ಲೇಖಕರು: ಎಂ. ಅಶೀರುದ್ದೀನ್ ಆಲಿಯಾ, ಸಾರ್ತಬೈಲ್

ರಾಮಕೃಷ್ಣ ಪರಮಹಂಸರ ಪ್ರಮುಖ ಬೋಧನೆಯಾಗಿದ್ದ ಋಗ್ವೇದದ “ಏಕಮ್ ಸದ್ವಿಪ್ರಾಃ ಬಹುಧಾ ವದಂತಿ” (ಒಂದೇ ಸದ್ವಸ್ತುವನ್ನು ಜನರು ವಿವಿಧ ಹೆಸರುಗಳಿಂದ ಕರೆಯುತ್ತಾರೆ) ಎಂಬ ವಿಚಾರವನ್ನು ಸಾಕ್ಷಾತ್ಕರಿಸಲು ದೇಶದಾದ್ಯಂತ ಸುತ್ತಿ ಸಾಹೋದರತೆ ಮತ್ತು ಮಾನವೀಯತೆಯ ಬೀಜವನ್ನು ಬಿತ್ತಿದ ಸ್ವಾಮಿ ವಿವೇಕಾನಂದರು ಭಾರತ ಕಂಡ ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ಭಾರತೀಯ ವೇದಾಂತ ಜ್ಞಾನ, ಹಿಂದೂ ಧರ್ಮ, ಸಂಸ್ಕೃತಿ, ಯೋಗ ಮೊದಲಾದ ವಿಚಾರಗಳು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹೆಚ್ಚು ಚರ್ಚೆಗೊಳಗಾಗಲು ಕಾರಣೀಕರ್ತರಾದವರು.

1893 ರಂದು ಚಿಕಾಗೊದಲ್ಲಿ ನಡೆದಿದ್ದ ವಿಶ್ವದ ಧರ್ಮಗಳ ಸಂಸತ್ತಿನಲ್ಲಿ ಮಾಡಿದ ಐತಿಹಾಸಿಕ ಭಾಷಣದಿಂದ ವಿಶ್ವವಿಖ್ಯಾತರಾಗಿ ಪಾಶ್ಚಾತ್ಯದೊಂದಿಗೆ ಭಾರತೀಯ ಆಧ್ಯಾತ್ಮಿಕತೆಯನ್ನು ಸಂಯೋಜಿಸಲು ಪ್ರಯತ್ನಿಸಿದ ಪ್ರಥಮ ಹಿಂದೂ ಸುಧಾರಕ. 20 ನೇ ಶತಮಾನದಲ್ಲಿ ವೈದಾಂತಿಕ ಧರ್ಮದ ಅತ್ಯುನ್ನತ ಆದರ್ಶಗಳನ್ನು ಅಳವಡಿಸಿಕೊಂಡು ಪ್ರಸ್ತುತಪಡಿಸಿದರು. ಹಿಂದೂ ಧರ್ಮ ನಿಷ್ಠೆಯ ಧಾರ್ಮಿಕ ನೇತಾರರಾಗಿ ಮತ್ತು ಅದರ ವಿಮರ್ಶಕರಾಗಿದ್ದರು. ಅದಲ್ಲದೆ, ಅವರು ಕೇವಲ ಹಿಂದೂ ಧರ್ಮಕ್ಕೆ ಮಾತ್ರ ಸೀಮಿತವಾದ ಪ್ರಭಲ ವ್ಯಕ್ತಿಯಾಗಿ ಗುರುತಿಸಿಕೊಳ್ಳಲಿಚ್ಚಿಸಲಿಲ್ಲ. ಸರ್ವ ಧರ್ಮಗಳ ಸಮನ್ವಯತೆಯ ಕೊಂಡಿಯಾಗಿ ಬದುಕಿದರು.

ಖುರಾನ್, ಬೈಬಲ್ ನ ಸಂಪೂರ್ಣ ಅಧ್ಯಯನ ಇಸ್ಲಾಂ ಮತ್ತು ಕ್ರಿಸ್ಚಿಯಾನಿಟಿಯ ಬಗೆಗಿನ ಆಳವಾದ ಧಾರ್ಮಿಕ ಜ್ಞಾನ ಅವರಿಗಿತ್ತು. ಎಲ್ಲಾ ಧರ್ಮಗಳ ಏಕತೆಯ ಅಗತ್ಯತೆಯನ್ನು ಅವರು ಪ್ರತಿಪಾದಿಸಿದರು.ದೇಶ ಪರ್ಯಟನೆಯಿಂದ ಮಾತ್ರ ಮನುಷ್ಯನಿಗೆ ತನ್ನ ಅಸ್ತಿತ್ವದ ಬಗ್ಗೆ ತಿಳಿಯಲು ಸಾಧ್ಯವೆಂದರಿತು ಪಾರಿವ್ರಾಜಕರಾಗಿ ದೇಶದಾದ್ಯಂತ ಸಂಚರಿಸಿದರು. ಪ್ರತಿಯೊಬ್ಬನ ನೋವು ನಲಿವು ಕಷ್ಟ ಸುಖ ಅರಿತರು ಬಡವನ ಗುಡಿಸಲಿನಲ್ಲೂ ರಾಜನ ಅರಮನೆಯಲ್ಲೂ ಜೀವನಾನುಭವ ಪಡೆದರು. ಮುಸ್ಲಿಮರ, ಕ್ರೈಸ್ತರ ಆತಿಥ್ಯ ಸ್ವೀಕರಿಸಿದರು. ಬ್ರಿಟೀಷರೊಂದಿಗೆ ಇಂಗ್ಲಿಷ್‌ನಲ್ಲೂ ಮುಸಲ್ಮಾನರೊಂದಿಗೆ ಉರ್ದುವಿನಲ್ಲೂ, ಪಾರ್ಸಿಗಳೊಂದಿಗೆ ಪರ್ಶಿಯನ್ ನಲ್ಲೂ ವ್ಯವಹರಿಸಿದರು. ಈ ಕಾರಣಕ್ಕೆ ರವೀಂದ್ರ ಠಾಗೋರ್ ರವರು “ಭಾರತದ ದೇಶದ ಬಗ್ಗೆ ಸಂಪೂರ್ಣವಾಗಿ ತಿಳಿದಿರುವ ವ್ಯಕ್ತಿಯೆಂದರೆ ಅದು ಸ್ವಾಮಿ ವಿವೇಕಾನಂದರು ಮಾತ್ರ” ಎಂದು ಹೇಳಿದ್ದಾರೆ. ದೇಶ ಪರ್ಯಟನೆಯ ಸಂಧರ್ಭದಲ್ಲಿ ದೇಶದ ವಿವಿಧ ಜನಾಂಗದ, ಧರ್ಮದ, ಜಾತಿಯ ಜನರೊಂದಿಗೆ ಬೆರೆತು ಮತ್ತು ಅವರೊಂದಿಗೆ ಧೀರ್ಘಕಾಲದ ಸಂಪರ್ಕವನ್ನು ಬೆಳೆಸಿದ್ದರು. ಹಲವು ಆರೋಗ್ಯಕರ ಧಾರ್ಮಿಕ, ಸಾಮಾಜಿಕ ಮತ್ತು ವೈಚಾರಿಕ ಚರ್ಚೆಗಳನ್ನು ನಡೆಸಿದ್ದರು. ಅಂದಿನ ಮುಸ್ಲಿಮರೊಂದಿಗೆ ಮತ್ತು ಕ್ರೈಸ್ತರೊಂದಿಗಿನ ಪತ್ರ ವ್ಯವಹಾರದಲ್ಲಿ ಅವರು ನಡೆಸಿದ ಸೌಹಾರ್ದಯುತವಾದ ಚರ್ಚೆಯ ವಿಚಾರಗಳನ್ನು ಸಾಕಾರಗೊಳಿಸಬೇಕಾದದ್ದು ಪ್ರಸಕ್ತ ಭಾರತದಲ್ಲಿ ಅತ್ಯಗತ್ಯವೆನಿಸುತ್ತದೆ.

ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿ ನಡೆಸಿದ ಅನೇಕ ವಿಚಾರ ಸಭೆಗಳಲ್ಲಿ ಸಹೋದರತೆಯ ಸಂದೇಶವನ್ನೇ ಸಾರಿ ವಿಶ್ವ ಮಾನವರಾದರು. ಧರ್ಮವು ಈಗಾಗಲೇ ಮನುಷ್ಯನಲ್ಲಿರುವ ದೈವತ್ವದ ಅಭಿವ್ಯಕ್ತಿಯಾಗಿದೆ ಎಂದೆನ್ನುತ್ತಾ ‘ಜತೋ ಮತ ತತೋ ಪಥ”(ಎಷ್ಟು ಮತಗಳೊ, ಅಷ್ಟು ದಾರಿಗಳು) ಎಂಬ ರಾಮಕೃಷ್ಣ ಪರಮಹಂಸರು ಬೋಧಿಸಿದ ಮಾರ್ಗವನ್ನೇ ವಿವೇಕಾನಂದರು ಪ್ರತಿಪಾದಿಸಿದರು. “ಮಾನವ ವರ್ಗವನ್ನು ಎಲ್ಲಿ ವೇದಗಳು, ಬೈಬಲ್, ಕುರಾನ್ ಇಲ್ಲವೋ ಅಲ್ಲಿಗೆ ಕರೆದೊಯ್ಯಬೇಕು” ಜಾತಿ ಧರ್ಮದ ಭೇದ ಬಿಟ್ಟು ಬದುಕಬೇಕೆನ್ನುತ್ತಾ ತನ್ನೊಳಗಿರುವ ಸಮಾಜವಾದಿಯನ್ನು ಅವರು ಪರಿಚಯಪಡಿಸಿದ್ದರು. “ಮತ್ತೂಬ್ಬನಿಗೆ ಯಾವುದು ಒಳ್ಳೆಯದೊ ಅದನ್ನು – ನಾನು ಮಾಡುವುದರಿಂದ ಮಾತ್ರ ನನ್ನ ಒಳ್ಳೆಯದನ್ನು ಸಾಧಿಸಬಹುದು ಎಂದು ಸಾರುತ್ತಾರೆ. ಭಾರತೀಯ ಆಧ್ಯಾತ್ಮಿಕ ನಾಯಕನಾದ ನರೇಂದ್ರನಾಥ ದತ್ತನೆಂಬ ವಿವೇಕಾನಂದರು ಭಾರತೀಯರಲ್ಲಿ ರಾಷ್ಟ್ರೀಯ ಪ್ರಜ್ಞೆ, ಏಕತೆ ಮತ್ತು ಸ್ವಾತಂತ್ರ್ಯವನ್ನು ಉತ್ತೇಜಿಸುವ ಪ್ರಭಾವಶಾಲಿ ವಕ್ತಾರರಾಗಿ ಬೆಳೆದು ತಮ್ಮ ವಿಚಾರಗಳಿಗೆ ಅನುಸಾರವಾಗಿ ಭಾರತೀಯ ಸಮಾಜವನ್ನು ಬದಲಾವಣೆ ಮಾಡಲು ಪ್ರಯತ್ನಪಟ್ಟರು.

ಬಂಗಾಳದ ಕಾಯಸ್ಥ ಜಾತಿಯ ಮೇಲ್ವರ್ಗದ ಮಧ್ಯಮ ಕುಟುಂಬದಲ್ಲಿ ಜನಿಸಿ ಯಾವುದೇ ಮಡಿ ಮೈಲಿಗೆಯನ್ನು ಬೆಳೆಸದೆ ಜನ ಸಾಮಾನ್ಯರಂತೆ ಬದುಕಿದರು. ಬಾಲ್ಯವಿವಾಹ ಮತ್ತು ಅನಕ್ಷರತೆಯನ್ನು ತೊಡೆದು ಹಾಕಲು ಮಹಿಳೆಯರು ಮತ್ತು ಕೆಳಜಾತಿಗಳಲ್ಲಿ ಶಿಕ್ಷಣದ ಅರಿವನ್ನು ಮೂಡಿಸಲು ಪ್ರಯತ್ನಿಸಿದರು. ಸಮಾಜದಲ್ಲಿ ತಲೆದೂರಿರುವ ಅಸಮಾನತೆ ಮತ್ತು ಮೂಢನಂಬಿಕೆಯನ್ನು ಒಡೆದು ಬದುಕುವ ಮೂಲಭೂತವಾದಿ ಪ್ರವೃತ್ತಿಯನ್ನು ವಿರೋಧಿಸಿದರು. “ತಪ್ಪು ಹಿಂದೂ ಧರ್ಮದಲ್ಲ, ಅಲ್ಲಿರುವ ಪುರೋಹಿತರದ್ದು” ಎಂದು ಅವರು ಹೇಳುತ್ತಾರೆ ಇದು ಎಲ್ಲಾ ಧರ್ಮದವರಿಗೂ ಅನ್ವಯಿಸುವ ಮಾತು, ಕೆಲವು ಜನರು ಮಾಡಿದ ಕೃತ್ಯಕ್ಕೆ ಇಡೀ ಧರ್ಮವನ್ನು ಅಥವಾ ಜನಾಂಗವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಇಂದಿನ ಪರಿಪಾಠಕ್ಕೆ ಹಿಡಿದ ಕನ್ನಡಿ. ಭಾರತದಲ್ಲಿ ಬಂಧುತ್ವದ ಬೋಧನೆ ಮಾಡಿರುವ ವಿವೇಕಾನಂದರನ್ನು ಕೇವಲ ಹಿಂದುತ್ವದ ಸಂಕೇತವಾಗಿ ಬಿಂಬಿಸುವ ಇಂದಿನ ಬೆಳವಣಿಗೆ ಆಶ್ಚರ್ಯಕರವಾಗಿ ತೋರುತ್ತದೆ.

LEAVE A REPLY

Please enter your comment!
Please enter your name here