ಲೇಖಕರು: ಇಸ್ಮತ್ ಪಜೀರ್

ನಾನು ಎಳೆಯ ಹುಡುಗನಾಗಿದ್ದಾಗ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿದ್ದ ಬಿಸ್ಕೆಟ್ ಅಂದ್ರೆ ಅದು ಪಾರ್ಲೆ-ಜಿ ಒಂದೇ ಆಗಿತ್ತು. ಅದು ಮಾರಿ ಬಿಸ್ಕೆಟ್‌ಗಿಂತಲೂ ಸಿಹಿಯಾಗಿದ್ದರಿಂದ ಅದು ನನಗೆ ಹೆಚ್ಚು ಇಷ್ಟವಾಗಿತ್ತು.
ಆದರೆ ನಮ್ಮ ಮನೆಗೆ ಸಾಮಾನ್ಯವಾಗಿ ತರುತ್ತಿದ್ದುದು ಮಾರಿ ಬಿಸ್ಕೆಟ್.

ನನ್ನ ಅಜ್ಜ ಕಡಿಮೆ ಬೆಲೆಗೆ ಸಿಗುತ್ತದೆಂದು ಪಾರ್ಲೆ-ಜಿ ಬಿಸ್ಕೆಟ್ ತರುತ್ತಿದ್ದರು. ಆಗ ಅದಕ್ಕೆ ಎರಡು ರೂಪಾಯಿ ಬೆಲೆ.
ನನಗೆ ಅದರ ಬೆಲೆ ಮುಖ್ಯವಾಗಿರಲಿಲ್ಲ. ನನಗೆ ಅದರ ಸಿಹಿಯಷ್ಟೇ ಮುಖ್ಯವಾಗಿತ್ತು. ಪಾರ್ಲೆ-ಜಿ ಎಂದರೆ ನನ್ನ ಪಾಲಿಗೆ ಸಿಹಿ ಸಿಹಿ ನೆನಪು. ಪಾರ್ಲೆ-ಜಿ ಎಂಬ ನನ್ನಿಷ್ಟದ ಬಿಸ್ಕೆಟ್ ಕಂಪೆನಿ ನಷ್ಟದಲ್ಲಿದೆ ಎಂದಾಗ ನನ್ನ ಸ್ಮೃತಿ ಪಟಲದಲ್ಲಿ ಬಾಲ್ಯದ ನೆನಪೊಂದು ಮೂಡಿ ಬಂತು. ಅದನ್ನು ಅಕ್ಷರ ರೂಪಕ್ಕಿಳಿಸಲೇಬೇಕು.

ಬಹುಶಃ ನಾನು ಏಳನೇ ತರಗತಿಯಲ್ಲಿದ್ದ ದಿನಗಳಾಗಿರಬೇಕು. ಉಳ್ಳಾಲದ ಮಂಚಿಲ ಎಂಬಲ್ಲಿನ ನನ್ನ ಅಜ್ಜಿ ಮನೆಗೆ ಒಂದು ಶನಿವಾರ ಮಧ್ಯಾಹ್ನ ಹೊರಟಿದ್ದೆ. ಅಮ್ಮ ಬಸ್ಸಿಗೆಂದು ಐದು ರೂಪಾಯಿ ಕೊಟ್ಟಿದ್ದರು. ಬಸ್ಸು ಓವರ್ ಲೋಡಾಗಿತ್ತು. ನಾನು ಬಸ್ಸಿನ ಹಿಂಬಾಗಿಲ ಬಳಿಯಿರುವ ಲಾಂಗ್ ಸೀಟಿನ ಕಿಟಕಿ ಬಳಿ ಕೂತಿದ್ದೆ. ಕೊಣಾಜೆಯಿಂದ ತೊಕ್ಕೊಟ್ಟು ಪೇಟೆಯಲ್ಲಿ ಇಳಿಯುವವರೆಗೂ ಬಸ್ಸು ಕಂಡಕ್ಟರ್ ನನ್ನಲ್ಲಿ ಟಿಕೆಟ್ ಕೇಳಿರಲಿಲ್ಲ.ಹುಡುಗನಲ್ವಾ ದೊಡ್ಡವರು ಯಾರಾದರೂ ಬಸ್ಸಲ್ಲಿರಬಹುದೆಂದು ಆತ ಕೇಳದಿದ್ದಿರಬಹುದು. ನಾನೂ ಟಿಕೆಟ್ ತೆಗೆಯುವ ಗೋಜಿಗೂ ಹೋಗಲಿಲ್ಲ. ಇನ್ನೇನು ತೊಕ್ಕೊಟ್ಟು ಬಸ್ ನಿಲ್ದಾಣ ತಲುಪಬೇಕೆನ್ನುವಷ್ಟರಲ್ಲಿ ತುರಾತುರಿಯಲ್ಲಿ ಬಾಗಿಲ ಬಳಿ ಬಂದು ನಿಂತೆ.ಬಸ್ಸು ನಿಧಾನವಾಗಿತ್ತಷ್ಟೆ. ಇನ್ನೂ ನಿಲ್ಲಿಸಿರಲಿಲ್ಲ. ಬಸ್ಸಿಂದ ಜಿಗಿದು ಓಡಿದೆ.ರಸ್ತೆ ದಾಟಿದ ಬಳಿಕ ಅಂಗಡಿಯೊಂದರ ಮರೆಯಲ್ಲಿ ನಿಂತು ಇಣುಕಿದೆ. ಅಬ್ಬಾ… ಬಸ್ಸ್ ಕಂಡಕ್ಟರ್ ನನ್ನನ್ನು ಹುಡುಕುತ್ತಿಲ್ಲವಲ್ಲಾ… ಬಚಾವ್.. ಎಂದು ಪ್ಯಾಂಟಿನ ಕಿಸೆಯನ್ನು ಮೇಲಿಂದಲೇ ಮುಟ್ಟಿ ನೋಡಿದೆ. ಮೂರು ನಾಣ್ಯಗಳಿರುವುದು ಖಚಿತವಾಯಿತು. ತೊಕ್ಕೊಟ್ಟು ಪೇಟೆಯಿಂದ ಒಳಪೇಟೆಗೆ ಹೋಗುವ ದಾರಿಯಲ್ಲಿ ರೈಲ್ವೆ ಹಳಿ ಇದೆ. ಅದಕ್ಕಿಂತ ಮುಂಚೆ ಸಿಗುವ ಅಗಲವಾದ ಕಾಲು ದಾರಿಯ ಇಕ್ಕೆಲಗಳಲ್ಲೂ ಸಂತೆಯಿರುತ್ತದೆ. ಹಿಂದಿನ ಬಾರಿ ಅಲ್ಲಿಂದ ಸಾಗುವಾಗ ಮೂರು ರೂಪಾಯಿಗೆ ಸಿಗುವ ಪ್ಲಾಸ್ಟಿಕ್ ಕಪ್ಪು ಕನ್ನಡಕ ನೋಡಿ ಮುಂದಿನ ಬಾರಿ ಅದನ್ನು ಖರೀದಿಸಬೇಕೆಂದು ಪ್ಲ್ಯಾನ್ ಹಾಕಿದ್ದೆ. ಆದರೆ ಆ ಅಂಗಡಿ ಸಿಗುವುದಕ್ಕಿಂತ ಮುನ್ನ ಒಬ್ಬ ಮಹಿಳೆ ಅಲ್ಲಿ ಗಿರಗಿಟ್ಲೆ‌ ಆಟ ಇಟ್ಟಿದ್ದಳು.‌ಅದು ಒಂದು ವಿಧದಲ್ಲಿ ಮಕ್ಕಳ ಜೂಜಾಟ. ಒಂದರಿಂದ ಹತ್ತು ಅಂಕಿಗಳಿರುವ ಒಂದು ಚಾರ್ಟ್ ಇತ್ತು. ಅದರಲ್ಲಿ ನಾಲ್ಕು ಅಂಕಿಗಳ ಮೇಲೆ ಬಹುಮಾನ ಬಹುಮಾನ ಇಡಲಾಗಿತ್ತು. ಒಂದು ಅಂಕಿಯಲ್ಲಿ ಎಂಟಾನೆ ಬಹುಮಾನವಾದರೆ, ಇನ್ನೊಂದರಲ್ಲಿ ಪ್ಲಾಸ್ಟಿಕ್ ವಿಸಿಲ್ (ಸೀಟಿ), ಮತ್ತೊಂದರಲ್ಲಿ ಒಂದು ರೂಪಾಯಿ, ಬಂಪರ್ ಬಹುಮಾನ ಪಾರ್ಲೆ-ಜಿ ಬಿಸ್ಕೆಟ್.
ಗಿರಗಿಟ್ಲೆ ಆಡಬಯಸುವವರು ನಾಲ್ಕಾಣೆ ಹಾಕಬೇಕು. ಹಾಕಿದ ಬಳಿಕ ಗಿರಗಿಟ್ಲೆ ತಿರುಗಿಸಬೇಕು. ಗಿರಗಿಟ್ಲೆ ಅಂದರೆ ” ಒಂದು ಉರುಟಾದ ಮರದ ತಟ್ಟೆ, ಅದರ ಸರಿ ಮಧ್ಯದಲ್ಲಿ ಒಂದು ಪುಟ್ಟ ಕಂಬ. ಆ ಕಂಬಕ್ಕೆ ನಾಲಿಗೆ ಲೇಪನ ತೆಗೆಯುವ ಸಾಧನವನ್ನು (ಅಗ್ರ ತೆಗೆಯುವ) ಕಟ್ಟಲಾಗಿತ್ತು.
‌ಉರುಟಾದ ತಟ್ಟೆಯ ಸುತ್ತಲೂ ಮೊಳೆಗಳನ್ನು ಬಡಿಯಲಾಗಿತ್ತು. ಮೊಳೆ ಬಡಿದಲ್ಲೆಲ್ಲಾ ಅಂಕಿಗಳಿರುತ್ತವೆ. ಆಡುವವರು ಆ ತಟ್ಟೆಯನ್ನು ತಿರುಗಿಸಬೇಕು.‌ ಹಾಗೆ ಗಿರಗಿಟ್ಲೆ ತಿರುಗುತ್ತದೆ.ಸುಮಾರು ಸುತ್ತು ತಿರುಗುವ ಗಿರಗಿಟ್ಲೆ ಯಾವ ಅಂಕಿಯಲ್ಲಿ ನಿಲ್ಲುತ್ತದೋ ಆ ಅಂಕಿಯಲ್ಲಿದ್ದ ವಸ್ತು ಗೆದ್ದವರಿಗೆ.

ಬಹುಮಾನವಿರುವ ನಾಲ್ಕು ಅಂಕಿಗಳ ಹೊರತಾಗಿ ಬೇರೆ ಯಾವುದೇ ಅಂಕಿಯಲ್ಲಿ ಗಿರಗಿಟ್ಲೆ ನಿಂತರೆ ನಾಲ್ಕಾನೆ ನಷ್ಟ.
ಗೆದ್ದರೆ ಯಾವುದಾದರೊಂದು ಬಹುಮಾನ ಸಿಗುತ್ತದೆ.‌ನನ್ನ ಇಷ್ಟದ ಪಾರ್ಲೆ-ಜಿ ಬಿಸ್ಕೆಟ್ ಸಿಕ್ಕರೂ ಸಿಗಬಹುದೆಂದು ಯೋಚಿಸಿದೆ. ತುಸು ಹೊತ್ತು ಅಲ್ಲೇ ನಿಂತು ಬೇರೆಯವರು ಆಡುವುದನ್ನು ಗಮನಿಸಿದೆ. ಹೋದರೆ ನಾಲ್ಕಾಣೆ, ಗೆದ್ದರೆ ಬಹುಮಾನ. ಮನಸ್ಸಿನಲ್ಲಿ ದೇವನನ್ನು ನೆನೆದು ಒಂದು ರೂಪಾಯಿ ನಾಣ್ಯ ಕೊಟ್ಟು ಒಂದು ಆಟ ಎಂದೆ. ಆಕೆ ಎಪ್ಪತ್ತೈದು ಪೈಸೆ ವಾಪಸ್ ಕೊಟ್ಟಳು.. ಗಿರಗಿಟ್ಲೆ ತಿರುಗಿಸಿದೆ…ಗಿರಗಿಟ್ಲೆ ತಿರುಗುತ್ತಾ ತಿರುಗುತ್ತಾ ನಿಧಾನವಾಗುತ್ತಾ ಬಂತು..ಮನದಲ್ಲೇ ಮತ್ತೆ ಮತ್ತೆ ದೇವನನ್ನೇ ನೆನೆದೆ… ಆ.. ಬಾ… ಬಾ…. ಬಾ…. ಸ್ವಲ್ಪ ಮುಂದೆ..ಇನ್ನೂ ಸ್ವಲ್ಪ ಮುಂದೆ… ಬಾ…. ಬಾ…. ಎಂದು ಮನದಲ್ಲೇ ಹೇಳತೊಡಗಿದೆ..‌ ಏನಾಶ್ಚರ್ಯ…ನಾನು ಗೆದ್ದೇ ಬಿಟ್ಟೆ…ಅದೂ ಬಂಪರ್.. ಪಾರ್ಲೆ-ಜಿ ಬಿಸ್ಕೆಟ್..
ಆಕೆ ಬಿಸ್ಕೆಟ್ ಪ್ಯಾಕ್ ಕೊಟ್ಟಳು… ಪ್ಯಾಕಿಗೆ ಮುತ್ತಿಟ್ಟೆ…
ಹೋಗೋದಾ… ಮತ್ತೆ ಆಡೋದಾ….. ಎಂದು ಯೋಚಿಸುತ್ತಾ ನಿಂತೆ… ಆಕೆ ತುಳುವಿನಲ್ಲಿ “ನನ ಒರ ಗೊಬ್ಬು ಮಗಾ” (ಇನ್ನೊಮ್ಮೆ ಆಡು ಮಗನೇ )ಅಂದಳು.
ಈಗಂತೂ ಮೊದಲಿಗಿಂತ ಹೆಚ್ಚು ಧೈರ್ಯವಿತ್ತು. ನಾಲ್ಕಾಣೆ ಹಾಕಿಯೇ ಬಿಟ್ಟೆ… ಗಿರಗಿಟ್ಲೆ ತಿರುಗಿಸಿದೆ. ವೇಗವಾಗಿ ತಿರುಗಿದ ಗಿರಗಿಟ್ಲೆ ನಿಧಾನವಾಗುತ್ತಾ ಬಂತು.. ಲೇ… ಲೇ…. ಲೇ…. ನಿಲ್ಲೋ… ನಿಲ್ಲೋ… ಎಂದರೆ ಅದು ಪಾರ್ಲೆ-ಜಿ ಯನ್ನು ಕ್ರಾಸ್ ಮಾಡಿ ಮುಂದೆ ಸಾಗಿತು. … ವಿಸಿಲ್ ಬಳಿಯಾದರೂ ನಿಲ್ಲೋ…‌ಎಂದರೆ ಅಲ್ಲೂ ನಿಲ್ಲದೇ ಮತ್ತುಷ್ಟು ತಿರುಗಿತು…ಹಾ….. ನಿಂತೇ ಬಿಟ್ಟಿತು.ಅಬ್ಬಾ… ನಾನು ಒಂದು ರೂಪಾಯಿ ಗೆದ್ದೇ ಬಿಟ್ಟೆ.. ಆಕೆ ಒಂದು ರೂಪಾಯಿ ಕೊಟ್ಟು.. ಇನ್ನೊಮ್ಮೆ ಆಡು ಮಗಾ ಅಂದಳು… ತುಳುವಿನಲ್ಲಿ ಬೊಡ್ಚಿ, ಬೊಡ್ಚಿ (ಬೇಡ ,ಬೇಡ ) ಎಂದು ಅಲ್ಲಿಂದ ಕಾಲ್ಕಿತ್ತೆ. ಪಕ್ಕದ ಅಂಗಡಿಯಿಂದ ಮೂರು ರೂಪಾಯಿಯ ಪ್ಲಾಸ್ಟಿಕ್ ಕನ್ನಡಕ ಖರೀದಿಸಿ ಸ್ಟೈಲಾಗಿ ಅದನ್ನು ಧರಿಸಿ ಅದೇ ಅಂಗಡಿಯಲ್ಲಿ ಆತ ಮಾರಲು ಇಟ್ಟಿದ್ದ ಕನ್ನಡಿಯತ್ತ ಬಾಗಿ ಮುಖ ನೋಡಿದೆ. ನಾನೇ ಹೀರೋ ಎಂದು ಮನದಲ್ಲೇ ಮಂಡಿಗೆ ಮೆಲ್ಲುತ್ತಾ…. ಬಿಸ್ಕೆಟ್ ಪ್ಯಾಕನ್ನು ಒಡೆದು ತಿನ್ನುತ್ತಾ ಸಂತಸದಿಂದ ಅಜ್ಜಿ ಮನೆಯತ್ತ ನಡೆದೆ…
ಹೀಗೆ ಪಾರ್ಲೆ-ಜಿ ಎಂದರೆ ನನ್ನ ನಾಲಿಗೆಗೆ ಮಾತ್ರ ಸಿಹಿಯಲ್ಲ.. ಮನದಲ್ಲೂ ಸಿಹಿ‌ಸಿಹಿ ನೆನಪು..

LEAVE A REPLY

Please enter your comment!
Please enter your name here