ಸಂಪಾದಕೀಯ: ಸಂಪಾದಕರು “ಇಂಕ್ ಡಬ್ಬಿ” ಆನ್ಲೈನ್ ಮಾಧ್ಯಮ.

ಬಾಗಲಕೋಟೆ ಜಿಲ್ಲೆಗೆ ಶೈಕ್ಷಣಿಕ ವಿಷಯದಲ್ಲಿ ನಿರಂತರ ತಾರತಮ್ಯ ಮಾಡಲಾಗುತ್ತಿದೆ, ಆಯಾ ರಾಜಕೀಯ ಪಕ್ಷಗಳು ಅಧಿಕಾರದಲ್ಲಿದ್ದಾಗ ಅನೇಕ ಬಾರಿ ಜಿಲ್ಲೆಗೆ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವ ಘೋಷಣೆಗಳನ್ನು ಮಾಡುತ್ತಾ ಬಂದಿವೆ, ಆದರೆ ಅವೆಲ್ಲವೂ ಕೇವಲ ಚುನಾವಣಾ ಪ್ರೇರಿತ ಆಶ್ವಾಸನೆಗಳಾಗಿದ್ದವು ಎಂಬುದು ಪದೇ ಪದೇ ಸಾಬೀತಾಗುತ್ತಿದೆ, ಜಿಲ್ಲೆಯ ಜನಪ್ರತಿನಿಧಿಗಳ ದಿಟ್ಟ ಧ್ವನಿ ಹಾಗೂ ಒಗ್ಗಟ್ಟಿನ ಕೊರತೆಯಿಂದಾಗಿ ಜನತೆಯ ಬಹುದಿನಗಳ ಬೇಡಿಕೆಗಳು ನೆನೆಗುದಿಗೆ ಬಿದ್ದಿವೆ.

ಬಾಗಲಕೋಟೆಗೆ 2014-15ರ ಬಜೆಟ್ ನಲ್ಲಿ ಘೋಷಿಸಿದ್ದ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಸುಮಾರು 10 ವರ್ಷಗಳು ಕಳೆದರೂ ಇದುವರೆಗೂ ಯಾವುದೇ ರೀತಿಯ ಅನುದಾನ ಒದಗಿಸಿಲ್ಲ ಮತ್ತು ಮೆಡಿಕಲ್ ಕಾಲೇಜು ಸ್ಥಾಪನೆಗೆ ಜಮೀನಿನ ಖರೀದಿ ಹಾಗೂ ಕಟ್ಟಡಗಳ ನಿರ್ಮಾಣಕ್ಕೆ ಚಾಲನೆ ನೀಡಿಲ್ಲದಿರುವುದು ಕಾಲೇಜು ಸ್ಥಾಪನೆಯ ಕನಸಿಗೆ ತಿಲಾಂಜಲಿ ಇಟ್ಟಂತಿದೆ.

2014-15ರ ಬಜೆಟ್ ಅನ್ನು ಮಂಡಿಸಿದ್ದ ಅಂದಿನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಅಂದಿನ ಬಜೆಟ್ ನಲ್ಲಿ ಬಾಗಲಕೋಟೆಗೆ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದರು, ಆ ನಂತರ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರ ಮತ್ತು ಬಿಜೆಪಿಯ ಸರ್ಕಾರವು ಕಾಲೇಜು ಆರಂಭಕ್ಕೆ ಬಿಡುಗಾಸನ್ನು ನೀಡಲಿಲ್ಲ, ಕಳೆದ ಬಾರಿಯ ಚುನಾವಣೆಯಲ್ಲಿ ತಮ್ಮ ರಾಜಕೀಯ ಬದುಕಿಗೆ ಪುನರ್ಜನ್ಮ ನೀಡಿದ್ದ ಬಾದಾಮಿ ವಿಧಾನ ಸಭಾ ಕ್ಷೇತ್ರವು ಬಾಗಲಕೋಟೆ ಜಿಲ್ಲೆಯಲ್ಲಿದೆ, ಇದೀಗ ಮತ್ತೆ ಕಾಂಗ್ರೆಸ್ ಸರ್ಕಾರದಲ್ಲಿ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ 2025-26ರ ರಾಜ್ಯ ಬಜೆಟ್ ಮಂಡಿಸಲಿರುವ ಸಿದ್ದರಾಮಯ್ಯ ನವರು ಈ ಹಿಂದೆ 2014-15ರ ಬಜೆಟ್ ನಲ್ಲಿ ತಾವೇ ಘೋಷಿಸಿದ್ದ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಕ್ಕೆ ಈ ಭಾಗದ ಜನರ ಬಹಳಷ್ಟು ನಿರೀಕ್ಷೆ ಇದ್ದು, ಈ ಬಾರಿಯ ಬಜೆಟ್ ನಲ್ಲಿ ಕಾಲೇಜು ಆರಂಭಕ್ಕೆ ಅಗತ್ಯ ಅನುದಾನ ಮೀಸಲಿಟ್ಟು ಜನತೆಯ ಋಣ ತೀರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

2014-15ನೇ ಸಾಲಿನ ಬಜೆಟ್ ನಲ್ಲಿ ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಸ್ಥಾಪಿಸಬೇಕೆಂಬ ಯೋಜನೆಯ ಭಾಗವಾಗಿ ಬಾಗಲಕೋಟೆ ಜೊತೆಗೆ ಗದಗ, ಹಾವೇರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಆರಂಭಿಸುವುದಾಗಿ ಘೋಷಣೆ ಮಾಡಲಾಗಿತ್ತು, ಆದರೆ ಆ ಜಿಲ್ಲೆಗಳಲ್ಲಿ ಆರಂಭಗೊಂಡಿರುವ ಕಾಲೇಜು ಬಾಗಲಕೋಟೆಗೆ ಮಾತ್ರ ಲಭ್ಯವಾಗಿಲ್ಲ ಎಂಬುದು ದುರಂತ.

ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವುದಾಗಿ ಬಾಗಲಕೋಟೆ, ಯಾದಗಿರಿ, ಹಾವೇರಿ, ಚಿತ್ರದುರ್ಗ, ತುಮಕೂರು ಮತ್ತು ಚಿಕ್ಕಬಳ್ಳಾಪುರ ಒಟ್ಟು 6 ಜಿಲ್ಲೆಗಳಿಗೆ ಘೋಷಣೆಯಾಗಿತ್ತು, ಘೋಷಣೆಯಾದ ಪೈಕಿ ಚಿತ್ರದುರ್ಗ, ಹಾವೇರಿ ಜೊತೆಗೆ ಬಹುತೇಕ ಜಿಲ್ಲೆಗಳಲ್ಲಿ ಆರಂಭಗೊಂಡಿವೆ, ಆದರೆ ಬಾಗಲಕೋಟೆಗೆ ಮಾತ್ರ ಇನ್ನೂ ಸರ್ಕಾರ ಇಚ್ಛಾಶಕ್ತಿ ತೋರುತ್ತಿಲ್ಲ ಎನ್ನುವುದು ಶೋಚನೀಯ.

ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಎನ್ನುವುದು ಕನಸಾಗಿರುವ ಈ ಕಾಲಘಟ್ಟದಲ್ಲಿ ಎಲ್ಲರಿಗೂ ಸುಲಭ ಮತ್ತು ಕೈಗೆಟುಕುವ ರೀತಿಯಲ್ಲಿ ಶಿಕ್ಷಣ ಲಭ್ಯವಾಗಲು ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ತೀರಾ ಅವಶ್ಯಕತೆ ಇದೆ, ಇದರೊಂದಿಗೆ ಜಿಲ್ಲೆಯ ಬಡ ಜನರಿಗೆ ಉಚಿತ ಮತ್ತು ಗುಣಮಟ್ಟದ ಆರೋಗ್ಯ ತಪಾಸಣೆಯೂ ಸಿಗಲಿದ್ದು, ಈ ನಿಟ್ಟಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯು ಬಹಳಷ್ಟು ಪ್ರಾಮುಖ್ಯತೆ ಪಡೆದಿದೆ. ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸುಸಜ್ಜಿತ ಆಸ್ಪತ್ರೆಗಾಗಿ ಈ ಭಾಗದ ವಿದ್ಯಾರ್ಥಿ ಮತ್ತು ಜನತೆ ಬಹಳಷ್ಟು ಆಕಾಂಕ್ಷೆಯನ್ನು ಇಟ್ಟುಕೊಂಡಿದ್ದಾರೆ, ಆದರೆ ಘೋಷಣೆಯಾದ ಮೆಡಿಕಲ್ ಕಾಲೇಜು ಕಾರ್ಯಾರಂಭಕ್ಕೆ ಸೂಕ್ತ ಕ್ರಮ ಕೈಗೊಳ್ಳದೆ ಘೋಷಣೆಯಾಗಿಯೇ ಉಳಿದಿದೆ. ಈ ನಿಟ್ಟಿನಲ್ಲಿ ಸರ್ಕಾರ ಈ ಭಾಗದ ಜನತೆಯ ಅಗತ್ಯತೆಯನ್ನು ಮನಗಂಡು ಜನರ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ.

2024-25ನೇ ಸಾಲಿಗೆ 113 ಹೊಸ ಪದವಿಪೂರ್ವ ವೈದ್ಯಕೀಯ ಕಾಲೇಜುಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಅನುಮೋದನೆ ನೀಡಿದೆ. ಎನ್‌.ಎಂ.ಸಿ ಅನುಮೋದನೆ ನೀಡಿರುವ ಪಟ್ಟಿಯಲ್ಲಿ ಕರ್ನಾಟಕಕ್ಕೆ 3 ಹೆಚ್ಚುವರಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಅನುಮತಿ ನೀಡಲಾಗಿದೆ, ಬೆಂಗಳೂರು ಉತ್ತರ ವ್ಯಾಪ್ತಿಯ ಬಿಜಿಎಸ್ ವೈದ್ಯಕೀಯ ಕಾಲೇಜು, ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್ & ರಿಸರ್ಚ್ ಸೆಂಟರ್ ಹಾಗೂ ಬಾಗಲಕೋಟೆಯ ಎಸ್.ಆರ್ ವೈದ್ಯಕೀಯ ಕಾಲೇಜು ಸ್ಥಾಪನೆಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಒಪ್ಪಿಗೆ ನೀಡಿದೆ.

ಕರ್ನಾಟಕ ರಾಜ್ಯದ 22 ಜಿಲ್ಲೆಯಲ್ಲಿ ಈಗಾಗಲೇ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಿದೆ. ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಕೋಲಾರ, ಬಾಗಲಕೋಟೆ, ವಿಜಯಪುರ, ರಾಮನಗರ, ತುಮಕೂರು, ಬೆಂಗಳೂರು ಗ್ರಾಮಾಂತರ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜುಗಳು ಇನ್ನೂ ಸ್ಥಾಪನೆಯಾಗಿಲ್ಲ.

ಖಾಸಗಿ ಮೆಡಿಕಲ್ ಮಾಫಿಯಾ ಹಾಗೂ ರಾಜಕಾರಣಿಗಳ ಹಸ್ತಕ್ಷೇಪದಿಂದ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗದಂತೆ ತಡೆಯುತ್ತಿದೆ ಎನ್ನುವುದು ಬಾಗಲಕೋಟೆಯ ಜನಸಾಮಾನ್ಯರ ಆರೋಪವಾಗಿದೆ.

ಅನೇಕ ವರ್ಷಗಳಿಂದ ಶೈಕ್ಷಣಿಕ ವಿಷಯದಲ್ಲಿ ಅನ್ಯಾಯಕ್ಕೆ ಒಳಗಾಗುತ್ತಿರುವ ಬಾಗಲಕೋಟೆ ಜಿಲ್ಲೆಗೆ ಶೈಕ್ಷಣಿಕ ಸಂಸ್ಥೆಗಳ ಅಗತ್ಯತೆಯ ಬಗ್ಗೆ ಈ ಭಾಗದ ಜನಪ್ರತಿನಿಧಿಗಳು ಸರ್ಕಾರ ಮಟ್ಟದಲ್ಲಿ ಧ್ವನಿಯೆತ್ತಬೇಕು, ಜನರ ಬೇಡಿಕೆಯಂತೆ ರಾಜ್ಯದ ಹೊಸ 9 ವಿಶ್ವವಿದ್ಯಾಲಯಗಳನ್ನು ಸ್ಥಗಿತಗೊಳಿಸುವ ಭಾಗವಾಗಿ ಜಮಖಂಡಿಯ ಬಾಗಲಕೋಟೆ ವಿಶ್ವವಿದ್ಯಾಲಯವನ್ನು ಮುಚ್ಚುವ ಪ್ರಸ್ತಾಪವಿದ್ದು, ಸರ್ಕಾರ ಈ ನಿರ್ಧಾರವನ್ನು ಹಿಂಪಡೆದು ವಿವಿಯನ್ನು ಮುಂದುವರೆಸಿಕೊಂಡು ಹೋಗಲು ಹಾಗೂ ನೆನೆಗುದಿಗೆ ಬಿದ್ದಿರುವ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯದ ಸ್ಥಾಪನೆಗೆ ಅಗತ್ಯ ಅನುದಾನ ಮತ್ತು ಕಾರ್ಯಯೋಜನೆಯನ್ನು ರೂಪಿಸಲು ರಾಜ್ಯ ಸರ್ಕಾರವು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂಬುದು ಜನತೆಯ ಆಗ್ರಹವಾಗಿದೆ.

LEAVE A REPLY

Please enter your comment!
Please enter your name here