ಲೇಖಕರುನಿಹಾಲ್ ಮುಹಮ್ಮದ್ ಕುದ್ರೋಳಿ.

2021 ರ ಒಲಂಪಿಕ್ಸ್ ನಲ್ಲಿ ಮಿಂಚಲಿದೆಯೇ ಭಾರತ?

ಒಲಿಂಪಿಕ್ಸ್ ವಿಶ್ವದಾದ್ಯಂತ ಜನರು ಕಾತರದಿಂದ ಕಾಯುವ ಮಹಾ ಕ್ರೀಡಾಕೂಟ. ಭಾರತದಿಂದ ಈ ಬಾರಿ ಟೋಕಿಯೋ ತಲುಪಲಿರುವ ಕ್ರೀಡಾಪಟುಗಳು ಯಾರೆಲ್ಲ? ಯಾರಿಂದ ಎಷ್ಟು ನಿರೀಕ್ಷಿಸಬಹುದು? ಎಷ್ಟು ಪದಕಗಳು ನಮ್ಮದಾಗಿಸಬಹುದು? ಈ ಬಾರಿ ಭಾರತವು ಎರಡನೇ ವೈಯುಕ್ತಿಕ ಚಿನ್ನದ ಪದಕ ತನ್ನದಾಗಿಸಬಹುದೇ? ಭಾರತದ ಇತಿಹಾಸದಲ್ಲೇ ಒಂದೇ ಒಲಿಂಪಿಕ್ಸ್ ನಲ್ಲಿ ಅತಿ ಹೆಚ್ಚು ಪದಕ ಮುಡಿಗೇರಿಸಿ ಇತಿಹಾಸ ಸೃಷ್ಟಿಸಬಹುದೇ? ಇಂತಹ ಹಲವಾರು ಕುತೂಹಲಕಾರಿ ಪ್ರಶ್ನೆಗಳು ಕ್ರೀಡಾಭಿಮಾನಿಗಳಲ್ಲಿ ಮನೆಮಾಡಿದೆ.

ಈ ಬಾರಿಯ ಒಲಿಂಪಿಕ್ಸ್ನಲ್ಲಿ 120 ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇದರಲ್ಲಿ ಐದು ಕನ್ನಡಿಗರು, ಮತ್ತಿಬ್ಬರು ಕರ್ನಾಟಕದ ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ತರಬೇತಿ ಪಡೆದಿರುವ ತಮಿಳುನಾಡಿನ ಕ್ರೀಡಾಪಟುಗಳು.
ಭಾರತವನ್ನು ಪ್ರತಿನಿಧಿಸಲಿರುವ ಆಟಗಾರರಲ್ಲಿ ಕನಿಷ್ಠ 10 ಕ್ರೀಡಾಪಟುಗಳು ವಿಶ್ವ ರಾಂಕಿಂಗ್ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಮಿಂಚುತ್ತಿದ್ದಾರೆ. ಇದಲ್ಲದೆ ಕೆಲವು ಆಟಗಾರರು ಇಡೀ ದೇಶವೇ ಹೆಮ್ಮೆಪಡುವಂತಹ ಅನೇಕ ಸಾಧನೆಗಳನ್ನು ಮಾಡಿದವರಾಗಿದ್ದಾರೆ. ಹೆಚ್ಚಿನ ಪದಕಗಳನ್ನು ಪಡೆಯುವ ನಿರೀಕ್ಷೆಯಿಲ್ಲದಿದ್ದರೂ, ಇವರು ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುವುದೇ ದೇಶದ ಬಹುದೊಡ್ಡ ಸಾಧನೆ. ಕೆಲವೊಂದು ಆಟಗಳು ಚಾಲ್ತಿಯಲ್ಲಿದೆಯೆಂದೂ ಬಹುತೇಕ ಭಾರತೀಯರಿಗೆ ತಿಳಿಯದೇ ಇರುವ ಸಮಯದಲ್ಲಿ ಈ ಸಾಹಸಿಗಳು ಈ ಕ್ರೀಡೆಗಳಲ್ಲಿ ಭಾರತವನ್ನು ಭೂಪಟಕ್ಕೆ ಪರಿಚಯಿಸಿದ್ದಾರೆ.
ಈ ಸಾಹಸಿಗಳ ಹೆಸರು ಹೀಗಿವೆ :
ಭವಾನಿ ದೇವಿ ಅವರು ಭಾರತವನ್ನು ಫೆಂನ್ಸಿಂಗ್ (ತಲ್ವಾರ್ ಬಾಝಿ) ನಲ್ಲಿ ಪ್ರತಿನಿಧಿಸಲಿದ್ದಾರೆ. ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತವನ್ನು ಫೆಂನ್ಸಿಂಗ್ ನಲ್ಲಿ ಪ್ರತಿನಿಧಿಸಲಿರುವ ಮೊದಲ ಕ್ರೀಡಾಪಟು ಇವರು. ಕರ್ನಾಟಕದವರಾದ ಫುವಾದ್ ಮಿರ್ಜಾರವರು ಭಾರತವನ್ನು ಇಕ್ವಸ್ಟ್ರಿಯಾನಿಸ್ಮ್ (ಕುದುರೆ ಓಟ) ದಲ್ಲಿ ಒಲಿಂಪಿಕ್ಸ್ನಲ್ಲಿ ಕಳೆದ 20 ವರ್ಷಗಳಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಮೊದಲ ಕ್ರೀಡಾಪಟುವಾಗಿದ್ದಾರೆ. ನೇತ್ರಾ ಕುಮನನ್ ಅವರು ಭಾರತವನ್ನು ಸೈಲಿಂಗ್ ನಲ್ಲಿ ಪ್ರತಿನಿಧಿಸುವ ಮೊದಲ ಮಹಿಳೆ ಎಂಬ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಸಜನ್ ಪ್ರಕಾಶ್ ರವರು ಅಟೋಮ್ಯಾಟಿಕ್ ಆಗಿ ಒಲಿಂಪಿಕ್ಸ್ನಲ್ಲಿ ಭಾಗವಹಿಸಲು ಅರ್ಹತೆ ಪಡೆದಿರುವ ಮೊದಲ ಭಾರತೀಯ ಈಜುಗಾರರಾಗಿದ್ದಾರೆ.
ಇದಲ್ಲದೇ ಇನ್ನೂ ಅನೇಕ ಕ್ರೀಡಾಪಟುಗಳಿಂದ ಪದಕದ ನಿರೀಕ್ಷೆಯಿವೆ. ಕೇವಲ ಊಹಾಪೋಹದ ನಿರೀಕ್ಷೆಗಳಲ್ಲ ಇವು. ಇತ್ತೀಚಿನ ಫಾರ್ಮ್ ಹಾಗೂ ವಿಶ್ವ ರಾಂಕಿಂಗ್ ಮೇಲೆ ಆಧಾರಿತವಾಗಿರುವ ನಿರೀಕ್ಷೆಗಳಿವೆ.
ಪದಕದ ನಿರೀಕ್ಷೆಯ ಕುರಿತು ಮಾತನಾಡುವಾಗ ಈ ಬಾರಿ ಎಲ್ಲರ ಕುತೂಹಲ ಹಾಗೂ ಹೆಚ್ಚಿನ ನಿರೀಕ್ಷೆಗೆ ಕಾರಣಕರ್ತಳಾದ ಆಟಗಾರ್ತಿ ಭಾರತವನ್ನು ಆರ್ಚರಿಯಲ್ಲಿ ಪ್ರತಿನಿಧಿಸುವ ದೀಪಿಕಾ ಕುಮಾರಿ. ಆರ್ಚರಿಯಲ್ಲಿ ಕೇವಲ ವರ್ಲ್ಡ್ ನಂಬರ್ 1 ರಾಂಕಿಂಗ್ ಮಾತ್ರವಲ್ಲದೆ ಇತ್ತೀಚೆಗೆ ಜೂನ್ ನಲ್ಲಿ ನಡೆದ ಆರ್ಚರಿ ವಿಶ್ವಕಪ್ನಲ್ಲಿ ಮೂರು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದರು. ಆದ್ದರಿಂದ ಈ ಬಾರಿಯ ಒಲಿಂಪಿಕ್ಸಿನಲ್ಲೂ ಇವರಿಂದ ಚಿನ್ನದ ಪದಕದ ನಿರೀಕ್ಷೆಗಳಿಡುವುದರಲ್ಲಿ ತಪ್ಪೇನಿಲ್ಲ. ಪತಿ ಅತಾನು ದಾಸ್ ಜೊತೆ ಮಿಕ್ಸೆಡ್ ಇವೆಂಟ್ ನಲ್ಲಿ ಕೂಡ ಚಿನ್ನದ ಪದಕದ ನಿರೀಕ್ಷೆಯಿದೆ. ಜೂನ್ ನಲ್ಲಿ ನಡೆದ ಪ್ಯಾರಿಸ್ ವಿಶ್ವಕಪ್ನಲ್ಲಿ ಇವರಿಬ್ಬರು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.

ವೆಯಿಟ್ ಲಿಫ್ಟರ್ ಮೀರಾಬಾಯಿ ಚಾನು ರವರು 49 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಹಿಂದೊಮ್ಮೆ ವಿಶ್ವ ಚಾಂಪಿಯನ್ ತನ್ನದಾಗಿಸಿಕೊಂಡ ಕ್ರೀಡಾಪಟುವಾಗಿದ್ದಾರೆ. ರಿಯೋ ಒಲಿಂಪಿಕ್ಸ್ನಲ್ಲಿಯು ಇವರಿಂದ ಪದಕದ ನಿರೀಕ್ಷೆಯಿತ್ತು. ಆದರೆ ಆ ಕಹಿ ನೆನಪುಗಳನ್ನು ಮರೆತು ಈ ಬಾರಿ ಪದಕವನ್ನು ಗೆಲ್ಲುವ ನಿರೀಕ್ಷೆ ನಮ್ಮೆಲ್ಲರದ್ದು. ಕಳೆದ ಬಾರಿ ಕ್ಲೀನ್ ಅಂಡ್ ಜೇರ್ಕ್ ಲಿಫ್ಟ್ ನಲ್ಲಿ ಇವರು ವಿಫಲರಾಗಿದ್ದರು, ಆದರೆ ಸಂತಸದ ವಿಷಯವೆಂದರೆ ಇತ್ತೀಚೆಗಷ್ಟೇ ಕ್ಲೀನ್ ಅಂಡ್ ಜೇರ್ಕ್ ಲಿಫ್ಟ್ ನಲ್ಲಿ ಇವರು ವಿಶ್ವದಾಖಲೆಯನ್ನು ಮಾಡಿದ್ದಾರೆ.

ಜಾವಲಿನ್ ಎಸೆತಗಾರ ನೀರಜ್ ಚೋಪ್ರಾ ಟ್ರ್ಯಾಕ್ ಮತ್ತು ಫೀಲ್ಡ್ ನಲ್ಲಿ ಭಾರತಕ್ಕೆ ಪದಕ ದೊರೆಯಬಹುದೆಂಬ ಬಹುದೊಡ್ಡ ನಿರೀಕ್ಷೆ ಕ್ರೀಡಾ ಪ್ರೇಮಿಗಳದ್ದು. ಇದಕ್ಕೆ ಮುಖ್ಯ ಕಾರಣ ಈ ವರ್ಷ ನೀರಜ್ ನ ಪರ್ಸನಲ್ ಅತಿ ಹೆಚ್ಚು ದೂರದ ಎಸೆತ 88.07 ಮೀ. ಈ ಬಾರಿಯ ಎಸೆತಗಳಲ್ಲಿ ನಾಲ್ಕನೆಯ ಸ್ಥಾನದಲ್ಲಿ ಈ ಸಂಖ್ಯೆ ಬರುತ್ತದೆ. ದೊಡ್ಡ ಸ್ಥರದಲ್ಲಿ ಉತ್ತಮ ಪ್ರದರ್ಶನ ನೀಡುವವರಲೊಬ್ಬರಾಗಿದ್ದಾರೆ ನೀರಜ್ ಚೋಪ್ರಾ. ಆದ್ದರಿಂದಲೇ ಅವರಿಂದ ಪದಕದ ಎಲ್ಲ ನಿರೀಕ್ಷೆಗಳಿವೆ.

ಇನ್ನು ಭಾರತವು ಪ್ರತಿ ಬಾರಿ ಅತಿ ಹೆಚ್ಚು ಪದಕಗಳನ್ನು ನಿರೀಕ್ಷಿಸುವ ಮೂರು ವಿಭಾಗಗಳು ಶೂಟಿಂಗ್, ಬಾಕ್ಸಿಂಗ್ ಮತ್ತು ರೆಸ್ಟ್ಲಿಂಗ್. 15 ಶೂಟರ್ ಗಳು ಭಾರತವನ್ನು ಈ ಬಾರಿ ಒಲಿಂಪಿಕ್ಸ್ನಲ್ಲಿ ಪ್ರತಿನಿಧಿಸಲಿದ್ದಾರೆ. ಇದರಲ್ಲಿ ಒಂಬತ್ತು ಶೂಟರ್ ಗಳು ವಿಶ್ವ ರಾಂಕಿಂಗ್ನಲ್ಲಿ ಮೊದಲ ಮೂರು ಸ್ಥಾನಗಳಲ್ಲಿದ್ದಾರೆ.
ಟೈಮ್ಸ್ ಮಾಗಝಿನ್ ನ ಈ ಬಾರಿಯ ಒಲಿಂಪಿಕ್ಸ್ನಲ್ಲಿ ನೋಡಲೇ ಬೇಕಾದಂತಹ 48 ಕ್ರೀಡಾಪಟುಗಳ ಪಟ್ಟಿಯಲ್ಲಿರುವ ಏಕೈಕ ಭಾರತೀಯ 19 ವರ್ಷದ ಸೌರಬ್ ಚೌಧರಿ. ಕೇವಲ 19 ವರ್ಷದ ಪ್ರಾಯದಲ್ಲಿ ಇವರು ಏಳು ವಿಶ್ವಕಪ್ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. 2018 ರಲ್ಲಿ ಕೇವಲ 16 ವರ್ಷ ಪ್ರಾಯದಲ್ಲಿ ಇವರು ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ವಿಜೇತರು. ಪ್ರಸ್ತುತ ಇವರು ವಿಶ್ವ ರಾಂಕಿಂಗ್ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಸಂತಸದ ವಿಷಯವೆಂದರೆ ಮೊದಲ ಸ್ಥಾನವನ್ನು ನಮ್ಮದೇ ದೇಶದ ಪಡೆದುಕೊಂಡಿದೆ. ಬಾರತದ ಕ್ರೀಡಾಪಟು ಅಭಿಷೇಕ್ ವರ್ಮರವರು 10 ಮೀ ಏರ್ ಫಿಸ್ಟೋಲ್ ವಿಭಾಗದಲ್ಲಿ ಮೊದಲನೆಯ ಸ್ಥಾನದಲ್ಲಿದ್ದಾರೆ.
ಸೌರವ್ಯೂಹದಲ್ಲಿ ಚೌದರಿಯವರ ಚಿನ್ನದ ಪದಕದ ಬಹುದೊಡ್ಡ ನಿರೀಕ್ಷೆ ಮಿಕ್ಸೆಡ್ ಇವೆಂಟ್ ನಲ್ಲಾಗಿದೆ. ಇಲ್ಲಿ ಇವರು ಇನ್ನೊಂದು 19 ವರ್ಷದ ಆಟಗಾರ್ತಿ ಮನು ಬಾಕರ್ ಅವರ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಇವರಿಬ್ಬರು ಈಗಾಗಲೇ ನಾಲ್ಕು ವಿಶ್ವಕಪ್ ಚಿನ್ನದ ಪದಕವನ್ನು ಗೆದ್ದಿದ್ದಾರೆ.

ಇದಲ್ಲದೆ ದಿವ್ಯಾಂಶ್ ಸಿಂಗ್ ಪನ್ವರ್, ಐಶ್ವರ್ಯ ಪ್ರತಾಪ್ ಸಿಂಗ್ ರವರಿಂದಲೂ ಪದಕದ ನಿರೀಕ್ಷೆ ಇದೆ. ದಿವ್ಯಾಂಶ್ ಸಿಂಗ್ ಅವರು 10 ಮೀ ಏರ್ ರೈಫಿಲ್ ಸ್ಪರ್ಧೆ ಯ ಮಹಿಳಾ ವಿಭಾಗದ ವರ್ಲ್ಡ್ ನಂಬರ್ ಒನ್ ಇಲಾವೆನಿಲ್ ವಲಾರಿವನ್ ಅವರ ಜೊತೆ ಮಿಕ್ಸೆಡ್ ಇವೆಂಟ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
25 ಮೀ ಪಿಸ್ಟೋಲ್ ವಿಭಾಗದಲ್ಲಿ ವಿಶ್ವ ರಾಂಕಿಂಗ್ ನಂಬರ್ 1 ಮತ್ತು ನಂಬರ್ 2 ಎರಡರಲ್ಲೂ ಭಾರತೀಯರೇ ಆಗಿರುವ ರಹಿ ಸರ್ನೋಬಾತ್ ಮತ್ತು ಮನು ಭಾಕರ್ ಸ್ಪರ್ಧಿಸುತ್ತಿದ್ದಾರೆ. 25 ಮೀಟರ್ ಪಿಸ್ತೋಲ್ ವಿಭಾಗದಲ್ಲಿ ಇವರು ಭಾರತವನ್ನು ಒಲಿಂಪಿಕ್ಸ್ನಲ್ಲಿ ಪ್ರತಿನಿಧಿಸಲಿದ್ದಾರೆ. ಶೂಟಿಂಗ್ ವಿಭಾಗದಲ್ಲಿ ಬಹಳಷ್ಟು ಪದಕಗಳ ನಿರೀಕ್ಷೆ ಇವೆ. ಇತಿಹಾಸದಲ್ಲೇ ಭಾರತವು ಈ ವಿಭಾಗದಲ್ಲಿ ಅತಿ ಹೆಚ್ಚು ಪದಕ ಅದರಲ್ಲೂ ಚಿನ್ನದ ಪದಕ ಗಳಿಸುವ ಎಲ್ಲ ನಿರೀಕ್ಷೆಗಳಿವೆ.

ರೆಸ್ಲಿಂಗ್ ನಲ್ಲಿ ವಿನೇಶ್ ಫೋಗಟ್ ಅವರು 57 ಕೆಜಿ ವಿಭಾಗದಲ್ಲಿ ನಂಬರ್ 1 ಸ್ಥಾನ ದಲ್ಲಿದ್ದಾರೆ. ರಿಯೋ ಒಲಿಂಪಿಕ್ಸ್ನಲ್ಲಿ ಗಾಯಗೊಂಡ ಬಳಿಕ ಈಗ ಅವರು ಅತ್ಯುತ್ತಮ ಫಾರ್ಮ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅದಲ್ಲದೆ ಮೂರು ಪುರುಷ ರೆಸ್ಲೆರ್ರ್ಗಳ ಮೇಲು ಕಣ್ಣಿಡಬೇಕಾಗಿದೆ. ಬಜರಂಗ್ ಪುನಿಯಾ ಮತ್ತು ದೀಪಕ್ ಪೂನಿಯ ಇಬ್ಬರು ತಮ್ಮ ತಮ್ಮ ವಿಭಾಗದಲ್ಲಿ ವರ್ಲ್ಡ್ ರಾಂಕಿಂಗ್ 2 ರಲ್ಲಿದಾರೆ. ಅದಲ್ಲದೆ ವರ್ಲ್ಡ್ ರಾಂಕಿಂಗ್ 4 ರಲ್ಲಿರುವ ರವಿಕುಮಾರ್ ಕೂಡ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಇನ್ನು ಬಾಕ್ಸಿಂಗ್ ನಲ್ಲಿ ಎಷ್ಟು ಪದಕ ಸಿಗಬಹುದೆಂದು ಕಾದು ನೋಡೋಣ. ಈ ಬಾರಿ ಭಾರತವು ದಾಖಲೆ ನಿರ್ಮಿಸಿದ 9 ಬಾಕ್ಸರ್ ಗಳನ್ನು ಟೋಕಿಯೋಗೆ ಕಳುಹಿಸುತ್ತಿದೆ. ಉದ್ಘಾಟನಾ ಸಮಾರಂಭದಲ್ಲಿ ಭಾರತದ ದ್ವಜ ಹಿಡಿಯುವ ಅದೃಷ್ಟ ಓರ್ವ ಬಾಕ್ಸರ್ ಹಾಗೂ 2012 ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ವಿಜೇತೆ ಮೇರಿ ಕಾಂ ಅವರದ್ದಾಗಿದೆ.
52 ಕೆಜಿ ವಿಭಾಗದಲ್ಲಿ ಅಮಿತ್ ಪಂಗಾಲ್ ರವರು ವರ್ಲ್ಡ್ ನಂಬರ್ 1 ರಾಂಕಿಂಗ್ ನಲ್ಲಿದ್ದಾರೆ. 2018 ಏಷ್ಯನ್ ಗೇಮ್ಸ್ ಅದೇ ರೀತಿ 2019 ಏಷ್ಯನ್ ಚಾಂಪಿಯನ್ಶಿಪ್ ನಲ್ಲಿ ಇವರು ಚಿನ್ನದ ಪದಕವನ್ನು ಗೆದ್ದಿದ್ದಾರೆ. 2019 ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಕೂಡ ತಮ್ಮದಾಗಿಸಿಕೊಂಡಿದ್ದರು. ಇವರ ಮೇಲೆ ಇಡೀ ಭಾರತವು ನಿರೀಕ್ಷೆಯಿಡಲಿದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಒಂದು ಹೆಸರನ್ನು ಪ್ರಸ್ತಾಪಿಸಲು ನಾನು ಮರೆತು ಹೋಗಿದ್ದೇನೆ ಎಂದು ನೀವು ಭಾವಿಸಿದ್ದರೆ ಖಂಡಿತ ಇಲ್ಲ, 2016 ರಿಯೋ ಒಲಿಂಪಿಕ್ಸ್ನಲ್ಲಿ ಬ್ಯಾಡ್ಮಿಂಟನ್ ನಲ್ಲಿ ಬೆಳ್ಳಿ ಪದಕ ಗೆದ್ದು ಇಡೀ ಭಾರತಕ್ಕೆ ಹೆಮ್ಮೆ ತಂದ ಪಿವಿ ಸಿಂದು ಅವರನ್ನು ಮರೆತು ಬಿಡಲು ಹೇಗೆ ಸಾಧ್ಯ. ಈ ಬಾರಿ ಕೂಡ ಇದೇ ರೀತಿಯ ಪ್ರದರ್ಶನದ ನಿರೀಕ್ಷೆ ಅವರ ಮೇಲಿದೆ. ಇದಲ್ಲದೆ ಇನ್ನೂ ಹಲವರಿಂದ ಪದಕದ ನಿರೀಕ್ಷೆಯಿದೆ. ‘ಒಲಿಂಪಿಕ್ಸ್’ ಆಟಗಾರರಿಗೆ ಎಷ್ಟು ಸ್ಪೂರ್ತಿದಾಯಕವೊ ವೀಕ್ಷಕರಿಗೂ ಅಷ್ಟೇ ಸ್ಪೂರ್ತಿದಾಯಕ. ಅದೆಷ್ಟೋ ಗಾಯಗಳ ನಂತರ ಪದಕ ಗೆದ್ದ ಕಥೆಗಳು. ತನ್ನ ಒಂದು ಕೈಯನ್ನು ಕಳೆದುಕೊಂಡವ ಇನ್ನೊಂದು ಕೈಯಿಂದ ಪದಕ ಗೆದ್ದ ಕಥೆ. ತನ್ನ ಓಟ ಆಟವನ್ನು ನಿಲ್ಲಿಸಿ ಗಾಯಗೊಂಡ ಜೊತೆ ಸ್ಪರ್ಧಾಳುಗಳಿಗಾಗಿ ಮಿಡಿದ ಕಥೆಗಳು. ಇನ್ನೆಷ್ಟೋ ಸಾಹಸಮಯ, ಸ್ಪೂರ್ತಿದಾಯಕ, ಹೃದಯವಿದ್ರಾವಕ, ಸಂತಸದಿಂದ ತುಂಬಿದ, ಕ್ರೀಡಾ ಮನೋಭಾವದಿಂದ ತುಂಬಿದ ಕಥೆಗಳು. ಈ ವರ್ಷದ ಒಲಿಂಪಿಕ್ಸ್ ಕೂಡ ಇಂತಹದೇ ಕಥೆಗಳಿಗೆ ಸಾಕ್ಷಿಯಾಗಲಿ ಎಂದು ಆಶಿಸುತ್ತಾ, ಭಾರತವು ಐತಿಹಾಸಿಕ ದಾಖಲೆಗಳನ್ನು ಸೃಷ್ಟಿಸಲಿ ಎಂಬ ಪ್ರಾರ್ಥನೆ ಹಾರೈಕೆ ನಮ್ಮೆಲರದ್ದು.

ರಿಫೆರೆನ್ಸ್ : ದಿ ಕ್ವಿನ್ಟ್

LEAVE A REPLY

Please enter your comment!
Please enter your name here