– ಶಾರೂಕ್ ತೀರ್ಥಹಳ್ಳಿ

ಸಾಮಾಜಿಕ ಕೆಡುಕುಗಳಲ್ಲಿ ಮದ್ಯಪಾನ ಕೂಡ ಒಂದು , ಹಳ್ಳಿಯ ಗಲ್ಲಿಯಿಂದ ಹಿಡಿದು ಬೃಹತ್ ನಗರಗಳಲ್ಲಿ ಕೂಡ ಮದ್ಯಪಾನ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಮದ್ಯಪಾನವು ಸ್ಲೋಪಾಯಿಸನ್ ಎಂದೇ ಕರೆಸಿಕೊಂಡಿದ್ದು ವಿಶ್ವದಾದ್ಯಂತ 76 ಮಿಲಿಯನ್ ಜನರು ಈ ದುಶ್ಚಟದಿಂದ ಬಳಲಿತ್ತಿದ್ದಾರೆ ಎಂಬುದಾಗಿ ಅಧ್ಯಯನದ ವರದಿಯೊಂದು ತಿಳಿಸಿದೆ. ಕೇವಲ ಫ್ಯಾಷನ್ ಹೆಸರಿನಲ್ಲಿ ಅಭ್ಯಾಸವಾದ ಮದ್ಯಪಾನ ಸೇವನೆ ನಂತರ ನಿಧಾನವಾಗಿ ಚಟಕ್ಕೆ ತಿರುಗುತ್ತದೆ ಎನ್ನಲಾಗಿದೆ. ಈ ಕೆಡುಕಿನ ವಿರುದ್ದ ಈಗಾಗಲೇ ಹಲವು ಪ್ರತಿಭಟನೆಗಳು, ವಿಚಾರಗೋಷ್ಟಿಗಳು, ಜಾಗೃತಿ ಸಭೆಗಳು ನಡೆದಿದ್ದರೂ ಸಹ ಮದ್ಯಪಾನ ಮಾಡುವವರ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಕಾಣದಿರುವುದು ವಿಷಾದವೆನಿಸುತ್ತದೆ. ಕಳೆದ ಜನವರಿ 30 ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ, ಕರ್ನಾಟಕ ಮದ್ಯ ನಿಷೇಧ ಆಂದೋಲನ ಹಾಗೂ ವಿವಿಧ 54 ಸಂಘಟನೆಗಳ ನೇತೃತ್ವದಲ್ಲಿ ಮದ್ಯ ನಿಷೇಧಕ್ಕೆ ಆಗ್ರಹಿಸಿ ನಾಲ್ಕು ದಿನಗಳ ಹೋರಾಟ ಸಭೆ ಕೂಡ ಹಮ್ಮಿಕೊಳ್ಳಲಾಗಿತ್ತು ಈ ಸಭೆಯಲ್ಲೂ ಕೂಡ ಮದ್ಯಪಾನ ಮುಕ್ತ ದೇಶವನ್ನು ಮಾಡುವ ಸಲುವಾಗಿ ಸಹಸ್ರಾರು ಜನರು ಪಾಲ್ಗೊಂಡಿದ್ದರು. ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿಯವರು ಸಹ ಈ ಮದ್ಯಪಾನದ ವಿರುದ್ದ ಬಹಳ ಕಟುವಾಗಿ ನುಡಿದಿದ್ದರು. ಜನರನ್ನು ಕಣ್ಣೀರಿನಲ್ಲಿಟ್ಟು ಅರ್ಥ ವ್ಯವಸ್ಥೆ ಸುಧಾರಣೆ ಮಾಡುವುದು ರಾಜ್ಯದ ಅಭಿವೃದ್ದಿಯಲ್ಲ. ಆರ್ಥಿಕ ಹೊರೆಯಾದರೂ ಜನರ ನೆಮ್ಮದಿ ನಮಗೆ ಮುಖ್ಯ. ಜನರ ಸುಖ, ಶಾಂತಿಗಾಗಿ ಕರ್ನಾಟಕದಲ್ಲಿ ಮದ್ಯಪಾನ ನಿಷೇಧಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಠಾಧೀಶರ, ಚಿಂತಕರ, ಹೋರಾಟಗಾರರ, ಮಹಿಳಾ ಸಂಘಟನೆಗಳ ಸಭೆಯನ್ನು ಕೂಡಲೇ ಕರೆದು ಮದ್ಯ ನಿಷೇಧವನ್ನು ಆರ್ಥಿಕ ತೊಂದರೆ ಇಲ್ಲದೆ ನಿಷೇಧಿಸುವ ಹೊಸ ನೀತಿಯನ್ನು ಜಾರಿಗೆ ತರಬೇಕು ಅಂದು ಆಗ್ರಹಿಸಿದಲ್ಲದೆ, ಮದ್ಯಪಾನದಿಂದಲೇ ಇಂದು ಅಧಿಕ ಅತ್ಯಾಚಾರ, ಅಪರಾಧ, ಅಪಘಾತವಾಗುತ್ತಿವೆ. ಸರ್ಕಾರಕ್ಕೆ ಜನರ ನೆಮ್ಮದಿಗಿಂತ ದುಡ್ಡೆ ಮುಖ್ಯವಾಗಿದೆ. ದುಡ್ಡಿಗಾಗಿ ಸರ್ಕಾರ ಆಡಳಿತ ನಡೆಸುವುದು ಬೇಡ, ಬಿಹಾರ, ಗುಜರಾತ ರಾಜ್ಯದಲ್ಲಿ ಮದ್ಯ ನಿಷೇದ ಮಾಡಿದೆ. ಅಲ್ಲಿ ಯಾವುದೇ ಆರ್ಥಿಕ ತೊಂದರೆಯಾಗಿಲ್ಲ. ಮದ್ಯದಿಂದಲೇ ಅಧಿಕ ಹಣ ಬರುತ್ತದೆ ಎಂದು ತಪ್ಪು ಕಲ್ಪನೆಯನ್ನು ಬಿಟ್ಟು ಭ್ರಷ್ಟಾಚಾರದ ಮೂಲವನ್ನು ಸರಿಯಾಗಿ ಹತ್ತಿಕ್ಕಿದರೆ ಮದ್ಯಪಾನದಿಂದ ಬರುವ ಹಣಕ್ಕಿಂತ 100 ಪಟ್ಟು ಹಣ ಬರುವುದು. ಇಂತಹ ಕಾರ್ಯಕ್ಕೆ ಮುಂದಾಗಿ ಮಧ್ಯಪಾನವನ್ನು ಸರ್ಕಾರ ನಿಷೇಧಿಸಬೇಕು. ಹೋರಾಟಗಾರರು ಮುಂದಿನ ಆಂದೋಲನವನ್ನು ಕನಕದಾಸರ ಕಾಗಿನೆಲೆ, ಶರೀಪರ ಶಿಶುನಾಳ, ಸಿದ್ದಗಂಗಾ ಶ್ರೀಗಳ ತುಮಕೂರಿನಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಿಸ ಬೇಕು ಎನ್ನುವಂತಹ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರ ಸಲಹೆ ಮದ್ಯಪಾನ ಮುಕ್ತ ದೇಶವನ್ನು ಮಾಡಲು ಹೊರಟಿರುವಂತಹ ಆಂದೋಲನದ ಕಾರ್ಯಕರ್ತರಿಗೆ ಬಹಳ ಸ್ಪೂರ್ತಿಯನ್ನು ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ತೀರ್ಥಹಳ್ಳಿಯ ಗ್ರಾಮೀಣ ಪ್ರದೇಶದಲ್ಲಿ ಕಳಪೆ ಗುಣಮಟ್ಟದ ಮದ್ಯ ಮಾರಾಟವಾಗುತ್ತಿದೆ ಎಂಬ ಮಾಹಿತಿಗಳು ಕೇಳಿ ಬರುತ್ತಲಿದ್ದು. ಈ ಕಳಪೆ ಗುಣಮಟ್ಟದ ಮದ್ಯಪಾನ ಮಾಡಿದ ಅದೆಷ್ಟೋ ಮಂದಿ ಹಸುನೀಗಿರುವ ವಿಷಯಗಳು ನಾವು ದಿನನಿತ್ಯ ಪತ್ರಿಕೆಗಳಲ್ಲಿ ದೃಶ್ಯಮಾದ್ಯಮಗಳಲ್ಲಿ ನೋಡುತ್ತಿದ್ದೇವೆ. ಕಳಪೆ ಗುಣಮಟ್ಟದ ಮದ್ಯಪಾನವನ್ನು ಅಕ್ರಮವಾಗಿ ಸಾಗಿಸಲಾಗುತ್ತಿದ್ದರು ಅಬಕಾರಿ ಇಲಾಖೆಯವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ದೂರಿಕೊಳ್ಳುತ್ತಿದ್ದಾರೆ. ಹಳ್ಳಿ ಹಳ್ಳಿಗಳಲ್ಲಿ ಮನೆ, ಅಂಗಡಿಗಳಲ್ಲಿ, ಕೆಲಸ ಮಾಡುವಲ್ಲಿಗೆ ಅಕ್ರಮ ಮದ್ಯೆಯನ್ನು ಸರಪರಾಜು ಮಾಡಲಾಗುತ್ತಿದೆ ಎಂಬ ಸುದ್ದಿಗಳು ಎಲ್ಲೆಡೆ ಹರಡುತ್ತಲಿದೆ. ಈ ಅಕ್ರಮ ಮದ್ಯ ಮಾರಟಕ್ಕೆ ಸಂಬಂಧಿಸಿ ತೀರ್ಥಹಳ್ಳಿಯ ಯುವ ಹೋರಾಟಗಾರ ಕೆಳಕೆರೆ ಪೂರ್ಣೇಶ್ ಹಲವು ಬಾರಿ ತೀರ್ಥಹಳ್ಳಿಯ ತಹಶೀಲ್ದಾರ್ ಹಾಗೂ ಅಬಕಾರಿ ಇನ್ಸ್ಪೆಕ್ಟರ್ ಮತ್ತು ಪೊಲೀಸರಿಗೆ ಮನವಿ ಮಾಡಿದ್ದರೂ ಕೂಡ ಯಾವುದೇ ಕ್ರಮ ಕೈಗೊಳ್ಳದ ಕಾರಣ. ತೀರ್ಥಹಳ್ಳಿಯ ತಾಲೂಕು ಕಛೇರಿ ಮುಂದೆ ಧರಣಿ ಕೂತು ಪ್ರತಿಭಟಿಸುತ್ತಿದ್ದಾರೆ. ಈ ಪ್ರತಿಭಟನೆಗೆ ಹಲವುರು ಜೊತೆ ನೀಡಿದ್ದಾರೆ. ಪೂರ್ಣೇಶ್ ರವರ ಈ ಹೋರಾಟ ಖಂಡಿತ ಯಶಸ್ಸು ಸಾಧಿಸುತ್ತದೆ. ಅದರ ಜೊತೆಗೆ  ಸಂಪೂರ್ಣ ಮದ್ಯಪಾನದ ವಿರುದ್ದ  ಹೋರಾಟದ ಅವಶ್ಯಕತೆ ಖಂಡಿತ ಇದೆ. ಮದ್ಯಪಾನ ಮುಕ್ತ ದೇಶವಾಗುಬೇಕು ಇದು ಈ ದೇಶದ ನಾಗರೀಕರ ಕೂಗು ಮಾತ್ರವಲ್ಲ, ಮಹತ್ಮಾ ಗಾಂಧೀಜಿಯವರು ಕೂಡ ಮದ್ಯಪಾನ ಎಲ್ಲಾ ಕೆಡುಕುಗಳ ತಾಯಿಯಾಗಿದೆ ಎಂದು ಹೇಳಿದ್ದಾರೆ. ಭಾರತಕ್ಕೆ ಸ್ವಾತಂತ್ರ ಸಿಕ್ಕಿ ಕೆಲವು ದಿನಗಳ ಬಳಿಕ ಮಹತ್ಮಾ ಗಾಂಧೀಜಿಯವರು ಕಲ್ಕತ್ತಾದ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ, ಒಬ್ಬ ವ್ಯಕ್ತಿ ಬಂದು ಗಾಂಧೀಜಿಯವರೊಂದಿಗೆ ಕೇಳಿದರಂತೆ ಭಾರತಕ್ಕೆ ಸ್ವಾತಂತ್ರ ಸಿಕ್ಕಿ ಎಷ್ಟು ಸಂವೃದ್ದಿಯಾಗಿದೆಯಲ್ಲವೆ. ಅದಕ್ಕೆ ಮಹತ್ಮಾ ಗಾಂಧೀಜಿ ಭಾರತಕ್ಕೆ ಇನ್ನೂ ಸ್ವಾತಂತ್ರ ಸಿಗಲಿಲ್ಲ ಎಂದು ಹೇಳಿದರಂತೆ, ಈ ಮಾತು ಕೇಳಿ ಆ ವ್ಯಕ್ತಿಗೆ ಆಶ್ಚರ್ಯವಾಗಿ ಹೇಳಿದನಂತೆ ಇಲ್ಲ ಗಾಂಧೀಜಿ ಭಾರತಕ್ಕೆ ಸ್ವಾತಂತ್ರ ಸಿಕ್ಕಿದೆ ಈಗ ಕೆಂಪು ಕೋಟೆಯಲ್ಲಿ ಬ್ರಿಟೀಷರ ಧ್ವಜವಲ್ಲ ಬದಲಾಗಿ ಭಾರತದ ತ್ರಿವರ್ಣ ಧ್ವಜ ಹಾರಾಡುತ್ತಿದೆ ಎಂದು ಹೇಳಿದಾಗ, ಮಹತ್ಮಾ ಗಾಂಧೀಜಿ ಹೇಳಿದರಂತೆ ಎಲ್ಲಿಯವರೆಗೆ ನಮ್ಮ ದೇಶ ಮದ್ಯಪಾನ ಮುಕ್ತ ದೇಶವಾಗುವುದಿಲ್ಲವೋ ಅಲ್ಲಿಯವರೆಗೆ ನಮ್ಮ ದೇಶಕ್ಕೆ ಸ್ವಾತಂತ್ರ ಇಲ್ಲ ಎಂದೆ ಅರ್ಥ. ಮದ್ಯಪಾನ ಮುಕ್ತ ದೇಶ ಮಾಡಲು ನಮ್ಮ ಸರ್ಕಾರ ಏನೆಲ್ಲ ಕಾರ್ಯಕ್ರಮಗಳನ್ನು ಕೈಗೊಂಡಿದೆ ಎಂಬುದನ್ನು ನಾವು ಯೋಚಿಸಬೇಕಾಗಿದೆ. ಹೆಂಡ ಸರಾಯಿ ಸಹವಾಸ ಹೆಂಡತಿ ಮಕ್ಕಳ ಉಪವಾಸ ಎಂದು ಸರ್ಕಾರದ ಕಛೇರಿಗಳಲ್ಲಿ ದೊಡ್ಡದಾಗಿ ಬರಹಗಳು ಹಾಕಿದ್ದರು, ಈ ಮದ್ಯಪಾನ ಮುಕ್ತ ದೇಶ ಮಾಡಲು ನಮ್ಮ ಸರ್ಕಾರಗಳಿಗೆ ಯಾವುದೇ ಕಾಯ್ದೆ ಕಾನೂನುಗಳಿಲ್ಲ ಬದಲಾಗಿ ಸರ್ಕಾರವೇ ಹೆಂಡತಿ ಮಕ್ಕಳು ಬೀದಿ ಪಾಲಾದರೂ ಪರವಾಗಿಲ್ಲ, ಉಪವಾಸ ಕೂತರೂ ಪರವಾಗಿಲ್ಲ, ಸರ್ಕಾರವೇ ಮುಕ್ತವಾಗಿ ಮದ್ಯಪಾನವನ್ನು ಮಾರಾಟ ಮಾಡಿ ಹಣವನ್ನು ಗಳಿಸುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ಮಕ್ಕಳು ಸಂದರ್ಶನ ನಡೆಸುತ್ತಿದಂತಹ ಸಂದರ್ಭದಲ್ಲಿ. ವಿದ್ಯಾರ್ಥಿಯೊಬ್ಬ ಮುಖ್ಯಮಂತ್ರಿ ಬಳಿ ರಾಜ್ಯದಲ್ಲಿ ಮದ್ಯಪಾನ ನಿಷೇಧ ಮಾಡಿ ಎಂದು ಆಗ್ರಹಿಸಿದಾಗಿ. ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಹೇಳಿದರಂತೆ ಸರ್ಕಾರಕ್ಕೆ ಅತಿ ಹೆಚ್ಚು ಆದಾಯ ಬರುತ್ತಿರುವುದು ಈ ಅಬಕಾರಿ ಇಲಾಖೆಯಿಂದ ಒಂದು ವೇಳೆ ಈ ಮದ್ಯಪಾನವನ್ನು ನಿಷೇಧ ಮಾಡಿದರೆ ಸರ್ಕಾರಕ್ಕೆ ಆದಾಯದ ಕೊರತೆ ಉಂಟಾಗುತ್ತದೆ ಆದ್ದರಿಂದ ಮದ್ಯಪಾನ ನಿಷೇಧ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರೆ, ಮಹಿಳೆಯರನ್ನು, ಮಕ್ಕಳನ್ನು ಮದ್ಯಮ ವರ್ಗದವರನ್ನು ಬೀದಿ ಪಾಲು ಮಾಡಲು ಸರ್ಕಾರವೇ ಪರೋಕ್ಷವಾಗಿ ಕಾರಣ ಎಂದೇ ಹೇಳಬಹುದಾಗಿ. ದೇಶಾದ್ಯಂತ ಮದ್ಯಪಾನದ ವಿರುದ್ದ ಜನಜಾಗೃತಿ ಮೂಡಿಸಿ, ನಿರಂತರ ಹೋರಾಟ ನಡೆಸೂದರಿಂದ ಮದ್ಯಪಾನ ಮುಕ್ತ ದೇಶ ಮಾಡಲು ಸಾಧ್ಯ ಎಂಬುದು ಎಲ್ಲರ ಅಭಿಲಾಷೆಯಾಗಿದೆ. ಈ ಕೆಡುಕಿನ ವಿರುದ್ದ ಎಲ್ಲರೂ ಮತ್ತೊಮ್ಮೆ ಧ್ವನಿ ಎತ್ತ ಬೇಕಾಗಿದೆ.

LEAVE A REPLY

Please enter your comment!
Please enter your name here