ಲೇಖಕರು : ಉಮರ್ ಫಾರೂಕ್, ಇಸ್ಲಾಂಪುರ – ಇಳಕಲ್.

ಮಟ ಮಟ ಮಧ್ಯಾಹ್ನದಲ್ಲಿ ಆಕಾಶದಲ್ಲಿ ನಿಗಿ ನಿಗಿ ಕೆಂಡದಂತೆ ಪ್ರಜ್ವಲಿಸುತ್ತಿರುವ ಸೂರ್ಯ. ಕೆಳಗೆ ಕಾದು ಕೆಂಪಾದ ಅಂಚಿನಂತಾದ ಮರುಭೂಮಿಯ ಕಣಗಳು. ಮರುಭೂಮಿಯಲ್ಲಿ ಜೋರಾಗಿ ಬೀಸುತ್ತಿರುವ ಬಿಸಿಗಾಳಿ. ಶರೀರವಿಡೀ ಚಾಟಿ ಏಟಿನಿಂದಾದ ಗಾಯಗಳು. ಸ್ವಲ್ಪವೂ ಅತ್ತಿತ್ತ ಮೈ ಅಲುಗಾಡಿಸಲಾಗದಂತೆ ಎದೆಯ ಮೇಲೆ ಬೃಹದಾಕಾರದ ಕಪ್ಪು ಕಲ್ಲುಗಳು. ದೇಹ ಕುಕ್ಕರಿನಲ್ಲಿಟ್ಟ ಮಾಂಸದಂತೆ ಬೇಯುತ್ತಿದೆ. ಮಾಂಸಖಂಡಗಳೂ, ಮೈಮೇಲಿನ ರೋಮಗಳೂ ಸೆಟೆದು ನಿಂತು ಕರಟುತ್ತಿವೆ. ಉಸಿರಾಡಲು ಕಷ್ಟವಾಗುತ್ತಿದೆ. ಕಪ್ಪು ಕಲ್ಲಿನ ಭಾರ ಅಸಹನೀಯವಾಗಿದೆ. ಕಣ್ಣಂಚಿಂದ ಮಡುಗಟ್ಟಿದ್ದ ಕಣ್ಣೀರು ಕೆನ್ನೆಗಿಳಿಯುತ್ತಿದೆ. ಸುತ್ತಲೂ ಚಪ್ಪಾಳೆ ತಟ್ಟಿ, ಅಟ್ಟಹಾಸದ ಕೇಕೆ ಹಾಕುತ್ತಾ, ನಗೆ ಬೀರುತ್ತಿರುವ ಶತ್ರುಗಳು. ಕಲ್ಲೆಸೆದು ಕೈ ತಟ್ಟಿ, ತಕ ಥೈ ಅಂತ ಕುಣಿಯುತ್ತಿರುವ ಶತ್ರುಗಳ ಮಕ್ಕಳು. ಊಹುಂ, ಹಿಂಸಿಸಿದ್ದು ಸಾಕಾಗಲಿಲ್ಲ, ಮನಸ್ಸಿಗೆ ಸಮಾಧಾನವಾಗಲಿಲ್ಲ. ಎದೆಯ ಮೇಲೆ ಮತ್ತೊಂದಿಷ್ಟು ಭಾರದ ಸುಡುವ ಕಲ್ಲನ್ನಿಟ್ಟರು. ಕೊರಳಿಗೆ ಹಗ್ಗ ಬಿಗಿದರು. ಮನಸೋ ಇಚ್ಛೆ ಎಳೆದಾಡಿದರು!

ಕೇವಲ ಮೈಬಣ್ಣ ಇದ್ದಿಲಿನಂತೆ ಕಪ್ಪಾಗಿತ್ತೆನ್ನುವ ಕಾರಣಕ್ಕೆ, “ಅಹದ್” ಎಂದು ಹೇಳಿದ ಕಾರಣಕ್ಕೆ ಇಥಿಯೋಪಿಯಾದ ನೀಗ್ರೋ ಗುಲಾಮನಾಗಿದ್ದ ಬಿಲಾಲ್ (ರ) ಅನುಭವಿಸಿದ ನರಕ ಸದೃಶ್ಯ ಯಾತನೆ ಇದು.

ಯಾರು ಗುಲಾಮರು?! ಹೇಗಿತ್ತು ಗುಲಾಮಗಿರಿ?!

ಗುಲಾಮರು ನಿಕೃಷ್ಟರು. ಹಣ್ಣು, ತರಕಾರಿಯಂತೆ ಅಂಗಡಿಯಲ್ಲಿ ಮಾರಾಟವಾಗುವವರು. ಮನಸ್ಸು, ಮಾಂಸ, ಮಜ್ಜೆಗಳಿದ್ದರೂ ಜಾನುವಾರುಗಳಂತೆ ಸಂತೆಯಲ್ಲಿ ಬಿಕರಿಯಾಗುವವರು. ಹಗಲಿರುಳಿನ ವ್ಯತ್ಯಾಸವಿಲ್ಲದೆ ಕೇವಲ ದುಡಿಯಲಿಕ್ಕಾಗಿ ಹುಟ್ಟಿದವರು. ಸಂಪಾದನೆಗಾಗಿ ದೇಹವಿಡೀ ಬಾಸುಂಡೆ ಬರೋ ಹಾಗೇ ಲಾಠಿಯೇಟು ತಿನ್ನುವವರು. ಮುಖದಲ್ಲಿ ಕಾದ ಕಬ್ಬಿಣದ ಸರಳುಗಳಿಂದ ಸುಟ್ಟ ಗಾಯಗಳನ್ನು ಅಂಟಿಸಿಕೊಂಡವರು. ನಡೆಯುವುದು, ಕೂರುವುದು, ಮಲಗುವುದು ಮಾತ್ರವಲ್ಲ ಟಾಯ್ಲೆಟ್ಟಿಗೆ ಹೋಗಲೂ ಯಜಮಾನನ ಅನುಮತಿ ಪಡೆಯಬೇಕಾದವರು. ಹೊಡೆತ, ಬಡಿತ, ಬೈಗುಳ ತಿನ್ನಬೇಕಾದವರು. ಯಜಮಾನನ ಬಾಯಿಯಿಂದ ಅವಾಚ್ಯ, ಅಸಭ್ಯ, ಅಸಹ್ಯ ಮಾತುಗಳನ್ನು ಕೇಳಬೇಕಾದವರು. ಕರಿಯನಾಗಿ ಹುಟ್ಟುವುದಕ್ಕಿಂತ ನಾಯಿಯಾಗಿ ಹುಟ್ಟುವುದೇ ಲೇಸು ಎನ್ನುವಂತಿದ್ದ ಕಾಲ & ಪ್ರದೇಶವದು.

ಅಂತಹದೊಂದು ದರೋಡೆಕೋರರ ಸ್ವರ್ಗದಲ್ಲಿ, ಅಮ್ಮನ ಮಡಿಲಿನಲ್ಲಿ ಆಟವಾಡಿ, ತಂದೆಯ ಹೆಗಲ ಮೇಲೆ ನಲಿಯಬೇಕಾಗಿದ್ದ ಬಾಲ್ಯದಲ್ಲಿಯೇ ಬಿಲಾಲ್ (ರ) ಗುಲಾಮನೆಂದು ಗುರುತು ಸಿಗಲು ಕಾದ ಕಬ್ಬಿಣದಿಂದ ಶರೀರಕ್ಕೆ ಹಚ್ಚೆ ಹಾಕಿಸಿಕೊಂಡಿದ್ದರು. ಬಿಲಾಲ(ರ)ರಿಗೆ ಒಂಟೆಯನ್ನು ಮೇಯಿಸುವ ಕೆಲಸ. ಅದು ಅವರ ಜೀವನದ ಕರಾಳ ಅಧ್ಯಾಯ. ಕುದಿಯುತ್ತಿರುವ ಮರಳ ರಾಶಿಯಲ್ಲಿ ಒಂಟೆಯ ಹಿಂದೆ ನಡೆಯುವುದೇ ಭಯಾನಕ ಶಿಕ್ಷೆ. ಧಗಧಗಿಸುವ ಬಿಸಿಲಿನಲ್ಲಿ ಅಲ್ಲಲ್ಲಿದ್ದ ಖರ್ಜೂರದ ಮರಗಳೇ ಏಕೈಕ ಆಶ್ರಯತಾಣ. ಅದರ ನೆರಳಿನಲ್ಲಿ ಕುಳಿತುಕೊಳ್ಳುವ ವಿಷಯ ಯಜಮಾನನಿಗೆ ಗೊತ್ತಾಗಬಾರದು. ಗೊತ್ತಾದರೆ ಲಾಠಿ ಏಟು ಬೆನ್ನಿನಲ್ಲಿ ಅಚ್ಚೊತ್ತುತ್ತಿತ್ತು. ರೋಮಗಳು ಸೆಟೆದು ಕರಟಿಸುವ ಬಿಸಿಲಲ್ಲಿ, ಹಸಿವೆ-ದಾಹದಿಂದ ನರಳಿದ ದೀರ್ಘ ಹಗಲುಗಳು ಹೃದಯ ಭೇದಕವಾಗಿದ್ದವು. ಜಲ್ಲಿಕಲ್ಲಿನ ರಸ್ತೆಯಲ್ಲಿ ಗಾಜಿನ ಹೂಜಿಯನ್ನು ಒಡೆಯದಂತೆ ಉರುಳಿಸಿಕೊಂಡು ಹೋದಷ್ಟೇ ಕಠಿಣವಾಗಿತ್ತು ಅವರ ಬದುಕು. ಕತ್ತಲು ಕಳೆದು ಸೂರ್ಯೋದಯವಾಗದಂತೆ ಅಲವತ್ತುಕೊಂಡು ಪ್ರಾರ್ಥಿಸುವಷ್ಟು ಅಸಹನೀಯ ಪರಿಸ್ಥಿತಿ ಬಿಲಾಲ್(ರ)ರದ್ದಾಗಿತ್ತು.

ಜೀವನದಲ್ಲಿ ಒಮ್ಮೆಯೂ ತಾವು ಕಂಡಿರದ, ಊಹಿಸಿರದ ಹಿಂಸೆಗೆ ಗುರಿಯಾಗಿದ್ದ ಬಿಲಾಲ್(ರ)ರ ವೇದನೆಯನ್ನು ಕಂಡು ಅಬೂಬಕರ್ (ರ) ಮಮ್ಮಲ ಮರುಗಿದರು. ಮಾಲೀಕನಿಗೆ ಹಣಕೊಟ್ಟು ಖರೀದಿಸಿದರು. ಅಲ್ಲಿಯೇ ಘೋಷಿಸಿಬಿಟ್ಟರು “ಬಿಲಾಲ್ ನೀವು ಸ್ವತಂತ್ರರಾಗಿದ್ದೀರಿ”. ಬಿಲಾಲ್(ರ)ರಿಗೆ ತೊಡಿಸಿದ್ದ ಸಂಕೋಲೆಗಳನ್ನು ಕಳಚಲಾಯಿತು. ಅಬೂಬಕರ್(ರ) ಕೈ ಹಿಡಿದು ಎಬ್ಬಿಸಿ, ಅಪ್ಪಿ, ಆಸರೆ ನೀಡಿ ತಮ್ಮ ಮನೆಗೆ ಕರೆದುಕೊಂಡು ಬಂದರು. ಇತ್ತ ಬಿಡುಗಡೆಯ ಸುದ್ದಿ ಪ್ರವಾದಿ ಮುಹಮ್ಮದ್ (ಸ)ರನ್ನು ಆನಂದ ಸಾಗರದಲ್ಲಿ ತೇಲಾಡಿಸಿತು. ಅಲ್ಲಿ ಬಿಲಾಲ್(ರ) ದೈಹಿಕ ನೋವನ್ನು ಅನುಭವಿಸುತ್ತಿದ್ದರೆ, ಇಲ್ಲಿ ಪ್ರವಾದಿ ಮುಹಮ್ಮದ್(ಸ)ರು ಮಾನಸಿಕ ವೇದನೆಗೆ ಒಳಗಾಗಿದ್ದರು. ಬಿಲಾಲ್(ರ)ರ ಕೊರಳಿಗೆ ಹಗ್ಗ ಕಟ್ಟಿ ಬತ್ ವಾ ಕಣಿವೆಯಲ್ಲಿ ಎಳೆದಾಡುತ್ತಿದ್ದಾಗ ಪ್ರವಾದಿ(ಸ)ರವರ ಮನ ಚಡಪಡಿಸುತ್ತಿತ್ತು. ಕಾದ ಮರಳಿನ ಮೇಲೆ ಚಾಟಿಯೇಟನ್ನು ಬಿಲಾಲ್(ರ)ರು ಸಹಿಸುತ್ತಿದ್ದಾಗ ಇತ್ತ ಪ್ರವಾದಿ ಮುಹಮ್ಮದ್(ಸ)ರು ಅವರ ವಿಮೋಚನೆಗಾಗಿ ಪ್ರಾರ್ಥಿಸುತ್ತಿದ್ದರು. ಕಪ್ಪು ಬಣ್ಣದವರನ್ನು ದೂರವಿರಿಸುವ ಕಾಲದಲ್ಲಿ, ಸ್ವತಂತ್ರನಾಗಿ ಬಂದ ಬಿಲಾಲ್(ರ)ರನ್ನು ಪ್ರವಾದಿ ಮುಹಮ್ಮದ್(ಸ)ರು ಅಪ್ಪಿ, ಆಲಂಗಿಸಿಕೊಂಡರು.

ಸಾಧಾರಣವಾಗಿ ಅಗ್ನಿ ಜ್ವಾಲೆಗಳು ಶರೀರವನ್ನು ಸುಡುತ್ತವೆ. ನದಿಗಳು ಅವನನ್ನು ತನ್ನೊಳಗೆ ಸೆಳೆದುಕೊಳ್ಳುತ್ತವೆ. ಸೂರ್ಯ ರೋಮಗಳನ್ನು, ಚರ್ಮವನ್ನು ಕರಟಿಸುತ್ತಾನೆ. ಆದರೆ ದಿವ್ಯ ಚೈತನ್ಯದ ಅಲೌಕಿಕ ಸಾಮ್ರಾಜ್ಯದ ಉನ್ನತ ಮನಸ್ಸಿನ ವ್ಯಕ್ತಿಗಳು ಪರೋಕ್ಷ ಸಹಾಯದಿಂದ ಇಂತಹ ಪರೀಕ್ಷೆಗಳಲ್ಲಿ ಜಯಿಸಿದ್ದಾರೆ. ನಮ್ರೂದನ ಅಗ್ನಿಕುಂಡಕ್ಕೆ ಇಬ್ರಾಹಿಂರ (ಅ) ರೋಮವನ್ನು ಉರಿಸಲು ಸಾಧ್ಯವಾಗಲಿಲ್ಲ. ಕೆಂಪು ಸಮುದ್ರಕ್ಕೆ ಪ್ರವಾದಿ ಮೂಸಾ(ಅ)ರನ್ನು ನುಂಗಲು ಸಾಧ್ಯವಾಗಲಿಲ್ಲ. ಅದೇ ರೀತಿ ಸುಡು ಮರಳಿನಲ್ಲಿ ನಗ್ನದೇಹವನ್ನು ಅಂಗಾತ ಮಲಗಿಸಿದರೂ ಉರಿಯುತ್ತಿರುವ ಸೂರ್ಯನಿಗೆ ಬಿಲಾಲ್(ರ)ರ ಜೀವ ಹಿಂಡಲು ಸಾಧ್ಯವಾಗಲಿಲ್ಲ. ಏಕೆಂದರೆ ಅದು ಸತ್ಯಧರ್ಮವನ್ನು ಹುಟ್ಟಡಗಿಸಲು ಪ್ರಯತ್ನಿಸಿ ಸೋತು ಸುಣ್ಣವಾದ ನಿಮಿಷಗಳಾಗಿದ್ದವು. ಬಿಲಾಲ್(ರ)ರಿಗೆ ಪ್ರವಾದಿ ಮುಹಮ್ಮದ್(ಸ)ರ ಪ್ರಾರ್ಥನೆ ಇತ್ತು.

ಮಾಲೀಕರಿಂದ ತೀವ್ರ ಮರ್ದನದ ಸರಣಿಯನ್ನೇ ಅನುಭವಿಸಿದ್ದ ಬಿಲಾಲ್(ರ)ರವರ ದೇಹವಿಡೀ ಶತ್ರುಗಳ ಹೊಡೆತದ ಗಾಯದ ಕಲೆಗಳು, ಚಾಟಿಯೇಟಿನ ಕುರುಹುಗಳು, ಕಾದ ಮರಳಿನಲ್ಲಿ ಎಳೆದಾಡಿದ ಗುರುತುಗಳು ಹಾಗೂ ಎದೆಯ ಮೇಲೆ ಭಾರದ ಬಂಡೆಗಲ್ಲನ್ನು ಇಟ್ಟಿದ್ದರಿಂದಾಗಿ ಉಂಟಾದ ಕಪ್ಪು ಕಲೆಗಳು, ಅಲ್ಲದೇ ಕೈಕಾಲುಗಳಲ್ಲಿ ಕಬ್ಬಿಣದ ಸರಳುಗಳಿಂದಾದ ಗಾಯದ ಹುಣ್ಣುಗಳು. ಒಂದೇ.. ಎರಡೇ… ಶತ್ರುಗಳ ಉಪಟಳದಿಂದ ಬಿಡುಗಡೆಗೊಂಡ ಬಿಲಾಲ್(ರ)ರು ಪ್ರವಾದಿ ಮುಹಮ್ಮದ್(ಸ)ರ ಪಾಳಯ ಸೇರಿಕೊಂಡು ಮೊದಲ ಬಾರಿಗೆ ಸ್ವತಂತ್ರ ಪಕ್ಷಿಯಾದರು. ಸ್ವತಂತ್ರಗೊಂಡ ಬಳಿಕ ಮಕ್ಕಾ ಪಟ್ಟಣವನ್ನೊಮ್ಮೆ ದಿಟ್ಟಿಸಿದರು. ಹಿಂದ್ ಪರ್ವತದ ಎದುರಿನಲ್ಲಿರುವ ಮಕ್ಕಾದ ಅತೀ ಎತ್ತರದ ಸ್ಥಳದಲ್ಲಿ ನಿಂತು ಸುತ್ತಲೂ ಕಣ್ಣಾಡಿಸಿದರು. ಸ್ಮೃತಿಪಟಲಗಳಲ್ಲಿ ಅಚ್ಚಳಿಯದೇ ಉಳಿದಿದ್ದ ಹೃದಯ ಕಂಪಿಸುವ ದೃಶ್ಯಗಳನ್ನು ಉಸಿರು ಬಿಗಿ ಹಿಡಿದುಕೊಂಡು ಸ್ಮರಿಸಿಕೊಂಡರು. ತನ್ನನ್ನು ಅಂಗಾತ ಮಲಗಿಸಿ, ಎದೆಯ ಮೇಲೆ ಕಲ್ಲಿಟ್ಟು, ಕುತ್ತಿಗೆಗೆ ಹಗ್ಗ ಬಿಗಿದು ಎಳೆದಾಡಿದ ಸ್ಥಳಗಳನ್ನು ಸಮ್ಮಿಶ್ರಭಾವದಿಂದ ವೀಕ್ಷಿಸಿದರು. ಗಾಳಿಯನ್ನು ಸಾಧ್ಯವಾದಷ್ಟು ಸೇವಿಸಿದರು. ದಾಹಜಲವಾಗಿದ್ದ ಝಮ್ ಝಮ್ ನೀರನ್ನು ಬೊಗಸೆಯಲ್ಲಿ ತುಂಬಿ ಹೊಟ್ಟೆತುಂಬಾ ಕುಡಿದರು. ಅಂಗಸ್ನಾನ ಮಾಡಿ ಪವಿತ್ರ ಕಅಬಾ ಭವನಕ್ಕೆ ಪ್ರದಕ್ಷಿಣೆ ಮಾಡಿದರು. ಹೀಗೆ ಗುಲಾಮರಾಗಿದ್ದ ಬಿಲಾಲ್ (ರ) ಪ್ರವಾದಿ ಮುಹಮ್ಮದ್(ಸ) ರ ಆಪ್ತಸಂಗಾತಿಗಳಲ್ಲೊಬ್ಬರಾದರು. ಕೆಸರು ಮತ್ತು ಕೊಳೆಯಲ್ಲಿ ಮೀಯುತ್ತಿದ್ದ ಓರ್ವ ಕರಿಯ ಗುಲಾಮನಿಗಾಗಿಯೇ ಪವಿತ್ರ ಕುರ್ ಆನಿನಲ್ಲಿ ಆಯತ್ ಆವರ್ತೀಣಗೊಂಡು ಗೌರವಾರ್ಹ ಸ್ಥಾನ ಲಭಿಸಿತು. (ಕುರ್ ಆನ್ 6/52).

ಕಅಬಾ ಭವನದ ಶುದ್ಧೀಕರಣ ಪೂರ್ಣಗೊಂಡೊಡನೆ ಪ್ರವಾದಿ ಮುಹಮ್ಮದ್ (ಸ) ರು ಬಿಲಾಲ್(ರ)ರನ್ನು ಕರೆದು ಪವಿತ್ರ ಕಅಬಾ ಭವನದ ಮೇಲ್ಹತ್ತಿ ಆಜಾನ್ ಕೊಡುವಂತೆ ಸೂಚಿಸಿದರು. ಬಿಲಾಲ್ ಇಂತಹದೊಂದು ಘಟನೆಯನ್ನು ಕನಸಿನಲ್ಲಿಯೂ ನಿರೀಕ್ಷಿಸಿರಲಿಲ್ಲ. ಐತಿಹಾಸಿಕ ಮಕ್ಕಾ ವಿಜಯದ ಸಂದರ್ಭದಲ್ಲಿ ಒಂದು ಲಕ್ಷದಷ್ಟು ಜನಸಾಗರವನ್ನು ಸಾಕ್ಷಿಯಾಗಿಸಿ, ಕಅಬಾ ಭವನದ ನೆತ್ತಿಯ ಮೇಲೇರಿ ವಿಜಯದ ಘೋಷಣೆಯನ್ನು ಮಾಡುವ ಅವಕಾಶ ಅವರಿಗೆ ಅನಿರೀಕ್ಷಿತವಾಗಿತ್ತು. ಹಿಂಸೆ, ಮರ್ದನ, ದೌರ್ಜನ್ಯಗಳೇ ಬದುಕಾಗಿದ್ದ ಕರಿಯ ಗುಲಾಮನೇ ಈ ಮಹೋನ್ನತ ವಿಜಯದ ಮಹತ್ವ ಹಾಗೂ ಸಮಾನತೆಯನ್ನು ಪ್ರತಿಪಾದಿಸುವ ಈ ಘೋಷಣೆಯನ್ನು ಮಾಡಲಿ ಎಂಬುದು ಪ್ರವಾದಿ ಮುಹಮ್ಮದ್ (ಸ)ರ ಉದ್ದೇಶವಾಗಿತ್ತು. ಬಿಲಾಲ್ (ರ) ಘನ ಚೌಕಾಕಾರದ ಕಅಬಾದ ಮೇಲೇರಿ ಸುತ್ತಲೂ ಕಣ್ಣಾಡಿಸಿದರು. ನಾಲ್ಕು ದಿಕ್ಕುಗಳಲ್ಲೂ ಕಅಬಾದ ಸುತ್ತ ಕಿಕ್ಕಿರಿದು ನಿಂತಿರುವ ಜನಸಾಗರ. ಎಂತೆಂತಹ ಮನುಷ್ಯರು! ಪ್ರವಾದಿ ಮತ್ತು ಪ್ರಮುಖ ಸಹಾಬಿಗಳಿದ್ದಾರೆ. ಬಿಲಾಲರನ್ನು ಸ್ವದೇಶದಿಂದ ಅಟ್ಟಿದವರಿದ್ದಾರೆ. ಕೊಲ್ಲಲು ಹಿಂಬಾಲಿಸಿ ಬಂದವರಿದ್ದಾರೆ. ಸುತ್ತಿಗೆಯಿಂದ ಹೊಡೆಯುತ್ತಿದ್ದಾಗ ನಕ್ಕು, ನಲಿದು ಕೇಕೆ ಹಾಕಿದವರಿದ್ದಾರೆ. ಸುಡು ಬಿಸಿಲಿನಲ್ಲಿ ಎಳೆದಾಡಲ್ಪಡುತ್ತಿರುವಾಗ ಉಮಯ್ಯನನ್ನು ಹುರಿದುಂಬಿಸಿದವರಿದ್ದಾರೆ. ನೋವಿನಿಂದ ಚಡಪಡಿಸುತ್ತಿರುವಾಗ ಪರಿಹಾಸ್ಯ ಮಾಡಿದವರಿದ್ದಾರೆ. ಕಡೆಗೆ ಖಲೀಫಾ ಅಬೂಬಕರ್ ತನ್ನನ್ನು ಖರೀದಿಸ ಬಯಸಿದಾಗ ಅವರನ್ನು ತಡೆದವರೂ ಇದ್ದಾರೆ. ಅಲ್ಲದೇ ಪ್ರವಾದಿ ಮುಹಮ್ಮದರ ಪವಿತ್ರ ಕೊರಳಿಗೆ ಕೊಳೆತ ಒಂಟೆಯ ಕರುಳನ್ನು ಹಾಕಿದವರೂ ಇದ್ದಾರೆ. ನಿರಾಯುಧ ಮುಸ್ಲಿಮರನ್ನು ಹಿಂಸಿಸಿದವರೂ ಇದ್ದಾರೆ. ಕಅಬಾ ಸುತ್ತಲೂ ನಿಶ್ಯಬ್ದತೆ ಆವರಿಸಿತು. ಸೂಜಿ ಬಿದ್ದರೂ ಸಪ್ಪಳವಾಗುವಂತಹ ದಿವ್ಯ ಮೌನ. ವಿಜಯದ ಘೋಷಣೆ ಕೇಳಲು, ಸ್ವಾತಂತ್ರ್ಯದ ಶಬ್ದವನ್ನು ಆಲಿಸಲು ಹಾಗೂ ಕರಿಯ ಗುಲಾಮನ ಆಜಾನ್ ಕರೆಯನ್ನು ಆಲಿಸಲು ಜನಸಾಗರ ಶ್ವಾಸ ಬಿಗಿ ಹಿಡಿದು ಕಾದು ನಿಂತಿತ್ತು. ರಕ್ಷಕನಾದ ಅಲ್ಲಾಹನನ್ನು ಸಾಕ್ಷಿಯಾಗಿಸಿ ಬಿಲಾಲರಿಂದ (ರ) ಐತಿಹಾಸಿಕ ಆಜಾನ್ ಕರೆ ಮೊಳಗಿತು. ಮನಮೋಹಕ ಮಧುರ ಕಂಠದಲ್ಲಿ ಮಕ್ಕಾದೆಲ್ಲೆಡೆ ಪ್ರತಿಧ್ವನಿಸಿದ ಆ ಆಜಾನ್ ಕರೆ ಐತಿಹಾಸಿಕ ಘಟನೆಯಾಯಿತು. ಕರಿಯ ಗುಲಾಮನ ಈ ಆಜಾನ್ ಕರೆ ಮಾನವ ನಾಗರೀಕತೆಯ ಹೊಸ ಮೈಲಿಗಲ್ಲಾಯಿತು. ಯಜಮಾನರಿಗೆ, ಸವರ್ಣಿಯರಿಗೆ ಮಾತ್ರ ಗೌರವ ನೀಡುತ್ತಿದ್ದ ಜಗತ್ತಿಗೆ, ಕಪ್ಪಗಿನ ಓರ್ವ ನೀಗ್ರೋ ಗುಲಾಮ ಇಂತಹ ಮಹತ್ತರವಾದ ಸ್ಥಾನವನ್ನು ಅಲಂಕರಿಸುವುದನ್ನು ಊಹಿಸಲೂ ಸಾಧ್ಯವಿರಲಿಲ್ಲ. ಬಿಲಾಲರ ಆಜಾನ್ ಕರೆಯಿಂದ ಮಾನವೀಯ ಮೌಲ್ಯಗಳು ಚಿಗುರಿತು. ಸಮಾನತೆ ವ್ಯಾಪಿಸಿತು. ಅನಾಗರಿಕತೆಯ ಕೋಟೆಗಳು ಕುಸಿದು, ಮೃಗೀಯತೆಯ ಮೆಟ್ಟಿಲುಗಳು ಮಣ್ಣು ಪಾಲಾದವು. ಅಸಮಾನತೆಯ ಪ್ರಬಲವಾದ ಕಬ್ಬಿಣದ ಕಂಬಗಳು ಮುರಿದು ಬಿದ್ದವು. ಅಲ್ಲಿ ನೆರೆದಿದ್ದ ಜನಸಾಗರವನ್ನುದ್ದುದ್ದೇಶಿಸಿ ಪ್ರವಾದಿ ಮುಹಮ್ಮದ್ (ಸ) ಹೇಳಿದರು: ಅಂಧಕಾರದ ಎಲ್ಲಾ ದುರಾಭಿಮಾನ, ಪ್ರತೀಕಾರಗಳನ್ನು ನಾನು ನನ್ನ ಪಾದದಡಿಯಲ್ಲಿ ಹೊಸಕಿ ಹಾಕಿದ್ದೇನೆ. ಯಾರು ಕೂಡ ತಮ್ಮ ಗೋತ್ರ ಹಾಗೂ ವಂಶಗಳ ಬಗ್ಗೆ ಅಹಂಕಾರ ಪಡಬಾರದು. ಹಿಂದಿನ ಕಾಲದ ವರ್ಗ, ವರ್ಣ, ಕುಲದ ಮೇಲ್ಮೆಯನ್ನು ಅಲ್ಲಾಹನು ಕೊನೆಗೊಳಿಸಿದ್ದಾನೆ. ಯಾವನೇ ಅರಬನಿಗೆ ಅರಬೇತರನ ಮೇಲೆ ಶ್ರೇಷ್ಠತೆಯಿಲ್ಲ. ಅರಬೇತರನಿಗೆ ಅರಬನ ಮೇಲೆ ಶ್ರೇಷ್ಠತೆಯಿಲ್ಲ. ಬಿಳಿಯನಿಗೆ ಕರಿಯನಿಗಿಂತ, ಕರಿಯನಿಗೆ ಬಿಳಿಯನಿಗಿಂತ ಯಾವುದೇ ಶ್ರೇಷ್ಠತೆಯಿಲ್ಲ. ನೀವೆಲ್ಲರೂ ಆದಿಪಿತ ಆದಮರ ಮಕ್ಕಳು. ಅತೀ ಹೆಚ್ಚು ದೇವಭಯ ಉಳ್ಳವನೆ ನಿಮ್ಮ ಪೈಕಿ ಅತ್ಯುತ್ತಮನು.

ಇವತ್ತಿಗೂ ದಿನಕ್ಕೈದು ಬಾರಿ ಆಜಾನ್ ಅಂತರಿಕ್ಷದಲ್ಲಿ ಮೊಳಗುತ್ತಲೇ ಇದೆ. ಲೋಕಾಂತ್ಯದವರೆಗೂ ಮೊಳಗುತ್ತಲೇ ಇರುತ್ತದೆ. ಇಸ್ಲಾಮಿನ ಅನುಯಾಯಿಗಳು ಇರುವಲ್ಲೆಲ್ಲಾ ಅದು ಉಚ್ಚಸ್ವರದಲ್ಲಿ ಕೇಳಿಸುತ್ತಲೇ ಇರುತ್ತದೆ. ಶತಮಾನಗಳವರೆಗೆ ಕೋಟ್ಯಾನುಕೋಟಿ ಜನತೆಗೆ ಆಜಾನ್ ಕರೆಯನ್ನು ಹೇಳಿಕೊಡುವ ಮೂಲಕ ಕಪ್ಪು ಬಣ್ಣದ ನೀಗ್ರೋ ಗುಲಾಮ ಬಿಲಾಲ್ (ರ) ಅಜರಾಮರರಾದರು. ಬಿಲಾಲರ ಆಜಾನ್ ಕರೆಯು ಮಾನವನ ವಿಮೋಚನೆಯ ಘೋಷಣೆಯಾಯಿತು. ಬಿಲಾಲರಿಗೆ ಆಜಾನ್ ಕರೆಯು ಪ್ರವಾದಿ ಪ್ರೇಮದ ಪ್ರತೀಕವಾಗಿತ್ತು. ಅಹಂಕಾರಿಗಳು ಹಾಗೂ ಧಿಕ್ಕಾರಿಗಳನ್ನು ನಡುಗಿಸುವ ಕ್ರಾಂತಿಕಾರಿ ವಾಕ್ಯವಾಯಿತು ಆಜಾನ್. ಅಧಿಕಾರಿಗಳ ಹಾಗೂ ಯಜಮಾನರ ದರ್ಪವನ್ನು ಅಪಹಾಸ್ಯಗೊಳಿಸುವ ಘೋಷಣೆಯಾಯಿತು ಆಜಾನ್. ಪ್ರವಾದಿ ಮುಹಮ್ಮದರಿಂದ ಎಂತಹ ಮಹತ್ತರ ಪರಿವರ್ತನೆ?! ಯಜಮಾನನ ಮನೆಯ ಕಾವಲು ನಾಯಿಯಂತಿದ್ದ ಗುಲಾಮ, ಮದೀನಾದ ಉನ್ನತ ಸ್ಥಾನ ಅಲಂಕರಿಸುವಂತಾಯಿತು. ಮಾಲೀಕರ ಏಟಿಗೆ ಬೆನ್ನು ಕೊಡಬೇಕಿದ್ದ ಕರಿಯ ಗುಲಾಮ, ಶತಕೋಟಿ ಮುಸಲ್ಮಾನರ ನಾಯಕನಾಗುವಂತಾಯಿತು. ಮಾಲೀಕರ ಮನೆಯಲ್ಲಿ ಸಗಣಿ ಬಳಿಯಲಷ್ಟೇ ಸೀಮಿತವಾಗಿದ್ದ ನೀಗ್ರೋ ಗುಲಾಮ, ರಾಷ್ಟ್ರ ಬೊಕ್ಕಸದ ಅಧಿಕಾರಿಯಾಗುವಂತಾಯಿತು.

ಇಪ್ಪತ್ತೊಂದನೇ ಶತಮಾನದಲ್ಲಿಯೂ ಕರಿಬಣ್ಣವೆಂಬುದು ದಾಸ್ಯದ ಚಿಹ್ನೆಯಾಗಿರುವಾಗ, 1400 ವರ್ಷಗಳ ಹಿಂದೆಯೇ ಕರಿಬಣ್ಣದ ಗುಲಾಮನನ್ನು ಅತ್ಯುನ್ನತ ಸ್ಥಾನಕ್ಕೇರಿಸಿ, ಅಪ್ಪಿ, ಆಲಂಗಿಸಿ, ಹೆಗಲ ಮೇಲೊತ್ತು ಕಅಬಾ ಭವನದ ಮೇಲೇರಿಸಿ ಪ್ರಪ್ರಥಮ ಆಜಾನ್ ಕೊಡಿಸಿದ ಪ್ರವಾದಿ ಮುಹಮ್ಮದ್(ಸ) ರನ್ನಲ್ಲದೇ ಮತ್ಯಾರನ್ನು ನಾ ಮಾದರಿಯಾಗಿಸಿಕೊಳ್ಳಲಿ?

ಕಲ್ಲಿದ್ದಿಲಿನಂತ ಕಪ್ಪು ಚರ್ಮ, ಊದಿಕೊಂಡಿರುವ ತುಟಿಗಳು, ಮೈತುಂಬಾ ಗಾಯದ ಹುಣ್ಣುಗಳಿಂದ ಕುರೂಪಿಯಂತಿದ್ದ ಬಿಲಾಲರಿಗೆ ಮದುವೆಯಾಗಲು ಹೆಣ್ಣು ಸಿಗದಿದ್ದಾಗ, ಅವರನ್ನು ದಾಸ್ಯಮುಕ್ತಗೊಳಿಸಿದಲ್ಲದೆ ಸ್ವತಃ ತನ್ನ ಮಗಳನ್ನೇ ಮದುವೆ ಮಾಡಿಕೊಟ್ಟ ಖಲೀಫಾ ಅಬೂಬಕರ್ (ರ) ರನ್ನಲ್ಲದೇ ನಾ ಇನ್ಯಾರನ್ನು ಮಾದರಿಯಾಗಿಸಿಕೊಳ್ಳಲಿ?

ಕರಿಬಣ್ಣದವರನ್ನು ತುಚ್ಚವಾಗಿ ಕಾಣುತ್ತಿದ್ದ ಜನರ ಮಧ್ಯೆ, ಬಿಲಾಲರು ನಮ್ಮ ನಾಯಕರೆಂದು ಘೋಷಿಸಿ, ಅಲ್ ಅಕ್ಸಾ ಮಸೀದಿಯಲ್ಲಿ ಆಜಾನ್ ನೀವೆ ಕೊಡಬೇಕೆಂದು ಬೇಡಿಕೊಂಡ ದ್ವೀತಿಯ ಖಲೀಫಾ ಉಮರ್ (ರ) ರನ್ನಲ್ಲದೇ ನಾ ಮತ್ಯಾರನ್ನು ಮಾದರಿಯಾಗಿಸಿಕೊಳ್ಳಲಿ?

ಇಸ್ಲಾಂ ಯಾವತ್ತಿಗೂ ಅನ್ಯಾಯದ ವಿರುದ್ಧ, ದೌರ್ಜನ್ಯದ ವಿರುದ್ಧ ಸಿಡಿದು ನಿಂತ ಕ್ರಾಂತಿಕಾರಿ ಆಂದೋಲನ. ದುರ್ಬಲರ ಪಾಲಿಗೆ ಕಾರುಣ್ಯದ ಕಡಲು, ಮಮತೆಯ ಮಡಿಲು!

LEAVE A REPLY

Please enter your comment!
Please enter your name here