ಕಥೆ – ಯೋಗೇಶ್ ಮಾಸ್ಟರ್


ನಾನು ಆಗ ನರ್ಸರಿ ಅಥವಾ ಒಂದನೇ ತರಗತಿ ಇದ್ದಿರಬಹುದು. ಏಕೆಂದರೆ ಚಾಮರಾಜ ಪೇಟೆ ಹಿಂದಿ ಸೇವಾ ಸಮಿತಿಯಲ್ಲಿ ನಾನು ಓದಿದ್ದು ಈ ಎರಡೇ ತರಗತಿಗಳು. ಆಗಲೇ ಯಾವಾಗಲೋ ಇದು ಆದದ್ದು. ಒಂದೇ ಶಾಲೆಗೆ ಹೋಗುವ ಬೇರೆ ಬೇರೆ ಮನೆಯ ಮಕ್ಕಳನ್ನು ಒಟ್ಟು ಮಾಡಿಕೊಂಡು ಕರೆದುಕೊಂಡು ಹೋಗುವ ಮತ್ತು ಕರೆದುಕೊಂಡು ಬರುವ ಕೆಲಸ ಕೌಸಲ್ಯಕ್ಕನದು. ಅವರಿಗೆ ತಿಂಗಳಿಗಿಷ್ಟು ಎಂದು ಕೊಡುವಷ್ಟು ಉತ್ಪತ್ತಿ ನಮ್ಮನೆಗೆ ಇಲ್ಲದಿದ್ದ ಕಾರಣದಿಂದ ಅಜ್ಜಿಯೋ ಅಮ್ಮನೋ ಶಾಲೆಗೆ ನನ್ನ ಕರೆದುಕೊಂಡು ಹೋಗುತ್ತಿದ್ದರು.
ಅಂದು ಶಾಲೆಗೆ ಅಮ್ಮ ಕರೆದುಕೊಂಡು ಹೋಗಲು ಸಿದ್ಧವಾಗುತ್ತಿದ್ದಾಗ ಶಿವಪೂಜೆ ಮಣೆಯ ಮೇಲೆ ಹತ್ತು ಪೈಸೆಯ ನಿಕ್ಕಲ್ ನಾಣ್ಯ ಕಾಣಿಸಿತು. ಎತ್ತಿ ಜೇಬಿಗೆ ಹಾಕಿಕೊಂಡೆ. ಅಲ್ಲಿ ಶಾಲೆಯ ಹೊರಗೆ ಅಜ್ಜಿಯೊಬ್ಬರು ಕಿತ್ತಳೆ ಹಣ್ಣುಗಳನ್ನು, ಚೇಪೇಕಾಯಿಗಳನ್ನು ಮಾರುತ್ತಾರೆ. ಕಿತ್ತಳೆ ಹಣ್ಣನ್ನು ನಡು ಮಧ್ಯೆ ಸೀಳಿ ಅದರಲ್ಲಿ ಉಪ್ಪುಕಾರ ಹಾಕಿ ಕೊಡುತ್ತಾರೆ. ಒಂದಕ್ಕೆ ಐದು ಪೈಸೆ. ಇವತ್ತು ಒಂದು ತಿನ್ನುತ್ತೇನೆ. ನಾಳೆ ಒಂದು ತಿನ್ನು ತಿನ್ನುವೆನು; ಇದು ನನ್ನ ಲೆಕ್ಕಾಚಾರ. ಸುಮಾರು ದಿನಗಳಿಂದ ಬಾಯಲ್ಲಿ ನೀರೂರಿಸುತ್ತಿದ್ದ ಕಿತ್ತಳೆಯ ಆಸೆಯನ್ನು ಅವತ್ತು ತೃಪ್ತಿಪಡಿಸಲು ದೃಢ ಸಂಕಲ್ಪ ಮಾಡಿದ್ದೆ. ಅದಕ್ಕೆ ಎಂದು ಹಣ ಕೇಳಿದರೆ ಖಂಡಿತ ಕೊಡುತ್ತಿರಲಿಲ್ಲ. ಮೊದಲನೆಯದಾಗಿ ಹಣದ ಕೊರತೆ. ಎರಡನೆಯದಾಗಿ ಬೀದಿಯಲ್ಲಿ ಮಾರುವ ತಿಂಡಿಗಳನ್ನು ಕೊಂಡು ತಿನ್ನುವುದನ್ನು ಎಂದೆಂದಿಗೂ ನಮ್ಮನೆಯಲ್ಲಿ ಪ್ರೊತ್ಸಾಹಿಸಿರಲಿಲ್ಲ.
ಅಮ್ಮ ನನ್ನನ್ನು ಶಾಲೆಯ ಆವರಣದಲ್ಲಿ ಬಿಟ್ಟರು. ಆಗಲೇ ಕೌಸಲ್ಯಕ್ಕನ್ನೂ ಮಕ್ಕಳನ್ನು ಬಿಟ್ಟಿದ್ದು, ಇಬ್ಬರೂ ಮಾತಾಡಿಕೊಂಡು ಹಿಂದಕ್ಕೆ ನಡೆದರು. ಅವರು ದಿಕ್ಕು ಬದಲಿಸುವುದನ್ನೇ ಕಾದಿದ್ದ ನಾನು ಕಿತ್ತಳೆ ಹಣ್ಣು ಮಾರುವ ಅಜ್ಜಿಯ ಬಳಿಗೆ ಓಡಿದೆ. ಅದೇ ಮೊಟ್ಟ ಮೊದಲು ನಾನು ಸ್ವತಂತ್ರವಾಗಿ ಹಣ ಕೊಟ್ಟು ರಸ್ತೆಯ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವುದು. ಎಷ್ಟೋ ದಿನಗಳಿಂದ ಬರೀ ನೋಡಿಕೊಂಡೇ ಹೋಗುತ್ತಿದ್ದವನು ಕೊಂಡುಕೊಳ್ಳಲು ಸಂಪೂರ್ಣ ಸನ್ನದ್ಧನಾಗಿ, ಅರ್ಹನಾಗಿ ಬಂದಿರುವುದು.
ಗೋಣಿ ಚೀಲ ಹಾಸಿಕೊಂಡು ಕುಳಿತುಕೊಂಡಿದ್ದ ಅಜ್ಜಿಯ ಸುತ್ತಲೂ ಬಹಳ ಮಕ್ಕಳು ನೆರೆದಿದ್ದರು. ಸರಸರ “ನಿಂಗೇನು ಬೇಕು, ನಿಂಗೇನು ಬೇಕು” ಎಂದು ಕೇಳುತ್ತಾ ಎಲ್ಲರ ಬಳಿಯೂ ವ್ಯವಹರಿಸುತ್ತಿದ್ದ ಅಜ್ಜಿ ಅದೇ ಚುರುಕುತನದಲ್ಲಿ ಚಾಚಿದ್ದ ನನ್ನ ಕೈಯಿಂದ ಹತ್ತು ಪೈಸೆಯನ್ನು ಇಸಿದುಕೊಂಡು ತಾವು ಕುಳಿತುಕೊಂಡಿದ್ದ ಗೋಣೀ ಚೀಲದ ಮಡಿಕೆಯ ಕೆಳಗೆ ಹಾಕಿಕೊಂಡರು. ಮತ್ತೆ ಅವರಿವರಿಗೆ ಕೊಡುತ್ತಿದ್ದರು. ನಾನೂ ಕೇಳುತ್ತಿದ್ದೆ. “ಅಜ್ಜಿ, ನಂಗೆ ಒಂದು ಕಿತ್ತಳೆ ಹಣ್ಣು” ಎಂದು ಪದೇ ಪದೇ ಕೇಳುತ್ತಿದ್ದೆ.
ನೆರೆದಿದ್ದ ಗುಂಪಿನ ಸಾಂದ್ರತೆ ಕಡಿಮೆಯಾದ ಮೇಲೆ ಅಜ್ಜಿಯ ಗಮನ ನನ್ನ ಕಡೆ ಹರಿಯಿತು.
“ಅಜ್ಜಿ, ನನಗೆ ಒಂದು ಕಿತ್ತಳೆ ಹಣ್ಣು” ಎಂದೆ.
ಅಜ್ಜಿ ಹಣ್ಣನ್ನು ಕೊಯ್ದು ಕೊಯ್ದು ತೇವವಾಗಿರುವ ಮತ್ತು ತೆಳುವಾಗಿರುವ, ಹಣ್ಣನ್ನು ಕುಯ್ಯುವಂತಹ ನಡುಭಾಗದಲ್ಲಿ ಕೊಂಚ ಬೆಳ್ಳಗಾಗಿರುವ ಆ ಕಬ್ಬಿಣದ ಚಾಕುವಿನಿಂದ ಕಿತ್ತಳೆ ಹಣ್ಣನ್ನು ಕೊಯ್ದು ಅದೇ ಚಾಕುವಿನ ತುದಿಯಿಂದ ಉಪ್ಪು ಮತ್ತು ಖಾರದ ಮಿಶ್ರಣವನ್ನು ಹಾಕಿ, ಸೀಳಿದ್ದ ಹಣ್ಣಿನ ಭಾಗಗಳನ್ನು ಮುಚ್ಚಿ ನನ್ನ ಕೈಗಿತ್ತರು.
“ಕಾಸು ಕೊಡು” ಎಂದರು ಅಜ್ಜಿ.
“ಕೊಟ್ಟೆ” ಎಂದೆ.
“ಯಾವಾಗ ಕೊಟ್ಟೆ” ಸರ್ರನೆ ಅಜ್ಜಿಯ ದನಿ ಮೇಲೇರಿತ್ತು.
“ಆಗಲೇ ಕೊಟ್ಟೆ. ಹತ್ತು ಪೈಸೆ ಕೊಟ್ಟೆ” ಎಂದೆ.
“ಮೂತಿಗಾಗ್ತೀನಿ” ಎಂದು ತಟ್ಟನೆ ಕಿತ್ತಳೆಹಣ್ಣನ್ನು ನನ್ನ ಕೈಯಿಂದ ಕಿತ್ತುಕೊಂಡು “ಆಗಲೇ ಕೊಟ್ಟನಂತೆ. ನಡೆಯೋ ಆ ಕಡೆ” ಎಂದು ಆ ಕೊಯ್ದ ಹಣ್ಣನ್ನು ಬೇರೊಬ್ಬರಿಗೆ ಕೊಟ್ಟರು. ಆ ಹುಡುಗ ನನ್ನ ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡವನ್ನು ನೋಡುವಂತೆ ಅಥವಾ ಸುಳ್ಳು ಹೇಳಿ ಸಿಕ್ಕಿಕೊಂಡವರನ್ನು ನೋಡುವಂತೆ ನೋಡುತ್ತಿದ್ದ. ಅವನ ನೋಟದಲ್ಲಿ ಎಂತಹ ತಾತ್ಸಾರ!
“ಆ ಕಡೆ ಹೋಗು” ಎಂದ ಅಜ್ಜಿಯ ದನಿ ಎಷ್ಟು ಕಠೋರ!
ಅದೆಷ್ಟು ಅದೃಷ್ಟಶಾಲಿಗಳು ಅರ್ಧ ಕತ್ತರಿಸಿದ ಕಿತ್ತಳೆಹಣ್ಣಿನ ಮೇಲೆ ಸವರಿರುವ ಉಪ್ಪು, ಕಾರ ಮಿಶ್ರಿತ ಹುಳಿಯನ್ನು ನೆಕ್ಕುತ್ತಾ ಹೋಗುತ್ತಿದ್ದರು.
ಅಜ್ಜಿಯ ತೀರಾ ಹತ್ತಿರ ಇದ್ದ ಕೆಲವರಷ್ಟೇ ನಾನು ಬೈಸಿಕೊಂಡು ಬಂದಿದ್ದನ್ನು ನೋಡಿದ್ದು. ಇನ್ನು ಜೋರಾಗಿ ಅತ್ತರೆ ಉಳಿದವರಿಗೂ ಗೊತ್ತಾಗತ್ತೆ. ತುಟಿಗಳನ್ನು ಬಿಗಿಯಾಗಿ ಹಿಡಿದುಕೊಂಡು ಅಳು ಹೊರಗೆ ಬರದಂತೆ ಬರುತ್ತಿದ್ದರೆ, ಸದ್ದೇನೋ ಬರುತ್ತಿಲ್ಲ ಆದರೆ ಕಣ್ಣಲ್ಲಿ ನೀರು ಬರುತ್ತಿದೆ. ಆದರೂ ಬೇಗ ಬೇಗನೆ ಶಾಲೆಯ ಆವರಣದೊಳಗೆ ಹೊರಟು ಹೋದೆ.
ಗೇಟಿನ ಬಳಿ ನಿಂತುಕೊಂಡಿರುವ ವಾಚ್ ಮ್ಯಾನ್ “ಯಾಕಪ್ಪಾ ಅಳ್ತಿದ್ದೀಯಾ?” ಎಂದು ಕೇಳಿದ್ದರು. ನಾನೇನೂ ಹೇಳಲಿಲ್ಲ. ಏಕೆಂದರೆ ಹೇಳಲು ಅಲ್ಲೇನೂ ಇರಲಿಲ್ಲ. ಏನೇ ಹೇಳಲು ಬಾಯ್ತೆರೆದರೂ ಮಾತಿನ ಬದಲು ಅಳುವೇ ಜೋರಾಗಿ ಬಂದಿರುತ್ತಿತ್ತು. ಉಳಿದವರೆಲ್ಲರ ಮುಂದೆ ನಾನೊಬ್ಬ ಕಿತ್ತಳೆಹಣ್ಣಿಗಾಗಿ ಸುಳ್ಳು ಹೇಳಿದವನಾಗಬೇಕಿತ್ತು. ಅವರೆಲ್ಲಾ ದೊಡ್ಡವರನ್ನೇ ನಂಬುವುದು. ನನ್ನ ಹಿಂದೆ ಬರುತ್ತಿದ್ದ ಹುಡುಗ, ಅದೇ; ಅಜ್ಜಿ ನನ್ನ ಕೈಯಿಂದ ಹಣ್ಣನ್ನು ಕಿತ್ತು ಇನ್ನೊಬ್ಬ ಹುಡುಗನಿಗೆ ಕೊಟ್ಟರಲ್ಲಾ, ಆ ಹುಡುಗ ಬರುತ್ತಿದ್ದ. ಅವನು ವಾಚ್‍ಮ್ಯಾನ್ ನನ್ನ “ಯಾಕಳ್ತಿದ್ದೀಯಾ?” ಎಂದು ಕೇಳಿದ್ದನ್ನು ಕೇಳಿಸಿಕೊಂಡಿರದಿದ್ದರೆ ಸಾಕು. ಆಗಲೇ ನನ್ನ ತಾತ್ಸಾರವಾಗಿ ಕಂಡವನು ಖಂಡಿತ ನನ್ನ ಸುಳ್ಳಿನ ಕತೆ ಹೇಳ್ತಾನೆ. ತರಗತಿಯಲ್ಲಿ ಎಷ್ಟು ಬೇಗಬೇಗ ಕಣ್ಣೀರನ್ನು ಒರೆಸಿಕೊಂಡು ಮುಖ ಒಣಗುವಂತೆ ಮಾಡಿಕೊಂಡರೂ ಮತ್ತೆ ಮತ್ತೆ ಬಳಬಳನೆ ಕಣ್ಣಿಂದ ಬಿಸಿಬಿಸಿ ನೀರು ಸುರಿಸುರಿದು ಕೆನ್ನೆಗಳನ್ನು ವದ್ದೆ ಮಾಡಿಬಿಡುತ್ತಿತ್ತು. ಅಂತೂ ಇಂತೂ ಟೀಚರ್‍ಗೆ ಮತ್ತು ಇತರರಿಗೆ ನನ್ನ ಅತ್ತಿರುವ ಮುಖ ಕಾಣದಿರುವಂತೆ ಹೇಗೋ ನಿಭಾಯಿಸುತ್ತಿದ್ದೆ. ಸ್ಲೇಟಿನ ಮೇಲೆ ಅದೇನೋ ತಿದ್ದಲು ಕೊಟ್ಟಿದ್ದರು. ತಿದ್ದುತ್ತಿದ್ದೆ.
ತರಗತಿಯ ಬಾಗಿಲಲ್ಲಿ ಯಾರೋ ದೊಡ್ಡವರು ಬಂದು ಟೀಚರ್ ಜೊತೆ ಮಾತಾಡುತ್ತಿದ್ದರು. ನೆರಳು ಯಾರದ್ದೋ ಅನ್ನಿಸಿತು. ಆದರೆ ಧ್ವನಿ ನಮ್ಮಮ್ಮನದು ಅನ್ನಿಸಿತು. ನೋಡಿದೆ. ಅಮ್ಮನೇ.
ಟೀಚರ್ ನನ್ನ ಕಡೆ ನೋಡಿ “ಬಾ” ಎಂದರು. ಸ್ಲೇಟು ಮತ್ತು ಬಳಪ ಹಿಡಿದುಕೊಂಡೇ ಹೋದೆ. ಅವೆರಡನ್ನೂ ನನ್ನ ಕೈಯಿಂದ ಇಸಿದುಕೊಂಡ ಟೀಚರ್ “ಹೋಗು, ಅಮ್ಮ ಏನೋ ಹೇಳಕ್ಕೆ ಬಂದಿದ್ದಾರೆ” ಎಂದು ತರಗತಿಯಲ್ಲಿ ಇತರ ಮಕ್ಕಳ ಕಡೆಗೆ ತಿರುಗಿದರು.
ಅದು ಹೇಳಕ್ಕಲ್ಲ ಬಂದಿದ್ದಿದ್ದು, ಕೇಳಕ್ಕೆ.
“ಮನೇಲಿ ಶಿವಪೂಜೆ ಮಣೆ ಮೇಲೆ ಇಟ್ಟಿದ್ದ ಹತ್ತು ಪೈಸೆ ತಗೊಂಡಾ?”
ಏನೂ ಹೇಳಲಿಲ್ಲ. ತಲೆ ಎತ್ತಿ ಅಮ್ಮನ ಮುಖವನ್ನೇ ನೋಡುತ್ತಿದ್ದೆ.
“ತಗೊಂಡಾ? ಇಲ್ವಾ?”
ಹೌದು ಎಂಬಂತೆ ತಲೆಯಾಡಿಸಿದೆ.
“ಕೊಡು” ಎಂದು ಕೈ ಚಾಚಿದರು ಅಮ್ಮ.
ಇಲ್ಲವೆಂಬಂತೆ ತಲೆಯಾಡಿಸಿದೆ.
“ಕೊಡಲ್ವಾ?” ಎಂದ ಅಮ್ಮನಲ್ಲಿ ಸ್ವಲ್ಪ ಕೋಪ ಬಂದಿರುವ ಚಹರೆ ಕಾಣಿಸತೊಡಗಿತು.
“ಇಲ್ಲ” ಎನ್ನುವಷ್ಟರಲ್ಲಿ ಅಳು ಬಂದುಬಿಟ್ಟಿತ್ತು.
“ತಿಂದುಬಿಟ್ಟಾ?” ಎಂದು ಕೇಳಿದರು ಅಮ್ಮ.
ಇಲ್ಲವೆಂಬಂತೆ ತಲೆಯಾಡಿಸಿದೆ.
“ಮತ್ತೆ? ಎಲ್ಲಿ ಕಾಸು?”
“ಅಜ್ಜಿ ಹತ್ತಿರ ಇದೆ.”
“ಯಾವ ಅಜ್ಜಿ?”
“ಕಿತ್ತಳೆಹಣ್ಣು ಮಾರೋ ಅಜ್ಜಿ.”
“ನೀನು ಕಿತ್ತಳೆಹಣ್ಣು ತಿನ್ನಲಿಲ್ಲವಾ?”
“ಇಲ್ಲ.”

“ಮತ್ತೆ? ಆ ಅಜ್ಜಿಯ ಹತ್ತಿರ ಕಾಸು ಕೊಟ್ಟು ಇಟ್ಟಿದ್ದೀಯಾ?” ಎಂದ ಅಮ್ಮ ಟೀಚರ್ ಹತ್ತಿರ ಅಪ್ಪಣೆ ಪಡೆದುಕೊಂಡು ನನ್ನ ಅಜ್ಜಿಯ ಹತ್ತಿರ ಕರೆದುಕೊಂಡು ಹೋದರು.
“ನಾನು ಅಜ್ಜಿಗೆ ಕಾಸು ಕೊಟ್ಟೆ. ಅಜ್ಜಿ ಕಿತ್ತಳೆ ಹಣ್ಣು ಕೊಡಲಿಲ್ಲ” ಎಂದೆ.
“ಅಜ್ಜಿ, ನಿಮಗೆ ಇವನು ಹತ್ತು ಪೈಸೆ ಕೊಟ್ಟನಂತೆ” ಎಂದರು ಅಮ್ಮ.
“ಅವನು ಯಾವುದೂ ಕೊಡಲಿಲ್ಲ” ಎಂದ ಅಜ್ಜಿ ಬೇರೆಯವರ ಜೊತೆ ವ್ಯಾಪಾರದಲ್ಲಿ ತೊಡಗಿದ್ದರು.
“ಇವನು ನಿಮಗೆ ಕಾಸು ಕೊಟ್ಟನಂತೆ. ನೀವು ಅವನಿಗೆ ಕಿತ್ತಳೆಹಣ್ಣು ಕೊಡಲಿಲ್ಲವಂತೆ. ಈಗ ನಮಗೆ ಕಿತ್ತಳೆ ಹಣ್ಣು ಬೇಡ. ಕಾಸು ವಾಪಸ್ಸು ಕೊಡಿ” ಎಂದು ಅಮ್ಮ ಅಜ್ಜಿಗೆ ಹೇಳಿದರು.
“ಹಾಕು ಅವನ ಮೂತಿಗೆ. ಆಗಲೇನೂ ಹೀಗೇ ನನ್ನ ಹತ್ತಿರ ಸುಳ್ಳು ಹೇಳಿದ. ಇವತ್ತು ಹತ್ತು ಪೈಸಕ್ಕೆ ಇಷ್ಟು ಸುಳ್ಳು ಹೇಳೋನು ನಾಳೆ ಇನ್ನೇನೇನಿಕ್ಕಲ್ಲಾ ಸುಳ್ಳು ಹೇಳ್ತಾನೆ. ಮೂತಿಗೆ ಬರೆ ಹಾಕಿ ಆ ಚಾಳಿ ಬಿಡಿಸು” ಎಂದರು ಅಜ್ಜಿ.
ಅಲ್ಲಿಯೇ ತಲೆಗೆರಡು ಮೊಟಕಿದರು ಅಮ್ಮ. ಶಾಲೆಗೆ ವಾಪಸ್ಸು ಕರೆದುಕೊಂಡು ಬರುತ್ತಾ “ಏನು ಮಾಡಿದೆ ಆ ಕಾಸ್ನಾ? ಏನು ತಿಂದೆ? ನಾನು ಒಂದೊಂದು ಪೈಸ ಪೈಸಕ್ಕೂ ಒದ್ದಾಡಿಕೊಂಡು ಏನೇನಿಕ್ಕೋ ಇಟ್ಕೊಂಡಿರ್ತೀನಿ. ಹೇಳ್ದೇ ಕೇಳ್ದೇ ಎತ್ತಿಕೊಂಡು ಬಂದು ಹಾಳು ಮಾಡಿಬಿಡು.”
“ನಾನು ಅಜ್ಜಿಗೆ ಕೊಟ್ಟೆ.” ಎಂದೆ ಅಳುತ್ತಾ.
“ಹೂ ಕೊಟ್ಟೆ. ನಿನ್ನ ಹತ್ತು ಪೈಸೆಗೆ ಆ ಅಜ್ಜಿ ಸುಳ್ಳು ಹೇಳ್ತಾರೆ ಅಲ್ವಾ?” ಎಂದು ಬೈದುಕೊಂಡೇ ತೋಳು ಹಿಡಿದುಕೊಂಡು ತರಗತಿಯವರೆಗೂ ಬಂದರು. ಅದು ಬರೀ ತೋಳು ಹಿಡಿದುಕೊಳ್ಳುವುದಲ್ಲ. ಅವರ ಬಿಗಿಮುಷ್ಟಿಯಲ್ಲಿ ನನ್ನ ತೋಳು ಹಿಂಡಿಹೋಗಿ, ಬೆರಳುಗಳ ತುದಿಯಲ್ಲಿ ಗಿಲ್ಲುವುದು, ಶುಂಟಿ ಕೊಡುವುದು. ತರಗತಿಯ ಮುಂದೆ ನನ್ನ ಬಿಟ್ಟು ಬಿಡದ ಬಾಯಿಯ, ಕಚ್ಚಿದ್ದ ಹಲ್ಲುಗಳ ಸಂದಿಯಿಂದ ನನಗೆ ಮಾತ್ರ ಕೇಳಿಸಿದ್ದರು, “ಬಾ ಸಾಯಂಕಾಲ ಮಾಡ್ತೀನಿ.”
ಶಾಲೆಯಲ್ಲಿ ಸಂಜೆ ಹೋದ ಮೇಲೆ ಎದುರಿಸಬೇಕಾದ ದೌರ್ಭಾಗ್ಯವನ್ನೇ ಯೋಚಿಸಿಕೊಂಡು ದಿನವಿಡೀ ಹೇಗೆ ಕಳೆದೆನೋ. ನೆನಪಿಲ್ಲ.

LEAVE A REPLY

Please enter your comment!
Please enter your name here