• ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೆಬೆನ್ನೂರು
    ದಾವಣಗೆರೆ ಜಿಲ್ಲೆ

ಲಾಕ್ ಡೌನ್ ಓದು

ಎ.ಎಸ್ ಮಕಾನದಾರ ಅವರು ಬಹು ಕಾಲದ ಕಾವ್ಯ ಮಿತ್ರರು. ಕಾವ್ಯದ ಹೊರತಾಗಿ ನಮ್ಮ ನಡುವೆ ಯಾವುದೇ ಬಂಧವಿಲ್ಲ. ಕಾವ್ಯಕ್ಕಿಂತ ಬೇರೆ ಬಂಧುರತೆ ಬೇಕಿಲ್ಲ ಅನ್ನಿಸುತ್ತದೆ. ನನ್ನ ಕಾವ್ಯದ ಬಗ್ಗೆ ಅವರು ಅವರ ಕಾವ್ಯಯಾನದ ಬಗ್ಗೆ ನಾನು ಅನವರತ ಮಾತಾಡುತ್ತಾ, ಚರ್ಚಿಸುತ್ತಾ,ಖುಷಿ ಪಡುತ್ತಾ ಸಾಗುತ್ತಾ ಬಂದಿದ್ದೇವೆ.
ಕಾವ್ಯದ ಹೊರತಾಗಿ ಈ ಮನುಷ್ಯ ಬೇರೆ ಮಾತೇ ಆಡಲಾರರು. ತನುಮನ ಕಾವ್ಯದ ಲಹರಿ ಹೊತ್ತ ಕಾವ್ಯಧನಿಕನೇ ಸೈ! ಬೇರೆ ಬೇರೆ ಮೂಲದ , ಪ್ರಕಾರದ ಕೃತಿಗಳನ್ನು ಬಯಲಿಗಿಟ್ಟರೂ ಕಾವ್ಯದ ಅಸಲಿಯತ್ತಿನ ಖದರ್ರೇ ಬೇರೆ ಇದೆ ಎಂದು ಜಬರ್ ದಸ್ತಿನಿಂದ ಹೇಳಬಹುದು.
ಎದೆಯ ಸುಡುವ ನೆನಪುಗಳು
ಕೆಳಗಲಮನಿ ಮಾಬವ್ವ…..
ಸಖಿಸಖ
ಒಂದು ಮೌನದ ಬೀಜ
ಅಕ್ಕಡಿ ಸಾಲು……
ಮುಂತಾದ ಕಾವ್ಯ ಮಜಲುಗಳ ದಾಟಿ ಇದೋ ಮತ್ತೊಂದು ರಸವತ್ತಾದ ಗುಲಾಬಿ ಪಕಳೆಯಂಥಾ ಕಿತಾಬಿನೊಂದಿಗೆ ಸಹೃದಯರ ಎದುರು ವಿನೀತರಾಗಿ ಮಕಾನದಾರ ಸಾಹೇಬರು ನಿಂತಿದ್ದಾರೆ!

ಅದೇ ಪ್ಯಾರಿಪದ್ಯ! ‘ಸಖಿ ಚೆಲ್ಲಿದ ಕಾವ್ಯ ಗಂಧ’ ಅನ್ನುವ ಮೈ ನವಿರೇಳಿಸುವ ಅಡಿಬರಹದೊಂದಿಗೆ ಬಂದ ಈ ಮೊಹಬ್ಬತ್ತಿನ ನಶೆಯೇರಿಸುವ ಬಿಡಿ ಬಿಡಿ ಗುಲಾಬಿ ಪಕಳೆಗಳು; ಸಣ್ಣ ಸಣ್ಣ ಶಾಯಿರಿಯೋ, ಗಜಲಿನ ತುಂಡೋ, ಕಾವ್ಯದ ಉದುರಿದ ತುಣುಕೋ, ಮತ್ತೇರಿಪ ಕಾವ್ಯ ಶರಾಬಿನ ಹನಿಯೋ ಏನಾದರೂ ಅಂದುಕೊಳ್ಳಿ ಇದನ್ನು ಓದಿ ಓದಿಯೇ ಸವಿಯಬೇಕು ಅಷ್ಟೇ!

ಶತಮಾನದ ನಂಜಿಗೆ ಯಾವ ಹೊಳೆಯಲಿ ತೊಳೆಯಬೇಕಿದೆ
ಸಂತ ಶರಣರು ತಿಕ್ಕಿ ತೊಳೆದರೂ ಇನ್ನೂ ಉಳಿದಿದೆ (ಆಷಿಕ್)

ಬಹುಶಃ ಈ ನಂಜು ಮಾನವರ ಜೊತೆಯೇ ಮಾಯವಾಗಬೇಕೇ ಹೊರತು ಅದರ ಮುಂಚೆ ಯಾವ ಶರಣರು ಬಂದರೂ ಕಿತ್ತೊಗೆಯಲಾಗದು ಆಹಾ ಇಂಥಾ ಸಾಲು ನಮ್ಮನ್ನ ಬೆಳಕಿತ್ತ ಒಯ್ಯುತ್ತದೆ!

ಜಗದ ಮಾನಾಪಮಾನ ದಿಕ್ಕರಿಸುತಿರು ಬಜಾರಿನಲ್ಲಿ
ಮೊಹಬ್ಬತ್ ಎಂದರೆ ಕೊಂಡು ತರುವ ಸರಕಲ್ಲ ಪ್ಯಾರಿ (ಪ್ಯಾರಿ)

ಹೌದಲ್ಲವಾ? ಜಗದ ವಹಿವಾಟಿನಲ್ಲಿ ಎಲ್ಲಾ ಕೊಳ್ಳಬಹುದು ಪ್ರೀತಿಯಾಗಲಿ ಅಮ್ಮನ ಮಮತೆಯಾಗಲಿ ಕೊಳ್ಳಲಾದೀತೇ ? ಅನುಭವಿಸು ಅಷ್ಟೇ ಕವಿ ಭಾವಕ್ಕೆ ಮೇರೆ ಇಲ್ಲ, ಮಾನವ ಮಾನವನಾಗಿ ಪ್ರೀತಿಯ ತೆಕ್ಕೆ ಬೀಳಬೇಕಷ್ಟೆ!

ಬಾಳ ಬಂಡಿ ಸಾಗಬೇಕಾದರೆ
ಮುಚ್ಚಬೇಕು ತರತಮದ ಗುಂಡಿ ( ಲೇ ಇವಳೇ)

ಎರಡೇ ಸಾಲು ಅರ್ಥ? ನೂರು ಬಂಡಿಗೂ ಅಧಿಕ. ಇದು ಮಕಾನದಾರರ ಕಾವ್ಯ ಶಕ್ತಿ. ಪ್ಯಾರಿ ಪದ್ಯಗಳು ಮಾಯೆಯಾಗಿ, ಪ್ರೀತಿಯಾಗಿ, ಸಮಾಜದ ದನಿಯಾಗಿ, ಆಲೋಚನೆಯ ಪರಿಯಾಗಿ ಕೆನೆಗಟ್ಟುವುದು ಸುಳ್ಳಲ್ಲ!

ದುವಾ ಕುಬುಲ್ ಆಗಿದೆ
ಎದೆಗೆ ಒರಗಿದ ಪ್ರೇಯಸಿ
ಮುಂಗುರುಳು ತೀಡುತ ಹನಿಸಿ ಬಿಟ್ಟಳು
ತುಂಬಿ ತುಳುಕಿತು ಚಮ್ಲಾ ( ಮೆಹಬೂಬ)
ಅಹಾ, ಎದೆಯ ಮೋಹಗಡಲನ್ನು ಮತ್ತಷ್ಟು ತುಂಬಿಸುವ ಇಂಥಾ ಹನಿಗಳು ಕಾವ್ಯಪ್ರೇಮಿಗೆ ಸದಾ ಕಾಡುತ್ತವೆ.

ನೀನು ಸೂಜಿ
ನಾನು ದಾರ
ಹಪಲಿಯೋನ ಗಡಿಗಳನು
***
ದುಶ್ಮನ್-ಸೈತಾನ್ ರ ಸಂತತಿ ಮಸಣ ಸೇರಲಿ ಬಿಡು
ಸಾಜನ್ ನ ಹೃದಯದ ಗುಲ್ ಮೊಹರ್ ಮಾನವತೆಯ ಬೆಸೆಯುತಿರಲಿ ಸಾಕಿ
***
ಬೆವರುಂಡ ಹೊಲದ ಬೀಜ ದಫ್ತರ ಕಳೆದುಕೊಂಡಾಗ
ಯಾವ ಠಾಣೆಯಲಿ ದೂರು ಕೊಡಲಿ ……

ಇಂಥಾ ಮನ ಕಾಡುವ, ಚಿಂತನೆಗೆ ಹಚ್ಚುವ ಅನೇಕ ಸಾಲುಗಳು ಪ್ಯಾರಿ ತಂದಿದ್ದಾಳೆ!
ಮಕಾನದಾರ ಸಾಹೇಬರಿಗೆ ಕಾವ್ಯ ಕನ್ನಿಕೆ ಒಲಿದಿದ್ದಾಳೆ. ಅವರು ಅವಳ ಮಧುರ ಚುಂಗು ಹಿಡಿದು ಸಾಗಿದ್ದಾರೆ. ಪ್ಯಾರಿ ಪದ್ಯ ಕಾವ್ಯ ಕಡಲಲ್ಲಿ ಅಪರೂಪದ ಮುತ್ತು!
ಸಣ್ಣ ದಾರಿ ದೊಡ್ಡ ಪಯಣಕೆ ಮೂಲವಾಗುವಂತೆ ಸಣ್ಣ ಹನಿಗಳ ಮೂಲಕ ಕಾವ್ಯದ ಮಸ್ತ್ ಮಜಲನ್ನು ಮಕಾನದಾರರು ಓದುಗರಿಗೆ ನೀಡಿದ್ದಾರೆ.
ಪ್ಯಾರಿ ಪದ್ಯ ಕನ್ನಡ ಕಾವ್ಯರಸಿಕರು ಒಮ್ಮೆ ಓದಲೇ ಬೇಕು. ಉರ್ದು ಅಥವಾ ಹಿಂದಿಯ ಪರಿಚಯ ಇದ್ದರೆ ಈ ಪ್ಯಾರಿ ಇನ್ನೂ ಆಪ್ತ. ಆದರೂ ಕೃತಿಯ ಕೊನೆಗೆ ಪಾರಿಭಾಷಿಕ ಪದಗಳ ಅರ್ಥ ನೀಡಿದ್ದು ಉಪಯುಕ್ತವಾಗಿದೆ.
ಮಕಾನದಾರ ಅವರ ಪ್ಯಾರಿ ಪದ್ಯ ಕಾವ್ಯಲೋಕದಲ್ಲಿ ಅಪಾರ ಯಶಸ್ಸು ಗಳಿಸುತ್ತದೆ. ಬಹಳ ಮಂದಿ ಅನುಭವಿಸಿ ಸ್ವಾದಭರಿತ ಶೇರ್, ಶಾಯಿರಿ, ಗಜಲಂತೆ ಪ್ಯಾರಿಯನ್ನು ಅಪ್ಪಿ ತಬ್ಬಿಕೊಳುವುದರಲ್ಲಿ ಎರಡು ಮಾತಿಲ್ಲ. ಮಕಾನದಾರರಿಗೆ ಕಾವ್ಯದ ಶುಭಾಶಯ ಮನಸಾರೆ ಹೇಳುತ್ತೇನೆ.

ಕೃತಿ-ಪ್ಯಾರಿ ಪದ್ಯ
ಕವಿ-ಎ.ಎಸ್. ಮಕಾನದಾರ
ಪ್ರಕಾಶಕರು- ನಿರಂತರ ಪ್ರಕಾಶನ, ಗದಗ
ಬೆಲೆ-150/ರೂ
ಪುಟಗಳು-144
ಪ್ರತಿಗಳಿಗೆ ಸಂಪರ್ಕ ಸಂಖ್ಯೆ-9916480291
ಮುಖಪುಟ- ವಿಜಯ ಕಿರೇಸೂರ,ಗದಗ

LEAVE A REPLY

Please enter your comment!
Please enter your name here