• ಕ್ಯಾಂಪಸ್ ವರದಿ

ಪಿ.ಎಚ್.ಡಿ.ಅಧ್ಯಯನ ಕೈಗೊಂಡ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ನೀಡುತ್ತಿದ್ದ ಮಾಸಿಕ ರೂ.25,000 ಪ್ರೋತ್ಸಾಹಧನವನ್ನು ಕಡಿತಗೊಳಿಸಿ ಇನ್ನು ಮುಂದೆ ಮಾಸಿಕ 10,000 ರೂ.ಗಳನ್ನು ವಾರ್ಷಿಕ ರೂ. 1,00,000 ಮೀರದಂತೆ ನೀಡಲಾಗುವುದು ಎಂದು ಆದೇಶ ಹೊರಡಿಸಿದೆ. ಮಾತ್ರವಲ್ಲದೇ ವಾರ್ಷಿಕವಾಗಿ ನೀಡುತ್ತಿದ್ದ 10,000 ರೂ.ಗಳ ನಿರ್ವಹಣಾ ವೆಚ್ಚವನ್ನೂ ತೆಗೆದು ಹಾಕಿದ್ದು ವಿಧ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಮುಖ್ಯವಾಗಿ ಪ್ರತಿ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನಾ ಅಧ್ಯಯನದಲ್ಲಿ ತೊಡಗಿರುವ ಅಲ್ಪಸಂಖ್ಯಾತ ಸಮುದಾಯಗಳ ವಿಧ್ಯಾರ್ಥಿಗಳ ಸಂಖ್ಯೆ ಅತಿ ಕಡಿಮೆ ಸಂಖ್ಯೆಯಲ್ಲಿದ್ದು ಅಲ್ಪಸಂಖ್ಯಾತರ ಇಲಾಖೆಯ ಈ ಕ್ರಮ ಸಮುದಾಯದ ಶಿಕ್ಷಣ ಬೆಳವಣಿಗೆ ಮೇಲೆ ಮಾಡಿದ ಗದಾಪ್ರಹಾರವಾಗಿದೆ.

ಸಂಶೋಧನೆಗೆ ಮೀಸಲಿಟ್ಟ ಹಣ ಸೋರಿಕೆಯಾಯಿತೇ..?
ರಾಜ್ಯದಲ್ಲಿ ಸಂಶೋಧನೆಯನ್ನು ಪ್ರೋತ್ಸಾಹಿಸಲೆಂದು ಅನೇಕ ಇಲಾಖೆಗಳು ಆಯಾ ಇಲಾಖೆಗೆ ಸಂಬಂಧಿಸಿದ ವಿಧ್ಯಾರ್ಥಿ ಸಮುದಾಯಕ್ಕೆ ಸಂಶೋಧನಾ ಅಧ್ಯಯನಕ್ಕಾಗಿ ಪ್ರೋತ್ಸಾಹ ಧನವನ್ನು ಮೀಸಲಿಟ್ಟಿದ್ದವು. ಅವುಗಳ ಪೈಕಿ ಇದೀಗ ಅಲ್ಪಸಂಖ್ಯಾತ ಇಲಾಖೆ ರಾಜ್ಯದ ಬೌದ್ಧ, ಸಿಖ್, ಮುಸ್ಲಿಂ, ಕ್ರಿಸ್ಟಿಯನ್, ಜೈನ್, ಪಾರ್ಸಿ ವಿಧ್ಯಾರ್ಥಿಗಳಿಗೆಂದು ಮೀಸಲಿಟ್ಟಿದ್ದ ಸಂಶೋಧನಾ ಹಣಕ್ಕೆ ಇದೀಗ ಕನ್ನ ಬಿದ್ದಿದಂತಾಗಿದ್ದು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಸಹಾಯವಾಗಿದ್ದ ಇದನ್ನು ಕಡಿತಗೊಳಿಸಿರುವುದು ಸಂಶೋದನಾರ್ಥಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ.
ಜೆ.ಆರ್.ಎಫ್. ಮಾದರಿ ಎಂದರೆ ಬೇಕಾಬಿಟ್ಟಿ ಮಾದರಿಯಲ್ಲ, ಅದಕ್ಕೊಂದು ಅರ್ಥವಿದೆ. ತಿಂಗಳಿಗೆ 25000 ರೂಪಾಯಿಗಳಂತೆ ಜೆ.ಆರ್.ಎಫ್. ಮಾದರಿಯಲ್ಲಿ ನೀಡಲಾಗುತ್ತಿದ್ದ ಹಣಕ್ಕೆ ಕತ್ತರಿ ಹಾಕಲಾಗಿದೆ ಮತ್ತು ಅದನ್ನು ಬರೋಬ್ಬರಿ 8333 ರೂಪಾಯಿಗೆ ಇಳಿಸಿ, ನೂರಾರು ಸಂಶೋಧನಾ ವಿದ್ಯಾರ್ಥಿಗಳ ಭವಿಷ್ಯವನ್ನು ನೇಣಿನ ಕುಣಿಕೆಗೆ ಹಾಕಿ ಹಾಯಾಗಿ ಕುಳಿತಂತಿದೆ ಇಲಾಖೆ. ಪ್ರಸ್ತುತ ಸಹಾಯಧನ 3 ವರ್ಷದಿಂದ 5 ವರ್ಷಕ್ಕೆ ಏರಿಸಬೇಕೆಂಬ ಬೇಡಿಕೆಯ ಹೊರತಾಗಿಯೂ ನೀಡುತ್ತಿದ್ದ ಹಣದ ಮೊತ್ತವನ್ನೇ ಕಡಿತಗೊಳಿಸುವ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಲಾಗಿದೆ.

ಇಲಾಖೆ ನೀಡುತ್ತಿದ್ದ ಹಣವನ್ನೇ ನಂಬಿ ನೌಕರಿ, ಮನೆ, ಕೆಲಸ ಎಲ್ಲವನ್ನೂ ಬಿಟ್ಟು ನಾಡಿನ ಹಿತಕ್ಕಾಗಿ ಸಂಶೋಧನೆ ಮಾಡುತ್ತಿರುವ ಅನೇಕ ವಿದ್ಯಾರ್ಥಿಗಳ ಭವಿಷ್ಯ ಇಂದು ಬೀದಿಗೆ ಬಿದ್ದಿದೆ.

ಹೀಗೊಂತರಾ ಅನುಮಾನ..!
ಅಲ್ಪಸಂಖ್ಯಾತ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಕುರಿತು ಎರಡು ತಿಂಗಳ ಹಿಂದೆ ಅನೇಕ ಪತ್ರಿಕೆಗಳಲ್ಲಿ ವರದಿಗಳು ಬಂದಿದ್ದವು. ಈ ಘಟನೆಯ ಬೆನ್ನಲ್ಲೆ ಪಿ.ಹೆಚ್.ಡಿ. ವಿದ್ಯಾರ್ಥಿಗಳ ಫೆಲೋಷಿಪ್ ಅನ್ನು ಪ್ರತಿಶತ 70 ರಷ್ಟು ಕಡಿತಗೊಳಿಸಿದ್ದು ಇಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರಬಹುದೇ ಎಂಬ ಅನುಮಾನ ಈಗ ಎಲ್ಲರ ಮನದಲ್ಲಿ ಮೂಡಿದೆ.

ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕಿದೆ…!
ಮುಖ್ಯಮಂತ್ರಿಗಳ ಗಮನಕ್ಕೆ ಈ ವಿಷಯವನ್ನು ತಲುಪಿಸಿದರೆ ಬಹುಷಃ ಇದರ ಹಿಂದಿರುವ ಹುನ್ನಾರ, ಅಥವಾ ಭ್ರಷ್ಟಾಚಾರ ಬಯಲಿಗೆ ಬರಬಹುದು ಮತ್ತು ವಿದ್ಯಾರ್ಥಿಗಳಿಗಾದ ಅನ್ಯಾಯ ಸರಿಯಾಗಬಹುದು ಎಂಬುದು ಅನೇಕ ವಿದ್ಯಾರ್ಥಿಗಳ ಅಂಬೋಣ.

ನಮ್ಮ ಇಲಾಖೆ ಎಂಬ ಹೆಮ್ಮೆಗೆ ಜಿಗುಪ್ಸೆ …!
ಕೊರೋನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಂಶೋಧಕರ ಸಹಾಯಕ್ಕೆ ನಿಲ್ಲಬೇಕಾದ ಅಧಿಕಾರಿಗಳಾದರೂ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಎಚ್ಚರವಹಿಸಬೇಕಿತ್ತು ಎಂಬ ಬೇಸರ ಅನೇಕರಲ್ಲಿ ಜಿಗುಪ್ಸೆ ಮೂಡಿಸಿದೆ ಮತ್ತು ನಮ್ಮ ಇಲಾಖೆ ಎಂಬ ಹೆಮ್ಮೆಯ ಭಾವಕ್ಕೆ ತಾತ್ಸಾರ ಮೂಡಿದೆ.

ನಾಡಿನ ಹಿತದೃಷ್ಟಿಯಲ್ಲಿ ನೋಡಿದರೆ ವಿದ್ಯಾರ್ಥಿಗಳಿಗೆ ಪ್ರೊತ್ಸಾಹ ನೀಡಿದರೆ ಉತ್ತಮ ಸಮಾಜವನ್ನಾದರು ನಿರ್ಮಾಣ ಮಾಡಬಹುದು. ಆದರೇ ದುರ್ದೈವ ನೋಡಿ, ಅವರ ಭವಿಷ್ಯಕ್ಕೆ ಕೊಡಲಿ ಪೆಟ್ಟು ನೀಡಿ ಅದೇನು ಸಾಧಿಸಲು ಹೊರಟಿದೆಯೋ ಇಲಾಖೆ, ದೇವರೇ ಬಲ್ಲ. …!

ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ದಕ್ಷ ಆಡಳಿತಗಾರರು ಬೇಕು..!
ಒಟ್ಟಿನಲ್ಲಿ ಸಂಶೋಧಕರ ಭವಿಷ್ಯದ ಜೊತೆಗಿನ ಚೆಲ್ಲಾಟವನ್ನು ಇಲಾಖೆ, ಸರ್ಕಾರ ನಿಲ್ಲಿಸಲಿ.
ಅಷ್ಟೇ ಅಲ್ಲ ಅಲ್ಪಸಂಖ್ಯಾತ ಹಕ್ಕುಗಳನ್ನು ರಕ್ಷಿಸುವಂತಹ, ದಕ್ಷ ಅಧಿಕಾರಿಗಳು ಕೂಡ ಇಲಾಖೆಗೆ ಬರುವಂತಾಗಲಿ ಎಂಬುದು ಎಲ್ಲರ ಒಕ್ಕೊರಲಿನ ದ್ವನಿಯಾಗಿದೆ….!

LEAVE A REPLY

Please enter your comment!
Please enter your name here