– ಇಸ್ಮತ್_ಪಜೀರ್

ಇತ್ತೀಚೆಗೆ ವೀಕೆಂಡ್ ವಿದ್ ರಮೇಶ್ ಕಾರ್ಯಕ್ರಮದಲ್ಲಿ ರಮೇಶ್ ಅವರು ಒಬ್ಬ ಸಾಧಕನನ್ನು ಅಭಿನಂದಿಸುತ್ತಾ ಹೇಳಿದ್ದ ಒಂದು ವಾಕ್ಯ ನನ್ನ ಮೇಲೆ ಅತ್ಯಂತ ಪ್ರಭಾವ ಬೀರಿತ್ತು‌ ” ಯಾರಾದರೂ ನಿಮ್ಮ ಕಾಲೆಳೆಯುತ್ತಾರೆಂದರೆ ಅವರು ನಿಮ್ಮ ಕಾಲಿನ ಲೆವೆಲಲ್ಲಿದ್ದಾರೆಂದು ಅರ್ಥ”.. ಎಂತಹ ಅರ್ಥಗರ್ಬಿತ ಮಾತಲ್ಲವೇ…?
ಸಮಕಾಲೀನ ಭಾರತೀಯ ಇಸ್ಲಾಮಿಕ್ ವಿದ್ವಾಂಸರುಗಳಲ್ಲಿ ಅತೀ ಹೆಚ್ಚು ಟೀಕೆಗೊಳಗಾದವರೂ…‌ಅತೀ ಹೆಚ್ಚು ಗೌರವಿಸಲ್ಪಡುವವರೂ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್. ಬಹುಶಃ ಸಮಕಾಲೀನ ಭಾರತದಲ್ಲಿ ಅತೀ ಹೆಚ್ಚು ಶಿಷ್ಯ ಸಮೂಹವನ್ನು ಹೊಂದಿರುವ ಗುರು ಎ.ಪಿ.ಉಸ್ತಾದರೇ ಇರಬೇಕು..
ಸಮಕಾಲೀನ ಜಗತ್ತಿನ ಅತ್ಯಂತ ಪ್ರಭಾವಿ ಉಲಮಾಗಳ ಪಟ್ಟಿಯಲ್ಲೂ ಎ.ಪಿ.ಉಸ್ತಾದ್ ಇದ್ದಾರೆ.

ಭಾರತದಲ್ಲೇಕೆ ಜಗತ್ತಿನಲ್ಲೇ ಅತೀ ಹೆಚ್ಚು ಅನಾಥ ಮಕ್ಕಳನ್ನು ಸಾಕಿ, ಸಲಹಿ ವಿದ್ಯಾವಂತರನ್ನಾಗಿ ಮಾಡುತ್ತಿರುವ ಅನಾಥ ಸಂರಕ್ಷಕರ ಸಾಲಲ್ಲಿ ಪ್ರಸ್ತುತ ಅಗ್ರ ಸ್ಥಾನದಲ್ಲಿರುವವರು ಎ.ಪಿ.ಉಸ್ತಾದ್.
ಕಾಶ್ಮೀರ, ಗುಜರಾತ್, ಅಸ್ಸಾಂ, ಉತ್ತರ ಪ್ರದೇಶದ ಕೋಮುಗಲಭೆಗಳಲ್ಲಿ ಹೆತ್ತವರನ್ನು ಕಳಕೊಂಡು ಅನಾಥರಾದ ಅದೆಷ್ಟೋ ಮಕ್ಕಳನ್ನು , ಪ್ರಾಕೃತಿಕ ವಿಕೋಪಗಳಿಂದ ಬದುಕು ಕಳಕೊಂಡವರ ಮಕ್ಕಳನ್ನು ಕೇರಳದ ತನ್ನ ಮರ್ಕಝ್ ಕ್ಯಾಂಪಸ್‌ಗೆ ತಂದು ಸಾಕಿ ಸಲಹಿ ವಿದ್ಯಾವಂತರನ್ನಾಗಿ ಮಾಡುವ ಪುಣ್ಯ ಕೈಂಕರ್ಯವನ್ನು ಎ.ಪಿ.ಉಸ್ತಾದ್ ಸದ್ದಿಲ್ಲದೇ ಮಾಡುತ್ತಿದ್ದಾರೆ.
ಅದಾಗ್ಯೂ ಅವರ ಮೇಲೆ ನಿರಂತರವಾಗಿ ಟೀಕೆಗಳ ಸುರಿಮಳೆ ವರ್ಷಿಸುತ್ತಲೇ ಇರುತ್ತದೆ. ಅವ್ಯಾವುದಕ್ಕೂ ಎ.ಪಿ.ಉಸ್ತಾದ್ ಮಾತಿನ ಮೂಲಕ ಪ್ರತಿಕ್ರಿಯಿಸುವುದೇ ಇಲ್ಲ. ಅವರು ತನ್ನ ಪಾಡಿಗೆ ತನ್ನ ಕೆಲಸವನ್ನು ಮುಂದುವರಿಸುತ್ತಲೇ ಬಂದಿದ್ದಾರೆ.
ಅವರೋರ್ವ ಧರ್ಮ ವ್ಯಾಪಾರಿ ಎಂದು ಅವರ ಮೇಲೆ ಟೀಕೆಗಳ ಸುರಿಮಳೆಯಾಗುತ್ತಲೇ ಇರುತ್ತದೆ.
ಅದಕ್ಕೆ ನಾನು ಯಾವತ್ತೂ ಹೇಳುತ್ತಿದ್ದುದಿಷ್ಟೆ.. ” ಅವರು ವ್ಯಾಪಾರವೇ ಮಾಡಲಿ… ತಪ್ಪೇನು.. ಅವರೆಷ್ಟು ವ್ಯಾಪಾರ ಮಾಡ್ತಾರೋ… ಎಷ್ಟು ಲಾಭ ಗಳಿಸ್ತಾರೋ ಅಷ್ಟು ಸಮುದಾಯಕ್ಕೂ ಲಾಭ.. ಎಷ್ಟು ಮಂದಿ ವ್ಯಾಪಾರಿಗಳು ಅವರಷ್ಟು ದೊಡ್ಡ ಸಂಖ್ಯೆಯಲ್ಲಿ ಅನಾಥ ಮಕ್ಕಳ ಬಾಳಿಗೆ ಬೆಳಕಾಗುತ್ತಿದ್ದಾರೆ…” ಬಂಡವಾಳಶಾಹಿಗಳು ದುಡಿದು ಅವರ ಸಂಪತ್ತನ್ನು ವೃದ್ಧಿಸುತ್ತಾರೆಯೇ ಹೊರತು ಸಮುದಾಯದ ಅನಾಥ ಮಕ್ಕಳನ್ನು ದೇಶದ ಮತ್ತು ಸಮುದಾಯದ ಸಂಪತ್ತಾಗಿ ರೂಪಿಸುತ್ತಿಲ್ಲ ತಾನೇ…?”
ಬಹುಶಃ ಭಾರತದಲ್ಲಿ ಇಸ್ಲಾಮಿಕ್ ವಿದ್ವಾಂಸನೊಬ್ಬ ಬದುಕಿರುವ ಕಾಲದಲ್ಲಿ‌ ಅವರ ಬದುಕು ಮತ್ತು ಸಾಧನೆಯ ಬಗ್ಗೆ ಪಿ.ಎಚ್.ಡಿ. ಪ್ರಬಂಧ ಮಂಡನೆಯಾದದ್ದಿಲ್ಲ.. ಒಂದು ವೇಳೆ ಇದ್ದರೂ ಅತೀ ವಿರಳ. ತನ್ನ ಎಂಬತ್ತರ ಇಳಿವಯಸ್ಸಿನಲ್ಲೂ ಅವರು ಮಾಡುತ್ತಿರುವ ಚಟುವಟಿಕೆ ಯುವಕರನ್ನೂ ನಾಚಿಸುವಂತಹದ್ದು..
ದೇಶದ ವಿವಿದೆಡೆ ಮತ್ತು ದೇಶದ ಹೊರಗಡೆಯೂ‌ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿದ ಅವರು ಅವ್ಯಾವುದನ್ನೂ ಕ್ಯಾಪಿಟೇಶನ್ ಕಾಲೇಜಾಗಿಸಿದ್ದಿಲ್ಲ.
ಬಹುಶಃ ಅತೀ ಹೆಚ್ಚು ಪಿ.ಎಚ್.ಡಿ. ಹೋಲ್ಡರ್‌ ಶಿಷ್ಯಂದಿರನ್ನು ಪಡೆದಿರುವ ಭಾರತದ ಇಸ್ಲಾಮಿಕ್ ವಿದ್ವಾಂಸ ಅವರೇ ಆಗಿದ್ದಾರೆ.

ಅವರ ಶಿಷ್ಯ ಪಿ.ಎಮ್.ಮುಹಮ್ಮದ್ ಸಖಾಫಿ ಎಂಬವರು ದೆಹಲಿಯ JNU ವಿನ “Centre of Arabic and African studies” ಇದರ ಪ್ರೊ.ಬಶೀರ್ ಅಹ್ಮದ್ ಜಮಾಲಿ ಅವರ ಮಾರ್ಗದರ್ಶನದಲ್ಲಿ ಅಧ್ಯಯನ ನಡೆಸಿ ಮಂಡಿಸಿದ ” The role and contribution of Sheikh Aboobacker Ahamad to the cultural, Educational and Arabic literacy awakening among the Muslim community in Kerala” ಎಂಬ ಮಹಾಪ್ರಬಂಧಕ್ಕೆ JNU ಪಿ.ಎಚ್.ಡಿ. ನೀಡಿ ಅಂಗೀಕರಿಸಿದೆ.

ಭಾರತದ ಮುಸ್ಲಿಂ ಧಾರ್ಮಿಕ ಕ್ಷೇತ್ರದಲ್ಲಿ ಇದೊಂದು ಮಹತ್ವದ ಮೈಲುಗಲ್ಲು…
ಎ.ಪಿ.ಉಸ್ತಾದರು ಇನ್ನಷ್ಟು ಸಾಧನೆಯ ಶಿಖರವೇರಲಿ..
ಅವರೆಷ್ಟು ಸಾಧಿಸುತ್ತಾರೋ ಅದರಲ್ಲಿ ಮುಸ್ಲಿಂ ಸಮುದಾಯದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಬಹುದೊಡ್ಡ ಲಾಭವಿರುತ್ತದೆ…


LEAVE A REPLY

Please enter your comment!
Please enter your name here