ಅಲ್ಲಿ ಉರೂಸು
ರಾತ್ರಿ ಬಣ್ಣದ ಬೆಳಕಿನಲಿ
ಹೊಳೆವ ದರ್ಗಾದಂಗಳದ
ಪಕ್ಕದಲಿ
ಮಿಠಾಯಿ ಹಲ್ವಾ ಸಂತೆ
ಪ್ರಭಾಷಣದ ವಿಷಯ
‘ದಾರಿ ತಪ್ಪುತ್ತಿರುವ ಯುವಜನಾಂಗ’
ಹಿಜಾಬಿನವಳ
ಸುರ್ಮಾ ಹಚ್ಚಿದ ಕಣ್ಣ ನೋಟಕ್ಕೆ
ಸಂತೆ ಗದ್ದಲದೊಳಗೇ ನಿಂತೆ
ನನ್ನ ದೂಡಿ ಸಾಗುವ ಜನಗಳು
ಓಡಿ ಆಡುವ ಮಕ್ಕಳು
ಕಿವಿಗಪ್ಪಳಿಸುವ ಉಸ್ತಾದರ ಪ್ರಭಾಷಣದ
ಅದೇ ಹಳೇ ಶೈಲಿಯ ರಾಗ
ಮೊದಲ ನೋಟಕ್ಕೇ
ಫಿದಾ ಆಗಿ
ಖುದಾನ ಬಳಿ
ಮೊಹಬ್ಬತ್ತಿನ ಮೊರೆಯಿಟ್ಟಿದ್ದೇನೆ
ಭಾಷಣದ ವೇದಿಕೆ ಮುಂದೆ
ಬಿಳಿಗೂದಲ ಹಲ್ಲಿಲ್ಲದ
ಉಪ್ಪಾಪಗಳು ಸಾಲಾಗಿ
ಕಿವಿ ಹಿರಿದಾಗಿಸಿ
ಮುದುಡಿ ಕುಳಿತಿವೆ
‘ಅನ್ಯ ಸ್ತ್ರೀಯನ್ನು ನೋಡಬಾರದು
ಅವರಲ್ಲಿ ಮಾತಾಡಬಾರದು
ಎಂದು ಉಸ್ತಾದರ ದನಿಯಿಂದ ಹೊರಟ
‘ಪಾಡಿಲ್ಲಾ…..’ಗಳ ಉದ್ದಪಟ್ಟಿ
ಕಿವಿಯೊಳಗೆ ಅಟ್ಟಿಯಾಗುತ್ತಲೇ ಇವೆ
ಅವಳೂ ಆಗಾಗ ಕಣ್ಣ ಮುಂದೆ
ಬರುತ್ತಾಳೆ ನನ್ನ ನೋಡಲೆಂದೆ
ಹಲ್ವಾ ಮಿಠಾಯಿಗಳೆಲ್ಲ
ಸವಿ ಇಲ್ಲದಂತೆನಿಸಿ
ಅವಳೆದುರೆಲ್ಲವು ಸೋತಂತೆನಿಸಿ
ಸುಂದರ ಕನಸಿನ ಸ್ವರ್ಗದಲಿ ತೇಲಲು
ಮನದ ಹೆಜ್ಜೆಯನೂರಲೆಂದು
ಹೊರಡುತ್ತೇನೆ
ನರಕಾಗ್ನಿಯ ಬಿಸಿ ತಾಪದ
ಭೀಭತ್ಸ ವರ್ಣನೆ ಮಾಡುತ್ತಿದ್ದಾರೆ
ಉಸ್ತಾದರು
ಕಾಲು ಜಾರಿದಂತೆ
ಹಿಂದೆ ಯಾರೋ ದೂಡಿದಂತೆ
ಮುಂದೆ ಸಾಗುತ್ತೇನೆ
ನೋಟ ಬೆರೆಸಿದ ಅವಳ ಕಣ್ಣು
ಸಾವಿರ ಕನಸಿನ ಕತೆ ಹೇಳುತ್ತದೆ
ನಾಳೆ ಬಂದೇ ಬರುತ್ತಾಳೆ
ಒಂದು ವಾರದ ಉರೂಸಿನಲಿ
ಅವಳು ಸಿಕ್ಕೇ ಸಿಗುವಳು
ಮತ್ತೆ ಮತ್ತೆ
ಪ್ರಭಾಷಣ ಮುಗಿದಿದೆ
ಸಂಚಾಲಕ ಉಸ್ತಾದರ ಕಿಸೆಗೆ
ನೋಟುಗಳ ಸುರುಟಿ ಹಾಕಿ
ಕೈ ಚುಂಬಿಸಿ ಕಾರಿಗೇರಿಸಿ
ಕಳುಹಿಸಿದ್ದಾನೆ
ಎರಡು ವರ್ಷ ಕಳೆದ ಮೇಲೆ
ಮತ್ತೆ ಉರೂಸಾಗುತ್ತದೆ
ಮತ್ತದೇ ಉಸ್ತಾದರೂ ಬರುತ್ತಾರೆ
ಪ್ರಭಾಷಣದ ವಿಷಯ
‘ದಾರಿ ತಪ್ಪುತ್ತಿರುವ ಯುವಜನಾಂಗ’
ನಾನೂ ಅವಳೂ
ನಮ್ಮ ಕಂದನ ಜತೆಗೆ
ಉರೂಸಿಗೆ ಹೋಗುತ್ತೇವೆ.
ಬರೆದವರು: ಮಹಮ್ಮದ್ ಶರೀಫ್ ಕಾಡುಮಠ