ಮಂಗಳೂರಿನ ಬಜಾಲ್ ಪಕ್ಕಲಡ್ಕದ ಸ್ನೇಹ ಪಬ್ಲಿಕ್ ಸ್ಕೂಲ್ ನ ಮಕ್ಕಳು ನಡೆಸಿದ ಸಂದರ್ಶನ

 (ರಾಷ್ಟ್ರಮಟ್ಟದ ಕ್ರೀಡಾಪಟುವಾಗಿ ಅಂತರಾಷ್ಟ್ರಮಟ್ಟದಲ್ಲೂ ಜಿಗಿದು ಹಲವಾರು ಪ್ರಶಸ್ತಿಗಳನ್ನು ಮಡಿಲಿಗೇರಿಸಿಕೊಂಡ ಮಂಗಳೂರಿನ ಕುವರಿ ಸಹನಾ ಕುಮಾರಿಯವರು. ಹೈಜಂಪ್ ಕ್ರೀಡಾಪಟುವಾಗಿ ನಮ್ಮ ನಾಡಿಗೂ ನಮ್ಮ ದೇಶಕ್ಕೂ ಹೆಸರು ತಂದುಕೊಟ್ಟವರು ಮೂಲತಾ ಮಂಗಳೂರಿನ ಸೋಮೇಶ್ವರದ ಕೋಟೆಕಾರಿನವರೇ ಆದ ತನ್ನ ಸಾಧನೆಯೊಂದಿಗೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡು ಪ್ರಸಿದ್ಧರಾದದ್ದು ನಮ್ಮ ಹೆಮ್ಮೆ. ಮಂಗಳೂರಿನ ಬಜಾಲ್ ಪಕ್ಕಲಡ್ಕದ ಸ್ನೇಹ ಪಬ್ಲಿಕ್ ಸ್ಕೂಲ್ Sports Clubನ ವಿಭಾಗದ ಮಕ್ಕಳು ಅವರನ್ನು ಸಂದರ್ಶಿಸಿದಾಗ ಜೀವನ,ಸಾಧನೆ ಮತ್ತು ಗುರಿಯ ಬಗ್ಗೆ ಹಲವಾರು ವಿಚಾರಗಳನ್ನು ಹಂಚಿದರು.)

 ನಿಮ್ಮ ಬಾಲ್ಯ ಮತ್ತು ವಿದ್ಯಾಭ್ಯಾಸ?

ಹುಟ್ಟಿ ಬೆಳೆದದ್ದು ಕೋಟೆಕಾರು ಪ್ರದೇಶದಲ್ಲಾದ್ದರಿಂದ ನನ್ನ ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢ ಶಿಕ್ಷಣ ಆನಂದಾಶ್ರಮ ಪ್ರೌಢಶಾಲೆಯಲ್ಲಿ ನಡೆಯಿತುP.U.C. ಶಿಕ್ಷಣವನ್ನು ಮೈಸೂರಿನ Sports ಹಾಸ್ಟೆಲ್‍ನಲ್ಲಿ ಮುಗಿಸಿ ಗೋಕರ್ಣಾಥೇಶ್ವರದಲ್ಲಿ ಪದವೀಧರ ಶಿಕ್ಷಣವನ್ನು ಪೂರ್ತಿಗೊಳಿಸಿದ್ದೇನೆ. ಬಾಲ್ಯದ ದಿನಗಳು ಆಟ ಪಾಠದ ಜೊತೆಗೆ ಬಹಳ ಕಷ್ಟದಿಂದ ಕೂಡಿತ್ತಾದರೂ ಏನಾದರೂ ಸಾಧಿಸಬೇಕೆಂಬ ಛಲವನ್ನು ಹೊಂದಿದ್ದೆ.

 ಕ್ರೀಡೆಯಲ್ಲೇ ಹೆಚ್ಚಿನ ಆಸಕ್ತಿ ಬರಲು ಕಾರಣ?

ನಾನು ಶಾಲೆಯಲ್ಲಿರುವಾಗ ಪ್ರತಿಯೊಂದು ವಿಭಾಗದ ಕ್ರೀಡೆಯಲ್ಲಿ ಸಹ ಆಸಕ್ತಿಯಿಂದ ಭಾಗವಹಿಸುತ್ತಿದ್ದೆ. ಪಾಠಕ್ಕೂ ಅಷ್ಟೇ ಪ್ರಾಮುಖ್ಯತೆಯನ್ನು ನೀಡುತ್ತಿದ್ದೆ. ಕಬಡ್ಡಿ,ಖೋಖೋ, ಓಟ, ಜಿಗಿತ ಮುಂತಾದವುಗಳಿಗೆ ಉತ್ಸಾಹದಿಂದ ಭಾಗವಹಿಸುತ್ತಿದ್ದೆ. ನನ್ನ ತಂದೆIndian force ನಲ್ಲಿ ಉದ್ಯೋಗದಲ್ಲಿದ್ದರು. ಅವರೇ ನನಗೆ ಹೈಜಂಪ್ ತರಬೇತಿ ನೀಡಿದರು. ಬಾಲ್ಯದಲ್ಲಿ ನನಗೆ ಟ್ರಿಪಲ್ ಜಂಪ್‍ನಲ್ಲಿ ಸ್ವಲ್ಪ ಆಸಕ್ತಿ ಹೆಚ್ಚಿತ್ತು. ಮನೆಯ ವಾತಾವರಣ ಸಹ ಕ್ರೀಡಾಮಯವಾಗಿತ್ತು. ಅಕ್ಕ ಹರ್ಷಿಣಿ, ಅಪ್ಪ ಕ್ರೀಡೆಗೆ ಹೆಚ್ಚು ಒತ್ತು ಕೊಡುತ್ತಿದ್ದರು. ಆದ್ದರಿಂದ ನನ್ನ ಒಲವು ಸಹ ಆಕಡೆ ಆಯಿತು.

 ನಿಮ್ಮ ಸಾಧನೆಗೆ ಯಾರೆಲ್ಲ ಪ್ರೋತ್ಸಾಹ ನೀಡಿದ್ದರು?

ಪ್ರಥಮವಾಗಿ ಹೇಳುವುದಾದರೆ ತಂದೆ ತಾಯಿಯವರ ಹೆಚ್ಚಿನ ಪ್ರೋತ್ಸಾಹವೇ ನನ್ನ ಸಾಧನೆಗೆ ಶಕ್ತಿ. ಅವರೇ ಎಲ್ಲಾ ಮತ್ತು ಮದುವೆಯ ನಂತರ ನನಗೆ ಪತಿಯವರ ಪ್ರೋತ್ಸಾಹವೂ ಸಿಕ್ಕಿತು. ಅವರು ಸಹ ಕ್ರೀಡಾಪಟು. ವಿದ್ಯಾರ್ಥಿಯಾಗಿದ್ದಾಗ ನಮ್ಮ ಪಿ.ಟಿ. ಮಾಸ್ಟರ್, ಅಕ್ಕ ನಾನು ಪ್ರತಿಯೊಂದು ಸ್ಪರ್ಧೆಯಲ್ಲಿ ಭಾಗವಹಿಸುವಾಗಲೂ ತಾಯಿ ನನ್ನ ಜೊತೆಯಿದ್ದು ಶಕ್ತಿ ತುಂಬುತ್ತಿದ್ದರು. Dgreeಕಲಿಯುವಾಗ P.T. ಮಾಸ್ಟರ್ ಆಗಿದ್ದ ಪುರುಷೋತ್ತಮ N.C.C. ಮಾಸ್ಟರ್ ಜಲಂಧರ್ ರೈ ತುಂಬಾ ಸಹಕರಿಸಿದರು. ಎಲ್ಲಾ ವಿಷಯದಲ್ಲಿ ತಂದೆಯು ಸಂಪೂರ್ಣ ಸಹಕರಿಸಿದ್ದರು.

 ಕ್ರೀಡೆಯಲ್ಲಿ ಸಾಧಿಸಬೇಕಾದರೆ ಹಲವು ರೀತಿಯಲ್ಲಿ ವೆಚ್ಚಗಳು ಬೇಕಾಗುತ್ತೆ ಆರ್ಥಿಕವಾಗಿ ಬಲ ಇದ್ದರೆ ಮುಂದೆ ಬರಬಹುದಲ್ಲವೇ? ತಮಗೆ ಯಾವ ರೀತಿ ಆರ್ಥಿಕ ಸಹಾಯ ಸಿಗುತ್ತಿತ್ತು?

ನಾವು ಸಾಧಿಸಲು ಹೊರಟರೆ ಆರ್ಥಿಕ ತೊಂದರೆಗಳ ಬಗ್ಗೆ ಆಲೋಚಿಸಬಾರದು. ಯಾರಾದರೂ ನಮಗೆ ಸಹಕರಿಸುತ್ತಾರೆ ಯಾರಿಲ್ಲದಿದ್ದರೆ ದೇವನಿದ್ದಾನೆ ಎಂಬ ಭರವಸೆಯಿರಿಸಬೇಕು. ಇತ್ತೀಚೆಗೆ ಕ್ರೀಡಾಪಟುಗಳಿಗೆ ಸರಕಾರ ತುಂಬಾ ಅನುಕೂಲತೆಗಳನ್ನು ನೀಡಿದೆ. ನನ್ನ ಸಮಯದಲ್ಲಿ ಕಷ್ಟ ಪಟ್ಟರೆ ಸರಕಾರದಿಂದ ದೊಡ್ಡ ಮೊತ್ತವೇನು ಸಿಗುತ್ತಿರಲಿಲ್ಲ. ಆದರೆ ನಮ್ಮ ಪಿ.ಟಿ. ಮಾಸ್ಟರ್,ಶಾಲಾ ಶಿಕ್ಷಕ ವೃಂದದವರು, ಗೆಳೆಯರು, ಹೆಚ್ಚಾಗಿ ನನ್ನ ತಂದೆ ತಾಯಿ ನನ್ನ ಸಾಧನೆಗೆ ಬೆನ್ನೆಲುಬಾಗಿದ್ದರು.

 ಹುಡುಗಿಯರು ಇತ್ತೀಚಿನ ದಿನಗಳಲ್ಲಿ Sports ಗಳಲ್ಲಿ ಆಸಕ್ತಿ ಮೂಡಿಸುತ್ತಿದ್ದು. ಕಾರಣವೇನು?

ಹೌದು, ಹಿಂದಿನ ಕಾಲಕ್ಕೆ ನೋಡಿದರೆ ಹುಡುಗರೇ ಹೆಚ್ಚಾಗಿ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದರು. ಹುಡುಗಿಯರು ಆಸಕ್ತಿ ಮಾಡಿದ್ದರೂ ಕೂಡಾ ಮನೆಯಲ್ಲಿ ಅದಕ್ಕೆ ಯಾವ ರೀತಿಯಲ್ಲಿ ಸಹ ಪ್ರೇರಣೆ ಪ್ರೋತ್ಸಾಹ ನೀಡುತ್ತಿರಲಿಲ್ಲ. ಈಗ ಕಾಲ ಬದಲಾಗಿದೆ. ಹೆಚ್ಚಿನವರು ವಿಧ್ಯಾವಂತರಾಗಿದ್ದಾರೆ. ಮಕ್ಕಳಿಗೆ ತಮ್ಮ ಆಯ್ಕೆಯ ಸ್ವಾತಂತ್ರ್ಯವನ್ನು ನೀಡಿದ್ದಾರೆ. ಗಂಡು ಮಕ್ಕಳನ್ನು ಹೆಣ್ಣು ಮಕ್ಕಳನ್ನು ಸರಿಸಮಾನವಾಗಿ ನೋಡುತ್ತಾರೆ. ಆದ್ದರಿಂದ ಹುಡುಗಿಯರಿಗೆ ಸ್ವತಂತ್ರವಾಗಿ ತನ್ನ ಸಾಧನೆಯತ್ತ ಹೆಜ್ಜೆ ಹಾಕಲು ಸರಕಾರದಿಂದಲೂ ಹಲವಾರು ಸವಲತ್ತುಗಳಿವೆ. ಯಾವುದೇ ಹೆದರಿಕೆಯಿಲ್ಲದೇ ಹುಡುಗಿಯರು ಕ್ರೀಡೆಯತ್ತ ಆಸಕ್ತಿಯನ್ನು ಬೆಳೆಸಿದ್ದಾರೆ.

 ತಾವು ಈ ಹಂತಕ್ಕೆ ಬೆಳೆಯಲು ಕಾರಣವೇನು ಮತ್ತು ತಮ್ಮ ತರಬೇತಿ ಮತ್ತು ತರಬೇತುದಾರರ ಬಗ್ಗೆ ವಿವರಿಸಬಹುದೇ?

ನನ್ನಲ್ಲಿ ಒಂದು ಗುರಿಯಿತ್ತು. ಏನಾದರೂ ಸಾಧಿಸಿ ಈ ನಾಡಿಗೆ, ದೇಶಕ್ಕೆ ಕೊಡುಗೆ ನೀಡಬೇಕೆಂದು ಅದರ ಜೊತೆ ನನ್ನ ಮನೆಯವರಿಂದಲೂ ಶಾಲಾ ಶಿಕ್ಷಕರಿಂದಲೂ ಸಂಪೂರ್ಣ ಸಹಕಾರ ಸಿಕ್ಕಿತು. ನನ್ನ ಪ್ರಥಮ ತರಬೇತುದಾರರಾಗಿ ಶ್ರೀಧರ್ ರೈ ಮಂಗಳೂರಿನವರು. ಶಕುಂತಲಾ ಹೋದ ಸಂದರ್ಭದಲ್ಲಿ ಜಿ.ವಿ. ಗೋವರ್ ಎನ್ನುವವರಿದ್ದರು. ಶಾಲಾ ದಿನಗಳಲ್ಲಿ ಪಿ.ಟಿ. ಮಾಸ್ಟರ್‍ನವರೇ ಇದ್ದರು. ರಾಷ್ಟ್ರಮಟ್ಟಕ್ಕೆ ತಲುಪಿದಾಗ ಸರಕಾರದಿಂದಲೇ ಅದಕ್ಕಾಗಿ ವ್ಯವಸ್ಥೆ ಮಾಡಿಕೊಟ್ಟರು.

 ಕ್ರೀಡೆಯಲ್ಲಿ ಬೆಳೆಯಬೇಕಾದರೆ ಯಾವ ರೀತಿ ಸಜ್ಜುಗೊಳ್ಳಬೇಕು?

ಕ್ರೀಡೆಗೆ ಕಠಿಣ ಪರಿಶ್ರಮ ಅತ್ಯಗತ್ಯ. ಮೊದಲನೆಯದಾಗಿ ನಮ್ಮ ದಿನನಿತ್ಯ ಆಹಾರ ಕ್ರಮವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಉತ್ತಮವಾಗಿ ಊಟಮಾಡಬೇಕು. ವ್ಯಾಯಾಮಗಳನ್ನು ಮಾಡುತ್ತಲಿರಬೇಕು. ಇತ್ತೀಚಿನ ದಿನಗಳಲ್ಲಿ ಮೊಬೈಲ್, ಗೇಮ್ಸ್, ಫಿಲ್ಮ್,ಫೇಸ್‍ಬುಕ್, ವಾಟ್ಸಪ್‍ಗಳಲ್ಲಿ ಮಕ್ಕಳು ಕಾಲಕಳೆಯುತ್ತಿದ್ದಾರೆ. ಅಂತಹವುಗಳಿಗೆ Busy ಆದರೆ ಸಾಧಿಸುವುದು ಬಹಳ ಕಷ್ಟ. ನಾವು ಸಣ್ಣವರಿರುವಾಗ ಬೆಳಿಗ್ಗೆ 4ಘಂಟೆಗೆ ಎದ್ದು ನಾವೇ ಮನೆ ಸ್ವಚ್ಛಗೊಳಿಸಿ ಊಟ ಮಾಡಿ ಮಂಗಳಾ ಸ್ಟೇಡಿಯಂಗೆ ಹೋಗುತ್ತಿದ್ದೆವು. ಆ ಕಾಲದಲ್ಲಿ ನಮ್ಮ ಪರಿಸರಕ್ಕೆ ಎರಡೇ ಬಸ್ಸು.6ಘಂಟೆಗೆ ತರಬೇತಿ ಮುಗಿಸಿ ನಂತರ ಕಾಲೇಜಿಗೆ ಹೋಗಿ ನಂತರ 5ಘಂಟೆಗೆ ಮಂಗಳಾ ಸ್ಟೇಡಿಯಂಗೆ ತರಬೇತಿಗಾಗಿ ಹೋಗುತ್ತಿದ್ದೆವು. ಮತ್ತೆ ಮನೆಗೆ ಹಿಂತಿರುಗುವುದು ರಾತ್ರಿ ಎಂಟು ಘಂಟೆಗೆ ಹೆಚ್ಚಿನ ಸಮಯ ನಡೆಯುವುದರಲ್ಲೇ ಸಾಗುತ್ತಿದ್ದವು. ಕಠಿಣ ಪರಿಶ್ರಮವಿದ್ದರೆ ಸಾಧಿಸಲು ಸಾಧ್ಯವಿದೆ. ನಾವು ಬೆಳೆಯುತ್ತಿದ್ದಂತೆ ನಮ್ಮ ಬುದ್ಧಿಯನ್ನು ಬೆಳೆಸಬೇಕು. ಅನಗತ್ಯವಾಗಿ ಟಿ.ವಿ.,ಮೊಬೈಲ್‍ಗಳಿಂದ ದೂರವಿರಬೇಕು. ಮಂಗಳೂರು ಬೆಂಗಳೂರಿನಂತಹ ನಗರಗಳಲ್ಲಿ ಹೆಚ್ಚಿನ ಮಕ್ಕಳು ಬುದ್ಧಿ ಬೆಳೆಯುತ್ತಿದ್ದಂತೆ ಬದಲಾಗುತ್ತಿರುತ್ತಾರೆ. ಅವುಗಳಿಂದ ತಪ್ಪಿಸಿಕೊಳ್ಳಲು ಕ್ರೀಡಾ ಮನೋಭಾವ ಬೆಳೆಸಬೇಕು. ಬಾಲ್ಯದಲ್ಲಿ ಹೆಚ್ಚು ಊಟ ಮಾಡಬೇಕು. ಆರೋಗ್ಯವಂತರಾಗಬೇಕು. ಅದೇ ಕ್ರೀಡೆಗಿರುವ ಪ್ರಮುಖ ಅಸ್ತ್ರ.

 ನಿಮ್ಮ ಸಾಧನೆಗೆ ಸಿಕ್ಕಿರುವ ಫಲಗಳನ್ನು ತಿಳಿಸುವಿರಾ?

ಸದ್ಯಕ್ಕೆ ಮುಂದಿನ ಸಾಧನೆಗಳ ಬಗ್ಗೆ ಏನೂ ಇಟ್ಟಿಲ್ಲ. ಕ್ರೀಡೆಯಲ್ಲಿ ನನ್ನ ಶಾಲಾ ದಿನಗಳಿಂದ ಇಂದಿನ ವರೆಗೆ ತುಂಬ ಪ್ರಶಸ್ತಿಗಳು ಮೆಡಲ್‍ಗಳು ಸಿಕ್ಕಿದೆ. ನನ್ನ International Medalಇರಾನ್‍ನಲ್ಲಿ ಸಿಕ್ಕಿದ್ದು. ಇತ್ತೀಚೆಗೆ ಪಂಜಾಬ್‍ನ ಪಟಿಯಾಲಾದಲ್ಲಿ Federation Cup National First Gold Medal ನಂತರ Asia Championship ಒರಿಸ್ಸಾದಲ್ಲಿ 2017ರಲ್ಲಿMedal ಸಿಕ್ಕಿದೆ. ಕರ್ನಾಟಕ ಯುವ ಪ್ರಶಸ್ತಿ,ಏಕಲವ್ಯ ಪ್ರಶಸ್ತಿ, 2017ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

 

 ಕೊನೆಯದಾಗಿ ಮಕ್ಕಳಿಗೆ ಕಿವಿಮಾತು?

ಮಕ್ಕಳು ಎಲ್ಲಿ ಹೋದರು ಅವರ ನಡತೆ ಸರಿಯಿರಬೇಕು. ನಡೆ ಮತ್ತು ನುಡಿ ಅತಿ ಮುಖ್ಯವಾದದ್ದು. ಕಠಿಣ ಪರಿಶ್ರಮದಿಂದ ಫಲ ಸಿಗುತ್ತದೆ. ಮೊದಲನೆಯದಾಗಿ ಗುರಿಯಿರುವವರಾಗಬೇಕು. ಹೆತ್ತವರೊಂದಿಗೆ ಸಭ್ಯತೆ ಶಿಕ್ಷಕರೊಂದಿಗೆ ಪ್ರೀತಿ ಬೆಳೆಸಬೇಕು. ಅನಗತ್ಯ ವಸ್ತುಗಳಲ್ಲಿ Busy ಆಗದೆ ಏನಾದರೂ ಸಾಧಿಸುವ ಛಲ ಹೊಂದಬೇಕು. ಕಷ್ಟಪಟ್ಟರೆ ಮಾತ್ರ ಸಾಧಿಸಲು ಸಾಧ್ಯ. ಪಾಠದ ಕಡೆಗೆ ಹೆಚ್ಚಿನ ಗಮನ ಕೊಡಿ. ಜೊತೆಗೆ ಕ್ರೀಢಾಭಿಮಾನವನ್ನು ಬೆಳೆಸಿ ನಿಮ್ಮ ಹೆತ್ತವರಿಗೂ,ನೀವು ಕಲಿತ ಶಾಲೆಗೂ ನೀವು ಹುಟ್ಟಿ ಬೆಳೆದ ನಾಡಿಗೂ ಕೀರ್ತಿ ತನ್ನಿ.

LEAVE A REPLY

Please enter your comment!
Please enter your name here