ಲೇಖಕರು : ಜೀಶಾನ್ ಮಾನ್ವಿ,
(ವಿದ್ಯಾರ್ಥಿ ಹೋರಾಟಗಾರ ಮತ್ತು ಸಾಮಾಜಿಕ ಕಾರ್ಯಕರ್ತ)

ಬಿ.ಎಸ್.ಯಡಿಯೂರಪ್ಪನವರ ರಾಜೀನಾಮೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ದಕ್ಷಿಣ ಭಾರತದಲ್ಲೇ ಬಿಜೆಪಿಯನ್ನು ಕಟ್ಟಿ ಬೆಳೆಸಿದ ನಾಯಕ ಗದ್ಗದಿತವಾಗಿ ತನ್ನ ಸ್ಥಾನಕ್ಕೆ ರಾಜಿನಾಮೆ ಘೋಷಿಸಿದ್ದಾನೆ.
ರಾಜ್ಯದ ಒಂದು ದೊಡ್ಡ ಸಮುದಾಯ ಹಾಗೂ ನೂರಾರು ಮಠಾಧೀಶರ ಬೆಂಬಲ ದೆಹಲಿ ದೊರೆಗಳ ಮುಂದೆ ನಡೆಯಲಿಲ್ಲ. ಕರ್ನಾಟಕದ ಇಷ್ಟು ಮಠಾಧೀಶರಿಂದ ತಮ್ಮದೇ ರಾಜ್ಯದ ಒಬ್ಬ ಮುಖ್ಯಮಂತ್ರಿಯನ್ನು ಉಳಿಸಿಕೊಳ್ಳಲಿಕ್ಕೆ ಆಗಲಿಲ್ಲವೆಂಬುದು ವಿಪರ್ಯಾಸ. ಈ ವಿದ್ಯಮಾನದಿಂದ ಹಿಂದುತ್ವ ರಾಜಕಾರಣವು ಕರ್ನಾಟಕಕ್ಕೆ ಮಾಡುತ್ತಿರುವ ಅವಮಾನಗಳ ಪರಂಪರೆಯನ್ನು ಮುನ್ನಡೆಸಿದಂತಿದೆ. ಜನರು ಆರಿಸಿ ಕಳಿಸಿದ ಶಾಸಕರುಗಳು ಎಲ್ಲಿ ಮುಖ್ಯಮಂತ್ರಿಯನ್ನು ಆರಿಸಬೇಕಾಗಿತ್ತೋ ಅಲ್ಲಿ ದುರಾದೃಷ್ಟವಶಾತ್ ದೆಹಲಿಯಿಂದ ಬರುವ ಲಕೋಟೆಗಳು ಮುಖ್ಯಮಂತ್ರಿ ಯಾರಾಗಬೇಕೆಂದು ನಿರ್ಧರಿಸುತ್ತಿವೆ. ಒಂದು ಕಾಲದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಲಕೋಟೆ ಸರ್ಕಾರ ಎಂದು ಬಿಂಬಿಸಲಾಗುತ್ತಿತ್ತು. ಇದೀಗ ಕಾಂಗ್ರೆಸನ್ನು ತೆಗಳಿ ಬಂದ ಬಿಜೆಪಿಯು ಸಹ ಅದಕ್ಕಿಂತ ಘೋರವಾಗಿ ಲಕೋಟೆ ಸಂಸ್ಕೃತಿಯನ್ನು ಮುನ್ನಡೆಸುತ್ತಿದೆ.

ಯಾವುದೇ ರಾಜ್ಯಗಳಲ್ಲಿ ಜನರಿಂದ ಆರಿಸಿ ಬಂದ ಜನನಾಯಕರುಗಳು ಕೇಂದ್ರಕ್ಕೆ ಬೇಕಾಗಿಲ್ಲ. ಮೋದಿ ಸರ್ಕಾರಕ್ಕೆ ಬೇಕಾಗಿರುವುದು ತಾವು ಹೇಳಿದ್ದನ್ನೆಲ್ಲಾ ತಲೆಯಾಡಿಸಿ ಕೇಳಿಕೊಂಡು ಹೋಗುವ ಮನಸ್ಥಿತಿಯ ಗುಲಾಮರು. ಯಡಿಯೂರಪ್ಪನವರಂತಹ ಹಠಮಾರಿ ರಾಜಕರಣಿಗೆ ಎದುರಿಸಲು ಕೇಂದ್ರದಿಂದ ಸಾಧ್ಯವಾಗಲಿಲ್ಲ. ವೋಟ್ ಕೇಳುವುದಿಂದ ಹಿಡಿದು ಸರ್ಕಾರ ನಡೆಸಲು ಸಹ ಮೋದಿ ಜಪ ಮಾಡಲೇಬೇಕು, ಸ್ವಾಭಿಮಾನದಿಂದ ಬದುಕುವವರಿಗೆ ಬಿಜೆಪಿಯಲ್ಲಿ ಜಾಗವಿಲ್ಲ, ಎಂಬುದನ್ನು ಬಿಜೆಪಿ ಮತ್ತೊಮ್ಮೆ ಸಾಬೀತು ಪಡಿಸಿದೆ. ಕರ್ನಾಟಕದ 25 ಲೋಕಸಭಾ ಸದಸ್ಯರಂತೆ ಕೈ ಕಟ್ಟಿ ನಿಲ್ಲುವ ನಾಯಕರಿಗೆ ಮಾತ್ರ ಬಿಜೆಪಿಯಲ್ಲಿ ಬೆಲೆ ಇದೆ. ಯಾಕೆಂದರೆ ಇವರು ಆರಿಸಿ ಬಂದಿರುವುದೇ ಮೋದಿ ಹೆಸರನ್ನು ಹೇಳಿಕೊಂಡು, ಮೋದಿಯ ಅಸ್ತಿತ್ವದಿಂದಲೇ ಇವರ ಅಸ್ತಿತ್ವ.

ಭಾರತ ಇರುವುದೇ ರಾಜ್ಯಗಳಿಂದ ಎಂಬ ಕನಿಷ್ಠ ಜ್ಞಾನ ಬಿಜೆಪಿಯ ಕೇಂದ್ರ ನಾಯಕರಿಗೆ ಇದ್ದಂತಿಲ್ಲ. ಕೇಂದ್ರವನ್ನು ತಾವೇ ಆಳಬೇಕು, ರಾಜ್ಯವನ್ನು ತಾವೇ ಆಳಬೇಕೆಂಬ ದುರಾಸೆ ಇವರನ್ನು ಅನಾಸ್ಥೆಗೆ ಒಳ ಪಡಿಸಿಬಿಟ್ಟಿದೆ. ರಾಜ್ಯದ ಎಲ್ಲಾ ಅಧಿಕಾರಗಳನ್ನು ಕಿತ್ತುಕೊಳ್ಳುವ ಮತ್ತು ರಾಜ್ಯಗಳನ್ನು ಅಘೋಷಿತ ಕೇಂದ್ರಾಡಳಿತ ಪ್ರದೇಶಗಳಾನ್ನಾಗಿ ಮಾಡುವ ಹುನ್ನಾರದ ಭಾಗ ಯಡಿಯೂರಪ್ಪನವರ ರಾಜೀನಾಮೆ. ಇದು ಕೇವಲ ಮುಖ್ಯಮಂತ್ರಿಯ ಬದಲಾವಣೆ ಮಾತ್ರವಲ್ಲ ಸಮಸ್ತ ಆಡಳಿತದ ಬದಲಾವಣೆ. ಇದಕ್ಕಿಂತ ದೊಡ್ಡ ಆಘಾತ ಒಕ್ಕೂಟ ವ್ಯವಸ್ಥೆಗೆ ಮತ್ತೊಂದಿಲ್ಲ.

1 COMMENT

  1. ಇದು ಲೇಖನ ಅಲ್ಲಾ ಕೇವಲ ಅನಿಸಿಕೆ ಥರ ಇದೆ. ಇನ್ನೂ ಪ್ರಬುದ್ಧ ಲೇಖನಗಳು ಬರಲಿ ಇಂಕ್ಡಬ್ಬಿಯಿಂದ

LEAVE A REPLY

Please enter your comment!
Please enter your name here