ಹುಚ್ಚು ಮನಸ್ಸಿನ ಸಾವಿರ ಮುಖಗಳು 06

  • ಯೋಗೇಶ್ ಮಾಸ್ಟರ್, ಬೆಂಗಳೂರು

ಉಳಿಯುವ ಆಸೆ ಮತ್ತು ಅಳಿಯುವ ಭೀತಿ; ಈ ಎರಡೂ ‘ನಾನು’ ಅಥವಾ ನನ್ನತನ ಎಂಬ ಆತ್ಮಕೇಂದ್ರಿತ ವಿಷಯವನ್ನು ಮುನ್ನಡೆಸುವ ಶಕ್ತಿಗಳು ಅಥವಾ ಡ್ರೈವಿಂಗ್ ಫೋರ್ಸಸ್ ಎಂದು ತಿಳಿದುಕೊಂಡೆವು.
ಯಾರು ಉಳಿಯುತ್ತಾರೆ? ಯಾವುದು ಉಳಿಯುತ್ತದೆ? ಇಗೋ, ಇಲ್ಲಿದೆ ವಿಷಯ.
ಯಾರು ಬಲಶಾಲಿಗಳೋ ಅವರು ಉಳಿಯುತ್ತಾರೆ. ಯಾವುದು ಬಲವನ್ನು ಹೊಂದಿರುತ್ತದೆಯೋ ಅದು ಉಳಿಯುತ್ತದೆ. ದುರ್ಬಲವಾಗಿರುವುದು, ನಿರ್ಬಲವಾಗಿರುವುದು ನಾಶ ಹೊಂದುತ್ತದೆ. ಹಾಗಾಗಿ ಉಳಿಯಬೇಕೆಂದರೆ, ಅಳಿಯಬಾರದೆಂದರೆ ಬಲಶಾಲಿಗಳಾಗಿರಬೇಕು. ಈ ಅರಿವು ಮನಸ್ಸಿನ ಮೂಲಕೇಂದ್ರಕ್ಕೆ ಖಂಡಿತವಾಗಿಯೂ ಇದೆ. ಸುಪ್ತಮನಸ್ಸಿಗೆ ಬಲ ಸಂಪಾದನೆ ಮತ್ತು ಬಲ ಸಂವರ್ಧನೆಯ ಬಗ್ಗೆ ಚೆನ್ನಾಗಿ ಅರಿವಿದೆ. ಬಲವನ್ನು ಸಂಪಾದಿಸುವುದು ಮಾತ್ರವಲ್ಲ, ಇರುವ ಬಲವನ್ನು ಹೆಚ್ಚಿಸಿಕೊಳ್ಳಬೇಕು. ತನ್ನ ಉಳಿವಿಗೆ ಮಾರಕವಾಗಿ ಬರುವುದನ್ನು ಎದುರಿಸುವ ಸಾಮರ್ಥ್ಯವನ್ನು ಪಡೆಯಬೇಕು. ನಿರೋಧಕ ಶಕ್ತಿ ತನ್ನಲ್ಲಿ ಇರಬೇಕು, ಅದು ಇಲ್ಲದಿದ್ದರೆ, ಪಡೆಯಬೇಕು ಅಥವಾ ಕಡಿಮೆ ಇದ್ದರೆ ಹೆಚ್ಚಿಸಿಕೊಳ್ಳಬೇಕು ಎಂಬ ಅರಿವು ಆ ಮನದಾಳದ ಅರಿವಿಗೆ ಚೆನ್ನಾಗಿ ಗೊತ್ತು. ಅದಕ್ಕೆಯೇ ಅದು ತನ್ನ ಇರುವನ್ನು ಅಥವಾ ಅಸ್ತಿತ್ವವನ್ನು ಸ್ಥಿರಗೊಳಿಸಿಕೊಳ್ಳಲು, ಅದು ಸ್ಥಿರಗೊಳ್ಳಲು ಬೇಕಾದ ಬಲವನ್ನು ಪಡೆದುಕೊಳ್ಳಲು ಸದಾ ಯತ್ನಿಸುತ್ತಿರುತ್ತದೆ. ಇದು ನೈಸರ್ಗಿಕ, ಸ್ವಾಭಾವಿಕ.

ಯಾವುದೇ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಕ್ಕೆ ಅದರ ಆಹಾರ ಏನೆಂದು ಯಾರೂ ತೋರಿಸಿಕೊಡಬೇಕಾಗಿಲ್ಲ. ಯಾವುದೇ ಗಿಡ ಮರ ಹುಲ್ಲು ಕೂಡಾ ತಾನು ಹುಟ್ಟಿದ ಮೇಲೆ ತಾನು ಉಳಿದು ನಿಲ್ಲಲು, ಅಳಿಯದಿರಲು ಬೇಕಾದ ಬಲವನ್ನು ಪಡೆದುಕೊಳ್ಳಲು, ತನ್ನ ತಾನು ರಕ್ಷಣೆ ಮಾಡಿಕೊಳ್ಳಲು ತನ್ನ ಸರ್ವಪ್ರಯತ್ನವನ್ನು ಮಾಡುತ್ತದೆ. ದೊರಕದೇ ಇದ್ದ ಪಕ್ಷದಲ್ಲಿ ಅವು ಆ ಪ್ರಯತ್ನದಲ್ಲಿಯೇ ನಾಶವಾಗುತ್ತವೆ. ಹಾಗೆಯೇ ಮನುಷ್ಯನೂ ಕೂಡಾ, ಅವನ ಅನುವಂಶೀಯ ಮನಸ್ಥಿತಿಯೂ ಕೂಡಾ. ಜೈವಿಕವಾಗಿಯೂ, ತಾತ್ವಿಕವಾಗಿಯೂ ಮನುಷ್ಯನು ಸಾಯಲು ಅಥವಾ ನಾಶಗೊಳ್ಳಲು ಸಿದ್ಧನಿಲ್ಲ. ಮನುಷ್ಯನ ಮನಸ್ಸು ಸ್ವಾಭಾವಿಕವಾಗಿ ಜೀವಪರ. ಜೀವಂತವಾಗಿರಲೇ ಬಯಸುವುದು. ಉಳಿಯಲೇ ಆಶಿಸುವುದು. ಅಳಿಯಲು ನಿರಾಕರಿಸುವುದು. ಇದು ಯಾವುದೇ ಜೀವಂತ ಸೃಷ್ಟಿಯ ಸ್ವಾಭಾವಿಕ ಲಕ್ಷಣ.

ಹೋರಾಟವಾಗಲಿ, ಸಂಘರ್ಷವಾಗಲಿ, ಯುದ್ಧವಾಗಲಿ, ಪೈಪೋಟಿಯಾಗಲಿ; ಇದೆಲ್ಲವೂ ತಾನು ಉಳಿಯಲು ಮತ್ತು ತಾನು ಅಳಿಯದಿರಲು. ತನ್ನ ಉಳಿಯುವಿಕೆಗೆ ಬೆದರಿಕೆ ಬಂದಾಗ ತನ್ನೆಲ್ಲಾ ಶಕ್ತಿಯನ್ನೂ ಕ್ರೋಢೀಕರಿಸಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸೃಷ್ಟಿಯ ಜೀವವು ಸರ್ವಶಕ್ತಿಯನ್ನು ಬಳಸಿಕೊಳ್ಳುತ್ತದೆ. ತನ್ನ ಅಸ್ತಿತ್ವಕ್ಕೆ ಸಂಚಕಾರ ಬಂದಾಗಲೇ ತಮ್ಮ ಇರುವಿಕೆಗೆ ಬೆದರಿಕೆ ಎನಿಸಿದಾಗಲೇ ಪ್ರಕೃತಿಯಲ್ಲಿ ಪ್ರಾಣಿಗಳು ದಂಗೆಯೇಳುವುದು. ಸುಮ್ಮನೆ ಪುರುಸೊತ್ತಾಗಿ ಇದ್ದೀವಂತ ಅವೆಂದಿಗೂ ಇನ್ನೊಂದು ಪ್ರಾಣಿಗಳ ಮೇಲೆ ದಾಳಿ ಮಾಡಲು ಹೋಗುವುದಿಲ್ಲ. ತನ್ನ ಉಳಿಯುವಿಕೆಗೆ ಬಲಬೇಕು. ಬಲಸಂವರ್ಧನೆಯಾಗಬೇಕು. ಜೈವಿಕವಾಗಿ ಉಳಿಯುವುದಕ್ಕೆ ಆಹಾರ ಬೇಕು. ತನ್ನ ಆಹಾರವನ್ನು ತಾನು ಸಂಪಾದಿಸಿಕೊಂಡು, ಆ ಮೂಲಕ ಉಳಿಯಲು ಬಲ ಪಡೆಯಲು ಎಲ್ಲಾ ಪ್ರಾಣಿ, ಪಕ್ಷಿಗಳು ಮತ್ತು ಮಾನವರು ಅಲೆದಾಡುತ್ತವೆ. ವಲಸೆ ಹೋಗುತ್ತವೆ. ತಾನು ಜೈವಿಕವಾಗಿ ಮುಂದಿನ ಪೀಳಿಗೆಗಳ ಮೂಲಕ ಉಳಿಯಲು ಸಂತಾನಾಭಿವೃದ್ಧಿ ಮಾಡಲು ಕೂಡಾ ಸೂಕ್ತಪರಿಸರವನ್ನು ಹುಡುಕಿಕೊಂಡು ಹೋಗುತ್ತವೆ. ಇದು ನೈಸರ್ಗಿಕ ಮತ್ತು ಅತ್ಯಂತ ಸ್ವಾಭಾವಿಕ.
ಹಾಗಿರುವಾಗ ಮನುಷ್ಯ ಆತ್ಮಹತ್ಯೆಗೆ ಶರಣಾಗುವುದು, ಯಾವುದೋ ನೆಪಗಳನ್ನು ಇಟ್ಟುಕೊಂಡು (ಅವು ಕಾರಣಗಳಲ್ಲ) ಇತರರನ್ನು ಸುಖಾಸುಮ್ಮನೆ ಕೊಲ್ಲುವುದು; ಇವೆಲ್ಲವೂ ಮಾನಸಿಕ ಸಮಸ್ಯೆಗಳು. ಹತ್ಯೆ ಮತ್ತು ಆತ್ಮಹತ್ಯೆಗಳೆರಡೂ ಕೂಡಾ ಕಾರಣಗಳಿಂದಲ್ಲ, ನೆಪಗಳಿಂದಲೇ ಆಗುವುದು. ಆತ್ಮರಕ್ಷಣೆಗೆ ಮಾಡುವ ಪ್ರತಿದಾಳಿ ಈ ವಿಭಾಗಕ್ಕೆ ಸೇರುವುದಿಲ್ಲ. ಮತ್ತದು ಉಳಿಯುವ ಆಸೆ ಮತ್ತು ಅಳಿಯುವ ಭಯದ ಪ್ರತಿಫಲಗಳೇ ಆಗಿರುತ್ತವೆ.

ಈಗ ನಮ್ಮ ಹಳೆಯ ವಿಚಾರಕ್ಕೆ ಬರೋಣ.
ಮನುಷ್ಯ ಆನಂದವಾಗಿ, ಸುಖವಾಗಿ, ನೆಮ್ಮದಿ ಮತ್ತು ಶಾಂತಿಯಿಂದ ಉಳಿಯುವ ಆಶಯವನ್ನು ಹೊಂದಿದ್ದರೂ, ಅವನಲ್ಲೇಕೆ ನಕಾರಾತ್ಮಕವಾದ ಆಲೋಚನೆಗಳು ಬರುತ್ತಿರುತ್ತವೆ? ಕ್ರೌರ್ಯ, ಹಿಂಸೆ, ಹೋರಾಟ, ಯುದ್ಧ; ಇತ್ಯಾದಿಗಳನ್ನು ತಾನು ಮಾಡಲು ಇಚ್ಛಿಸದಿದ್ದರೂ; ಆಗಲು ಅದನ್ನು ನೋಡಲು, ಆಗುತ್ತಿರುವುದರಲ್ಲಿ ಆಸಕ್ತಿ ಹೊಂದುವನು, ಸಾಲದಕ್ಕೆ ಮೈ ಮರೆತು ರೋಮಾಂಚಿತನಾಗಿ ಆನಂದಿಸುವನು? ಏಕೆಂದರೆ ಅವೆಲ್ಲವೂ ಬಲದ ಪ್ರದರ್ಶನ. ತಾನು ಬಯಸುವ, ಹೊಂದಲು ಬಯಸುವ ಬಲವನ್ನು ಅಲ್ಲಿ ನೋಡಲು ಇಷ್ಟಪಡುತ್ತಾನೆ. ದಾಳಿಗೆ ಪ್ರತಿದಾಳಿ ಮಾಡುವುದರಲ್ಲಿ, ಹೋರಾಟಕ್ಕೆ ಪ್ರತಿಹೋರಾಟ ಮಾಡುವುದರಲ್ಲಿ ನಿರೋಧಕ ಸಾಮರ್ಥ್ಯವನ್ನು ಅಲ್ಲಿ ಕಾಣುತ್ತಾನೆ. ಇದರಿಂದ ಮನಸ್ಸಿನ ಶಕ್ತಿಯ ಪರೀಕ್ಷೆ ಮಾತ್ರವಲ್ಲದೇ, ಸಂಭವಿಸುವ ಇಂತಹ ಹೋರಾಟಗಳಲ್ಲಿ ಶಕ್ತಿ ಸಂವರ್ಧನೆಯಾಗುತ್ತದೆ. ಕಷ್ಟಗಳನ್ನು ಎದುರಿಸುವ ಜೀವವು ಮತ್ತಷ್ಟು ಸದೃಢವಾಗುತ್ತದೆ. ಮತ್ತಷ್ಟು ಬಲಶಾಲಿಯಾಗುತ್ತದೆ. ಇನ್ನಷ್ಟು ಕಷ್ಟ ಕೋಟಲೆಗಳನ್ನು ಎದುರಿಸಲು ಸನ್ನದ್ಧನಾಗುತ್ತಾನೆ ಎಂಬುದು ಮನಸ್ಸಿನ ಅನುಭವದ ಅರಿವು. ಹಾಗಾಗಿ ನಕಾರಾತ್ಮಕವಾದ ಸಂಗತಿಗಳನ್ನು ಅವನು ಇಷ್ಟಪಡುವುದೇಕೆಂದರೆ ಸಕಾರಾತ್ಮಕವಾಗಿ ಬದುಕುವ ಬಲವು ತನಗೆ ಸಿಗುವುದೆಂದು.
ಕಾವ್ಯ, ಕತೆಗಳಲ್ಲಿ, ಸಿನಿಮಾಗಳಲ್ಲಿ ನಾಯಕ ಅಥವಾ ನಾಯಕಿ ಎಷ್ಟೆಲ್ಲಾ ಹೋರಾಟಗಳನ್ನು ಮಾಡುವಾಗ ಓದುತ್ತಾ, ಕೇಳುತ್ತಾ, ನೋಡುತ್ತಾ ರೋಮಾಂಚಿತರಾಗುವುದು, ಅವರನ್ನು ಮಾನಸಿಕವಾಗಿ ಅನುಸರಿಸುವುದು ಉಳಿವಿನ ಆಂತರಿಕ ಆಶಯಕ್ಕೇ.
ಸಿನಿಮಾದಲ್ಲಿ ಅತಿಮಾನುಷನಂತೆ ನಾಯಕನು ತನ್ನ ಬಲಪ್ರದರ್ಶನ ಮಾಡುವುದನ್ನು ಮೈಮರೆತು ನೋಡುವ ಪ್ರೇಕ್ಷಕನಲ್ಲಿ ಆ ಬಲ ತನ್ನದಾಗಬೇಕೆಂಬ ಆಸೆಯಿರುತ್ತದೆ. ತಾನೂ ಅಂತೆಯೇ ಬಲವಂತನಾಗಿ ಎಲ್ಲವನ್ನೂ, ಎಲ್ಲರನ್ನೂ ಎದುರಿಸಿ ಗೆಲ್ಲಲು ಬಯಸುತ್ತಿರುತ್ತಾನೆ. ಅದು ಎಷ್ಟರ ಮಟ್ಟಿಗೆ ನೋಡುಗರಿಗೆ ಮಾನಸಿಕ ಬಲವನ್ನು ನೀಡುತ್ತದೆ, ಬಿಡುತ್ತದೆ ಅಥವಾ ಬರಿಯ ಭ್ರಮೆಯನ್ನು ಹುಟ್ಟಿಸುತ್ತವೆ ಎಂಬುದು ನಂತರದ ಚರ್ಚೆಯ ವಿಷಯ. ಆದರೆ, ಮನಶಾಸ್ತ್ರೀಯವಾಗಿ ನಾಯಕರನ್ನು ಅತಿಬಲರನ್ನಾಗಿ ಕಾಣುವುದು ತಮ್ಮ ಬಲದ ಕೊರತೆಯನ್ನು ಮಾನಸಿಕವಾಗಿ ತುಂಬಿಕೊಳ್ಳಲು.
ಅಷ್ಟೆಲ್ಲಾ ಏಕೆ, ಸಾಧು ಸಂತರ ಮಹಾತ್ಮರ ಪವಾಡಗಳನ್ನು ನಂಬುವುದು, ಪವಾಡಪುರುಷರೆಂದು ನಂಬಿ ಅವರ ಮೊರೆ ಹೋಗುವುದು, ಅವರು ತಮ್ಮನ್ನು ಕಾಪಾಡುತ್ತಾರೆಂದು ನಂಬುವುದೂ ಇದೇ ಉಳಿಯುವ ಆಸೆಗೆ, ಅಳಿಯುವ ಭಯಕ್ಕೆ. ಅದಕ್ಕೆ ಪೂರಕವಾದ ಶಕ್ತಿ ದೊರಕುವುದೆಂದು.
ಒಟ್ಟಾರೆ ಉಳಿಯುವ ಆಶಯವನ್ನು ತೃಪ್ತಿಗೊಳಿಸಿಕೊಳ್ಳಬೇಕೆಂದರೆ, ಅಳಿಯುವ ಭಯವನ್ನು ಇಲ್ಲವಾಗಿಸಿಕೊಳ್ಳಬೇಕೆಂದರೆ ಮನಸ್ಸಿಗೆ ಬಲಬೇಕು. ಸಂಘರ್ಷ ಮತ್ತು ಹೋರಾಟಗಳನ್ನು ಎದುರಿಸುವ ಸಾಮರ್ಥ್ಯ ಬೇಕು.
‘ತಾನು’ ಉಳಿಯುವ ಆಸೆ, ಅದಕ್ಕೆ ಬೇಕಾದ ಬಲವನ್ನು ಪಡೆದುಕೊಳ್ಳುವ ಪ್ರಯತ್ನವು ನೈಸರ್ಗಿಕ ಮತ್ತು ಎಲ್ಲಾ ಜೀವಿಗಳಲ್ಲಿ ಸ್ವಾಭಾವಿಕ. ಇದು ಪ್ರವೃತ್ತಿಯೇ ಹೌದು. ಪ್ರಕೃತಿಯ ಎಲ್ಲಾ ಜೀವಿಗಳಲ್ಲಿ ಪ್ರವೃತ್ತಿರೂಪದಲ್ಲಿರುವ ಇದು ಮನುಷ್ಯನ ವಿಚಾರಕ್ಕೆ ಬಂದಾಗ ಅದು ಆಲೋಚನೆಗಳ ಸ್ವರೂಪಕ್ಕೂ ರೂಪಾಂತರಗೊಳ್ಳುತ್ತವೆ. ಹಾಗಾಗಿ ಬಲದ ಆಸೆಯು ಜೈವಿಕ ಅಸ್ತಿತ್ವಕ್ಕೂ ಮಿಗಿಲಾಗಿ ಬೇರೆ ಬೇರೆ ಸ್ತರಗಳಿಗೂ ರೂಪಾಂತರಗೊಳ್ಳುತ್ತದೆ. ಪ್ರಕೃತಿಯಲ್ಲಿ ಯಾವುದು ಜೈವಿಕ ಅಸ್ತಿತ್ವದ ಬಲಕ್ಕಾಗಿ ಮಾತ್ರ ಇತರ ಜೀವಿಗಳಲ್ಲಿರುವುದೋ ಅದು ಮನುಷ್ಯನ ವಿಚಾರಕ್ಕೆ ಬಂದಾಗ ದೈಹಿಕಬಲದ ಜೊತೆಗೆ, ಜನಬಲ, ಧನಬಲ, ಅಧಿಕಾರ ಬಲ, ಸ್ಥಾನಬಲ; ಹೀಗೆ ಹಲವು ಬಲಗಳನ್ನು ತಾನು ಹೊಂದಿದ್ದರೆ ಉಳಿಯುವೆನೆಂಬ ಭ್ರಮೆಗೆ ಬೀಳುತ್ತಾನೆ. ಆಲೋಚನೆಗಳಿಗೆ ಕಲ್ಪಿಸುವ ಸಾಮರ್ಥ್ಯವಿರುತ್ತದೆ. ಕಲ್ಪನೆಗಳು ಭ್ರಮೆಗಳಾಗುವ ಸಾಧ್ಯತೆಗಳು ಬಹಳ ಸಹಜವಾಗಿರುತ್ತದೆ.
ಮನಸ್ಸಿನ ಕೇಂದ್ರದ ವಿಷಯವಾದ ‘ನಾನು’ ಅಥವಾ ತನ್ನತನ ಎಂಬುದು ದಾರಿಗೆಟ್ಟ ಅಥವಾ ಇತರ ಪ್ರಭಾವಕ್ಕೆ ಒಳಗಾದ ಆಲೋಚನೆಗಳಿಂದಾಗಿ “ನಾನು” ಎಂಬ ಅಹಂಕಾರವಾಗಿ ಪರಿಣಮಿಸುತ್ತದೆ. ತನ್ನತನ ಎಂಬುದು ಅಹಂಕಾರವಾಗಿ ರೂಪಾಂತರಗೊಳ್ಳುವ ಬಗೆ ಮುಂದೆ ಸವಿಸ್ತಾರವಾಗಿ ಚರ್ಚಿತವಾಗಲಿದೆ. ಒಟ್ಟಾರೆ ಈ ಅಹಂಕಾರದ ಕಾರಣದಿಂದ ಮದ ಉಂಟಾಗುತ್ತದೆ. ಬಿನ್ನಹಕೆ ಬಾಯಿಲ್ಲವಯ್ಯ ಎಂಬ ಪುರಂದರ ದಾಸರ ಕೀರ್ತನೆಯಲ್ಲಿ ಕೊಡುವ ಪಟ್ಟಿಯಂತೆ ಅನ್ನಮದ, ಅರ್ಥಮದ, ಅಖಿಲ ವೈಭವದ ಮದ, ಪ್ರಾಯದ ಮದ, ರೂಪದ ಮದ; ಹೀಗೆ ಹಲವಾರು ಮದಗಳಿಂದಾಗಿ ಮನುಷ್ಯ ತನ್ನ ‘ತನ್ನತನವನ್ನು’ ಪಾರದರ್ಶಕವಾದ ದೃಷ್ಟಿಯ ಮಾನದಂಡದಿಂದ ನೋಡಿಕೊಳ್ಳುವುದನ್ನು ಬಿಟ್ಟು ವಿವಿಧ ಬಗೆಯ ಕನ್ನಡಕಗಳನ್ನು ಧರಿಸಿಕೊಂಡೆ ನೋಡಿಕೊಳ್ಳುತ್ತಿರುತ್ತಾನೆ. ಮದವು ತನ್ನ ತಾನು ನೋಡಿಕೊಳ್ಳುವ ಬಗೆಯಿಂದಾದರೆ, ಆ ಮದದಿಂದ ಅಹಂಕಾರವನ್ನೇ ತನ್ನತನವೆಂದು ಭ್ರಮಿಸಿರುತ್ತಾನೆ. ಆ ಭ್ರಮಾಧೀನ ಸ್ಥಿತಿಯಲ್ಲೇ ವರ್ತನೆಗಳನ್ನು ತೋರುತ್ತಿರುತ್ತಾನೆ ಮತ್ತು ಎಲ್ಲಾ ಚಟುವಟಿಕೆಗಳನ್ನು ನಡೆಸುತ್ತಿರುತ್ತಾನೆ.
ಆದರೆ ಮನುಷ್ಯನೇ ದಾಖಲಿಸಿರುವ ಚರಿತ್ರೆಗಳಲ್ಲಿ ಈ ಎಲ್ಲಾ ಬಲಗಳೂ ಮಣ್ಣಾಗಿವೆ ಎಂಬ ಸ್ಪಷ್ಟ ಸಂದೇಶವಿದ್ದರೂ ತಾನು ಉಳಿಯುವ ಮತ್ತು ಅಳಿಯದಿರುವ ಆಸೆಯಿಂದಾಗಿ ಮರಳಿ ಪ್ರಯತ್ನವ ಮಾಡುತ್ತಲೇ ಇರುತ್ತಾನೆ. ಜಗತ್ತಿನಲ್ಲಿ ಅತ್ಯಂತ ತ್ವರಿತವಾಗಿ ಸದಾ ನವೀಕರಣಗೊಳ್ಳುತ್ತಿರುವ ವಿಷಯಗಳೆಂದರೆ ಅವು ಆಸೆ ಮತ್ತು ಭಯಗಳೇ. ಉಳಿಯುವ ಆಸೆ ಮತ್ತು ಅಳಿಯುವ ಭಯವೆರಡೂ ನಾನಾ ರೀತಿಯ ಭಿನ್ನ ಮುಖವಾಡಗಳಲ್ಲಿ ಹೊಸಹೊಸ ರೂಪಗಳನ್ನು ಪಡೆದುಬರುತ್ತಿರುತ್ತವೆ. ಇವುಗಳಿಗೆ ನಾನತ್ವವಿರುವಂತೆ ಮನಸ್ಸಿನ ಮೂಲಾಂಶವಾದ ನಾನು ಎಂಬ ನನ್ನತನವೂ ಕೂಡಾ ಹಲವು ನಾನತ್ವಗಳ ಮೇಲೆ ಅವಲಂಬಿತವಾಗಿದ್ದು ಉಳಿದುಕೊಂಡಿರಲು ಮತ್ತು ಅಳಿಯದಿರಲು ಶತಾಯಗತಾಯ ಪ್ರಯತ್ನ ಮಾಡುತ್ತಿರುತ್ತದೆ.
ನೋಡಿ, ಇತರ ಜೀವಿಗಳಂತೆ ಮನುಷ್ಯನಿಗೆ ಬರಿಯ ಜೈವಿಕ ಅಸ್ತಿತ್ವದ ಆಸೆ ಮಾತ್ರವೇ ಇದ್ದಿದ್ದರೆ ಅವನು ಪ್ರಕೃತಿಯ ಭಾಗವಾಗಿರುತ್ತದೆ. ಆದರೆ ಅವನು ತನ್ನ ಆಲೋಚನೆಗಳಿಂದ ತನ್ನ ಅಸ್ತಿತ್ವವನ್ನು ಇತರ ಕೃತಕ ಅಥವಾ ಅನೈಸರ್ಗಿಕ ವಿಷಯಗಳ ಆಧಾರದ ಮೇಲೆ ಉಳಿಸಿಕೊಳ್ಳಲು ಯತ್ನಿಸುವುದರಿಂದ ಪ್ರಕೃತಿಯ ಮೇಲೆ ಅಧಿಪತ್ಯ ಸಾಧಿಸಲು ಹೋದ. ಮನುಷ್ಯ ಪ್ರಕೃತಿಯ ಭಾಗವಾಗಿ ಉಳಿಯಲೇ ಇಲ್ಲ. ಅದನ್ನು ಹಾಳುಗೆಡವುವ ನಾಶಕನಾಗಿ, ಅದನ್ನು ಆನಂದಿಸುವ ರಸಿಕನಾಗಿ, ಅದನ್ನು ಉಳಿಸುವ ರಕ್ಷಕನಾಗಿ; ನಾನಾ ರೀತಿಯಲ್ಲಿ ಪಾತ್ರಗಳನ್ನು ಹಂಚಿಕೊಂಡುಬಿಟ್ಟಿದ್ದಾನೆ.
ಮನುಷ್ಯನಲ್ಲಿ ಮನಸ್ಸೆಂಬುದು ಸ್ವಾಭಾವಿಕ ಮತ್ತು ನೈಸರ್ಗಿಕ. ಆದರೆ ಅವನ ಆಲೋಚನೆಗಳು ಅಸ್ವಾಭಾವಿಕ ಮತ್ತು ಅನೈಸರ್ಗಿಕ. ಹಾಗಾಗಿ ಭ್ರಮೆಗಳನ್ನು ಹೊಂದುವನು. ಮಿತಿಮೀರಿದ ಬಲದ ಆಸೆಯನ್ನು ಹೊಂದುವನು. ಇದನ್ನೆಲ್ಲಾ ಗಮನಿಸಿದ ಜಾಣರು ಸ್ವಾಭಾವಿಕ ಮನಸ್ಸಿನ ಅಸ್ವಾಭಾವಿಕ ಆಲೋಚನೆಗಳನ್ನು ನಿಯಂತ್ರಿಸಲು ಕೆಲವು ನೇಮಗಳನ್ನು ಮಾಡಿದರು. ಮನಸ್ಸಿಗೆ ಅಗತ್ಯವಿರುವ ಕೆಲವು ತರಬೇತಿಗಳನ್ನು ಮನಗಂಡರು. ಆ ತರಬೇತಿಗಳನ್ನು ಕೊಡುವ ಮತ್ತು ಪಡೆಯುವ ಪ್ರಕ್ರಿಯೆಗಳು ಟ್ರಯಲ್ ಅಂಡ್ ಎರರ್ ಹಂತದಲ್ಲಿಯೇ ಇವೆ. ಈ ತರಬೇತಿಗಳನ್ನು ಕೊಡಲೆಂದೇ ಹಲವು ಪರಿಕಲ್ಪನೆಗಳು ರೂಪುಗೊಂಡವು. ಕೆಲವು ಸ್ವಾಭಾವಿಕವಾಗಿ ಸೃಷ್ಟಿಯಾದರೆ, ಮತ್ತೆ ಕೆಲವನ್ನು ಉದ್ದೇಶಪೂರ್ವಕವಾಗಿಯೇ ಸೃಷ್ಟಿಸಲಾಯಿತು. ಉದಾಹರಣೆಗೆ ಹೇಳುವುದಾದರೆ, ಸಂಗಾತಿ, ಒಡನಾಡಿ, ತಂದೆ, ತಾಯಿ, ಸೋದರ, ಸೋದರಿಯಂತಹ ಮಾನುಷ ಸಂಬಂಧಗಳು ಮತ್ತು ಅವುಗಳನ್ನು ಗುರುತಿಸುವ ವಿಧಾನಗಳು ನೈಸರ್ಗಿಕವಲ್ಲದಿದ್ದರೂ ಸ್ವಾಭಾವಿಕವಾಗಿ ರೂಪುಗೊಂಡವು. ಹಾಗೆಯೇ ದೈವತ್ವದ ಪರಿಕಲ್ಪನೆ, ಭೂತ ಪ್ರೇತ ಇತ್ಯಾದಿಗಳೂ ಕೂಡಾ ಪ್ರಕೃತಿಯ ವಿದ್ಯಮಾನಗಳನ್ನು ಗಮನಿಸುತ್ತಾ ಆಸೆ ಮತ್ತು ಭಯಗಳ ಆಧಾರದಲ್ಲಿಯೇ ಪರಿಗ್ರಹಿಸಿದ ರೀತಿನೀತಿಗಳಲ್ಲಿ ರೂಪುಗೊಂಡವು. ಇನ್ನು ಮುಂದುವರಿದಂತೆ, ಪ್ರೇಮ, ಕಾರುಣ್ಯ, ಔದಾರ್ಯ, ಮನುಷ್ಯತ್ವ, ಧರ್ಮ, ತಾತ್ವಿಕತೆ, ನೈತಿಕತೆ; ಇತ್ಯಾದಿಗಳು ಉದ್ದೇಶಪೂರ್ವಕವಾಗಿಯೇ ಸೃಷ್ಟಿಯಾದವು. ಪ್ರಾರಂಭದಲ್ಲಿ ಇವುಗಳು ಅಸ್ಪಷ್ಟವಾಗಿದ್ದರೂ ಕಾಲಾನಂತರದ ಬುದ್ಧಿವಂತರು ಅವನ್ನು ಸೂಕ್ತವಾದ ಮಾರ್ಪಾಡುಗಳಿಗೆ ಒಳಪಡಿಸುತ್ತಾ ಸ್ಪಷ್ಟಗೊಳಿಸುತ್ತಾ ಬಂದರು.
ಮನುಕುಲದ ಇತಿಹಾಸದಲ್ಲಿ ಮನುಷ್ಯನ ಮನಸ್ಸನ್ನು ತರಬೇತಿಗೊಳಿಸುವ ಏನೇನೆಲ್ಲಾ ಪ್ರಯತ್ನಗಳಾದರೂ ಇದುವರೆಗೂ ಅವು ಯಾವುವೂ ಪೂರ್ಣಪ್ರಮಾಣದಲ್ಲಿ ಯಶಸ್ವಿಯಾಗಲೇ ಇಲ್ಲ.
ಏಕೆಂದರೆ ಮನುಷ್ಯನ ಮನಸ್ಸು ಎಂಬ ವಿಷಯವು ಅಭೌತಿಕವೂ, ಅಮೂರ್ತವೂ ಆಗಿದ್ದು, ಅದರಿಂದ ಉಂಟಾಗುವ ಆಲೋಚನೆಗಳು ಅತಿಭೌತಿಕವೂ, ಅಸ್ವಾಭಾವಿಕವೂ ಆಗಿದ್ದು ಅಪಾಯಕರವಾಗಿದ್ದವು. ಇವು ಹೀಗೆ ಅಪಾಯಕರವಾಗಿವೆ ಎಂದೇ ಆಲೋಚನಾ ಕ್ರಮಗಳನ್ನೇ ಬುದ್ಧಿವಂತರು ರೂಪಿಸಿದರು. ಹೀಗೆ ಆಲೋಚಿಸಿ, ಹೀಗೆ ಆಲೋಚಿಸಬೇಡಿ. ಇಂತಹ ಆಲೋಚನೆಗಳಿಂದಾಗಿ ಇಂತಹ ಅಪಾಯಗಳು ಎದುರಾಗುತ್ತವೆ ಎಂದೆಲ್ಲಾ ಎಚ್ಚರಿಸುತ್ತಾ ಬಂದರು. ಚಿಂತನಾಕ್ರಮಗಳಿಗೂ ಮಿಗಿಲಾಗಿರುವುದು ಮನಸ್ಸಿನ ಮೂಲ ಸ್ವರೂಪ. ಆದರೆ ಅದನ್ನು ನಿಯಂತ್ರಿಸಲು ಸಾಧ್ಯವಿದೆ. ಆ ಆಲೋಚನೆಗಳು ಬಲದ ಆಸೆಯನ್ನು ಹೊಂದಿರುವುದೇ ಆಗಿದ್ದು ಆಸೆ ಮತ್ತು ಭಯಗಳ ಮೇಲೆಯೇ ರೂಪಿತವಾಗಿರುತ್ತದೆ. ಆದರೆ, ಬಲವಿದ್ದರೆ ಸಾಲದು. ಆ ಬಲವು ಆರೋಗ್ಯಕರವಾಗಿರಬೇಕು. ಇದು ವಿವೇಕ. ಚಿಂತನಾಕ್ರಮಗಳು ಅಥವಾ ಆಲೋಚನಾ ವಿಧಾನವು ಬಲಾಪೇಕ್ಷಿಯಾಗಿದ್ದರೂ ಅಥವಾ ಉಳಿಯುವ ಆಶಯದವಾಗಿದ್ದರೂ ಅದು ಸಾಮಾನ್ಯ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬೇಕು.
ಆಲೋಚನೆಗಳನ್ನು ಆರೋಗ್ಯಕರವೇ ಅನಾರೋಗ್ಯಕರವೇ ಎಂದು ಪರೀಕ್ಷಿಸುವುದಕ್ಕೆ ಒಂದು ಪಾರದರ್ಶಕ ಮಾನದಂಡವಿದೆ ಎಂದಿದ್ದೆ. ಹಾಗೆಯೇ ಬಲವು ಆರೋಗ್ಯಕರವಾಗಿದೆ ಎನ್ನುವುದಕ್ಕೂ ಕೂಡಾ ಸ್ವಯಂ ಪರೀಕ್ಷಾ ಮಾಪನವಿದೆ. ಇದು ಯಾರೋ ಯಾರಿಗೋ ಮಾಡುವುದಲ್ಲ. ಒಬ್ಬ ವ್ಯಕ್ತಿಯು ತನಗೆ ತಾನೇ ಮಾಡಿಕೊಳ್ಳುವುದು. ಒಬ್ಬರು ಮತ್ತೊಬ್ಬರಿಗೆ ನೆರವಾಗಬಹುದು. ಆದರೆ, ತನ್ನನ್ನು ತಾನು ಪ್ರಾಮಾಣಿಕವಾಗಿ ಪರೀಕ್ಷಿಸಿಕೊಂಡಾಗ ಪರೀಕ್ಷೆಯ ಫಲಿತಗಳನ್ನು ಒಪ್ಪುವ ಮತ್ತು ನಿರಾಕರಿಸುವ ವಿಷಯದಲ್ಲಿ ವ್ಯಕ್ತಿಯು ಭ್ರಮಾಧೀನನಾಗಕೂಡದು. ತಾನೇ ಸರಿ, ಇತರರು ತಪ್ಪು ಎನ್ನುವಂತಹ ಭ್ರಮೆಯಂತೂ ಮನುಷ್ಯನನ್ನು ಇನ್ನಷ್ಟು ಮಾನಸಿಕ ಅಸ್ವಸ್ಥನನ್ನಾಗಿ ಮಾಡುತ್ತದೆ. ಹಾಗೆಯೇ ತಾನೇ ತಪ್ಪು, ಇತರರೆಲ್ಲರೂ ಸರಿಯಾಗಿದ್ದಾರೆ ಎನ್ನುವಂತಹ ನಿರ್ಧಾರವೂ ಕೂಡಾ ಅನಾರೋಗ್ಯದ ಸಂಕೇತವೇ. ತಪ್ಪು ಸರಿಗಳು ಹಗಲು ಇರುಳುಗಳಂತೆ, ಹವಾಮಾನಗಳಂತೆ, ಋತುಗಳಂತೆ ಬದಲಾಗುತ್ತಿರುತ್ತವೆ. ಹಾಗಾಗಿ ಯಾವುದೋ ಒಂದು ತಪ್ಪು, ಯಾವುದೋ ಒಂದು ಸರಿಯ ಮೇಲೆ ಮನುಷ್ಯನ ಜೀವಮಾನದ ಒಟ್ಟಾರೆ ಮನಸ್ಸನ್ನು ನಿಲ್ಲಿಸಿಬಿಡುವುದು ವೈಜ್ಞಾನಿಕವೂ ಅಲ್ಲ, ವೈಚಾರಿಕವೂ ಅಲ್ಲ. ಒಟ್ಟಾರೆ ನಮ್ಮನ್ನು ನಾವು ನೋಡಿಕೊಳ್ಳುವುದು, ಪರಿಶೀಲಿಸಿಕೊಳ್ಳುವುದು, ಪರೀಕ್ಷಿಸಿಕೊಳ್ಳುವುದು, ನಮ್ಮೊಂದಿಗೆ ನಮ್ಮನ್ನೇ ಪ್ರತ್ಯೇಕಿಸಿಕೊಂಡು ವಿಶ್ಲೇಷಿಸುವುದು ಬಹಳ ಮಜವಾದ ಪ್ರಯೋಗಗಳು. ಇದರಿಂದ ನಮಗೂ ಶಾಂತಿ ಮತ್ತು ಇತರರಿಗೂ ನೆಮ್ಮದಿ. ಅದಕ್ಕಾಗೆಂದೇ ಹುಚ್ಚು ಮನಸ್ಸಿನ ಸಾವಿರ ಮುಖಗಳು. ನಮ್ಮದೇ ಮುಖಗಳನ್ನು ತಾಳೆ ನೋಡಿಕೊಳ್ಳಲು, ಇತರ ಮುಖಗಳನ್ನು ತಾಳಿಕೊಳ್ಳಲು.

(ಮುಂದುವರಿಯುವುದು)

LEAVE A REPLY

Please enter your comment!
Please enter your name here