ಮನ್ಸೂರ್ ಅಹ್ಮದ್ ಸಾಮಣಿಗೆ

ಇಸ್ಲಾಮಿಕ್‌ ಕ್ಯಾಲೆಂಡರ್‌ನ ಕೊನೆಯ ತಿಂಗಳಾದ ದುಲ್‌ಹಜ್‌ ತಿಂಗಳ 10ನೇ ದಿನದಂದು ಆಚರಿಸುವ ಬಕ್ರೀದ್‌ ಹಬ್ಬ ಧಾರ್ಮಿಕ ಚೌಕಟ್ಟಿನೊಳಗೆ ಆಚರಿಸುವ ಹಬ್ಬ. ಚಾರಿತ್ರಿಕ ಹಿನ್ನೆಲೆಯೊಂದಿಗೆ ಧಾರ್ಮಿಕ ಚೌಕಟ್ಟಿನಲ್ಲಿ ಬಂಧಿಯಾಗಿ ಆಚರಿಸಲ್ಪಡುವ ಈ ಹಬ್ಬ ಸಮಕಾಲೀನ ಜಗತ್ತಿಗೆ ತ್ಯಾಗದ ಸಂದೇಶದೊಂದಿಗೆ ಸಮಾನತೆಯ ಸಂದೇಶವನ್ನೂ  ನೀಡುತ್ತವೆ. ಬಕ್ರೀದ್‌ ಹಬ್ಬ ಬಲಿ ಕೊಡುವ ಹಬ್ಬ ಎಂಬುವುದಕ್ಕಿಂತಲೂ ಅದು ತ್ಯಾಗ ಬಲಿದಾನದ ಸಂಕೇತದ ಪ್ರತೀಕವಾಗಿ ಆಚರಿಸಲ್ಪಡುತ್ತವೆ. ಅಲ್ಲಾಹು ಅಕ್ಬರ್.ಅಲ್ಲಾಹು ಅಕ್ಬರ್,ಎಂಬ ದೈವ ಕೀರ್ತನೆ ಎಲ್ಲೆಡೆ ಮೊಳಗಿದಾಗ ಹಬ್ಬಕ್ಕೆ ಮುಹೂರ್ತ ದೊರೆಯುತ್ತದೆ. ಹಬ್ಬದಂಗವಾಗಿ ಮುಂಜಾನೆ ಬೇಗ ಎದ್ದು ಹೊಸ ಉಡುಪು ಧರಿಸಿ ಸುಗಂಧ ದ್ರವ್ಯ ಸಿಂಪಡಿಸಿ ಎಲ್ಲರೂ ಮಸೀದಿಗೆ ತೆರಳುತ್ತಾರೆ.ಮಸೀದಿಗಳಲ್ಲಿ ಬೆಳಗ್ಗೆ ವಿಶೇಷ ನಮಾಜು ನಡೆಯುತ್ತವೆ.

ಬಳಿಕ ಬಂಧು ಮಿತ್ರಾದಿಗಳ ಮನೆಗೆ ತೆರಳಿ ಪರಸ್ಪರ ಸಂಬಂಧವನ್ನು ಸುದೃಢಗೊಳಿಸುವುದು ರೂಢಿಗಳಲ್ಲೊಂದು. ಕೌಟುಂಬಿಕ ಬಾಂಧವ್ಯ ಬೆಸುಗೆಗೆ ಇದು ಶುಭ ದಿನ.  ಈದ್‌ ನಮಾಜಿನ ಬಳಿಕ ಬಂಧು ಮಿತ್ರಾದಿಗಳು ಪರಸ್ಪರ ಹಸ್ತದಾನ, ಆಲಿಂಗನ ಮಾಡಿಕೊಳ್ಳುವ ಮೂಲಕ ಹಬ್ಬದ ಸಂದೇಶಗಳನ್ನು ಹಂಚಿಕೊಳ್ಳುತ್ತಾರೆ.ನಮ್ಮ ನಡುವೆ ಪ್ರಿತಿ ವಿಶ್ವಾಸ ನಷ್ಟಗೊಂಡಿತುವ ಪ್ರಸಕ್ತ ಸನ್ನಿವೇಶದಲ್ಲಿ ತನ್ನ ಸ್ವಸಂತೋಷವೇ ಪರಮ ಪ್ರಾಧಾನ್ಯವಾಗಿ , ಜಾಗತೀಕರಣದ ಭರಾಟೆಯಲ್ಲಿ  ರೀತಿರಿವಾಜುಗಳನ್ನು ಮರೆತು ಆಧುನಿಕ ಆಡಂಬರದಲ್ಲಿ ಮೈಮೆರೆತಿರುವಾಗ ಬಕ್ರೀದ್‌ ಹಬ್ಬ ತ್ಯಾಗ ಸನ್ನದ್ಧತೆಯ ಪ್ರತೀಕವಾಗಿ ನಮ್ಮ ಮುಂದೆ ಬಂದಿದೆ.

ಬಕ್ರೀದ್‌ ಹಬ್ಬದ ಸಂದರ್ಭದಲ್ಲಿ ಬಡವ ಬಲ್ಲಿದ, ಮೇಲು-ಕೀಳು ಎಂಬ ಚಿಂತನೆಯನ್ನು ಹೊಂದದೆ, ಎಲ್ಲರನ್ನೂ ಸಮಾನತೆಯಿಂದ ಕಾಣುವ ಸಂದೇಶವನ್ನು ನೀಡುತ್ತದೆ. ಎಲ್ಲರೂ ಪರಸ್ಪರ ಆಲಿಂಗನದ ಮೂಲಕ ಹಬ್ಬದ ಸಂದೇ ಶವನ್ನು ವಿನಿಮಯ ಮಾಡುತ್ತಾರೆ. ಸಮಾಜದಲ್ಲಿ ಶಾಂತಿ, ಸಮಾದಾನ ಹಾಗೂ ಮೈತ್ರಿಯೊಂದಿಗೆ ಭಾತೃತ್ವದ ಬದುಕು ಸಾಗಿಸಬೇಕೆಂಬುದೇ ಇಸ್ಲಾಂ ಧರ್ಮದ ಮೂಲ ಸಂದೇಶ.

ಕರ್ನಾಟಕದ ಹಲವು ಜಿಲ್ಲೆಗಳ ಸಹಿತ ನೆರೆಯ ರಾಜ್ಯ ಕೇರಳ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ವಿಪರೀತ ಮಳೆಯಿಂದಾಗಿ ಮರಣಗಳು,ನಾಶನಷ್ಡಗಳು ಸಂಭವಿಸಿದ್ದಲ್ಲದೇ ಜನಜೀವನ ಅಸ್ತವ್ಯಸ್ತಗೊಂಡು ದಿಕ್ಕುತೋಚದ ಸ್ಥಿತಿಯಲ್ಲಿದ್ದಾರೆ.ಅದೆಷ್ಟೋ ಕುಟುಂಬಗಳು ಭೀಕರ ಪ್ರಕೃತಿವಿಕೋಪಕ್ಕೆ ಸಿಲುಕಿ ಬೀದಿ ಪಾಲಾಗಿವೆ.ನಮ್ಮ ಸಹೋದರ ಸಹೋದರಿಯರು ಪ್ರಕೃತಿಯ ನರ್ತನಕ್ಕೆ ಸಿಲುಕಿ ಮನೆ ಮಠ ಕಳೆದುಕೊಂಡು ಆಹಾರಕ್ಕಾಗಿ ಪರಿತಪಿಸುವಂತಾಗಿದೆ.ಇಂತಹ ಸನ್ನಿವೇಶದಲ್ಲಿ ಹಬ್ಬದ ಹೊಸ್ತಿಲಲ್ಲಿ ಇರುವ ನಾವುಗಳು ಹಬ್ಬದ ಸಂಭ್ರಮದಲ್ಲಿ ಸರಳತೆಯನ್ನು ತೋರಿಸಿ ಭೀಕರ ಪ್ರವಾಹಕ್ಕೆ ಸಿಲುಕಿ ಸಂಕಟದಲ್ಲಿರುವ ಸಂತ್ರಸ್ತರಿಗಾಗಿ ತಮ್ಮ ಕೈಲಾದಷ್ಟು ಸಹಾಯ ಮಾಡಿ ಮಾನವೀತೆ ಮೆರೆಯಬೇಕಾಗಿದೆ

ಇವತ್ತು ಮನುಷ್ಯ-ಮನುಷ್ಯರೊಳಗೆ ಧರ್ಮ, ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ತಿಕ್ಕಾಟದ ನಡುವೆ ಆಗಮಿಸಿದ ಈದ್‌ ಹಬ್ಬ ಯಾವುದೇ ಸಡಗರಗಳಿಗೆ ಸೀಮಿತವಾಗದೆ ಪರಸ್ಪರ ಬಾಂಧವ್ಯತೆಯ ಸಹೋದರತ್ವದ ಸಮಾನತೆಯ ಬದುಕಿಗೆ ವ್ಯಾಖ್ಯಾನವಾಗುತ್ತಿರುವ  ಜೊತೆಗೆ ಅಶುದ್ಧಿಯಿಂದ ಮುಕ್ತಿಗೊಂಡು ಪರಮಪಾವನವಾಗಿ ನವಜೀವನದ ಆಕಾಂಕ್ಷೆಯೊಂದಿಗೆ ಅಚ್ಚ ಹೊಸ ಕನಸುಗಳೊಂದಿಗೆ ಮುಂದಡಿಯುವ ಭಾವುಕದ ಕ್ಷಣಗಳಾಗಲಿ. ಬಕ್ರಿದ್‌ ಹಬ್ಬ ಸಂತಸ ಸಡಗರ ಮತ್ತು ಆಚರಣೆಗಳ ಜೊತೆಗೆ ಜೀವನಪರ್ಯಂತ ಎದುರಾಗುವ ವಿಭಿನ್ನ ಸಂದರ್ಭಗಳಲ್ಲಿ ನೆಮ್ಮದಿ, ಶಾಂತಿ ಒದಗಿಸಲಿ ಎಂದು ಹಾರೈಸೋಣ… ಸರ್ವರಿಗೂ ಬಕ್ರೀದ್ ಹಬ್ಬದ ಶುಭಾಶಯಗಳು.

LEAVE A REPLY

Please enter your comment!
Please enter your name here