• ಎಮ್ಮೆಸ್ಕೆ

ಭಾರತಕ್ಕೆ ಇಂತಹ ಪ್ರಧಾನಿ ಸಿಕ್ಕಿರುವುದು ಈಗೀಗ ನಿಜಕ್ಕೂ ನಮ್ಮ ದೌರ್ಭಾಗ್ಯ ಎನಿಸುತ್ತಿದೆ. ಪ್ರಧಾನ ಮಂತ್ರಿ ಎಂಬ ದೇಶದ ಅತ್ಯುನ್ನತ ಹುದ್ದೆಯಲ್ಲಿ‌ ನಿಂತುಕೊಂಡು ಜನರನ್ನು ಏಕೆ ಇಷ್ಟೊಂದು ಹುಚ್ಚು ಹಿಡಿಸುತ್ತಿದ್ದಾರೋ ಗೊತ್ತಿಲ್ಲ. ನಮ್ಮ ಪ್ರಧಾನಿಯವರೇಕೆ ಇಷ್ಟೊಂದು ದಡ್ಡರಾಗಿಬಿಟ್ಟರೋ ಅರ್ಥವಾಗುತ್ತಿಲ್ಲ.

ಮೊನ್ನೆ ಜನತಾ ಕರ್ಫ್ಯೂ ಎಂದು ಚಪ್ಪಾಳೆ ತಟ್ಟಲು ಹೇಳಿ, ಭಕ್ತರೆಲ್ಲ ಜಾಗಟೆ, ತಟ್ಟೆ ಬಡಿದು(ಅದೂ ಕೂಡ ಸಾಮೂಹಿಕವಾಗಿ!) ತಮ್ಮ ಭಕ್ತಿ ಪ್ರದರ್ಶಿಸಿದರೇ ಹೊರತು ಎಚ್ಚರವಹಿಸಲಿಲ್ಲ. ಈಗ ಮತ್ತೆ ಬಂದು, ರಾತ್ರಿ ಒಂಭತ್ತು ಗಂಟೆಗೆ ಮನೆಯ ವಿದ್ಯುತ್ ದೀಪಗಳನ್ನು ಆರಿಸಿ, ದೀಪ ಅಥವಾ ಮೊಬೈಲ್ ಟಾರ್ಚ್ ಹಚ್ಚಿ ಎಂದು ಸಂದೇಶ ನೀಡುತ್ತಿದ್ದಾರೆ. ಜಗತ್ತೇ ಅತ್ಯಂತ ಅಪಾಯಕಾರಿ ಹೊತ್ತಿನಲ್ಲಿರುವ ಈ ಸಂದರ್ಭದಲ್ಲಿ, ಭಾರತದಂತಹ ದೇಶವೊಂದರ ಪ್ರಧಾನಿ ನೀಡಬೇಕಾದ ಸಂದೇಶವೇ ಇದು? ಇದಕ್ಕೆ ಪ್ರಧಾನಿಯವರಲ್ಲ, ಪ್ರಜೆಗಳಾದ ನಾವು ತಲೆತಗ್ಗಿಸಬೇಕು. ಅತ್ತ ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಬೇಕಾದ ಸೌಲಭ್ಯಗಳಿಗಾಗಿ ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ. ಇತ್ತ ಪ್ರಧಾನಿ ಚಪ್ಪಾಳೆ ತಟ್ಟಲು, ದೀಪ ಹಚ್ಚಲು ಹೇಳುತ್ತಿದ್ದಾರೆ. ಇವರೇನು ಪ್ರಧಾನಿಯೇ ಇಲ್ಲ ಜಾದೂಗಾರನೇ?

ಪ್ರತಿಯೊಂದ ದೇಶದ ನಡೆಯನ್ನು ಇಡೀ ಜಗತ್ತು ಗಮನಿಸುತ್ತಿರುತ್ತದೆ. ನಾವೀಗ ಅಮೆರಿಕಾ, ಇಟಲಿಯನ್ನು ಹೇಗೆ ಗಮನಿಸುತ್ತಿದ್ದೇವೆಯೋ ಹಾಗೆಯೇ ಅಲ್ಲಿನವರ ಕಣ್ಣೂ ಭಾರತದ ಕಡೆಗಿರುತ್ತದೆ. ನಮ್ಮ ದೇಶದ ಪ್ರಧಾನಿ ಕೊರೊನಾ ನಿರ್ಮೂಲನೆಗೆ ತೆಗೆದುಕೊಳ್ಳುತ್ತಿರುವ ಈ ನಡೆಯನ್ನು ಕಂಡು ಅವರು ಏನು ಭಾವಿಸಬಹುದು? ಯಾರಾದರೂ ಏನೆಂದುಕೊಳ್ಳಬೇಕು? ಸೂಕ್ತ ಸಂದರ್ಭದಲ್ಲಿ ಎಚ್ಚರ ವಹಿಸಲಿಲ್ಲ ಎಂಬುದು ಒಂದು ವಿಚಾರವಾದರೆ, ಈಗ ವೈರಸ್ ಇನ್ನೂ ಹೆಚ್ಚು ಹರಡುತ್ತಿರುವ ಅಪಾಯದ ಹೊತ್ತಲ್ಲಿಯೂ ಈ ಹುಚ್ಚುತನವನ್ನು ಬಿಡುವುದಿಲ್ಲವೆಂದರೆ? ಈ ಪ್ರಧಾನಿಯನ್ನು ಇಟ್ಟುಕೊಂಡು ನಾವು ಜಗತ್ತಿನ ಮುಂದೆ ನಮ್ಮ ದೇಶದ ಬಗ್ಗೆ ಹೆಮ್ಮೆ ಪಡಬೇಕೆ? ಹೇಗೆ ಪಡಬೇಕು? ಯಾರಾದರೂ ಕೇಳಿದರೆ, ‘ನಮ್ಮ ಪ್ರಧಾನಿ ಕೊರೊನಾ ಓಡಿಸಲಿಕ್ಕಾಗಿ ಚಪ್ಪಾಳೆ ತಟ್ಟಲು, ಮೊಬೈಲ್ ಟಾರ್ಚ್ ಹಚ್ಚಲು ಸಂದೇಶ ನೀಡಿದ್ದಾರೆ ಎಂದು ಹೆಮ್ಮೆಯಿಂದ ಹೇಳಬೇಕೆ?

ಪ್ರಧಾನಿ ಮತ್ತು ಅವರ ಪಕ್ಷದ ಜನರು ದೇಶದ ಪ್ರಜೆಗಳ ಬಗ್ಗೆ ಏನೆಂದುಕೊಂಡಿದ್ದಾರೆ? ನಾವೇನು ಹುಚ್ಚರೇ? ಜಗತ್ತಿನ ಪ್ರಭಾವಿ ಅರ್ಥಶಾಸ್ತ್ರಜ್ಞರು, ವೈದ್ಯಕೀಯ ಕ್ಷೇತ್ರದವರು, ವಿಜ್ಞಾನಿಗಳು ಇಲ್ಲವೇ ಇಲ್ಲಿ? ಇವರೆಲ್ಲರನ್ನೂ ಎದುರಿಟ್ಟುಕೊಂಡು ಯಾವ ಬಾಯಿಯಲ್ಲಿ ಇಂತಹ ಅವಿವೇಕದ ಸಂದೇಶಗಳನ್ನು ನೀಡುತ್ತಾರೆ? ಪ್ರಧಾನಮಂತ್ರಿ ಎಂಬ ಹುದ್ದೆಯ ಘನತೆಗೆ ನಿಜಕ್ಕೂ ಈಗ ಕುತ್ತು ಬಂದಿದೆ. ಸಾಮಾನ್ಯರಲ್ಲಿ ಸಾಮಾನ್ಯ ಜನರೂ ತಲೆಚಚ್ಚಿಕೊಳ್ಳುತ್ತಿದ್ದಾರೆ‌. ಈ ನಡುವೆ ಈ ಭಕ್ತಾದಿಭಕ್ತರು ಉನ್ಮತ್ತತೆ ಇಳಿಯುವುದೇ ಇಲ್ಲ‌. ಕೆಲವೇ ಕೆಲವು ಮಿದುಳು ಮಾರಿಕೊಂಡ ಭಕ್ತರನ್ನು ಸಾಕಲು ಈ ಪ್ರಧಾನಿ ಎಲ್ಲರನ್ನೂ ಹೈರಾಣಾಗಿಸುತ್ತಿದ್ದಾರೆ. ಭಕ್ತರನ್ನು ಸಮಾಧಾನಪಡಿಸಲು, ಸಂತುಷ್ಟಪಡಿಸಲು ದಯವಿಟ್ಟು ಅವರಿಗೆ ಮಾತ್ರ ಸಂದೇಶ ನೀಡಲಿ. ಇಂತಹ ಹುಚ್ಚುತನದ, ಬೇಜವಾಬ್ದಾರಿತನದ ಸಂದೇಶ, ಒಬ್ಬ ಭಾರತದ ಸಾಮಾನ್ಯ ನಾಗರಿಕನಿಗೆ ಅಗತ್ಯವಿಲ್ಲ. ಎಲ್ಲರೂ ತಮ್ಮ ಮಿದುಳನ್ನು ಅಡವಿಟ್ಟುಕೊಂಡಿಲ್ಲ ಎಂಬುದನ್ನು ಪ್ರಧಾನಿಯವರು ಅರ್ಥಮಾಡಿಕೊಳ್ಳಬೇಕಿದೆ.

ದೇಶದಲ್ಲಿ ಇನ್ನೂ ಎಷ್ಟೋ ಮಂದಿಯ ಮನೆಯಲ್ಲಿ ಕರೆಂಟಿಲ್ಲ, ಕೆಲವರಿಗೆ ಮನೆಯೇ ಇಲ್ಲ. ಅವರೆಲ್ಲ ಪ್ರಧಾನಿ ಮಾತನ್ನು ಹೇಗೆ ಪಾಲಿಸಬೇಕು. ಎಲ್ಲ ಮನೆಗೂ ಕರೆಂಟು ಕೊಡಿಸಲು ಆಗದೆ ಸೋತಿರುವ ಸರ್ಕಾರವನ್ನು ಮುಂದಿಟ್ಟುಕೊಂಡೇ ಕರೆಂಟ್ ಆಫ್ ಮಾಡುವ ಸಂದೇಶ ನೀಡುವುದು ನಿಜಕ್ಕೂ ವ್ಯಂಗ್ಯವಾದುದು. ಈ ಸಂಗತಿಯೇ ಸಾಕು, ಜನಸಾಮಾನ್ಯರ ಬಗ್ಗೆ ನಮ್ಮ ಪ್ರಧಾನಿಗೆ ಎಳ್ಳಷ್ಟೂ ಅರಿವಿಲ್ಲ ಎಂಬುದನ್ನು ಸಾಬೀತುಪಡಿಸಲು. ಮೂಲಸೌಕರ್ಯಗಳನ್ನು, ವೈದ್ಯಲೋಕಕ್ಕೆ ತುರ್ತಾಗಿ ಬೇಕಾದ ಸೌಲಭ್ಯಗಳನ್ನು ಒದಗಿಸದೆ ಇಂತಹ ಅವಿವೇಕಿ, ಹೊಣೆಗೇಡಿತನದ ಹೇಳಿಕೆಗಳನ್ನು ಪ್ರಧಾನಿ ನೀಡಬಾರದು. ಅದು ಪ್ರಧಾನಿಗೂ ಶೋಭೆಯಲ್ಲ, ಪ್ರಧಾನಿ ಹುದ್ದೆಗೂ ಕಳಂಕ.

LEAVE A REPLY

Please enter your comment!
Please enter your name here