ಇತ್ತೀಚೆಗೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆಗೊಳಿಸಿರುವ ವರದಿಯು ಭಾರತದಲ್ಲಿ ಮಹಿಳೆಯರ ಸುರಕ್ಷತೆಯ ಶೋಚನೀಯ ಪರಿಸ್ಥಿತಿಯನ್ನು ಬಹಿರಂಗಪಡಿಸಿದೆ. 2024ರ ವರ್ಷದಲ್ಲಿ ಮಹಿಳೆಯರ ವಿರುದ್ಧ ನಡೆದಿರುವ ಅಪರಾಧಗಳ ದತ್ತಾಂಶಗಳನ್ನು ಎನ್ ಸಿಆರ್‌ಬಿ ಬಿಡುಗಡೆಗೊಳಿಸಿದ್ದು, ಇದು ದೇಶದಲ್ಲಿ ಸ್ತ್ರೀಯರು ಎದುರಿಸುತ್ತಿರುವ ಸುರಕ್ಷತೆಯ ಗಂಭೀರ ಅಪಾಯವನ್ನು ಬಯಲಿಗೆಳೆದಿದೆ. ಈ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಪ್ರತೀ ಹದಿನೆಂಟು ನಿಮಿಷಕ್ಕೊಂದರಂತೆ ಮಹಿಳೆಯರ ಮೇಲಿನ ಅತ್ಯಾಚಾರದ ಪ್ರಕರಣಗಳು ವರದಿಯಾಗುತ್ತಿದ್ದು ಪ್ರತೀ ಗಂಟೆಗೆ ಸರಾಸರಿ 50ರಷ್ಟು ಸ್ತ್ರೀಯರ ಮೇಲಿನ ಅಪರಾಧಗಳ ಪ್ರಕರಣಗಳು ದಾಖಲಾಗುತ್ತಿರುವುದು ಅತ್ಯಂತ ಕಳವಳಕಾರಿ.
ಎನ್ ಸಿ ಆರ್ ಬಿ ವರದಿಯಂತೆ 2024ರ ವರ್ಷವೊಂದರಲ್ಲಿ(2025 ರ ಅಂಕಿ ಅಂಶಗಳು ಇನ್ನೂ ಬಿಡುಗಡೆಗೊಂಡಿಲ್ಲ) ದಾಖಲಾಗಿರುವ ಮಹಿಳೆಯರ ಮೇಲಿನ ಹಿಂಸೆಗಳ ಒಟ್ಟು ಪ್ರಕರಣಗಳ ಸಂಖ್ಯೆ ಸರಿಸುಮಾರು 4,41,534! ಅಂದರೆ ಪ್ರತಿ ಗಂಟೆಗೆ ಸರಾಸರಿ 50 ರಷ್ಟು ಮಹಿಳೆಯರು ವಿವಿಧ ರೀತಿಯಲ್ಲಿ ಶೋಷಿಸಲ್ಪಡುತ್ತಿದ್ದಾರೆ. ಈ ಎಲ್ಲಾ ಪ್ರಕರಣಗಳು ಕೊಲೆ, ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಸಂಗಾತಿ ಹಾಗೂ ಕುಟುಂಬಸ್ಥರಿಂದ ಕಿರುಕುಳ, ಮಾನಭಂಗ, ಅಪಹರಣದಂತಹ ಗಂಭೀರ ಅಪರಾಧಗಳಿಂದ ಕೂಡಿದೆ. ಈ ಪ್ರಕರಣಗಳಲ್ಲಿ ಮಹಿಳೆಯು ತನ್ನ ಪರಿಚಿತರಿಂದಲೇ ಅತಿ ಹೆಚ್ಚು ಶೋಷಣೆಗೊಳಗಾಗಿರುವುದು ಗಮನಾರ್ಹ. ಇವುಗಳ ಪೈಕಿ 28,597 (ಶೇ.97)ಪ್ರಕರಣಗಳಲ್ಲಿ ಅಪರಾಧಿಗಳು ಸಂತ್ರಸ್ತರ ಸಂಗಾತಿಗಳು, ಕುಟುಂಬಸ್ಥರು, ಗೆಳೆಯರು, ಸಹೋದ್ಯೋಗಿಗಳು, ನೆರೆಹೊರೆಯವರು ಹಾಗೂ ಇನ್ನಿತರ ಪರಿಚಯಸ್ತರಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖವಾಗಿರುವುದು ವಿಪರ್ಯಾಸ.
ದೇಶದಲ್ಲಿ ಗಣನೀಯ ಸಂಖ್ಯೆಯಲ್ಲಿ ಏರುತ್ತಿರುವ ಅತ್ಯಾಚಾರ ಪ್ರಕರಣಗಳ ವರದಿಯು ಮಹಿಳಾ ಸುರಕ್ಷತೆಯ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿವೆ. 2024ರ ವರ್ಷವೊಂದರಲ್ಲಿ ದೇಶದಲ್ಲಿ ಒಟ್ಟು 29,536 ಅತ್ಯಾಚಾರದ ಪ್ರಕರಣಗಳು ದಾಖಲಾಗಿದ್ದು, ಪ್ರತಿ ಹದಿನೆಂಟು ನಿಮಿಷಗಳಿಗೆ ಒಂದು ಅತ್ಯಾಚಾರದ ಘಟನೆಗಳು ವರದಿಯಾಗುತ್ತಿದೆ. ಈ ಮಟ್ಟದಲ್ಲಿ ಮಹಿಳೆಯರ ಹಕ್ಕುಗಳು ಉಲ್ಲಂಘನೆಯಾಗುತ್ತಿರುವುದು ಚಿಂತನಾರ್ಹವಾಗಿದ್ದು ದೇಶವು ಸ್ತ್ರೀಯರಿಗೆ ಸುರಕ್ಷಿತವೇ ಎಂಬ ಪ್ರಶ್ನೆಯನ್ನು ದೇಶದ ಜನರ ಮುಂದಿಟ್ಟಿದೆ.
ಇನ್ನು ದಾಖಲಾಗಿರುವ ಪ್ರಕರಣಗಳ ವಿಚಾರಣೆಯ ವೇಗವು ಅತ್ಯಂತ ಕುಂಠಿತವಾಗಿದ್ದು, ಹೆಚ್ಚಿನ ಪ್ರಕರಣಗಳಲ್ಲಿ ಸಂತ್ರಸ್ತರು ನ್ಯಾಯದಿಂದ ವಂಚಿತರಾಗಿದ್ದಾರೆ. 2024 ರ ವರ್ಷದಲ್ಲಿ ಒಟ್ಟು 2,06,777 ಪ್ರಕರಣಗಳನ್ನು (ಹಿಂದಿನ ವರ್ಷಗಳ 1,82,163 ಪ್ರಕರಣಗಳನ್ನು ಸೇರಿ) ವಿಚಾರಣೆಗೆ ಒಳಪಡಿಸಬೇಕಾಗಿತ್ತು. ಆದರೆ ಇವುಗಳ ಪೈಕಿ 24,614 ಪ್ರಕರಣಗಳಲ್ಲಿ ಮಾತ್ರ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಕೇವಲ 5032 ಪ್ರಕರಣಗಳು ಇತ್ಯರ್ಥಗೊಂಡು ಆರೋಪಿಗಳ ದೋಷಾರೋಪಣೆ ಸಾಬೀತಾಗಿದೆ. 2024 ರ ವರ್ಷಾಂತ್ಯದಲ್ಲಿ ವಿಚಾರಣೆಗೆ ಬಾಕಿ ಇರುವ ಒಟ್ಟು ಪ್ರಕರಣಗಳ ಸಂಖ್ಯೆ ಸರಿಸುಮಾರು 1,85,785! ಅಂದರೆ ಅಂದಾಜು ಶೇಕಡ 90ರಷ್ಟು ಪ್ರಕರಣಗಳು ಯಾವುದೇ ವಿಚಾರಣೆಗೊಳಪಡಿಸದೆ ಬಾಕಿಯುಳಿದಿರುವುದು ನ್ಯಾಯಾಂಗ ವ್ಯವಸ್ಥೆಯಲ್ಲಿ ಆಗಿರುವ ಗಂಭೀರ ಲೋಪಗಳಿಗೆ ಕನ್ನಡಿ ಹಿಡಿದಂತಿದೆ. ದೇಶದಲ್ಲಿ ಉನ್ನತ ಮಟ್ಟದ ಕಾನೂನುಗಳಿದ್ದರೂ ಹೆಚ್ಚಿನ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ನ್ಯಾಯವು ಮರೀಚಿಕೆಯಾಗಿಯೇ ಉಳಿದಿರುವುದು ದೇಶದ ಕಾನೂನು ಸುವ್ಯವಸ್ಥೆಯ ವೈಫಲ್ಯತೆಗಳನ್ನು ಎತ್ತಿ ತೋರಿಸುತ್ತದೆ.
ಈ ಎಲ್ಲಾ ಅಂಕಿ ಅಂಶಗಳು ದೇಶದಲ್ಲಿ ಮಹಿಳಾ ಸುರಕ್ಷತೆಯ ನೈಜ ಚಿತ್ರಣವನ್ನು ನಮ್ಮ ಕಣ್ಣ ಮುಂದಿಡುತ್ತದೆ. ಒಂದು ಕಡೆ ಮಹಿಳೆಯು ರಾಷ್ಟ್ರಪತಿ, ಪ್ರಧಾನಿ ಯಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಿ ರಾಷ್ಟ್ರಭಿವೃದ್ಧಿಯಲ್ಲಿ ತಮ್ಮದೇ ಕೊಡುಗೆಯನ್ನು ನೀಡುತ್ತಿದ್ದರೆ, ಇನ್ನೊಂದು ಕಡೆ ತನ್ನನ್ನು ಸಂರಕ್ಷಿಸಬೇಕಾದ ಕುಟುಂಬಸ್ಥರು ಹಾಗೂ ಪರಿಚಯಸ್ತರಿಂದಲೇ ಅತೀ ಹೆಚ್ಚು ಶೋಷಣೆಗೊಳಗಾಗುತ್ತಿರುವುದು ಅತ್ಯಂತ ದುರದೃಷ್ಟಕರ. ಇಂತಹ ಬೆಳವಣಿಗೆಗಳು ಸ್ತ್ರೀ ಸಮಾನತೆ, ಮಹಿಳಾ ಸ್ವಾತಂತ್ರ್ಯ ದಂತಹ ಸಂವಿಧಾನದ ಆಶಯಗಳಿಗೆ ಗಂಭೀರ ಸವಾಲೆಸೆದಿರುವುದಂತೂ ಸತ್ಯ. ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಜಾರಿಗೊಳಿಸುವುದರೊಂದಿಗೆ ಅನ್ಯಾಯಕ್ಕೊಳ್ಳಗಾಗಿರುವ ಸ್ತ್ರೀಯರಿಗೆ ತ್ವರಿತವಾಗಿ ನ್ಯಾಯ ಸಿಗುವಂತೆ ಮಾಡಿ, ಸ್ತ್ರೀಯರ ಸ್ಥಾನಮಾನವನ್ನು ಭದ್ರ ಪಡಿಸುವುದು ಸರಕಾರದ ಆದ್ಯ ಕರ್ತವ್ಯವಾಗಿದೆ. ಅದೇ ರೀತಿಯಲ್ಲಿ ಸ್ತ್ರೀ ಪುರುಷರೆಲ್ಲರೂ ಪರಸ್ಪರರನ್ನು ಗೌರವಿಸಿ ಸಮಾನತೆಯಿಂದ ಕೂಡಿದ ಜೀವನವನ್ನು ನಡೆಸಿದಾಗ ಮಾತ್ರ ಮಹಿಳೆಯರ ಸುರಕ್ಷತೆಯನ್ನು ಖಾತರಿಪಡಿಸಲು ಸಾಧ್ಯ. ಈ ನಿಟ್ಟಿನಲ್ಲಿ ಸಮಾಜದ ಎಲ್ಲ ವರ್ಗದ ಜನರು ಪರಸ್ಪರ ಹಕ್ಕುಗಳನ್ನು ಸಂರಕ್ಷಿಸಿ, ಭವ್ಯ ಭಾರತದ ನಿರ್ಮಾಣದೆಡೆಗೆ ಪರಿಶ್ರಮಿಸಬೇಕಾಗಿದೆ.
ಮೂಲ: NCRB “Crime in India 2024” ವರದಿ















































