ಮಹಮ್ಮದ್ ಶರೀಫ್ ಕಾಡುಮಠ

ದೇಶದಾದ್ಯಂತ ನಿರುದ್ಯೋಗ ನಿರಂತರ ಹೆಚ್ಚುತ್ತಲೇ ಇದೆ. ಸಾಮರ್ಥ್ಯಕ್ಕೆ ತಕ್ಕಂತೆ, ತನ್ನ ಓದು, ಪದವಿಗೆ ತಕ್ಕಂತೆ ಉದ್ಯೋಗ ಸಿಗದೆ ಕಂಗಾಲಾಗಿರುವ ಯುವ ಸಮೂಹದ ಸಂಖ್ಯೆ ಪ್ರತಿ ವರ್ಷವೂ ಹೆಚ್ಚುತ್ತಲೇ ಇದೆ. ಈ ನಡುವೆ ದೇಶದ ಶಿಕ್ಷಣ ವ್ಯವಸ್ಥೆ ಬಹುವಾಗಿ ಟೀಕೆಗೊಳಗಾಗುತ್ತಿದೆ.

ಸಮಸ್ಯೆ ಎಂದರೆ ಭಾರತೀಯ ಶಿಕ್ಷಣ ವ್ಯವಸ್ಥೆ ಇಲ್ಲಿನ ಜನರಿಂದ ಟೀಕೆಗಳನ್ನು ಎದುರಿಸುತ್ತಿವೆಯೇ ಹೊರತು, ಗಂಭೀರ ಚರ್ಚೆಗಳಾಗಿ, ಪ್ರಾಯೋಗಿಕವಾಗಿ ಶಿಕ್ಷಣ ಪದ್ದತಿ ಬದಲಾಗದೆ ಇರುವುದು. ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳು ಇಂದು ಅಗತ್ಯವೆ ಎಂಬ ಪ್ರಶ್ನೆ ಮೂಡುವ ಮಟ್ಟಕ್ಕೆ ತಂತ್ರಜ್ಞಾನ ಬೆಳೆದು, ಗೂಗಲ್ ನಲ್ಲಿಯೇ ಒಂದು ಜನ್ಮಕ್ಕಾಗುವಷ್ಟು ಜ್ಞಾನ ಗಿಟ್ಟಿಸುವ ಪರಿಕರಗಳು ಲಭ್ಯವಿದೆ.

ಶಿಕ್ಷಣ ಮತ್ತು ಉದ್ಯೋಗ ಎಂಬ ಎರಡು ಕ್ಷೇತ್ರಗಳು ಒಂದಕ್ಕೊಂದು ನಂಟು ಹೊಂದಿರುವುದು ನಿಜ. ಶಿಕ್ಷಣದ ಮೂಲಕ ಉದ್ಯೋಗ ಎನ್ನುವ ಪರಿಕಲ್ಪನೆ ಮೊದಲಿನಿಂದಲೂ ಇದೆ. ವೈದ್ಯನಾಗಲು, ಎಂಜಿನಿಯರ್ ಆಗಲು, ಪ್ರಾಧ್ಯಾಪಕನಾಗಲು, ಸರ್ಕಾರಿ‌ ಕೆಲಸ ಗಿಟ್ಟಿಸಲು ನಿರ್ದಿಷ್ಟ ಪದವಿಗಳು ಬೇಕಿವೆ. ಕೆಲವೊಂದು ಕೋರ್ಸ್ ಗಳು ಉದ್ಯೋಗಕ್ಕೆ ಪೂರಕವಾಗಿಯೇ ಇರುವುದರಿಂದ ಜನರ ಮನಸ್ಥಿತಿ, ಪೋಷಕರ ಮನಸ್ಥಿತಿ ಉದ್ಯೋಗ ಆಧಾರಿತ ಕಲಿಕೆಯ ಕಡೆಗೆ ಗಟ್ಟಿಯಾಯಿತು. ಗಮನಿಸಬೇಕಾದ ಅಂಶ ಎಂದರೆ, ಶಿಕ್ಷಣ ಕೇವಲ ಉದ್ಯೋಗದ ಮಾರ್ಗವಲ್ಲ. ಅಲ್ಲದೆ ಉದ್ಯೋಗಕ್ಕಾಗಿಯೇ ಶಿಕ್ಷಣ ಎಂಬುದು ಎಲ್ಲಾ ಕೋರ್ಸ್ ಗಳಿಗೆ ಅನ್ಚಯಿಸುವುದು ಕಷ್ಟ.

ಶಿಕ್ಷಣವನ್ನು ಉದ್ಯೋಗದ ಜತೆಗಿನ ನಂಟಿನಿಂದ ಬಿಡಿಸಿ ಕಾಣಬೇಕಾದ ಅಗತ್ಯವಿದೆ. ಅರಿವು ಎನ್ನುವುದು ಏಕೆ ಬೇಕು ಎಂಬುದನ್ನು ಈ ಸಮಾಜ ಅರ್ಥ ಮಾಡಿಕೊಳ್ಳಬೇಕಿದೆ. ಉದ್ಯೋಗದ ಬಗೆಗಿನ ಕೀಳರಿಮೆ, ಪದವಿಯ ಬಗೆಗಿನ ಹೆಮ್ಮೆ, ಗತ್ತು ಕಳಚಿ ಹೋಗುವವರೆಗೆ ನಮಗೆ ಅವೆರಡನ್ನು ಸರಿಯಾಗಿ ಅರಗಿಸಲು ಸಾಧ್ಯವಾಗದು. ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಖಾಸಗಿ ಕಾಲೇಜುಗಳಲ್ಲಿ ಸೀಟು ಗಿಟ್ಟಿಸಿ, ಉನ್ನತ ವ್ಯಾಸಂಗ ಮಾಡಿ, ಕಡೆಗೆ ಉದ್ಯೋಗವಿರದೆ ಆತ್ಮಹತ್ಯೆ ಮಾಡಿಕೊಳ್ಳುವವರ, ಖಿನ್ನತೆಗೊಳಗಾಗುವವರ ಸಂಖ್ಯೆ ಬಹಳಷ್ಟಿದೆ. ಅಷ್ಟು ಕೋಟಿ ಉದ್ಯೋಗ ಸೃಷ್ಟಿಸುವೆ, ಇಷ್ಟು ಕೋಟಿ‌ ಉದ್ಯೋಗ ಸೃಷ್ಟಿಸುವೆ ಎಂಬ ಭರವಸೆ ನೀಡುವ ರಾಜಕಾರಣಿಗಳು ಮನುಷ್ರನ್ನು ಯಂತ್ರಗಳನ್ನಾಗಿಸುತ್ತಾರೆಯೇ ಹೊರತು ಮಾನವೀಯ ಸ್ಪರ್ಶದ ಮಾತುಗಳನ್ನು, ಭರವಸೆಯನ್ನು ನೀಡಲಾರರು.

ಶಿಕ್ಷಣದ ಮೂಲಕ, ಪದವಿ ಪಡೆಯುವ ಮೂಲಕ ಉದ್ಯೋಗ ಸಿಗುತ್ತದೆ, ತನ್ನ ನಿರ್ದಿಷ್ಟ ಪದವಿಗೆ, ನಿರ್ದಿಷ್ಟ ಸಂಬಳದ, ನಿರ್ದಿಷ್ಟ ಉದ್ಯೋಗ ಸಿಗಬೇಕು ಎಂದು ಏಕೆ ಅಂದುಕೊಳ್ಳುತ್ತೇವೆ ? ಎಂಎಸ್ಸಿ ಕಲಿತು ಸರ್ಕಾರಿ ಬಸ್ ಗಳಲ್ಲಿ ನಿರ್ವಾಹಕರ ಕೆಲಸ ಮಾಡುವವರು, ಎಂಬಿಎ ಕಲಿತು ಜೊಮ್ಯಾಟೊ ಕಂಪನಿಯಲ್ಲಿ ಕೆಲಸ ಮಾಡುವವರು ಬೇಕಾದಷ್ಟಿದ್ದಾರೆ. ಅವರ ಓದಿನ ಉಪಯೋಗ ಇಂತಹ ಕೆಲಸಗಳಿಗೆ ಪೂರಕವೇ ? ಉದ್ಯೋಗ ಎನ್ನುವುದು ನಮ್ಮನ್ನು, ನಮ್ಮ ಕುಟುಂಬವನ್ನು ಆರ್ಥಿಕವಾಗಿ ಗಟ್ಟಿಗೊಳಿಸಲು ಬೇಕಿರುವಂಥದ್ದು. ಅದಕ್ಕಾಗಿ ಶಿಕ್ಷಣವನ್ನು, ಪದವಿಯನ್ನು ನಂಬಿಕೊಂಡೇ ಬದುಕುವುದಕ್ಕೆ ಅರ್ಥವಿಲ್ಲ.

ಒಬ್ಬ ಸೆಕ್ಯುರಿಟಿ ಗಾರ್ಡ್, ಒಬ್ಬ ಕಿರಾಣಿ ಅಂಗಡಿಯವ ತಮ್ಮ ಸ್ವರಚಿತ ನಾಟಕ, ಕವಿತೆ, ಕಥೆಗಳ ಸಂಕಲನವನ್ನು ಬಿಡುಗಡೆಗೊಳಿಸುತ್ತಾರೆ ಎಂದರೆ, ಕನ್ನಡ ಎಂಎ ಓದಿದ ವಿದ್ಯಾರ್ಥಿಗಳಿಗಿಂತ ಇವರು ಕಮ್ಮಿಯೆ ? ಜ್ಞಾನವನ್ನು ನಾವು ಹೇಗೆ ಬೇಕಾದರೂ, ಎಲ್ಲಿಂದಲಾದರೂ ಸಂಪಾದಿಸಬಹುದು ಎನ್ನುವುದಕ್ಕೆ ಇದೊಂದು ನಿದರ್ಶನ. ಇದು ಇತ್ತೀಚಿನ ಕೆಲವು ವರ್ಷಗಳ‌ ಬೆಳವಣಿಗೆಯನ್ನು ಗಮನಿಸಿದರೆ, ಕೆಲವರು ತಮ್ಮ ಮಕ್ಕಳನ್ನು ಶಾಲೆಗೇ ಸೇರಿಸುತ್ತಿಲ್ಲ. ಬದಲಾಗಿ ತಮ್ಮ ಮನೆಯಲ್ಲಿಯೇ ಮಕ್ಕಳಿಗೆ ಶಿಕ್ಷಣ ನೀಡುತ್ತಾರೆ. ಮಹತ್ವದ ಪುಸ್ತಕಗಳನ್ನು ನೀಡಿ ಓದಿಸುತ್ತಾರೆ. ಒಂದ ರೀತಿಯ ಆರು ಸಬ್ಜೆಕ್ಟ್ ಗಳ ಓದಿನ ಆಚೆಗ ತೀರಾ ಮುಕ್ತವಾದ ಓದಿನ ವಾತಾವರಣವನ್ನು ಈ ಮಕ್ಕಳು ಗಳಿಸುತ್ತಿದ್ದಾರೆ. ಭಾರತದ ಪರಂಪರೆಯನ್ನು ಗಮನಿಸಿದರೆ, ಮನೆಯಲ್ಲಿಯೇ ಮಕ್ಕಳಿಗೆ ಶಿಕ್ಷಣ ನೀಡುವ ಪದ್ದತಿ ಶಾಲೆಗಳು ಬರುವ ಮೊದಲೇ ಇತ್ತು.

ಸಾಹಿತಿ ಕೆ.ಟಿ. ಗಟ್ಟಿ ಒಂದು ಕಡೆ ಬರೆಯುತ್ತಾರೆ, ‘ಶಾಲೆ ಎಂಬ ಪರಿಕಲ್ಪನೆ ಹುಟ್ಟಿದ್ದು, ತಂದೆಯ ಜತೆಗೆ ತಾಯಿಯೂ ಕೆಲಸಕ್ಕೆ ಹೋಗಲು ಶುರುವಾದ ಮೇಲೆ. ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು, ಅವರಿಗೆ ಶಿಕ್ಷಣ ನೀಡಲು ಯಾರೂ ಇಲ್ಲದಾದಾಗ ಶಾಲೆ ಆರಂಭವಾಯಿತು’ ಎಂದು.

ಶಿಕ್ಷಣ ಕ್ರಮದ ಬದಲಾವಣೆಗಳನ್ನು ಭಾರತದಲ್ಲಿ ಕಾರ್ಯರೂಪಗೊಳಿಸುವ ಅಗತ್ಯ ಇದೆ. ಮಾಹಿತಿ ಸಂಗ್ರಹವಷ್ಟೇ ಶಿಕ್ಷಣ ಎಂದಾದರೆ, ಶಾಲೆಗಳ ಅಗತ್ಯವೇ ಇಲ್ಲ. ಏಕೆಂದರೆ ಇಂದು ಪುಟ್ಟ ಮಕ್ಕಳೂ ಇಂಟರ್ನೆಟ್ ಬಳಸುತ್ತಾರೆ. ಪ್ರತಿಯೊಂದನ್ನೂ ಯೂಟ್ಯೂಬ್, ಇಂಟರ್ನೆಟ್ ನಿಂದ ಕಲಿಯಬಹುದು. ಗಂಟೆಗಟ್ಟಲೆ ತರಗತಿಯಲ್ಲಿ ಕುಳಿತು ಪಾಠ ಕೇಳುವ ಈಗಿನ ಕ್ರಮಕ್ಕೆ ವಿದೇಶಿ ವಿದ್ಯಾರ್ಥಿಗಳು ಕಂಗಾಲಾಗಿ, ಕಾಲೇಜಿ ಬಿಟ್ಟು ಹೋದ ಉದಾಹರಣೆಗಳೂ ಇವೆ. ಕಾರಣ, ವಿದೇಶದಲ್ಲಿ ವಿದ್ಯಾರ್ಥಿಗಳನ್ನೇ ಹೆಚ್ಚಾಗಿ ತರಗತಿಗಳಲ್ಲಿ ತೊಡಗಿಸಿಕೊಳ್ಳುವಂತೆ ಶಿಕ್ಷಣ ಪದ್ದತಿ ರೂಪುಗೊಂಡಿದೆ. ಅದೇ ಮಾದರಿಯ ಕ್ರಮವನ್ನು ನಮ್ಮ ದೇಶದಲ್ಲಿಯೂ ಅನುಸರಿಸುವುದರಿಂದ ಸ್ವಲ್ಪ ಮಟ್ಟಿಗೆ ಬದಲಾವಣೆ ಕಾಣಲು ಸಾಧ್ಯವಿದೆ.

‘ಉತ್ಸಾಹ ಎನ್ನುವುದು ಈಗಿನ ವಿದ್ಯಾರ್ಥಿಗಳಲ್ಲಿ ಇಲ್ಲ ಎನ್ನುವಷ್ಟು ಕಡಿಮೆಯಾಗಿದೆ’ ಅಂತ ಸಾಹಿತಿ, ಶಿಕ್ಷಣ ತಜ್ಞ ಜಯಪ್ರಕಾಶ್ ಮಾವಿನಕುಳಿ ಹೇಳುತ್ತಾರೆ. ನಿಜಕ್ಕೂ ಹೌದು. ಇಂದಿನ ವಿದ್ಯಾರ್ಥಿಗಳಲ್ಲಿ ಯಾವುದಕ್ಕೂ ಉತ್ಸಾಹವಿಲ್ಲ. ಯಾವುದೇ ಸ್ಪೂರ್ತಿದಾಯಕ ಕೆಲಸಗಳಿಗೆ ಕೈ ಹಾಕುವಂತೆ ಪ್ರೇರೇಪಿಸಿದರೆ ಪರಸ್ಪರ ಮುಖ ಮುಖ ನೋಡುತ್ತಾರೆ. ಸಾಕೆನಿಸುವಷ್ಟು ಪಾಠಗಳನ್ನು ಕಿವಿಗೆ ತುಂಬಿಸಿಕೊಂಡು ಯಂತ್ರದ ಹಾಗೆ ಕುಳಿತು, ಸಂಜೆಯಾದಂತೆ ಮನೆಗೆ ಮರಳುವ ವಿದ್ಯಾರ್ಥಿಗಳು, ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯ ಬಲಿಪಶುಗಳೇ ಹೊರತು ಸಂಪತ್ತಲ್ಲ.

‘ಜ್ಞಾನ ಸಂಪಾದನೆ’ ಮತ್ತು ‘ಹಣ ಸಂಪಾದನೆ’ ಎನ್ನುವುದು ಎರಡು ಭಿನ್ನ ಸಂಗತಿಗಳು ಎಂಬುದನ್ನು ಇಂದಿನ ಯುವ ಸಮೂಹಕ್ಕೆ ಮತ್ತೆ ಮತ್ತೆ ಮನಮುಟ್ಟುವ ಹಾಗೆ ತಿಳಿಸುತ್ತಲೇ ಇರಬೇಕಿದೆ.

LEAVE A REPLY

Please enter your comment!
Please enter your name here