✍ಮನ್ಸೂರ್ ಅಹ್ಮದ್ ಬಿನ್ ಅಬ್ದುಲ್ಲಾ ಸಾಮಣಿಗೆ

ಭಾರತದ ಪ್ರಮುಖ ಶಕ್ತಿ ಅದರ ದೃಢವಾದ ಸಾಮಾಜಿಕ ವ್ಯವಸ್ಥೆಯಾಗಿದೆ. ಈ ವಿಶಾಲ ದೇಶದಲ್ಲಿ ಇಷ್ಟೊಂದು ವಿವಿಧ ಧಾರ್ಮಿಕ ಮತ್ತು ಸಾಂಸ್ಕøತಿಕ ವರ್ಗಗಳ ಅಸ್ತಿತ್ವ ಮತ್ತು ಶತಮಾನಗಳಿಂದ ಅವುಗಳ ಮಧ್ಯೆ ಸಾಮಾಜಿಕ ನೆಲೆಯಲ್ಲಿ ಇರುವ ಸಾಮರಸ್ಯದ ಇಂತಹ ಉದಾಹರಣೆ ಪ್ರಪಂಚದಲ್ಲಿ ಬೇರೆಲ್ಲಿಯೂ ಕಾಣಲು ಸಾಧ್ಯವಿಲ್ಲ. ಈ ಸ್ಥಿತಿಯು ಇಡೀ ಪ್ರಪಂಚದಲ್ಲಿ ನಮ್ಮ ದೇಶದ ಗೌರವ ಮತ್ತು ಶಕ್ತಿಯನ್ನು ಹೆಚ್ಚಿಸಿದೆ. ಸ್ವಾತಂತ್ರ್ಯದ ನಂತರ ರಚಿಸಲ್ಪಟ್ಟ ದೇಶದ ಸಂವಿಧಾನವೂ ಧಾರ್ಮಿಕ ಸ್ವಾತಂತ್ರ್ಯ ಮತ್ತು ವಿವಿಧ ಧಾರ್ಮಿಕ ವರ್ಗಗಳ ಮಧ್ಯೆ ಶಾಂತಿ ಮತ್ತು ಸಹೋದರತೆಗೆ ಬಲವಾದ ಬುನಾದಿಯನ್ನು ಒದಗಿಸಿದೆ.
ಇತ್ತೀಚಿನ ಕೆಲವು ವರ್ಷಗಳಿಂದ ದೇಶದ ಈ ಭದ್ರವಾದ ಸಾಮಾಜಿಕ ವ್ಯವಸ್ಥೆಯು ತೀವ್ರವಾದ ಪಂಥಾಹ್ವಾನಗಳನ್ನು ಎದುರಿಸುತ್ತಿದೆ. ಕೋಮು ಸೌಹಾರ್ದತೆ ವೇಗವಾಗಿ ಕೆಡುತ್ತಿದೆ. ಕೋಮುವಾದಿ ಶಕ್ತಿಗಳು ತಮ್ಮ ರಾಜಕೀಯ ಗೆಲುವು ಮಾತ್ರವಲ್ಲ ರಾಜಕೀಯ ಅಸ್ತಿತ್ವವೇ ಕೋಮು ವೈಷಮ್ಯವನ್ನು ಹೊಂದಿಕೊಂಡಿವೆಯೆಂದು ಚೆನ್ನಾಗಿ ಮನಗಂಡಿವೆ. ಈ ಧ್ರುವೀಕರಣ ಹೆಚ್ಚಿದಷ್ಟು ಅವರ ಯಶಸ್ಸು ಹೆಚ್ಚುತ್ತದೆ. ಆದ್ದರಿಂದ ಅವರು ಸಂಪೂರ್ಣ ದೇಶವನ್ನು ವಿಶೇಷತಃ ಸೂಕ್ಷ್ಮ ರಾಜ್ಯಗಳನ್ನು ನಿರಂತರ ಕೋಮುವೈಷಮ್ಯ ಮತ್ತು ಒತ್ತಡದಲ್ಲಿರಿಸಲು ಬಯಸುವಂತೆ ಭಾಸವಾಗುತ್ತದೆ.
 ಭಾರತದಲ್ಲಿ ಎಂದಿನಿಂದ ಸಮಾಜ ಕಂಟಕವಾದ ಕೋಮುದಾದ ಎನ್ನುವ ಶಬ್ದ ಹುಟ್ಟಿಕೊಂಡಿತೋ ಅಂದಿನಿಂದ ಸಮಾಜ ಒಡೆಯುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ.ಹಿಂದೂ ಮುಸ್ಲಿಮ್ ಸಹಭಾಳ್ವೆ ನಡೆಸುವುದು ಬಿಡಿ, ಹಿಂದೂ-ಮುಸ್ಲಿಮರ ಸ್ನೇಹಿತರಾಗಿದ್ದರೂ ಮಾತನಾಡುವುದು ಕಂಡರೆ ನೈತಿಕ ಪೊಲೀಸ್ ಗಿರಿ ಮೆರೆದು ಥಳಿಸುವ ಒಂದು ದುಷ್ಟರ ಗುಂಪೇ ದೇಶದಲ್ಲಿ ಕಾರ್ಯಾಚರಿಸುತ್ತಿದೆ. 
ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಆತನ ಧರ್ಮದಿಂದ ಅಳೆಯದೆ, ಆತನೂ ಓರ್ವ ಮಾನವ ಎಂಬ ಅಳತೆಗೋಲಿನಿಂದ ಮಾತ್ರ ಅಳೆಯಲು ಪವಿತ್ರ ಇಸ್ಲಾಂ ನಿರ್ದೇಶಿಸುತ್ತದೆ.ಕೋಮು ಆಧಾರದಲ್ಲಿ ಜನರನ್ನು ವಿಭಜಿಸಿ ಕೋಮು ಕಲಹಗಳನ್ನು ಸೃಷ್ಟಿಸುವುದನ್ನು ಪವಿತ ಇಸ್ಲಾಂ ಯಾವತ್ತೂ ಒಪ್ಪುವುದಿಲ್ಲ,ಅಲ್ಲದೆ ಕೋಮುವಾದದ ಬಗ್ಗೆ ಪ್ರವಾದಿ ಮೊಹಮ್ಮದ್ (ಸ.ಅ) ಹೇಳುತ್ತಾರೆ “ಒಬ್ಬ ತಪ್ಪು ಮಾಡಿದಾಗ ಆತ ತನ್ನ ಸಮುದಾಯದವ ಎಂಬ ಕಾರಣಕ್ಕೆ ಆತನ ತಪ್ಪನ್ನು ಸಮರ್ಥಿಸುವುದಾದರೆ ಅಥವಾ ಆತನಿಗೆ ಸಹಾಯವನ್ನು ಮಾಡುವುದಾದರೆ ಅದು ಕೋಮುವಾದವಾಗುತ್ತದೆ.ಕೋಮುವಾದವನ್ನು ಸಮಾಜದಲ್ಲಿ ಪ್ರಚುರಪಡಿಸುವವನು,ಕೋಮುವಾದವನ್ನು ಬೆಂಬಲಿಸುವವನು,ಅದಕ್ಕೆ ಸಹಾಯಮಾಡುವವನು,ಅದಕ್ಕಾಗಿ ಜೀವ ತೆರುವವನು ನನ್ನವನಲ್ಲ”.ಪವಿತ್ರ ಇಸ್ಲಾಂ ಧರ್ಮವನ್ನು ಆಳವಾಗಿ ಅಧ್ಯಯನ ಮಾಡಿದರೆ ಪವಿತ್ರ ಇಸ್ಲಾಂ ಧರ್ಮವು ಶಾಂತಿ,ಸೌಹಾರ್ದತೆಯನ್ನೇ ಈ ಜಗತ್ತಿಗೆ ಸಾರಿ ಸಾರಿ ಎಂಬುದು ಸ್ಪಷ್ಟವಾಗುತ್ತದೆ.
ಭಾರತ ಹಿಂದೆಂದೂ ಕಂಡರಿಯದ ಬಿಕ್ಕಟ್ಟಿಗೆ ಇಂದು ಸಿಲುಕಿದೆ.ದೇಶದ ಬಹುಜನರ ಭಾವನೆ ಮತ್ತು ಬದುಕಿಗೆ ತೀವ್ರ ಸವಾಲೊಡ್ಡಿರುವ ಕೋಮುವಾದ ವ್ಯಾಪಕವಾಗುತ್ತಿದೆ.ಪರಸ್ಪರ ಸ್ನೇಹ ಸಹಬಾಳ್ವೆಗೆ ಮತ್ತು ಶಾತಿಯುತ ಬದುಕಿಗೆ ಹೆಸರಾಗಿದ್ದ ಭಾರತೀಯ ಸಮಾಜ ಈಗ ಕೋಮುದಳ್ಳುರಿಗೆ ಸಿಲುಕಿ ನರಳುತ್ತಿದೆ.ನಾವು ಇಂದು ಅತ್ಯಂತ ಆತಂಕದ ಸ್ಥಿತಿಯಲ್ಲಿದ್ದೇವೆ.ಮನುಷ್ಯನ ಸಾಮಾಜಿಕ,ಆರ್ಥಿಕ ಮತ್ತು ಸಾಂಸ್ಕೃತಿಕ ಅಭಿವ್ರುದ್ದಿಯ ಕುರಿತು ಮಾಡಬೇಕಾದ ಚಿಂತನೆಗೆ ಬೇಕಾದ ಸಮಯವನ್ನು ಕೋಮುವಾದದ ವಿರುದ್ಧ ಹೋರಾಡಲು ಬಳಸುವ ಪರಿಸ್ಥಿತಿ ಬಂದೊದಗಿದೆ. ಸಮಾಜದಲ್ಲಿ ಕೋಮು ಸೌಹಾರ್ದವು ಸಹಜವಾಗಿ ಇರುವಂಥ ವಾತಾವರಣವಿದ್ದಾಗ ಮಾತ್ರ ಮಾನವ ಅಭಿವ್ರುದ್ದಿ ಪಥದಲ್ಲಿ ಮುಂದುವರಿಯಲು ಸಾಧ್ಯ.
ಹಲವು ಧರ್ಮ, ಬಹುಭಾಷೆ, ಹಲವು ಸಮುದಾಯ, ವಿವಿಧ ಜನಾಂಗೀಯ ಸಾಂಸ್ಕ್ರತಿಕ ಬಹುತ್ವ ಎಲ್ಲವನ್ನೂ ಏಕ ಸೂತ್ರದಲ್ಲಿ ಬೆಸೆದು ಅನೇಕತೆಯಲ್ಲಿ ಏಕತೆಯನ್ನು ಸಾಧಿಸಿ ವಿಶ್ವದಲ್ಲೇ ಅತ್ಯಂತ ಶ್ರೇಷ್ಟತೆ ಪಡೆದ ಪ್ರಜಾಪ್ರಭುತ್ವ ಸಂವಿಧಾನ ದೇಶವಾಗಿದೆ ಭಾರತ .ಅಂದು ರಾಷ್ಟ್ರಪಿತ ಗಾಂಧೀಜಿಯವರು ಭಾರತಕ್ಕೆ ಯಾವ ರೀತಿ ಆಡಳಿತ ಬೇಕೆಂದು ಯೋಚಿಸಿದಾಗ ಅವರು  ಆಶಿಸಿದ್ದು ಅರೇಬಿಯಾದ ಆಡಳಿತಗಾರರಾದ ಹಝ್ರತ್ ಉಮರ್ (ರ)ರವರ ಆಡಳಿತ ಶೈಲಿ. ಯಾಕೆಂದರೆ ಉಮರ್ (ರ) ಆಡಳಿತದಲ್ಲಿ ದೊರಕಿದ ಹಾಗೆ  ಜನತೆಗೆ ನ್ಯಾಯ ಶಾಂತಿ ಸುಭಿಕ್ಷೆಯ ಬದುಕನ್ನು ಗಾಂಧೀಜಿಯವರು ಭಾರತೀಯರಿಗೆ ಕಲ್ಪಿಸಿದ್ದರು . ಆದರೆ ರಾಷ್ಟ್ರಪಿತರ ಕನಸ್ಸು ನನಸಾಗಲಿಲ್ಲ. ಹಾಗೆಯೇ ದೇಶದ ಮಾಜಿ ರಾಷ್ಟ್ರಪತಿಯವರಾದ ಡಾ.ಎ.ಪಿ.ಜೆ ಅಬ್ದುಲ್ ಕಲಾಂರವರು ಕೂಡ  ಭಾರತವು ಭವಿಷ್ಯದಲ್ಲಿ ಸ್ವಾತಂತ್ರ್ಯ ,ಅಭಿವೃಧ್ಧಿ ಹಾಗೂ ಬಲಿಷ್ಟ ರಾಷ್ಟ್ರವಾಗ ಬೇಕೆಂದು  ಕನಸ್ಸು ಕಂಡಿದ್ದರು. ಎಲ್ಲರ ಬಾಯಲ್ಲಿ  “ಮೇರಾ ಭಾರತ್ ಮಹಾನ್”ಎಂದು ಅನಿಸಿಕೊಳ್ಳುತ್ತಿದ್ದ  ಭಾರತದ  ಪರಿಸ್ಥಿತಿ ಈಗ  ಹೇಗಿದೆ ಅಂದ್ರೆ ಊಹಿಸಲೂ ಸಾಧ್ಯವಿಲ್ಲದಂತಾಗಿದೆ. ಎಲ್ಲೆಡೆ  ಕ್ಷೋಭೆ ,ಧ್ವೇಷ ಅರಾಜಕತೆ ,ಮತೀಯವಾದ ಕೋಮು ಸಂಘರ್ಷ ,ಕೊಲೆಗಳು ಹೆಚ್ಚಿವೆ. ಲಕ್ಷ ಗಟ್ಟಲೆ ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ,  ಭಯೋತ್ಪಾದನೆ, ಭ್ರಷ್ಟಾಚಾರ,  ನಿರುದ್ಯೋಗ ಸಮಸ್ಯೆ, ಕಲಹ ,ದೌರ್ಜನ್ಯ ,ಅಶಾಂತಿ,ಅನೈತಿಕತೆ . ಸಾಮಾಜಿಕ ಅಭದ್ರತೆ , ಗೂಂಡಾಗಿರಿ, ಸ್ತ್ರೀ ಹಿಂಸೆ,  ಗಲಭೆ ದಂಗೆಗಳ ಮಧ್ಯೆ ಭಾರತೀಯರ ಬದುಕು ಅಸ್ತವ್ಯಸ್ತವಾಗಿದೆ . ಇನ್ನು ದಲಿತರು, ದಮನಿತರು,ಅಲ್ಪ ಸಂಖ್ಯಾತರು ಅಸುರಕ್ಷಿತರಾಗಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ.
ಕೋಮುವಾದಿ ಶಕ್ತಿಗಳಿಂದ ದೇಶವು ಅಪಾಯದ ಅಂಚಿನಲ್ಲಿದ್ದು  ಸ್ವತಂತ್ಯ ಭಾರತದಲ್ಲಿ ನಾವು ಹಿಂದೆಂದೂ ಕಾಣದ ಕ್ಷಿಷ್ಟಕರ ಪರಿಸ್ಥಿತಿ ಅನಾವರಣಗೊಂಡಿದೆ . ಅಚ್ಚೆ ದಿನ್ “ಎಂಬ ಮಾತಿನಲ್ಲಿ “ಸಬ್ ಕಾ ಸಾಥ್  ಸಬ್ ಕಾ ವಿಶ್ವಾಸ್” ಎಂಬ ಪೊಳ್ಳು ಭರವಸೆಯ ಘೋಷಣೆಯ ಮೂಲಕ  ಭಾರತವನ್ನು  ಅಭಿವೃಧ್ಧಿ ಗೊಳಿಸುತ್ತಿದ್ದೇವೆಂದು ಹೇಳುತ್ತಾ ಜನಸಾಮಾನ್ಯರನ್ನು  ದಾರಿತಪ್ಪಿಸುತ್ತಿರುವ ಸರ್ವಾಧಿಕಾರಿಗಳ ಸ್ಥಾನದಲ್ಲಿರುವ ನಾಯಕರು  ಮೊದಲು  ಜಾಗೃತರಾಗಿ  ಭಾರತವನ್ನು  ಪ್ರಜೆಗಳನ್ನೂ ಅಪಾಯದ ಅಂಚಿನಿಂದ ರಕ್ಷಿಸಬೇಕಾಗಿದೆ. 
ಇತ್ತೀಚೆಗೆ ಕೇಂದ್ರ ಸರಕಾರವು  ಜಾರಿಗೊಳಿಸಿದ ಪೌರತ್ವ ಕಾಯ್ದೆ ನೀತಿಯಿಂದ ಈಗಾಗಲೇ ಜನಸಾಮಾನ್ಯರ ಜೀವನದ ಮೇಲೆ ದುಷ್ಪರಿಣಾಮವುಂಟಾಗಿದೆ .ಸರ್ಕಾರದ ಈ ಅನೀತಿ ಅನ್ಯಾಯದ ವಿರುಧ್ಧ ದೇಶದ ಎಲ್ಲಾ ಕಡೆಗಳಲ್ಲಿ ಪ್ರಜೆಗಳು ತಂಡೋಪ ತಂಡವಾಗಿ  ಮಕ್ಕಳು  ಮನೆ  ಸೂರುಗಳನ್ನು ಬಿಟ್ಟು ಹೋರಾಟಕ್ಕಾಗಿ  ಬೀದಿಗಿಳಿದು ಪ್ರತಿಭಟಣೆಯಲ್ಲಿ ನಿರತರಾಗಿದ್ದಾರೆ. ಪ್ರತಿಭಟನೆಯಲ್ಲಿ ಅದೆಷ್ಟೊ ಅಮಾಯಕರು ಪ್ರಾಣ ಕಳೆದು ಕೊಂಡಿದ್ದಾರೆ .ದೇಶದ ಈ ಸ್ಥಿತಿಗೆ ಸರಕಾರವೇ ನೇರ ಹೊಣೆಯಾಗಿದೆ.  ಪ್ರಜೆಗಳ ಸಂಕಷ್ಟಗಳಿಗೆ ಸ್ಪಂದಿಸಿ ಅವರ ಸ್ವಾತಂತ್ರ್ಯಯುಕ್ತ  ಜೀವನವನ್ನು ಕಸಿದು ಕೊಳ್ಳುವ ಸರಕಾರದ ಈ ಪೌರತ್ವ ನೀತಿಯನ್ನು ರದ್ದು ಪಡಿಸಬೇಕು .ಹಲವೊಂದು ಮಾಧ್ಯಮಗಳು ಕೂಡ ಪತ್ರಿಕಾ ಜವಾಬ್ದಾರಿಯನ್ನು ಮರೆತು ದೇಶದ  ನೈಜ ಘಟನೆಗಳನ್ನು ಬಿಂಬಿಸದೆ ಕೇವಲ ಸ್ವಹಿತಾ ಶಕ್ತಿ ಕೋಮು ಶಕ್ತಿಗಳನ್ನು ಬೆಂಬಲಿಸಿ ಕಾರ್ಯ ನಿರ್ವಹಿಸುವುದು ದೇಶದ ದೊಡ್ಡ ದುರಂತವಾಗಿದೆ.ಭಾರತವನ್ನು ನಕಲಿ ದೇಶಪ್ರೇಮಿಗಳಿಂದ ,ಸಂವಿಧಾನ ವಿರೋಧಿ ಶಕ್ತಿಗಳಿಂದ, ಕೋಮುವಾದಿಗಳ ಷಡ್ಯಂತ್ರದಿಂದ ರಕ್ಷಿಸಿ ಗಾಂಧೀಜಿಯವರ ಅಹಿಂಸಾ ತತ್ವದಿಂದ ಭವ್ಯ ಭಾರತವನ್ನು ಕಟ್ಟಬೇಕು .ಅದಕ್ಕಾಗಿ  ಮೊದಲಿಗೆ ಭಾರತವನ್ನು ಗಲಭೆಮುಕ್ತ ರಾಷ್ಟ್ರವನ್ನಾಗಿಸಬೇಕು.ಆಗಲೇ ದೇಶ ಅಭಿವೃಧ್ಧಿಯತ್ತ ಸಾಗಲು ಸಾಧ್ಯ. ದೇಶ ದ್ರೋಹಿಗಳು  ಭ್ರಷ್ಟರು ರಾಜಕೀಯ ರಂಗವನ್ನು ಪ್ರವೇಶಿಸುದನ್ನು ನಿಯಂತ್ರಿಸಬೇಕು.
 .ಜನತೆಯನ್ನು ಕಾಡುವ ಅಪೌಷ್ಟಿಕತೆ, ಮೌಲ್ಯಧಾರಿತ ಶಿಕ್ಷಣ, ಸ್ವಚ್ಛ ನೀರಿನ ಸಮಸ್ಯೆ  ನಿರುದ್ಯೋಗ ಸಮಸ್ಯೆ , ರಸ್ತೆ ನೈರ್ಮಲಿಕರಣ  ಇನ್ನು ಅನೇಕ ಮೂಲಭೂತ ಕೊರತೆಗಳ ಸೌಕರ್ಯಗಳನ್ನು ಸರಕಾರ  ಒದಗಿಸಿ ಕೊಡಬೇಕು . ನಾಗರಿಕರು ಜನಸಾಮಾನ್ಯರು ,ಕಾರ್ಮಿಕರು ದುಷ್ಟ ರಾಜಕಾರಣಿಗಳ ಹಣದ ಆಮೀಷಗಳಿಗೆ ಮರುಳಾಗದೇ ಪರಸ್ಪರ ಕಚ್ಚಾಡದೆ ದೇಶದಲ್ಲಿ ಶಾಂತಿ , ಸೌಹಾರ್ದತೆ ಸಾಮರಸ್ಯವನ್ನು ಕಾಪಾಡಿಕೊಂಡು ಬರಬೇಕು .ಭ್ರಷ್ಟಾಚಾರಿಗಳು ಕೋಮುವಾದಿಗಳು ,ನರಹಂತಕರು, ಆತ್ಯಾಚಾರಿಗಳಿಗೆ   ಶಿಕ್ಷೆಯಾಗಬೇಕು. ಕಾನೂನಿನಲ್ಲಿ ಸುಧಾರಣೆಯಾಗಬೇಕು. ಭಾರತದ ಶಕ್ತಿಯು  ದೇಶದ ಯುವ ಸಮೂಹವಾಗಿದೆ .ದಿಕ್ಕೆಟ್ಟ ಯುವ ಸಮೂಹವನ್ನು ಸರಿಪಡಿಸಿ ಅವರಲ್ಲಿ  ಸಚ್ಚಾರಿತ್ರ್ಯವನ್ನು ತುಂಬಬೇಕು .ರಾಷ್ಟ್ರವು ಸಂಪೂರ್ಣ ಅವನತಿಯಡೆಗೆ ತಲುಪುವ ಮುನ್ನ ಸಮಾಜ ಚಿಂತಕರು ಎಚ್ಚೆತ್ತುಕೊಳ್ಳಬೇಕು. ಸರ್ವರಿಗೂ ಸಮಬಾಳು ಸಮಪಾಲು ಸ್ವಾತಂತ್ರ್ಯ ಸಿಗುವಂತಾಗಬೇಕು.ಭಾರತದ ಈಗಿನ ಅವ್ಯವಸ್ಥೆಯಲ್ಲಿ  ಬದಲಾವಣೆ ತಂದರೆ ಖಂಡಿತ ಭಾರತದ ಭವಿಷ್ಯ ಉತ್ತಮಗೊಳ್ಳಲು ಸಾಧ್ಯವಿದೆ.
ಗಾಂಧೀಜಿಯವರು ಹೇಳಿರುವಂತೆ “ಮಾನವೀಯತೆಯಲ್ಲಿ  ನೀವು ನಂಬಿಕೆಯನ್ನು ಕಳೆದುಕೊಳ್ಳದಿರಿ ,ಮಾನವೀತೆಯು ಒಂದು ಸಾಗರವಾಗಿದೆ.ಒಂದು ವೇಳೆ ಸಾಗರದ ಕೆಲವು ಹನಿಗಳು ಕೊಳಕಾದಲ್ಲಿ ಇಡೀ ಸಮುದ್ರವೇ ಕೊಳಕಾಗಳು ಸಾಧ್ಯವಿಲ್ಲ”.ಈ ನಿಟ್ಟಿನಲ್ಲಿ ನಾವು ಎಲ್ಲಾ ಧರ್ಮದ ಸಮಾನ ಮನಸ್ಕರನ್ನು ಸೇರಿಸಿ ನಮ್ಮ ದೇಶದ ಶಾಂತಿಯುತ ಸಹಬಾಳ್ವೆಗೆ ಕಳಂಕವಾಗಿರುವ ಕೋಮುವಾದವನ್ನು ಹಿಮ್ಮೆಟ್ಟಿಸಲು ಕೈಜೋಡಿಸಬೇಕಾಗಿದೆ.ಈ ದೇಶ ಅಥವಾ ಸಮಾಜ ನಮಗೇನು ನೀಡಿದೆ ಎಂಬುದನ್ನು ಚಿಂತಿಸುವುದರ ಬದಲಾಗಿ ನಾವೇನು ಈ ದೇಶಕ್ಕಾಗಿ ನೀಡಬವುದು ಎಂದುದನ್ನು ಚಿಂತಿಸಬೇಕಾಗಿದೆ.ನಾವು ದೇಶವನ್ನು ಒಡೆಯುವ ಕೈಗಳಾಗದೆ ದೇಶವನ್ನು ಕಟ್ಟುವ ಕೈಗಳಾಬೇಕಾಗಿದೆ.ಭಾರತದ ಪುಣ್ಯ ಭೂಮಿಯಲ್ಲಿ ಹುಟ್ಟಿ ಬೆಳೆದಿರುವ ನಾವೆಲ್ಲರೂ ಸಹೋದರರು,ಇದನ್ನು ಉಳಿಸಿ ಬೆಳೆಸಬೇಕಾಗಿದೆ.

LEAVE A REPLY

Please enter your comment!
Please enter your name here