-ಎಮ್ಮೆಸ್ಕೆ

ಕೊರೊನಾ ಅಟ್ಟಹಾಸ ಜಗತ್ತನ್ನೇ ನಲುಗಿಸುತ್ತಿದೆ. ದಿನಕ್ಕೆ ನೂರು, ಸಾವಿರದ ಲೆಕ್ಕದಲ್ಲಿ ಅಮೆರಿಕಾ, ಇಟಲಿಯಂತಹ ರಾಷ್ಟ್ರಗಳಲ್ಲಿ ಹೆಣಗಳು ರಾಶಿ ಬೀಳುತ್ತಿವೆ. ಇಲ್ಲಿ, ನಮ್ಮ ಭಾರತದಲ್ಲಿ ರಸ್ತೆಯಲ್ಲಿ ಅಂಡಲೆಯುವ ಯುವಕರನ್ನು ದಂಡಿಸಿ ದಂಡಿಸಿ ತಾವೇ ಸುಸ್ತಾಗಿಬಿಟ್ಟಿದ್ದಾರೆ.

ಇಂತಹ ಮೂರ್ಖ ಜನರನ್ನು ಬಹುಶಃ ಬೇರೆ ಯಾವ ಬಡ ದೇಶಗಳು ಕೂಡಾ ಹೊಂದಿರಲಿಕ್ಕಿಲ್ಲ. ಈ ಜನರ ತಲೆಯೊಳಗೆ ಏನಿದೆಯೋ ಏನೊ, ಇತ್ತೀಚಿಗೆ ಪ್ರತಿನಿತ್ಯ ಟಿವಿ ವಾಹಿನಿಗಳಲ್ಲಿ ವಿಡಿಯೊ ಸಮೇತ ನಿರ್ಬಂಧದ ಸುದ್ದಿಗಳು, ಪೊಲೀಸರು ಲಾಠಿ ಬೀಸುವ, ಬಸ್ಕಿ ಹೊಡೆಯಿಸುವ ಸುದ್ದಿಗಳು ಬಿತ್ತರವಾಗುತ್ತಲೇ. ಇವುಗಳನ್ನು ನೋಡುತ್ತಲೇ ಬೀದಿಗಿಳಿಯುವ ಹುಚ್ಚು ಮನಸ್ಸಿನ ಯುವಕರಿಗೆ ಏನೆನ್ನಬೇಕು. ತಮಗೆ ಸಾಯಬೇಕೆನಿಸಿದರೆ ಎಲ್ಲಾದರೂ ಹೋಗಿ ಸಾಯಬಹುದಲ್ಲ, ಇರುವವರನ್ನೂ ಯಾಕೆ ಸಾವಿನ ಆತಂಕಕ್ಕೆ ದೂಡುತ್ತಿದ್ದಾರೆ ಎಂಬುದೇ ಸಿಟ್ಟು, ಸಂಕಟ ತರಿಸುವ ಸಂಗತಿ‌.

ಈ ವಿಚಾರ ಒಂದೆಡೆಯಾದರೆ ಇನ್ನೊಂದೆಡೆ ನಾವು ಆಯ್ಕೆ ಮಾಡಿದ ‘ಮಹಾನ್’ ನಾಯಕರ ಶಿಸ್ತು ಪಾಲನೆ ಇನ್ನೊಂದೆಡೆ, ಕಾರ್ಯಕ್ರಮದಲ್ಲಿ ಭಾಗವಹಿಸುವ ಶಾಸಕರು, ಸಚಿವರು ರಾಜ್ಯಪಾಲ, ಮೊಮ್ಮಗನನ್ನು ರಸ್ತೆಯಲ್ಲಿ ಆಟವಾಡಿಸುವ ಶಾಸಕ, ತಮ್ಮ ಆದೇಶ ತಾವೇ ಉಲ್ಲಂಘಿಸುವ ಮುಖ್ಯಮಂತ್ರಿ ಇವೆಲ್ಲ ನಮ್ಮ (ದುರ್) ಭಾಗ್ಯ ಎನ್ನಬೇಕು. ಜವಾಬ್ದಾರಿಯುತ ಹುದ್ದೆಯಲ್ಲಿ ನಿಂತು ಪ್ರತಿಯೊಂದು ಹೆಜ್ಜೆ ಇಡುವಾಗಲೂ ಸ್ವಲ್ಪ ಯೋಚಿಸಬೇಕು‌. ಆದರೆ ಈ ಬೆಪ್ಪುತಕ್ಕಡಿಗಳಿಗೆ ಹೇಳುವುದಕ್ಕೆ ಇನ್ನು ದೇವನೇ ಬಂದು ನಿಂತರೂ ಸಾಧ್ಯವಿಲ್ಲ. ಇರಲಿ ರಸ್ತೆಗಿಳಿಯಲಿ ಸಾಯಲಿ. ಆದರೆ ಕೊರೊನಾದಂತಹ ಮಾರಕ ರೋಗದ ಸಂದರ್ಭದಲ್ಲಿ ಈ ರಾಜಕೀಯ ನಾಯಕರು ಎಷ್ಟರಮಟ್ಟಿಗೆ ತಮ್ಮ ಜವಾಬ್ದಾರಿಯನ್ನು ತೋರಿಸುತ್ತಿದ್ದಾರೆ? ಎಷ್ಟರಮಟ್ಟಿಗೆ ಜನರ ಬಗ್ಗೆ ಕಾಳಜಿ ವಹಿಸಿದ್ದಾರೆ? ಯಾರು ಎಷ್ಟು ಕೋಟಿ ಸಹಾಯ ಮಾಡಿದರು ಅಂತ ಉದ್ಯಮಿಗಳು, ಸಿನಿಮಾ ನಟ ನಟಿಯರು, ಕ್ರಿಕೆಟ್ ತಾರೆಗಳ ಕಡೆ ಕಣ್ಣು ಬಿಟ್ಟು ನೋಡುವ ಈ ರಾಜಕಾರಣಿಗಳು ತಮ್ಮ ಜೇಬಿನಿಂದ ಎಷ್ಟು ಬಿಚ್ಚಿದರು? ರಾಜ್ಯದಲ್ಲಿ ಇಷ್ಟೊಂದು ರಾಜಕೀಯ ನಾಯಕರಿರುವಾಗ, ಅವರಲ್ಲಿ ಬಹುತೇಕರು ಕೂಡಿಟ್ಟ ದುಡ್ಡಿನಲ್ಲಿ ಒಂದಿಷ್ಟನ್ನು ಸಹಕಾರವಾಗಿ ಕೊಟ್ಟರೆ ಸ್ವಲ್ಪ ಮಟ್ಟಿಗೆ ಸಹಾಯವಾಗಬಹುದಲ್ಲವೇ. ನೆರೆ ಪರಿಹಾರಕ್ಕಾಗಿ ನೆರೆ ಸಂತ್ರಸ್ತರ ಬಳಿಗೆ ನೇರವಾಗಿ ಆಹಾರ ಸಾಮಾಗ್ರಿ ಬಟ್ಟೆ ಬರೆ ಹೊತ್ತುಕೊಂಡು ಧಾವಿಸಿದ್ದು ಬೇರೆ ಬೇರೆ ಊರುಗಳ‌ ಜನಸಾಮಾನ್ಯರೇ ಹೊರತು ರಾಜಕಾರಣಿಗಳು ಅಲ್ಲ. ಈ ಬಾರಿಯೂ ಜನರೇ ಕೊರೊನಾ ಪರಿಹಾರಕ್ಕೆ ಆರ್ಥಿಕ ಸಹಕಾರ ನೀಡಬೇಕೆ? ಜವಾಬ್ದಾರಿಯುತ ಸರ್ಕಾರ ಇಲ್ಲದೇ ಹೋದರೆ ಜನರು ಪದೇ ಪದೇ ಹೈರಾಣಾಗಬೇಕಾಗುತ್ತದೆ. ಒಂದು ಜಿಲ್ಲೆಯ ಜನಸಾಮಾನ್ಯರು ಕೂಡಿ ಕಲೆಹಾಕುವ ದುಡ್ಡು ಒಬ್ಬ ರಾಜಕಾರಣಿಯ ಕೈಯಲ್ಲಿರಬಹುದಾದ ದುಡ್ಡಿನ ಕಾಲು ಅಂಶದಷ್ಟಿರುತ್ತದೆ. ಆದರೂ ಒಂದು ರೂಪಾಯಿ ಹತ್ತು ರೂಪಾಯಿ ಸೇರಿಸಿಕೊಂಡು ದುಡ್ಡು ಸೇರಿಸುವ ಜನರ ಮನಸ್ಸು ಇದೆಯಲ್ಲ ಅದು ಮುಖ್ಯ. ಇಂತಹ ಮನಸ್ಸು, ಕೇವಲ ದುಡ್ಡು ಮಾಡಲಿಕ್ಕೇ ರಾಜಕಾರಣಕ್ಕೆ ಇಳಿಯುವ ಕೆಲವು ನಾಮಧಾರಿ ರಾಜಕಾರಣಿಗಳಿಗೆ ಬಂದಿದ್ದರೆ ಒಂದಿಷ್ಟು ಏಳಿಗೆ ಬಯಸಬಹುದಿತ್ತು.

ಚುನಾವಣೆ‌ ಪ್ರಚಾರ ಸಂದರ್ಭ ಕಳ್ಳದಾರಿಯಲ್ಲಿ ಹಣ ಹೆಂಡ‌ ಹಂಚುವ ರಾಜಕೀಯ ನಾಯಕರು ನೆನಪಿಟ್ಟುಕೊಳ್ಳಬೇಕಾದ‌ ಸಂಗತಿ ಎಂದರೆ ನೀವು ಹಣ ಬಿಚ್ಚಬೇಕಾದ ಅಗತ್ಯ ಇರುವುದು ಇಂತಹ ತುರ್ತು ಸಂದರ್ಭದಲ್ಲಿ. ಈಗ ನೀಡದ ನಿಮ್ಮ ಸಹಕಾರ ಎಂದಿಗೂ ಅಗತ್ಯವಲ್ಲ. ಜನರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ರಾಜಕೀಯ ನಾಯಕರು ಸಹಕಾರದ ಹಾದಿಗೆ ಇಳಿಯಿರಿ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನೀವು ಜೊತೆಯಾದರೆ ಜನರು ನಿಮ್ಮನ್ನು ಎಂದಿಗೂ ಕೈಬಿಡುವುದಿಲ್ಲ ಎಂಬುದು ನೆನಪಿರಲಿ.

LEAVE A REPLY

Please enter your comment!
Please enter your name here