ಮಹಮ್ಮದ್ ಶರೀಫ್ ಕಾಡುಮಠ

ಕಿರಿಯ ವಯಸ್ಸಿನಲ್ಲಿಯೇ ಅಗಲಿ ಹೋದ ಭರತಖಂಡದ ಮಹಾನ್ ವ್ಯಕ್ತಿತ್ವ ಸ್ವಾಮಿ ವಿವೇಕಾನಂದರು. ಸ್ವಾಮಿ ವಿವೇಕಾನಂದರ ಚಿಂತನೆಗಳು ಧರ್ಮದ ಮೂಲಕ ಸಹಿಷ್ಣುವಾದ ಬದುಕನ್ನು ಸಾಧಿಸುವ ವಿಚಾರಗಳನ್ನು ಒಳಗೊಂಡಂಥವು. ರಾಮಕೃಷ್ಣ ಪರಮಹಂಸರೆಂಬ ಅದ್ಭುತ ಚೇತನದ ಪ್ರಭಾವದಿಂದ ಬೆಳೆದ ವಿವೇಕಾನಂದರು ಬಹುತೇಕ ಅದೇ ದಾರಿಯಲ್ಲಿ ನಡೆದವರು. 
ಮನುಷ್ಯ ಪ್ರೇಮಿಯಾಗಿ, ಗಲ್ಲಿ ಗಲ್ಲಿಗಳನ್ನು ಸುತ್ತಾಡಿ ಜನರ ಸಂಕಷ್ಟಗಳನ್ನು ಹತ್ತಿರದಿಂದ ಕಂಡವರು. ಇದೇ ಮಾದರಿಯಲ್ಲಿ ನಡೆದ ಮಹಾತ್ಮ ಗಾಂಧಿ, ವಿವೇಕಾನಂದರ ಹಾದಿಯ ಮುಂದುವರಿಕೆ ಎನ್ನಬಹುದು. ಪರಮಹಂಸರ ಬದುಕನ್ನು ಪ್ರತಿಯೊಬ್ಬರೂ ಓದಿ ತಿಳಿಯಬೇಕಾಗಿದೆ. ಸ್ನೇಹ, ಸಹಿಷ್ಣುತೆ, ವ್ಯಾಕುಲತೆ, ಮಹತ್ವ ಮುಂತಾದ ವಿಚಾರಗಳು ಪರಮಹಂಸರ ನಡೆ, ನುಡಿಯಲ್ಲಿ ವ್ಯಕ್ತವಾಗುವ ಬಗೆ ಬಹಳ ಭಿನ್ನವಾದುವು. 
ಸ್ವಾಮಿ ವಿವೇಕಾನಂದರ ಕಣ್ಣಿನಲ್ಲಿರುವ ಚೈತನ್ಯದ ಕಾಂತಿ ಎಲ್ಲರನ್ನೂ ಸೆಳೆಯಬಲ್ಲಂಥವು‌. ವಿವೇಕರ ಜನ್ಮದಿನದ ನೆನಪಿಗೆ ‘ವಿವೇಕ ಸಪ್ತಾಹ’ ಯುವ ದಿನಾಚರಣೆ ಎಂದು ಏಳು ದಿನಗಳ‌ವರೆಗೆ ಶಾಲಾ ಮಕ್ಕಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುತ್ತದೆ(ಮಹಾತ್ಮ ಗಾಂಧಿ ಜನ್ಮದಿನವಾದ ಅಕ್ಟೋಬರ್ 2 ರಂದು ಶಾಲೆ ಕಾಲೇಜುಗಳಿಗೆ ರಜೆ ಇರುತ್ತವೆ!). ಕೆಲವು ಕಾಲೇಜುಗಳಿಂದ ಬೆಂಗಳೂರಿನವರೆಗೆ ಉಚಿತ ಬಸ್ ಕಲ್ಪಿಸಿ ಬೃಹತ್ ಸಮಾವೇಶಗಳಲ್ಲಿ ಭಾಗವಹಿಸುವ ವ್ಯವಸ್ಥೆಯೂ ಮಾಡಲಾಗುತ್ತದೆ. ಇವು ನಡೆಯುವ ರೀತಿಯನ್ನು ಗಮನಿಸಿದರೆ, ಕಾರ್ಯಕ್ರಮ ನಡೆಸುವ ಸಂಘಟನೆಗಳ ಉದ್ದೇಶಗಳನ್ನು ಮನಗಂಡರೆ, ಬಹುಶಃ ಸ್ವಾಮಿ ವಿವೇಕಾನಂದರು ಮರುಜನ್ಮ ಪಡೆದು ಬಂದರೂ ಇವನ್ನೆಲ್ಲ ಕಂಡು ಆತ್ಮಹತ್ಯೆ ಮಾಡಿಕೊಳ್ಳಬಹುದು. 
ಚಕ್ರವರ್ತಿ ಸೂಲಿಬೆಲೆಯ ರಾಗದಲ್ಲಿ ಕೇಳುವ ಭಾಷಣ ಮಾತ್ರ ಸ್ವಾಮಿ ವಿವೇಕಾನಂದರನ್ನು ಅರ್ಥಮಾಡಿಸುತ್ತದೆ ಎಂಬ ಭಾವನೆ ಹಲವರದ್ದು. ಸ್ವಾಮಿ ವಿವೇಕಾನಂದರು ಹೇಳಿರುವ ಮಾತು ಒಂದೆರಡಲ್ಲ. ಹಲವು ವಿಚಾರಗಳ ಕುರಿತೂ ಅವರು ಮಾತನಾಡಿದ್ದಾರೆ. ಈಗಿನ ಮಾರ್ಕೆಟ್ಟಿನ ಸ್ವಾಮಿ ವಿವೇಕಾನಂದರನ್ನು ತಂದು ನಮ್ಮೆದುರು ನಿಲ್ಲಿಸಿರುವ ಸಂಘಟನೆಗಳು, ವಿವೇಕಾನಂದರ ಮಾತುಗಳನ್ನು ತಮಗೆ ಬೇಕಾದ ರೀತಿಯಲ್ಲಿ, ಬೇರೆಯೇ ಅರ್ಥಗಳನ್ನು ನೀಡಿ ಪ್ರಚೋದಿಸುವ ಮಟ್ಟದ ವಾಕ್ಯವನ್ನಾಗಿ ಮಾಡಲು ಯತ್ನಿಸುತ್ತಾರೆ‌. ವಿವೇಕಾನಂದರು ಬಹಳ‌ ವಿವೇಕದಿಂದ ಮೃದುವಾಗಿ ಹೇಳಿದ ಮಾತುಗಳನ್ನು ಇವರು ಅಬ್ಬರಿಸಿ ಬೆರಳು ತೋರಿ ಅಟ್ಟಹಾಸದಿಂದ ಹೇಳುತ್ತಾರೆ‌. ಸ್ವಾಮಿ ವಿವೇಕಾನಂದರಿಗೆ ಇದಕ್ಕಿಂತ ದೊಡ್ಡ ಅವಮಾನ ಬೇಕೆ? ಜನ್ಮದಿನದ ಹೆಸರಿನಲ್ಲಿ ಏಳು ದಿನಗಳ ಕಾಲ ಇಂತಹ ಅವಮಾನ ನಡೆಯುತ್ತದೆ. 

ಗೋವಿನ ಬಗ್ಗೆ ಸ್ವಾಮಿ‌ ವಿವೇಕಾನಂದರು ಏನೇನು ಹೇಳಿದ್ದಾರೆ ಎಂಬುವುದರ ಬಗ್ಗೆ ಇವರು ಎಲ್ಲಿಯೂ, ತಪ್ಪಿಯೂ ಉಲ್ಲೇಖಿಸುವುದಿಲ್ಲ. ಕೆಲವರು ಮಾತನಾಡುವ ರೀತಿ ನೋಡಿದಾಗ ನಗು ಬರುತ್ತದೆ. ‘ಸ್ವಾಮಿ ವಿವೇಕಾನಂದರ ಆದರ್ಶಗಳು ಇಂದಿನ ಯುವಕರಿಗೆ ಪ್ರೇರಣೆ. ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಅವರ ಮಾತು ಸ್ಪೂರ್ತಿದಾಯಕ. ಅವರ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳಬೇಕು’. ಇದೇ ಮಾತನ್ನು ಬೇರೆ ಬೇರೆ ರೀತಿಯಲ್ಲಿ ಭಿನ್ನ ಪದಗಳನ್ನು ಬಳಸಿ ಹೇಳುತ್ತಾರೆ. ಸ್ವಾಮಿ ವಿವೇಕಾನಂದರ ಹೇಳಿಕೆಗಳನ್ನು ಗೂಗಲ್ ನಲ್ಲಿ ಹುಡುಕಿ ಬಾಯಿಪಾಠ ಮಾಡುತ್ತಾರೆ‌. ಹೀಗೆ ನಕಲಿ ಭಾಷಣಕಾರರು ಅಲ್ಲಲ್ಲಿ ಹುಟ್ಟಿ ಬೇಕಾದಷ್ಟು ಸಂಪಾದಿಸುತ್ತಾರೆ. 
ಕಾಲೇಜುಗಳಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ಪ್ರಯುಕ್ತ ಸಂಪೂರ್ಣ ಕೇಸರಿ ಬಣ್ಣ ಕಣ್ಣು ಕುಕ್ಕುತ್ತದೆ. ಗೇಟಿನ ಮುಂಭಾಗದಿಂದ ಹಿಡಿದು ಸಭಾಭವನದ ವೇದಿಕೆಯವರೆಗೂ ಎಲ್ಲ ಕೇಸರಿಮಯ. ಇಷ್ಟೊಂದು ಕೇಸರಿಯಲ್ಲಿ ಜ್ಞಾನದ ಸಂಪತ್ತಾಗಿದ್ದ ಸ್ವಾಮಿ ವಿವೇಕಾನಂದರನ್ನು ಮುಳುಗಿಸುವುದಕ್ಕೆ, ಅವರೇನು ಅಜ್ಞಾನದ ಖಾಲಿ ಕೊಡ ಉತ್ತರಪ್ರದೇಶದ ಯೋಗಿ ಆದಿತ್ಯನಾಥರೇ? ದೇಶದ ಸಂತರೊಬ್ಬರಿಗೆ ಈ ರೀತಿಯ ಅವಮಾನ ಮಾಡುವುದು ಎಷ್ಟು ಸರಿ? ಮಕ್ಕಳಿಗೆ ಸ್ಪರ್ಧೆಯನ್ನು ಮಾಡುತ್ತಾರೆ. ಅವು ಎಷ್ಟೊಂದು ಬೇಜವಾಬ್ದಾರಿಯುತವಾಗಿರುತ್ತವೆ ಎಂದರೆ ಹತ್ತು ಹದಿನೈದು ವರ್ಷಗಳಿಂದ ಒಂದೇ ವಿಷಯದ ಮೇಲೆ ಭಾಷಣ ಸ್ಪರ್ಧೆ! ‘ಸ್ವಾಮಿ ವಿವೇಕಾನಂದರು ಮತ್ತು ಯುವಜನತೆ’. ಈ ಭಾಷಣಗಳನ್ನು ಕೇಳಿ ಕೇಳಿ ಹಲವರಿಗೆ ಸಾಕಾಗಿ ಹೋದರೆ ಭಾಷಣ ಮಾಡುವವರಿಗೆ ಒಮ್ಮೆ ಬಹುಮಾನ ಸಿಕ್ಕಿದರೆ ಸಾಕು ಎಂಬ ಭಾವನೆ.‌ ಇದೊಂದು ಹರಕೆಯ ಹಾಗೆ. 
ನಿಜವಾದ ಸ್ವಾಮಿ ವಿವೇಕಾನಂದರು ಈ ಮಾರುಕಟ್ಟೆಯ ನಡುವೆ ಹುಡುಕುವುದು ಕಷ್ಟದ ಕೆಲಸ. ಓದಿನಿಂದಷ್ಟೇ ಇದು ಸಾಧ್ಯ.‌ ಈಗಿನ ಕೇಸರಿ ಕಲಿಗಳಿಗೆ ಪರಮಹಂಸರ ಅಗತ್ಯವಿಲ್ಲ.‌ ಅವರ‌ ಕುರಿತು ತಿಳಿಯುವುದೂ‌ ಅವರಿಗೆ ಬೇಕಿಲ್ಲ. ಲಕ್ಷ್ಮೀಶ ತೋಳ್ಪಾಡಿ ಅವರ ಭಾಷಣಗಳಲ್ಲಿ ಪರಮಹಂಸರು ಈಗ ಬದುಕುತ್ತಾರೆ. ವಿವೇಕಾನಂದರು, ಪರಮಹಂಸರ ಕುರಿತ ಉತ್ತಮ, ವಾಸ್ತವಗಳನ್ನಷ್ಟೇ ಉಲ್ಲೇಖಿಸುವ, ವಿಜೃಂಭಣೆಯನ್ನು ಬದಿಗಿಟ್ಟ ಪುಸ್ತಕಗಳನ್ನು ಓದುವ ಮೂಲಕ ಅವರನ್ನು ಅರಿಯುವ, ಅರಿವನ್ನು ವಿಸ್ತರಿಸುವ ಕೆಲಸ ಮಾಡಿದರೆ ಅದುವೇ ನಾವು ಈ ಮಹಾನ್ ವ್ಯಕ್ತಿತ್ವಗಳಿಗೆ ನೀಡಬಹುದಾದ ಗೌರವ. 

LEAVE A REPLY

Please enter your comment!
Please enter your name here