ಭಾಗ -01
ಆಗಸ್ಟ್ ತಿಂಗಳು ಬಂತೆಂದರೆ ತಟ್ಟನೆ ನೆನಪಿಗೆ ಬರುವುದು ಶಾಲಾ ದಿನಗಳ ಸ್ವಾತಂತ್ರ್ಯೋತ್ಸವ. ಆ ಸಮಯಕ್ಕೆ ಆಗಸ್ಟ್ ಅಂದರೆ ಜಡಿಮಳೆಯ ದಿನಗಳು. ನಾವು ಶಾಲೆಗೆ ಹೋಗುತ್ತಿದ್ದಾಗ ವರ್ಷದಲ್ಲಿ ನೀಡುತ್ತಿದ್ದ ಸಮವಸ್ತ್ರವನ್ನು ಹೊಲಿಸಿ ಮೊದಲು ಧರಿಸಬೇಕಾಗಿದ್ದುದು ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕಾಗಿತ್ತು. ಅದಕ್ಕಾಗಿ ಎರಡು ದಿನಗಳ ಮೊದಲೇ ಐರಾನ್(ಇಸ್ತ್ರಿ) ಹಾಕಿ ಸಿದ್ದಪಡಿಸುತ್ತಿದ್ದೆವು. ಆ ದಿನ ಎಂದಿಂಗಿಂತ ಬೇಗನೇ ಆರಂಭವಾಗುತ್ತಿದ್ದ ಮದ್ರಸಾದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯುತ್ತಿತ್ತು. ಮದ್ರಸಾದಿಂದ ಮನೆಗೆ ಬಂದು ಸಮವಸ್ತ್ರ, ಟೈ, ಬೂಟು ಧರಿಸಿ ಶಾಲೆಗೆ ನಡೆಯುವ ನಮ್ಮ ಗೈರತ್ತು ಕಂಡರೆ 47ರ ಸ್ವಾತಂತ್ರ್ಯ ಮತ್ತೆ ಮರುಕಳಿಸಿತೇನೋ ಅನಿಸಬೇಕು.!
ಸ್ವಾತಂತ್ರ್ಯೋತ್ಸವದಂದು ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಹತ್ತು ದಿನಗಳ ಮೊದಲೇ ಅಭ್ಯಾಸ ನಡೆಯುತ್ತಿದ್ದುವು. ಆದ್ದರಿಂದ ತರಗತಿ ನಡೆಯದ ಆ ದಿನಗಳು ನಮ್ಮ ಪಾಲಿಗೆ ಚೇತೋಹಾರಿ ಘಳಿಗೆ. ಈ ಕಾರಣಕ್ಕಾಗಿ ಆಗಸ್ಟ್ ಅಂದರೆ ಈಗಲೂ ಅದೊಂಥರ ಸವಿ. ಜಡಿಮಳೆಯ ನಡುವೆಯೇ ನಡೆಯುವ ಧ್ವಜಾರೋಹಣ, ಮೆರವಣಿಗೆಗಳು ನಮ್ಮನ್ನು ಒದ್ದೆ ಮಾಡಿ ಬಿಡುತ್ತಿತ್ತು. ಆದರೆ ಆ ದಿನಗಳು ನೀಡುತ್ತಿದ್ದ ಬೆಚ್ಚನೆಯ ಸಂಭ್ರಮ, ಸಡಗರಗಳು ಇನ್ನೂ ತಣ್ಣಗಾಗಿಲ್ಲ.!ಆ ದಿನಗಳಲ್ಲಿ ಶಾಲೆಗೆ ಆಗಮಿಸುತ್ತಿದ್ದ ಗಣ್ಯ ವ್ಯಕ್ತಿಗಳು ಮಾಡುವ ಭಾಷಣಗಳಲ್ಲಿ ನಾವು, ಗಾಂಧೀಜಿ, ಚಂದ್ರಶೇಖರ ಆಝಾದ್, ಝಾನ್ಸಿರಾಣಿ, ಭಗತ್ ಸಿಂಗ್ ಮುಂತಾದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಹೋರಾಟಗಾರರ ಹೆಸರುಗಳನ್ನು ಕೇಳುತ್ತಿದ್ದೆವು. ಅವರ ಕ್ರಾಂತಿಕಾರಿ ಹೋರಾಟದ ವೈಖರಿಯನ್ನು ಕೇಳಿ ಪುಳಕಗೊಳ್ಳುತ್ತಿದ್ದೆವು. ಈ ಭಾಷಣಗಳಲ್ಲಿ ನಾವು ಕೇಳಿ ತಿಳಿದ ವ್ಯಕ್ತಿಗಳಷ್ಟೇ ಪಠ್ಯ ಪುಸ್ತಕಗಳಲ್ಲೂ ರಾರಾಜಿಸುತ್ತಿದ್ದರು.
ಆದರೆ ಸಾತಂತ್ರ್ಯ ಚಳುವಳಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಬಹುದೊಡ್ಡ ವರ್ಗವೊಂದನ್ನು ಎಲ್ಲೋ ನೇಪಥ್ಯಕ್ಕೆ ಸರಿಸಲಾಗಿದೆ ಎಂಬ ವಾಸ್ತವ ಆ ಕಾಲದ ನಮ್ಮ ಸೀಮಿತ ಗ್ರಹಿಕೆಗೆ ಅತೀತವಾಗಿತ್ತು.ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಮುಸ್ಲಿಮರು ವಹಿಸಿದ ಪಾತ್ರ ಅಮೋಘವಾದದ್ದಾಗಿತ್ತು. ರಾಷ್ಟ್ರೀಯ ಅಸ್ಮಿತೆಯನ್ನು ಬಡಿದೆಬ್ಬಿಸಿ ವಿದೇಶಿಗಳ ವಸಾಹತು ಶಾಹಿತ್ವದ ವಿರುದ್ಧ ಜನಾಂದೋಲನವನ್ನು ಸಾರ್ವತ್ರಿಕಗೊಳಿಸಿದ್ದು ಇಸ್ಲಾಮೀ ವಿದ್ವಾಂಸರು ಮತ್ತು ಮುಸ್ಲಿಂ ರಾಷ್ಟ್ರೀಯವಾದಿಗಳಾಗಿದ್ದರು. ಆದರೆ ಪೂರ್ವಾಗ್ರಹ ಪೀಡಿತ ಚರಿತ್ರೆ ರಚನೆಯಿಂದಾಗಿ ಸ್ವಾತಂತ್ರ್ಯ ಚಳುವಳಿಯ ಅವಿಭಾಜ್ಯ ವರ್ಗವೊಂದು ಚರಿತ್ರೆಯಿಂದ ನೇಪಥ್ಯಕ್ಕೆ ಸರಿಯಿತು. ವಸಾಹತುಶಾಹಿ ಚರಿತ್ರೆಗಾರರ ದುಂಬಾಲು ಬಿದ್ದ ಬಲಪಂಥೀಯ ಇತಿಹಾಸಕಾರರು ಅರೆ ಸತ್ಯಗಳನ್ನಷ್ಟೇ ಅಧಿಕೃತಗೊಳಿಸುತ್ತಾ ಹೋದರು. ಇದಕ್ಕೆ ರಾಜಕೀಯ, ಸೈದ್ದಾಂತಿಕ ಮತ್ತು ಮತೀಯ ಭಿನ್ನತೆಗಳೇ ಪ್ರಮುಖ ಕಾರಣಗಳಾಗಿದ್ದವು.
ಸ್ವಾತಂತ್ರ್ಯೋತ್ತರ ಭಾರತೀಯ ಇತಿಹಾಸ ರಚನೆಗೆ ಮುಂದಾಳತ್ವ ವಹಿಸಿದ್ದ ಶ್ರೀ ಆರ್.ಸಿ ಮಜುಂದಾರ್ ನಿರ್ಧಿಷ್ಟ ವರ್ಗವೊಂದನ್ನು ಚರಿತ್ರೆಯ ಮುಖ್ಯವಾಹಿನಿಯಿಂದ ಹೊರಗಿಡಲು ಅವಿರತ ಶ್ರಮ ನಡೆಸಿದರು. ಅಂದಾಜು ನಾಲ್ಕುವರೆ ಶತಮಾನಗಳ ಕಾಲ ನಾನಾ ರೀತಿಯಲ್ಲಿ ಅಸ್ತಿತ್ವ ಸ್ಥಾಪಿಸಿದ್ದ ಯುರೋಪ್ಯನ್ ಮೇಧಾವಿತ್ವದ ವಿರುದ್ದ ಮೊಟ್ಟ ಮೊದಲು ತೊಡೆತಟ್ಟಿ ನಿಂತದ್ದು ಮುಸ್ಲಿಮರೆಂಬ ನಗ್ನ ಸತ್ಯವು ಈ ಕಾರಣದಿಂದಾಗಿ ವಿಸ್ಮೃತಿಗೊಳಗಾದವು. ಅರೆಸತ್ಯಗಳೇ ಇತಿಹಾಸದ ಪುಟದಲ್ಲಿ ಅಚ್ಚಾಗುತ್ತಾ ಹೋದವು. ಆದರೆ ಪಿ.ಡಿ ಕೋಸಂಬಿ, ಬಿಪಿನ್ ಚಂದ್ರ, ಇರ್ಫಾನ್ ಹಬೀಬ್, ರಾಮಚಂದ್ರ ಗುಹಾರಂಥ ಆಧುನಿಕ ಇತಿಹಾಸಕಾರರಿಂದಾಗಿ ಮಬ್ಬು ಕವಿದಿದ್ದ ಚರಿತ್ರೆಯ ಸತ್ಯಗಳು ಮೆಲ್ಲಗೆ ಮುನ್ನಲೆಗೆ ಬರತೊಡಗಿದವು. ಚರಿತ್ರೆಯಲ್ಲಿ ನಡೆದ ಭಾರೀ ತಿದ್ದುಪಡಿಯ ಬಗ್ಗೆ ಸುಭಾಶ್ ಚಂದ್ರ ಬೋಸ್ ಹೇಳುವುದು ಹೀಗೆ; “ಮುಸ್ಲಿಮರು ಸ್ವಾತಂತ್ರ್ಯ ಚಳುವಳಿಯ ವಿರೋಧಿಗಳೆಂಬ ಭಾವನೆಯನ್ನು ಹಬ್ಬಿಸಲು ಬ್ರಿಟಿಷರು ಶ್ರಮಿಸಿದರು. ಈ ಕುಟಿಲ ಶ್ರಮ ಸಫಲತೆಯನ್ನೂ ಕಂಡಿತು. ಆದರೆ ರಾಷ್ಟ್ರೀಯ ಚಳುವಳಿಯಲ್ಲಿ ಗುರುತಿಸಿಕೊಂಡ ಬಹುದೊಡ್ಡ ಸಮೂಹ ಮುಸ್ಲಿಮರಾಗಿದ್ದರು. ಇದು ವಾಸ್ತವವಾಗಿದೆ.” ಮುಸ್ಲಿಮರು ಸ್ವಾತಂತ್ರ್ಯ ಸಂಗ್ರಾಮದ ವಿರೋಧಿಗಳು ಎಂಬ ದನಿ ದಟ್ಟವಾಗಿದ್ದ ಸಮಯದಲ್ಲಿ ಬೋಸ್ ಹೀಗೆ ಗುಡುಗಿದ್ದರು. “ಆಂಗ್ಲರ ಉದ್ದೇಶಪೂರ್ವಕ ಅಪಪ್ರಚಾರದಿಂದಾಗಿಯೇ ನಮ್ಮ ಸ್ವಾತಂತ್ರ್ಯ ಚಳುವಳಿಗೆ ಮುಸ್ಲಿಮರು ವಿರೋಧವಾಗಿದ್ದಾರೆಂದು ಹೇಳಲಾಗುತ್ತಿದೆ. ಇದು ಸಂಪೂರ್ಣ ಸುಳ್ಳು. ಮುಸ್ಲಿಮರಲ್ಲಿ ಬಹಳಷ್ಟು ಜನ ಆಂದೋಲನದಲ್ಲಿ ಭಾಗಿಗಳಾಗಿದ್ದಾರೆ. ಮುಸ್ಲಿಮರ ಬಹುದೊಡ್ಡ ವಿಭಾಗವು ಬ್ರಿಟಿಷ್ ವಿರೋಧಿ ನಿಲುವನ್ನು ತಾಳಿದೆ. ಇವೆರೆಲ್ಲ ಭಾರತದ ಬಿಡುಗಡೆಯನ್ನು ಬಯಸುತ್ತಿದ್ದಾರೆ.”ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯಿಂದ ಮುಸ್ಲಿಮರ ಸಾನಿಧ್ಯವನ್ನು ತೊಡೆದು ಹಾಕಲು ಯತ್ನಿಸಿದ ಪಟ್ಟಭಧ್ರ ಇತಿಹಾಸಕಾರರು, ದೇಶವಿಭಜನೆಯ ಚರಿತ್ರೆಯಲ್ಲಿ ಮುಸ್ಲಿಮರನ್ನು ಪ್ರಮುಖ ಪಾತ್ರಧಾರಿಗಳನ್ನಾಗಿ ತಂದು ನಿಲ್ಲಿಸಿದರು. ಆದರೆ ಇತಿಹಾಸದ ವಾಸ್ತವಗಳು ಈ ಕಥಾಕಥಿತ ಇತಿಹಾಸಕ್ಕೆ ತೀರಾ ಭಿನ್ನವಾದದ್ದು. ದೇಶದ ವಿಭಜನೆಯನ್ನು ಮಹಾತ್ಮಾ ಗಾಂಧೀಜಿ ಸಮ್ಮತಿಸಿದ್ದರೂ ಗಡಿನಾಡಿನ ಗಾಂಧಿ ಖಾನ್ ಗಫಾರ್ ಖಾನ್ ವಿರೋಧಿಸಿದ್ದರು. ಜವಾಹರಲಾಲ್ ನೆಹರು ಒಪ್ಪಿದ್ದರೂ ಅಬುಲ್ ಕಲಾಂ ಆಝಾದ್ ಖಂಡಿಸಿದ್ದರು. ಸ್ವಾತಂತ್ರ್ಯೋತ್ತರ ಅವಧಿಯಲ್ಲಿ ರಚನೆಯಾದ ಭ್ರಾಮಕ ಅಸತ್ಯಗಳನ್ನು ನೈಜ್ಯ ಇತಿಹಾಸ ನಿರಾಕರಿಸಿದೆ.
ವಿಷಾದಕರವೆಂದರೆ ನೈಜ್ಯ ಇತಿಹಾಸದ ಶೋಧವೇ ಈಗ ಸಂಕೀರ್ಣ ಅನಿಸುವಷ್ಟರ ಮಟ್ಟಿಗೆ ಅಸಂಬದ್ಧ ಇತಿಹಾಸ ಮುನ್ನಲೆಗೆ ಬಂದಿದೆ. ಹಾಗೂ ಮುಸ್ಲಿಮರು ಇತಿಹಾಸವನ್ನು ದಾಖಲಿಸಿಡಲು ತೋರಿದ ಅಲಕ್ಷ್ಯತೆಯೂ ಇದಕ್ಕೆ ಪ್ರಮುಖ ಕಾರಣ ಎನ್ನಬಹುದು.ಒಂದನೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಾನಾ ಸಾಹಿಬ್, ಝಾನ್ಸಿ ರಾಣಿ, ಕನ್ವರ್ ಸಿಂಗ್ ಮುಂತಾದವವರು ವೀರ ಸೇನಾನಿಗಳಾಗಿ ಗುರುತಿಸಲ್ಪಡುತ್ತಾರೆ. ಅದರೆ 1857ರಲ್ಲಿ ಬ್ರಿಟಿಷರ ವಿರುದ್ದದ ದಂಗೆಯಲ್ಲಿ ಪ್ರಧಾನ ಪಾತ್ರವಹಿಸಿದ್ದ ಫೈಝಾಬಾದ್‌ನ ಅಹ್ಮದುಲ್ಲಾ ಶರೀಫ್‌ರನ್ನು ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯಿಂದ ಹೊರಗಿಡಲಾಗಿದೆ. ಮೌಲವಿಯವರ ಸಾರಥ್ಯದ ಕ್ರಾಂತಿಕಾರಿ ಪಡೆಯೊಂದು ಬ್ರಿಟಿಷ್ ಆಧಿಪತ್ಯಕ್ಕೆ ಬೆದರಿಕೆಯಾಗಿ ನಿಂತಿತು. ತಮ್ಮ ಅಸ್ತಿತ್ವ ಅಸ್ತಿರಗೊಳ್ಳುವುದನ್ನು ಅರಿತ ಬ್ರಿಟಿಷರು ಮೌಲವಿಯವರನ್ನು ಬಂಧಿಸುವವರಿಗೆ 50.000 ಇನಾಮು ಘೋಷಿಸಿದರು. ಉದ್ದೇಶಪೂರ್ವಕವಾಗಿ ಮೌಲವಿಯವರ ಕ್ರಾಂತಿಕಾರಿ ಹೋರಾಟದ ಬಗ್ಗೆ ಸ್ವಾತಂತ್ರ್ಯ ಹೋರಾಟದ ಇತಿಹಾಸದಿಂದ ಕೈ ಬಿಟ್ಟದ್ದರ ಬಗ್ಗೆ ಶಾಂತಿಮನಿ ರಾಯ್ ವಿಷಾದ ವ್ಯಕ್ತಪಡಿಸುತ್ತಾರೆ. ಬ್ರಿಟಿಷ್ ಪ್ರಭುತ್ವದ ವಿರುದ್ದ ಪ್ರಥಮವಾಗಿ ಚಳುವಳಿಯ ಪರಿಕಲ್ಪನೆಯನ್ನು ಬಿತ್ತಿದ್ದೂ, ಬಹುಜನ ಒಕ್ಕೂಟ ಸಂಘಟಿಸಿದ್ದೂ ಮುಸ್ಲಿಮರಾಗಿದ್ದರು. ಕೇವಲ ಐರೋಪ್ಯರ ಭೌತಿಕ ದಾಳಿಯಷ್ಟೇ ಮುಸ್ಲಿಮರ ದೇಶೀಯ ಎಚ್ಚರಿಕೆಗೆ ಕಾರಣವಾಗಿರಲಿಲ್ಲ. ಹೊರತು ಅದು ಭವಿಷ್ಯದಲ್ಲಿ ಉಂಟುಮಾಡಲಿರುವ ಸೈದ್ದಾಂತಿಕ ಸಂಕೀರ್ಣತೆಯ, ಸಾಂಸ್ಕೃತಿಕ ಭಿನ್ನತೆಯ, ರಾಜಕೀಯ ಬಿರುಕುಗಳ ಬಗ್ಗೆಯೂ ಮುಸ್ಲಿಮರು ಪ್ರಾಜ್ಞರಾಗಿದ್ದರು. ಶತಮಾನಗಳಿಂದ ಸಾಮ್ರಾಜ್ಯ ಶಾಹಿತ್ವದ ದಬ್ಬಾಳಿಕೆ, ಆಕ್ರಮಣಗಳಿಗೆ ತುತ್ತಾಗಿದ್ದ ಮುಸ್ಲಿಮರು ಐರೋಪ್ಯರ ಕಾರ್ಯತಂತ್ರದ ಭವಿಷ್ಯತ್ತು ಚೆನ್ನಾಗಿಯೇ ಅರಿತಿದ್ದರು. ಶಿಲುಬೆ ಯುದ್ದ, ಮಾಂಗೋಲನ್ನರ ಆಕ್ರಮಣಗಳೆಲ್ಲಾ ಅರಬ್ ನಾಡಿನಲ್ಲಿ ತಂದಿಟ್ಟ ವಿಪತ್ತು, ಉಂಟಾದ ನಾಶನಷ್ಟ, ಸಾಂಸ್ಕೃತಿಕ ಅವನತಿಗಳೆಲ್ಲಾ ಮುಸ್ಲಿಮರನ್ನು ಐರೋಪ್ಯನ್ನರ ವಿರುದ್ದ ಸೆಟೆದು ನಿಲ್ಲುವಂತೆ ಮಾಡಿತು.
– ಮುಂದುವರಿಯುವುದು.