತಲುಪಿಸುತ್ತಿದೆ’ ಈ ಮಾತನ್ನ ಒಮ್ಮೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಹೇಳಿದ್ದರು. ಅದರಂತೆ ಕನ್ನಡದ ಹಿತೈಷಿಗಳು ಕನ್ನಡ ಶಾಲೆಗಳ ಸ್ಥಿತಿಗತಿಯ ಕುರಿತಂತೆ ಮಾತನಾಡುತ್ತಲೇ ಇದ್ದಾರೆ. ಆದರೆ ಪರಿಸ್ಥಿತಿ ಬದಲಾಗಿಲ್ಲ. ಸರ್ಕಾರಿ ಶಾಲೆಗಳಲ್ಲಿ ಕಲಿಯುವವರ ಸಂಖ್ಯೆ ಕನ್ನಡ ಮಾಧ್ಯಮಕ್ಕೆ ದಾಖಲಾಗುವ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಲೇ ಸಾಗುತ್ತಿದೆ. ಇಂಗ್ಲಿಷ್ ಅಗತ್ಯ ಇರಬಹುದು ಆದರೆ ಅನಿವಾರ್ಯವೇನಲ್ಲ. ಕನ್ನಡದ ಜೊತೆಗೆ ಇಂಗ್ಲಿಷ್ ಕಲಿಯುವ ಪರಿಸರ ಬೆಳೆಯಬೇಕೆ ಹೊರತು ಇಂಗ್ಲಿಷ್ ಜೊತೆ ಕನ್ನಡ ಕಲಿಯುವ ಪರಿಸರವಲ್ಲ. ಕನ್ನಡ ಮಾಧ್ಯಮದಲ್ಲೇ ಇಂಗ್ಲಿಷ್ ಅಳವಡಿಸಿ ಕಲಿಸುವ ಹೊಣೆಗಾರಿಕೆಯನ್ನ ಸರ್ಕಾರ ಮತ್ತು ಶಿಕ್ಷಣ ಸಂಸ್ಥೆಗಳು ಮಾಡಬೇಕಿದೆ.

ಇದೇ ಪರಿಸ್ಥಿತಿ ಮುಂದುವರೆದರೆ ಇಂಗ್ಲಿಷ್ ಭಾಷೆ ಮತ್ತು ಖಾಸಗಿ ಕಾನ್ವೆಂಟ್ಗಳು, ಸಂಸ್ಥೆಗಳು, ಕನ್ನಡ ಭಾಷೆ ಮತ್ತು ಸರ್ಕಾರಿ ಶಾಲೆಗಳಿಗೆ ಸಮಾಧಿ ಕಟ್ಟುವುದರಲ್ಲಿ ಸಂಶಯವಿಲ್ಲ. ಬಂಧುಗಳೆ ನೀವು ನಿಮ್ಮ ಮಕ್ಕಳನ್ನು ಉತ್ತಮ ಶಿಕ್ಷಣ ನೀಡುವ ಸರ್ಕಾರಿ ಕನ್ನಡ ಶಾಲೆಗಳಿಗೆ ಸೇರಿಸಿ. ಸರ್ಕಾರಗಳು ಕನ್ನಡ ಮಾಧ್ಯಮ ಶಾಲೆಗಳನ್ನು ಆಧುನೀಕರಣ ಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲಿ. ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡದೆ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಹೆಜ್ಜೆ ಇಡಲಿ. ಆ ಮೂಲಕ ಸರ್ಕಾರಿ ಶಾಲೆ ಮತ್ತು ತಮ್ಮದೆ ಕನ್ನಡದ ಅಸ್ತಿತ್ವ ಉಳಿಸುವ ಕೆಲಸ ನಮ್ಮ‌ ನೆಲದಲ್ಲಿ ನಡೆಯಲಿ….

LEAVE A REPLY

Please enter your comment!
Please enter your name here