ತಲ್ಹಾ ಇಸ್ಮಾಯಿಲ್ ಕೆ.ಪಿ
ಟ್ರಸ್ಟಿ, ಸೆಂಟರ್ ಫಾರ್ ಎಜುಕೇಶನಲ್ ರಿಸರ್ಚ್ ಆ್ಯಂಡ್ ಅನಾಲಿಸೀಸ್

ಮುಖ್ಯಮಂತ್ರಿ ಸಿದ್ದರಾಮಯ್ಯ 1994ರಿಂದ ಬಹಳಷ್ಟು ಬಜೆಟ್‍ಗಳನ್ನು ಮಂಡಿಸಿರುವ ಕಾರಣ ರಾಜ್ಯದ ನಾಡಿಮಿಡಿತ ಅರಿತ ಓರ್ವ ಅನುಭವಿ ರಾಜಕಾಣಿ ಎಂದು ಗುರುತಿಸಲ್ಪಟ್ಟಿರುವುದರಿಂದಾಗಿ ಬಜೆಟ್ ಮಂಡೆನೆಗೆ ಮುಂಚಿತವಾಗಿಯೇ ಅದೊಂದು ಉತ್ತಮ ಬಜೆಟ್, ಅಹಿಂದ ಬಜೆಟ್ ಎಂದೆಲ್ಲಾ ಹೇಳುವಾಗ ಅದರ ಬಗ್ಗೆ ರಚನಾತ್ಮಕ ವಿಮರ್ಶೆಗೆ ಅವಕಾಶವನ್ನು ಹುಡುಕುವುದು ಸುಲಭವಲ್ಲ. ಕಳೆದ ಸಾಲಿನ(2017) ಬಜೆಟ್ ಗಾತ್ರವು 186561 ಕೋಟಿ ಇತ್ತು. ಈ ಸಾಲಿನ(2018) ಬಜೆಟ್ ಸುಮಾರು 209181 ಕೋಟಿ. ಅಂದರೆ, ಬಜೆಟ್ ಗಾತ್ರದಲ್ಲಿ ಸುಮಾರು 22620 ಕೋಟಿ ಹೆಚ್ಚಳವಾಗಿದೆ. ಇದರಿಂದ ಸರಕಾರದ ಬೊಕ್ಕಸಕ್ಕೆ ಹೊರೆ ಹೆಚ್ಚಾಗಿದೆ ಎಂಬುವುದರಲ್ಲಿ ಸಂಶಯವಿಲ್ಲ.

ಬಜೆಟ್ ಎನ್ನುವಾಗ ರಾಜ್ಯದಲ್ಲಿ ನೀರಿನ ಸಮಸ್ಯೆ, ರೈತರ ಸಾಲ ಮನ್ನಾ, ಮಹಿಳಾ ಸಬಲೀಕರಣ ಹೀಗೆ ಹತ್ತು ಹಲವು ವಿಷಯಗಳು ಪ್ರಮುಖ ಚರ್ಚೆಯಲ್ಲಿರುವಾಗ ಶಿಕ್ಷಣ ಹಾಗೂ ಉದ್ಯೋಗ ಸೃಷ್ಟಿಯ ಕುರಿತ ಆಲೋಚನೆಗಳು ಕುಗ್ಗಿರುವಂತೆ ಕಾಣುತ್ತದೆ. ಸುಮಾರು 12%ದಷ್ಟು, ಅಂದರೆ 26864 ಒಟ್ಟು ಮೊತ್ತ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ 22.350 ಕೋಟಿ, ಉನ್ನತ ಶಿಕ್ಷಣಕ್ಕೆ 4514 ಕೋಟಿ, ವೈದ್ಯಕೀಯ ಶಿಕ್ಷಣಕ್ಕೆ 2177 ಕೋಟಿ ಬಜೆಟ್ ಗಾತ್ರ. ಅಂದರೆ ಈ ಸಾರಿ 4370 ಕೋಟಿ ಹೆಚ್ಚಳವಾಗಿದೆ. ದಿಲ್ಲಿ ಸರಕಾರವನ್ನು ಬಿಟ್ಟು ದೇಶದ ಇತರ ರಾಜ್ಯಗಳಿಗಿಂತ ಉತ್ತಮ ಶಿಕ್ಷಣ ಬಜೆಟ್ ಎಂದು ಬಿಂಬಿಸಲು ಸುಲಭವಾಗುತ್ತದೆ. ಕಳೆದ ಬಜೆಟುಗಳಿಂದ ಮಕ್ಕಳ ಶಿಕ್ಷಣ ಹಕ್ಕಿನಡಿ ಐದು ಲಕ್ಷಕ್ಕೂ ಅಧಿಕ ಮಕ್ಕಳಿಗೆ ಖಾಸಗಿ ಶಾಲೆಗೆ ದಾಖಲಾತಿ ನೀಡಲೆಂದೇ ಸರಕಾರವು ಸಾವಿರಾರು ಕೋಟಿ ಖರ್ಚು ಮಾಡಿದೆ. ಇದರಿಂದಾಗಿ ಸಾವಿರಾರು ಸರಕಾರಿ ಶಾಲೆಗಳು ಮುಚ್ಚಿ ಹೋಗಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಹಾಗಾದರೆ ಇದನ್ನು ನಾವು ಸಾಧನೆ ಎಂದು ಕರೆಯಬೇಕೋ? ಅಥವಾ ಸರಕಾರದ ವೈಫಲ್ಯವೆಂದು ಕರೆಯಬೇಕೋ? ಎಂದು ಅರ್ಥವಾಗುತ್ತಿಲ್ಲ.

ಅದೇನೇ ಇರಲಿ, ಸರಕಾರವು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ಸುಮಾರು 22350 ಕೋಟಿ ನಿಗದಿ ಪಡಿಸಿದೆ. ಆದರೆ, ದೊಡ್ಡ ಮೊತ್ತವು ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ(ವೇತನ), ಅಕ್ಷರ ದಾಸೋಹ, ಕೊಠಡಿ ನಿರ್ಮಾಣ, ಸೈಕಲ್, ಕ್ಷೀರ ಭಾಗ್ಯ ಎಂಬೆಲ್ಲಾ ವಿಷಯಗಳಿಗೆ ಖರ್ಚಾಗುವಾಗ ಹೊಸ ಯೋಜನೆಗಳಿಗೆ ಅದರಲ್ಲಿ ದೊಡ್ಡ ಪಾಲು ಸಿಗಲು ಸಾಧ್ಯವಿಲ್ಲ.
2018-19ನೇ ಸಾಲಿನಲ್ಲಿ ನೂರು ಸಂಯೋಜಿತ ಕರ್ನಾಟಕ ಪಬ್ಲಿಕ್ ಶಾಲೆ ಒಂದಕ್ಕೆ ತಲಾ ಐದು ಲಕ್ಷದಂತೆ ಐದು ಕೋಟಿ ವೆಚ್ಚದಲ್ಲಿ ಪ್ರಾರಂಭಿಸಲಾಗುವುದು ಎಂಬುವುದು ಒಂದು ಒಳ್ಳೆಯ ಹೆಜ್ಜೆ. ಆದರೆ, ಸುರಕ್ಷಿತೆಗಾಗಿ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಸಿಸಿ ಕ್ಯಾಮರಾವನ್ನು ಅಳವಡಿಸುವುದು ಎನ್ನುವಾಗ, ಸರಕಾರವು ಸಿಸಿ ಕ್ಯಾಮರಾವನ್ನು ಅಳವಡಿಸುವ ಮುಖಾಂತರ ಮಕ್ಕಳ ಸುರಕ್ಷತೆಯ ಎಲ್ಲಾ ಜವಾಬ್ದಾರಿಕೆಗಳಿಂದ ನುಣುಚಿಕೊಳ್ಳುತ್ತಿದೆಯೇ ಎಂಬ ಪ್ರಶ್ನೆಯು ಹೆತ್ತವರನ್ನು ಕಾಡಬಹುದು? ಅಂದರೆ, ಸಿಸಿ ಕ್ಯಾಮರಾವನ್ನು ಹೊರತುಪಡಿಸಿ ಮಕ್ಕಳ ಸುರಕ್ಷತೆಗಾಗಿ ಬೇರೆ ಯಾವ ಯೋಚನೆಯೂ ಸರಕಾರಕ್ಕೆ ಇಲ್ಲವೆ?
ಹತ್ತು ಲಕ್ಷ ವಿದ್ಯಾರ್ಥಿಗಳಿಗೆ ಡಿಜಿಟಲ್ ಗ್ರಂಥಾಲಯವನ್ನು ಒದಗಿಸುವುದು. ಈ ಉದ್ದೇಶಕ್ಕಾಗಿ ಸುಮಾರು ಐದು ಕೋಟಿ ವ್ಯಯಿಸಲಿರುವುದು ಒಂದು ಉತ್ತಮ ಯೋಜನೆ. ಹಾಗೆಯೇ ರಾಜ್ಯದಲ್ಲಿ ನೂರು ವರ್ಷ ಪೂರೈಸಿದ ಶಾಲೆಗೆ ಪಾರಂಪರಿಕ ಶಾಲೆ, ಅತ್ಯುತ್ತಮ ಎಸ್.ಡಿ.ಎಮ್.ಸಿ ಪ್ರಶಸ್ತಿ, ಸರಕಾರಿ ಶಾಲೆಯ ಗುಣಮಟ್ಟವನ್ನು ವೃದ್ಧಿಸಬಹುದು ಎಂಬುವುದರಲ್ಲಿ ಸಂಶಯವಿಲ್ಲ.

ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಎಲ್ಲಾ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ಸಮಿತಿಯನ್ನು ರಚಿಸುವುದು ಹಾಗು ಸಂಚಾರಿ ವಿಜ್ಞಾನ ಪ್ರಯೋಗಾಲಯ ಒಂದು ಒಳ್ಳೆಯ ಯೋಜನೆ. ಆದರೆ, ಹಲವಾರು ಶಾಲಾ-ಕಾಲೇಜುಗಳಲ್ಲಿ ಖಾಯಂ ವಿಜ್ಞಾನ ಪ್ರಯೋಗಾಲಯಗಳು ಇಲ್ಲದಿರುವಾಗ ಅದಕ್ಕೆ ಹೆಚ್ಚು ಒತ್ತು ಕೊಡಬಹುದಿತ್ತು. ಸರಕಾರವು ಆರ್.ಟಿ.ಇ ಪ್ರತಿ ಸೀಟಿಗೆ ತಲಾ 16000ದಷ್ಟು ನಿಗದಿ ಪಡಿಸಿರುವಾಗ ರಾಜ್ಯದ ಹಲವಾರು ಖಾಸಗಿ ಶಾಲೆಗಳು ನಮಗೆ ಆ ಹಣ ಸಮಯಕ್ಕೆ ಸರಿಯಾಗಿ ದೊರೆಯುತ್ತಿಲ್ಲ ಎಂದು ದೂರುತ್ತಿರುವಾಗ ಸರಕಾರವು ಬಿಡುಗಡೆ ಮಾಡುತ್ತಿರುವಂತಹ ಹಣವು ಫಲಾನುಭವಿಗಳಿಗೆ ದೊರಕುತ್ತಿದೆಯೇ ಎಂಬುವುದನ್ನು ನಿಗಾ ಇಡಬೇಕಾಗಿದೆ.
ಸರಕಾರವು ಕಳೆದ ಬಜೆಟಿನಲ್ಲಿ ಘೋಷಿಸಿದ್ದ 28 ಹೊಸ ಪಾಲಿಟೆಕ್ನಿಕ್ ಕಾಲೇಜುಗಳನ್ನು ಪ್ರಾರಂಭಿಸಿದೆ.

ಬೇರೆ-ಬೇರೆ ಉತ್ತಮ ಯೋಜನೆಗಳು ಸರಕಾರವು ಜಾರಿಗೆ ತಂದಿರುವಾಗ, ಈ ವರ್ಷದ ಬಜೆಟಿನಲ್ಲಿ ಉನ್ನತ ಶಿಕ್ಷಣಕ್ಕೆ ಇನ್ನೂ ಹೆಚ್ಚು ಆದ್ಯತೆಯನ್ನು ನೀಡಬಹುದಾಗಿತ್ತು. ಸರಕಾರವು ಕುವೆಂಪು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರವನ್ನು ಚಿಕ್ಕಮಗಳೂರು ಹಾಗು ಜಮಖಂಡಿಯಲ್ಲಿ ಪ್ರಾರಂಭಿಸುವುದು, 19.60 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಿರುವುದು ನಿಜಕ್ಕೂ ಪ್ರಶಂಸನೀಯ. ಆದರೆ, ವಿದ್ಯಾರ್ಥಿಗಳ ಆದ್ಯತೆಯಾಗಿರುವ ಡ್ರಗ್ಸ್ ಮುಕ್ತ ಕ್ಯಾಂಪಸ್, ರ಼್ಯಾಗಿಂಗ್ ಮುಕ್ತ ಕ್ಯಾಂಪಸ್‍ಗಳಿಗಾಗಿ ಸರಕಾರವು ಏನಾದರೂ ಯೋಜನೆಯನ್ನು ತರಬೇಕಿತ್ತು. ಈ ವಿಚಾರದಲ್ಲಿ ವಿದ್ಯಾರ್ಥಿಗಳೇ ಬಲಿಪಶುಗಳಾಗಿ ಜೈಲು ಸೇರುವುದು ಮತ್ತು ಅವರ ಶೈಕ್ಷಣಿಕ ಭವಿಷ್ಯವು ಅಂತ್ಯಗೊಳ್ಳುತ್ತಿರುವುದು ಖೇದನೀಯ ಸಂಗತಿ. ಆಧುನೀಕರಣದತ್ತ ಹೆಚ್ಚು ಒಲವು ನೀಡುತ್ತಿರುವಂತಹ ಸರಕಾರವು ಕಡೇಯ ಪಕ್ಷ ಲ್ಯಾಪ್‍ಟಾಪ್ ಭಾಗ್ಯವನ್ನು ಸಮಾಜಶಾಸ್ತ್ರ ವಿಭಾಗ ಮತ್ತು ಇತರ ವಿಭಾಗದ ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕಿತ್ತು. ಉನ್ನತ ಶಿಕ್ಷಣವನ್ನು ಗಳಿಸಿದಂತಹ ವಿದ್ಯಾರ್ಥಿಗಳು ಉದ್ಯೋಗದ ಬಗ್ಗೆ ಹೆಚ್ಚು ಹಪಾಹಪಿಸುತ್ತಿರುವಾಗ, ಅದರ ಬಗ್ಗೆ ರಚನಾತ್ಮಕ ರೂಪದಲ್ಲಿ ಮಾತನಾಡದ ಈ ಸಿದ್ದು ಬಜೆಟ್, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕ್ಯಾಂಪಸ್ ಗಳಿಂದ ತೇರ್ಗಡೆ ಹೊಂದುವ ವಿದ್ಯಾರ್ಥಿಗಳಿಗೆ ಮತ್ತು ಯುವಜನತೆಗೆ ನಿರಾಶೆಯನ್ನು ಉಂಟು ಮಾಡಿರಬಹುದು.
ಇಂದು ಶಿಕ್ಷಣ ಗಳಿಕೆಯು ವ್ಯಾಪಾರೀಕರಣದತ್ತ ವಾಲುತ್ತಿದೆ. ಎಂ.ಬಿ.ಬಿ.ಎಸ್ ಡಾಕ್ಟರ್ ಆಗುವುದು ಸಾಧಾರಣ ಅಂಕಗಳನ್ನು ಗಳಿಸುವ ಬಡ ವಿದ್ಯಾರ್ಥಿಗಳಿಗೆ ಒಂದು ಶಾಪವಾಗಿ ಪರಿಣಮಿಸುವಾಗ, ಸಿದ್ದು ಸರಕಾರವು ಆ ವಿದ್ಯಾರ್ಥಿಗಳು ಎಂ.ಬಿ.ಬಿ.ಎಸ್ ಡಾಕ್ಟರ್ ಆಗುವುದು ಬೇಡವೆಂದು ನಿರ್ಧರಿಸಿರುವಂತೆ ತೋರುತ್ತಿದೆ. ಆದ್ದರಿಂದಾಗಿ ಸರಕಾರವು, ಜಿಲ್ಲೆಗೆ ಒಂದು ಸರಕಾರಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆಯ ಬಗ್ಗೆ ಹೆಚ್ಚು ಗಮನ ಕೊಡಬೇಕಾಗಿದೆ.

ಏನೇ ಇದ್ದರೂ ಜನಾಭಿಪ್ರಾಯಗಳ ಪ್ರಕಾರ ಇದೊಂದು ಉತ್ತಮ ಬಜೆಟ್. ಎಲ್ಲಾ ಸಮಾಜದ ಎಲ್ಲಾ ವರ್ಗಗಳ ಓಲೈಕೆ ಮಾಡಲಾಗಿದೆ ಎಂದು ಬಿಂಬಿಸಲಾಗುತ್ತಿದೆ. ಸಾಮಾನ್ಯವಾಗಿ, ವಿರೋಧ ಪಕ್ಷವು ಇದು ಅಹಿಂದ ಬಜೆಟ್ ಎನ್ನುವಾಗ ವಿರೋಧ ಪಕ್ಷಗಳು ಅಹಿಂದ ಸಮುದಾಯಕ್ಕೆ ಏನನ್ನೂ ನೀಡಬಾರದೆಂದು ತೀರ್ಮಾನ ಮಾಡಿದೆಯೇ? ಅಲ್ಪ ಸಂಖ್ಯಾತ ಓಲೈಕೆಯ ಬಜೆಟ್ ಎನ್ನುವಾಗ, ಅಲ್ಪಸಂಖ್ಯಾತ ಸಮುದಾಯವಾದ ಸಿಖ್ ಸಮುದಾಯಕ್ಕೆ 80 ಕೋಟಿ ಹಾಗೂ ಕ್ರೈಸ್ತ ಸಮುದಾಯಕ್ಕೆ 200 ಕೋಟಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಮತ್ತು ವಿರೋಧ ಪಕ್ಷಗಳ ಟೀಕೆಗೆ ಹೆದರಿ ಅಲ್ಪಸಂಖ್ಯಾತರ ಪೈಕಿ ಅತೀ ಹಿಂದುಳಿದಿರುವ ಮುಸ್ಲಿಮ್ ಸಮುದಾಯದ ಮದ್ರಸಗಳ ಆಧುನೀಕರಣಕ್ಕೆ ಕೇವಲ 15 ಕೋಟಿ ಮಾತ್ರ ಬಿಡುಗಡೆ ಮಾಡಿದೆ. ಸರಕಾರವು ಮುಸ್ಲಿಮ್ ಸಮುದಾಯಕ್ಕೆ ಯಾವುದೇ ವಿಶೇಷ ಅನುದಾನವನ್ನು ಘೋಷಿಸದಿರಲು ಕಾರಣವೇನು? ಎಂಬ ಪ್ರಶ್ನೆಯು ಮುಸ್ಲಿಮ್ ಸಮುದಾಯವನ್ನು ಕಾಡದಿರದು.

 

LEAVE A REPLY

Please enter your comment!
Please enter your name here