• ಶಿಕ್ರಾನ್ ಶರ್ಫುದ್ದೀನ್ ಎಂ
    ಪಾಂಡೇಶ್ವರ್

ಕನ್ನಡ ಸಾಹಿತ್ಯ-ರಂಗಮಂಚ ಕ್ಷೇತ್ರಕ್ಕೆ ಹಿರಿಯ ನಾಟಕಕಾರದ ಗಿರೀಶ್ ಕಾರ್ನಾಡರು ನೀಡಿದ ಸಾಹಿತ್ಯಿಕ ಸೇವೆ ಅಪಾರವಾದದ್ದು. “ನನಗನ್ನಿಸುವ ಪ್ರಕಾರ ಕಾರ್ನಾಡ್ ‘ನುಡಿ’ ಹಿಡಿಯುವ’ ಬದಲು, ನಾಟಕದ ‘ನಾಡಿ’ ಹಿಡಿದಿದ್ದಾರೆ. ನಾಡಿ ಹಿಡಿಯುವುದೇ ನಾಟಕಕಾರನ ಕೆಲಸ. ಅದನ್ನು ಸಾಧಿಸಿದರೆ ನುಡಿ ತಾನಾಗೇ ಬಡ ಮೂಡುತ್ತದೆ” ಎಂದು ಕಾರ್ನಾಡರ ನಾಟಕ ಜಾಣ್ಮೆಯ ಕುರಿತು ಬಿ.ವಿ.ಕಾರಂತರು ಅಭಿಪ್ರಾಯಪಟ್ಟಿದ್ದರು. ಇಪ್ಪತ್ತನೇ ಶತಮಾನದಲ್ಲಿ ಭಾರತೀಯ ರಂಗಭೂಮಿಯಲ್ಲಿ ಸಮಗ್ರ ಬದಲಾವಣೆಯ ರೂವಾರಿಯಾದ ಕಾರ್ನಾಡರು- ಐರೋಪ್ಯ, ಗ್ರೀಸ್ ದೇಶಗಳ ರಂಗತಂತ್ರಗಳನ್ನು ತಮ್ಮ ನಾಟಕಗಳಲ್ಲಿ ಪ್ರಯೋಗಿಸಿ ಭಾರತೀಯ ರಂಗ ರಸಿಕರನ್ನು ಚಕಿತಗೊಳಿಸಿದರು.

ಕಾರ್ನಾಡರ ಚೊಚ್ಚಲ ನಾಟಕವಾದ ‘ಯಯಾತಿ’ಯ ಮುಖ್ಯ ಕಥೆ ಪುರಾಣದಿಂದ ಆಯ್ದುಗೊಂಡರೆ, ನಂತರದ ‘ತುಘಲಗ್’ ಇತಿಹಾಸ ಆಧರಿತ ನಾಟಕವಾಗಿದೆ. ಈ ಎರಡು ನಾಟಕಗಳು ದೇಶ ವಿದೇಶಗಳ ಥಿಯೇಟರ್ ಗಳಲ್ಲಿ ಪ್ರದರ್ಶಿತವಾಗಿ ಶ್ರೀಯುತರಿಗೆ ಆವಾಗಲೇ ಅಪಾರ ಖ್ಯಾತಿ ತಂದಿತು. ತದನಂತರ ರಚಿತಗೊಂಡ ‘ಹಯವದನ’ ಮತ್ತು ‘ನಾಗಮಂಡಲ’ ನಾಟಕ ಆಧುನಿಕತೆಗೆ ಒಳಪಡಿಸಿ, ಇತರ ನಾಟಕೀಯ ಅಂಶಗಳಾದ ಸಂಗೀತ, ಕಾವ್ಯ, ಹಾಸ್ಯ, ಮನಮುಟ್ಟುವ ಸಂಭಾಷಣೆ, ಫ್ಲೋಯಿಡಿಟಿ ಇತ್ಯಾದಿ ಉಪಯೋಗಿಸಿ ಎರಡೂ ನಾಟಕಗಳನ್ನು ಕಾರ್ನಾಡರು ಯಶಸ್ವಿಗೊಳಿಸಿದರು. ಈ ಎರಡು ನಾಟಕಗಳು ಕನ್ನಡ ರಂಗಭೂಮಿಯಲ್ಲಿ ಹೊಸ ಪ್ರಜ್ಞೆ ಮೂಡಿಸಲ್ಲದೆ, ಇತರ ಭಾರತೀಯ ನಾಟಕಕಾರರಿಗೆ ಹೊಸ ಮಾದರಿಯನ್ನೊದಗಿಸಿತು. ಬದುಕಿನ ಮೂಲಭೂತ ಸಮಸ್ಯೆಗಳ ಜಟಿಲತೆಯನ್ನು ಮನೋವೈಜ್ಞಾನಿಕವಾಗಿ ಅಧ್ಯಯನಿಸಿ ನಾಟ್ಯಿಕರಿಸಿದರು.

ಅವರ ಹಿಂದಿನ ನಾಟಕಕ್ಕಿಂತ ‘ಹಯವದನ’ ಮತ್ತು ‘ನಾಗಮಂಡಲ’ ನಾಟಕ ಅನೇಕ ರೀತಿಯಿಂದ ಭಿನ್ನವಾಗಿದೆ. ‘ಹಯವದನ’ ನಾಟಕದ ಮುಖ್ಯ ಕಥಾವಸ್ತು ಥಾಮಸ್ ಮಾನ್ನನ ನೀಳ್ಗತೆಯಿಂದ ಆಧರಿತಗೊಂಡಿದೆ. ಅವರ ‘Transformed Head’ ಎಂಬ ನೀಳ್ಗತೆಗೆ ತಾವು ಚಿರಋಣಿಯಾಗಿರುವುದಾಗಿ ನಾಟಕಕಾರರು ಹೇಳಿಕೊಂಡಿದ್ದಾರೆ. ಪರಿಪೂರ್ಣತೆಗಾಗಿ ಹಂಬಲಿಸುವ ಮನುಷ್ಯನ ನಿರಂತರ ಹೋರಾಟವೇ ಈ ನಾಟಕದ ಕಥೆ ಸಂಕೇತಿಸುತ್ತದೆ. ದೇವದತ್ತ ಬುದ್ಧಿಶಕ್ತಿ ಮತ್ತು ಕಪಿಲನ ಅಪ್ರತಿಮ ದೇಹ; ಎರಡನ್ನೂ ಪ್ರೇಮಿಸಿ ಬಯಸುವ ಪದ್ಮಿನಿಯ ದುರಾಸೆ ಪ್ರಾತಿನಿಧಿಕವಾದದ್ದು.

‘When we love, we always strive to become better than we are’ – Paulo Coelho, The Alchemist. ಆದರೆ, ನಾಟಕದ ಕೇಂದ್ರ ಪಾತ್ರಳಾದ ಪದ್ಮಿನಿ, ದೇವದತ್ತನ ಮತ್ತು ಕಪಿಲನ ರುಂಡ ಮುಂಡಗಳು ಅದಲು-ಬದಲಾಗಿ ಜೀವ ಬಂದಾಗ, ದೇವದತ್ತನ ತಲೆ – ಕಪಿಲನ ಮೈ ಸೇರಿದ ಗಂಡಸಿಗೆ ಬಡತಿ ಕೊಟ್ಟು ಊರು ಸೇರುತ್ತಾಳೆ. ಕತೆ ಮುಂದುವರಿದಂತೆ…
“ಅಪ್ರತಿಮ ಮೈ – ಅಪ್ರತಿಮ ಮೆದುಳು – ಅಪ್ರತಿಮ ದೇವದತ್ತ…” (ಪು: 50) ಎಂದು ಬಯಸಿದ ಗಂಡನನ್ನು ಹೃದ್ಪೂರ್ವಕವಾಗಿ ಮೆಚ್ಚುತ್ತಾಳೆ. “ನಿನಗೆ ದೇವದತ್ತನ ಬುದ್ಧಿವಂತ ತಲೆಬೇಕು. ಕಪಿಲನ ಶಕ್ತಿವಂತ ಮೈ ಬೇಕು” (ಪು: 58) ಎಂದು ಆಕ್ರೋಶಪಟ್ಟು ಪದ್ಮಿನಿಗೆ ಛಿಮಾರಿ ಹಾಕಿ, ನಿರಾಸೆಯಿಂದ ಕಪಿಲ ವನವಾಸದಲ್ಲಿ ಒಂಟಿಯಾಗಿ ಉಳಿಯುತ್ತಾನೆ. ಮುಂದೆ ಪದ್ಮಿನಿ ಗರ್ಭ ಧರಿಸಿ, ಮಗುವನ್ನು ಹೆರುತ್ತಾಳೆ. ಇಲ್ಲಿ ನಾಟಕಕಾರರು ಎರಡು ಗೊಂಬೆಗಳ ನೆರವಿನಿಂದ ಪದ್ಮಿನಿಯ ಮನದಾಳ ಭಾವನೆಯನ್ನು ವಿಶ್ಲೇಷಿಸಿ, ತಮ್ಮ ನಾಟಕೀಯ ನುರಿತತೆಯನ್ನು ಎತ್ತಿ ಹಿಡಿದಿದ್ದಾರೆ. ದೇವದತ್ತನ ಬುದ್ಧಿ, ಕಪಿಲನ ದೇಹದಿಂದಲೂ ನಿರಾಸೆಗೊಂಡ ಪದ್ಮಿನಿ, ತನ್ನ ಸ್ವಾರ್ಥವನ್ನು ಮುಂದುವರಿಸಿ ಮಗುವನ್ನು ಕರೆದುಕೊಂಡು ಕಪಿಲನನ್ನು ಅರಸುತ್ತ ಕಾಡಿನಲ್ಲಿ ಅವನನ್ನು ಸೇರುತ್ತಾಳೆ. ನಿಜಕ್ಕೂ, ಅಲ್ಲಿ ಅವಳಿಗೆ ಕಾದದ್ದು ದುರಂತ! ಪದ್ಮಿನಿಯ ನಿಜವಾದ ದುರ್ದಶೆ ಆರಂಭವಾಗುತ್ತದೆ. ಅವಳನ್ನು ಹಿಂಬಾಲಿಸಿ ದೇವದತ್ತ ಕಾಡಿಗೆ ಬರುತ್ತಾನೆ. ದೇವದತ್ತ ಮತ್ತು ಕಪಿಲ ಮುಖಾಮುಖಿಯಾಗಿ, ಅಂಕಕ್ಕಿಳಿದ ಹುಂಜಗಳಂತೆ ಇಬ್ಬರೂ ಯುದ್ಧ ಮಾಡುತ್ತಾರೆ. ಕೊನೆಗೆ ಇಬ್ಬರು ಪರಸ್ಪರ ಇರಿದು ಕೊನೆಯುಸಿರೆಳೆಯುತ್ತಾರೆ. ಇಬ್ಬರ ಸಾವಿನಿಂದ ಒಬ್ಬಂಟಿಯಾದ ಪದ್ಮಿನಿ, ತಾನೂ ಚಿತೆಯೇರುತ್ತಾಳೆ. ಸ್ವಾರ್ಥ- ಮಾನವನ ಮನೋವೈಜ್ಞಾನಿಕವಾದ ಒಂದು ಸಾಮಾನ್ಯ ಅಂಶ. ಆದರೆ, ಅದು ಮಿತಿ-ಮೀರಿದ್ದರಿಂದ ಪದ್ಮಿನಿ, ಇಬ್ಬರೊಡನೆ ಚಿತೆಯೇರಿ ಅಪೂರ್ವ ಮಾದರಿಯ ಮಹಾಸತಿಯಾಗಿ, ದುಃಖಾಂತ್ಯಕ್ಕೆ ಕಾರಣವಾಗುತ್ತಾಳೆ. ಸೂಕ್ಷ್ಮವಾಗಿ ಈ ಪ್ರಸಂಗವನ್ನು ವಿಮರ್ಶಿಸಿದರೆ ಪದ್ಮಿನಿಯ ಸಾವಿನಲ್ಲಿ ವ್ಯಂಗ್ಯವೇ ಎದ್ದು ಕಾಣುವಂತಿದೆ.

ನಾಟಕದ ಆರಂಭದಲ್ಲಿ ಬರುವ ‘ಹಯವದನ’ ಪಾತ್ರದಿಂದ ನಾಟಕಕಾರರು ನಾಟಕದ ಮುಖ್ಯ ಕಥಾವಸ್ತುವಿನ ಅಶಕ್ತ ಸೂಕ್ಷ್ಮಸೂಚನೆಯನ್ನು ನೀಡುತ್ತಾರೆ. ಕೊನೆಗೆ, ಹಯವದನ ಮತ್ತು ಪದ್ಮಿನಿಯ ಮಗ, ಎರಡೂ ಪ್ರತ್ಯೇಕವಾದ ಸ್ವತಂತ್ರ ಪ್ರಸಂಗಗಳನ್ನು ನಿರೂಪಣೆಯಲ್ಲಿ ಒಟ್ಟುಗೂಡಿಸಿ, ನಾಟಕವನ್ನು ನಾಟಕಕಾರರು ಅರ್ಥಪೂರ್ಣಗೊಳಿಸಿದರು. ಜಾನಪದ ಕತೆ-ಜಂತುವಿನೊಂದಿಗೆ ಹಾಸ್ಯ-ಕಾವ್ಯ-ಲವಲವಿಕೆ, ಎಲ್ಲವನ್ನು ಒಂದೆಡೆ ಸೇರಿಸಿ ಅತ್ಯುತ್ತಮ ನಾಟಕವೊಂದನ್ನು ರಚಿಸಿ, ಸಾಹಿತ್ಯಾಭಿಮಾನಿಗಳಿಗೆ ರಸದೌತಣ ಬಡಿಸಿದರು; ರಸಿಕರು ಚಪ್ಪರಿಸಿ ಆನಂದಪಟ್ಟರು.

ಈ ನಾಟಕದಲ್ಲಿ ಗಮನಿಸಬಹುದಾದ ಇನ್ನೊಂದು ಮುಖ್ಯ ಅಂಶವೆಂದರೆ ಭಾಗವತರಿಂದ ಅತೀ ಪ್ರಶಂಸೆಗೆ ಒಳಗಾದ ದೇವದತ್ತ, ನಿಜಕ್ಕೂ ಪ್ರಶಂಸೆಗೆ ಬದ್ಧತೆ ತೋರಿಸುವಲ್ಲಿ ವಿಫಲನಾಗುತ್ತಾನೆ. “ಕಾವ್ಯಸ್ಪರ್ಧೆಗಳಲ್ಲಿ ಕಾವ್ಯ ಪಂಡೀತರನ್ನೂ ಸೋಲಿಸಬಲ್ಲ” ಇತ್ಯಾದಿ ರಸ ಪದಗುಚ್ಛಗಳಿಂದ ಪ್ರಶಂಸೆಗೆ ಒಳಗಾಗುತ್ತಾನೆ. ಆದರೆ, ನಾಟಕದುದ್ದಕ್ಕೂ ಅವನು ತನ್ನ ಕಾವ್ಯ ಜಾಣ್ಮೆಯನ್ನು ತೋರಿಸುವುದಿಲ್ಲ. ಕಪಿಲ ತನ್ನ ದೈಹಿಕ ಚಟುವಟಿಕೆಗಳಲ್ಲಿ ನಿಸ್ಸೀಮನಾಗಿಯೂ, ಪದ್ಮಿನಿಯ ಪ್ರೇಮದಲ್ಲಿ ಕವಿಯಾಗಿಯೂ ಹೊರಬರುತ್ತಾನೆ. ಅಲ್ಲದೇ, ದೇಹಗಳು ಅದಲು ಬದಲಾದಾಗ ಕಪಿಲನಿಗೆ ದೇವದತ್ತನ ದಣಿದ ಕೃಶ ಶರೀರ ಒಲಿದು ಬಂದರೂ, ತನ್ನ ದುರಾದೃಷ್ಟಕ್ಕೆ ಕುಗ್ಗದೇ, ಆ ಅಶಕ್ತ ಶರೀರವನ್ನೂ ಶಕ್ತಿಶಾಲಿಯಾಗಿ ಬೆಳೆಸುತ್ತಾನೆ. ಆದರೆ, ಅನಿರೀಕ್ಷಿತವಾಗಿ ದೊರೆದ ಕಪಿಲನ ಶಕ್ತಿಶಾಲಿ ದೇಹವನ್ನು ನಿರ್ವಹಿಸುವಲ್ಲಿ ದೇವದತ್ತ ಸೋಲುತ್ತಾನೆ. ಈ ಅಂಶವನ್ನು ವಿಮರ್ಶಿಸಿದರೆ, ನನಗೆ ದೊರೆತ ನೀತಿ “ಅತೀಯಾಗಿ ಪ್ರಶಂಸೆಗೆ ಒಳಗಾದವರು, ಮಾಡಿ ತೋರಿಸುವಲ್ಲಿ ವಿಫಲರಾಗುವರು” ಎಂದು! ಭಾಗವತರಿಂದ ಅತಿ ಪ್ರಶಂಸೆಗೆ ಒಳಗಾದ ದೇವದತ್ತ, ಕೊನೆಗೆ ಸಾಧಿಸಿದ್ದು ಶೂನ್ಯ!

ಸ್ವಾರ್ಥ ದುಃಖಾಂತ್ಯವನ್ನು ತೀರ್ಪಿಸಿದರೆ, ಸುಖಾಂತ್ಯ ನಿರ್ಧರಿಸುವ ಅಂಶ ಕಾರ್ನಾಡರ ಇನ್ನೊಂದು ಮನೋರಂಜಕ ನಾಟಕವಾದ ‘ನಾಗಮಂಡಲ’ ಪ್ರವಚಿಸುತ್ತದೆ. ಈ ನಾಟಕದ ಕೇಂದ್ರ ಪಾತ್ರಳಾದ ರಾಣಿ ವಯಸ್ಸಿಗೆ ಬಂದರೂ ಸಂಸಾರ ನಡೆಸುವ ಕುರಿತು ಅರಿವು ಇರುವುದಿಲ್ಲ. ತಂದೆ-ತಾಯಿಯ ಮಮತೆಯ ಸುಖೊಷ್ಣತೆಯಲ್ಲಿ ಬೆಳೆದ ರಾಣಿಯೂ, ಬಹಳ ಮುಗ್ಧತೆಯ ಸ್ವಭಾವದವಳು. ರಾಣಿ ವಯಸ್ಸಿಗೆ ಬಂದಾಗ ತಂದೆ-ತಾಯಿಯರು ರಾಣಿಗೆ ಅಪ್ಪಣ್ಣನೊಂದಿಗೆ ವೈವಾಹಿಕ ಸಂಬಂಧವನ್ನು ಕಟ್ಟಿ, ಕಳಿಸಿಕೊಡುತ್ತಾರೆ. ಹೆಸರಿಗೆ ತಕ್ಕಂತೆ ರಾಣಿ, ದೈಹಿಕವಾಗಿ ಸುಂದರಿಯೇ. ‘ಕತೆ’ ಅವಳ ಸೌಂದರ್ಯತೆಯನ್ನು ಪರಿಚಯಿಸಿದ್ದಂತೆ,

“… ರಾಣಿ, ಉದ್ದ ಹೆರಳಿನ ರಾಣಿ- ದೊಡ್ಡ ತುರುಬಿನ ರಾಣಿ, ತುರುಬು ಕಟ್ಟಿದರೆ ಹಡಕಿನ ಹಾಗೆ ಕಾಳನಾಗರ ಹೀಗೆ ಬಾಲ ಸುತ್ತಿಕೊಂಡು ಕೂತ ಹಾಗೆ ಸುರುಳಿನ ಮೇಲೆ ಸುರುಳಿ ಓಲಾಡಬೇಕು. ಬಿಚ್ಚಿದರೆ ಕರಿಯಧಾರೆ ಮೈಗುಂಟ ಫಳ ಫಳ ಅಂತ ಹರಿದು ಬಂದು ಕಾಲಿನ ಗೆಜ್ಜೆಯೊಡನೆ ಚೆಲ್ಲಾಟ ಆಡಬೇಕು”

ಲಗ್ನವಾಗಿದ್ದರೂ ಅಪ್ಪಣ್ಣ ಆಕೆಯೊಡನೆ ಯಾವ ಪ್ರೀತಿ, ಪ್ರೇಮದ ಕುರುಹಾದ ದೈಹಿಕ ಸಂಬಂಧಗಳನ್ನು ಇಟ್ಟುಕೊಳ್ಳುವುದಿಲ್ಲ. ಸ್ವರ್ಣಸುಂದರಿ ರಾಣಿಯನ್ನು ಬಿಟ್ಟು ತನ್ನ ದೇವದಾಸಿಯೊಂದಿಗೆ ಕಾಲ ಕಳೆಯುತ್ತಾನೆ. ಅಂತಹ ಕ್ರೂರಿ, ಸೂಳೆಯ ಸಂಗ ತೊರೆದು ಹೆಂಡತಿಯೊಡನೆ ಸಂಸಾರ ಮಾಡಲು ಪವಾಡದ ಅವಶ್ಯಕತೆ ಉಂಟಾಗುತ್ತದೆ. ಈ ಅವಶ್ಯಕತೆಯನ್ನು ಸರಿಯಾಗಿ ಪೂರ್ಣಗೊಳಿಸಲು ಪ್ರಯತ್ನಿಸುವ ಕುರುಡವ್ವ, ಗಂಡನ ಪ್ರೀತಿ ದೊರಕಲು ಮಾಯ ಬೇರಿನ ತುಂಡುಗಳನ್ನು ರಾಣಿಗೆ ಕೊಡುತ್ತಾಳೆ. ಆ ಬೇರುಗಳ ರಸವನ್ನು ಗಂಡನಿಗೆ ಬಡಿಸಿದರೆ ಆತ ಬದಲಾಗುತ್ತಾನೆಂದು ಹೇಳುತ್ತಾಳೆ.

ಲಗ್ನವಾದರೂ ರಾಣಿಗೆ ದೈಹಿಕ ಸಂಪರ್ಕವೆಂದರೇ ಏನೂ ತಿಳಿದಿರುವುದಿಲ್ಲ. ಹಾಗಾಗಿ, ಅವಳು ಆ ಬೇರಿನ ರಸವನ್ನು ಅಪ್ಪಣ್ಣನಿಗೆ ಉಣಬಡಿಸದೆ, ಮನೆಯಾಚೆಗಿನ ದೊಡ್ಡ ನಾಗರಹಾವಿನ ಹುತ್ತದಲ್ಲಿ ಸುರಿಯುತ್ತಾಳೆ. ಬೇರಿನ ಪ್ರಭಾವದಿಂದ ನಾಗರಹಾವಿಗೆ ರಾಣಿಯಲ್ಲಿ ಪ್ರೀತಿ ಹುಟ್ಟಿಕೊಳ್ಳುತ್ತದೆ. ಪ್ರೀತಿಯ ಸಂಕೇತವಾದ ನಾಗರಹಾವು, ಬಚ್ಚಲು ಮನೆಯಲ್ಲಿರುವ ತೂತಿನಿಂದ ಮನೆಯೊಳಗೆ ಬಂದು ಮಾನವನ ರೂಪ ಧರಿಸುತ್ತದೆ. ಅದೂ ಅಪ್ಪಣ್ಣನ ವೇಷ! ಪ್ರೀತಿಯಿಂದ ವಂಚಿತಳಾಗಿದ್ದ ರಾಣಿಗೆ, ನಾಗಪ್ಪ ಸೌಖ್ಯದ ಅರಿವು ಮೂಡಿಸುತ್ತಾನೆ. ನಾಗಪ್ಪನ ಮತ್ತು ರಾಣಿಯ ಸಂಭಾಷಣೆಯನ್ನು ಗಮನಿಸಿದರೆ ರಾಣಿಯ ಸರಳತೆ ಮತ್ತು ನಾಗಪ್ಪನ ಮನಸ್ಸಿನಲ್ಲಿ ರಾಣಿ ಆವರಿಸಿದ ಭಾವನೆ ಎದ್ದು ಕಾಣುತ್ತದೆ. ಮುಂದೆ, ಮುಗ್ಧ ಹುಡುಗಿಯಿಂದ ಭಾವಿ ತಾಯಿಯಾಗುವ ರಾಣಿ, ಅಪ್ಪಣ್ಣನ ಸಂಶಯದ ಕೆಂಗಣ್ಣಿಗೆ ಗುರಿಯಾಗುತ್ತಾಳೆ. ಅಲ್ಲಿಯೂ, ನಾಗಪ್ಪನೇ ರಾಣಿಗೆ ಕೃಪೆಯಾಗಿ ಬಂದು ಪಾವನವೆನ್ನುತ್ತಾನೆ.

ಕ್ರೂರಿಯಾಗಿದ್ದ ಮುಗ್ಧ ರಾಣಿಯನ್ನು ಪ್ರೀತಿಸದಿದ್ದ ಅಪ್ಪಣ್ಣ, ಕೊನೆಗೆ ಸಂಸಾರಿಯಾದಾಗ ಹೆಂಡತಿಯ ಕುರಿತು ಭಕ್ತಿ ಭಾವವನ್ನು ಹೊಂದು, ಗೌರವಿಸುತ್ತಾನೆ. ಈ ಗೌರವ ರಾಣಿಗೆ ಸುಲಭವಾಗಿ ಒಲಿದು ಬರಲಿಲ್ಲ; ಬದಲಾಗಿ, ಸೌಖ್ಯದ ತ್ಯಾಗ ಮತ್ತು ಮಾನ-ಮರ್ಯಾದೆಯ ತ್ಯಾಗದ ಫಲಿತಾಂಶವೇ ಗೌರವವಾಗಿ ರಾಣಿಗೆ ಒಲಿಯುತ್ತೆ. ನಾಟಕದಲ್ಲಿ ಕಾಣಸಿಗುವ ಇನ್ನೊಂದು ತ್ಯಾಗವೆಂದರೆ ರಾಣಿ-ಅಪ್ಪಣ್ಣರ ಸಂಸಾರದಲ್ಲಿ ಕಹಿ ಹಿಂಡಲು ನಿರಾಕರಿಸಿ, ಆತ್ಮಹತ್ಯೆಗೈಯ್ಯುವ ನಾಗಪ್ಪನ ತ್ಯಾಗ! ಸ್ವಾರ್ಥದಿಂದ ಪದ್ಮಿನಿ ದುಃಖಾಂತ್ಯ ಕಂಡರೆ, ರಾಣಿ ಮತ್ತು ನಾಗಪ್ಪನ ತ್ಯಾಗದಿಂದ ನಾಟಕ ಸುಖಾಂತ್ಯ ಕಾಣಲು ಸಾಧ್ಯವಾಯಿತು.

ಒಟ್ಟಾರೆ, ಈ ಎರಡು ನಾಟಕಗಳಿಂದ ಕಾರ್ನಾಡರುಗಳಿಸಿದ ಖ್ಯಾತಿ ಅಪಾರ. ‘ನಾಗಮಂಡಲ’ ನಾಟಕದಲ್ಲಿ ಬರುವ ಎರಡು ಜಾನಪದ ಕತೆಗಳು ತಮಗೆ ಏ.ಕೆ. ರಾಮನುಜನ್ ಹೇಳಿಕೊಡುವುದರಿಂದ ತಾವು ತಮ್ಮ ಕೃತಿಯನ್ನು ಅವರಿಗೆ ಅರ್ಪಿಸುತ್ತೇನೆಂದು ನಾಟಕಕಾರರು ಹೇಳಿಕೊಂಡಿದ್ದಾರೆ. ನಾಟಕದಲ್ಲಿ ಬರುವ ಜ್ಯೋತಿಗಳ ಸಂಭಾಷಣೆ, ನಾಗರಹಾವು ಮಾನವನ ರೂಪ ಧರಿಸುವ ಪ್ರಸಂಗ (shape-shifting), ನಾಟಕದ ನಡುವೆ ಯುವತಿಯ ರೂಪ ಧರಿಸಿದ ಕತೆಯ ಕಥಾ ವಿವರಣೆ, ರಾಣಿ-ನಾಗಪ್ಪನ ಮಾತುಕತೆ ಇತ್ಯಾದಿಗಳಿಂದ ನನಗೆ ‘ನಾಗಮಂಡಲ’ ನಾಟಕ ಅಚ್ಚುಮೆಚ್ಚು.

ಗ್ರಂಥಋಣ

  1. ಕಾರ್ನಾಡ, ಗಿರೀಶ್. ನಾಗಮಂಡಲ.
    ಧಾರ್ವಾಡ: ಮನೋಹರ ಗ್ರಂಥಮಾಲ, ೧೯೯೩
  2. ಕಾರ್ನಾಡ, ಗಿರೀಶ್. ಹಯವದನ.
    ಧಾರ್ವಾಡ: ಮನೋಹರ ಗ್ರಂಥಮಾಲ, ೧೯೯೧

LEAVE A REPLY

Please enter your comment!
Please enter your name here