• ಇಸ್ಮತ್ ಪಜೀರ್

ಲಾಕ್ಡೌನ್ ಎಂಬ ಈ ನೂತನ ಕಾನ್ಸೆಪ್ಟ್ ಮಹಾಮಾರಿ ಕೊರೋನಾ ನಿರ್ಮೂಲನೆಯ ನಿಟ್ಟಿನಲ್ಲಿ ಅತೀ ಅಗತ್ಯವೇನೋ ಸರಿ. ಆದರೆ ಲಾಕ್ಡೌನ್‌ನ ಅಸಮರ್ಪಕ ಹೇರುವಿಕೆಯಿಂದಾಗಿ ದೇಶದ ಮೂಲೆ ಮೂಲೆಗಳಲ್ಲಿ ಪ್ರಾಣ ತೆತ್ತವರ ಸಂಖ್ಯೆ ಕೊರೋನಾ ಸೋಂಕಿನಿಂದ ಪ್ರಾಣ ತೆತ್ತವರ ಸಂಖ್ಯೆಗಿಂತ ಬಹಳ ಕಡಿಮೆಯೇನಿಲ್ಲ.
ಇನ್ನು ಊರಲ್ಲದ ಊರಲ್ಲಿ ಸಿಲುಕಿ ಹಸಿವಿನಿಂದ ನರಳುತ್ತಿರುವವರ ಒಂದೊಂದು ಕತೆಯೂ ಹೃದಯ ವಿದ್ರಾವಕ. ಅಂತಹದ್ದೇ ಒಂದು ಕತೆ ನನ್ನೂರಿನಲ್ಲೂ ನಡೆದಿತ್ತು.

ಆತನ ಹೆಸರು ಮುಹಮ್ಮದ್ ರಶೀದ್ ಅನ್ಸಾರಿ. ಆತ ಲಾರಿಡ್ರೈವರ್. ಪಶ್ಚಿಮ ಬಂಗಾಳದ ಆತ ತನ್ನೊಬ್ಬ ಸಹಾಯಕನೊಂದಿಗೆ ನಮ್ಮ ಮಂಗಳೂರು ತಾಲೂಕಿನ ಹರೇಕಳ ಗ್ರಾಮಕ್ಕೆ ಇಪ್ಪತ್ತೆರಡು ಚಕ್ರದ ಲಾರಿಯಲ್ಲಿ ಕಬ್ಬಿಣದ ಬೃಹತ್ ಶೀಟುಗಳನ್ನು ತಂದಿದ್ದ. ನೇತ್ರಾವತಿ ನದಿಗೆ ಅಡ್ಡಲಾಗಿ ಹರೇಕಳದಿಂದ ಅಡ್ಯಾರಿಗೆ ಬೃಹತ್ ಸೇತುವೆ ನಿರ್ಮಾಣದ ಯೋಜನೆಯನ್ನು ಸಿದ್ಧರಾಮಯ್ಯ ಸರಕಾರದ ಅವಧಿಯಲ್ಲಿ ಮಾಡಲಾಗಿತ್ತು. ಇತ್ತೀಚೆಗೆ ಅದರ ಪ್ರಾಥಮಿಕ ಕಾಮಗಾರಿ ಪ್ರಾರಂಭವಾಗುವುದರಲ್ಲಿತ್ತು. ಅದಕ್ಕಾಗಿ ದೇಶದ ವಿವಿದೆಡೆಯಿಂದ ಕಚ್ಚಾ ವಸ್ತುಗಳು ಸರಬರಾಜಾಗುತ್ತಿತ್ತು. ಹಾಗೆ ಕಬ್ಬಿಣದ ಬೃಹತ್ ಶೀಟುಗಳನ್ನು ರಶೀದ್ ಪಶ್ಚಿಮ ಬಂಗಾಳದಿಂದ ತಂದಿದ್ದ. ಇನ್ನೇನು ಆ ಕಬ್ಬಿಣ ತಲುಪಬೇಕಾದ ಹರೇಕಳಕ್ಕೆ ಐದು ಕಿಲೋಮೀಟರ್ ಅಂತರವಷ್ಟೇ ಉಳಿದಿತ್ತು.‌ಪಜೀರು ಗ್ರಾಮದ ಸಣ್ಣಪದವು ಎಂಬಲ್ಲಿ ಕಡಿದಾದ ಏರು ತಿರುವಿನಲ್ಲಿ ಆ ಬೃಹತ್ ಲಾರಿ ತಿರುಗಿಸಲು ಸಾಧ್ಯವಾಗಲಿಲ್ಲ. ವಾಸ್ತವವಾಗಿ ಅವರು ಅಷ್ಟುದ್ದದ ಕಬ್ಬಿಣದ ಶೀಟುಗಳನ್ನು ತರುವುದು ಬೇಕಾಗಿರಲಿಲ್ಲ. ಅದರಿಂದ ಏರು ತಿರುವುಗಳಲ್ಲಿ ಸಿಕ್ಕಾಪಟ್ಟೆ ಸಮಸ್ಯೆಯಾಗುತ್ತದೆ.ಚಾಲಕನಿಗೆ ಈ ತಾಂತ್ರಿಕ ಸಮಸ್ಯೆಯ ಮುನ್ಸೂಚನೆಯಿರಲಿಲ್ಲ. ಲಾರಿಯ ಮಾಲಕ ವಾಪಾಸು ಹೋಗುವಾಗ ದೊಡ್ಡ ಪ್ರಮಾಣದ ಸರಕುಗಳನ್ನು ಬೆಂಗಳೂರಿನಿಂದ ವಾಪಾಸು ಕೊಂಡೊಯ್ಯುವ ಯೋಜನೆಯಲ್ಲಿ ಈ ರೀತಿ ಲೋಡ್ ಮಾಡಿಸಿ ಕಳುಹಿಸಿದ್ದ. ಹೆಚ್ಚೆಚ್ಚು ಮಾಲುಗಳನ್ನು ಕೊಂಡೊಯ್ದರೆ ಹೆಚ್ಚು ಲಾಭ ಮಾಡಿಕೊಳ್ಳಬಹುದು ಎಂಬ ಯೋಚನೆ ಮಾಲಕನದ್ದಾಗಿತ್ತು. ಹಾಗೆ ಪಶ್ಚಿಮ ಬಂಗಾಳದಿಂದ ಹೊರಟ ನಾಗಾಲ್ಯಾಂಡ್ ನೋಂದಣಿಯ ಲಾರಿ ನಿಗದಿತ ಸ್ಥಳ ತಲುಪಲಾಗದೇ ಪಜೀರು ಮತ್ತು ಕೊಣಾಜೆ ಗ್ರಾಮದ ಗಡಿ ಪ್ರದೇಶದಲ್ಲಿ ತಂದು ಚಾಲಕ ರಶೀದ್ ನಿಲ್ಲಿಸಿ ಮಾಲಕನಿಗೆ ತಾಂತ್ರಿಕ ಸಮಸ್ಯೆಯ ಬಗ್ಗೆ ಕರೆ ಮಾಡಿ ತಿಳಿಸಿದ. ಇನ್ಯಾವುದೋ ಊರಿನಲ್ಲಿದ್ದ ಆತನದ್ದೇ ಊರಿನ ಚಿಕ್ಕ ಲಾರಿಯೊಂದು ಬಂದು ಇದರಲ್ಲಿದ್ದ ಮಾಲುಗಳನ್ನು ವಿಭಜಿಸಿ ಲೋಡ್ ಮಾಡಬೇಕಿತ್ತು.
ಇತ್ತ ಲಾಕ್ಡೌನ್ ಕೂಡಾ ಇತ್ತು.‌ಕೊಣಾಜೆ ಸಲಫಿ ಮಸೀದಿಯ ಪಕ್ಕದ ರಸ್ತೆ ಬದಿಯಲ್ಲಿ ನಿಂತು ರಶೀದ್ ಕಾಯತೊಡಗಿದ. ಈ ಕಾಯುವಿಕೆ ಒಂದೆರಡು ದಿನಗಳದ್ದಲ್ಲ ಬರೋಬ್ಬರಿ ಇಪ್ಪತ್ತು ದಿನಗಳ ಕಾಯುವಿಕೆ. ಹೋಟೆಲ್‌ಗಳೆಲ್ಲವೂ ಮುಚ್ಚಿತ್ತು. ಚಾಲಕ ರಶೀದ್ ಮತ್ತು ಆತನ ಸಹಾಯಕ (ಲಾರಿ ಕ್ಲೀನರ್) ತಮ್ಮಲ್ಲಿದ್ದ ಪುಟ್ಟ ಗ್ಯಾಸ್ ಸ್ಟವ್‌ನಲ್ಲಿ ಅಡಿಗೆ ಮಾಡಿ ತಿನ್ನುತ್ತಿದ್ದರು. ಅಲ್ಲೇ ಪಕ್ಕದ ಸಲಫಿ ಮಸೀದಿಯಿಂದ ನೀರು ತರುತ್ತಿದ್ದರು. ನಾಲ್ಕು ದಿನಕ್ಕೆ ಗ್ಯಾಸ್ ಮುಗಿಯಿತು. ಹಸಿವಿನಿಂದ ಕಂಗಾಲಾದ ರಶೀದ್ ಮತ್ತು ಕ್ಲೀನರ್ ಐದು ರೂಪಾಯಿಯ ಪಾರ್ಲೆ ಜಿ ಬಿಸ್ಕಿಟನ್ನು ನೀರಿಗೆ ಮುಳುಗಿಸಿ ತಿಂದು ಎರಡು ದಿನ ದೂಡಿದರು. ಈ ಮಧ್ಯೆ ರಮಝಾನ್ ಉಪವಾಸವೂ ಪ್ರಾರಂಭವಾಯಿತು.
ಆ ರಸ್ತೆಯಲ್ಲಿ ಪ್ರತೀದಿನ ನಾನು ಸಂಚರಿಸುತ್ತಿದ್ದೆ.‌ ನನಗೆ ಅವರ ಬಗ್ಗೆ ಕುತೂಹಲ ಇತ್ತಾದರೂ ಏನೋ ತಾಂತ್ರಿಕ ಸಮಸ್ಯೆಯಿಂದ ಲಾರಿ ಕೆಟ್ಟು ಅವರಿಲ್ಲಿ ಉಳಿದಿರಬೇಕೆಂದಷ್ಟೇ ಯೋಚಿಸಿದ್ದೆ. ಅವರ ಹಸಿವಿನ ಬಗ್ಗೆ ನಾನು ಯೋಚಿಸಿಯೂ ಇರಲಿಲ್ಲ.
ರಮಝಾನ್ ವೃತದ ಮೂರನೇ ದಿನ ಸಂಜೆ ಎಟಿಎಂಗೆಂದು ಮಂಗಳೂರು ವಿಶ್ವವಿದ್ಯಾನಿಲಯದತ್ತ ಕಾರಲ್ಲಿ ಹೊರಟಿದ್ದೆ. ತಲೆಯಲ್ಲಿ ನಮಾಝಿನ ಟೊಪ್ಪಿಯೂ ಇತ್ತು. ಅವರ ಬಳಿ ಕಾರು ನಿಲ್ಲಿಸಿ ಅವರನ್ನು ಮಾತಿಗೆಳೆದೆ.
ಆಗ ಅವರ ಕತೆಯನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದರು.
“ನಮ್ಮ ಸ್ಟವ್‌‌ನ ಗ್ಯಾಸ್ ಮುಗಿದು ಲಾರಿಯಲ್ಲಿ ಕೂತು ಎರಡು ದಿನ ಬಿಸ್ಕಿಟನ್ನು ನೀರಲ್ಲಿ ಮುಳುಗಿಸಿ ತಿಂದು ದಿನ ದೂಡಿದೆವು. ಹೀಗೆ ಒಮ್ಮೆ ಬಿಸ್ಕಿಟ್ ತಿನ್ನುತ್ತಿರಲು ಬಿಳಿ ಬಣ್ಣದ ಕಾರಲ್ಲಿ ವ್ಯಕ್ತಿಯೊಬ್ಬರು ಬಂದು ನಮ್ಮ ಬಗ್ಗೆ ವಿಚಾರಿಸಿದರು.ನಮಗೆ ನಮ್ಮ ಮುಸ್ಲಿಂ ಐಡೆಂಟಿಟಿಯನ್ನು ತೆರೆದಿಡಲು ಭಯವಾಗುತ್ತಿತ್ತು. ರಾತ್ರಿ ಹೊತ್ತಷ್ಟೇ ನಾವು ನಮಾಝ್ ಮಾಡುತ್ತಿದ್ದೆವು.ಮಂಗಳೂರಿನಲ್ಲಿ ಮುಸ್ಲಿಮರಿಗೆ ವಿನಾಕಾರಣ ಹಿಡಿದು ಹೊಡೆಯುತ್ತಾರೆಂದು ನಾವು ಕೇಳಿ ಬಲ್ಲೆವು. ನಾವು ಆ ಬಿಳಿ ಬಣ್ಣದ ಕಾರಲ್ಲಿ ಬಂದು ವಿಚಾರಿಸಿದ ವ್ಯಕ್ತಿಯಲ್ಲೂ ನಮ್ಮ ಮುಸ್ಲಿಂ ಐಡೆಂಟಿಟಿ ಬಿಟ್ಟು ಕೊಡಲಿಲ್ಲ. ಅವರು ನಮ್ಮ ಜೊತೆ ಮಾತನಾಡುತ್ತಿದ್ದಂತೆಯೇ ಅವರಿಗೊಂದು ಕಾಲ್ ಬಂತು. ವಾ ಅಲೈಕುಂ ಸಲಾಂ ಎಂದು ಮಾತು ಪ್ರಾರಂಭಿಸಿದರು. ಮಾತಿನ ಮಧ್ಯೆ ಇಂಶಾ ಅಲ್ಲಾಹ್ ಎಂಬ ಪದಗಳು ಆಗಾಗ ಬರುತ್ತಿದ್ದುದನ್ನು ಕಂಡು ಧೈರ್ಯ ಬಂತು. ಆ ಬಳಿಕ ಅವರಲ್ಲಿ ಮುಕ್ತವಾಗಿ ನಮ್ಮ ನೋವನ್ನು ಹೇಳಿದೆವು. (ಅವರ ಹೆಸರೇನು ಗೊತ್ತಾ..ಎಂದು ನಾನು ಮಾತಿನ ಮಧ್ಯೆ ಪ್ರಶ್ನಿಸಿದೆ. ಬಶೀರ್ , ಇಲ್ಲೇ ಸ್ವಲ್ಪ ಮುಂದೆ ಪಜೀರ್ ಮಸೀದಿಯ ಪಕ್ಕ ಮನೆಯಿದೆ ಎಂದರು. ಆ ಬಶೀರ್ ಬೇರಾರೂ ಅಲ್ಲ, ನನ್ನ ಮಾವ.)
ಬಶೀರ್ ಮುಸ್ಲಿಂ ಎಂದು ಗೊತ್ತಾಗುತ್ತಲೇ ನಮ್ಮ ದುಃಖದ ಕಟ್ಟೆಯೊಡೆಯಿತು.ಅಳು ತಡೆಯಲಾಗಲಿಲ್ಲ.
ಬಶೀರ್ ನಮ್ಮನ್ನು ಸಮಾಧಾನಿಸಿದರು. ನಮಗೆ ಧೈರ್ಯ ತುಂಬಿದರು. ಅವರ ಫೋನ್ ನಂಬರ್ ಕೊಟ್ಟರು. ಯಾರು ಏನೇ ತೊಂದರೆ ಮಾಡಿದ್ರೂ ಕಾಲ್ ಮಾಡು, ಪೋಲೀಸರು ವಿಚಾರಿಸಿದರೂ ಕಾಲ್ ಮಾಡು ಎಂದರು.ಆ ಬಳಿಕ ನಮ್ಮ ಗ್ಯಾಸ್ ಸ್ಟವ್‌ಗೆ ಗ್ಯಾಸ್ ತುಂಬಿಸುವ ವ್ಯವಸ್ಥೆಯಾಯಿತು. ರಮಝಾನ್ ತಿಂಗಳಲ್ಲವೇ ನೀವೇನೂ ಫಿಕ್ರ್ ಮಾಡ್ಬೇಡಿ ಎಂದು ಬಶೀರ್ ನಮಗೆ ಪ್ರತೀದಿನ ಇಫ್ತಾರ್ ಮತ್ತು ಸಹರಿಗೆ ಹೊಟ್ಟೆ ಬಿರಿಯುವಷ್ಟು ಆಹಾರ ತಂದು ಕೊಡುತ್ತಿದ್ದಾರೆ.
ಇಲ್ಲಿ ಈ ಮಸೀದಿಯ ಮ್ಯಾನೇಜ್ಮೆಂಟ್‌ನ ಮುಖ್ಯಸ್ಥ‌ರೂ ನಮಗೆ ಎಲ್ಲಾ ವಿಧ ಸಹಾಯ ಮಾಡುತ್ತಿದ್ದಾರೆ.ಸ್ನಾನ, ಶೌಚ ಮತ್ತು ವುಝೂ (ನಮಾಝಿನ ಅಂಗಸ್ನಾನಕ್ಕೆ) ಮಸೀದಿಯ ಬಾತ್‌ರೂಮಿನಲ್ಲಿ ವ್ಯವಸ್ಥೆ ಮಾಡಿ ಕೊಟ್ಟರು. (ಮಸೀದಿಯ ಮ್ಯಾನೇಜ್ಮೆಂಟ್ ಮುಖ್ಯಸ್ಥ ನಾಸಿರ್ ಕೂಡಾ ನನ್ನ ಹತ್ತಿರದ ಸಂಬಂಧಿಕ)
ಮತ್ತು ಕೆಲವು ನಮ್ಮದೇ ಆಹಾರವನ್ನು ಇಲ್ಲೇ ಬೇಯಿಸುತ್ತಿದ್ದೇವೆ. ಇಲ್ಲೇ ರಸ್ತೆಯಲ್ಲಿ ಚಾಪೆ ಹಾಸಿ ನಮಾಝ್ ಮಾಡುತ್ತೇವೆ. ಲಾರಿಯಲ್ಲೇ ಮಲಗುತ್ತೇವೆ.”

ಹಾಗೆ ಹದಿನೈದು ದಿನ ಅವರ ಸುರಕ್ಷತೆಯ ಜವಾಬ್ದಾರಿಯನ್ನು ಹೊತ್ತು ಅವರಿಗೆ ಆಹಾರದ ವ್ಯವಸ್ಥೆ ಮಾಡಿದ ಬಶೀರ್ ಆಗಲೀ, ನಾಸಿರ್ ಆಗಲೀ ಅವರು ಮಾಡುತ್ತಿರುವ ಪುಣ್ಯ ಕೆಲಸವನ್ನು ಯಾರಲ್ಲೂ ಹೇಳಿ ಪ್ರಚಾರ ಪಡಕೊಂಡಿಲ್ಲ.
ಮೊನ್ನೆ ಹದಿನೈದನೇ ಉಪವಾಸದ ದಿನ ಅವರು ಇಲ್ಲಿಂದ ಹೊರಟು ಹೋದರು.ಅವರ ಅಸಹಾಯಕತೆಯ ಕತೆಯನ್ನು ವಾರ್ತಾಭಾರತಿಗೆ ವರದಿ ಮಾಡಬೇಕೆಂದಿದ್ದೆ. ಅವರ ಮುಸ್ಲಿಂ ಐಡೆಂಟಿಟಿ ಬಹಿರಂಗವಾಗಿ ಅವರಿಗೆ ತೊಂದರೆಯಾಗದಿರಲಿ ಎಂದು ಸುಮ್ಮನಾಗಿದ್ದೆ. ಸದ್ಯ ಅವರಿಗೆ ಬಶೀರ್ ಮತ್ತು ನಾಸಿರ್ ಅಗತ್ಯ ವ್ಯವಸ್ಥೆ ಮಾಡಿಕೊಡುತ್ತಿದ್ದಾರಲ್ವಾ ಎಂದು ಸಮಾಧಾನವೂ ಆಗಿತ್ತು.
ಇಂತಹ ಅಸಹಾಯಕರು ಯಾರೇ ಸಿಕ್ಕರೂ, ಅವರ ಜಾತಿ ಧರ್ಮ ನೋಡದೇ ಸಹಾಯಹಸ್ತ ಚಾಚಿ. ಎಲ್ಲಕ್ಕಿಂತ ಮಾನವತೆಯೇ ಮುಖ್ಯ.
” ನೀವು ಭೂಮಿಯಲ್ಲಿರುವವರ ಮೇಲೆ ಕರುಣೆ ತೋರಿ, ಆಕಾಶದಲ್ಲಿರುವವನು ನಿಮ್ಮ ಮೇಲೆ ಕರುಣೆ ತೋರುವನು”
ಪ್ರವಾದಿ ಮುಹಮ್ಮದ್ (ಸ).
ಈ ಪ್ರವಾದಿ ನುಡಿಯಲ್ಲಿ ಕರುಣೆ ತೋರುವ ಬಗ್ಗೆ ಮಾತ್ರವೇ ಇದೆ, ಹೊರತು ಜಾತಿ ಧರ್ಮದ ಉಲ್ಲೇಖವಿಲ್ಲ..

LEAVE A REPLY

Please enter your comment!
Please enter your name here