ಸಂಪಾದಕೀಯ: ಸಂಪಾದಕರು “ಇಂಕ್ ಡಬ್ಬಿ” ಆನ್ಲೈನ್ ಮಾದ್ಯಮ
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ಥಾಪಿಸಲಾಗಿದ್ದ ಹೊಸ 10 ವಿಶ್ವವಿದ್ಯಾಲಯಗಳ ಪೈಕಿ 9 ವಿಶ್ವವಿದ್ಯಾಲಯವನ್ನು ಮುಚ್ಚುವ ಬಗ್ಗೆ ಸರ್ಕಾರದ ಸಚಿವ ಸಂಪುಟದ ಉಪ ಸಮಿತಿಯು ನಿರ್ಧರಿಸಿದೆ ಎಂಬ ವರದಿ ಸುದ್ದಿಯಲ್ಲಿದೆ, ಬಂದ್ ಆಗಲಿರುವ 9 ವಿಶ್ವವಿದ್ಯಾಲಯಗಳ ಪೈಕಿ ಜಮಖಂಡಿಯಲ್ಲಿರುವ ಬಾಗಲಕೋಟೆ ವಿಶ್ವವಿದ್ಯಾಲಯವು ಸಹ ಒಂದಾಗಿದ್ದು, ಸುಮಾರು 73 ಸಂಯೋಜಿತ ಕಾಲೇಜುಗಳನ್ನು ಹೊಂದಿರುವ ಮತ್ತು ಅಂದಾಜು 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ವಿಶ್ವವಿದ್ಯಾಲಯದ ಕಾಲೇಜುಗಳ ಅಡಿಯಲ್ಲಿ ಅಧ್ಯಯನ ಮಾಡುತ್ತಿದ್ದು, ಸರ್ಕಾರದ ಈ ನಿರ್ಧಾರದಿಂದ ಶೈಕ್ಷಣಿಕವಾಗಿ ಉತ್ತಮ ಸಾಧನೆ ತೋರುತ್ತಿರುವ ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ತಡೆಯಾಗಲಿದೆ ಮತ್ತು ಉನ್ನತ ಶಿಕ್ಷಣವು ಪ್ರತಿಯೊಬ್ಬರಿಗೂ ಲಭಿಸಬೇಕು ಎನ್ನುವ ಆಶಯಕ್ಕೆ ವಿರುದ್ಧವಾಗಿದೆ ಎಂಬ ಕೂಗು ಕೇಳಿ ಬರುತ್ತಿದೆ.
ವಿದ್ಯಾರ್ಥಿಗಳ ಹಾಜರಾತಿ, ಮೂಲಸೌಕರ್ಯ ಹಾಗೂ ಸಂಪನ್ಮೂಲ ಕೊರತೆಯ ನೆಪ ಹೇಳಿ ರಾಜ್ಯದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟವು ಉನ್ನತ ಶಿಕ್ಷಣ ಪರಿಷತ್ ನೀಡಿದ ವರದಿಯನ್ನು ಮುಂದಿಟ್ಟುಕೊಂಡು ಈ ನಿರ್ಣಯ ಕೈಗೊಂಡಿದೆ ಎಂದು ತಿಳಿಸಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭವಾದ ರಾಜ್ಯದ 10 ಹೊಸ ವಿಶ್ವವಿದ್ಯಾಲಯಗಳಿಗೆ ಕಳೆದ ಸರ್ಕಾರ ಕೇವಲ 2 ಕೋಟಿ ನೀಡಿತ್ತು, ಇದರೊಂದಿಗೆ ವಿವಿಗೆ ಬೇಕಾದ ಸ್ಥಳ ನಿಗದಿ ಮಾಡದೆ ಬೇರ್ಪಟ್ಟ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳಲ್ಲಿಯೇ ನೂತನ ವಿವಿಗೆ ಚಾಲನೆ ನೀಡಲಾಗಿತ್ತು , ಇದೀಗ ವಿವಿಯ ಗುಣಮಟ್ಟತೆಯನ್ನು ಮತ್ತು ಅಗತ್ಯತೆಯನ್ನು ಮುಂದಿರಿಸಿ ವಿವಿಗಳನ್ನು ಸ್ಥಗಿತಗೊಳಿಸುವ ಚಿಂತನೆಯಲ್ಲಿದ್ದು, ಈ ಪೈಕಿ ಜಮಖಂಡಿ ನಗರದಲ್ಲಿರುವ ಬಾಗಕೋಟೆ ವಿಶ್ವವಿದ್ಯಾಲಯವೂ ಸೇರಿರುವುದು ಉನ್ನತ ಶಿಕ್ಷಣದ ಕನಸು ಕಾಣುತ್ತಿರುವ ಈ ಭಾಗದ ಸಾವಿರಾರು ವಿದ್ಯಾರ್ಥಿಗಳಲ್ಲಿ ಆತಂಕ ಮನೆ ಮಾಡಿದೆ.
ಜಮಖಂಡಿ ನಗರದಲ್ಲಿ ಆರಂಭವಾದ ಬಾಗಲಕೋಟೆ ವಿಶ್ವವಿದ್ಯಾಲಯದ 2023-24ರ ಪ್ರಥಮ ಸಾಲಿನಲ್ಲಿ ಅಂದಾಜು 15 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರೆ, 2024-25ನೇ ಸಾಲಿನಲ್ಲಿಯೂ ಸಹ ಸುಮಾರು 15 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಒಟ್ಟಾರೆ 30 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ನೂತನ ಬಾಗಲಕೋಟೆ ವಿಶ್ವವಿದ್ಯಾಲಯಲ್ಲಿ ಉನ್ನತ ಶಿಕ್ಷಣ ಅಧ್ಯಯನ ಮಾಡುತ್ತಿದ್ದಾರೆ. ಮುಂಬರುವ ಶೈಕ್ಷಣಿಕ ವರ್ಷದಲ್ಲಿ 15 ಸಾವಿರ ವಿದ್ಯಾರ್ಥಿಗಳು ದಾಖಲಾತಿ ಪಡೆಯುವ ಸಂಭವವಿದ್ದು, ಸರ್ಕಾರ ಒಂದು ವೇಳೆ ಬಾಗಲಕೋಟೆ ವಿವಿಯನ್ನು ಬಂದ್ ಮಾಡಿದರೆ ಒಟ್ಟಾರೆ 45 ಸಾವಿರ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕಲಿಕೆ ಅತಂತ್ರವಾಗುವ ಆತಂಕವಿದೆ.
2023-24ನೇ ಸಾಲಿನಲ್ಲಿ ಬಾಗಲಕೋಟೆ ಜಿಲ್ಲೆಯ ವ್ಯಾಪ್ತಿಗೆ ಬರುವ ಮಹಾವಿದ್ಯಾಲಯಗಳು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಇದರಿಂದ ವಿಭಜಿಸಿ ಜಮಖಂಡಿ ನಗರದಲ್ಲಿ ಬಾಗಲಕೋಟೆ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು.
ರಾಣಿ ಚನ್ನಮ್ಮ ವಿವಿಯಿಂದ ವಿಭಜನೆಗೊಂಡು ಪ್ರಾದೇಶಿಕ ಅಧಿಕಾರ ವ್ಯಾಪ್ತಿ, ಕಾರ್ಯಭಾರದ ಆಧಾರದ ಮೇಲೆ ಬೋಧಕ-ಬೋಧಕೇತರ ಸಿಬ್ಬಂದಿ, ಸ್ನಾತಕೋತ್ತರ ಕೇಂದ್ರ, ಸಂಯೋಜಿತ ಕಾಲೇಜುಗಳು ಹಂಚಿಕೆ ಆಗಿವೆ ಎಂದು ಮೂಲಗಳು ತಿಳಿಸಿವೆ.
ಜಿಲ್ಲೆಯ ವ್ಯಾಪ್ತಿಗೆ ಬರುವ ಮಹಾವಿದ್ಯಾಲಯಗಳಲ್ಲಿ 22 ಸ್ನಾತಕ ಮತ್ತು 13 ಸ್ನಾತಕೋತ್ತರ ವಿಭಾಗಗಳು ಕಾರ್ಯನಿರ್ವಹಿಸುತ್ತಿದ್ದು, ಬೀದರ್ ವಿಶ್ವವಿದ್ಯಾಲಯಕ್ಕಿಂತ ಅಧಿಕ ವಿದ್ಯಾರ್ಥಿಗಳನ್ನು ಹೊಂದಿರುವ ವಿವಿಯ ಬಗ್ಗೆ ಮರುಚಿಂತನೆ ನಡೆಸಬೇಕು ಎಂಬ ಆಗ್ರಹವಿದೆ.
ಪ್ರಸ್ತುತ 3 ಜನ ಕಾಯಂ ಉಪನ್ಯಾಸಕರು, 15 ಜನ ಕಾಯಂ ಸಿಬ್ಬಂದಿ, 18 ಜನ ಅತಿಥಿ ಉಪನ್ಯಾಸಕರು, 18 ಜನ ಗುತ್ತಿಗೆ ನೌಕರರು, 450 ಪಿಜಿ ವಿದ್ಯಾರ್ಥಿಗಳಿದ್ದಾರೆ ಎಂದು ಅನೇಕ ಸುದ್ದಿಗಳಲ್ಲಿ ವರದಿಯಾಗಿದೆ.
ಕೇವಲ 2 ವರ್ಷಗಳ ಅವಧಿಯಲ್ಲಿ ಬಾಗಲಕೋಟೆ ವಿವಿಯು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದು, ವರ್ಷಕ್ಕೆ 7 ಕೋಟಿ ಆಂತರಿಕ ಆದಾಯ ಹೊಂದಿದೆ, ಸರ್ಕಾರ ಕೂಲಂಕಷವಾಗಿ ಪರಿಶೀಲಿಸಿ ವಿವಿಯನ್ನು ಸದೃಢಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ವಾದ, ಇದರೊಂದಿಗೆ ವಿಜಯಪುರದ ಕಾಲೇಜುಗಳನ್ನು ಬಾಗಲಕೋಟೆ ವಿವಿಯೊಂದಿಗೆ ಸಂಯೋಜಿಸಿದರೆ ಸುಮಾರು 220 ಕಾಲೇಜುಗಳನ್ನು ಹೊಂದಿದಂತಾಗುತ್ತದೆ, ಮುಂಬರುವ ದಿನಗಳಲ್ಲಿ ಬಾಗಲಕೋಟೆ ವಿವಿಯು ರಾಜ್ಯದ ಉತ್ತಮ ವಿಶ್ವವಿದ್ಯಾಲಯಗಳ ಪಟ್ಟಿಗೆ ಸೇರುವುದರಲ್ಲಿ ಅನುಮಾನವೇ ಇಲ್ಲ ಎಂದು ಶಿಕ್ಷಣ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ, ವಿಜಯಪುರ ಜಿಲ್ಲೆಯ ಕಾಲೇಜುಗಳು ಬೆಳಗಾವಿಯ ರಾಣಿ ಚನ್ನಮ್ಮ ವಿವಿಯ ವ್ಯಾಪ್ತಿಗೆ ಒಳಪಡುತ್ತಿದ್ದು, ಅದನ್ನು ಬಾಗಲಕೋಟೆ ವಿವಿಯೊಂದಿಗೆ ಸಂಯೋಜಿಸಿದರೆ, ಹೆಚ್ಚು ಅನುಕೂಲವಾಗಲಿದೆ ಎನ್ನುವುದು ಜಿಲ್ಲೆಯ ಶಿಕ್ಷಣ ಪ್ರೇಮಿಗಳ ಅಭಿಪ್ರಾಯವಾಗಿದೆ.
ಒಟ್ಟಾರೆಯಾಗಿ ಭಾರತದಲ್ಲಿ ಉನ್ನತ ಶಿಕ್ಷಣಕ್ಕಾಗಿ ಅಖಿಲ ಭಾರತ ಸಮೀಕ್ಷೆ (AISHE) ವರದಿಯ ಪ್ರಕಾರ ಉನ್ನತ ಶಿಕ್ಷಣದ ಒಟ್ಟು ದಾಖಲಾತಿ ಅನುಪಾತವು ಕೇವಲ 28% ಪ್ರತಿಶತವಿದ್ದು, ಕರ್ನಾಟಕದಲ್ಲಿ ಇದರ ಪ್ರಮಾಣ 36% ರಷ್ಟಿದೆ, 100 ರಲ್ಲಿ ಕೇವಲ 36 ಯುವಜನತೆ ಮಾತ್ರ ಉನ್ನತ ಶಿಕ್ಷಣದಲ್ಲಿ ಅಧ್ಯಯನ ಮಾಡುತ್ತಿದ್ದಾರೆ, ಕೇಂದ್ರ ಸರ್ಕಾರವು ಹೊಸ ಶಿಕ್ಷಣ ನೀತಿಯಲ್ಲಿ 2035 ಕ್ಕೆ 50% ದಷ್ಟು ದಾಖಲಾತಿ ಪ್ರಮಾಣವನ್ನು ಹೆಚ್ಚಿಸುವ ಗುರಿ ಹೊಂದಿದೆ, ಆದರೆ ಇತರೆ ದೇಶಗಳಲ್ಲಿ ಉನ್ನತ ಶಿಕ್ಷಣದ ದಾಖಲಾತಿಯಲ್ಲಿ 80% ರಷ್ಟಿದ್ದು, ಉನ್ನತ ಶಿಕ್ಷಣದಲ್ಲಿ ನಾವು ಸಾಧಿಸಬೇಕಾದದ್ದು ಬಹಳಷ್ಟಿದೆ ಎಂಬುದು ಅರಿವಿಗೆ ಬರುತ್ತದೆ.
ಕೇಂದ್ರ ಸರ್ಕಾರದ ಒಟ್ಟು ಬಜೆಟ್ ನ ಗಾತ್ರವು ಸುಮಾರು 50 ಲಕ್ಷ ಕೋಟಿ ರೂಪಾಯಿಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ ಮೀಸಲಿಡುವುದು ಮಾತ್ರ 50 ಸಾವಿರ ಕೋಟಿ ಅಂದರೆ ಒಟ್ಟು ಬಜೆಟ್ ನ ಕೇವಲ 1% ಮಾತ್ರ ವಿನಿಯೋಗಿಸಲಾಗುತ್ತಿದೆ, ಇದರೊಂದಿಗೆ ದೇಶದ ಸಾರ್ವಜನಿಕ ರಾಜ್ಯ ವಿಶ್ವವಿದ್ಯಾಲಯಗಳಿಗೆ ಅನುದಾನ ನೀಡುವ ಯು.ಜಿ.ಸಿ ಗೆ 3 ಸಾವಿರ ಕೋಟಿ ಯಷ್ಟು ಅನುದಾನ ನೀಡುತ್ತಿದೆ, ದೇಶದಲ್ಲಿರುವ ಸಾವಿರಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿಗೆ ಯು.ಜಿ.ಸಿ ಸೂಕ್ತ ಹಣಕಾಸು ನೆರವು ಒದಗಿಸಲು ಸಾಧ್ಯವಾಗುತ್ತಿಲ್ಲ, ಕೊಠಾರಿ ಆಯೋಗವು ಉನ್ನತ ಶಿಕ್ಷಣಕ್ಕೆ ನೀಡಬೇಕಾದ ಅನುದಾನದ ಕುರಿತು ದೇಶದ ಮೊದಲ ಶಿಕ್ಷಣ ನೀತಿಯಿಂದ ಇದುವರೆಗಿನ ಎಲ್ಲ ನೀತಿಗಳು GDP ಯ 6% ದಷ್ಟು ಮೀಸಲಿಡಬೇಕು ಎಂದು ಹೇಳುತ್ತದೆ, ಆದರೆ ಯಾವುದೇ ಸರ್ಕಾರವು ಈ ಶಿಫಾರಸನ್ನು ಇದುವರೆಗೂ ಜಾರಿಗೆ ತಂದಿಲ್ಲ ಎನ್ನುವುದು ದುರಂತ.
ಇನ್ನೂ ಕರ್ನಾಟಕಕ್ಕೆ ಬಂದರೆ ಸರಿಸುಮಾರು 3.5 ಲಕ್ಷ ಕೋಟಿಕ್ಕಿಂತಲೂ ಅಧಿಕ ಗಾತ್ರದ ಬಜೆಟ್ ನಲ್ಲಿ ಕೇವಲ 2% ದಷ್ಟು ಮಾತ್ರ ಅನುದಾನವನ್ನು ರಾಜ್ಯದ ಸಾರ್ವಜನಿಕ ವಿಶ್ವವಿದ್ಯಾಲಯಗಳಿಗೆ ನೀಡಲಾಗುತ್ತಿದೆ, ಸರ್ಕಾರ ನೀಡುವ ಕಡಿಮೆ ಅನುದಾನದಿಂದ ವಿಶ್ವವಿದ್ಯಾಲಯವನ್ನು ಸಮರ್ಪಕವಾಗಿ ನಡೆಸಲಾಗುತ್ತಿಲ್ಲ, ಸಿಬ್ಬಂದಿಯ ಸಂಬಳಕ್ಕೆ ಮತ್ತು ವಿವಿಯ ಕಾರ್ಯಕ್ರಮಗಳಿಗೆ ಮಾತ್ರ ಹಣಕಾಸು ನೆರವಾಗುತ್ತಿದೆ ಹೊರತು ವಿವಿಯಲ್ಲಿ ನಡೆಯಬೇಕಾದ ಶೈಕ್ಷಣಿಕ ಮತ್ತು ಸಂಶೋಧನಾ ಕೆಲಸಗಳಿಗೆ ಪೂರಕ ಅನುದಾನ ಸಿಗುತ್ತಿಲ್ಲ ಎಂಬುದು ವಿವಿಗಳ ಆರೋಪವಿದೆ.
ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದಕ್ಕಿಂತ ಇರುವ ವಿವಿಗಳನ್ನು ಜೀವಂತವಾಗಿಡಲು ಸಾಧ್ಯವಾಗುತ್ತಿಲ್ಲ ಎಂಬುದು ಒಂದು ಕಡೆಯಾದರೆ, ಇನ್ನೊಂದೆಡೆ ಅಗತ್ಯವಿರುವ ಕಡೆಯಲ್ಲಿ ಆರಂಭಿಸಿರುವ ವಿವಿಗಳನ್ನು ಆರ್ಥಿಕ ಸಂಕಷ್ಟವನ್ನು ಮುಂದಿಟ್ಟುಕೊಂಡು ಮುಚ್ಚುವುದು, ಈ ಎರಡು ಪ್ರಕ್ರಿಯೆಗಳು ಸಹ ಸಾರ್ವಜನಿಕ ಉನ್ನತ ಶಿಕ್ಷಣದ ಭವಿಷ್ಯಕ್ಕೆ ಸೂಕ್ತವಾದುದಲ್ಲ. ಇವೆಲ್ಲವನ್ನೂ ಗಮನಿಸಿದಾಗ ಸರ್ಕಾರಗಳು ಶಿಕ್ಷಣವನ್ನು ತಮ್ಮ ಆದ್ಯತೆಯ ಕ್ಷೇತ್ರವೆಂದು ಪರಿಗಣಿಸಿಲ್ಲ ಎಂಬುದು ಗಮನಾರ್ಹ ಸಂಗತಿ.