ಓದುವ ಸಮಯ / Reading hour (Family Reading)

  1. ಮನೆಯಲ್ಲಿ ಸಾಮಾನ್ಯವಾಗಿ ಎಲ್ಲರೂ ಇರುವ ಒಂದು ಸಮಯದಲ್ಲಿ ಟಿವಿ ಆಫ್ ಮಾಡಿ.
  2. ಶಾಲೆಯ ಪುಸ್ತಕವಲ್ಲದೇ, ಬೇರೆ ಯಾವುದಾದರೊಂದು ಪುಸ್ತಕವನ್ನು ಮಗುವಿಗೇ ಆಯ್ಕೆ ಮಾಡಲು ಹೇಳಿ.
  3. ಅದನ್ನು ನೀವು ಸುಮಾರು ಇಪ್ಪತ್ತು ನಿಮಿಷ ಓದಿ.
  4. ಅದರ ಬಗ್ಗೆ ದೊಡ್ಡವರು ಏನಾದರೂ ಮಾತಾಡಿ. ವಿಷಯದ ಬಗ್ಗೆ, ಪಾತ್ರಗಳ ಬಗ್ಗೆ, ಅದೇನಿರುತ್ತದೆಯೋ ಅದರ ಬಗ್ಗೆ.
  5. ಮಗುವಿಗೂ ಅದೇ ರೀತಿಯಲ್ಲಿ ಅದಕ್ಕೆ ಹೊಳೆದಿದ್ದನ್ನು ಹೇಳಲು ಪ್ರೇರೇಪಿಸಿ.
  6. ಇದೇ ರೀತಿಯಲ್ಲಿ ರೀಡಿಂಗ್ ಸರ್ಕಲನ್ನು ಪ್ರತಿದಿನವೂ ಆದಷ್ಟು ತಪ್ಪದೇ ಮಾಡಿ.
  7. ಈ ಓದುವ ಸಮಯದಲ್ಲಿ ಮಗುವಿಗೂ ಓದಲು ಬಿಡಿ.
  8. ಮಗುವಿನ ಓದಿನಲ್ಲಿ ತಪ್ಪಾದರೆ ಎಂದೆಂದಿಗೂ ಇಷ್ಟು ಮಾತ್ರ ಓದಕ್ಕಾಗಲ್ವಾ? ನಿಮ್ಮ ಸ್ಕೂಲಲ್ಲಿ ಇಷ್ಟೇನಾ ಹೇಳಿಕೊಟ್ಟಿದ್ದು? ಇಷ್ಟು ದಿನ ಕಲಿತಿದ್ದು ಇಷ್ಟೇನಾ? ಎಂದಿಗೂ ಹೇಳಬೇಡಿ. ಅದು ಮಹಾಪಾಪ.
  9. ನಾನು ನಿನ್ನ ವಯಸ್ಸಿನಲ್ಲಿ ಹೀಗೆ ಓದುತ್ತಿದ್ದೆ, ಹಾಗೆ ಓದುತ್ತಿದ್ದೆ ಎಂದು ಕೊಂಬು ಕಹಳೆಗಳನ್ನು ಊದಬೇಡಿ. ಆ ಬೇಡದ ಚರಿತ್ರೆಯಲ್ಲಿ ಮಗುವಿಗೆ ಯಾವ ಆಸಕ್ತಿಯೂ ಇರುವುದಿಲ್ಲ.
  10. ಈ ಓದುವ ಸಮಯದಲ್ಲಿ ಓದಿನ ವರ್ತುಲದಲ್ಲಿ ಓದುವುದರ ಹೊರತಾಗಿಯೂ ಓದಿನ ರೂಢಿಯನ್ನು ಮಾಡಿಸಬೇಕಾದರೆ, ನೀವು ಯಾವುದಾದರೂ ಕೆಲಸ ಮಾಡುವಾಗ ನಿಮಗೆ ಯಾವುದಾದರೊಂದನ್ನು ಗಟ್ಟಿಯಾಗಿ ಓದಿ ಹೇಳಲು ಹೇಳಿ. ಅಡುಗೆ ಮಾಡುವಾಗ, ತರಕಾರಿ ಹಚ್ಚುವಾಗ, ಕಾರು ರಿಪೇರಿ ಮಾಡುವಾಗ ಇತ್ಯಾದಿ.
  11. ನೀವು ಓದುತ್ತಿರುವಾಗ ಯಾವುದಾದರೂ ಕಠಿಣ ಶಬ್ಧವನ್ನು ಮಗುವಿಗೆ ಹೇಳಿ ನಿಘಂಟಿನಲ್ಲಿ ಹುಡುಕಲು ಹೇಳಿ. ಅದರ ಅರ್ಥ ಮತ್ತು ಪ್ರಯೋಗದ ಬಗ್ಗೆ ಮಾತಾಡಿ.
  12. ವಾರ್ತಾಪತ್ರಿಕೆ ಅಥವಾ ಜಾಹಿರಾತಿನ ಪತ್ರವನ್ನು ಓದಿ ಹೇಳಲು ಮಗುವಿಗೆ ಕೇಳಿ.
  13. ಮಗುವು ತನ್ನ ಪಠ್ಯ ಪುಸ್ತಕವನ್ನೇ ಆಗಲಿ ಅಥವಾ ಬೇರೆ ಪುಸ್ತಕವನ್ನೇ ಆಗಲಿ ಓದಿದಾಗ ಅದರ ಬಗ್ಗೆ ನಿಮ್ಮ ಕುತೂಹಲ ತೋರಿಸಿ. ಕೆಲವು ಪ್ರಶ್ನೆಗಳನ್ನು ಕೇಳಿ (ಅ) ನೀನು ಓದುತ್ತಿರುವುದು ಹೇಗಿದೆ? (ಆ) ಈಗ ಓದಿರುವುದರಲ್ಲಿ ನಿನಗೆ ತುಂಬಾ ಹಿಡಿಸಿದ್ದು ಯಾವ ಭಾಗ? (ಇ) ಯಾಕೆ ಅದು ಇಷ್ಟವಾಯಿತು? (ಈ) ಯಾವುದು ಇಷ್ಟವಾಗಲಿಲ್ಲ ? (ಉ) ಯಾಕೆ ಇಷ್ಟವಾಗಲಿಲ್ಲ? (ಊ) ಅದು ಹೇಗಿರಬೇಕಿತ್ತು ಅಥವಾ ಅವನು ಏನು ಮಾಡಬಹುದಿತ್ತು? (ಋ) ನೀನಾಗಿದ್ದರೆ ಏನು ಮಾಡುತ್ತಿದ್ದೆ? (ಎ) ಈ ಕತೆ ಹೀಗೆ ಕೊನೆಯಾಗಿದ್ದಕ್ಕೆ ನಿನಗೆ ಏನು ಅನಿಸಿತು?; ಹೀಗೆ ಮಗುವು ತನ್ನ ಸ್ವಂತ ಉತ್ತರಗಳನ್ನು ಕೊಡಲಾಗುವಂತಹ ಪ್ರಶ್ನೆಗಳನ್ನು ಕೇಳಿ. ಪರೀಕ್ಷೆಯ ಪತ್ರಿಕೆಯಲ್ಲಿರುವಂತಹ ಪ್ರಶ್ನೆಗಳನ್ನು ಕೇಳಿ ನರಕಕ್ಕೆ ಹೋಗಬೇಡಿ.
  14. ಮಕ್ಕಳಿಗಾಗೇ ಮೀಸಲಿರುವ ಪತ್ರಿಕೆಗಳನ್ನು ತರಿಸಿ. ಅದನ್ನು ಅವರ ಮುಂದೆ ನೀವು ಓದಿಕೊಳ್ಳಿ ಆನಂದಿಸಿ.
  15. ಹೇಯ್, ಇಲ್ಲಿ ನೋಡು ಇದು ಎಷ್ಟು ಚೆನ್ನಾಗಿದೆ ಅಥವಾ ಕುತೂಹಲಕರವಾಗಿದೆ ಎಂದು ಆಗಾಗ ದಿಢೀರನೆ ಯಾವುದಾದರೂ ಪುಸ್ತಕದಿಂದ ಒಂದು ಭಾಗವನ್ನು ಮಗುವಿಗೆ ಓದಿ ಹೇಳಿ. ಅದನ್ನು ಓದಿ ಹೇಳದೇ ಇದ್ದರೆ ನಿಮ್ಮ ಪ್ರಾಣವೇ ಹೋಗಿಬಿಡುತ್ತದೆಯೇನೋ ಎನ್ನುವಷ್ಟು ಪರವಶತೆ ಇರಲಿ. ಮಗುವಿಗೆ ಅದು ತುಂಬಾ ಮಜ ಅನ್ನಿಸತ್ತೆ.
    ನನ್ನ ಅಜ್ಜಿ ಪಾರ್ವತಮ್ಮ ನನಗೆ ಓದುವ ರೂಢಿ ಮಾಡಿಸಿದ್ದು ಹೀಗೆಯೇ. ಅವರು ಬಟ್ಟೆ ಒಗೆಯುವಾಗ, ಅಡುಗೆ ಮಾಡುವಾಗ, ಮನೆಯಲ್ಲಿ ನೆಲ ಸಾರಿಸುವಾಗ ತಾವು ಓದಲಾಗುವುದಿಲ್ಲವೆಂದು ಪುಸ್ತಕಗಳನ್ನು ಗಟ್ಟಿಯಾಗಿ ಓದಲು ಹೇಳುತ್ತಿದ್ದರು. ಒಂದು ಪುಟ್ಟ ಮರದ ಸ್ಟೂಲ್ ಹಾಕಿಕೊಂಡು ಅವರ ಮುಂದೆ ಕುಳಿತುಕೊಂಡು ನಾನು ಓದುತ್ತಿದ್ದೆ. ಆದರೆ ಅವೆಲ್ಲವೂ ಅವರ ಆಯ್ಕೆಯವೇ ಆಗಿರುತ್ತಿದ್ದವು. ಆಗ ನಾನು ಹಾಗೆ ಓದುತ್ತಿದ್ದ ಪುಸ್ತಕಗಳೆಂದರೆ, ಯಾವುದೋ ಗದಗಿನ ಪ್ರಕಾಶನದ ಬಸವಣ್ಣನವರ ಮತ್ತು ಅಕ್ಕಮಹಾದೇವಿಯ ವಚನಗಳು, ರಾಮಕೃಷ್ಣಾಶ್ರಮದ ಸ್ತವಕುಸುಮಾಂಜಲಿ, ಹುಬ್ಬಳ್ಳಿಯ ಸಿದ್ಧಾರೂಢರ ಚರಿತ್ರೆ ಮತ್ತು ಎ ಆರ್ ಕೃಷ್ಣಶಾಸ್ತ್ರಿಯವರ ವಚನ ಭಾರತ. ಇವೇ ನನ್ನ ಪ್ರಾರಂಭಿಕ ಪುಸ್ತಕಗಳು. ನಂತರ ನಾನು ನನ್ನ ಆಯ್ಕೆಯ ಅಮರ ಚಿತ್ರ ಕಥಾ ಸರಣಿಯ ಪುಸ್ತಕಗಳನ್ನು ಕೊಳ್ಳತೊಡಗಿದೆ. ಒಟ್ಟಿನಲ್ಲಿ ನಮ್ಮ ಮನೆಯಲ್ಲಿ ಯಾರೇ ಏನೇ ಓದಿದರೂ ಅದರ ವಿಶೇಷತೆಯ ಬಗ್ಗೆ ಇನ್ನೊಬ್ಬರ ಹೇಳಿಯೇ ತೀರುತ್ತಿದ್ದರು. ಹೀಗೆ ಓದಿನ ವಾತಾವರಣ ನಮ್ಮ ಮನೆಯಲ್ಲಿ ಹಿರಿಯರಿಂದ ನಿರ್ಮಾಣವಾಗಿತ್ತು.)

LEAVE A REPLY

Please enter your comment!
Please enter your name here