ನ್ಯಾಯವು ಯಾವುದೇ ಆರೋಗ್ಯಕರ ಸಮಾಜದ ಆಧಾರಸ್ತಂಭವಾಗಿದೆ. ಇತಿಹಾಸದುದ್ದಕ್ಕೂ ಅನೇಕ ನಾಯಕರು, ರಾಜರು ಮತ್ತು ತತ್ವಜ್ಞಾನಿಗಳು ನ್ಯಾಯದ ಬಗ್ಗೆ ಮಾತನಾಡಿದ್ದಾರೆ. ಆದರೆ, ತಮ್ಮ ಜೀವನದಲ್ಲಿ ನ್ಯಾಯವನ್ನು ಅತ್ಯುತ್ತಮವಾಗಿ ಪ್ರತಿಪಾದಿಸಿ ಜಾರಿಗೆ ತಂದ ಮಹಾನ್ ವ್ಯಕ್ತಿ ಪ್ರವಾದಿ ಮುಹಮ್ಮದ್(ಸ) ರವರು ಅಗ್ರಗಣ್ಯರಾಗಿದ್ದಾರೆ.

ಅವರು ಕೇವಲ ಮುಸ್ಲಿಮರಿಗಷ್ಟೇ ಅಲ್ಲ, ಸಮಸ್ತ ಮಾನವಕುಲಕ್ಕೆ ನ್ಯಾಯದ ಧ್ವಜವಾಹಕರಾಗಿದ್ದರು.
ಕುರ್‌ಆನ್‌ನಲ್ಲಿ ನ್ಯಾಯದ ಕುರಿತ ವಚನಗಳು ಹೀಗಿವೆ.

ನ್ಯಾಯದ ಮಹತ್ವ ಕುರಿತ ಕುರ್ ಆನಿನ ವಾಣಿ: “ಜನರ ನಡುವೆ ತೀರ್ಪು ನೀಡುವಾಗ ನ್ಯಾಯದಿಂದಲೇ ತೀರ್ಪು ನೀಡಿರೆಂದು ಅಲ್ಲಾಹನು ನಿಮಗೆ ಆಜ್ಞಾಪಿಸುತ್ತಾನೆ” ಎಂದು ಕುರ್‌ಆನ್‌ನಲ್ಲಿ (4:58) ಹೇಳಲಾಗಿದೆ.

ಅದೇ ರೀತಿ, “ಮಾತನಾಡುವಾಗ ನ್ಯಾಯವನ್ನೇ ಮಾತನಾಡಿ, ಅದು ನಿಮ್ಮ ಸಂಬಂಧಿಕರ ವಿಷಯವೇ ಆಗಿದ್ದರೂ ಸರಿ” ಎಂದು ಕುರ್‌ಆನ್‌ನಲ್ಲಿ (6:152) ತಿಳಿಸಲಾಗಿದೆ.

ಈ ಮೇಲಿನ ಕುರ್‌ಆನ್ ಸೂಕ್ತಗಳು ಸ್ಪಷ್ಟಪಡಿಸುವುದೇನೆಂದರೆ:

ನ್ಯಾಯದ ವಿಷಯದಲ್ಲಿ ಜಗತ್ತಿನ ಎಲ್ಲಾ ಮಾನವರೂ ಸಮಾನರು. ಇಲ್ಲಿ ಧರ್ಮ, ಸಂಬಂಧ ಅಥವಾ ಸಮುದಾಯದ ಯಾವುದೇ ಅಡೆತಡೆಗಳಿಲ್ಲ. ಇದೇ ಕಾರಣದಿಂದ, “ಅಲ್ಲಾಹನು ನ್ಯಾಯ, ಪರೋಪಕಾರ ಹಾಗೂ ಆಪ್ತೇಷ್ಟರೊಂದಿಗೆ ಸೌಜನ್ಯದಿಂದ ವರ್ತಿಸಲು ಆಜ್ಞಾಪಿಸುತ್ತಾನೆ” ಎಂದು ಕುರ್‌ಆನ್ (16:90) ಬೋಧಿಸುತ್ತದೆ.

ಇನ್ನೊಂದು ಕಡೆ ಈ ರೀತಿ ಹೇಳಲಾಗಿದೆ: “ನ್ಯಾಯಕ್ಕೆ ಸಾಕ್ಷಿಯಾಗಿ ನಿಲ್ಲಿರಿ, ಅದು ನಿಮ್ಮ ವಿರುದ್ಧವೇ ಇದ್ದರೂ ಸರಿ”

“ಓ ಸತ್ಯವಿಶ್ವಾಸಿಗಳೇ, ನೀವು ನ್ಯಾಯದ ಧ್ವಜವಾಹಕರೂ, ಅಲ್ಲಾಹನಿಗಾಗಿ ಸಾಕ್ಷ್ಯವಹಿಸುವವರೂ ಆಗಿರಿ. ನಿಮ್ಮ ನ್ಯಾಯ ಮತ್ತು ಸಾಕ್ಷ್ಯವು ಸ್ವತಃ ನಿಮ್ಮ, ನಿಮ್ಮ ಮಾತಾಪಿತರ ಅಥವಾ ನಿಮ್ಮ ಸಂಬಂಧಿಕರ ವಿರುದ್ಧವಾಗಿದ್ದರೂ ಸರಿಯೇ” ಎಂದು ಪವಿತ್ರ ಕುರ್‌ಆನ್‌ನಲ್ಲಿ (4:135) ಹೇಳಲಾಗಿದೆ.

“ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನಿಗಾಗಿ ಸತ್ಯದಲ್ಲಿ ನೆಲೆನಿಲ್ಲುವವರೂ, ನ್ಯಾಯಕ್ಕೆ ಸಾಕ್ಷ್ಯವಹಿಸುವವರೂ ಆಗಿರಿ. ಒಂದು ವಿಭಾಗದ ಮೇಲಿನ ದ್ವೇಷವು, ನ್ಯಾಯದಿಂದ ವಿಮುಖರಾಗಲು ನಿಮ್ಮನ್ನು ಪ್ರೇರೇಪಿಸದಿರಲಿ. ನ್ಯಾಯ ಪಾಲಿಸಿರಿ. ಇದು ದೇವಭಯಕ್ಕೆ ಹೆಚ್ಚು ಹತ್ತಿರವಾದುದು” ಎಂದು ಕುರ್‌ಆನ್ (5:8) ಎಚ್ಚರಿಸುತ್ತದೆ.

ಈ ಸೂಕ್ತಗಳಲ್ಲಿ ವಿಶೇಷವಾಗಿ ಉಲ್ಲೇಖಿಸಿರುವ ವಿಷಯವೆಂದರೆ, ನ್ಯಾಯವು ಮುಸ್ಲಿಮ್, ಮುಸ್ಲಿಮೇತರ ಅಥವಾ ಶತ್ರುವೆಂಬ ಭೇದವಿಲ್ಲದೆ ಎಲ್ಲರಿಗೂ ಕಡ್ಡಾಯವಾಗಿದೆ. ಈ ಎಲ್ಲಾ ಸೂಕ್ತಗಳು ನ್ಯಾಯವು ಇಸ್ಲಾಮಿನ ಮೂಲಭೂತ ತತ್ವವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತವೆ ಮತ್ತು ಪ್ರವಾದಿ ಮುಹಮ್ಮದ್(ಸ) ಅವರು ನ್ಯಾಯದ ಅತಿ ದೊಡ್ಡ ಪ್ರತಿಪಾದಕರು ಎಂದು ತಿಳಿಸುತ್ತವೆ.

ಅದೇ ಸಂದರ್ಭದಲ್ಲಿ, “ನನಗೆ ನಿಮ್ಮ ನಡುವೆ ನ್ಯಾಯ ಪಾಲಿಸುವಂತೆ ಆಜ್ಞಾಪಿಸಲಾಗಿದೆ” ಎಂದು ಕುರ್‌ಆನಿನಲ್ಲಿ (42:15) ಪ್ರವಾದಿ(ಸ) ಅವರ ಜವಾಬ್ದಾರಿಯನ್ನು ವಿವರಿಸುತ್ತದೆ.

ಪ್ರವಾದಿ ಮುಹಮ್ಮದ್(ಸ) ಅವರ ಆದರ್ಶ ಜೀವನವು ಸಕಲ ಮಾನವರಿಗೆ ಮಾದರಿಯಾಗಿರುವುದರಿಂದ, ಅವರು ತಮ್ಮ ಕಾಲದಲ್ಲಿ ಯಾವ ರೀತಿ ನ್ಯಾಯವನ್ನು ಪ್ರತಿಷ್ಠಾಪಿಸಿದ್ದರು ಎಂಬುದನ್ನು ನಾವು ನೆನಪಿಸಿಕೊಳ್ಳಬೇಕಾಗಿದೆ.

ಪ್ರವಾದಿ ವಚನಗಳಲ್ಲಿ ನ್ಯಾಯದ ಸಾಕ್ಷ್ಯಗಳು

ತೀರ್ಪು ನ್ಯಾಯದ ಪರ, ಆಪ್ತ ಸಂಬಂಧಿಕರ ವಿರುದ್ಧವಾದರೂ ಸರಿ:

ಮದೀನಾದಲ್ಲಿ, ಹೆಸರಾಂತ ಮಕ್ಜೂಮ್ ಗೋತ್ರದ ಮಹಿಳೆಯೊಬ್ಬಳು ಕಳ್ಳತನ ಮಾಡಿದ ಪ್ರಸಂಗವೊಂದು ಬೆಳಕಿಗೆ ಬಂದಿತು. ಆಗ ಕೆಲವರು ಪ್ರವಾದಿ(ಸ) ಅವರ ಬಳಿ ಬಂದು, ಆಕೆಗೆ ನೀಡಲಾಗುವ ಶಿಕ್ಷೆಯನ್ನು ಮನ್ನಿಸುವಂತೆ ಮನವಿ ಮಾಡಿಕೊಂಡರು. ಆಗ ಪ್ರವಾದಿ ಮುಹಮ್ಮದ್(ಸ) ಅವರು, “ಅಲ್ಲಾಹನ ಆಣೆ! ಒಂದು ವೇಳೆ ಆ ಮಹಿಳೆಯ ಜಾಗದಲ್ಲಿ ನನ್ನ ಮಗಳು ಫಾತಿಮಾ ಕಳ್ಳತನ ಮಾಡಿದ್ದರೂ, ಖಂಡಿತವಾಗಿಯೂ ನಾನು ಅವಳ ಕೈ ಕತ್ತರಿಸುತ್ತಿದ್ದೆ” ಎಂದು ಹೇಳಿದರು. (ಸಹೀಹ್ ಬುಖಾರಿ, 6788)

ಈ ಘಟನೆಯು, ಕುಟುಂಬ ಅಥವಾ ಕುಲದ ಆಧಾರದ ಮೇಲೆ ನ್ಯಾಯವು ಬದಲಾಗುವುದಿಲ್ಲ ಎಂಬ ನೀತಿಯನ್ನು ಸಾರುತ್ತದೆ.

ನ್ಯಾಯಬದ್ಧ ತೀರ್ಪು, ಮುಸ್ಲಿಮೇತರರ ಪರವಾಗಿದ್ದರೂ ಸರಿ:

ಮದೀನಾದಲ್ಲಿ ಬನೀ ಝಫರ್ ಗೋತ್ರದ ವ್ಯಕ್ತಿಯೊಬ್ಬನು ಕಳ್ಳತನ ಮಾಡಿ, ಆ ವಸ್ತುವನ್ನು ಒಬ್ಬ ಯಹೂದಿಯ ಮನೆಯಲ್ಲಿ ಅಡಗಿಸಿಟ್ಟನು. ಕಳ್ಳತನದ ಸುದ್ದಿ ವ್ಯಾಪಕವಾಗಿ ಹರಡಿದಾಗ ಹುಡುಕಾಟ ನಡೆಸಲಾಯಿತು. ಆಗ, ಕಳುವಾದ ವಸ್ತುವು ಯಹೂದಿಯ ಮನೆಯಲ್ಲಿ ಸಿಕ್ಕಿತು. ಆದರೆ, ಆ ಯಹೂದಿಯು ತಾನು ಕಳ್ಳತನ ಮಾಡಿಲ್ಲವೆಂದು ವಾದಿಸಿದನು. ವಸ್ತುವು ಅವನ ಮನೆಯಲ್ಲಿ ಸಿಕ್ಕಿದ್ದರಿಂದ ಹಾಗೂ ಸಾಕ್ಷ್ಯಗಳು ಅವನ ವಿರುದ್ಧವಾಗಿದ್ದರಿಂದ, ಪ್ರವಾದಿಯವರು ಯಹೂದಿಯ ವಿರುದ್ಧ ತೀರ್ಪು ನೀಡಲು ಮುಂದಾದರು. ಆಗ ಅಲ್ಲಾಹನು ದಿವ್ಯವಾಣಿಯನ್ನು ಅವತೀರ್ಣಗೊಳಿಸಿದನು:
“ಓ ಪೈಗಂಬರರೇ, ಅಲ್ಲಾಹ್ ನಿಮಗೆ ತೋರಿಸಿಕೊಟ್ಟ ಪ್ರಕಾರ ಜನರ ನಡುವೆ ತೀರ್ಪು ನೀಡಲಿಕ್ಕಾಗಿ ನಾವು ನಿಮ್ಮ ಮೇಲೆ ಈ ಗ್ರಂಥವನ್ನು ಸತ್ಯಸಹಿತ ಅವತೀರ್ಣಗೊಳಿಸಿದ್ದೇವೆ. ನೀವು ಅಪ್ರಾಮಾಣಿಕರ ಪರವಾಗಿ ವಾದಿಸುವವರಾಗಬೇಡಿರಿ.” (ಕುರ್‌ಆನ್ 4:105)

ತದನಂತರ, ಪ್ರಕರಣದ ಬಗ್ಗೆ ಸೂಕ್ಷ್ಮವಾಗಿ ತನಿಖೆ ನಡೆಸಿ, ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಂಡು ಮುಸ್ಲಿಮನ ವಿರುದ್ಧ ಮತ್ತು ಯಹೂದಿಯ ಪರವಾಗಿ ತೀರ್ಪು ನೀಡಲಾಯಿತು.

ಈ ಘಟನೆಯು, ತೀರ್ಪು ನ್ಯಾಯದ ಆಧಾರದಲ್ಲಿರಬೇಕು, ಧರ್ಮದ ಆಧಾರದಲ್ಲಿ ಅಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ಮದೀನಾ ಒಪ್ಪಂದದ ನ್ಯಾಯದ ಅಂಶಗಳು:

ಪ್ರವಾದಿ ಮುಹಮ್ಮದ್(ಸ) ಅವರು ಮಕ್ಕಾದಿಂದ ಮದೀನಾಕ್ಕೆ ವಲಸೆ ಬಂದ ನಂತರ, ಅಲ್ಲಿನ ಎಲ್ಲಾ ವರ್ಗದ ಜನರೊಂದಿಗೆ ಒಂದು ಶಾಂತಿಯುತ ಒಪ್ಪಂದವನ್ನು ಮಾಡಿಕೊಂಡರು. ಇದನ್ನು “ಮೀಸಾಕ್-ಎ-ಮದೀನಾ” (ಮದೀನಾ ಒಪ್ಪಂದ) ಎಂದು ಕರೆಯಲಾಗುತ್ತದೆ. ಇತಿಹಾಸವು ಇದನ್ನು ವಿಶ್ವದ ಮೊಟ್ಟಮೊದಲ ಲಿಖಿತ, ಬಹುಧಾರ್ಮಿಕ ಸಂವಿಧಾನವೆಂದು ಪರಿಗಣಿಸಿದೆ. ಈ ಒಪ್ಪಂದವು ವಿಭಿನ್ನ ಧರ್ಮದ ಜನರಿಗೆ ನ್ಯಾಯಯುತವಾಗಿ ಒಂದೇ ನಗರದಲ್ಲಿ ಬದುಕುವ ಹಕ್ಕನ್ನು ನೀಡಿತ್ತು. ಅದರ ಕೆಲವು ಮುಖ್ಯಾಂಶಗಳು ಹೀಗಿವೆ:

  1. ಧಾರ್ಮಿಕ ಸ್ವಾತಂತ್ರ್ಯ ಮತ್ತು ರಕ್ಷಣೆ: ಪ್ರತಿಯೊಬ್ಬರಿಗೂ ತಮ್ಮ ಧರ್ಮವನ್ನು ಆಚರಿಸುವ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಯಿತು. ಪ್ರವಾದಿ(ಸ) ಅವರು, “ಯಾರಾದರೂ ಒಪ್ಪಂದ ಮಾಡಿಕೊಂಡ ಮುಸ್ಲಿಮೇತರ ವ್ಯಕ್ತಿಗೆ ಅನ್ಯಾಯ ಮಾಡಿದರೆ ಅಥವಾ ಅವನ ಹಕ್ಕನ್ನು ಕಸಿದುಕೊಂಡರೆ, ನ್ಯಾಯದ ದಿನದಂದು ನಾನು ಅವನ ವಿರುದ್ಧ ನಿಲ್ಲುತ್ತೇನೆ” ಎಂದು ಹೇಳಿದರು. (ಅಬೂದಾವೂದ್: 3052)
  2. ಸಮಾನತೆ ಮತ್ತು ಸಮೂಹ ನ್ಯಾಯ: ಎಲ್ಲರೂ ಕಾನೂನಿನ ದೃಷ್ಟಿಯಲ್ಲಿ ಸಮಾನರು. ಪ್ರವಾದಿ(ಸ) ಅವರು, “ಜನರೆಲ್ಲರೂ (ಧರ್ಮ ಭೇದವಿಲ್ಲದೆ) ಬಾಚಣಿಗೆಯ ಹಲ್ಲುಗಳಂತೆ ಸಮಾನರು” ಎಂದು ಹೇಳಿದರು. (ಮುಸ್ನದ್ ಅಹ್ಮದ್, 22978)
  3. ದ್ರೋಹ ಮತ್ತು ಅತಿಕ್ರಮಣ ನಿಷೇಧ: ಯಾರೂ ಇನ್ನೊಬ್ಬರ ಮೇಲೆ ದ್ರೋಹ ಅಥವಾ ಮೋಸ ಮಾಡಬಾರದು. ಪ್ರವಾದಿ(ಸ) ಅವರು, “ಯಾರ ನಾಲಿಗೆ ಮತ್ತು ಕೈಯಿಂದ ಇತರರು ಸುರಕ್ಷಿತವಾಗಿರುವರೋ ಅವನೇ ನಿಜವಾದ ಮುಸ್ಲಿಮನು” ಎಂದು ಹೇಳಿದರು. (ಬುಖಾರಿ:10)
  4. ಸಾಮೂಹಿಕ ರಕ್ಷಣೆ: ಮದೀನಾದ ಮೇಲೆ ಹೊರಗಿನಿಂದ ದಾಳಿ ನಡೆದರೆ, ಎಲ್ಲರೂ ಒಟ್ಟಾಗಿ ನಗರವನ್ನು ರಕ್ಷಿಸಬೇಕು.
  5. ನ್ಯಾಯದ ಆಧಾರದಲ್ಲಿ ತೀರ್ಪು: ಯಾವುದೇ ವಿವಾದವು ಪ್ರವಾದಿ(ಸ) ಅವರ ಬಳಿಗೆ ಬಂದರೆ, ಅವರು ನ್ಯಾಯದ ಆಧಾರದ ಮೇಲೆ ತೀರ್ಪು ನೀಡುತ್ತಾರೆ.
  6. ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ರಕ್ಷಣೆ: ಯಹೂದ್ಯರು ಮತ್ತು ಇತರ ಸಮುದಾಯಗಳನ್ನು ಸಹ ಒಂದೇ ಜನಾಂಗದ (ಉಮ್ಮತ್) ಭಾಗವೆಂದು ಪರಿಗಣಿಸಲಾಯಿತು ಮತ್ತು ಅವರಿಗೆ ಸಂಪೂರ್ಣ ರಕ್ಷಣೆ ನೀಡಲಾಯಿತು.

ಮದೀನಾ ಒಪ್ಪಂದವು ಕುರ್‌ಆನ್ ಮತ್ತು ಪ್ರವಾದಿ ವಚನಗಳ ತತ್ವಗಳ ಪ್ರಾಯೋಗಿಕ ಜಾರಿಗೆ ಅತ್ಯುತ್ತಮ ಉದಾಹರಣೆಯಾಗಿದೆ. ಈ ಮೂಲಕ ಪ್ರವಾದಿ ಮುಹಮ್ಮದ್(ಸ) ಅವರು 1475 ವರ್ಷಗಳ ಹಿಂದೆಯೇ ವಿಶ್ವದ ಮೊದಲ ಸಮಗ್ರ ಮತ್ತು ನ್ಯಾಯಾಧಾರಿತ ಸಂವಿಧಾನವನ್ನು ಸ್ಥಾಪಿಸಿದ್ದರು.

ಕೆಲಸಗಾರರು ಮತ್ತು ಸೇವರೊಂದಿಗೆ ನ್ಯಾಯ:

ಸೇವಕರನ್ನು ಶೋಷಣೆ ಮಾಡಲಾಗುತ್ತಿದ್ದ ಕಾಲದಲ್ಲಿ ಪ್ರವಾದಿ(ಸ) ಅವರು,
“ನಿಮ್ಮ ಸೇವಕರು ನಿಮ್ಮ ಸಹೋದರರಿದ್ದಂತೆ. ಅಲ್ಲಾಹನು ಅವರನ್ನು ನಿಮ್ಮ ಅಧೀನದಲ್ಲಿ ಇಟ್ಟಿದ್ದಾನೆ. ಆದ್ದರಿಂದ, ನೀವು ತಿನ್ನುವುದನ್ನೇ ಅವರಿಗೂ ತಿನ್ನಿಸಿ, ನೀವು ಧರಿಸುವುದನ್ನೇ ಅವರಿಗೂ ಧರಿಸಲು ಕೊಡಿ. ಅವರ ಸಾಮರ್ಥ್ಯ ಮೀರಿ ಕೆಲಸವನ್ನು ಹೇರಬೇಡಿ. ಒಂದುವೇಳೆ ಹೇರಿದರೆ, ನೀವೂ ಅವರಿಗೆ ಸಹಾಯ ಮಾಡಿ” ಎಂದು ಹೇಳಿದರು. (ಬುಖಾರಿ:30)

ಈ ವಚನವು ಕಾರ್ಮಿಕರೊಂದಿಗೆ ಸಮಾನತೆ, ಕರುಣೆ ಮತ್ತು ನ್ಯಾಯದಿಂದ ವರ್ತಿಸುವುದರ ಮಹತ್ವವನ್ನು ಸಾರುತ್ತದೆ.

ಇಂದು ನಮ್ಮ ಸಮಾಜದಲ್ಲಿ ಅಲ್ಪಸಂಖ್ಯಾತರು ಮತ್ತು ದಮನಿತರ ಮೇಲೆ ಶೋಷಣೆ ನಿರಂತರವಾಗಿದೆ. ಅನಾಚಾರ, ಅತ್ಯಾಚಾರ, ಕೊಲೆ-ಸುಲಿಗೆ, ಗುಂಪು ಹತ್ಯೆಗಳು ನಡೆಯುತ್ತಿವೆ. ಜಾತಿ ಆಧಾರಿತ ಭೇದಭಾವ ಮತ್ತು ಧರ್ಮಾಂಧತೆ ವ್ಯಾಪಕವಾಗಿ ಹರಡಿದ್ದು, ನ್ಯಾಯವು ಮರೀಚಿಕೆಯಾಗಿದೆ. ಇಂತಹ ಸಂದರ್ಭದಲ್ಲಿ, 6ನೇ ಶತಮಾನದಲ್ಲಿ ಪ್ರವಾದಿ ಮುಹಮ್ಮದ್(ಸ) ಅವರು ತಮ್ಮ ಆಡಳಿತದಲ್ಲಿ ಶಾಂತಿಯುತ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಸಮಾಜದ ಎಲ್ಲಾ ವರ್ಗದವರಿಗೂ ಶಾಂತಿಯನ್ನು ಒದಗಿಸಿ, ಅವರು ಜಾರಿಗೊಳಿಸಿದ ನ್ಯಾಯದಂತೆಯೇ ನಮ್ಮ ಕಾನೂನು ವ್ಯವಸ್ಥೆಯೂ ಬದಲಾದರೆ, ನಮ್ಮ ಸಮಾಜವು ಕಲ್ಯಾಣಮಯವಾಗಲು ಸಾಧ್ಯ.

LEAVE A REPLY

Please enter your comment!
Please enter your name here