ತಶ್ರೀಫಾ ಜಹಾನ್,
ಪತ್ರಿಕೋದ್ಯಮ ವಿದ್ಯಾರ್ಥಿನಿ,
ಸೈಂಟ್ ಫಿಲೋಮಿನಾ ಕಾಲೇಜು, ಪುತ್ತೂರು

ಸ್ನೇಹ, ಕರುಣೆ ಅನುಕಂಪ…ಮೊದಲಾದವುಗಳು ದೇವನು ಸ್ತ್ರೀಗೆ ನೀಡಿದ ವಿಶೇಷತೆಗಳಾಗಿವೆ. ಹೆಣ್ಣಿನ ಪ್ರೀತಿ ಮತ್ತು ನಿಶ್ಚಯದಾಢ್ರ್ಯವೇ ಕುಟುಂಬದ ಶಕ್ತಿ. ಕುಟುಂಬದಲ್ಲಿ ಮಾತ್ರವಲ್ಲ ಸಮಾಜದ ಹಲವು ರಂಗಗಳಲ್ಲೂ ಆಕೆ ತನ್ನ ಛಾಪನ್ನು ಮೂಡಿಸಿದ್ದಾಳೆ. ಸಾಮಥ್ರ್ಯ, ಯೋಗ್ಯತೆಗೆ ಅನುಗುಣವಾಗಿ ಮಹಿಳೆಯ ಕೊಡುಗೆಗಳು ಸಮಾಜದ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸಿದೆ. ಹಾಗಿದ್ದರೂ ಕೆಲವು ದಿನಗಳನ್ನು ನೆನಪಿಸಿಕೊಂಡು ಸ್ಥಾನಮಾನ, ಹಕ್ಕು, ಗೌರವಗಳನ್ನು ಪಡೆಯಲು ಹೋರಾಡಬೇಕಾದ ಪರಿಸ್ಥಿತಿ ಸಂಜಾತವಾಗಿದೆ. ಮಾನಸಿಕ ಹಾಗೂ ದೈಹಿಕ ಹಿಂಸೆಗಳು ದಿನಂಪ್ರತಿ ಮಹಿಳೆಯನ್ನು ಹಿಂಡಿ ಹಿಪ್ಪೆಯಂತೆ ಮಾಡಿದೆ.

ಈ ಬಾರಿಯ ಬಜೆಟ್‍ನಲ್ಲಿ ಮಹಿಳಾ ರಕ್ಷಣೆಗಾಗಿ 1287 ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ. ಮಹಿಳಾ ರಕ್ಷಣೆಗಾಗಿ ಹೊಸ-ಹೊಸ ಯೋಜನೆಗಳು ಹಾಗು ಅದಕ್ಕೆ ಬೃಹತ್ ಮೊತ್ತವನ್ನು ವರ್ಷಂಪ್ರತಿ ತೆಗೆದಿರಿಸಲಾಗುತ್ತದೆ. ಹಾಗಿದ್ದರೂ ಹೆಣ್ಣಿನ ಆರ್ತನಾದ ಎಲ್ಲೆಲ್ಲೂ ಕೇಳಿ ಬರುತ್ತಲೇ ಇದೆ. ಮಹಿಳೆಗೆ ತನಗೆ ಸಮಾಜದಲ್ಲಿ ಗೌರವ ಸ್ಥಾನಮಾನವನ್ನು ಗಳಿಸಲು ಮಹಿಳಾ ದಿನದಂದು ಒಂದಾಗುವ ಪರಿಸ್ಥಿತಿ ಬಂದಿರುವ ಕಾರಣವಾದರೂ ಏನು?

ಇದಕ್ಕೆ ಕಾರಣವನ್ನು ಹುಡುಕುವಾಗ ಅದು ಕುಟುಂಬಕ್ಕೆ ಹೋಗಿ ತಲುಪುತ್ತದೆ. ಹೆಣ್ಣಿನ ವ್ಯಕ್ತಿತ್ವವನ್ನು ಅಂಗೀಕರಿಸುವ ಮನೋಭಾವ ನಮ್ಮ ಕುಟುಂಬದಲ್ಲಿ ಬೆಳೆದು ಬಂದಿಲ್ಲ. ಅವಳಿಗೆ ತ್ಯಾಗಕ್ಕೆ ಮನ್ನಣೆ ನೀಡಿ, ಅವಳ ಸಾಮಥ್ರ್ಯಗಳನ್ನು ಅರ್ಥ ಮಾಡಿಕೊಂಡು, ಅವಳಿಗೆ ಸಹಕಾರ, ಸಹಾಯ ಮಾಡಿ ಬದುಕುವ ಕೌಟುಂಬಿಕ ವಾತಾವರಣ ಇನ್ನೂ ಅಪೂರ್ಣವಾಗಿದೆ. ಕುಟುಂಬವೆಂಬ ಸಮಾಜದ ಸಣ್ಣ ಘಟಕದಲ್ಲಿ ಕಂಡು ಬರುತ್ತಿರುವ ಬಿರುಕುಗಳೇ ಸಮಾಜವೆಂಬ ದೊಡ್ಡ ಘಟಕಕ್ಕೆ ತಲುಪುವಾಗ ಗಂಭೀರ ಸಮಸ್ಯೆಗಳಾಗಿ ಪರಿಣಮಿಸುತ್ತದೆ. ಪವಿತ್ರವಾದ ಮಾನ ಮರ್ಯಾದೆಗಳು ಮನೆಯಲ್ಲೂ, ಊರವರ ನಡುವೆಯೂ ಹರಾಜಾಗುತ್ತದೆ.

ತನಗೆ ಹೆಚ್ಚಿನ ಬಾಧ್ಯತೆ ಯಾರೊಂದಿಗೆ ಎಂಬ ಪ್ರಶ್ನೆಗೆ, ‘ತನ್ನ ಮಾತೆಯೊಂದಿಗೆ’ ಎಂಬುವುದು ಪೈಗಂಬರರ ಉತ್ತರವಾಗಿತ್ತು. ಇಂತಹ ಮಾತೆಯನ್ನು ನಾವು ನಿರ್ಲಕ್ಷಿಸುತ್ತಿದ್ದೇವೆ. ಜೋಡಿಯೆಂದು ಹೇಳಿ ದೇವನು ಒಟ್ಟುಗೂಡಿಸಿದವಳನ್ನೇ ಸಂಶಯದಿಂದ ಕೊಲ್ಲಲಾಗುತ್ತಿದೆ. ಹೆಣ್ಣು ಮಕ್ಕಳು ಸ್ವರ್ಗಕ್ಕೆ ದಾರಿಯೆಂಬ ಪ್ರವಾದಿ ವಚನಗಳಿದ್ದೂ ಅವಳ ಮೇಲೆ ಅತ್ಯಾಚಾರವೆಸಗಲು ತಂದೆಯೂ ಹೇಸದಂತಹ ಪರಿಸ್ಥಿತಿ ಇದೆ. ಸಹಕಾರ್ಯಕರ್ತೆಯೂ, ಸಹಪ್ರಯಾಣಿಕಳೂ ಇಂದು ಕಾಮತೀರಿಸುವ ವಸ್ತುವಾಗಿ ಸಮಾಜದಲ್ಲಿ ಬದಲಾಗಿದ್ದಾಳೆ.
ಕರುಣೆ ಬತ್ತಿಹೋದ ಸಮಾಜವೆಂದು ತಿಳಿದ ಕಾರಣದಿಂದಲೋ ಏನೋ ಮಹಿಳೆಯೂ ಉತ್ತಮ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿಲ್ಲ. ದೇವದತ್ತವಾದ ವಿಶೇಷ ಗುಣಗಳು ಅವಳಿಂದ ಮಾಯವಾದಂತೆ ಅನಿಸುತ್ತಿದೆ. ಗರ್ಭಿಣಿಯಾದ ತನ್ನಂತಹ ಹೆಣ್ಣೊಬ್ಬಳು ಬಸ್ಸಿಗೆ ಹತ್ತಿ ಕುಳಿತುಕೊಳ್ಳಲು ಸೀಟಿಲ್ಲದೆ ಕಷ್ಟಪಡುವುದೂ, ವಯಸ್ಸಾದ ಮಹಿಳೆ ಸ್ಥಳಕ್ಕಾಗಿ ತಡಕಾಡುವಾಗ ನಿರ್ಲಿಪ್ತರಾಗಿರುವುದು ಕಂಡು ಬರುತ್ತದೆ. ಮಹಿಳೆ ಕೂಡ ತನ್ನ ಹಕ್ಕಿನ ಕುರಿತು ಮಾತ್ರ ಚಿಂತಿಸುತ್ತಿದ್ದಾಳೆ.

ಕುಟುಂಬ ಹಾಗೂ ಸಮಾಜದ ಹೊಣೆಗಾರಿಕೆಗಿಂತ ತಾನು ಎಂಬ ವ್ಯಕ್ತಿತ್ವದ ಹಕ್ಕುಗಳಿಗಾಗಿ ಮಾತ್ರ ಧ್ವನಿಯೆತ್ತಲು ಮಹಿಳಾ ದಿನಾಚರಣೆಯೂ ವೇದಿಕೆಯಾಗುತ್ತಿದೆ. ತನಗೆ ಗೌರವಾದರಗಳನ್ನು ನೀಡದ ಸಮಾಜಕ್ಕೆ ಮಹಿಳೆಯ ಪ್ರತಿಕ್ರಿಯೆಯೂ ಭಿನ್ನವಲ್ಲ. ಸಮಾನ ವೇತನ ಸಿಗದೆ ಉದ್ಯೋಗ ನಿರ್ವಹಿಸಬೇಕಾದ ಅನಿವಾರ್ಯತೆ ಮತ್ತು ಉದ್ಯೋಗ ರಂಗದಲ್ಲಿ ಸಮಾನ ಅವಕಾಶಗಳು ಸಿಗದೆ ಉದ್ಯೋಗ ವಂಚಿತಳಾಗುವ ಹೆಣ್ಣು, ಹೊರಗೆ ಮತ್ತು ಮನೆಯೊಳಗೂ ದುಡಿಯುವ ಯಂತ್ರವಾಗುವ ಪರಿಸ್ಥಿತಿ. ಹೀಗೆ ಹಲವಾರು ರೀತಿ ನೋವು, ಆಯಾಸ, ವೇದನೆ ಹೆಣ್ಣು ಇಂದು ಅನುಭವಿಸುತ್ತಿದ್ದಾಳೆ. ಪುರೋಹಿತ್ವದ ಕಾಠಿಣ್ಯತೆಯನ್ನು ದೂರವಿರಿಸಿಯೂ ಆಧುನಿಕತೆಯ ಉತ್ತುಂಗತೆಗೆ ತಲುಪದಿದ್ದರೂ ಮಕ್ಕಳನ್ನು ಕೊಲ್ಲುವ ಅಮ್ಮಂದಿರು, ಕಾಮುಕನೊಂದಿಗೆ ಓಡಿ ಹೋಗುವ ಪತ್ನಿಯೂ ಆಗಿ ಮಹಿಳೆ ಬದಲಾಗುವುದಕ್ಕೆ ಕುಟುಂಬದೊಂದಿಗಿನ ಅವಳ ಹೊಣೆಗಾರಿಕೆಯನ್ನು ಮರೆಯುವಂತೆ ಮಾಡಲು ಪ್ರೇರೇಪಿಸುವ ವಾತಾವರಣ ನಿರ್ಮಾಣವಾಗಿರುವುದು ಕಾರಣವಾಗಿದೆ. ಸುವ್ಯವಸ್ಥಿತವಾದ ಕುಟುಂಬ ವ್ಯವಸ್ಥೆಯನ್ನು ಕೆಡವಿ ಹೊರಬರುವ ಹೆಣ್ಣು ಮತ್ತು ಗಂಡಿಗೆ ಒಂದು ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯವಿಲ್ಲ ಎಂಬುವುದು ವಾಸ್ತವಿಕತೆಯಾಗಿದೆ.

ಆದ್ದರಿಂದ ಕುಟುಂಬದ ಪ್ರತಿಯೊಬ್ಬ ಹೆಣ್ಣು ಮತ್ತು ಗಂಡು ನ್ಯಾಯಯುತವಾಗಿ ತಮ್ಮ ಹೊಣೆಗಾರಿಕೆಯನ್ನು ವಹಿಸಿಕೊಂಡು, ಆತ್ಮಾರ್ಥವಾಗಿ ಅದನ್ನು ನಿರ್ವಹಿಸುವಾಗ ಮಾತ್ರ ಅದು ಸಮಾಜದಲ್ಲಿ ಪ್ರತಿಫಲಿಸುತ್ತದೆ. ನಮ್ಮ ಹಕ್ಕು ಮತ್ತು ನ್ಯಾಯಕ್ಕಾಗಿ ಹೋರಾಡಿದ ದಿನಗಳನ್ನು ಸ್ಮರಿಸುವಾಗ ಲಿಂಗಭೇದವಿಲ್ಲದೆ ಈ ಸಮಾಜದ ಬಗ್ಗೆ ಸ್ಪಷ್ಟ ನಿಲುವು ನಮ್ಮ ಮುಂದಿರಬೇಕು.

ರಾತ್ರಿ ವೇಳೆಯಲ್ಲಿ ಒಂಟಿಯಾಗುವ ಹೆಣ್ಣನ್ನು, ಸಹೋದರಿಯ ಕೈಹಿಡಿದು ಸಾಂತ್ವನ ವೀಯುುವ ಸಹೋದರರಾಗಿ ಗಂಡು ಮಕ್ಕಳನ್ನು ಬೆಳೆಸುವ ಕುಟುಂಬದಿಂದ ಬರುವ ಓರ್ವ ಗಂಡಿಗೆ ಖಂಡಿತವಾಗಿಯೂ ಯಾವುದೇ ಹೆಣ್ಣಿನ ಅಭಿಮಾನವನ್ನು ಚಿವುಟಲು ಸಾಧ್ಯವಿಲ್ಲ. ಖ್ಯಾತ ಸಾಹಿತಿ ಮಲಯಾಳದ ಕಮಲಾ ಸುರಯ್ಯಾರ ಮಾತು ಖಂಡಿತ ಇಲ್ಲಿ ಪ್ರಸ್ತಾವಿಸುವುದು ಸೂಕ್ತವೆನಿಸುತ್ತದೆ. “ಪ್ರತಿಯೊಬ್ಬ ತಾಯಿಗೂ ತನ್ನ ಮಗ ಯಾವುದೇ ಹೆಣ್ಣು ಮಗಳ ಗೌರವಕ್ಕೆ ಕುಂದು ತರಲಾರ ಎಂದು ಧೈರ್ಯದಿಂದ ಹೇಳಲು ಸಾಧ್ಯವಾದರೆ ಈ ಸಮಾಜದಲ್ಲಿ ಹೆಣ್ಣಿನ ಮೇಲಿನ ದೌರ್ಜನ್ಯ ಕೊನೆಗೊಳ್ಳುವುದರಲ್ಲಿ ಸಂಶಯವಿಲ್ಲ.” ಮಹಿಳಾ ದಿನಾಚರಣೆಗಳು ಅತ್ಯಾಚಾರಕ್ಕೊಳಗಾಗಿ, ಕೊಲೆಗೈಯಲ್ಪಟ್ಟ ನತದೃಷ್ಟ ಸಹೋದರಿಯರಿಗೆ ಮೇಣದ ಬತ್ತಿ ಹಚ್ಚಿ ಶ್ರದ್ಧಾಂಜಲಿ ಅರ್ಪಿಸಿ ಅವರನ್ನು ನೆನಪಿಸುವ ಮತ್ತು ತನ್ನ ಹಕ್ಕಿಗಾಗಿ ಘೋಷಣೆ ಕೂಗುವ ದಿನವಾಗಿ ಸೀಮಿತಗೊಳಿಸುವುದಲ್ಲ. ನಾಗರಿಕತೆಯನ್ನು ಮುಂದುವರಿಸುತ್ತಿರುವ ಪ್ರೀತಿ, ಸ್ನೇಹ, ಅನುಕಂಪವು ಅವಳ ಶಕ್ತಿಯೆಂದೂ, ಅವಳ ತ್ಯಾಗ, ಪರಿಶ್ರಮವನ್ನು ಗೌರವಿಸಿ ಸಮಾಜದಲ್ಲಿ ಒಂದಾಗಿ ಮುನ್ನಡೆಯಲು ಶ್ರಮಿಸಬೇಕಾದುದು ಪ್ರತಿಯೊಬ್ಬರ ಕರ್ತವ್ಯ.

 

LEAVE A REPLY

Please enter your comment!
Please enter your name here