ಹುಚ್ಚು ಮನಸ್ಸಿನ ಸಾವಿರ ಮುಖಗಳು 05

  • ಯೋಗೀಶ್ ಮಾಸ್ಟರ್, ಬೆಂಗಳೂರು

ಮನುಷ್ಯ ಕ್ರೂರಿಯಾಗಿರುವುದು, ಸ್ವಾರ್ಥಿಯಾಗಿರುವುದು, ಆಸೆಬುರುಕನಾಗಿರುವುದು, ಹಿಂಸಾತ್ಮಕ ವಿಷಯಗಳಲ್ಲಿ ಒಲವಿರುವುದು, ಕಾಮುಕನಾಗಿರುವುದು, ವಿಧ್ವಂಸಕ ಕೃತ್ಯಗಳನ್ನು ಮಾಡುವುದು; ಇವೆಲ್ಲಾ ಏನೇನೂ ಆಶ್ಚರ್ಯವೇ ಅಲ್ಲ.

ಮನುಷ್ಯತ್ವ ಅಥವಾ ಮಾನವತೆ ಎಂಬುದು ನಾವು ಬಯಸಿ ಕಟ್ಟಿಕೊಂಡಿರುವ ಪರಿಕಲ್ಪನೆ. ಅದು ನೈಸರ್ಗಿಕವಲ್ಲ. ಅಷ್ಟೇಕೆ ನೈತಿಕತೆಯೇ ನೈಸರ್ಗಿಕವಲ್ಲ. ಪ್ರೀತಿ, ಪ್ರೇಮ, ಕರುಣೆ, ಔದಾರ್ಯ, ತಂದೆ, ತಾಯಿ, ಸೋದರಿ ಸೋದರ ಸಂಬಂಧಗಳು, ಧರ್ಮ; ಇವ್ಯಾವುವೂ ನೈಸರ್ಗಿಕವಲ್ಲ. ಮಾನವ ನಿರ್ಮಿತ. ಈ ಪರಿಕಲ್ಪನೆಗಳನ್ನು ಕಟ್ಟಿಕೊಳ್ಳಲು ಕಾಲಕಾಲಕ್ಕೆ ಅವನಿಗೆ ಯಾವುದ್ಯಾವುದೋ ಕಾರಣಗಳು ಒದಗಿ ಬಂದವು, ಕಟ್ಟಿಕೊಂಡ. ಈಗ ಅದರ ಬಗ್ಗೆ ಚರ್ಚೆ ಬೇಡ. ನಮ್ಮ ಮನಸ್ಸಿನ ಕಡೆಗೆ ಇರುವ ಗಮನ ತಪ್ಪಿಹೋಗತ್ತೆ. ಹಾಗಾಗಿ ಈಗ ಕಟ್ಟುನಿಟ್ಟಾಗಿ ಮನಸ್ಸು, ಅದರ ಮೂಲ ಪ್ರವೃತ್ತಿ, ಅದರ ಪ್ರೇರಕ ಶಕ್ತಿಗಳು, ಅದು ಎಬ್ಬಿಸುವ ಅಲೆಗಳು, ಸಂಘರ್ಷಗಳು, ಬಹಳಷ್ಟು ಜನರು ಪ್ರಶ್ನಿಸುವಂತೆ ಅದನ್ನು ನಿಗ್ರಹಿಸುವುದು ಅಥವಾ ಹತೋಟಿಗೆ ತರುವುದು ಹೇಗೆ; ಇತ್ಯಾದಿಗಳ ಕಡೆಗೆ ಗಮನ ಕೊಡೋಣ. ಸಂದರ್ಭಾನುಸಾರ ಉದ್ಭವಿಸುವ ಉಪವಿಷಯಗಳ ಉಪಮೆಗಳ ಕಡೆಗೂ ಚಿಕ್ಕದಾಗಿ ಕಣ್ಣು ಹಾಯಿಸಿಕೊಂಡು ಮುಂದಕ್ಕೆ ಹೋಗೋಣ.

ಸರಿಯಪ್ಪಾ, ಈಗ ನಾವು ಈ ಹಿಂದೆ ಪ್ರಶ್ನಿಸಿಕೊಂಡ ಹಾಗೆ, ಮನಸ್ಸು ತನಗೆ ಹಿತ ಎನಿಸುವ ವಿಷಯಗಳನ್ನು ಬಿಟ್ಟು ಅಹಿತಕರವಾದ ವಿಷಯಗಳನ್ನು ಏಕೆ ತನ್ನೊಳಗೆ ತುಂಬಿಕೊಂಡಿರುತ್ತದೆ? ಯಾವುದನ್ನು ಬೇಡ ಬೇಡ ಎನ್ನುತ್ತದೆಯೋ ಆ ವಿಷಯಗಳನ್ನೇ ಒಳಕ್ಕೆ ಎಳೆದುಕೊಳ್ಳುತ್ತಿರುತ್ತದೆ ಏಕೆ? ಮನಸ್ಸಿನ ವಿಷಯದಲ್ಲಿ ನಕಾರಾತ್ಮಕವಾದ ವಿಷಯಗಳು ಏಕೆ ಸಕಾರಾತ್ಮಕ ವಿಷಯಗಳಿಗಿಂತ ಶಕ್ತಿಶಾಲಿ? ಇವುಗಳನ್ನೆಲ್ಲಾ ಗಮನಿಸೋಣ.

ರೂಢಿ, ಅಭ್ಯಾಸ, ಎಷ್ಟೋ ಸಾವಿರಾರು ವರ್ಷಗಳ ಹಿಂದಿನಿಂದ ಮಾಡಿಕೊಂಡು ಬಂದಿರುವ ರೂಢಿಗಳಿವೆಯಲ್ಲಾ, ಅವು ಮನುಷ್ಯನ ಆಲೋಚನೆಗಳನ್ನು, ಆ ಮೂಲಕ ಮನಸ್ಸನ್ನು ರೂಪಿಸಿವೆ. ಆ ರೂಢಿಗಳೂ ಕೂಡಾ ಪ್ರೇರಣೆಯ ಶಕ್ತಿಗಳಾಗಲು, ಅಥವಾ ಮೂಲ ಪ್ರವೃತ್ತಿಗಳಾಗಲು ಆಗಿನ ಸಂದರ್ಭ, ಸನ್ನಿವೇಶ, ಸಂಗತಿಗಳು, ವಾತಾವರಣ, ಬದುಕುವ ರೀತಿ, ಜೀವನ ಶೈಲಿ; ಇವೆಲ್ಲವೂ ಕಾರಣವಾಗಿರುತ್ತದೆ.
ಮನಸ್ಸಿನ ಆಲೋಚನೆಗಳನ್ನು ಮುನ್ನಡೆಸುವ ಶಕ್ತಿಗಳೇನು ಗೊತ್ತೇ? ಆಸೆ ಮತ್ತು ಭಯ. ಆಸೆ ಮತ್ತು ಭಯಗಳೇ ಮನುಷ್ಯನ ಮನಸ್ಸಿನ ಮೂಲ ಮುನ್ನಡೆಸುವ ಶಕ್ತಿ (ಡ್ರೈವಿಂಗ್ ಫೋರ್ಸ್). ಉಳಿಯುವ ಆಸೆ ಮತ್ತು ಅಳಿಯುವ ಭಯ!.

ಬದುಕುಳಿಯುವ ಆಸೆಯೇ ಅವನಿಂದ ಬೇಟೆಯಾಡಿಸಿದ್ದು, ಹೋರಾಟಗಳನ್ನು ಮಾಡಿಸಿದ್ದು, ಉಣ್ಣಿಸಿದ್ದು, ಉಡಿಸಿದ್ದು, ಹೊಸ ಹೊಸ ಆವಿಷ್ಕಾರಗಳನ್ನು ಮಾಡಿಸಿದ್ದು. ಅದೇ ರೀತಿಯಲ್ಲಿ ತಾನು ಅಳಿಯಬಾರದು ಎಂದೇ ಇದೇ ಹೋರಾಟಗಳನ್ನು ಮಾಡಿದ್ದು, ಸಂಘರ್ಷಗಳನ್ನು ಎದುರಿಸಿದ್ದು, ಯುದ್ಧಗಳನ್ನು ಮಾಡಿದ್ದು. ಸ್ಪರ್ಧೆಗೂ ಆಸೆ ಮತ್ತು ಭಯಗಳೇ ಕಾರಣ. ಉಳಿಯುವ ಆಸೆ, ಅಳಿಯುವ ಭಯ. ಈ ಪೈಪೋಟಿ ಎನ್ನುವುದೂ ಕೂಡಾ ಮನುಷ್ಯನಿಗೆ ಸ್ವಾಭಾವಿಕವಾಗಿ ಬಂದಿರುವುದೇ. ಹೋರಾಟ, ಪೈಪೋಟಿ ಎಂಬುದೂ ಕೂಡಾ ಅನುವಂಶೀಯ ಧಾತುವಾಗಿಯೇ ಬಂದಿರುತ್ತದೆ. ಮನುಷ್ಯನ ಹುಟ್ಟೇ ಈ ಪೈಪೋಟಿ ಮತ್ತು ಹೋರಾಟದ ಫಲ. ಸಂಭೋಗ ಎಂಬುದು ಸರಸಮಯವಾಗಿದ್ದರೂ ವೀರ್ಯಾಣು ಮತ್ತು ಅಂಡಾಣುಗಳೆರಡೂ ಹೆಣ್ಣಿನ ಗರ್ಭದಲ್ಲಿ ಸರಸಮಯವಾಗಿ ಕೂಡಿ ಪಿಂಡಗಟ್ಟುವುದಿಲ್ಲ. ಅಸಂಖ್ಯಾತ ವೀರ್ಯಾಣುಗಳು ಪೈಪೋಟಿಯ ಮೇಲೆ ನುಗ್ಗುತ್ತಿರುತ್ತವೆ. ಭಯಂಕರ ರೇಸ್ ಅಲ್ಲಿರುತ್ತದೆ. ಒಂದನ್ನೊಂದು ತಳ್ಳಿಕೊಂಡು, ನುಗ್ಗಿಕೊಂಡು ನಡೆಯುವ ಪೈಪೋಟಿಯಲ್ಲಿ ಯಾವುದೋ ಒಂದು ಶಕ್ತಿಶಾಲಿ ವೀರ್ಯಾಣುವು ಅಂಡಾಣುವನ್ನು ಸೇರುವುದರಲ್ಲಿ ಯಶಸ್ವಿಯಾಗುತ್ತದೆ. ಆ ಹೋರಾಟದ, ಪೈಪೋಟಿಯ ಗೆಲುವಿನ ಪ್ರತಿಫಲವೇ ಮಗು. ಆ ಮಗುವಿನಲ್ಲಿ ಹೋರಾಟವು, ಪೈಪೋಟಿಯು ಸ್ವಾಭಾವಿಕವಾಗಿಯೇ ಇರುತ್ತದೆ. ಲೈಂಗಿಕತೆ, ಆಸೆ, ಭಯ, ಪೈಪೋಟಿ, ಹೋರಾಟ, ಸಂಘರ್ಷ; ಇವೆಲ್ಲಾ ವ್ಯಕ್ತಿಯಲ್ಲಿ ಅತ್ಯಂತ ಸ್ವಾಭಾವಿಕ. ಲೈಂಗಿಕತೆಯ ಫಲವಾಗಿ ಹುಟ್ಟಿದ ಮಗುವು ಲೈಂಗಿಕತೆಯಲ್ಲಿ ನಿರಾಸಕ್ತನಾಗಿ, ಬ್ರಹ್ಮಚರ್ಯೆಯಲ್ಲಿ ನಿರತನಾಗಿ ಸಂತ ಮಹಾತ್ಮನಾಗಬೇಕೆಂದು ಬಯಸುವುದು ಎಷ್ಟು ಅಸ್ವಾಭಾವಿಕವೋ, ಘರ್ಷಣೆ, ಹೋರಾಟ, ಪೈಪೋಟಿಗಳಿಲ್ಲದೇ ವ್ಯಕ್ತಿಗಳು ಇರಬೇಕೆಂಬುದೂ ಕೂಡಾ ಅಷ್ಟೇ ಅಸ್ವಾಭಾವಿಕ.

ಇಷ್ಟು ತಿಳಿದುಕೊಳ್ಳೋಣ, ಮನುಷ್ಯನ ಮನಸ್ಸನ್ನು ಮುನ್ನಡೆಸುವ ಶಕ್ತಿಗಳೆಂದರೆ ಆಸೆ ಮತ್ತು ಭಯ. ಉಳಿಯುವ ಆಸೆ ಮತ್ತು ಅಳಿಯುವ ಭಯ; ಈ ಎರಡೂ ಅವನು ಯಾವುದ್ಯಾವುದರ ಮೇಲೋ ಅವಲಂಬಿತನಾಗುವಂತೆ ಮಾಡುವುದು. ಯಾವ ಆಹಾರ, ಔಷಧಿಯು ಅವನನ್ನು ಉಳಿಸುತ್ತದೆ ಎನ್ನುವುದೋ ಅದನ್ನು ಅವನು ತೆಗೆದುಕೊಳ್ಳುತ್ತಾನೆ. ಯಾವುದು ಅವನ ಉಳಿವಿಗೆ ಮಾರಕವಾಗಿದೆಯೋ ಅಥವಾ ಅಳಿಸುವುದೋ ಅದನ್ನು ದೂರವಿಡಲು ಯತ್ನಿಸುತ್ತಾನೆ. ಪೂಜೆ, ಪುನಸ್ಕಾರ, ಯಂತ್ರ, ಮಂತ್ರ, ತಂತ್ರ, ಆಚಾರ, ವಿಚಾರಗಳೆಲ್ಲವೂ ಈ ಆಸೆ ಮತ್ತು ಭಯಗಳೆಂಬ ಧಾತುಗಳ ಮೇಲೆಯೇ ಅವಲಂಬಿತವಾಗಿರುವುದು. ಮನುಷ್ಯ ಹಿಂದೆ ಮುಂದೆ ನೋಡದೇ ಏನೇನೆಲ್ಲಾ ನಂಬುವುದೂ ಆಸೆ ಮತ್ತು ಭಯಗಳಿಂದಲೇ. ಇವುಗಳಿಂದಲೇ ಧೈರ್ಯ, ಛಲ, ಭರವಸೆ, ನಂಬುಗೆ, ವಿಶ್ವಾಸವೇ ಮೊದಲಾದ ಅನೇಕ ವಿಷಯಗಳು, ಹಾಗೆಯೇ ದ್ರೋಹ, ಅನುಮಾನ, ಮುಖೇಡಿತನ, ಪುಕ್ಕಲುತನ ಇತ್ಯಾದಿಗಳೂ ಹುಟ್ಟಿರುವುದು.
ಅದೆಲ್ಲಾ ಸರಿ, ಉಳಿಯುವ ಆಸೆ ಮತ್ತು ಅಳಿಯುವ ಭಯವಿದ್ದರೂ ಮನುಷ್ಯ ಯುದ್ಧ, ಸಂಘರ್ಷ, ದಂಗೆ ಇತ್ಯಾದಿಗಳನ್ನು ಮಾಡುತ್ತಾ ವಿನಾಶವನ್ನು ತಂದುಕೊಳ್ಳುವುದಾದರೂ ಏಕೆ?
ಆಸೆ ಮತ್ತು ಭಯ; ಈ ಎರಡರ ನಡುವೆ ಮತ್ತೊಂದು ವಿಷಯವಿದೆ. ಅದು ತನ್ನತನದ ಗುರುತು. ಅದು ಆತ್ಮಕೇಂದ್ರಿತ ಧಾತು. ಆಸೆಯನ್ನು ಪಡುವ, ಭಯವನ್ನು ಹೊಂದುವ ಒಂದು ವಿಷಯವೆಂದರೆ ‘ನಾನು’ ಎಂಬ ಜೈವಿಕ ಮತ್ತು ತಾತ್ವಿಕ ಕೇಂದ್ರ. ಅದೇ ಮನಸ್ಸಿನ ಪ್ರೇರಕ ಶಕ್ತಿ. ಅದೂ ಕೂಡಾ ಅಮೂರ್ತವಾಗಿದ್ದು ಯಾವುದಾದರೊಂದರ ಮೇಲೆ ಆಧಾರ ಪಡೆದುಕೊಂಡು ಪ್ರತಿಮೆಯಾಗಲು ಯತ್ನಿಸುತ್ತಿರುತ್ತದೆ.

ಅಮೂರ್ತವೂ, ಪಾರದರ್ಶಕವೂ, ಭೌತಿಕ ಅಸ್ತಿತ್ವವೂ ಇಲ್ಲದ ತನ್ನತನ ಅಥವಾ ಆತ್ಮಕೇಂದ್ರಿತವಾದ ಮನಸ್ಸೆಂಬ ವಿಷಯವು ಸದಾ ಪರಾವಲಂಬಿ. ಯಾವುದನ್ನಾದರೂ ಅವಲಂಬಿಸಿಕೊಂಡು ತಾನು ಉಳಿಯುವ ಆಸೆಯನ್ನು ಪೂರೈಸಿಕೊಳ್ಳಲು ಯತ್ನಿಸುತ್ತಿರುತ್ತದೆ. ಸಂತಾನಭಿವೃದ್ಧಿ ಅಥವಾ ಪೀಳಿಗೆಗಳನ್ನು ಮುಂದುವರಿಸುವುದೆಂದರೇನು? ತಾನು ಈಗಲೂ ಮತ್ತು ಮುಂದೆಯೂ ಉಳಿದಿರುವ ಆಸೆ. ದೈಹಿಕವಾಗಿ ತಾನು ಇಲ್ಲವಾದರೂ ಜೈವಿಕವಾಗಿ ಉಳಿದಿರುವ ಆಸೆಯದು.
ಮಕ್ಕಳನ್ನು ಹುಟ್ಟಿಸುವ ಮೂಲಕ ತಾನು ಜೈವಿಕವಾಗಿ ಅಳಿಯುವ ಭಯವನ್ನು ಶಮನ ಮಾಡಿಕೊಳ್ಳಲು ಮನಸ್ಸು ಯತ್ನಿಸುತ್ತಿರುತ್ತದೆ. ಅಮೂರ್ತವೂ, ಪಾರದರ್ಶಕವೂ, ಭೌತಿಕ ಅಸ್ತಿತ್ವವೂ ಇಲ್ಲದ ಆತ್ಮಕೇಂದ್ರಿತವಾಗಿರುವ ವಿಷಯ, ಆಸೆ ಮತ್ತು ಭಯಗಳೆಂಬ ಮುನ್ನಡೆಸುವ ಶಕ್ತಿಗಳ ಕೇಂದ್ರಸ್ಥಾನದಲ್ಲಿರುವ ಪ್ರೇರಕ ಶಕ್ತಿ ಅಂದೆನೆಲ್ಲಾ ಅದನ್ನೇ ಸಧ್ಯಕ್ಕೆ ಮನಸ್ಸು ಎಂದು ಭಾವಿಸೋಣ. ಅದೇ ಹೌದೋ ಅಲ್ಲವೋ ಚರ್ಚೆ ಬೇಡ. ಆದರೆ ಹಾಗೆ ಆತ್ಮಕೇಂದ್ರಿತವಾಗಿರುವ ಆ ವಿಷಯಕ್ಕೆ ಮನಸ್ಸೆಂಬ ವಸ್ತುವನ್ನು ಆರೋಪಿಸುವುದರಿಂದ ಹುಚ್ಚು ಮನಸ್ಸಿನ ಸಾವಿರ ಮುಖಗಳನ್ನು ದರ್ಶಿಸಲು ಸಾಧ್ಯವಾಗುತ್ತದೆ. ನಮ್ಮದೇ ಮನಸ್ಸಿನ ಸ್ವರೂಪವನ್ನೂ, ರೂಪುರೇಶೆಗಳನ್ನೂ, ಚಟುವಟಿಕೆಗಳನ್ನೂ, ಒಲವು ನಿಲುವುಗಳನ್ನೂ ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ, ಆಸೆ ಮತ್ತು ಭಯ ಎಂಬ ಮುನ್ನಡೆಸುವ ಶಕ್ತಿಗಳು ಆಲೋಚನೆಗಳ ಹರಿವನ್ನು ಹುಟ್ಟಿಸಲು ಮತ್ತು ವಿಸ್ತರಿಸಲು ಕಾರಣವಾಗುತ್ತವೆ ಎಂದೂ, ಇದೇ ಭಯ ಮತ್ತು ಆಸೆಗಳ ನಡುವೆ ಕೇಂದ್ರದಂತೆ ಇರುವ ನನ್ನತನ ಅಥವಾ ನಾನು ಎನ್ನುವ ಅಮೂರ್ತ, ಅಭೌತಿಕ ಮತ್ತು ಪಾರದರ್ಶಕ ವಿಷಯವನ್ನು ಮನಸ್ಸು ಎಂದೂ ತಿಳಿದುಕೊಂಡು ಮುಂದಕ್ಕೆ ಹೋಗೋಣ.

(ಮುಂದುವರಿಯುತ್ತದೆ)

LEAVE A REPLY

Please enter your comment!
Please enter your name here