ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, 2024ರಲ್ಲಿ ಭಾರತದಲ್ಲಿ 1,70,746 ಆತ್ಮಹತ್ಯೆ ಮರಣಗಳು ದಾಖಲಾಗಿದ್ದು, 2023ರಲ್ಲಿ ವರದಿಯಾದ 1,71,418 ಪ್ರಕರಣಗಳಿಗೆ ಹೋಲಿಸಿದರೆ ಶೇ. 0.4% ಇಳಿಕೆ ಕಂಡುಬಂದಿದೆ. ಆ ಅವಧಿಯಲ್ಲಿ ಆತ್ಮಹತ್ಯೆ ದರವೂ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಶೇ. 12.3%ರಿಂದ 12.2%ಕ್ಕೆ ಸ್ವಲ್ಪಮಟ್ಟಿಗೆ ಇಳಿಕೆ ಕಂಡಿದೆ ಎಂದು ವರದಿ ತಿಳಿಸಿದೆ.
ಮಹಾರಾಷ್ಟ್ರವು 22,174 ಆತ್ಮಹತ್ಯೆಗಳ ಅತಿ ಹೆಚ್ಚು ಸಂಖ್ಯೆ ದಾಖಲಿಸಿದ್ದು; ಆನಂತರ, ತಮಿಳುನಾಡು 19,965 ಪ್ರಕರಣಗಳೊಂದಿಗೆ, ಮಧ್ಯಪ್ರದೇಶ 15,491, ಕರ್ನಾಟಕ 13,151 ಮತ್ತು ಪಶ್ಚಿಮ ಬಂಗಾಳ 12,931 ಪ್ರಕರಣಗಳೊಂದಿಗೆ ಅನುಕ್ರಮವಾಗಿ ನಿಂತಿವೆ. ಈ ಐದು ರಾಜ್ಯಗಳು ಒಟ್ಟಾರೆಯಾಗಿ ದೇಶದಲ್ಲಿ ವರದಿಯಾದ ಒಟ್ಟು ಆತ್ಮಹತ್ಯೆಗಳ ಸುಮಾರು ಅರ್ಧ ಭಾಗಕ್ಕೆ ಕಾರಣವಾಗಿವೆ.
ದಕ್ಷಿಣ ರಾಜ್ಯಗಳು ಆತ್ಮಹತ್ಯೆಗಳಲ್ಲಿ ಗಮನಾರ್ಹ ಪಾಲನ್ನು ವರದಿ ಮಾಡುತ್ತಲೇ ಇವೆ ಎಂದು ಮಾಹಿತಿ ಎತ್ತಿ ತೋರಿಸಿದೆ. ತಮಿಳುನಾಡು ಮತ್ತು ಕರ್ನಾಟಕದೊಂದಿಗೆ, ತೆಲಂಗಾಣ 10,975 ಪ್ರಕರಣಗಳನ್ನು, ಕೇರಳ 10,865 ಮತ್ತು ಆಂಧ್ರಪ್ರದೇಶ 8,302 ಪ್ರಕರಣಗಳನ್ನು ದಾಖಲಿಸಿವೆ.ಐದು ದಕ್ಷಿಣ ರಾಜ್ಯಗಳು ಒಟ್ಟಾಗಿ 2024ರಲ್ಲಿ ಭಾರತದ ಒಟ್ಟು ಆತ್ಮಹತ್ಯೆಗಳಲ್ಲಿ ಶೇ. 36%ಕ್ಕೂ ಹೆಚ್ಚಿನ ಪಾಲು ಹೊಂದಿವೆ.
ದಕ್ಷಿಣ ರಾಜ್ಯಗಳಲ್ಲಿ ಕೇರಳ ಅತ್ಯಧಿಕ ಆತ್ಮಹತ್ಯೆ ದರವನ್ನು ಲಕ್ಷ ಜನಸಂಖ್ಯೆಗೆ ಶೇ.30.2%ರಷ್ಟು ದಾಖಲಿಸಿದ್ದು; ಆನಂತರ, ತೆಲಂಗಾಣ ಶೇ. 28.6% ಮತ್ತು ತಮಿಳುನಾಡು ಶೇ. 25.9% ಇವೆ. ಐದೂ ದಕ್ಷಿಣ ರಾಜ್ಯಗಳು ರಾಷ್ಟ್ರೀಯ ಸರಾಸರಿಗಿಂತ ಮೇಲೆ ಉಳಿದಿವೆ.
ರಾಷ್ಟ್ರೀಯ ಮಟ್ಟದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಶೇ. 40.6% ರ ದರದೊಂದಿಗೆ ಅತ್ಯಧಿಕ ಆತ್ಮಹತ್ಯೆ ದರ ದಾಖಲಿಸಿವೆ; ಸಿಕ್ಕಿಂ ಶೇ.36.3% ಮತ್ತು ಕೇರಳ ಶೇ.30.2% ಗಳೊಂದಿಗೆ ನಂತರದ ಸ್ಥಾನ ಪಡೆದಿವೆ.
ಗೃಹಿಣಿಯರ ಆತ್ಮಹತ್ಯೆಗಳಲ್ಲಿ ತಮಿಳುನಾಡು ಅತ್ಯಧಿಕ ಸಂಖ್ಯೆ ದಾಖಲಿಸಿದ್ದು, ರಾಷ್ಟ್ರೀಯ ಒಟ್ಟು 22,113ರ ಪೈಕಿ 2,821 ಸಾವುಗಳನ್ನು ವರದಿ ಮಾಡಿದೆ. 79 ಮರಣಗಳನ್ನು ಒಳಗೊಂಡ 32 ಸಾಮೂಹಿಕ ಅಥವಾ ಕೌಟುಂಬಿಕ ಆತ್ಮಹತ್ಯೆ ಪ್ರಕರಣಗಳನ್ನೂ ಆ ರಾಜ್ಯ ದಾಖಲಿಸಿದ್ದು, ಇದು ದೇಶದಲ್ಲಿ ಅತ್ಯಧಿಕವಾಗಿದೆ.
ನಿರುದ್ಯೋಗಿ ವ್ಯಕ್ತಿಗಳ ಆತ್ಮಹತ್ಯೆಗಳಲ್ಲಿ ಕೇರಳ ಅತ್ಯಧಿಕ ಸಂಖ್ಯೆ ಹೊಂದಿದ್ದು, 2,370 ಮರಣಗಳನ್ನು ದಾಖಲಿಸಿದೆ. ಇದು ಆ ವರ್ಗದಲ್ಲಿ ರಾಷ್ಟ್ರೀಯ ಒಟ್ಟಿನ ಶೇ. 16% ಆಗಿದೆ ಎಂದು ವರದಿ ತಿಳಿಸಿದೆ. ಪ್ರಮುಖ ನಗರಗಳ ಪೈಕಿ, ದೆಹಲಿಯು ಹಿಂದಿನ ವರ್ಷಕ್ಕಿಂತ ಶೇ. 7.2% ಇಳಿಕೆ ಆಗಿದ್ದರೂ ಅತ್ಯಧಿಕ 2,905 ಆತ್ಮಹತ್ಯೆಗಳನ್ನು ವರದಿ ಮಾಡಿದೆ. ಬೆಂಗಳೂರು 2,403 ಆತ್ಮಹತ್ಯೆಗಳನ್ನು ದಾಖಲಿಸಿದರೆ, ಚೆನ್ನೈ 1,525 ಪ್ರಕರಣಗಳನ್ನು ವರದಿ ಮಾಡಿದೆ.
ಮುಖ್ಯ ನಗರಗಳಲ್ಲಿ, ಕೊಲ್ಲಂ ಶೇ. 51.5%ದೊಂದಿಗೆ ಅತ್ಯಧಿಕ ಆತ್ಮಹತ್ಯೆ ದರ ದಾಖಲಿಸಿದ್ದು; ಆನಂತರ, ರಾಜ್‌ಕೋಟ್ ಶೇ. 39.3% ರಿಂದ ಎರಡನೇ ಸ್ಥಾನ ಪಡೆದಿದೆ. NCRB ಮಾಹಿತಿ ಪ್ರಕಾರ, ಒಟ್ಟು ಮರಣಗಳಲ್ಲಿ ಶೇ. 33.5%ದೊಂದಿಗೆ ಕೌಟುಂಬಿಕ ಸಮಸ್ಯೆಗಳು ರಾಷ್ಟ್ರೀಯ ಮಟ್ಟದಲ್ಲಿ ಆತ್ಮಹತ್ಯೆಗಳಿಗೆ ಪ್ರಮುಖ ಕಾರಣವಾಗಿ ಉಳಿದಿದೆ. ಆನಂತರದ ಕಾರಣ ಅನಾರೋಗ್ಯ (ಶೇ. 17.9%) ವಾಗಿದೆ. ಮಾದಕ ವ್ಯಸನ ಅಥವಾ ಮದ್ಯ ಚಟ, ವಿವಾಹ ಸಂಬಂಧಿ ಸಮಸ್ಯೆಗಳು ಮತ್ತು ಪ್ರೇಮ ಸಂಬಂಧಗಳು ಇತರ ಪ್ರಮುಖ ಕಾರಣಗಳಾಗಿವೆ. ದಿನಗೂಲಿ ಕಾರ್ಮಿಕರು ಆತ್ಮಹತ್ಯೆ ಬಲಿಪಶುಗಳಲ್ಲಿ ಅತಿ ದೊಡ್ಡ ಶೇ. 31% ಶೇಕಡಾದೊಂದಿಗೆ ರೂಪಿಸಿದ್ದು, ಆನಂತರ ಗೃಹಿಣಿಯರು ಶೇ. 13% ಮತ್ತು ಸ್ವಯಂ ಉದ್ಯೋಗಿಗಳು ಶೇ. 10.5% ಇದ್ದಾರೆ.
18–30 ಮತ್ತು 30–45 ವಯೋಮಾನದವರು ಸಮಗ್ರವಾಗಿ ದೇಶದ ಒಟ್ಟು ಆತ್ಮಹತ್ಯೆಗಳ ಸುಮಾರು ಮೂರನೇ ಎರಡು ಭಾಗಕ್ಕೆ ಕಾರಣವಾಗಿವೆ ಎಂದೂ ವರದಿ ತೋರಿಸಿದೆ. ಪುರುಷ ಬಲಿಪಶುಗಳು ಒಟ್ಟು ಪ್ರಕರಣಗಳ ಶೇ. 73.5% ಭಾಗ ಹೊಂದಿದ್ದಾರೆ.
2024ರಲ್ಲಿ ಕೃಷಿ ವಲಯಕ್ಕೆ ಸಂಬಂಧಿಸಿದ ಒಟ್ಟು 10,546 ಜನರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರಲ್ಲಿ 4,633 ರೈತರು ಮತ್ತು ಕೃಷಿಕರು ಹಾಗೂ 5,913 ಕೃಷಿ ಕಾರ್ಮಿಕರು ಸೇರಿದ್ದಾರೆ. ಮಹಾರಾಷ್ಟ್ರವು ರೈತ ಮತ್ತು ಕೃಷಿಕ ಆತ್ಮಹತ್ಯೆಗಳಲ್ಲಿ ಅತ್ಯಧಿಕ ಶೇ. 36.1% ಪಾಲು ಹೊಂದಿದ್ದು, ಆನಂತರ ಕರ್ನಾಟಕ ಶೇ. 28.1% ದೊಂದಿಗೆ ಸ್ಥಾನ ಪಡೆದಿದೆ.
ಆತ್ಮಹತ್ಯೆಗಳಿಗೆ ತಡೆಗಟ್ಟಲು ಕಾರ್ಯಯೋಜನೆಯನ್ನು ರೂಪಿಸುವುದು, ಆತ್ಮಹತ್ಯೆಗಳಿಗೆ ಕಡಿವಾಣ ಹಾಕಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಸರಕಾರದ ಜವಾಬ್ದಾರಿ ಆಗಿದೆ; ಸರಕಾರದೊಂದಿಗೆ, ಇನ್ನಿತರ ಸಾಮಾಜಿಕ ಸಂಘ-ಸಂಸ್ಥೆಗಳದ್ದೂ ಜವಾಬ್ದಾರಿ ಆಗಿದೆ. ಅದರೊಂದಿಗೆ, ಚಿಂತೆ-ಖಿನ್ನತೆಗೆ ಒಳಗಾಗಿದವರ ಸಂಬಂಧಿಕರ, ಮಿತ್ರವೃಂದದವರ ಹಾಗು ನೆರೆಹೊರೆಯವರದ್ದೂ ಜವಾಬ್ದಾರಿಯಾಗಿದೆ. ಖಿನ್ನತೆಯ ಲಕ್ಷಣಗಳನ್ನು ತೋರಿಸುತ್ತಿರುವನ ಆತ್ಮಹತ್ಯೆಯನ್ನು ತಡೆಯಲು ಎಲ್ಲರು ಮುಂದಾಗಬೇಕು.
ಸಾಕ್ಷರತೆಗಾಗಿ-ವಾಣಿಜ್ಯಕ್ಕಾಗಿ ಹಸರುವಾಸಿಯಾಗಿರುವ ನಗರಗಳಲ್ಲೇ ಆತ್ಮಹತ್ಯೆಗಳ ಸಂಖ್ಯೆಗಳು ಹೆಚ್ಚಾಗುತ್ತಿರುವುದು ವಿಪರ್ಯಾಸವಾಗಿದೆ. ಆತ್ಮಹತ್ಯೆಗಳನ್ನು ಈಗಲೇ ಚಿವುಟಿ ಹಾಕದೆ ಇದ್ದರೆ, ಈ ಪಿಡುಗು ಇನ್ನು ಮುಂದೆ ಇಡೀ ದೇಶವನ್ನೇ ಕಾಡುವ ಅಪಾಯವಿದೆ.
ಮಾಹಿತಿ ಮೂಲ: The News Minute















































