ಸಿನಿಮಾ ವಿಮರ್ಶೆ

ಎಂ. ಅಶೀರುದ್ದೀನ್ ಅಲಿಯಾ ಮಂಜನಾಡಿ

ಡಾ. ಬೀಮ್ ರಾವ್ ಅಂಬೇಡ್ಕರ್ ಸ್ವತಂತ್ರ ಭಾರತದ ಯುಗ ಪುರುಷ. ಅವರು ದೇಶಕ್ಕೆ ಅರ್ಪಿಸಿದ ಸಂವಿಧಾನದ ಲಾಭ ಪಡೆದ ನಾವು ಅವರನ್ನು ಮತ್ತು ಅವರ ತತ್ವ ಸಿದ್ಧಾಂತವನ್ನು ಮೂಲೆ ಗುಂಪು ಮಾಡಿದ್ದೇ ಹೊರತು ಅವರ ಚಿಂತನೆಗಳನ್ನು ಪುನರ್ಜೀವ ಮಾಡುವ ಕಾರ್ಯಕ್ಕೆ ಕೈ ಹಾಕಲಿಲ್ಲ ಎಂಬುವುದು ವಿಷಾದನೀಯ. ಅಂಬೇಡ್ಕರ್ ರವರ ಬಗ್ಗೆ  ಅಂಕಗಳಿಸಲು ಬೇಕಾಗಿ ಕಲಿಯುವ ವಿದ್ಯಾರ್ಥಿಗಳೇ ಹೆಚ್ಚಾಗಿರುವ ಈ ಕಾಲದಲ್ಲಿ ಅವರ ಬಗ್ಗೆ ಆಳವಾದ ಅಧ್ಯಾಯನ ಮಾಡುವವರು  ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದಾರೆ. ಸಾಹಿತ್ಯ ರಂಗದಲ್ಲಿ ಅಂಬೇಡ್ಕರ್ ರವರ ಸಿದ್ಧಾಂತಗಳು ಸ್ವಲ್ಪ ಮಟ್ಟಿಗೆ ಜೀವಂತವಿದ್ದರೆ, ಕಲೆ ಸಾಂಸ್ಕೃತಿಕ ರಂಗದಲ್ಲಿ ಅವರ ಬಗ್ಗೆ ನಿಶಾನೆ ಕಾಣಲು ಸಾಧ್ಯವಿಲ್ಲ. ಪ್ರಸಕ್ತ ಕಾಲದಲ್ಲಿ ಅವರು ನಾಟಕ ಸಿನಿಮಾ ರಂಗದಿಂದ ದೂರವಾಗುತ್ತಿದ್ದಾರೆ ಎಂಬುವುದು ಸತ್ಯ.

ದೃಶ್ಯ ಮಾಧ್ಯಮದ ಈ ಕಾಲದಲ್ಲಿ ಜೀವನಾಧಾರಿತ ಸಿನಿಮಾಗಳ ಟ್ರೆಂಡ್ ಇತ್ತೀಚಿಗೆ ಹೆಚ್ಚಿದ್ದರೂ ಅದು ಎಲ್ಲವು ಬಲಪಂಥೀಯ ವಿಚಾರಧಾರೆಗೆ ಹೊಂದಿಕೊಂಡ ಕೋಮುವಾದಿ ಮುಖವಾಡ ವಿರುವವುಗಳೇ ಹೆಚ್ಚು. ಮುಸ್ಲಿಮರನ್ನು, ಮೊಗಲರನ್ನು ಅಥವಾ ಆಡಳಿತ ವರ್ಗದ ವಿರೋಧಿಗಳ ನೇತಾರರನ್ನು ವಿಮರ್ಶಿಸಿಯೇ ಬಿಡುಗಡೆ ಹೊಂದಿರುತ್ತದೆ. ಅದರಿಂದ ರಾಜಕೀಯ ಲಾಭವೇ ಹೊರತು ಇತರ ಪ್ರಯೋಜನವಿಲ್ಲ.

ಭಾರತೀಯ ಸಿನಿಮಾ ರಂಗವು ಗಾಂಧೀಜಿ ಮತ್ತು ಭಗತ್ ಸಿಂಗ್ ರನ್ನು ಹೆಚ್ಚು ಸಲ ತೆರೆಗೆ ತಂದು ನಿಲ್ಲಿಸುವಾಗ  ಅಂಬೇಡ್ಕರ್ ರವರ ಬದುಕು ಮತ್ತು ಹೋರಾಟವನ್ನು ಕಾಣದಾದರು. ಮರಾಠಿ ಭಾಷೆಯಲ್ಲಿ ಕೆಲವೊಂದು ಸಿನಿಮಾಗಳನ್ನು ಬಿಟ್ಟರೆ. (ಕನ್ನಡದಲ್ಲಿಯೂ ಒಂದು ಬಿಡುಗಡೆ ಗೊಂಡಿದೆ). ಇತರ ಭಾಷೆಗಳಲ್ಲಿ ಹೆಚ್ಚೇನು ಕಾಣಲು ಸಾಧ್ಯವಿಲ್ಲ.  ವಿಪರ್ಯಾಸವೆಂದರೆ ಹಿಂದಿ ಸಿನಿಮಾ ರಂಗವು ಅಂಬೇಡ್ಕರ್ ರವರನ್ನು ತೆರೆಗೆ ತರುವಲ್ಲಿ ಹೆಚ್ಚಿನ ಆಸಕ್ತಿ ವಹಿಸಲಿಲ್ಲ. ಬಲಪಂಥೀಯರ ಷಡ್ಯಂತರ ಇದರ ಹಿಂದೆ ಇಲ್ಲದಿಲ್ಲ ಎನ್ನಲು ಸಾಧ್ಯವಿಲ್ಲ. 

ಅಂಬೇಡ್ಕರ್ ರವರ ಜೀವನ ಚರಿತ್ರೆ ಸಿನಿಮಾ ಪ್ರೀಯರಿಗೆ ಇಷ್ಟವಾಗದೇ ಹೋಯಿತೆ ?. ಬಲಪಂಥೀಯ ವಿಚಾರ ಧಾರೆಯವರು ಹಣ ಹೂಡಲು, ನಿರ್ದೇಶಿಸಲು ಹೆದರಿದರೆ ? ಅಂಬೇಡ್ಕರ್ ಅಭಿಮಾನಿಗಳಲ್ಲಿ ಸಿನಿಮಾ ಮಾಡುವ ಆಸಕ್ತಿ ಇಲ್ಲವಾಯಿತೇ ? ಇತ್ಯಾದಿ ಪ್ರಶ್ನೆಗಳು ಸಾಮಾನ್ಯವಾಗಿ ಉಂಟಾಗುತ್ತದೆ.

ಅಂಬೇಡ್ಕರ್ ವಿಚಾರದಲ್ಲಿ ವಿಶ್ವಾಸ ವಿರಿಸಿದ ಎಷ್ಟೋ ನಟರು, ನಿರ್ದೇಶಕರು, ನಿರ್ಮಾಪಕರು ಸಿನಿಮಾ ರಂಗದಲ್ಲಿ ಇದ್ದಾರೆ. ಅವರೆಲ್ಲರೂ ಸೇರಿ ಅಂಬೇಡ್ಕರವರ ವಿಚಾರಧಾರೆಯನ್ನು ತೆರೆ ಮೇಲೆ ತರುವ ದೊಡ್ಡ ಪ್ರಯತ್ನಕ್ಕೆ ಇಳಿಯಬೇಕು ಎಂಬುವುದು ನನ್ನತಹ ಹಲವರ ಬೇಡಿಕೆ.

ಈ ಸಂದರ್ಭದಲ್ಲಿ, ಇಪ್ಪತ್ತು ವರ್ಷಗಳ ಹಿಂದೆ ಅಂಬೇಡ್ಕರ್ ರವರ ಜೀವನಾಧಾರಿತ ಸಿನಿಮಾ ಮಾಡಲು ಸಾಹಸಕ್ಕಿಳಿದು ಯಶಸ್ವಿಯಾದ ಜಬ್ಬಾರ್ ಪಟೇಲ್ ಅವರ ಸಿನಿಮಾದ ಬಗ್ಗೆ ಸ್ವಲ್ಪ ವಿವರಿಸುತ್ತೇನೆ.

ಡಾ. ಬಾಬಾಸಾಹೇಬ್ ಅಂಬೇಡ್ಕರ್  ಮಲಯಾಳಂ ನಟ ಮಮ್ಮುಟ್ಟಿ ಅಭಿನಯದ ಈ ಸಿನಿಮಾವನ್ನು ಮಹಾರಾಷ್ಟ್ರದ ನಿರ್ದೇಶಕ ಜಬ್ಬಾರ್ ಪಟೇಲ್ ನಿರ್ದೇಶಿಸಿದರು. ಅಂಬೇಡ್ಕರ್ ರವರ ಬಾಲ್ಯದ ನೆನಪುಗಳಿಂದ ಸಂಚರಿಸುವ ಈ ಸಿನಿಮಾ ಅವರ ಬಾಲ್ಯ, ವಿವಾಹ, ಶಿಕ್ಷಣ, ಹೆತ್ತವರ ಪತ್ನಿಮಕ್ಕಳ ಸಾವು ನೋವು, ತಾನು ಅನುಭವಿಸಿದ ಕಷ್ಟ ನಷ್ಟ ತ್ಯಾಗಗಳ ನಡುವೆ ಸಂಚರಿಸಿ ಹೋರಾಟದೊಂದಿಗೆ ಮುಕ್ತಾಯವಾಗುತ್ತದೆ.

ಬೀಮ್ ರಾವ್ ಬರೋಡ ರಾಜ್ಯದ ಮಹಾರಾಜರಾದ ಸಯ್ಯಾಜಿ ರಾವ್ ಗಾಯಕ್ ವಾಡ್ -III ರವರ ಕೃಪೆಯಿಂದ ವಿದ್ಯಾರ್ಥಿ ವೇತನ ಪಡೆದು  ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಕಲಿಯುವ ಸಂದರ್ಭದಲ್ಲಿ ಬಿಡುವಿನ ವೇಳೆ ಅವರು ಹೊಟ್ಟೆಪಾಡಿಗಾಗಿ ಹೊಟೇಲುಗಳಲ್ಲಿ ಪಾತ್ರೆ ತೊಳೆದು ಟೇಬಲ್ ಶುಚಿಗೊಳಿಸಿ ಜೀವನ ಸಾಗಿಸುತ್ತಿದ್ದರು. ಅವರು ಮನಸ್ಮ್ರುತಿ ಓದುವಾಗಲೆಲ್ಲ ತನ್ನ ಬಾಲ್ಯ ಕಾಲದಲ್ಲಿ ಮೇಲ್ವರ್ಗದವರು ಕೆಳವರ್ಗದ ಮೇಲೆ ನಡೆಸುವ ದೌರ್ಜನ್ಯದ ಘಟನೆಗಳನ್ನು ನೆನಪಿಸುತಿದರು. ಒಮ್ಮೆ ಅವರು ತಾಯಿಯೊಂದಿಗೆ ಬಟ್ಟೆ ಖರೀದಿಸಲು ಹೋಗುವಾಗ ಓರ್ವ  ಬ್ರಾಹ್ಮಣ ಬಟ್ಟೆ ವ್ಯಾಪಾರಿ ತಾಯಿಂದ ಹಣ ಪಡೆದು ಸಾರಿಯೊಂದನ್ನು ಕೊಳಕು ನೀರಿನಲ್ಲಿ ಅದ್ದಿ  ತಾಯಿಯ ಮುಖಕ್ಕೆ ಎಸೆದರು. ಕೂದಲು ತೆಗೆಯಲು ನಿರಾಕರಿಸಿದ ಒಬ್ಬ ದನದ ಕೂದಲು ತೆಗೆಯುತ್ತಿದ್ದಾಗ ಅದನ್ನು ಪ್ರಶ್ನಿಸಿದರು ಆಗ ಅವನು ಹೀಗೆಂದ  “ನೀವು ದನ, ನಾಯಿ, ಬೆಕ್ಕಿಗಿಂತಲೂ ಹೀನರು”. ಶಾಲೆಯಲ್ಲಿ ಕಲಿಯುತ್ತಿರುವಾಗ  ತರಗತಿ ಹೊರಗಡೆ ಕುಳ್ಳಿರಿಸಿದ್ದು, ಶಿಕ್ಷಕಿ ಸಂಸ್ಕೃತ ಕಲಿಸಲು ನಿರಾಕರಿಸಿದ್ದು, ಇತ್ಯಾದಿ ಅವರನ್ನು ಬಹಳ ಕಾಡುತಿತ್ತು. ಅವರು 1915 ರಲ್ಲಿ M.A ಪಾಸ್ ಆಗಿ ಮುಂದಕ್ಕೆ ಕಲಿತ ನಂತರ ಹತ್ತು ವರ್ಷ ಬರೋಡಾ ಸಂಸಂಸ್ಥಾನದಲ್ಲಿ ಸೇವೆ ಸಲ್ಲಿಸಬೇಕೆಂಬ ವಿಶೇಷ ಕರಾರಿನೊಂದಿಗೆ ಲಂಡನ್ ನ ಸ್ಕೂಲ್ ಆಫ್ ಇಕೋನೋಮಿಕ್ ನಲ್ಲಿ ಕಲಿತರು.  ನಂತರ ಭಾರತಕ್ಕೆ ಮರಳಿ ಕರಾರಿನಂತೆ ಕೆಲಸ ಆರಂಭಿಸಿದರು. ಆದರೆ ತಂಗಲು ಒಬ್ಬನೇ ಒಬ್ಬ ಹಿಂದೂ ಹೋಟೆಲುಗಳಲ್ಲಿ ಅನುಮತಿ ನೀಡಲಿಲ್ಲ. ಇತರರು ಅಸ್ಪೃಶ್ಯ ಎಂದು ವ್ಯಾಪಾರಕ್ಕೆ ಹೊಡೆತ ಬೀಳಬಹುದು ಎಂದು ನಿರಾಕರಿಸಿದರು. ಕಚೇರಿಯಲ್ಲಿ ಕೆಳದರ್ಜೆಯ ಉದ್ಯೋಗಸ್ತರಿಂದ ಹಿಡಿದು ಉನ್ನತ ಹುದ್ದೆಯಲ್ಲಿರುವವರು ಸೇರಿ ಹೀಯಾಳಿಸಿದರು ಸಾರ್ವಜನಿಕ ಹೂಜಿಯಲ್ಲಿರುವ ನೀರನ್ನು ಕುಡಿಯುವುದನ್ನು ತಡೆದರು. ಅನಿವಾರ್ಯವಾಗಿ ಕೆಲಸ ಬಿಡಬೇಕಾಗಿ ಬಂತು. ನಂತರ ಕೆಲಸ ಬಿಟ್ಟು ಬೊಂಬೆಗೆ ಮರಳಿ ಪ್ರೊಫೆಸರ್ ಆಗಿ Sydenham College Commerce and Economics ಕೆಲಸಕ್ಕೆ ಸೇರಿದರು. ಆದರೂ ಅಲ್ಲಿನ ಬ್ರಾಹ್ಮಣ ವಿದ್ಯಾರ್ಥಿಗಳು ಅವರನ್ನು ತುಚ್ಛ ಭಾವದಿಂದ ನೋಡಲಾರಂಭಿಸಿದರು. ಆದರೆ, ಒಬ್ಬ ಅಸ್ಪೃಶ್ಯನಿಗೆ ಇಂಗ್ಲಿಷ್ ಸರಿಯಾಗಿ ಓದಲಿಕ್ಕೆ ಬರಲಿಕ್ಕಿಲ್ಲ ಎಂಬ ಅವರ ಊಹೆ ಸುಳ್ಳಾಯಿತು. ಅಲ್ಲಿ ಇದ್ದ ಇತರ ಅಧ್ಯಾಪಕರಿಗಿಂತ ಅಗಾದ ಪಾಂಡಿತ್ಯವನ್ನು ಹೊಂದಿದವರಾಗಿದ್ದರು. ಸಾಹು ಮಹಾರಾಜ್ ರವರ ಗೆಳೆತನ ಇದ್ದುದರಿಂದ ಅವರು ‘ಮೂಕನಾಯಕ್’ ಎಂಬ ಪತ್ರಿಕೆ 1920 ರಲ್ಲಿ  ಆರಂಭಿಸಿದರು. ನಂತರ ಅವರದ್ದು ಹೋರಾಟದ ಭಾಗ.  ದಲಿತ ಕೆಳವರ್ಗದ ಜನರ ಏಳಿಗೆಗಾಗಿ ಅವರು ಹೋರಾಡಿದರು. ದೇಶ ಸುತ್ತಿ ಜನರಲ್ಲಿ ಜಾಗೃತಿ ಮೂಡಿಸಿದರು. ಇತ್ಯಾದಿ ಸಂಗತಿಗಳನ್ನು ಅತ್ಯಂತ ಸ್ಪಷ್ಟ ಮನ ಮುಟ್ಟುವಂತೆ ಸಿನಿಮಾ ವಿವರಿಸುತ್ತದೆ. ಮಹಾಡ್ ಘಟನೆ, ಮನುಸ್ಮೃತಿಯನ್ನು ಸುಡುವುದು, ದೇವಾಲಯ ಪ್ರವೇಶ ಇತ್ಯಾದಿ ಸಂದರ್ಭಗಳನ್ನು ದೃಶ್ಯಾವಿಸ್ಕರಿಸಲಾಗಿದೆ.  ಅಂಬೇಡ್ಕರ್ ರವರ ವ್ಯಕ್ತಿತ್ವಕ್ಕೆ ತಕ್ಕಂತೆ ಹೋಲುವ ಮಮ್ಮುಟ್ಟಿಯವರ ನಟನೆ ಆದ್ಭುತವಾದದ್ದು ನೋಡುವವರಿಗೆ ಅಂಬೇಡ್ಕರ್ ಮತ್ತು ಮಮ್ಮುಟ್ಟಿಗೆ ಮುಖ ಭಾವದಲ್ಲಿ ವೆತ್ಯಾಸ ಕಂಡುಕೊಳ್ಳಲು ಸಾಧ್ಯವಿಲ್ಲ. 

ನಿರ್ದೇಶಕರಾದ ಜಬ್ಬಾರ್ ಪಟೇಲ್ 1990ರಲ್ಲಿ ಕತೆ ಸಿದ್ಧಪಡಿಸಲು ಆರಂಭಿಸಿ ಸುಮಾರು ಮೂರು ವರ್ಷ ತಗುಲಿತು. ನಾಯಕನ ಆಯ್ಕೆಯ ಬಗ್ಗೆಯೂ ತುಂಬಾ ಆಲೋಚಿಸಿದರು. ಸುಮಾರು ವಿಶ್ವದ 100  ನಾಯಕರ ಪಟ್ಟಿ ಮಾಡಿದ್ದರಂತೆ ಅನಿರೀಕ್ಷಿತತೆ ಎಂಬಂತೆ ಮಮ್ಮುಟ್ಟಿಯ ಆಯ್ಕೆ ಆಯಿತು. ಮೂರು ವರ್ಷ ಸಿನಿಮಾ ನಿರ್ಮಾಣಕ್ಕೆ ತಗುಲಿತು.1998ರಲ್ಲಿ  ಸೆನ್ಸಾರ್ ಮಂಡಳಿಯ ವಿವಾದಗಳ ನಂತರ ಸಿನಿಮಾ 2000 ಇಸವಿಯಲ್ಲಿ ಬಿಡುಗಡೆ ಗೊಂಡಿತು. ಉತ್ತಮ ಚಿತ್ರಕ್ಕಾಗಿ ಸ್ವರ್ಣ ಕಮಲಾ ಪಡೆಯಿತು. ಮಮ್ಮುಟ್ಟಿ ಉತ್ತಮ ನಟರಾಗಿ ಆಯ್ಕೆಯಾದರು. ಚಂದ್ರ ಕಾಂತ್ ದೇಸಾಯಿ ಶ್ರೇಷ್ಠ ಕಲಾ ನಿರ್ದೇಶಕರಾಗಿ ಆಯ್ಕೆಯಾದರು. ನಂತರ ತಮಿಳು ತೆಲುಗು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಯಿತು. National film development corporation ಸಿನಿಮಾ ನಿರ್ಮಾಣಕ್ಕೆ ಸಹಕರಿಸಿತು. ಸೋನಾಲಿ ಕುಲ್ಕರ್ಣಿ, ಮೋಹನ್ ಘೋಕಲೆ, ಮಿರ್ನಲ್ ಕುಲ್ಕರ್ಣಿ, ನಟ ನಟಿಯಾಗಿ ಅಭಿನಯಿಸಿದರು. ಎಲ್ಲರು ನೋಡಲೇ ಬೇಕಾದ ಸಿನಿಮಾ

2 COMMENTS

  1. ಉತ್ತಮ ಲೇಖನ?

    ಅಂಬೇಡ್ಕರ್ ಅವರು ಸಂಸ್ಕೃತದಲ್ಲಿ ಪುಸ್ತಕ ಬರೆದಿದ್ದಾರೆಯೇ.. ಹಾಗಾದರೆ ಅದರ ಹೆಸರನ್ನು ದಯವಿಟ್ಟು ತಿಳಿಸಿ….

  2. ರೀ ಸುಮಾರವರೇ ಅಂಬೇಡ್ಕರವರು ಸ್ತ್ರೀಯರಗೋಸ್ಕರ ಎಷ್ಟೊಂದು ಹೋರಾಟ ಮಾಡಿದ್ದಾರೆ ಎಂಬುವುದು ಮೊದಲು ತಿಳಿಕೊ… ರೀ ಮೇಡಂ

LEAVE A REPLY

Please enter your comment!
Please enter your name here