ಕೋಮು ಸಾಮರಸ್ಯ ಮತ್ತು ಇಸ್ಲಾಂ ಧರ್ಮ : ಭಾಗ-3

ಲೇಖಕರು : ಶೌಕತ್ ಅಲಿ.ಕೆ ಮಂಗಳೂರು

ಪ್ರವಾದಿ ಮುಹಮ್ಮದ್ ಸ ರವರ ಕಾಲದಲ್ಲಿ ಖುರೈಷ್ ಮತ್ತು ಅರಬ್ ನೇತಾರರು ಇಬ್ರಾಹಿಮ್ ಧರ್ಮದ ಅನುಯಾಯಿಗಳು ಆಗಿದ್ದರು. ಅದರ ಜೊತೆ ಬಹುದೇವಾರಾಧನೆ ಅವರಲ್ಲಿ ವ್ಯಾಪಕವಾಗಿ ಬೇರೂರಿತ್ತು. ನಮಾಝ್ ಮತ್ತು ಹಜ್ಜ್ ಕರ್ಮಗಳು ಜಾಹಿಲಿಯ್ಯ ಕಾಲದಲ್ಲಿ ಅಸ್ತಿತ್ವದಲ್ಲಿತ್ತು. ಅದರಲ್ಲಿ ಬಹಳಷ್ಟು ಅನಾಚಾರಗಳು ಇತ್ತು. ಮಕ್ಕಾ ಮುಷ್ರಿಕರು ಅಲ್ಲಾಹನನ್ನೇ ಆಕಾಶ ಭೂಮಿಗಳ ಸೃಷ್ಟಿಕರ್ತ ಎನ್ನುತ್ತಿದ್ದರು. ಅದರ ಜೊತೆ ಇತರ ಸಣ್ಣ ಪುಟ್ಟ ದೇವರು ದೇವತೆಗಳನ್ನು ಸಹಭಾಗಿಗೊಳಿಸುತ್ತಿದ್ದರು. ಪ್ರವಾದಿ ಮುಹಮ್ಮದ್ ಅವರ ಮನೆತನದಲ್ಲಿ ಹುಟ್ಟಿದರು ಮತ್ತು ಅವರನ್ನು ಸಂಸ್ಕರಿಸಿದರು ಅವರ ವಿಶ್ವಾಸವನ್ನು ಶುದ್ಧೀಕರಿಸಿದರು. ಏಕದೇವಾರಾಧನೆಯ ಕಲ್ಪನೆಯ ಶಿಕ್ಷಣ ನೀಡಿ ಅವರಿಂದಲೇ ಏಕದೇವಾರಾಧನೆಯ ಕೇಂದ್ರ ಕಾಬಾವನ್ನು ಶುದ್ಧೀಕರಣಗೊಳಿಸಿದರು. ಅಲ್ಲಿ ಅವರಲ್ಲಿ ಅನ್ಯಧರ್ಮ ಎಂಬ ಕಲ್ಪನೆ ಇರಲಿಲ್ಲ. ಯಹೂದಿ ನಸಾರಾ ಮಜೂಸಿಗಳು ಅನ್ಯಧರ್ಮ ಎಂಬ ಕಲ್ಪನೆ ಇತ್ತು. ಅನ್ಯ ಧರ್ಮದ ವಿಶ್ವಾಸಾಚಾರವನ್ನು ಪ್ರವಾದಿ ಮುಹಮ್ಮದ್ ಸ ಬಹಳ ಗೌರವಿಸುತ್ತಿದ್ದರು ಮತ್ತು ಅವರಿಗೆ ಸಂಪೂರ್ಣ ಧಾರ್ಮಿಕ ಸ್ವಾತಂತ್ರ್ಯ ನೀಡಿದ್ದರು.

ವಿಶ್ವ ವಿಖ್ಯಾತ ಲೇಖಕ ಮಾರ್ಟಿನ್ ಲಿಂಗ್ಸ್ ರವರು ತನ್ನ ಸೀರತ್ ಗ್ರಂಥವಾದ Muhammad: His Life Based on the Earliest Sources ಎಂಬ ಕೃತಿಯಲ್ಲಿ ಹೀಗೆ ಬರೆಯುತ್ತಾರೆ…

ಕಾಬಾವನ್ನು ಪ್ರವಾದಿವರ್ಯರು ಶುದ್ಧಗೊಳಿಸುವಾಗ ಸಹಾಬಿಗಳು ಎರಡು ಮೂರ್ತಿಯನ್ನು ಪ್ರವಾದಿ (ಸ) ರವರ ಸಮೀಪಕ್ಕೆ ತಂದರು. ಅದು ಮೇರಿ ಮತ್ತು ಬಾಲ ಏಸುವಿನ ಮೂರ್ತಿ ಆಗಿತ್ತು. ಪ್ರವಾದಿ (ಸ) ರವರ ಸಂಗಾತಿಗಳು ಅದನ್ನೂ ಒಡೆಯಬೇಕೇ ಎಂದು ಕೇಳಿದರು. ಪ್ರವಾದಿ (ಸ) ರವರು ಅದನ್ನು ಒಡೆಯುವುದರಿಂದ ಸಹಾಬಿಗಳನ್ನು ತಡೆದರು. ಅದು ಅನ್ಯಧರ್ಮದ ಗೌರವಕ್ಕೆ ಕುಂದುಂಟು ಮಾಡುತ್ತದೆ. ಅದನ್ನು ಗೌರವಿಸುವ ಧರ್ಮೀಯರ ಮನ ನೋಯುತ್ತದೆ ಮತ್ತು ಅದನ್ನು ಕ್ರೈಸ್ತರಿಗೆ ಮರಳಿಸುವಂತೆ ಆಶಯ ವ್ಯಕ್ತ ಪಡಿಸಿದರು.

ಇದು ಬಹುದೇವಾರಾಧನೆಗೆ ಪ್ರೋತ್ಸಾಹವಲ್ಲ. ಬದಲಾಗಿ ಪ್ರವಾದಿ (ಸ) ಇತರ ಧರ್ಮದವರ ಪೂಜಾ ಕುರುಹುಗಳನ್ನು ಗೌರವಿಸುವ ಅಪ್ಪಟ ಸೌಹಾರ್ದವಾಗಿತ್ತು.

ಕಾಬಾ ಎಂಬುದು ಸನಾತನ ಏಕದೇವಾರಾಧನೆಯ ಕೇಂದ್ರ ಮತ್ತು ಅದನ್ನು ಪ್ರವಾದಿ (ಸ) ಪುನಃ ಅದರ ನೈಜ ಸ್ಥಾನಕ್ಕೆ ತಂದು ನಿಲ್ಲಿಸಿದರು.
ಕಾಬಾ ತನ್ನ ಪಿತಾಮಹ ಇಬ್ರಾಹಿಮರು ಸ್ಥಾಪಿಸಿದ ಏಕದೇವಾರಾಧನೆಯ ಕೇಂದ್ರ ವಾಗಿತ್ತು. ಅದು ಪರಧರ್ಮದ ಕೇಂದ್ರ ವಾಗಿರಲಿಲ್ಲ. ಆದ್ದರಿಂದ ಅದನ್ನು ಆ ಜನತೆಯಿಂದಲೇ ಶುದ್ಧಗೊಳಿಸಿದರು. ಇದರ ಹೊರತು ಪಡಿಸಿ ಯಾರದೇ ಪರ ಧರ್ಮೀಯರ ಪೂಜಾ ಕುರುಹುಗಳನ್ನು ಘಾಸಿಗೊಳಿಸಿದ ಒಂದೇ ಒಂದು ಉದಾಹರಣೆ ಪ್ರವಾದಿ (ಸ) ರವರ ಜೀವನದಲ್ಲಿ ಸಿಗುವುದಿಲ್ಲ.
ಆದರೆ ಕ್ಷೋಭೆ ಹರಡಲು ಕಟ್ಟಲ್ಪಟ್ಟ ಮಸ್ಜಿದುಝಿರಾರ್ ಎಂಬ ಮಸೀದಿಯನ್ನು ಪ್ರವಾದಿ (ಸ) ಕೆಡವಿ ನೆಲಸಮಗೊಳಿಸಿದ ಉದಾಹರಣೆ ನಮಗೆ ಸಿಗುತ್ತದೆ.

ಅನ್ಯಧರ್ಮೀಯ ಹೆತ್ತವರೊಂದಿಗೆ ಸದ್ವರ್ತನೆ

ಅಸ್ಮಾ ಬಿಂತಿ ಅಬೂಬಕರ್ ರ ಹೇಳುತ್ತಾರೆ, ಹುದೈಬಿಯಾ ಸಂಧಿಯ ಕಾಲದಲ್ಲಿ ನನ್ನ ತಾಯಿ ನನ್ನ ಬಳಿಗೆ ಬಂದರು. ಆಗ ಆಕೆ ಬಹುದೇವಾರಾಧಕಿ ಆಗಿದ್ದರು. ನಾನು ಪ್ರವಾದಿವರ್ಯರೊಂದಿಗೆ (ಸ) ಕೇಳಿದೆ , ಅಲ್ಲಾಹನ ಸಂದೇಶವಾಹಕರೇ, ನನ್ನ ಬಹುದೇವಾರಾಧಕಿ ತಾಯಿ ನನ್ನ ಬಳಿಗೆ ಬಂದಿರುವರು. ನಾನು ಆಕೆಗೆ ಏನಾದರೂ ಕೊಡಬೇಕೆಂದು ಅವರು ಅಪೇಕ್ಷಿಸುತ್ತಾರೆ. ನಾನು ಆಕೆಗೆ ಏನಾದರೂ ಕೊಡಬಹುದೇ? ಆಗ ಪ್ರವಾದಿ ಸ ಹೇಳಿದರು, ಅವರೊಂದಿಗೆ ಅತ್ಯುತ್ತಮ ಬಂಧುತ್ವದ ವರ್ತನೆಯನ್ನು ತೋರಿಸು. ಅವರಿಗೆ ಏನೆಲ್ಲಾ ನೀಡಲು ಸಾಧ್ಯವೋ ಅದೆಲ್ಲವನ್ನೂ ನೀಡು” (ಬುಖಾರಿ-ಮುಸ್ಲಿಂ)

ಕುರಾನ್ ಹೆತ್ತವರೊಂದಿಗೆ ಅತ್ಯುತ್ತಮವಾಗಿ ವರ್ತಿಸಲು ಆಜ್ಞಾಪಿಸಿದೆ. ಅವರು ಯಾವ ಧರ್ಮದವರೇ ಆಗಿರಲಿ. ಧಾರ್ಮಿಕ ಸ್ವಾತಂತ್ರ್ಯ ಎಂಬುದು ಅವರ ವೈಯಕ್ತಿಕ ವಿಚಾರ ಆಗಿರುತ್ತದೆ ಅದರಲ್ಲಿ ಯಾರೊಂದಿಗೂ ಬಲವಂತ ಸಲ್ಲದು. ಅದರ ಕಾರಣದಿಂದ ಮಾನವೀಯ ಸಂಬಂಧ ನಾವಾಗಿಯೇ ಕೆಡಿಸಬಾರದು ಎಂಬದು ಪ್ರವಾದಿಯ ಆಶಯವಾಗಿದೆ. ಮಕ್ಕಾದಲ್ಲಿ ಅವರ್ತೀರ್ಣಗೊಂಡ ಕುರಾನ್ ಸೂಕ್ತ ಇದನ್ನೇ ಸೂಚಿಸುತ್ತದೆ. ಅದು ಹುದೈಬಿಯಾ ಸಂಧಿಗಿಂತ ಎಷ್ಟೋ ಮುಂಚೆ ಅವತೀರ್ಣಗೊಂಡ ಕುರಾನ್ ಸೂಕ್ತವಾಗಿದೆ . ಇದರಲ್ಲಿ ಮುಸ್ಲಿಂ ಹೆತ್ತವರು ಮತ್ತು ಮತ್ತು ಮುಸ್ಲಿಮೇತರ ಹೆತ್ತವರು ಎಂಬ ಬೇಧ ಭಾವ ಮಾಡಲಾಗಿಲ್ಲ. ಇಬ್ಬರೂ ಸಮಾನ ರೀತಿಯ ಸದ್ವರ್ತನೆಗೆ ಅರ್ಹರಾಗಿದ್ದಾರೆ. ಧಾರ್ಮಿಕ ಸ್ವಾತಂತ್ರ್ಯ ಮತ್ತು ಮಾನವೀಯ ಸಂಬಂಧವನ್ನು ಬೇರೆ ಬೇರೆಯಾಗಿಯೇ ನೋಡಬೇಕು ಎಂಬುದು ಇದರಿಂದ ನಮಗೆ ತಿಳಿದು ಬರುತ್ತದೆ.

ಸೂರ ಲುಕ್ಮಾನ್ ಸೂಕ್ತ 14-15 ರಲ್ಲಿ ಸೃಷ್ಟಿಕರ್ತ ಅಲ್ಲಾಹು ಹೇಳುತ್ತಾನೆ ” ಮಾನವನಿಗೆ ಅವನ ಮಾತಾಪಿತರ ಹಕ್ಕನ್ನು ತಿಳಿದುಕೊಳ್ಳಲು ನಾವೇ ತಾಕೀತು ಮಾಡಿದ್ದೇವೆ. ಅವನ ತಾಯಿಯು ನಿತ್ರಾಣದ ಮೇಲೆ ನಿತ್ರಾಣವನ್ನು ಸಹಿಸಿ ಅವನನ್ನು ಗರ್ಭದಲ್ಲಿ ಇರಿಸಿದಳು. ಅವನ ಸ್ತನಪಾನ ಬಿಡುವುದರಲ್ಲಿ ಎರಡು ವರ್ಷಗಳು ತಗಲಿದವು. ನನಗೆ ಕೃತಜ್ಞತೆ ಸಲ್ಲಿಸು ಮತ್ತು ನಿನ್ನ ಮಾತಾಪಿತರಿಗೆ ಕೃತಜ್ಞತೆ ಸಲ್ಲಿಸು. ನೀನು ನನ್ನ ಕಡೆಗೆ ಮರಳಬೇಕಾಗಿದೆ.
ಆದರೆ ಅವರು ನಿನಗೆ ತಿಳಿಯದ ವಿಚಾರವಾಗಿರುವ ಬಹುದೆವಾರಾಧನೆ ಮಾಡುವಂತೆ ಒತ್ತಡ ಹೇರಿದರೆ ಆ ವಿಷಯದಲ್ಲಿ ಅವರ ಅನುಸರಣೆ ಮಾಡಬೇಡ. ಆದರೆ ಈ ಲೋಕದಲ್ಲಿ (ಇತರೆಲ್ಲ ವಿಷಯಗಳಲ್ಲಿ) ಅವರೊಂದಿಗೆ ಅತ್ಯುತ್ತಮ ರೀತಿಯಲ್ಲಿ ವ್ಯವಹರಿಸು”

ಮೃತದೇಹಕ್ಕೆ ಗೌರವ

ಕೆಲವರು ಮಾನವೀಯ ಸಂಬಂಧ ಮತ್ತು ಧಾರ್ಮಿಕ ಅಭಿವ್ಯಕ್ತಿಯನ್ನು ಮಿಶ್ರಗೊಳಿಸುತ್ತಾರೆ. ನಿಜವಾಗಿ ಒಬ್ಬ ವ್ಯಕ್ತಿ ತಾನು ಬಯಸಿದಂತೆ ಜೀವಿಸುವುದು ಪೂಜಿಸುವುದು ಅಥವಾ ಆರಾಧನೆ ಮಾಡುವುದು ಧಾರ್ಮಿಕ ಸ್ವಾತಂತ್ರ್ಯ ವಾಗಿದೆ. ತನ್ನತನದ ಜೊತೆ ಇತರರನ್ನು ಗೌರವಿಸುವುದು ನೈಜ ಸೌಹಾರ್ದವಾಗಿದೆ. ಯಾಕೆಂದರೆ ಪ್ರತಿಯೊಬ್ಬನಿಗೂ ಜೀವನ ಮತ್ತು ಮರಣ ಸಮಾನವಾಗಿ ದೇವನಿಂದ ಸಿಕ್ಕಿದೆ.

ಸ್ವಧರ್ಮೀಯನಿಗೂ ಅನ್ಯ ಧರ್ಮೀಯನಿಗೂ ಇಬ್ಬರಿಗೂ ಕುರಾನ್ ‘ಮಯ್ಯಿತ್’ ಎಂದು ಅಭಿಸಂಭೋದಿಸುತ್ತದೆ.
ಇನ್ನಕ ಮಯ್ಯಿತುನ್ ವ ಇನ್ನಹುಂ ಮಯ್ಯಿತೂನ್ -ಸೂರ 39:30
ಅಂದರೆ ನಿಮಗೂ ಮರಣ ಹೊಂದಲಿಕ್ಕಿದೆ ಮತ್ತು ಇವರಿಗೂ ಮರಣ ಹೊಂದಲಿಕ್ಕಿದೆ. ಈ ನಿಟ್ಟಿನಲ್ಲಿ ಎಲ್ಲರ ಮರಣಕ್ಕೆ ಮಾನವೀಯವಾಗಿ ಸ್ಪಂದಿಸಲು ದುಃಖಿಸಲು ಸಾಧ್ಯವಾಗಬೇಕು. ಅದರಲ್ಲಿ ಸ್ವ ಅಥವಾ ಅನ್ಯ ಎಂಬ ಬೇಧಭಾವ ಸಲ್ಲದು.

ಒಮ್ಮೆ ಪ್ರವಾದಿ ಸ ರವರು ತನ್ನ ಸಂಗಾತಿಯೊಬ್ಬರ ಜೊತೆಯಲ್ಲಿ ಇದ್ದಾಗ ಅಲ್ಲಿಂದ ಯಹೂದಿಯೊಬ್ಬನ ಮಯ್ಯಿತನ್ನು (ಮೃತದೇಹ) ಅಂತ್ಯಸಂಸ್ಕಾರಕ್ಕಾಗಿ ಜನರು ಕೊಂಡು ಹೋಗುತ್ತಿದ್ದರು. ಪ್ರವಾದಿ (ಸ) ಅವರನ್ನು ಕಂಡು ಗೌರವಪೂರ್ಣವಾಗಿ ಎದ್ದು ನಿಂತರು. ಸಂಗಾತಿಗಳಿಗೆ ಆಶ್ಚರ್ಯ ಆಯಿತು. ಅದೊಂದು ಯಹೂದಿಯ ಅಂತ್ಯಸಂಸ್ಕಾರವಲ್ಲವೇ ಎಂದು ಸಂಗಾತಿಗಳು ಪ್ರಶ್ನಿಸಿದರು. ಪ್ರವಾದಿ (ಸ) ಹೇಳಿದರು, ಅಲೈಸತಿನ್ನಫ್ಸ ಆ ವ್ಯಕ್ತಿ ಆತ್ಮವಲ್ಲವೇ? ಅದೊಂದು ಆತ್ಮವಲ್ಲವೇ? ಆದುದರಿಂದ ಎಂದಾದರೂ ಅಂತ್ಯಸಂಸ್ಕಾರ ಕಂಡರೆ ಎದ್ದು ನಿಲ್ಲಬೇಕು ಎಂದು ಆದೇಶಿಸಿದರು. (ಬುಖಾರಿ ಮುಸ್ಲಿಂ ನಲ್ಲಿ ಉದ್ಧರಿಸಲ್ಪಟ್ಟ ಘಟನೆಯಾಗಿದೆ)

LEAVE A REPLY

Please enter your comment!
Please enter your name here