- ಚರಣ್ ಐವರ್ನಾಡು
(ಸಂಶೋಧನಾ ವಿದ್ಯಾರ್ಥಿ)
ತಮಿಳು ಕವಿ ತಿರುವಳ್ಳುವರ್ ನ ತಿರುಕುರಳ್ ತಮಿಳಿನ ಪ್ರಾಚೀನ ಕೃತಿ. ಅರಂ, ಪುರಳ್ ಮತ್ತು ಇನ್ಬಂ – ನೈತಿಕತೆ, ಸಾರ್ವಜನಿಕ ನೈತಿಕತೆ ಮತ್ತು ಪ್ರೀತಿ ಇವುಗಳನ್ನು ಮುಖ್ಯ ವಸ್ತುಳನ್ನಾಗಿ ತಿರುಕುರಳ್ ತ್ರಿಪದಿಗಳನ್ನು ಬರೆದಿರುವ ತಿರುವಳ್ಳುವರ್ ತಮಿಳಿನ ಮಾತ್ರವಲ್ಲ ಇಂದು ಭಾರತವನ್ನು ಜಗತ್ತಿನ ಮುಂದೆ ಸಾಂಸ್ಕೃತಿಕವಾಗಿ ಪ್ರತಿನಿಧಿಸುತ್ತಿದ್ದಾನೆ.
ತಿರುಕುರಳ್ ಅನ್ನು ಮೊದಲ ಬಾರಿಗೆ ತರ್ಜುಮೆ ಮಾಡಿದ ಹೆಗ್ಗಳಿಕೆ ಇಂಗ್ಲೀಷ್ ಭಾಷಾಂತರಕಾರ ಫ್ರಾನ್ಸಿಸ್ ಎಲ್ಲಿಸ್ ಗೆ ಸಲ್ಲುತ್ತದೆ. ಯುವ ನಾಗರೀಕ ಸೇವಾ ಅಧಿಕಾರಿ ಫ್ರಾನ್ಸಿಸ್ ಎಲ್ಲಿಸ್ ತಂಜಾವೂರಿನ ನ್ಯಾಯಾದೀಶ ಮತ್ತು ಮ್ಯಾಜಿಸ್ಟ್ರೇಟ್ ಆಗಿ ಕೆಲಸ ಮಾಡುತ್ತಿದ್ದ. ಇವನು ೧೮೦೫ರಲ್ಲಿ ತನ್ನ ಬಳಿ ದೂರು ನೀಡಲು ಬಂದ ದೂರುದಾರನನ್ನು ಕಣ್ಣಿಗೆ ಮೆಣಸಿನ ಪುಡಿ ಹಾಕಿ ಹಿಂಸಿಸಿದ ತಂಜಾವೂರಿನ ರಾಜನ ಸೇವಕನನ್ನು ಬಂಧಿಸುತ್ತಾನೆ. ಇದರಿಂದ ತಂಜಾವೂರಿನ ರಾಜ ಕೋಪಗೊಂಡು ತನ್ನ ಅಧಿಕಾರ ಬಳಸಿಕೊಂಡು ಫ್ರಾನ್ಸಿಸ್ ಎಲ್ಲಿಸ್ ನನ್ನು ತೆಲುಗು ಭಾಷಿಕ ಪ್ರದೇಶವಾದ ಮಚಿಲಿಪಟ್ಟಣಕ್ಕೆ ವರ್ಗಾವಣೆಯಾಗುವಂತೆ ಮಾಡುತ್ತಾನೆ.
ಮಚಿಲಿ ಪಟ್ಟಣದಲ್ಲಿ ಫ್ರಾನ್ಸಿಸ್ ಎಲ್ಲಿಸ್ ತನ್ನ ಅಧ್ಯಯನವನ್ನು ವಿಸ್ತಾರಗೊಳಿಸುವ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳುತ್ತಾನೆ. ತೆಲುಗು ವಿದ್ವಾಂಸ ಮಾಮಡಿ ವೆಂಕಯ್ಯನನ್ನು ಬೇಟಿ ಮಾಡಿ ಅವನಿಂದ ತಮಿಳು ಮತ್ತು ತೆಲುಗು ಸಾಹಿತ್ಯದ ಪಾಠ ಹೇಳಿಸಿಕೊಳ್ಳುತ್ತಾನೆ. ಅಲ್ಲದೇ ಮಚಿಲಿಪಟ್ಟಣದಲ್ಲಿ ಉಡುಗೆ, ಆಹಾರ ಮೊದಲಾದವನ್ನು ಒಳಗೊಂಡಂತೆ ಅಲ್ಲಿನ ಸ್ಥಳೀಯ ಸಂಸ್ಕೃತಿಯನ್ನು ಸ್ವೀಕರಿಸಿ ಅನುಸರಿಸುತ್ತಾನೆ.
೧೮೧೦ರಲ್ಲಿ ಫ್ರಾನ್ಸಿಸ್ ಎಲ್ಲಿಸ್ ಮತ್ತೆ ಮದ್ರಾಸಿನ ಜಿಲ್ಲಾಧಿಕಾರಿಯಾಗಿ ನೇಮಕಗೊಳ್ಳುತ್ತಾನೆ. ಅಲ್ಲಿ ಫೋರ್ಟ್ ಸೈಂಟ್ ಜಾರ್ಜ್ ಕಾಲೇಜನ್ನು ಸ್ಥಾಪಿಸುತ್ತಾನೆ. ಈ ಕಾಲೇಜಿನಲ್ಲಿ ಸ್ಥಳೀಯ ಭಾಷೆಗಳ ಅಧ್ಯಯನ ಮತ್ತು ಕಲಿಕೆಗೆ ಹೆಚ್ಚು ಮಹತ್ವವನ್ನು ನೀಡಲಾಯಿತು. ಹೊಸದಾಗಿ ನೇಮಕವಾದ ಸರ್ಕಾರಿ ಅಧಿಕಾರಿಗಳಿಗೆ ಇಲ್ಲಿ ಭಾಷಾ ಪಂಡಿತರು ಸ್ಥಳೀಯ ಭಾಷೆಗಳನ್ನು ಹೇಳಿಕೊಡುತ್ತಿದ್ದರು. ಫ್ರಾನ್ಸಿಸ್ ಎಲ್ಲಿಸ್ ಈಸ್ಟ್ ಇಂಡಿಯಾ ಕಂಪನಿಗೆ ನೇಮಕವಾದ ಅಧಿಕಾರಿಗಳು ಇಲ್ಲಿ ಇದ್ದು ತಮಿಳು ಕಲಿಯುವಂತೆ ಆದೇಶ ನೀಡಿದ್ದ. ತಮಿಳನ್ನು ಕಲಿಸುವ ಮುಖಾಂತರ ಇತರ ದಕ್ಷಿಣ ಭಾರತೀಯ ಭಾಷೆಗಳನ್ನು ಕಲಿಯಲು ಭೂಮಿಕೆ ಸಿದ್ದ ಮಾಡಿಕೊಡುವಂತೆ ಈ ಕಾಲೇಜು ಕೆಲಸ ಮಾಡುತ್ತಿತ್ತು. ಫ್ರಾನ್ಸಿಸ್ ಎಲ್ಲಿಸ್ ತಮಿಳನ್ನು ಇತರ ದಕ್ಷಿಣ ಭಾರತೀಯ ಭಾಷೆಗಳನ್ನು ಕಲಿಯಲು ಇರುವ ಮೂಲ ಮಾರ್ಗ ಎಂದು ಕರೆದು ಈ ವಾದವನ್ನು ʼದ್ರಾವಿಡಿಯನ್ ಪ್ರೂಫ್ʼ ಎಂದು ಹೆಸರಿಸಿದ. ದ್ರಾವಿಡಿಯನ್ ಪ್ರೂಫ್ ನ ಕುರಿತು ತನ್ನ ಜೊತೆಗೆ ಕೆಲಸ ಮಾಡುತ್ತಿದ್ದ ಡುನ್ಕನ್ ಕ್ಯಾಂಬೆಲ್ ೧೮೧೬ರಲ್ಲಿ ಬರೆದ Grammar of the Teloogoo Languageನ ಮುನ್ನುಡಿಯಲ್ಲಿ ಪ್ರಸ್ತಾಪ ಮಾಡಿದ್ದಾನೆ. ಫೋರ್ಟ್ ಸೈಂಟ್ ಜಾರ್ಜ್ ಕಾಲೇಜಿನಲ್ಲಿ ಫ್ರಾನ್ಸಿಸ್ ಎಲ್ಲಿಸ್ ಒಂದು ಮುದ್ರಣ ಯಂತ್ರವನ್ನು ತಮಿಳು ಅಚ್ಚುಗಳ ಸಹಿತ ಸ್ಥಾಪಿಸಿದ ಫಲವಾಗಿ ಈ ಕೃತಿ ಮುದ್ರಣವಾಯಿತು. ತಮಿಳು ಅಚ್ಚುಗಳು ಇದ್ದರಿಂದ ೧೮೨೩ರಲ್ಲಿ ತಮಿಳು ವ್ಯಾಕರಣ ಮುದ್ರಣವಾಯಿತು. ಇದರ ಜೊತೆ ಜೊತೆಗೆ ಕನ್ನಡ, ತೆಲುಗು, ಮಲಯಾಲಂ ಮತ್ತು ಅರೇಬಿಕ್ ಭಾಷೆಗಳ ವ್ಯಾಕರಣಗಳೂ ಮುದ್ರಣವಾದವು.
ಸರಕಾರಿ ಅಧಿಕಾರಿಯಾಗಿದ್ದ ಫ್ರಾನ್ಸಿಸ್ ಎಲ್ಲಿಸ್ ತಿರುಕುರಳ್ ಅನ್ನು ತರ್ಜುಮೆ ಮಾಡುವ ಕೆಲಸವನ್ನು ಕೈಗೆತ್ತಿಕೋಮಡ. ಆದರೆ ಹದಿನೆಂಟು ಅಧ್ಯಾಯಗಳು ತರ್ಜುಮೆಯಾದಂತೆ ಕಾಲರ ಬಂದು ೧೮೧೯ರಲ್ಲಿ ಮರಣಹೊಂದಿದ. ಸಧ್ಯಕ್ಕೆ ಲಭ್ಯ ಇರುವವು ಈ ಹದಿನೆಂಟು ಅಧ್ಯಾಯಗಳು ಮಾತ್ರ. ಇವನ ಮರಣದ ನಂತರ ಇವನ ಬರಹಗಳು ರೌಸ್ ಪೀಟರ್ ಎಂಬಾತನ ಕೈಗೆ ಸಿಕ್ಕಿ ಅವನ ಅಡುಗೆಮನೆಯ ಒಲೆಗೆ ಸೌದೆಯಾಗುತ್ತವೆ! ಹೀಗಾಗಿ ಫ್ರಾನ್ಸಿಸ್ ಎಲ್ಲಿಸ್ ಮಾಡಿರುವ ಇತರ ತರ್ಜುಮೆಗಳು ಅಲಭ್ಯವಾಗಿವೆ.
೧೮೧೮ರಲ್ಲಿ ಮದ್ರಾಸು ಪ್ರಸಿಡೆನ್ಸಿಯಲ್ಲಿ ಬರ ಬಂದಾಗ ಫ್ರಾನ್ಸಿಸ್ ಎಲ್ಲಿಸ್ ಇಪ್ಪತ್ತೇಳು ಬಾವಿಗಳನ್ನು ತೋಡಲು ಆದೇಶಿಸುತ್ತಾನೆ. ಇಂದು ಚೆನ್ನೈನಲ್ಲಿ ಇರುವ ರಾಯಪೆಟ್ಟದಲ್ಲಿರುವ ಚಿನ್ನ ಪೆರಿಯಪಾಲಯತಮ್ಮ ದೇವಾಲಯದ ಬಳಿ ಬಾವಿ ತೋಡಿ ಅದರ ಕಟ್ಟೆಯ ಮೇಲೆ ಬರದ ಸಂದರ್ಭದಲ್ಲಿ ತಾನು ತೆಗೆದುಕೊಂಡ ಕಲ್ಯಾಣ ಕಾರ್ಯಗಳನ್ನು ವಿವರಿಸಲು ತಿರುಕುರಳ್ ನ ದ್ವಿಪದಿಯೊಂದನ್ನು ಬರೆಸಿದ. ಇಷ್ಟರ ಮಟ್ಟಿಗೆ ಫ್ರಾನ್ಸಿಸ್ ಎಲ್ಲಿಸ್ ತಿರುಕುರಳ್ ಬಗ್ಗೆ ಪ್ರೇಮವನ್ನು ಇಟ್ಟುಕೊಂಡಿದ್ದ.
ಭಾರತದಲ್ಲಿ ಪ್ರಚಲಿತದಲ್ಲಿದ್ದ ಭಾರತೀಯ ಭಾಷೆಗಳ ಮೂಲಭಾಷೆ ಸಂಸ್ಕೃತ ಎಂಬ ಚರ್ಚೆಗೆ ಉತ್ತರವಾಗಿ ದಕ್ಷಿಣ ಭಾರತೀಯ ಭಾಷೆಗಳ ಬೇರು ಬೇರೆಯದೇ ಎಂಬ ವಾದವನ್ನು ಮುಂದಿಟ್ಟ ಮೊದಲ ಯುರೋಪಿನ ಚಿಂತಕ ಫ್ರಾನ್ಸಿಸ್ ಎಲ್ಲಿಸ್! ಇವೆಲ್ಲವೂ ದ್ರಾವಿಡ ಭಾಷೆಗಳು ಎಂಬ ಚರ್ಚೆಯನ್ನು ಫ್ರಾನ್ಸಿಸ್ ಎಲ್ಲಿಸ್ ಆರಂಭಿಸಿದರೂ ನಲ್ವತ್ತೆರಡನೇ ಪ್ರಾಯದಲ್ಲಿ ಮರಣಹೊಂದಿದ ಕಾರಣ ಈ ವಾದವನ್ನು ಬೆಳೆಸಿದ ಮಿಷನರಿ ವಿದ್ವಾಂಸ ರಾಬರ್ಟ್ ಕಾಲ್ಡ್‌ವೆಲ್ ಗೆ ಈ ಕೀರ್ತಿ ಸಂದಿತು.
ರಾಬರ್ಟ್ ಕಾಲ್ಡ್‌ವೆಲ್ ತಮಿಳು, ಮಲಯಾಳಂ, ಕನ್ನಡ ಮತ್ತು ತೆಲುಗು ಭಾಷೆಗಳು ಒಂದೇ ಭಾ಼ಷಾ ಗುಂಪಿಗೆ ಸೇರಿದೆ ಎಂದನು ಮತ್ತು ಅದನ್ನು ದ್ರಾವಿಡಿಯನ್ ಭಾಷೆಗಳು ಎಂದು ಕರೆದನು. ೧೮೫೬ರಲ್ಲಿ ಪ್ರಕಟವಾದ ತನ್ನ Comparative Grammar of the Dravidian or South Indian Family of Languages ನಲ್ಲಿ ಈ ಬಗ್ಗೆ ಚರ್ಚಿಸುತ್ತಾ ಸಂಸ್ಕೃತ ವಿದ್ವಾಂಸರು ದಕ್ಷಿಣ ಭಾರತದ ಜನರನ್ನು ಮತ್ತು ಅವರ ಭಾಷೆಗಳನ್ನು ದ್ರಾವಿಡ ಎಂದು ಕರೆಯುತ್ತಿದ್ದರು ಎಂದು ಪ್ರಸ್ತಾಪಿಸಿದ್ದಾನೆ. ದ್ರಾವಿಡ ಭಾಷೆಗಳು ಇಂಡೋ-ಯುರೋಪಿಯನ್ ಭಾಷೆಗಳು ಮತ್ತು ತುರಾನಿಯನ್ ಭಾಷೆಗಳ ಮಧ್ಯೆ ತನ್ನದೇ ಸ್ಥಾನವನ್ನು ಪಡೆದಿದೆ ಎಂದು ತನ್ನ ಪರಿಕಲ್ಪನೆಯನ್ನು ಮುಂದಿಟ್ಟ.
ಭಾರತೀಯ ಭಾಷೆ, ಸಂಸ್ಕೃತಿಯ ಬಗೆಗಿನ ಚರ್ಚೆಯ ಬುಡವನ್ನೇ ಅಲ್ಲಾಡಿಸಿದ ಇವನ ವಾದ ದಕ್ಷಿಣ ಭಾರತೀಯ ಭಾಷೆಗಳ ಬಗ್ಗೆ ಕೌತುಕದಿಂದ ಜಗತ್ತು ನೋಡುವಂತೆ ಮಾಡಿತು. ದಕ್ಷಿಣ ಭಾರತದ ದ್ರಾವಿಡ ಐಡೆಂಟಿಗೆ ಭದ್ರವಾದ ತಳಪಾಯ ಹಾಕಿದ ರಾಬರ್ಟ್ ಕಾಲ್ಡ್‌ವೆಲ್ ಸಂಸ್ಕೃತ ಮತ್ತು ವೈದಿಕ ಸಂಸ್ಕೃತಿಗಳ ಮೂಲಕ ದಕ್ಷಿಣ ಭಾರತದ ಸಂಸ್ಕೃತಿ ಮತ್ತು ಭಾಷೆಗಳನ್ನು ನೋಡುವ ಬಗೆಯನ್ನು ಪ್ರಶ್ನಿಸಿದ. ದಕ್ಷಿಣ ಭಾರತಕ್ಕೆ ಬ್ರಾಹ್ಮಣರು ಮೂರ್ತಿ ಪೂಜೆಯನ್ನು ತಂದರು, ಪರಾಣ ಪ್ರಣೀತ ಧರ್ಮವನ್ನು ಹರಡಿದರು ಎನ್ನುತ್ತಾ ವೈದಿಕ ಜಾತಿ ಪದ್ದತಿಯನ್ನು ಪರಿಚಯಿಸಿ ಸ್ಥಳೀಯ ರಾಜ, ಯೋಧ ಮತ್ತು ರೈತರನ್ನು ಶೂದ್ರರು ಎಂದು ಕರೆದರು ಎಂದಿದ್ದಾನೆ. ತಮಿಳು ಪ್ರಾಚೀನ ಸಾಹಿತ್ಯಗಳನ್ನು ಹಿನ್ನಲೆಗೆ ತಳ್ಳಿ ಸಂಸ್ಕೃತ ಸಾಹಿತ್ಯವನ್ನು ಮುನ್ನಲೆಗೆ ತಂದವರು ಇವರೇ ಎನ್ನುತ್ತಾನೆ. ಮಿಷನರಿಯಾದ ರಾಬರ್ಟ್ ಕಾಲ್ಡ್‌ವೆಲ್ ತನ್ನ ಸಂಶೋಧನೆಯ ಮೂಲಕ ದಲಿತ ಕ್ರೈಸ್ತರ ಸಾಮಾಜಿಕ ಸ್ಥಾನಮಾನವನ್ನು ಎತ್ತರಿಸುವ ಕೆಲಸ ಮಾಡಿದಂತೆ ಕಂಡರೂ ಭಾಷೆಯ ಮೇಲಿನ ಅವನ ಕೆಲಸ ದ್ರಾವಿಡ ಚಳುವಳಿಯ ಹುಟ್ಟಿಗೆ ಬುನಾದಿಯಾಯಿತು.