• ಶರೀಫ್ ಕಾಡುಮಠ

ಕೊರೊನಾತಂಕ ಇಳಿಮುಖವಾಗುತ್ತಲೇ ನಮ್ಮ ರಾಜ್ಯ ಮತ್ತೆ ಹುರುಪಿನ ಹಾದಿಗೆ ತೆರೆದುಕೊಳ್ಳುತ್ತ ಬಂದಿದೆ. ಈಗಾಗಲೇ ಜನರು ಭೀತಿ ಬಿಟ್ಟು ತಮ್ಮಿಚ್ಛೆಯಂತೆ ಎಲ್ಲ ಕಡೆ ಓಡಾಡುತ್ತಿದ್ದಾರೆ. ಸಂತೆ, ಮಾರುಕಟ್ಟೆ, ಉತ್ಸವ, ಜಾತ್ರೆ, ಸಮ್ಮೇಳನ, ಸಿನಿಮಾ ಥಿಯೇಟರ್, ಮದುವೆ ಸಮಾರಂಭ ಹೀಗೆ ಎಲ್ಲೆಂದರಲ್ಲಿ ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಿ ಜನ ಸೇರುತ್ತಿದ್ದಾರೆ. ಆದರೆ ಇವೇನೂ ಹೆಚ್ಚಿನ ಅಪಾಯಗಳನ್ನು ಸೃಷ್ಟಿಸಿದ ಉದಾಹರಣೆ ಇಲ್ಲ.

ಈ ನಡುವೆ ಶಾಲೆ ಕಾಲೇಜುಗಳನ್ನೂ ತೆರೆಯಲು ಸರ್ಕಾರ ಅವಕಾಶ ಕೊಟ್ಟಿದ್ದು ಉತ್ತಮ ಬೆಳವಣಿಗೆ. ಪ್ರಾಥಮಿಕ ವಿಭಾಗದಲ್ಲಿ ಆರು, ಏಳನೇ ತರಗತಿಯವರಿಗೆ ಮಾತ್ರ ತರಗತಿ ನಡೆಯುತ್ತಿದ್ದರೆ, ಪ್ರೌಢಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ತರಗತಿ ನಡೆಯುತ್ತಿದೆ. ಆದರೆ ಸರ್ಕಾರ ಮಧ್ಯಾಹ್ನದ ಬಿಸಿಯೂಟವನ್ನು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪ್ರಾರಂಭಿಸಿಲ್ಲ. ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗೆ ವಾರಕ್ಕೆ ಎರಡು ಮೂರು ತರಗತಿಗಳು ನಡೆಯುವುದರಿಂದ (ಅದೂ ಕೂಡ ಮಧ್ಯಾಹ್ನದವರೆಗೆ ಮಾತ್ರ) ಆ ಮಕ್ಕಳಿಗೆ ಬಿಸಿಯೂಟದ ಅಗತ್ಯ ಸದ್ಯಕ್ಕಿಲ್ಲ. ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಬಿಸಿಯೂಟಕ್ಕಾಗಿ ಶಾಲೆಗೆ ಕಳುಹಿಸಲಾಗುವ ಅಕ್ಕಿ, ಬೇಳೆ ಮತ್ತು ಹಾಲಿನ ಪುಡಿಯನ್ನು ಸರ್ಕಾರದ ಆದೇಶದಂತೆ ಇಂತಿಷ್ಟು ಗ್ರಾಂ ಲೆಕ್ಕದಲ್ಲಿ ನೀಡಲಾಗುತ್ತಿದೆ. ಇದು ಬಿಸಿಯೂಟಕ್ಕೆ ಪರ್ಯಾಯ ಪರಿಹಾರವಾಗಲು ಸಾಧ್ಯವಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಬುತ್ತಿ ಹೊತ್ತುಕೊಂಡು ಬರುವ ಸ್ಥಿತಿಗೆ ಮತ್ತೆ ಮರಳಿದ್ದಾರೆ.

ಕೋವಿಡ್ ಪರಿಣಾಮ ಎಲ್ಲಿ ಕಣ್ಣಾಡಿಸಿದರೂ ನಮಗೆ ಎಲ್ಲ ವಲಯಗಳಲ್ಲೂ ಕಾಣಸಿಗುತ್ತವೆ. ಮಧ್ಯಮ ವರ್ಗದ, ಬಡ ಕುಟುಂಬಗಳಲ್ಲಿ ಹೊತ್ತು ಹೊತ್ತಿನ ಊಟದ ವ್ಯವಸ್ಥೆ ಅನುಕೂಲಕರವಾಗಿ ಇರುತ್ತದೆ ಎಂದು ನಾವು ಹೇಳಬಹುದಷ್ಟೆ. ಆದರೆ ವಾಸ್ತವ ಚಿತ್ರಣ ಭಿನ್ನವಾಗಿದೆ. ಅಂಗಡಿಯಲ್ಲಿ ಕಡಿಮೆ ಬೆಲೆಗೆ ಲಭ್ಯವಿರುವ ಉಪ್ಪಿನ ಕಾಯಿಯ ಪ್ಯಾಕೆಟ್ ಅನ್ನು ನಂಬಿಕೊಂಡು ಕೆಲವು ವಿದ್ಯಾರ್ಥಿಗಳು ಬರೀ ಅನ್ನವನ್ನು ಬುತ್ತಿಯಲ್ಲಿ ತುಂಬಿಸಿಕೊಂಡು ಬರುತ್ತಿದ್ದಾರೆ. ಮನೆಯ ಪರಿಸ್ಥಿತಿಯೂ ಕಷ್ಟಕರವಾಗಿರಬಹುದು. ಹೀಗಿರುವಾಗ ಸರ್ಕಾರ ಅಕ್ಕಿ, ಬೇಳೆಯನ್ನು ವಿದ್ಯಾರ್ಥಿಗಳಿಗೆ ಒದಗಿಸುವ ಬದಲು ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆ ಮಾಡಿದರೆ ಹೆಚ್ಚು ಅನುಕೂಲ.
ಸದ್ಯ ಎಲ್ಲ ಕಡೆಗಳಲ್ಲೂ ಜನಜಂಗುಳಿ ಇರುವಾಗ ಶಿಸ್ತನ್ನು ಪಾಲಿಸುವ, ಸರದಿಯಲ್ಲಿ ಕುಳಿತು ಊಟ ಮಾಡುವ ವಿದ್ಯಾರ್ಥಿಗಳಿಗೆ ಬಿಸಿಯೂಟ ತಡೆಯಬೇಕಾದ ಅಗತ್ಯವಿಲ್ಲ ಅನಿಸುತ್ತದೆ. ಸರ್ಕಾರ ಕೋವಿಡ್ ನಿಯಮಾವಳಿಗಳನ್ನು ಸಡಿಲಗೊಳಿಸುತ್ತ ಬರುವಾಗ ಎಲ್ಲ ಕ್ಷೇತ್ರಗಳನ್ನು ಸಮಗ್ರವಾಗಿ ಗಮನಿಸಿಲ್ಲ. ಕೆಲವು ವಲಯಗಳಿಗೆ ಹೆಚ್ಚು ಹಾಗೂ ಇನ್ನು ಕೆಲವು ಕ್ಷೇತ್ರಗಳಿಗೆ ಕಡಿಮೆ ಎನ್ನುವಂತೆ ಅಸ್ಪಷ್ಟ ರೀತಿಯಲ್ಲಿ ನಿಯಮ ಸಡಿಲಿಕೆ ಮಾಡಿತ್ತು. ಈ ಅಸ್ಪಷ್ಟತೆ ಹಲವಾರು ಕ್ಷೇತ್ರಗಳಿಗೆ ಸಮಸ್ಯೆ ಉಂಟು ಮಾಡಿದೆ. ಪ್ರೌಢಶಾಲೆ ಬಿಸಿಯೂಟ ವಿಚಾರದಲ್ಲೂ ಇದೇ ಆಗಿದೆ. ಈಗ ಮಧ್ಯಾಹ್ನ ಬಿಸಿಯೂಟ ಮತ್ತೆ ಪ್ರಾರಂಭಿಸದೆ ಇರಲು ಅಂತಹ ದೊಡ್ಡ ಕಾರಣವೇನೂ ಇಲ್ಲ. ತಡೆ ಹಿಡಿದ ನಿಯಮ ಬದಲಿಸಿಲ್ಲ ಎನ್ನುವುದಷ್ಟೇ ಕಾರಣ ಎಂದು ಅನಿಸುತ್ತದೆ.
ಗ್ರಾಮೀಣ ಜನರ ಬದುಕು ಕಂಗೆಟ್ಟು ಹೋಗಿರುವ ಹೊತ್ತಿನಲ್ಲಿ ವಿದ್ಯಾರ್ಥಿಗಳ ಮಧ್ಯಾಹ್ನದ ಊಟದ ಹೊರೆಯನ್ನು ಕುಟುಂಬಗಳ ಮೇಲೆ ಹೊರಿಸುವುದನ್ನು ತಪ್ಪಿಸುವುದು ಸದ್ಯ ಅನಿವಾರ್ಯ. ಮಕ್ಕಳಿಗೆ ಅನ್ನ ನೀಡುವುದು ಕುಟುಂಬಕ್ಕೆ ಹೊರೆಯೇನೂ ಅಲ್ಲ. ಆದರೆ ಪರಿಸ್ಥಿತಿ ಎಲ್ಲ ಹೊತ್ತಿನಲ್ಲೂ ಸರಿಯಿರುತ್ತದೆ ಎನ್ನಲಾಗದು‌. ಅದೂ ಕೂಡ ಕೊರೊನಾ ಕಾಲದ ಈ ವಿಷಮ ಸಂದರ್ಭವನ್ನು ಮತ್ತೆ ವಿವರಿಸಿ ಹೇಳಬೇಕಿಲ್ಲ.
ಮಧ್ಯಾಹ್ನದ ಬಿಸಿಯೂಟ ವಿಚಾರದಲ್ಲಿ ಸರ್ಕಾರ ತಕ್ಷಣ ಗಮನ ಹರಿಸಬೇಕಿದೆ. ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಂಡರೆ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಬಹುದು.

LEAVE A REPLY

Please enter your comment!
Please enter your name here