ಲೇಖಕರು: ಇರ್ಷಾದ್ ಕೊಪ್ಪಳ ( ಪತ್ರಕರ್ತರು, ಬೆಂಗಳೂರು)

ಇತರ ಕ್ಷೇತ್ರಗಳಂತೆ ಕೋಮು ಮತ್ತು ಜಾತಿ ವೈಷಮ್ಯವು ಶೈಕ್ಷಣಿಕ ಸಂಸ್ಥೆಗಳಲ್ಲೂ ಸಹ ವ್ಯಾಪಕವಾಗಿ ಬೆಳೆಯುತ್ತಿರುವುದು ದುರದೃಷ್ಟಕರ.

ದಲಿತರು , ಹಿಂದುಳಿದವರು ಮತ್ತು ವಿಶೇಷವಾಗಿ ಮುಸ್ಲಿಮರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ತಮ್ಮ Ghetto ಗಳಿಂದ ಹೊರಬಂದು ಜನರೊಂದಿಗೆ ಬೆರೆಯಬೇಕೆಂದು ಉದಾರವಾದಿ ಬುದ್ಧಿಜೀವಿಗಳು ಆಗಾಗ ಉಪದೇಶ ಮಾಡುತ್ತಿರುತ್ತಾರೆ. ಅದೇ ರೀತಿ ಸಂಸ್ಕೃತಿ ಮತ್ತು ದೇಶಭಕ್ತಿಯ ಗುತ್ತಿಗೆ ಪಡೆದಿರುವ ಕೋಮುವಾದಿಗಳು ಸಹ ಮುಸ್ಲಿಮರು ಭಾರತೀಯತೆಯನ್ನು ಅನುಸರಿಸಬೇಕೆಂದು ಆದೇಶಿಸುತ್ತಿರುತ್ತಾರೆ.

ಹೊಸತಾಗಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ನೇಮಕವಾಗಿರುವವರು ಒಬ್ಬ ಮುಸ್ಲಿಮನೆಂಬ ಕಾರಣದಿಂದ ನವೆಂಬರ್ 7 ರಿಂದ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದ ವಿದ್ಯಾರ್ಥಿಗಳು ತರಗತಿ ನಡೆಯಲು ಬಿಡುತ್ತಿಲ್ಲ.

ಎರಡನೇ ತರಗತಿಯಿಂದ ಸಂಸ್ಕೃತ ಕಲಿಕೆ ಆರಂಭಿಸಿದ ಫಿರೋಜ್ ಖಾನ್ 2018ರಲ್ಲಿ ಜೈಪುರದ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದಿಂದ ಪಿಎಚ್‌ಡಿ ಪಡೆದಿದ್ದಾರೆ. ಎನ್ಇಟಿ ಮತ್ತು ಜೆಆರ್‌ಎಫ್ ಪರೀಕ್ಷೆಗಳಲ್ಲಿಯೂ ತೇರ್ಗಡೆಯಾಗಿದ್ದಾರೆ.
ರಾಷ್ಟ್ರೀಯ  ಸಂಸ್ಕೃತ ಸಂಸ್ಥಾನದ ಪ್ರಿನ್ಸಿಪಾಲ್ ಮತ್ತು ಖಾನ್ ಅವರ ಅಧ್ಯಾಪಕರಾಗಿದ್ದ ಅರ್ಕನಾಥ್ ಚೌಧರಿಯವರ ಪ್ರಕಾರ ಫಿರೋಜ್ ತುಂಬಾ ಒಳ್ಳೆಯ ವ್ಯಕ್ತಿ, ಮಿತ ಭಾಷಿ ಮತ್ತು ಜನರೊಂದಿಗೆ ಬೆರೆಯುವ ಸ್ವಭಾವದವರು.

ಹುದ್ದೆಗಾಗಿ short list ಗೊಂಡ 10 ಅಭ್ಯರ್ಥಿಗಳಲ್ಲಿ ಉಳಿದವರು 0-2 ಅಂಕ ಪಡೆದರೆ ಖಾನ್ 10 ಕ್ಕೆ10 ಅಂಕ ಪಡೆದು ಆಯ್ಕೆಯಾಗಿದ್ದರು.

ಕಳೆದ ಆಗಸ್ಟ್‌ನಲ್ಲಿ ರಾಜಸ್ಥಾನ ಸರ್ಕಾರವು ಇವರನ್ನು ‘ಸಂಸ್ಕೃತ ಯುವ ಸಮ್ಮಾನ್’ ಪ್ರಶಸ್ತಿ ನೀಡಿ ಗೌರವಿಸಿದೆ.
ಆದರೆ ದ್ವೇಷವನ್ನೇ ತಮ್ಮ ಧರ್ಮವಾಗಿಸಿಕೊಂಡವರಿಗೆ ಇದೆಲ್ಲಾ ಅರ್ಥವಾಗುವುದು ಕಷ್ಟ.

ಇನ್ನೊಂದೆಡೆ IIT ಯಂಥ ಪ್ರತಿಷ್ಠಿತ ಸಂಸ್ಥೆಯಲ್ಲಿ ಹಲವಾರು ಕನಸುಗಳನ್ನು ಹೊತ್ತು ಬಂದಿದ್ದ 19 ವರ್ಷದ ಫಾತಿಮಾ ಲತೀಫ್ ಎಂಬ ಯುವತಿ ತನ್ನ ಪ್ರಾಧ್ಯಾಪಕರ ಕಿರುಕುಳ ಮತ್ತು ನಿಂದನಾತ್ಮಕ ಹೇಳಿಕೆಗಳನ್ನು ಸಹಿಸಲಾರದೆ ಆತ್ಮಹತ್ಯೆಗೆ ಶರಣಾಗುತ್ತಾಳೆ.

ದ್ವೇಷ ಭಕ್ತಿಯ ನಶೆಯಲ್ಲಿರುವ ಜನರಿಗೆ ಒಂದು ಸಮುದಾಯವನ್ನು ದ್ವೇಷಿಸುವುದೇ ಕೆಲಸವಾಗಿದೆ.
ಸಮಾಜದ ಮುಖ್ಯವಾಹಿನಿಗೆ ಬನ್ನಿ , ಭಾರತೀಯತೆ ಅನುಸರಿಸಿಯೆಂಬ ಮಾತುಗಳು ಅವರಿಗೊಂದು ನೆಪ ಮಾತ್ರ.

ಇದೆಲ್ಲದರ ಮಧ್ಯೆ ರಾಜಸ್ಥಾನದ ಒಂದು ಸರ್ಕಾರಿ ಸಂಸ್ಕೃತ ಶಾಲೆಯ ಒಟ್ಟು 277 ವಿದ್ಯಾರ್ಥಿಗಳಲ್ಲಿ 222 ವಿದ್ಯಾರ್ಥಿಗಳು ಮುಸ್ಲಿಮರು.

ಶಾಲೆಯ ಮುಖ್ಯೋಪಾಧ್ಯಾಯ ವೇದ ನಿಧಿ ಶರ್ಮಾ ಹೇಳುವ ಪ್ರಕಾರ ಈ ಮಕ್ಕಳು ಸಂಸ್ಕೃತ, ಉರ್ದು , ಅರೆಬಿಕ್ ಮತ್ತು ಹಿಂದಿ ಭಾಷೆಯ ಮೇಲೆ ಹಿಡಿತ ಸಾಧಿಸಿದ್ದಾರೆ.
ಸಂಸ್ಕೃತದ ಕಷ್ಟಕರವಾದ ಶಬ್ಧಗಳನ್ನು ಸಹ ಮಕ್ಕಳು ಸುಲಭವಾಗಿ ಉಚ್ಛರಿಸುತ್ತಾರೆ.

ಯುದ್ಧ ಕೈದಿಗಳಾದ ಶತ್ರು ಸೈನಿಕರಿಂದಲೂ ಮುಸ್ಲಿಮರು ಶಿಕ್ಷಣ ಪಡೆಯುವುದಕ್ಕೆ ಪ್ರವಾದಿ ಮುಹಮ್ಮದ್ (ಸ)ರು ಅವಕಾಶ ಮಾಡಿಕೊಟ್ಟಿದ್ದರು. ಈ ರೀತಿ ವಿದ್ಯೆ ಕಲಿಸಿದ ಕೈದಿಗಳನ್ನು ಬಿಡುಗಡೆಗೊಳಿಸಿ ಶಿಕ್ಷಣ ಪಡೆಯಲು ಧರ್ಮ-ಜಾತಿ ಇತ್ಯಾದಿಗಳು ಅಡ್ಡಿಯಾಗಬಾರದೆಂದು ತೋರಿಸಿಕೊಟ್ಟ ಪ್ರವಾದಿ (ಸ) ಇಂದಿಗೂ ಮಾದರಿಯಾಗಿದ್ದಾರೆ.

LEAVE A REPLY

Please enter your comment!
Please enter your name here