• ಉಮ್ಮು ಯೂನುಸ್ ಉಡುಪಿ

ಡಿಸೆಂಬರ್ 31 ರ ಮಧ್ಯರಾತ್ರಿ ಜಗತ್ತು ಸಡಗರದಿಂದ ಹೊಸವರುಷವನ್ನು ಸ್ವಾಗತಿಸುವುದು ವಾಡಿಕೆ.. ಈ ವರ್ಷಾರಂಭದಲ್ಲೂ ಅದೇ ಜಗತ್ತು ಅದೇ ಉಮ್ಮೀದಿನೊಂದಿಗೆ 2020 ನ್ನು ಸ್ವಾಗತಿಸಿತು. ಆದರೆ, ಈ ಬಾರಿಯ ಹೊಸವರುಷ ಹೊಸ ಹುರುಪು ತರಲೇ ಇಲ್ಲ. ಹೊಸ ಆಶಾಕಿರಣವನ್ನೇನಾದರೂ ತಂದೀತೆಂದು ಆಶಿಸಿದವರಿಗೆಲ್ಲಾ ಹೊಸವರುಷ ಕೈಕೊಟ್ಟಿದೆ. ಈ 2020 ತಾ ಬರುತ್ತಾ ತನ್ನ ಜೊತೆಜೊತೆಗೇ, ಸಹಸ್ರಾರು ಜೀವಗಳ ಬಲಿಪಡೆದು ಜಗತ್ತನ್ನೇ ಭ್ರಾಂತಗೊಳಿಸುವ ರೀತಿಯಲ್ಲಿ ವಿಶ್ವದ ಉದ್ದಗಲಕ್ಕೂ ಹರಡಿರುವ ಭಯಾನಕ ರೋಗವಾದ ಕೊರೋನಾವನ್ನೂ ತಂದಿದೆ. ಈ ರೋಗದ ತೀವ್ರತೆಯೆದುರು ಜಗತ್ತಿನ ದಿಗ್ಗಜ ದೇಶಗಳಾದ ಇಟೆಲಿ, ಚೀನಾ, ಅಮೇರಿಕಾ, ದೇಶಗಳೆಲ್ಲಾ ಕೈಚೆಲ್ಲಿ ಸೋತು ಕುಳಿತಿವೆ.. ತಂತ್ರಜ್ಞಾನದಲ್ಲಿ ಮುಂದುವರಿದ ದೇಶಗಳೆಲ್ಲಾ ತಲೆಯ ಮೇಲೆ ಕೈಹೊತ್ತು ಕುಳಿತಿವೆ. ಹಿಂದೆಂದೂ ಕಂಡು ಕೇಳರಿಯದ ದುರವಸ್ಥೆ..
ಜನತೆ ರಸ್ತೆಗಳಲ್ಲಿ ಅಡ್ಡಾಡುವಂತಿಲ್ಲ, ವಾರ್ಷಿಕ ಪರೀಕ್ಷೆಗಳಿಲ್ಲ, ವೆಕೇಷನ್ ತಿರುಗಾಟವಿಲ್ಲ.. ಜನರ ಚಟುವಟಿಕೆಗಳು ಸಂಪೂರ್ಣ ಬಂದಾಗಿವೆ. ಮದುವೆ, ಮುಂಜಿ, ಮೈಸಿರಿಗಳೆಲ್ಲಾ ಸಂಪೂರ್ಣ ಬಂದ್, ಈ ಬಾರಿಯ ಹೋಳಿ ಬಣ್ಣ ಕಳಕೊಂಡಿದ್ದರೆ, ಯುಗಾದಿಯ ಬೆಲ್ಲವೂ ಬೇವಿನಂತೆ ಕಹಿಯಾಗಿದೆ.. ಅದ್ಯಾವ ರೀತಿಯಲ್ಲಿ ಜನ ಭೀತರಾಗಿದ್ದಾರೆಂದರೆ, ಒಬ್ಬ ಬಡಪಾಯಿ ಸಾಮಾನ್ಯ ನೆಗಡಿಯಿಂದಾಗಿಯೋ, ಅಲರ್ಜಿಯಿಂದಾಗಿಯೋ, ಸೀನಿದನೆಂದರೆ ಮುಗೀತು. ಸುತ್ತಲಿನ ಜನರೆಲ್ಲಾ ಅವನನ್ನು ಏಲಿಯನ್ ಕಂಡಂತಾಡುವ ಪರಿಸ್ಥಿತಿಯುಂಟಾಗಿದೆ. ಜನ ತಮ್ಮವರನ್ನು ಕಾಣಲು ಹೋಗಲಾಗುತ್ತಿಲ್ಲ, ರಜೆಯಲ್ಲಿರುವ ಮಕ್ಕಳನ್ನು ಹಿಡಿದಿಡಲಾಗುತ್ತಿಲ್ಲ.. ಆಸ್ಪತ್ರೆಗಳು ಯಮನ ತವರಿನಂತೆ ಕಾಣತೊಡಗಿದೆ.. ಅಂಗಳವಿರುವ ಮನೆಗಳ ಮಕ್ಕಳಿಗಾದರೆ ಹೊರಗೊಂದಿಷ್ಟು ಇಣುಕಿ ತಾಜಾಹವಾ ಸೇವನೆಯ ಸ್ವಾತಂತ್ರ್ಯವಾದರೂ ಇದೆ. ಆದರೆ ಫ್ಲ್ಯಾಟುಗಳಲ್ಲಿ ಬಂದಿಗಳಾಗಿರುವ ಮಕ್ಕಳು ಮತ್ತವರ ಬಾಲ್ಯದ ಕಥೆಯೇನು? ಅವರ ತಾಯಂದಿರ ಬವಣೆ ಕೇಳುವವರಾರು??

ಇನ್ನು ದಿನಗೂಲಿ ಕಾರ್ಮಿಕರ ಪಾಡು ಹೇಳತೀರದು. ದಿನವೊಂದರ ಖರ್ಚು ತೂಗಿಸುವಷ್ಟರಲ್ಲೇ ಸೋತು ಸುಣ್ಣಾಗುವ ಜನರು ಅತ್ತ ದುಡಿಮೆಯೂ ಇಲ್ಲದೇ, ಇತ್ತ ಹೊಟ್ಟೆ ತುಂಬಿಸಲೂ ಆಗದೇ ಪರದಾಡುವಂತಾಗಿದೆ..
ಇನ್ನು ಮಹಿಳೆಯರ ಸ್ಥಿತಿ ಬಣ್ಣಿಸಲಸದಳ, ಮನೆಯ ಸಕಲವನ್ನೂ ಮೇಲ್ವಿಚಾರಿಸುತ್ತಾ, ಕರ್ಫ್ಯೂ ನಿಂದಾಗಿ ಹೆಚ್ಚಿನದೇನನ್ನೂ ಕೇಳದೇ ಇದ್ದುದನ್ನು ಬಳಸಿ ಅಡುಗೆ ತಯಾರಿಸಬೇಕು, ಅದನ್ನು ತಿನ್ನಲು ಮನೆಯ ಎಲ್ಲಾ ಸದಸ್ಯರನ್ನೂ ಪುಸಲಾಯಿಸಬೇಕು, ಮೂರು ದಿನಗಳ ಸಾಮಾಗ್ರಿಯನ್ನು ಆರುದಿನಗಳಿಗಾಗುವಷ್ಟು ಸೂಕ್ಷ್ಮವಾಗಿ ವ್ಯಯಿಸಬೇಕು, ಆದರೂ ತಯಾರಿಸಿದ ಆಹಾರ ಮಾತ್ರ ಯಾವುದೇ ಫೈವ್ ಸ್ಟಾರ್ ಹೋಟೇಲ್ ಗೂ ಕಡಿಮೆ ಇರಬಾರದು!!!!

ಇಡೀ ಪ್ರಪಂಚ ಇಂತಹದ್ದೇ ಸಮಸ್ಯೆಗಳನ್ನು ಅನುಭವಿಸುತ್ತಿರುವಾಗ ನಮ್ಮ ದೇಶದ ಕಂಥೆ ಕೊಂಚ ಭಿನ್ನವಾಗಿದೆ. 2014ರ ಹೊತ್ತಿಗೆ ಭಾರತೀಯ ಜನತಾ ಪಾರ್ಟಿ ಗದ್ದುಗೆಯೇರುತ್ತಲೇ, ನಮ್ಮಲ್ಲಿ ನೂರಾರು ವರುಷಗಳಿಂದ ನಡೆದು ಬಂದ “ಜಾತ್ಯಾತೀತತೆ” ಎಂಬ ವೃದ್ಧೆ ಹಾಸಿಗೆ ಹಿಡಿಯಿತು..
ರಾಷ್ಟ್ರಪಿತ ಗಾಂಧೀಜೀಯವರ ಮೇಲಿನ ಅಭಿಮಾನದಿಂದಾಗಿಯೇ ಜನತೆ, ಇಂದಿರಾಗಾಂಧೀ, ರಾಜೀವ್ ಗಾಂಧಿ, ಸೋನಿಯಾಗಾಂಧೀ ಯವರನ್ನೆಲ್ಲಾ ಸತತವಾಗಿ ತಮ್ಮ ನಾಯಕರನ್ನಾಗಿ ಆರಿಸಿದರು. ಅಂದರೆ, ಬರೋಬ್ಬರಿ 60 ವರ್ಷ!!
ಆದರೆ, ತದನಂತರದ ಭೃಷ್ಟ ಅಧಿಕಾರಿಗಳು ಪ್ರಜೆಗಳನ್ನೂ ಅವರ ಮತಗಳನ್ನೂ ದುರ್ಬಳಕೆ ಮಾಡಿಕೊಂಡರು, ಕಾಂಗ್ರೆಸ್ ಪಕ್ಷದ ಭ್ರಷ್ಟ ಅಧಿಕಾರಿಗಳು ಪ್ರಜೆಗಳನ್ನು ಬರೇ ವೋಟ್ ಬ್ಯಾಂಕುಗಳನ್ನಾಗಿ ಮಾತ್ರ ಕಂಡು ಏಳಿಗೆ, ಅಭಿವೃದ್ಧಿಗಳೆಲ್ಲವೂ ಮರೀಚಿಕೆಯೆನಿಸಿದಾಗ ಜನತೆ ಎಚ್ಚೆತ್ತುಕೊಂಡರು. ಈ ಸದವಕಾಶಕ್ಕಾಗಿಯೇ ಹೊಂಚುಹಾಕಿ ಕಾಯುತ್ತಿದ್ದ ಬಿಜೆಪಿಗೆ, ರಾಮಜನ್ಮ ಭೂಮಿಯನ್ನು ತೋರಿಸಿ ವೋಟು ಪಡಕೊಳ್ಳಲು ಅಷ್ಟೇನೂ ಕಷ್ಟವೆನಿಸಲಿಲ್ಲ.. ಆದರೆ, ಆ ಬಳಿಕ ಯದ್ವಾತದ್ವ ಅಧಿಕಾರ ಚಲಾಯಿಸಿ ನಾಡ ಜನತೆಯನ್ನು ಕಕ್ಕಾಬಿಕ್ಕಿಯಾಗಿಸಿದ ಶ್ರೇಯಸ್ಸು ಬಿಜೆಪಿಗಿದೆ. ಯಾವುದೋ ಒಂದು ಮಧ್ಯರಾತ್ರಿ ಇದ್ದಕ್ಕಿದ್ದಂತೆ ನೋಟ್ ಬಂದ್ ಮಾಡುತ್ತದೆ, ಒಮ್ಮಿಂದೊಮ್ಮೆಲೇ ಪೆಟ್ರೋಲ್ ಬೆಲೆಯೇರಿಕೆ, ಅಥವಾ ಅಡುಗೆ ಅನಿಲದ ಬೆಲೆಯೇರಿಸಿ, ಬಡಜನರ ಹೊಟ್ಟೆಗೆ ಒದೆಯುತ್ತಲೇ ಸಿರಿವಂತರ ಬೆನ್ನುತಿಕ್ಕುತ್ತದೆ..

ಇವಿಷ್ಟೇ ಅಲ್ಲ, ಇನ್ನೂ ಏನ್ನೇನೋ ಜನೋಪದ್ರಕಾರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಹವಣಿಸುತ್ತಲೇ ಇದೆ. ಅದರ ಮುಂದುವರಿದ ಭಾಗವಾಗಿಯೇ ಈ 2020ರಲ್ಲಿ ಭಾರತೀಯ ಮುಸ್ಲಿಂ ಪ್ರಜೆಗಳಿಗೆ ಅವರ ರಾಷ್ಟ್ರಭಕ್ತಿಯ ಪುರಾವೆ ಕೇಳುತ್ತಿದೆ.

“ಅಚಾನಕ್ಕಾಗಿ” ಎಂದು ನಾವು ಭ್ರಮಿಸಿರುವ ಈ ಯೋಜನೆಗೆ ಸಂಘಪರಿವಾರವು 80 ವರುಷಕ್ಕೂ ಮುನ್ನವೇ ನೀಲನಕಾಶೆ ತಯಾರಿಸಿತ್ತು. ಒಂದು ಕೋಮಿನ ಜನತೆಯ ಕಾಲಡಿಯ ನೆಲವನ್ನಲುಗಿಸಿ, ಬದುಕುವ ಹಕ್ಕನ್ನೇ ಕಸಿದು ಜೀವನವನ್ನು ನರಕಸದೃಶವಾಗಿಸುವ ಹುನ್ನಾರದಲ್ಲಿ ಭಾಜಪ ಪರದೆಯ ಹಿಂದೆಯೂ ಮುಂದೆಯೂ ಬಹಳಷ್ಟು ಕಸರತ್ತು ಮಸಲತ್ತುಗಳನ್ನು ನಡೆಸಿತು.
NRC, CAA, NPR ನಂತಹಾ ಸಂವಿಧಾನ ಬಾಹಿರ ಕಾನೂನುಗಳನ್ನು ತಂದು ಪ್ರಜೆಗಳು ಬಂಡಾಯವೆದ್ದು ಅಮಾಯಕರು ಜೀವಕಳಕೊಳ್ಳುವಂತೆ ಮಾಡಿತಲ್ಲದೇ, ಸಾಕಷ್ಟು ಆಸ್ತಿ-ಪಾಸ್ತಿಗಳ ನಷ್ಟಕ್ಕೂ ಕಾರಣಕರ್ತವಾಯಿತು. ಒಂದರ್ಥದಲ್ಲಿ ಸರಕಾರ ತನ್ನ ಪ್ರಾಯೋಜಕತ್ವದಲ್ಲೇ ಜನರ ನಡುವೆ ಕೋಮು ದಂಗೆ ನಡೆಸಿತು. ಪೋಲೀಸ್ ವ್ಯವಸ್ಥೆಯನ್ನು ನಪುಂಸಕವಾಗಿಸಿತು, ಪ್ರಾಮಾಣಿಕ, ಅಪ್ರಾಮಾಣಿಕರೆನ್ನದೇ ಎಲ್ಲಾ ರಾಜಕಾರಣಿಗಳನ್ನು ಸೈಲೆಂಟ್ ಮೋಡ್ ನಲ್ಲಿಟ್ಟಿತು.

ಆದರೆ, ಜಾತಿ-ಮತಗಳ ಭೇದವಿಲ್ಲದೇ, ಶಾಂತಿಪ್ರಿಯ ಅಪ್ಪಟ ಭಾರತೀಯರು, ವಿದ್ಯಾರ್ಥಿಗಳು, ವಕೀಲರು, ಈ ಸಂವಿಧಾನ ಬಾಹಿರ ಕಾನೂನನ್ನು ಜಾರಿಗೆ ತರಬಾರದೆಂದು ಒಕ್ಕೊರಲಲ್ಲಿ ಆಗ್ರಹಿಸಿದರು. ಜೆ. ಎನ್.ಯೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಬಲಪಂಥೀಯರಿಂದ ದಬ್ಬಾಳಿಕೆಗೊಳಗಾದರು.. ಶಾಹೀನ್ ಬಾಗ್ ನ ವೀರ ವನಿತೆಯರು ಪ್ರಾಣದ ಹಂಗು ತೊರೆದು ಸತ್ಯಾಗ್ರಹಕ್ಕೆ ತೊಡಗಿದರು. ಸುಪ್ರೀಂ ಕೋರ್ಟ್ ವಕೀಲರೂ ಈ ಬಂಡಾಯದ ಕ್ರಾಂತಿಗೆ ತಮ್ಮ ಧ್ವನಿ ಸೇರಿಸಿ ಮತ್ತೊಮ್ಮೆ ಸ್ವಾತಂತ್ರ್ಯ ಸಂಗ್ರಾಮವನ್ನು ನೆನಪಿಸಿದರು.

ಆದರೆ, ಮತಭ್ರಾಂತ ಪಕ್ಷದ ಉದ್ಧಟ ಸದಸ್ಯರಿಗೆ ಮಾತ್ರ ಈ ಪ್ರತಿಭಟನೆಗಳಲ್ಲಿ ಯಾವುದೇ ಸಕಾರಾತ್ಮಕ ಅಂಶ ಗೋಚರಿಸಲೇ ಇಲ್ಲ. ಯಾವುದೇ ಬೆಲೆ ತೆತ್ತಾದರೂ “ಹಿಂದೂ ರಾಷ್ಟ್ರ” ಕಟ್ಟಿಯೇ ತೀರುವೆವೆಂಬ ಭ್ರಮೆ ಸೃಷ್ಟಿಸಿ ಕೆಲವು ಮತಾಂಧರ ಕೈಗೆ ಬಂದೂಕು ನೀಡಿ ದಾರಿಗೆಡಿಸಲಾಯಿತು. ಅಹಿಂಸಾವಾದಿ ಗಾಂಧಿತಾತನ ನಾಡನ್ನು ಹೊತ್ತಿ ಉರಿಸಿ ಆ “ಮಾದರಿ”ಯಲ್ಲೇ ಇಡೀ ದೇಶವನ್ನೇ ಹೊತ್ತಿ ಉರಿಸುವ ಹುನ್ನಾರದಲ್ಲಿದೆ ಸಂಘಪರಿವಾರ…

ಆದರೆ, ಇಂದು ಆ ಎಲ್ಲಾ ಲೆಕ್ಕಾಚಾರಗಳನ್ನು ಸಂಪೂರ್ಣವಾಗಿ ತಲೆಕೆಳಗಾಗಿಸಿದೆ ಒಂದು ಸಣ್ಣ ಸೂಕ್ಷ್ಮ ಜೀವಿ. ಜನರದನಿಯನ್ನು ಬಂದೂಕು, ತ್ರಿಶೂಲಗಳ ಮೂಲಕ ಮಣಿಸಲೆತ್ನಿಸಿದ ಪುಢಾರಿಗಳಿಂದು ಅತಿ ಚಿಕ್ಕಣ್ಣನಿಗೆ ಸೋತು ಅದೆಲ್ಲೋ ಅವಿತಿದ್ದಾರೆ. ಪೌರತ್ವ ಕಸಿಯುವ ಆ ವೇಗದಲ್ಲಿ ಎಲ್ಲೆಂದರಲ್ಲಿ ತೀಕ್ಷ್ಣ ನಾಲಗೆಯ ಹರಿತ ತೋರುತ್ತಾ ತನ್ನ ಸ್ಥಾನದ ಘನತೆ ಮರೆತು ನಿರ್ದಿಷ್ಟ ಕೋಮಿನ ಜನತೆಯನ್ನು “ಗದ್ದಾರ್ ಗದ್ದಾರ್” ಎಂದು ಅರಚಾಡಿ ಹಳಿಯುತ್ತಿದ್ದ ಗೃಹಮಂತ್ರಿಗಳನ್ನು ಅದ್ಯಾರು ಕ್ವಾರಂಟೈನ್ ಮಾಡಿಟ್ಟಿದ್ದಾರೋ ದೇವರಿಗೇ ಗೊತ್ತು..!! ವೈರಸ್ ಭಾರತಕ್ಕೆ ಕಾಲಿಟ್ಟಂದಿನಿಂದ ಈ ಆಸಾಮಿ ಕಾಣೆಯಾಗಿದ್ದಾರೆಂಬ ಹಾಸ್ಯ ಮಿಶ್ರಿತಕುಟುಕಿಗೆ ಅಮಿತ್ ಶಾ ತುತ್ತಾಗಿದ್ದಾರೆ.

ಕೊರೋನಾ ಇಡೀ ಜಗತ್ತು ಬೆಚ್ಚಿ ಬೀಳುವಂತೆ ತನ್ನ ರೌದ್ರಾವತಾರವನ್ನು ತೋರುತ್ತಾ ಚೀನಾ ಮತ್ತು ಇಟೆಲಿಯಲ್ಲಿ ಮರಣ ಮೃದಂಗವನ್ನೇ ಬಾರಿಸಿತು. ಕೊರೋನಾದಿಂದಾಗಿ ಭಾರತದಲ್ಲಿ ಅಂತಹಾ ರಾದ್ಧಾಂತವಾಗದಂತೆ ತಡೆಯಲು, ಎಚ್ಚರಿಕೆಯ ಕ್ರಮವಾಗಿ ದೇಶವನ್ನು ಪ್ರಧಾನಿಯವರು ಲಾಕ್ ಮಾಡಿರುವುದು ಸ್ವಾಗತಾರ್ಹ ಕ್ರಮ. ಚೀನಾದ ಕೊರೋನಾ ನಿಧಿಗೆ ಬೃಹತ್ ಮೊತ್ತದ ದೇಣಿಗೆ ನೀಡಿದ್ದೂ ನಿಜವಾಗಿಯೂ ಶ್ಲಾಘನೀಯ.
ಆದರೆ… ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಬೃಹತ್ ದೇಣಿಗೆ ನೀಡುವಾಗ ತನ್ನ ದೇಶದ ಬಡವನ ಕುರಿತೂ ಚಿಂತಿಸಬೇಕಿತ್ತಲ್ಲವೇ? ತನ್ನ ದೇಶದ ಬಡವನಿಗೆ ಬರೇ ಚಪ್ಪಾಳೆ ಸಾಕೇ? ಲಾಕ್ ಡೌನ್ ನಲ್ಲಿ ಎಲ್ಲರ ಸ್ಥಿತಿಯೂ ಸಮಾನವಾಗಿರುವುಗಿಲ್ಲ. ಈ ದೇಶದಲ್ಲಿ ಒಂದು ವರ್ಗಕ್ಕೆ ಕ್ವಾರಂಟೈನ್ ನಿಂದ ಅಲ್ಪ ಸ್ವಲ್ಪ ತೊಂದರೆಗಳಾಗಿದ್ದರೆ, ಇನ್ನೊಂದು ವರ್ಗಕ್ಕೆ ಸಾವು- ಬದುಕಿನ ನಡುವಿನ ಹೋರಾಟವಾಗಿದೆ. ದಿನಗೂಲಿ ಕಾರ್ಮಿಕರು, ವಲಸೆ ಕಾರ್ಮಿಕರು, ಫುಟ್ಪಾತ್ ನಲ್ಲಿ ದುಡಿದು, ಅಲ್ಲೇ ಮಲಗಿ, ಬದುಕುವವರಿಗೆ ಇದು ತೀರಾ ಸಂಕಷ್ಟದ ಕಾಲವಾಗಿದೆ. ಸರಕಾರ ಇಂತಹಾ ಅತಂತ್ರರ ಬದುಕಿಗೆ ಆಸರೆಯಾಗಬೇಕು. ಅವರಲ್ಲಿ, ವೃದ್ಧರ, ಮಕ್ಕಳ, ಅಶಕ್ತರ ಊಟ ವಸತಿಗಳ ವ್ಯವಸ್ಥೆ ಮಾಡಬೇಕು. ಏಕೆಂದರೆ ಭಾರತ ಬರೇ ಉಳ್ಳವರ ನಾಡಲ್ಲ. ಈ ಎಲ್ಲಾ ಕೆಳಸ್ತರದ ಜನತೆ ಸೇರಿಯೇ ಭಾರತ ಭವ್ಯವಾಗಿದೆ.

ಒಟ್ಟಾರೆಯಾಗಿ ಕೊರೋನಾ “ಆಝಾದೀ” ಗಾಗಿ ಹೋರಾಡುತ್ತಿದ್ದ ಭಾರತದ ಬಡಪಾಯಿಗಳಿಗೆ ಒಂದರ್ಥದಲ್ಲಿ ವರವಾಗಿಯೇ ಪರಿಣಮಿಸಿದೆ, ಕಳೆದೆರಡು ತಿಂಗಳಿಂದಲೂ ದೇಶದ ಪ್ರಜ್ಞಾವಂತ ನಾಗರಿಕರು ತಮ್ಮ ದುಡಿಮೆಯನ್ನೆಲ್ಲಾ ಬದಿಗೆ ಸರಿಸಿ ತಮ್ಮ ಪೌರತ್ವದ ಹಕ್ಕಿಗಾಗಿ ಹೋರಾಡುತ್ತಲೇ ಇದ್ದರೂ ಬಹುತೇಕ ಜನರು ಅವರನ್ನು ಟೀಕಿಸುತ್ತಿದ್ದರು ಅಥವಾ ತಮ್ಮ ಪಾಡಿಗೆ ತಾವಿದ್ದರು.. ಇದಾವುದರ ಪರಿವೆಯೇ ಇಲ್ಲದ “ಕೊರೋನಾ” ಜಾತಿಮತಗಳ ಭೇದವಿಲ್ಲದೇ ಪ್ರತಿಯೊಬ್ಬರನ್ನೂ ಕ್ವಾರಂಟೈನ್ ಮಾಡಿತು.. ಇದೀಗ ಜನತೆಗೆ ಜಾತಿ-ಮತಗಳಿಗೂ ಮಿಗಿಲಾದದ್ದು ಏನಾದರೂ ಇದ್ದರೆ ಅದು “ಮಾನವೀಯತೆ” ಎಂಬ ಅರಿವಾಗಿದೆ. ಈ ಕ್ವಾರಂಟೈನ್ ನ ಕರ್ಫ್ಯೂ ನಿಂದಾಗಿ ಅದೆಷ್ಟೋ ಜನ ಜಾತಿ ಭೇದವಿಲ್ಲದೇ ಪೋಲೀಸರ ಲಾಠಿಯ ರುಚಿಕಂಡರು, ಈ ವಿಶಮ ಪರಿಸ್ಥಿತಿಯಲ್ಲಿ, ಪೌರತ್ವದ ಪುರಾವೆ ಕೇಳುತ್ತಾ, ಹಕ್ಕು ನಿರಾಕರಿಸಲ್ಪಟ್ಟ ಸಮುದಾಯವು, ಮತಭೇದವಿಲ್ಲದೇ ಬಡಜನತೆಗೆ ವೈದ್ಯಕೀಯ ನೆರವು, ಆಹಾರ ಸಾಮಾಗ್ರಿಗಳ ಪೂರೈಕೆಯೊಂದಿಗೆ, ವೃದ್ಧರು ವಿಧವೆಯರ ಸಂರಕ್ಷಣೆಗೂ ಕಟಿಬದ್ಧವಾಗಿದೆ.. ಜಾತಿ- ಮತಗಳೆಂಬ ತುಚ್ಛ ಮನಃಸ್ಥಿತಿಯನ್ನು ಮೀರಿ, ಸೂರಿಲ್ಲದ ನಿರ್ಗತಿಕರ ಹಸಿದ ಹೊಟ್ಟೆಯ ಸಂಕಟ ತೀರಿಸಿ ದೇಶಭಕ್ತಿಯ ಪುರಾವೆ ನೀಡುತ್ತಿದೆ.. NRC, CAA, ತೋಡಿದ ಕಂದರಗಳನ್ನೆಲ್ಲಾ ಮುಚ್ಚಿದ ಕೊರೋನಾ ವೈರಸ್, ಮಾನವನಿಗೆ ಮಾನವೀಯತೆಯ ಪಾಠ ಕಲಿಸಿದೆ..
ಇನ್ನಾದರೂ ದೇಶವನ್ನು ಜಾತಿಯಾಧಾರದಲ್ಲಿ ವಿಭಜಿಸುವ ಕಿರಾತಕ ಯೋಚನೆಯನ್ನು ಭಾಜಪಾ ತೊರೆದು, ಭಾರತವನ್ನು ಅಖಂಡವಾಗಿಸುವತ್ತ ಶ್ರಮಿಸಬೇಕು.

LEAVE A REPLY

Please enter your comment!
Please enter your name here