ಕವನ ಉಪ್ಪಿನಂಗಡಿ
BA 1st Year
GPU College Uppinangady

ಪೀಠಿಕೆ: ಭಾರತ ವಿವಿಧತೆಯಲ್ಲಿ ಏಕತೆಯನ್ನು ಮೆರೆಯುವ ದೇಶ. ಭಾರತದಲ್ಲಿರುವ ಧರ್ಮಗಳು, ವಿವಿಧ ಜನಾಂಗಗಳು,ಸಾಂಸ್ಕøತಿಕ ವೈವಿಧ್ಯಗಳು ಮತ್ತು ಭಾಷೆಗಳಲ್ಲಿರುವ ವೈವಿದ್ಯತೆ ಜಗತ್ತಿನ ಇನ್ಯಾವ ದೇಶಗಳಲ್ಲಾಗಲಿ ಇಲ್ಲ. ಈ ದೇಶದಲ್ಲಿ ಹಿಂದೂಗಳು, ಮುಸಲ್ಮಾನರು, ಕ್ರೈಸ್ತರು, ಜೈನರು,ಬೌಧ್ದರು, ಪಾರಸಿಗಳು ಮತ್ತು ಇದೀಗ ಲಿಂಗಾಯಿತ ಧರ್ಮ(ಶರಣ ಪರಂಪರೆ) ಸೇರಿದಂತೆ ವಿವಿಧ ಧರ್ಮಗಳಿವೆ. ಅಧಿಕೃತ ಅಂಕಿ–ಅಂಶಗಳ ಪ್ರಕಾರ ಭಾರತದಲ್ಲಿ 1,618/-ಭಾಷೆಗಳಿವೆ. ಇಂತಹ ವೈವಿಧ್ಯತೆಯ ನಡುವೆಯೂ ಭಾರತ ಒಂದು ದೇಶವಾಗಿ ಸದೃಢವಾಗಿ ಸೌಹಾರ್ಧ ಪರಂಪರೆಯನ್ನು ಹೊಂದಿದ ನಾಡಾಗಿದೆ.

ಭಾರತದ ಪರಿಕಲ್ಪನೆ: ಅತ್ಯಂತ ಸಂಕೀರ್ಣವಾದ ಬಹುರೂಪಿ ಆಯಾಮಗಳನ್ನು ಹೊಂದಿದ ‘ಭಾರತ’ ನಮ್ಮ ದೇಶವಾಗಿದೆ. ಈ ಪರಿಕಲ್ಪನೆ ಈ ದೇಶದಲ್ಲಿ ಹುಟ್ಟಿ, ಬೆಳೆದು ಬದುಕುವ ವಿಭಿನ್ನ ಧರ್ಮಗಳ ನಡುವಿನ ಸಹಿಷ್ಣುತೆಗೆ ಹೆಸರುವಾಸಿಯಾಗಿದೆ. ಭಾರತ ಒಂದು ರಾಷ್ಟ್ರವಾಗುವ ಪ್ರಕ್ರಿಯೆಯಲ್ಲಿ ತನ್ನ ಒಳಗೆ ಹುದುಗಿರುವ ಎಲ್ಲಾ ರೀತಿಯ ವಿಭಜನೆ ಮತ್ತು ವೈವಿದ್ಯತೆಗಳನ್ನು ಮೀರಿ ನಿಂತಿದೆ ಎಂದರೆ ತಪ್ಪಾಗಲಾರದು.

ಭಾರತದ ಪ್ರಮುಖ ಧರ್ಮಗಳು:
ಪ್ರಸ್ತಾವನೆಯಲ್ಲಿ ತಿಳಿಸಿರುವಂತೆ ಭಾರತದಲ್ಲಿ 6 ಪ್ರಮುಖ ಧರ್ಮಗಳಿವೆ. ಇವುಗಳಲ್ಲಿ 4 ಧರ್ಮಗಳು ಈ ನೆಲದಲ್ಲಿ ಹಾಸುಹೊಕ್ಕಾಗಿ ಬೆಳೆದಿದೆ. ಭಾರತದ ಒಟ್ಟು ಜನಸಂಖ್ಯೆಯಲ್ಲಿ ಪ್ರಮುಖ ಧರ್ಮಗಳ ಅವಲಂಬಿಗಳ ಪ್ರಮಾಣ ಈ ಕೆಳಗಿನಂತಿದೆ. ಹಿಂದೂ ಧರ್ಮ 79.8%,ಇಸ್ಲಾಂ ಧರ್ಮ 14.2 %, ಸಿಖ್ ಧರ್ಮ 1.7%, ಬೌಧ್ದ ಧರ್ಮ 0.7%, ಜೈನಧರ್ಮ 0.4 % ಪಾರಸಿ ಹಾಗೂ ಇನ್ನಿತರ ಸಣ್ಣ ಮಟ್ಟ ಧಾರ್ಮಿಕ ಗುಂಪುಗಳಲ್ಲಿ 0.7 %ಅವಲಂಬಿಗಳು ಇದ್ದಾರೆ. ಧರ್ಮಗಳ ಪೈಕಿ ಹಿಂದೂ ಧರ್ಮ ಬಹುಸಂಖ್ಯಾತ ಧರ್ಮಗಳೆಂದು ಪರಿಗಣಿಸಲಾಗುತ್ತಿದೆ. ಖ್ಯಾತ ಚಿಂತಕ “ಜಾರ್ಜ್ ಕಾರ್ಲಿನ್ “ ಒಂದು ಕಡೆ ಹೀಗೆ ಹೇಳುತ್ತಾರೆ. “Rel.igion is like a paire of shoos, find one that fits for yoy, but dont make me where your shoos” ನಿಮಗೆ ಬೇಕಾದ ಸೂಕ್ತವಾದ ಹೊಂದಿಕೊಳ್ಳುವ ಧರ್ಮವನ್ನು ಆಯ್ಕೆ ಮಾಡಿಕೊಳ್ಳಿ ಆದರೆ ನಿಮ್ಮ ಧರ್ಮವನ್ನು ನನ್ನ ಮೇಲೆ ಹೇರಬೇಡಿ ಎನ್ನುವ ಮಾತು ಅತ್ಯಂತ ಅರ್ಥಪೂರ್ಣವಾಗಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಇರುವ ವಿವಿಧ ಧರ್ಮಗಳ ಅವಲೋಕನವನ್ನು ಮಾಡಬೇಕಾಗಿದೆ.

ಹಿಂದೂ ಧರ್ಮ: ಹಿಂದೂಧರ್ಮ ಜಗತ್ತಿನ ಪುರಾತನ ಧರ್ಮಗಳಲ್ಲಿ ಒಂದಾಗಿದೆ. ಜಾಗತಿಕ ಮಟ್ಟದಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಧರ್ಮದ ನಂತರ ಮೂರನೇ ಸ್ಥಾನದಲ್ಲಿ ಹಿಂದೂ ಧರ್ಮವಿದೆ. ವೇದಾಂತ ಮತ್ತು ಮನುಧರ್ಮ ಶಾಸ್ತ್ರದ ತಳಹದಿಯ ಮೇಲೆ ನಿಂತಿರುವ ಹಿಂದೂಧರ್ಮದಲ್ಲಿ ಶ್ರೇಣೀಕೃತ ಜಾತಿ ವ್ಯವಸ್ಥೆ ಇದೆ. ಬ್ರಾಹ್ಮಣ, ಕ್ಷತ್ರೀಯ, ವೈಶ್ಯ ಮತ್ತು ಶೂದ್ರ ಶ್ರೇಣಿಗಳಲ್ಲದೆ ಅತ್ಯಂತ ತಳಹಂತದಲ್ಲಿರುವ ದಲಿತರು ಹಿಂದೂ ಸಮಾಜದ ಭಾಗ ಎಂದು ಕರೆಯಲ್ಪಡುತ್ತಾರೆ. ದಲಿತರು ಎಂದರೆ ಪಂಚಮರು ಹಿಂದೂ ಧರ್ಮದ ಭಾಗ ಹೌದೇ ಅಲ್ಲವೇ ಎನ್ನುವ ಬಗ್ಗೆ ಸಾಕಷ್ಟು ಭಿನ್ನ ಅಭಿಪ್ರಾಯಗಳಿವೆ.

ಬೌದ್ಧ ಧರ್ಮ: ಭಾರತದಲ್ಲಿ ನೆಲದಲ್ಲೇ ಹುಟ್ಟಿ ಬೆಳೆದು ಜಗತ್ತಿನ ವಿವಿಧ ದೇಶಗಳಿಗೆ ಪಸರಿಸಿದ ಇನ್ನೊಂದು ಧರ್ಮ ಬೌದ್ಧ ಧರ್ಮ. ಭಾರತದಲ್ಲಿ ಹುಟ್ಟಿ ಸದೃಢ ನೆಲೆಯನ್ನು ಕಂಡ ಬೌದ್ಧ ಧರ್ಮ ವೈದಿಕ ಧರ್ಮದ ದಾಳಿಗೆ ಒಳಗಾಗಿ ತಾನು ಹುಟ್ಟಿದ ನೆಲದಲ್ಲೇ ಅಸ್ತಿತ್ವವನ್ನು ಕಳೆದು ಕೊಳ್ಳುವಂತಾಯಿತು. ಆದರೆ ಜಗತ್ತಿನ ಅತ್ಯಂತ ಮಾನವೀಯ , ಅತ್ಯಂತ ವೈಚಾರಿಕ ಧರ್ಮವೆಂದು ಪರಿಗಣಿತವಾಗಿರುವ ಬೌದ್ಧ ಧರ್ಮ ಬರ್ಮಾ,ಚೀನಾ, ಟಿಬೇಟ್, ಮಂಗೋಲಿಯಾ, ಶ್ರೀಲಂಕಾ,ವಿಯಟ್ನಾಂ, ಜಪಾನ್, ಕೊರಿಯ ಸೇರಿದಂತೆ ಅನೇಕ ದೇಶಗಳಲ್ಲಿ ತನ್ನ ಪ್ರಾಬಲ್ಯವನ್ನು ಮೆರೆಯುತ್ತಿದೆ. ವಿಶೇಷವೆಂದರೆ ಭಾರತದ ಸಂವಿಧಾನ ಶಿಲ್ಪಿ, ಸಾಮಾಜಿಕ ನ್ಯಾಯದ ಹರಿಕಾರ ಬಾಬಾ ಸಾಹೇಬ್ ಅಂಬೇಡ್ಕರ್‍ರವರು ಹಿಂದೂ ಧರ್ಮದ ಶ್ರೇಣೀಕೃತ ಜಾತಿ ವ್ಯವಸ್ಥೆಯ ಶೋಷಣೆಯಿಂದ ರೋಸಿ ಹೊಗಿ ತನ್ನ ಸಾವಿರಾರು ಬೆಂಬಲಿಗರೊಂದಿಗೆ  ಬೌದ್ಧ ಧರ್ಮಕ್ಕೆ ಮತಾಂತರವಾಗಿದ್ದರು. ಈ ಪರಂಪರೆ ಈಗಲೂ ಮುಂದುವರೆಯುತ್ತಿದೆ. ಬೌದ್ಧ ಧರ್ಮದ ಸಿದ್ದಾಂತಗಳನ್ನು ಬೋಧಿಸಿದವರು ಗೌತಮ ಬುದ್ದ. ಅವರು ಕಪಿಲವಸ್ತು ಸಮಾಜದ ದೊರೆಯ ಮಗನಾಗಿದ್ದವನು. ಮಾನವೀಯ ಸಮಾಜಕ್ಕಾಗಿ ತುಡಿಯುತ್ತಿದ್ದ ಅವರ ಮನಸ್ಸು ಸುಖದ ಸುಪ್ಪತ್ತಿಕೆಯನ್ನು ತೊರೆಯುವಂತೆ ಪ್ರೇರೇಪಿಸಿತು. ಅವರು ಬೋಧಿಸಿದ ಚಿಂತನೆಗಳೇ  ಬೌದ್ಧ ಧರ್ಮದ ಉದಯಕ್ಕೆ ಕಾರಣವಾದವು.

ಜೈನ ಧರ್ಮ : ಬೌದ್ದ ಧರ್ಮದಂತೆಯೇ ಜೈನ ಧರ್ಮವೂ ಕೂಡಾ ಭಾರತದ ನೆಲದಲ್ಲೇ ಹುಟ್ಟಿಬೆಳೆದು ಚಾಲ್ತಿಯಲ್ಲಿರುವ ಇನ್ನೊಂದು ಪ್ರಮುಖ ಧರ್ಮವಾಗಿದೆ. 24 ತೀರ್ಥಂಕರ ಪರಂಪರೆಯನ್ನು ಹೊಂದಿರುವ ಜೈನ ಧರ್ಮಕ್ಕೆ ವರ್ಧಮಾನ ಮಹಾವೀರ ಅತ್ಯಂತ ಪ್ರಮುಖ. ಸಂಪೂರ್ಣವಾಗಿ ಶಾಖಾಹಾರಿಗಳಾಗಿರುವ ಜೈನ ಧರ್ಮದವರು ಬಹುತೇಕ ಭಾರತದ ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ದೊಡ್ಡ ಪ್ರಮಾಣದಲ್ಲಿದ್ದಾರೆ. ಕರ್ನಾಟಕವು ಸೇರಿದಂತೆ ಉಳಿದ ರಾಜ್ಯಗಳಲ್ಲಿ ಅವರ ಸಂಖ್ಯೆ ಅತೀ ಕಡಿಮೆ. ಜೈನ ಧರ್ಮದವರು ಮೊದಲಿನಿಂದಲೂ ವ್ಯಾಪಾರ ಮತ್ತು ವಾಣೀಜ್ಯ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವುದನ್ನು ನಾವು ಕಾಣಬಹುದು.

ಸಿಖ್ ಧರ್ಮ : ಭಾರತದ ನೆಲದಲ್ಲಿ ಮೊಳಕೆಯೊಡೆದ ಹೊಸ ಧರ್ಮ ಸಿಖ್ ಧರ್ಮವಾಗಿದೆ. ಶ್ರೀ ಗುರುನಾನಕ್ ದೇವ್ ಅವರಿಂದ ಆರಂಭಿಸಲ್ಪಟ್ಟ ಸಿಖ್ ಧರ್ಮ ಭಾರತದ ಪಂಚಾಬ್,ಹರಿಯಾಣ, ರಾಜ್ಯಗಳಲ್ಲಿ ಅತ್ಯಂತ ಪ್ರಮುಖ ಧರ್ಮವಾಗಿ ಬೇರೂರಿದೆ. ಸಿಖ್ ಧರ್ಮವು ಶಿಷ್ಯ ಪರಂಪರೆಯನ್ನು ಆಧರಿಸಿದೆ.

ಪಾರಸಿ ಧರ್ಮ : ಭಾರತದಲ್ಲಿ ಅತೀ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಧರ್ಮವೆಂದರೆ ಪಾರಸಿ ಧರ್ಮ. 2001 ರ ಜನಗಣತಿಯ ಪ್ರಕಾರ ಇವರ ಜನಸಂಖ್ಯೆ ಕೇವಲ 70000ದ ಆಸುಪಾಸಿನಲ್ಲಿರಬಹುದು ಎಂದು ಹೇಳಲಾಗುತ್ತಿದೆ. ಇವರಲ್ಲಿ ಬಹುತೇಕರು ಮಹಾರಾಷ್ಟ್ರದ ಮುಂಬೈ ನಗರ ಮತ್ತು ಗುಜರಾತಿನ ರಾಜ್ಯದಲ್ಲಿ ವಾಸಿಸುತ್ತಿದ್ದಾರೆ. ಉಳಿದ ರಾಜ್ಯಗಳಲ್ಲಿ ಇವರು ಕಾಣಸಿಗುವುದಿಲ್ಲ.

ಕ್ರೈಸ್ತ ಧರ್ಮ : ಭಾರತದಲ್ಲಿ ಕ್ರೈಸ್ತ ಧರ್ಮವು ಸಾಮಾಜಿಕವಾಗಿ,ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಪ್ರಾಬಲ್ಯವನ್ನು ಹೊಂದಿದ ಧರ್ಮವಾಗಿದೆ. ಭಾರತದ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಕ್ರೈಸ್ತ ಧರ್ಮದವರು ವಾಸಿಸುತ್ತಿದ್ದಾರೆ. ನಮ್ಮ ನೆರೆಯ ಕೇರಳ ಹಾಗೂ ಈಶಾನ್ಯದ ಮಣಿಪುರದ ಮೊದಲಾದ ರಾಜ್ಯಗಳಲ್ಲಿ ಕ್ರೈಸ್ತ ಧರ್ಮೀಯರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಕ್ರೈಸ್ತ ಧರ್ಮವು ಯುರೋಪಿನಿಂದ ಭಾರತಕ್ಕೆ ಬಂದು ನೆಲೆಯೂರಿದ ಧರ್ಮವಾಗಿದೆ. ಭಾರತದ ಮೇಲೆ ನಡೆದ ವಾಸಾಹತುಶಾಹಿ ಆಕ್ರಮಣ ಮತ್ತು ಬ್ರಿಟೀಷ್ ಆಡಳಿತದ ಅವಧಿಯಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಮತಾಂತರಗಳು ನಡೆದು ಭಾರತದಲ್ಲಿ ಕ್ರೈಸ್ತ ಧರ್ಮವು ಬೆಳವಣಿಗೆ ಆಗಿರುವುದನ್ನು ನಾವು ಕಾಣಬಹುದಾಗಿದೆ.

ಇಸ್ಲಾಂ ಧರ್ಮ : ಕ್ರೈಸ್ತ ಧರ್ಮದಂತೆಯೇ ಇಸ್ಲಾಂ ಧರ್ಮವು ಕೂಡಾಹೊರಗಿನಿಂದ ಬಂದು ನೆಲೆಯೂರಿದ ಧರ್ಮವಾಗಿದೆ. ಬ್ರಿಟೀಷರಿಗಿಂತಲೂ ಮೊದಲು ಸಾಮ್ರಾಜ್ಯ ವಿಸ್ತರಣೆಯ ಕಾರಣಕ್ಕಾಗಿ ಅಫ್ಘಾನಿಸ್ತಾನ, ಬರೂತಿಸ್ಥಾನ,ಮಂಗೋಲಿಯಾ ಮೊದಲಾದ ಕಡೆಯಿಂದ ನಡೆದ ರಾಜರ ದಾಳಿಗಳ ಜೊತೆಗೆ ಇಸ್ಲಾಂ ಮತ ಪ್ರಚಾರವು ನಡೆಯಿತು.8ನೇ ಶತಮಾನದಲ್ಲಿ ಭಾರತದಲ್ಲಿ ಇಸ್ಲಾಂ ಧರ್ಮ ಹೆಚ್ಚು ವೇಗವಾಗಿ ಬೆಳೆಯಿತು ಎಂಬುವುದನ್ನು ಇತಿಹಾಸದಿಂದ ತಿಳಿಯಬಹುದು.

ಲಿಂಗಾಯಿತ ಸ್ವತಂತ್ರ ಧರ್ಮ: ಇದೀಗ ಕರ್ನಾಟಕದಲ್ಲಿ ಇದೊಂದು ಹೊಸ ಧರ್ಮದ ಕೂಗು ಅತ್ಯಂತ ಪ್ರಬಲವಾಗಿ ಕೇಳಿಬರುತ್ತಿದೆ. 12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ವಚನ ಚಳವಳಿ ಮತ್ತು ಶರಣ ಪರಂಪರೆಯನ್ನು ಆಧರಿಸಿದ ಲಿಂಗಾಯಿತ ಧರ್ಮವನ್ನು, ಹಿಂದೂಧರ್ಮವನ್ನು ಪ್ರತ್ಯೇಕಗೊಳಿಸಿ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕೆನ್ನುವ ಕೂಗು ಮುಂಚೂಣಿಗೆ ಬಂದಿದೆ. ಬಸವಣ್ಣನವರು ಹಿಂದೂ ಧರ್ಮದಲ್ಲಿದ್ದ ಜಾತಿ ವ್ಯವಸ್ಥೆಯ ಅಸಮಾನತೆಯನ್ನು ವಿರೋಧಿಸಿ ಲಿಂಗಾಯುತ ಧರ್ಮದ ಸ್ಥಾಪನೆಯನ್ನು ಮಾಡಿದ್ದಾರೆ. ಹೀಗಾಗಿ ನಮ್ಮದು ಪ್ರತ್ಯೇಕ ಧರ್ಮ ಎನ್ನುವ ವಾದವನ್ನು ಮಂಡಿಸಲಾಗುತ್ತದೆ.

ಇಷ್ಟೆಲ್ಲಾ ವಿಭಿನ್ನ ಧರ್ಮಗಳನ್ನು ಹೊಂದಿದ್ದರೂ,ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ಸಹಬಾಳ್ವೆಯ ನಾಡಾಗಿ ಭಾರತ ತಲೆಎತ್ತಿ ನಿಂತಿದೆ. ವಿವಿಧ ಧರ್ಮ ಮತ್ತು ಜನಾಂಗಗಳ ಜನರು ಪರಸ್ಪರ ಸಹಿಷ್ಣುತೆ, ಪ್ರೀತಿ ಮತ್ತು ಸಹಬಾಳ್ವೆಯಿಂದ ಬದುಕುತ್ತಾ ಬಂದಿದ್ದಾರೆ. “for the good of the mnay, for the happyness of the many, out of the compatsion of the world”. ಇದು ಗೌತಮ ಬುದ್ದನ ಚಿಂತನೆಯ ಸಾರ ಅಂದರೆ “ಬಹುಜನ ಹಿತಾಯ, ಬಹುಜನ ಸುಕಾಯ,ಲೋಕಾನುಕಂಪಾಯ” ಎನ್ನುವ ಅರ್ಥವನ್ನು ಹೊಂದಿದೆ. ಈ ಆಶಯದ ಪ್ರಕಾರ ಧರ್ಮಗಳು, ಧರ್ಮಗಳಾಗಲಿ ದೇವರ ಪರಿಕಲ್ಪನೆಯಾಗಲಿ ಬಹುಜನರ ಹಿತವನ್ನು ಕಾಪಾಡಬೇಕೇ ಹೊರತು, ಶೋಷಣೆಯ, ವಂಚನೆಯ ಅಥವಾ ಕೆಲವೇ ಜನರ ಹಿತವನ್ನು ರಕ್ಷಿಸುವ ಸಾಧನಗಳಾಗಬಾರದು. ಇದನ್ನು ಏಕೆ ಹೇಳುತ್ತಿದ್ದೇನೆಂದರೆ, ಭಾರತದಲ್ಲಿ ವಿವಿಧ ಧರ್ಮಗಳ ನಡುವೆ ಒಡಕನ್ನು ಸೃಷ್ಟಿಸಿ ವಿಧ್ವೇಷದ ಭಾವನೆಯನ್ನು ಹುಟ್ಟು ಹಾಕುವ ಅನೇಕ ಪ್ರಯತ್ನಗಳು ಚರಿತ್ರೆಯುದ್ದಕ್ಕೂ ದಾಖಲಾಗಿದೆ. ಈ ದೇಶವನ್ನು ಅತಿಕ್ರಮಿಸಿದ ವಸಾಹತುಶಾಗಹಿಗಳು, ಅದರಲ್ಲೂ ಪ್ರಮುಖವಾಗಿ ಬ್ರಿಟೀಷರು ನಡೆಸಿದ “ಒಡೆದು ಆಳುವ” ನೀತಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾದರೂ ಭಾರತದ ಜನರಲ್ಲಿನ ಸೌಹಾರ್ಧದ ಪರಂಪರೆಯನ್ನು ಅಳಿಸಿಹಾಕುವುದರಲ್ಲಿ ಸೋತು ಹೋದುದನ್ನು ನಾವು ಕಾಣುತ್ತೇವೆ. ಸ್ವತಂತ್ರ ಭಾರತದಲ್ಲಿ ನಾವು ಅಳವಡಿಸಿಕೊಂಡ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಬುನಾದಿಯಾಗಿರುವ ಭಾರತದ ಸಂವಿಧಾನ ಈ ಏಕತೆಯ ಈ ಪರಂಪರೆಗೆ ಹೆಚ್ಚಿನ ಭಾರತೀಯರು ಯಾವುದೇ ಧರ್ಮವನ್ನು ಸ್ವೀಕರಿಸುವ ಮತ್ತು ಅಧಿಕಾರವನ್ನು ಹೊಂದಿದ್ದಾರೆ. ಟಿಬೆಟ್‍ನ ಧಾರ್ಮಿಕ ಗುರು “ ದಲಾಯಿಲಾಮ” ಅವರು ಒಂದು ಸಂದರ್ಭದಲ್ಲಿ ಹೇಳಿದ ಮಾತು ಹೀಗಿದೆ. “ಭಾರತ ನಮಗೆ ಒಂದು ಮಾದರಿ. ಅನೇಕ ಧರ್ಮಗಳು ಮತ್ತು ಸಂಪ್ರದಾಯವನ್ನು ಹೊಂದಿದ ಜನ ಭಾರತದಲ್ಲಿ ಶಾಂತಿಯುತ ಸಹಬಾಳ್ವೆಯನ್ನು ಮಾಡುತ್ತಿದ್ದಾರೆ. ದಯವಿಟ್ಟು ಈ ಪರಂಪರೆಯನ್ನು ಮುಮದುವರೆಸಿ” ಹೌದು ದಲಾಯುಲಾಮ ಅವರಂತೆ ಅನೇಕ ದಾರ್ಶನಿಕರು ಮತ್ತು ಜಗತ್ತಿನ ಅನೇಕ ಪ್ರಮುಖ ನಾಯಕರು ಭಾರತದತ್ತ ನೋಡುತ್ತಿದ್ದಾರೆ. ಇಷ್ಟೆಲ್ಲಾ ವಿಭಿನ್ನ ಆಚಾರ, ವಿಚಾರ, ಸಂಸ್ಕೃತಿ, ಧರ್ಮಗಳು, ಜಾತಿಗಳು ಮತ್ತು ಭಾಷೆಗಳನ್ನು ಹೊಂದಿದ ಭಾರತ ಒಂದು ಅಖಂಡ ದೇಶವಾಗಿ ಅಭಿವೃದ್ದಿಯ ಪಥದಲ್ಲಿ ಮುನ್ನಡೆಯುತ್ತಿರುವುದನ್ನು ಅಚ್ಚರಿಯಿಂದ ಗಮನಿಸುತ್ತಿದ್ದಾರೆ. ಆದರೆ ಇತ್ತೀಚಿನ ಬೆಳವಣಿಗೆಗಳು ಭಾರತದ ಸಹಬಾಳ್ವೆಯ ಪರಂಪರೆಗೆ ಧಕ್ಕೆ ಉಂಟು ಮಾಡುತ್ತಿದೆಯೇನೋ ಎನ್ನುವ ಆತಂಕ ಕಾಡಲಾರಂಭಿಸಿದೆ. ಧಾರ್ಮಿಕ ಅಸಹಿಷ್ಣುತೆಯನ್ನು ಪ್ರೋತ್ಸಾಹಿಸಿ ಒಡಕನ್ನು ಉಂಟು ಮಾಡುವ ಮೂಲಕ ತಮ್ಮ ರಾಜಕೀಯ ಬೆಳೆಯನ್ನು ಬೇಯಿಸಿಕೊಳ್ಳುವ ಪ್ರವೃತ್ತಿ ದಿನೇ ದಿನೇ ಹೆಚ್ಚುತ್ತಿದೆ. ಜನರ ಮನಸ್ಸುಗಳಲ್ಲಿ ಕೋಮುವಾದದ ವಿಷಬೀಜವನ್ನು ಬಿತ್ತುವ, ಧಾರ್ಮಿಕ ಮೂಲಭೂತವಾದಿ ಶಕ್ತಿಗಳು ಈ ದೇಶದ ಸಹಬಾಳ್ವೆಯ ಪರಂಪರೆಗೆ ಕೊಳ್ಳಿ ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಪ್ರಯತ್ನಗಳೇನಾದರೂ ಯಶಸ್ವಿಯಾದಲ್ಲಿ ನಮ್ಮ ಭವ್ಯ ಭಾರತ ಕೋಮುಧ್ವೇಷದ ದಳ್ಳುರಿಯಲ್ಲಿ ಬೆಂದು ಹೋಗುವ ಅಪಾಯವಿದೆ. ಈ ಅಪಾಯಕ್ಕೆ ಸಂಬಂಧಿಸಿದಂತೆ ತಡೆಯುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಅದರಲ್ಲೂ ಮುಖ್ಯವಾಗಿ ಭಾರತದ ಭವಿಷ್ಯವಾಗಿರುವ ಯುವ ಜನರು ವೈಚಾರಿಕ ಪ್ರಜ್ಞೆಯನ್ನು ಬೆಳೆಸಿಕೊಂಡು ಮೂಲಭೂತವಾದಿ“ಫ್ಯಾಸಿಸ್ಟ್” ಶಕ್ತಿಗಳನ್ನು ಸೋಲಿಸಲು ಕಟಿಬದ್ದರಾಗುವ ಅಗತ್ಯವಿದೆ. ಬನ್ನಿ ನಾವೆಲ್ಲರೂ ಸೇರಿ ವೈವಿದ್ಯತೆಯ ನಾಡಾಗಿರುವ ನಮ್ಮ ಸುಂದರ ಭಾರತವನ್ನು ರಕ್ಷಿಸೋಣ.

““we must learn to leave together as brothers or perish together as fools”- Martin Loother. ಖ್ಯಾತ ಸಮಾಜ ಸುಧಾರಕ ಮಾರ್ಟಿನ್ ಲೂಥರ್ ಹೇಳಿದ ಮಾತು ಅಕ್ಷರಶಃ ನಿಜ. ಹಲವು ಧರ್ಮಗಳ ಅವಲಂಬಿಗಳಾಗಿರುವ ನಾವು ಸಹೋದರರಂತೆ ಬದುಕಲು ಕಲಿಯಬೇಕು. ಹಾಗೆ ಮಾಡದೆ ಹೋದಲ್ಲಿ ಎಲ್ಲರೂ ಜೊತೆಯಾಗಿ ಮೂರ್ಖರಂತೆ ನಾಶವಾಗುತ್ತೇವೆ. ಹೀಗಾಗದಿರಲಿ “ಹಲವು ಧರ್ಮ ಒಂದು ಭಾರತ ತನ್ನ ಭವ್ಯತೆಯನ್ನು ಮೆರೆಯಲಿ”.

1 COMMENT

LEAVE A REPLY

Please enter your comment!
Please enter your name here